Friday 31 August 2012

ನನ್ನ ಮೊದಲ ಪುಸ್ತಕ ಬಿಡುಗಡೆಯ ಪುಳಕ.


ಗೆಳೆಯ ಗೆಳತಿಯರೇ, ಕೆಂಡಸಂಪಿಗೆಯಲ್ಲಿ ಪ್ರಕಟವಾದ ನನ್ನ ಅಂಕಣಬರಹಗಳ ಗೊಂಚಲು ರಸ್ತೆ ನಕ್ಷತ್ರವನ್ನು ಶಿವಮೊಗ್ಗದ ಅಹರ್ನಿಶಿ ಪಬ್ಲಿಕೇಷನ್ ಪುಸ್ತಕ ರೂಪದಲ್ಲಿ ಹೊರತಂದಿದೆ. ಇದೇ 25ನೇ ತಾರೀಖಿನ ಭಾನುವಾರದಂದು ಕುಪ್ಪಳ್ಳಿಯಲ್ಲಿ ಬಯಲು ಸಾಹಿತ್ಯ ವೇದಿಕೆ ಮತ್ತು ನಾವು ನಮ್ಮಲ್ಲಿ ಸಂಯುಕ್ತವಾಗಿ ಆಯೋಜಿಸಿರುವ "ಕರ್ನಾಟಕ ಕಂಡ ಚಳವಳಿಗಳು" ಕಾರ್ಯಕ್ರಮದಲ್ಲಿ ರಸ್ತೆ ನಕ್ಷತ್ರ ಪುಸ್ತಕವು ಬಿಡುಗಡೆಯಾಗಿದೆ.

ಪುಸ್ತಕದ ಪ್ರತಿ ಬೇಕಾದವರೂ  ಆಕೃತಿ ಬುಕ್ ಸ್ಟಾಲ್ ಹಾಗೂ ನವಕರ್ನಾಟಕ ಪ್ರಕಾಶನದಿಂದ ಪಡೆದುಕೊಳ್ಳಬಹುದು.
ಆನ್ ಲೈನ್ ಮೂಲಕ ಮನೆಬಾಗಿಲಿಗೆ ತರಿಸಿಕೊಳ್ಳಬಹುದು,ತರಿಸಲು ಇಚ್ಚಿಸುವವರು ಇಲ್ಲಿ ಕ್ಲಿಕ್ಕಿಸಿ. ಧನ್ಯವಾದಗಳೂ.

Thursday 30 August 2012

ಬೂದಿಹುಡಿಯ ಮೇಲೆ ಪ್ರೇಮದ ಕಥೆ..

ಗೆದ್ದಲು ಹುಳುವಿನ ಎದೆಗೂಡೊಳಗೂ ಎರಡು ಹನಿ ನೀರಿನ ದಾಹ.
ಅದು ತೆವಳುತ್ತಿದ್ದ ಗರಿಕೆಯಾಚೆಗಿನ ಇಬ್ಬನಿಗೆ ಆಗಷ್ಟೇ ಅಪ್ಪಿದ ಸಾವು,
ತೊಟ್ಟಿಲಗೂಸಿನ ಹಸಿತುಟಿಯ ಮೇಲೆ ತಾಯ ಬೆಳ್ಳನೆಯ ರಕುತ,
ತೊಟ್ಟಿಲು ಕಟ್ಟಿದ್ದ ಅಡಕೆ ಜಂತೆಗೆ ಕುಸಿದು ಬೀಳುವ ತೀರದ ಆಸೆ.
ಆವೆಮಣ್ಣಿನ ಹೊಟ್ಟೆಯೊಳಗೆ ಎರೆಹುಳುವೊಂದರ ಗರ್ಭಪಾತವಂತೆ,
ಸತ್ತ ಭ್ರೂಣ ತಿಂದು ಮೈಮುರಿಯಲೆತ್ನಿಸುವ ಧೂಪದಮರದ ಬೀಜ.
ಹೊಂಡಬಿದ್ದ ಡಾಂಬರುರಸ್ತೆಯ ಮಧ್ಯದಲ್ಲೇ ಗರಿಕೆ ಸಸಿಯು ಕಣ್ ಬಿಟ್ಟು,
ಪಾದಚಾರಿ ಗಂಡ ಸತ್ತವಳ ಕಣ್ ನೀರು ಸಿಡಿದು ಗರಿಕೆಯ ಎದೆಯೂ ಸತ್ತಿದೆ.

ಸ್ಲೇಟು ಹಿಡಿದ ಕೂಸಿನ ಕೈಯೊಳಗಿನ ಸೀಮೆಸುಣ್ಣದ ತಲೆಯಷ್ಟೇ ಬಾಕಿಯಾಗಿ,
ಎರಡೂ ಕಣ್ಣ ನಡುವೆ ರೇಡಿಯಂ ಸ್ಟಿಕ್ಕರ್ ಅಂಟಿದ ಹುಡುಗಿ ಇಷ್ಟೇ ಹುಟ್ಟುವಳು.
ಕುಂಟುಹುಡುಗನೊಬ್ಬ ಮಣ್ಣರಸ್ತೆಯ ಮೇಲೆ ಬಿಡಿಸಿದ ಚಿತ್ರದ ಮೇಲೆ ಮಳೆ ಬಿದ್ದು,
ಕುಕ್ಕರುಗಾಲಿನಲ್ಲಿ ನೋಡುತ್ತಿದ್ದ ಎವೆಯಿಕ್ಕದ ಮುದುಕನ ಧ್ಯಾನದ ಕೊಲೆ.

ಇಲ್ಲಿ ಹುಟ್ಟುವುದಕ್ಕೂ ಸಾಯುವುದಕ್ಕೂ ವ್ಯಾಕರಣ ಬಲ್ಲವನನ್ನು ಹುಡುಕುತ್ತೇನೆ,
ಅವನು ಸಿಕ್ಕಿದ ದಿನ ಆತನ ಭುಜಕ್ಕೊರಗಿ ಬಾಯಾರಿದ ಎರೆಹುಳುವಿಗೂ,
ಹಾಗೆ ಬಂದು ಹೀಗೆ ಆರಿದ ಇಬ್ಬನಿಗೂ ಮಧ್ಯೆ ಚಿಗಿತ ಪ್ರೇಮದ ಕಥೆಯನ್ನು..
ಬೂದಿಹುಡಿಯ ಮೇಲೆ ಬೆರಳದ್ದಿ ಬರೆದು ತೋರಿಸುವ ಆಸೆಯೊಂದು ಹುಟ್ಟಿದೆ.

Tuesday 7 August 2012

ರೆಕ್ಕೆ ಬಿಚ್ಚಿಕೊಳ್ಳುವ ಪುಳಕವೆ....

ನೀಲಿಕಾವಳದ ಇನಿದು ನಡುನೆತ್ತಿ ಬೆಳಗಿನ ಸುಡುಗಾಡು ನಾಡೊಳಗೆ,
ಇಟ್ಟ ಮೊಟ್ಟೆಯ ಜೀವಗೂಡುಗಳ ಮೇಲೆ ಪುಟ್ಟಚಿಟ್ಟೆಗೂ ಪ್ರೇಮ..
ಎಲ್ಲೆಲ್ಲೂ ಅರಳಿ ಅರ್ಥವಿಲ್ಲದ ಚಿತ್ತಾರವಾದ ಮಿದುಳನಾಭಿಯ ಆಳದಲ್ಲೂ,
ಚಲಿಸೋ ಪದಗಳ ಪಂಜರದೊಳಗೆ ಮಾತಿರದ ಜೀವಕೂಸಿನ ಜನನ.

ಸರಳುಗಳ ಬೆನ್ನುತಬ್ಬುವ ಸಕ್ಕರೆಯ ಕೂಸು, ಹಚ್ಹಹಸಿಯ ತುಟಿಗಳು,
ಒಳಗಿರುವುದು ಬಂಧನವೋ, ಸರಳಿನಾಚೆಯದು ಬಂಧನವೋ..
ಅತ್ತಲೂ ಕಟ್ಟು ಇತ್ತಲೂ ಕಟ್ಟು, ಸರಳೊಂದೇ ಸತ್ಯವಾಗುವ ಘಳಿಗೆ,
ಕೊಂಬುಗಳ ಜಗತ್ತಿನಲ್ಲಿ ಕೇಳುವ ಕಿವಿಗಳ ಮೇಲೆ ಕಾದು ಸುಡುವ ಕಾವಲಿ.

ಅಷ್ಟರೊಳಗಿನ ಅಸ್ಮಿತೆಯಲ್ಲಿ ಇಷ್ಟಿಷ್ಟೇ ಚಿಗಿಯುವ ಕಣ್ಣುಸತ್ತ ಮುಖಗಳು,
ನರಖಂಡಗಳ ಸಂತೆಯೊಳಗೆ ಲಿಲಾವುಗೊಳ್ಳುವ ಬೆರಳಿಲ್ಲದ ಪಾದಗಳು..
ಕಣ್ಣಿಲ್ಲದ ಮುಖಕ್ಕೂ.. ಬೆರಳಿಲ್ಲದ ಪಾದಕ್ಕೂ ಗೆರೆಯೆಳೆದು ಉದ್ದಗೋಡೆಯ,
ಬಿರುಕಿನೊಳಗೆ ತೊಡೆ ತಟ್ಟುವ ಸೈತಾನೀಮರದ ಸಂಕರದ ಬೀಜವು

ಇದ್ದುದೆಲ್ಲವೂ ಸತ್ತು, ಸತ್ತುದೆಲ್ಲವೂ ಹುಟ್ಟಿ, ಕುಂಬಾರನ ಚಕ್ರವೂ ತಿರುಗಿ,
ಮಣ್ಣು ತಿದ್ದುವರಿಲ್ಲದೆ ನೆಲಕ್ಕೂ ಬಿದ್ದಾಯಿತು ವಕ್ರಾವರ್ತ ಪಿಶಾಚಿ ಮಡಕೆ..
ಮಸೀದಿ ಮಂದಿರ ಇಗರ್ಜಿಗಳ ಮುಂದಿನ ಚರ್ಮರೋಗದವರ ಸಾಲಿನಲ್ಲೂ
ಮೂಲೆಯಲ್ಲೆಲ್ಲೋ ನಿಂತಿದೆ ರುಂಡ ನಾಪತ್ತೆಯಾದ ಮನುಷ್ಯನ ಪಳೆಯುಳಿಕೆ

ಅವಧೂತರ ಹಾಡುಗಳ, ದರಬೇಶಿಗಳ ಪಾಡುಗಳ ಮೂಸುವರು ಎಲ್ಲಿ..
ಒಂದುತಂತಿ ಮೀಟುವರ, ಅರೆಗಣ್ಣು ಫಕೀರರ ಒಂದುಕಾಲದ ನೆನಪು,
ಇನ್ನೇನು ಸತ್ತೇಹೋಗಲಿರುವ ಚಿಟ್ಟೆಯ ಚಿಪ್ಪೊಡೆದ ಮೊಟ್ಟೆಗೆ ಬಿದ್ದು..
ಹುಟ್ಟದ ಜೀವದ ಕಂಕುಳಲ್ಲಿ ರೆಕ್ಕೆ ಬಿಚ್ಚಿಕೊಳ್ಳುವುದೇ ಸೋಜಿಗವು.

ರೆಪ್ಪೆ ಮೇಲಿನ ಇಬ್ಬನಿಯೂ.... ಅಣಬೆ ಬೇರಿನ ಕೊಂಬೆಯೂ

ಇವಳ ಅಷ್ಟೂ ಪ್ರೀತಿಯನ್ನು ಎಕ್ಕದೆಲೆಯ ಗೂಡುಕಟ್ಟಿಟ್ಟು,
ಆ ಅಣಬೆಗಿಡದ ಬುಡದಡಿಯ ನೆರಳಿನ ವಶಕ್ಕೊಪ್ಪಿಸುವಾಗ..
ಆಗತಾನೇ ತೊಟ್ಟು ಕಳಚಿಕೊಂಡ ಸುಂದರಿಮರದ ಹೂವೊಂದು
ಗೂಡೊಳಗೆ ತುಂಬಿಟ್ಟ ಅವಳ ಪ್ರೀತಿಯನ್ನು ವ್ಯಾಮೋಹದಿಂದ
ನಿಟ್ಟಿಸುತ್ತ ಪಾಚಿಗಟ್ಟಿದ ನೆಲದ ಮೇಲೆ ಅಂಗಾತ ಬಿತ್ತು..

ಕೊಲೆಯಾದ ಹೂವಿನ ಕಣ್ಣಮೇಲೆ ತುಟಿಯಿಟ್ಟು ಚುಂಬಿಸುತ್ತೇನೆ,
ತೇವದ ಬೆತ್ತಲೆ ಅಂಗಾಲುಗಳನ್ನು ಪಾಚಿನೆಲದ ಮೇಲೂರತ್ತ
ಇವಳ ಪ್ರೀತಿಯನ್ನು ಕಾಪಿಡಲು ಇನ್ನೊಂದು ತಾವು ಹುಡುಕುತ್ತೇನೆ..
ನಡೆದುಕೊಂಡು ಹೋದ ನವಿಲಿನ ಕಾಲ ಭಾರಕ್ಕೆ
ಯಾರಿಗೂ ತಿಳಿಸದೆ ಮಡುವಿನ ನಡುವೆ ಹುಟ್ಟಿದೆ ಪುಟ್ಟ ನದಿ..

ನವಿಲಹೆಜ್ಜೆಗಳ ನದಿಯೊಳಗೆ ಮುಳುಗಿಸಿಟ್ಟರೆ ಇವಳ ಪ್ರೀತಿಗೆ
ಉಸಿರುಗಟ್ಟುವ ಭಯವಾಗಿ ತೇವದ ಅಂಗಾಲುಗಳ ಕೆಳಗೆ
ಅರ್ಧ ಇಂಚಿನ ಭೂಕಂಪ.. ಹೆಬ್ಬೆರಳುಗಳ ಎದೆಯೊಡೆದು ಕಂಪಿಸುತ್ತವೆ,
ಎಲ್ಲಿಟ್ಟರೂ, ಹೇಗಿಟ್ಟರೂ ಅವಳ ಪ್ರೀತಿಗೆ ಉಸಿರಾಡಲಿಕ್ಕಿಷ್ಟು ಗಾಳಿಬೇಕು..
ಮೈಮುರಿಯಲು, ಮಗ್ಗುಲು ತಿರುಗಲು, ಕಣ್ತೆರೆಯಲು ಬೆಳಕು ಬೇಕು.

ಇಡುವ ಕ್ರಿಯೆಯ ಆಚೆ ಈಚೆಗೆ ಪ್ರೀತಿಗೊಂದು ನೆಲವೂ ಸಿಗದಾಗಿ
ಬಿಳಿ ಅಣಬೆಬೇರಿನ ಕೊಂಬೆಗಳ ಸೊಂಟಕ್ಕೆ ಆನಿಸಲೂ ಮನಸೊಪ್ಪದೆ
ಎಕ್ಕದೆಲೆಯ ತುಂಬ ಹಿಡಿದ ಇವಳ ಪ್ರೀತಿಯನ್ನು ಹಿಡಿದಿಡಲೂ ಆಗದೆ..
ಚೆಲ್ಲಲೂ ಜೀವವೊಪ್ಪದೆ, ನನ್ನೆದೆಯ ತುಂಬ ಸುರುವಿಕೊಳ್ಳುತ್ತೇನೆ..
ಇವಳ ಕಣ್ಣ ರೆಪ್ಪೆಯ ಮೇಲೆ ಆಗಷ್ಟೇ ಇಬ್ಬನಿಹನಿಗಳು ಹುಟ್ಟುತ್ತವೆ.

ಇಬ್ಬನಿಯ ಮುಟ್ಟುವ ಆಸೆ, ನನ್ನೊಳಗೆ ಬಸಿದುಕೊಳ್ಳುವ ತೀಟೆ,
ಕೊಲೆಯಾದ ಹೂವಿನ ಕೊಳೆತ ದೇಹವೂ ಕರಗಿ.. ನವಿಲ ಹೆಜ್ಜೆಗಳ
ನದಿಯಾಳದೊಳಗೆ ತಲೆಯೆತ್ತುವ ಎರೆಹುಳುವಿಗೂ ಅಸೂಯೆ..
ನನ್ನ ಎದೆ ಹರವಿನ ಮೇಲೆ ಸುರುವಿಕೊಂಡ ಇವಳ ಪ್ರೀತಿಯ ಹುಡಿಗಳು
ಎರೆಹುಳುವಿನ ಪುಟ್ಟಕಣ್ಣುಗಳತ್ತ ಸುಖಾಸುಮ್ಮನೆ ನೋಡುತ್ತ ಕುಳಿತಿವೆ.

Wednesday 1 August 2012

ಕತ್ತಲೆಯ ಕೊಂದವಳು.

ನೆನೆದೂ ನೆನೆದೂ ತೇವಗೊಂಡ ಒಡಲಭೂಮಿಯ ದೊರೆಸಾನಿಯೇ 
ನಿನ್ನ ಕಣ್ರೆಪ್ಪೆ ತನ್ನಪಾಡಿಗೆ ತೆರೆದು ಮುಚ್ಚುವ ಸದ್ದೂ ಕೇಳುತ್ತದೆ ನನಗೆ,
ತೊಟ್ಟು ಕಳಚಿದ ಪಾರಿಜಾತ ಪುಷ್ಪ ನೆಲಕ್ಕೆ ಬಿದ್ದ ಸಪ್ಪುಳದಂತೆ..

ಮುರುಕು ಹಣತೆಗೆ ಮಣ್ಣು ಮೆತ್ತಿ ಒಪ್ಪ ಮಾಡಿಟ್ಟ ಅಂದಗತ್ತಿಯೇ.. 
ನಾಜೂಕಾಗಿ ಹಚ್ಚಿಟ್ಟ ಬೆಳಕು, ಗಾಳಿಗೆ ತುಯ್ಯುತ್ತಿದೆ, ತೊನೆದಾಡುತ್ತಿದೆ..
ನಿನ್ನ ತೆಳುಕಿವಿಗೆ ನೇತುಬಿದ್ದ ಪುಟ್ಟ ಜುಮಕಿಯೋಲೆಯ ಸಪ್ಪುಳದಂತೆ..

ಇರುವೆರಡು ಕಣ್ಣೊಳಗೆ ದೀಪ ಹಚ್ಚಿಟ್ಟುಕೊಂಡ ಬೆಳಕಿನೂರಿನ ಜೀವವೇ..
ನನ್ನೊಳಗೆ ಬಣ್ಣವನ್ನು ಚೆಲ್ಲಾಡಿದ ನಿನ್ನ ದೀಪ, ಕುರುಡು ಕತ್ತಲೆಯ ಕೊಂದಿದೆ, 
ಗುಬ್ಬಚ್ಚಿ ಗೂಡೊಳಗೆ ನುಗ್ಗಿದ ಎರಡು ಅಮಾಯಕ ಮಿಂಚುಹುಳಗಳಂತೆ..

ಪೊರೆಗಳಚಿಕೊಂಡ ನೆನಪುಗಳ ಕಿತಾಬನ್ನು ಆಯ್ದು ಆಯ್ದು ಕೊಟ್ಟವಳೆ, 
ಅಂಟಿಕೊಂಡ ಕಿತಾಬಿನ ಹಾಳೆಗಳಲ್ಲಿ ಕೆಲವನ್ನು ಗೆದ್ದಲುಗಳು ತಿಂದಿವೆ..
ನಾನು ನರಳಾಡುತ್ತೇನೆ.. ಗೆದ್ದಲುಗಳ ಬಾಯೊಳಗೆ ತುಂಡಾದ ಹಾಳೆಯಂತೆ.. 

ಇದ್ದುದೆಲ್ಲವನ್ನೂ ಜೋಡಿಸಿ ಒಡಲೂರ ದೇವರಿಗೆ ತೇರುಕಟ್ಟಿದ ಹುಡುಗಿಯೇ.
ನಿನ್ನ ಪಾದಧೂಳಿಯ ಯಾವೊಂದು ಧೂಳುಕಣವನ್ನೂ ನೆಲದ ಮೇಲೆ ಉಳಿಸದೆ.. 
ಎದೆಗೆ ಸುರುವಿಕೊಳ್ಳುತ್ತೇನೆ..ನನ್ನನ್ನೇ ನಿನ್ನೊಳಗೆ ಹೂತು ಹಾಕಿದಂತೆ.