Showing posts with label ಕವಿತೆ. Show all posts
Showing posts with label ಕವಿತೆ. Show all posts

Tuesday, 25 September 2012

ಬೋಧಿಲೇರನ ಗಳಾಸು ಮತ್ತು ಕುಲುಮೆಯೊಂದರ ಸ್ವಗತ "

ಯಾವ ಆವಾಹನೆಗೂ ತಲೆಕೊಡದ ಗವ್ವೆನ್ನುವ ಬೆಳಕಿಗೂ ಅಸು ತೊರೆವ ಆಸೆ,
ಇನ್ನೆಷ್ಟೊತ್ತು ಉರಿಯುವುದು ಧಿವಿಧಿವಿಯೆಂದು, ಯಾರಿಗೂ ಬೇಡದ ಬೆಳಕದು..
ಆರಿಸುವರೂ ಇಲ್ಲದ, ಆತ್ಮವಷ್ಟೇ ಚಲಿಸುವ ಒಣಗಿದ ನೆಲದಲ್ಲಿ ಪರದೇಸಿ ಬೆಳಕು.

ಯಾರೋ ಬರುವವರಿದ್ದಾರೆ, ಗಾಳಿಬೀಸುವ ಸದ್ದಿಗೂ ಕಾಯುವ ತೆವಲು ಅಂಟುತ್ತದೆ,
ಹುಲ್ಲುಗರಿಕೆಯ ಚೂಪು ಬುರುಡೆಗೆ ಒಣಗಿದೆಲೆಯೊಂದು ಎದೆ ತಿವಿದುಕೊಂಡು ಬಿದ್ದುದು,
ಖಾಲಿ ಮುಂಡಕ್ಕೆ ಕಣ್ಣು ಕಿವಿಗಳನ್ನು ಅಂಟಿಸಿಕೊಳ್ಳುವ ಎಕ್ಕದಗಿಡಕ್ಕೂ ಆಶ್ಚರ್ಯವು..

ಒಡ್ಡಿದ ಕೈಗೆ ಬಿದ್ದಿಲ್ಲ ಮಣ್ಣು, ಯಾವಾಗ ಬೀಳುತ್ತದೋ ಸಂಕುಲವ ಪೊರೆದ ಮಣ್ಣಹುಡಿ,
ಒಳಗಿನ ಕೆಂಪುದ್ರವದೊಳಗೆ ಇಷ್ಟಾದರೂ ಬೆರೆಯಬಾರದೇ ಎಲ್ಲವನ್ನೂ ಬೆಳೆವ ಮಣ್ಣು..
ಒಳಗೊಳ್ಳುವ, ಕಾಪಿಡುವ, ಕಟ್ಟಿಡುವ, ಪ್ರೇಮಿಸುವ ಮಣ್ಣಿಗೂ ಬಂತೇ ಇಂಥ ಅಹಮಿಕೆ.

ದಾರಿಹೋಕಳ ಚಪ್ಪಲಿಯಿಲ್ಲದ ಹೆಜ್ಜೆಗುರುತುಗಳನ್ನು ಮೂಸುತ್ತವೆ ಸೀಳುನಾಯಿಗಳು,
ದಾರಿಯೂ ಮುಗಿದು, ಗುರುತೂ ಇಲ್ಲವಾದ ಬಿಂದುವಿನಲ್ಲಿ ಸುಂದರವಾಗಿ ಊಳಿಡುತ್ತವೆ,
ಜೀವ ಉಳಿದದ್ದು ಅವಳಿಗೂ ತಿಳಿಯಲಿಲ್ಲ, ಗುರುತಿಲ್ಲದ ಬಿಂದು ಇವಕ್ಕೂ ಅರ್ಥವಾಗಲಿಲ್ಲ.

ಸೆಗಣಿಯುಂಡೆಯ ಭೂಮಿ ಕಟ್ಟಿದ ಹುಳುವಿಗೆ ಅದನ್ನು ಸುಮ್ಮನೆ ಉರುಳಿಸುವ ಖಯಾಲು,
ವಿಸರ್ಜನೆಯ ಆವರ್ತಭೂಮಿ ಉರುಳುತ್ತಲೇ ತುದಿಗಳಿಗೆ ಚರ್ಮ ಬೆಳೆಯುತ್ತಿರಲಾಗಿ,
ಕಟ್ಟಿದ ಉಂಡೆ 
ಯಾವುದು, ಉರುಳುತ್ತಿರುವ ಉಂಡೆ ಯಾವುದು ಇಬ್ಬರಿಗೂ ಗೊಂದಲ.

ಗಿರಾಕಿಗಳೇ ನಾಪತ್ತೆಯಾದ ಕುಲುಮೆಯೊಂದರ ಸ್ವಗತಕ್ಕೆ ಇನ್ನೂ ಜೀವ ಸಿಗುತ್ತಿಲ್ಲವಂತೆ..
ತಿದಿಯೊತ್ತುವನೂ ಮಂಡಿಮೇಲೆ ನೊಸಲಿಟ್ಟು ಹುಟ್ಟದೆ ಇರುವವರಿಗಾಗಿ ಕಾಯುವ ರೀತಿಗೆ,
ಬೋಧಿಲೇರನ ಮಧ್ಯದ ಗಳಾಸಿನ ಎದೆಯೂ ಒಡೆದು ಚೂರೆದ್ದು ಹೋಗಿದ್ದು ಇತಿಹಾಸವು.



"ರಾಹಿತ್ಯದ ಒಳಗೂ ಚಿತ್ರ ಬರೆಯುವ ಇವಳು.."

ಯಾವ ಪಕಳೆಗಳ ಕೆನ್ನೆಯ ಮೇಲಿರುತ್ತವೋ ಅಂಥ ಬಣ್ಣಗಳು,
ಒಂದೊಂದನ್ನೇ ಮುದ್ದಿನಿಂದ ಆಯ್ದು ಆಯ್ದು ತರುತ್ತಾಳೆ,
ಇವಳಿಗೆ ಮಾತ್ರ ಗೊತ್ತು ಚಿತ್ರದ ಬಣ್ಣ ಆಯ್ದುಕೊಳ್ಳು ಕಲೆ,
ನಿಂತೆರಡು ಕಾಲುಗಳ ಕೆಳಗೆ ಬೇರುಗಳಿದರೂ ಇವಳ ಚಿತ್ರವೇಕೋ
ಇನ್ನೂ ಮುಗಿಯುತ್ತಿಲ್ಲ.

ಒಟ್ಟು ಬದುಕೇ ಹಾಳೆಯಂತೆ ಹರಡಿಕೊಂಡ ಪರಿಭಾವದೊಳಗೆ
ಇವೆರಡು ಗೆರೆಗಳು, ಅವೆರಡು ಬಣ್ಣ, ಬೀಸುವ ಬ್ರಶ್ಶಿನ ಚಲನೆಗೆ,
ಯಾವ ಅಂಕೆಯೂ ಇಲ್ಲ, ನೋಡುತ್ತ ಕುಳಿತವನ ನೆತ್ತಿಯ ಮೇಲೂ
ಆಗೀಗ ಸಿಡಿಯುತ್ತದೆ ಅಷ್ಟಿಷ್ಟು ಬಣ್ಣ, ಕಣ್ಣೆವೆಯ ತುಂಡುಗಳು..
ಚಿತ್ರ ಬರೆಯಲು ಕುಳಿತವಳ ಧ್ಯಾನ ನನಗೆ ನಡುಕ ಹುಟ್ಟಿಸುತ್ತದೆ.

ಕಟ್ಟಿಟ್ಟುಕೊಂಡ ಶಬ್ದಗಳು ಕಣ್ಣಮೇಲೆ ಹೂವಿಟ್ಟುಕೊಂಡು ಕಾಯುತ್ತವೆ,
ಚಿತ್ರ ನೇವರಿಸಲೆಂದೇ ಹುಟ್ಟಿದ ಬೆರಳುಗಳ ಸೊಂಟದ ಮೇಲೆ
ಸೀತಾಳೆ ಗಿಡದ ನೆರಳಿನ ಭ್ರೂಣವೊಂದು ಆಕಳಿಸುತ್ತ ಕುಳಿತು,
ಎರಡೂ ಕಣ್ಣುಗಳ ವಿಸ್ತಾರವೂ ಚಿತ್ರದಾಳೆಯ ಮೇಲೆ ಮೆತ್ತಿಕೊಂಡರೂ..
ಚಿತ್ರದೊಡತಿಯ ಆಳ ಅಗಲಗಳ ಯಾವ ಅಳತೆಯೂ ನಿಲುಕುವುದಿಲ್ಲ.

ತೇಲುವ ಇವಳ ನಿಮೀಲಿತ ನೇತ್ರಗಳ ಒಳಗೂ ಆಚೆಗೂ ಇರುವುದೇನು,
ಇಂಥ ಪರಿಯ ಮುಳುಗುವಿಕೆಗೆ ತಾವು ಕಟ್ಟಿಕೊಟ್ಟ ಚಿತ್ರದ ಬಗ್ಗೆ,
ಆಗಾಗ್ಗೆ ಹಿಗ್ಗುವ ಇವಳ ತುಟಿ ತುದಿಯ ಕವಲಿನ ಸೊಬಗಿನ ಬುಗ್ಗೆಗೆ,
ನನ್ನ ಬೆನ್ನ ಮರುಭೂಮಿಯ ತುಂಬೆಲ್ಲ ಬೆವರ ಜಲಪಾತಗಳು ಹುಟ್ಟಿ
ನಾನು ಮಗ್ಗುಲು ತಿರುಗಲೆಳೆಸಿ ನೆಲಕ್ಕೆ ಬಿದ್ದ ಹಳೆಯ ತೊಟ್ಟಿಲ ನೆನಪು.

ಇಲ್ಲದಿರುವ ಎಲ್ಲವ ಕಸಬರಿಗೆಯಿಂದ ಗುಡಿಸಿ ಮೂಲೆಗೆಸೆದ ಇವಳು
ಇಲ್ಲದಿರುವಿಕೆಗಳ ರಾಹಿತ್ಯರಾಜ್ಯದೊಳಗೆ ಚಿತ್ರ ಬಿಡಿಸುವ ತಾಕತ್ತಿಗೆ,
ಕೈಯೆತ್ತಿ ಮುಗಿಯಲು ಇರುವುದೇ ಎರಡೇ ಬೊಗಸೆಗಳೆಂಬ ಕೊರಗು.
ಚಿತ್ರಮುಗಿಸಿ ಕುಳಿತವಳ ನಡುನೊಸಲ ಗರ್ಭದೊಳಗಿಂದ ಎರಡೇ ಎರಡು
ಗೆರೆಗಳು ಜನಿಸಿ ಅಷ್ಟುದ್ದ ಹಾಳೆಯ ಚಿತ್ರಕ್ಕೆ ತುಟಿಯೊತ್ತಲು ಕೈ ಜಗ್ಗುತ್ತವೆ.

ಬರೆದಿಟ್ಟ ಚಿತ್ರದೆದುರು ನಿಂತ ನಿಲುವಿನ ಕಾಯದೊಳಗೆ ನಕ್ಷತ್ರವರಳುತ್ತವೆ.
ಪಾದಕ್ಕೆ ಮೂಡಿದ ಬೇರುಗಳ ಬಿಡಿಸುತ್ತ ಕುಳಿತ ಇವಳತ್ತ ನೋಡುವಾಸೆ.
ನಿಂತಲ್ಲೇ ಸತ್ತು ಸತ್ತಲ್ಲೇ ಮೊಳೆತು, ಇರುವೆರಡು ಕಣ್ಣತುಂಬ ಇವಳದೇ ಚಿತ್ರ.
ಅದು ಹಾಡುತ್ತದೆ, ನಡೆಯುತ್ತದೆ, ಬೇಡದ ಶಬ್ದಸಂತೆಯಿಂದ ದೂರ ನಿಂತು,
ಬಣ್ಣಗಳೊಳಗೆ ಒಂದಿಷ್ಟು ತಾವುಂಟು ಒಳಗೆ ನಡೆದು ಬಾ ಎನ್ನುತ್ತದೆ.

ನಾನು ನಡೆಯುತ್ತಿದ್ದೇನೆ, 
ಇವಳ ಚಿತ್ರದೊಳಗೆ,
ಇನ್ನಷ್ಟು ಮತ್ತಷ್ಟು ಆಳದೊಳಗೆ. 



Sunday, 16 September 2012

“ ರಾಟುವಾಣದ ತೊಟ್ಟಿಲೊಳಗೆ..“

ಕಡುಹಸುರು ತೊಗಟೆಯ ಹೆಸರಿಲ್ಲದ ಮರದ ಟೊಂಗೆಯೊಳಗೆ
ಒಣಗಿದೆಲೆ, ಸವುದೆಪುಳ್ಳೆ, ಅದ್ಯಾವುದೋ ಗಿಡದ ನರಗಳ ಬಲೆ,
ಇಟ್ಟು ದಿನವಾದ ಮೊಟ್ಟೆಗಳ ಕಂದುಸಿಪ್ಪೆಯತ್ತಲೇ ಕಣ್ಣು ನೆಟ್ಟ
ಒಕ್ಕಣ್ಣು ಗಿಣಿಯ ರೆಕ್ಕೆಗಳೊಳಗೆ ಮಡಚಿಟ್ಟ ನೆನಪುಗಳ ಸಂತೆ.

ದೂರವಲ್ಲದ ದೂರದಲ್ಲಿ ಯಾರೂ ಹುಟ್ಟಿಸದ ತಲಪರಿಕೆಯ ಒರತೆ,
ಪೊದೆಮುಚ್ಚಿದ ಹಳ್ಳಕ್ಕೆ ಅಡ್ಡಬಿದ್ದ ಕಾಂಡವೊಂದರ ತುದಿಗೆ ಕೂತ,
ನೆರಿಗೆ ಬಿದ್ದ ಕಣ್ಣಲ್ಲೇ ಮೋಡಕ್ಕೆ ಬಣ್ಣ ಬಳಿಯುವ ವೃದ್ಧೆಯೊಬ್ಬಳು..
ಹೊಲೆದಿಟ್ಟ ಬದುಕನ್ನು ಎಲೆಯಡಿಕೆಯ ಸಂಚಿಯಲ್ಲಿ ಹುಡುಕುತ್ತಾಳೆ.

ಐದು ತುದಿಗೂ ಮೊಳೆ ಹೊಡೆಸಿಕೊಂಡು ಆಕಾಶದಿಂದ ನೆಲಕ್ಕೆ
ಮಕಾಡೆಬಿದ್ದ ಅರ್ಧಜೀವ ನಕ್ಷತ್ರದ ತುಂಡೊಂದಕ್ಕೆ ಇನ್ನಿಲ್ಲದ ಆಸೆ.
ನಿಚ್ಚಣಿಗೆಯ ಕಟ್ಟುವ ಜೀವಕ್ಕೆ ಅದ್ಯಾವಾಗಿಂದಲೋ ಕಾಯ್ದ ಉಸುರು,
ತುಯ್ಯುತ್ತದೆ, ಅತ್ತಲೂ ಇತ್ತಲೂ ಮುತ್ತಲೂ ಎತ್ತಲೂ ಕತ್ತಲಕಾವಳ.

ಆಸೆಗೂಡೊಳಗಿನಿಂದ ತಲೆ ಹೊರಗಿಟ್ಟ ಇರುವೆಗೆ ತುಂಬುಜ್ವರ,
ಬಿಡುಬೀಸು ಬಿಸಿಲಿಗೆ ಇಟ್ಟ ಹೆಜ್ಜೆಯೇ ಸುಟ್ಟುಹೋಗುವ ಭಯ,
ಗೂಡುಮಾಡಿನ ಗೋಡೆಗಳಿಗೆ ನೆತ್ತಿಯಾನಿಸುವ ಪುಟ್ಟಜೀವಕ್ಕೆ,
ಇನ್ನೇನು ನೆಲತಬ್ಬಲು ಹೊರಟ ಮಳೆನೀರ ಮೇಲೆ ಗ್ಯಾನವು.

ಎದೆನೀವುವ ಜನರಿಗಾಗಿ ಹುಬ್ಬಿನ ಮೇಲಿಟ್ಟ ಮಡಚಿದ ಅಂಗೈಗೆ
ಆಗೀಗ ಗಾಳಿಸೋಕುವ ಪುಳಕಕ್ಕೆ ನೇಣುಹಾಕಿಕೊಳ್ಳುವ ಆಸೆ.
ಮೈ ತುಂಬ ಕಣ್ಣು ಮೆತ್ತಿಕೊಂಡ ರಾಟುವಾಣದ ತೊಟ್ಟಿಲೊಳಗೆ
ಮೆಲ್ಲಗಿಳಿದ ಕುಂಟುಕಾಲಿನ ಹುಡುಗಿಗೆ ಬದುಕಿಬಿಡುವ ಆತುರ.

Tuesday, 11 September 2012

ಇರುವುದಿಷ್ಟೇ, ಸಂಪಿಗೆಯಕೊಂಬೆ, ಇಷ್ಟುದ್ದ ನೂಲು..

ಚೌಕದ ಕಾಗದ, ನಾಲ್ಕುಮೂಲೆ, ಬೆರಳುಗಳ ಮಡಚುವ ಮೋಹದೊಟ್ಟಿಗೆ
ಎಷ್ಟೋ ವರ್ಷಗಳ ನಂತರ ಕಾಗದದ ಜಹಜು ಈಗತಾನೆ ನೆನಪಾಯಿತು..
ನಾಲ್ಕುಮೂಲೆಗೂ ನಿನ್ನ ಮೂಕ ಕಿರುನಗೆಯನ್ನು ಅಂಟಿಸಲು ನೋಡುತ್ತೇನೆ,
ಹಾಳಾದ ನಯಸು ಕಾಗದಕ್ಕೆ ಯಾವುದೂ ನೆಟ್ಟಗೆ ಅಂಟಿಕೊಳ್ಳುವುದಿಲ್ಲ.

ಖುಲ್ಲಾ ಆಕಾಶದ ಕೆಳಗೆ ಬರಿಬೆತ್ತಲು ಭೂಮಿ, ಗೆದ್ದಲುಹುಳುವಿನ ಬಾಷ್ಪ,
ಚಿಟ್ಟೆಯ ಕಾಲಿಗಂಟಿದ ಮಕರಂದದ ಸೊಡರು, ತೊಟ್ಟು ಕಳಚಿದ ಹೂವು,
ರಬ್ಬರುಮರದ ಕಾಂಡದ ಗಾಯದೊಳಗಿಂದ ಬೆಳ್ಳಬೆಳ್ಳನೆಯ ನೆತ್ತರು..
ಹಾಳು ನಯಸು ಕಾಗದಕ್ಕೆ ಯಾವುದರಿಂದಲೂ ನಿನ್ನ ಕಿರುನಗೆ ಅಂಟುತ್ತಿಲ್ಲ.

ಕೂಸೊಂದರ ಖಾಲಿಬಾಯೊಳಗೆ ತುಳುಕುವ ಜಲದ ತೊರೆಯಿಂದಲೂ..
ಕಣ್ಣಗುಡ್ಡೆಯ ತೇವ ಕಾಯುವ ರೆಪ್ಪೆಯಡಿಯ ಅಂಟಿನಿಂದಲೂ..
ತೆವಳಿದ ರಸ್ತೆಯುದ್ದಕ್ಕೂ ಚಿತ್ರವೆಬ್ಬಿಸಿದ ಬಸವನುಳುವಿನ ಅಂಟಿನಿಂದಲೂ..
ಯಾವೆಂಬ ಯಾವುದರಿಂದಲೂ ನಿನ್ನ ಕಿರುನಗೆ ಜಹಜಿಗೆ ಅಂಟುತ್ತಲೇ ಇಲ್ಲ.

ನಿನ್ನ ನಗುವನ್ನೇ ಮೆಲ್ಲಗೆ ಮಡಿಲಿಗೆಳೆದುಕೊಂಡೆ, ನಗುವಿಗೂ ಕಿವಿಯಿತ್ತಲ್ಲ..
ಕಿವಿಯ ಹಾಳೆಗೆ ಮುತ್ತಿಟ್ಟು.. ಮಂಡಿ ಮಡಚಿ ಮೊಣಕಾಲೂರಿ ಕೇಳಿದೆ.
ಅಂಟೋಲ್ಲವೇಕೆ ನೀನು ಯಾವುದರಿಂದಲೂ ಯಾವುದಕ್ಕೂ ಹೀಗೆ ಹೀಗೆ?
ನಗುವೂ ಮಾತನಾಡುತ್ತದೆ.. ಅಂಟುವ ಕ್ರಿಯೆ ಇದಲ್ಲವೋ ಹುಡುಗ.

ಅಂಟಿಕೊಳ್ಳುವುದು ನನಗೆ ಗೊತ್ತು, ಅಂಟಿಸಲೆತ್ನಿಸಬೇಡ ಯಾವುದಕ್ಕೂ..
ನಿನ್ನೆಲ್ಲ ಪೆದ್ದು ಕೆಲಸಗಳೂ ನನಗೆ ತಮಾಷೆಯಷ್ಟೇ.. ಅಂಟಿಸಬೇಡ..
ಅಂಟಬೇಕೆನ್ನುವ ವ್ಯಾಮೋಹ ಬಂದ ದಿನ ನಾನೇ ಅಂಟಿಕೊಳ್ಳುವೆ..
ಹಾಗೆಂದದ್ದೇ ಕಾಗದದ ಜಹಜಿನ ನಾಲ್ಕುಮೂಲೆಗೂ ತನ್ನನ್ನು ಮೆತ್ತಿಕೊಂಡಿತು.

ಜಹಜಾಯಿತು, ನಿನ್ನ ನಗು ತನಗೆ ತಾನೇ ಅಂಟಿಕೊಂಡಿದ್ದೂ ಆಯಿತು..
ಎಲ್ಲಿಡಲಿ ಈ ಕಾಗದದ ಜಹಜನ್ನು, ನೀರಿಗಿಟ್ಟರೆ ನೆನೆಯುವ ಭಯ,
ಕೈಯೊಳಗೇ ಇದ್ದರೆ ಮುದುಡುವ ಭಯ, ನೆಲಕ್ಕಿಟ್ಟರೆ ಕಳೆಯುವ ಭಯ..
ಜಹಜು ನೀರೊಳಗೇನೋ ಇರಬೇಕು ಸರಿ.. ಏನಾದರೂ ಆದರೆ ?

ಆದರೆಗಳ ಹಂಗು ಕಳಚಿಕೊಂಡು ಜಹಜಿಗೊಂದು ದಾರ ಕಟ್ಟಿದ್ದೇನೆ..
ಸಂಪಿಗೆಮರದ ಕೊಂಬೆಗೆ ಜಹಜಿನ ದಾರ ತೂಗುಬಿಟ್ಟು ಸುಮ್ಮನಿದ್ದುಬಿಡುವೆ,
ಎಲ್ಲ ಜಹಜುಗಳೂ ತೇಲುವುದಿಲ್ಲ, ಹಾಗೆಯೇ ಎಲ್ಲವೂ ಮುಳುಗುವುದೂ ಇಲ್ಲ,
ತೇಲದೇ ಮುಳುಗದೇ ಸಂಪಿಗೆ ಮರಕ್ಕೊಂದು ಒಡವೆಯಂತೂ ಆಯಿತು.

ಇಲ್ಲಿ ತೇಲಲು ಬೆಂಡೂ ಇಲ್ಲ, ಖುಷಿಯೆಂದರೆ, ಮುಳುಗಲು ಗುಂಡೂ ಇಲ್ಲ,
ಇರುವುದಿಷ್ಟೇ, ಸಂಪಿಗೆಯಕೊಂಬೆ, ಇಷ್ಟುದ್ದ ನೂಲು, ಕಾಗಜ್ ಕೀ ಜಹಜು.

Saturday, 1 September 2012

ನೀರಹಾರ ಮತ್ತು ಮೊಟ್ಟೆಯಲುಗಿದ ಶಬುದ..!

ಬೆಳದಿಂಗಳ ಪುಡಿಯನ್ನು ತನ್ನ ಸುತ್ತಲೂ ಆವರ್ತವಾಗಿ ಚೆಲ್ಲಿದ ಅವಳು,
ಸುಂದರಿಮರದ ಮೊಗ್ಗಿನಂತೆ ಮಡಚಿದ ಮಂಡಿಗೆ ಗಲ್ಲ ಆನಿಸಿದ್ದಾಳೆ,
ಅವಳೆದುರು ಕುಂತ ನಾನು ಎಲೆ ಮೇಲಿನ ನೀರಹನಿಗಳನ್ನು ಹೆಕ್ಕಿ ತಂದು ..
ಒಂದೊಂದು ಹನಿಯನ್ನೂ ದಾರಕ್ಕೆ ಪೋಣಿಸುತ್ತ ನೀರಹಾರ ಹೊಸೆಯುತ್ತೇನೆ.
ನಕ್ಷತ್ರಗಳೂ ನಾಪತ್ತೆಯಾದ ಮೋಡಗಳ ಕಾಡೊಳಗೆ ಬೆಳಕಷ್ಟೇ ಇಷ್ಟು,
ಅವಳ ಕಿರುಬೆರಳ ಉಗುರು ನನ್ನನ್ನೇ ನೋಡುತ್ತ ನಕ್ಕಿದ್ದೂ ಇಷ್ಟೇ ಇಷ್ಟು..
ತುಂಬೇಹೂವಿನ ಘಮಕ್ಕೆ ಆಸೆಬಿದ್ದ ಗಿಳಿಯೊಂದು ಇಲ್ಲೇ ಗಿರಕಿ ತಿರುಗುತ್ತಿದೆ,
ಆವರ್ತದೊಳಗಿನ ಇವಳ ಜೀವಕ್ಕೆ ಪೋಣಿಸಿದ ನೀರಹಾರದ ಮೇಲೆ ಪ್ರೀತಿ.

ಬೆಳಕಿನಹಾಳೆಯ ಮೇಲೆ ರೆಪ್ಪೆಗಿಷ್ಟು ಬಣ್ಣ ಅದ್ದಿಕೊಂಡು ಹೆಸರು ಗೀಚುತ್ತೇನೆ,
ಸುಂದರಿಮರದ ಮೊಗ್ಗಿನಂಥವಳ ಹೆಸರು ಅಕ್ರಚಕ್ರವಕ್ರವಾಗಿ ಹಾಳೆಯ ಮೇಲೆ,
ಬೆರಳಷ್ಟನ್ನೇ ಆವರ್ತದಾಚೆ ದಾಟಿಸಿದ ಇವಳು ರೆಪ್ಪೆಗಂಟಿದ ಬಣ್ಣ ಒರೆಸುತ್ತಾಳೆ,
ನಾಲಿಗೆಯ ಮೇಲೆ ತೆವಳಲು ಒಂದೂ ಪದವಿಲ್ಲದೆ ಮಾತೆಲ್ಲವೂ ಕೊಲೆಯಾಗಿವೆ.

ಟಾರುಕಿತ್ತ ರಸ್ತೆಯ ಮೇಲೆ ಕುಕ್ಕರಗಾಲಿನ ಅರೆಬರೆ ಫಕೀರ ಸುಮ್ಮನೆ ಹಾಡುತ್ತಾನೆ
ಅಲ್ಲಿ ಹುಟ್ಟಿದ ಹಾಡು ಅಲ್ಲೇ ಇಷ್ಟೆತ್ತರ ಬೆಳೆದು ನಮ್ಮಿಬ್ಬರ ನಡುವೆ ಮಕಾಡೆ ಬಿದ್ದಿವೆ,
ಮೆಲ್ಲನೆದ್ದು ಬಂದ ಇವಳ ಬೊಗಸೆ ಕೈಗಳು ಆ ಎಳಸುಹಾಡಿನ ಕೆನ್ನೆ ಗಿಲ್ಲುವಾಗ,
ನನ್ನ ಕೊರಳಸುತ್ತಲೂ ನೇತುಬಿದ್ದ ಆಸೆಯ ಮೊಟ್ಟೆಗಳು ಮೆಲ್ಲಗೆ ಅಲುಗುತ್ತವೆ.

ಮೊಟ್ಟೆಯಲುಗಿದ ಶಬುದವು ಇವಳ ಕಣ್ಣಿಗೂ ಕೇಳಿಸಿ ನನ್ನತ್ತ ಬೊಗಸೆ ಚೆಲ್ಲುತ್ತಾಳೆ,
ಬಾಕಿಯಿದ್ದ ಹನಿಯನ್ನೂ ಪೋಣಿಸಿದ ನೀರಹಾರವನ್ನು ಅವಳ ಬೊಗಸೆಗಿಡುತ್ತೇನೆ,
ಅಷ್ಟರವರೆಗೂ ಕೊಲೆಯಾದಂತೆ ಬಿದ್ದಿದ್ದ ಮಾತುಗಳು ನನ್ನ ನಾಲಿಗೆಗೆ ಹತ್ತುತ್ತವೆ..
ಏನೇನೋ ಪಿಸುಗುಡುತ್ತವೆ.. ಕೇಳಿಸಿಕೊಂಡ ಇವಳ ಕಣ್ರೆಪ್ಪೆಗಳು ಮೆಲ್ಲಗೆ ನಗುತ್ತವೆ.

ಯಾರಲ್ಲೂ ಹೇಳದ ಪದ.. ಒಂದು ಪದದ ಜಗತ್ತು..

ಎಕ್ಕದ ಹೂವಿನ ಮೇಲೆ ಜೇನು ನೋಡುತ್ತಿದ್ದ ಕುರುಡು ಚಿಟ್ಟೆಯೊಂದು ಸಿಕ್ಕಿದೆ,
ಚೂರೇಚೂರು ಕಣ್ ಮುಚ್ಚೆ ಹುಡುಗಿ, ನಿನ್ನ ಸುನೀತ ರೆಪ್ಪೆಯ ಮೇಲಿಡುತ್ತೇನೆ.

ರೆಪ್ಪೆಯೊಳಗೆ ಮುಚ್ಚಿಟ್ಟುಕೊಂಡ ನಿನ್ನ ಪ್ರೀತಿಯ ತುಂಡೊಂದನ್ನು ಕಡ ಕೊಡು,
ಸೂಜಿಮೊನೆಯ ಅಂಗಳದ ಮೇಲೆ ಗಿಣಿಯ ರೆಕ್ಕೆಯಿಂದ ನಿನ್ನ ಹೆಸರು ಕೆತ್ತುತ್ತೇನೆ.

ಕಿರುಬೆರಳಿನಲ್ಲಿ ಕಿವಿಹಾಳೆಯ ಮೇಲೆ ನಿನಗೊಂದು ಪತ್ರ ಬರೆಯಲು ಅನುಮತಿ ಕೊಡು,
ಗರ್ಭದಲ್ಲೂ ಮುಗುಳ್ನಗುವ ಕೂಸಿನ ನಗುವೊಂದನ್ನು ತಂದು ನಿನ್ನ ಕೆನ್ನೆಗೆ ಅಂಟಿಸುತ್ತೇನೆ.

ಇನ್ನೆಲ್ಲೂ ಇಲ್ಲದ ನನ್ನ ಬದುಕನ್ನು ನಿನ್ನ ಬೆನ್ನ ನೆಲದ ಮೇಲೆ ಪಾತಿ ಮಾಡುತ್ತೇನೆ,
ಕಾಣುತ್ತಿಲ್ಲ ಅನ್ನಬೇಡ, ಇರು, ಕನ್ನಡಿಯ ಚೂರನ್ನು ನಿನ್ನ ಹಿಂದಣ ನೆಲಕ್ಕೆ ಹೂಳುತ್ತೇನೆ.

ನಿನ್ನ ಮೆತ್ತನೆಯ ಪಾದಕ್ಕೆ ನೋವಾಗುತ್ತದೇನೋ, ಭೂಮಿಯ ಮೇಲೂ ಕೋಪ ನನಗೆ,
ಇಗೋ ಚೆದುರಿದ ನನ್ನ ಇಡೀ ಬದುಕನ್ನು ಹೊಲೆದು ಮುಂದಿಟ್ಟಿದ್ದೇನೆ. ಒಮ್ಮೆ ಮುಟ್ಟು.

ಯಾರಲ್ಲೂ ಹೇಳದ ಒಂದೇ ಒಂದು ಪದವನ್ನು ಎದೆಯೊಳಗೆ ಹೂತಿಟ್ಟುಕೊಂಡಿದ್ದೇನೆ,
ಆ ಒಂದು ಪದದ ಜಗತ್ತಿನ ಹೆಸರು ಪ್ರೇಮ.. ಅಥವ ನನ್ನೊಳಗಿನ ಭೂಮಿಗಿಳಿದ ನೀನು..


Thursday, 30 August 2012

ಬೂದಿಹುಡಿಯ ಮೇಲೆ ಪ್ರೇಮದ ಕಥೆ..

ಗೆದ್ದಲು ಹುಳುವಿನ ಎದೆಗೂಡೊಳಗೂ ಎರಡು ಹನಿ ನೀರಿನ ದಾಹ.
ಅದು ತೆವಳುತ್ತಿದ್ದ ಗರಿಕೆಯಾಚೆಗಿನ ಇಬ್ಬನಿಗೆ ಆಗಷ್ಟೇ ಅಪ್ಪಿದ ಸಾವು,
ತೊಟ್ಟಿಲಗೂಸಿನ ಹಸಿತುಟಿಯ ಮೇಲೆ ತಾಯ ಬೆಳ್ಳನೆಯ ರಕುತ,
ತೊಟ್ಟಿಲು ಕಟ್ಟಿದ್ದ ಅಡಕೆ ಜಂತೆಗೆ ಕುಸಿದು ಬೀಳುವ ತೀರದ ಆಸೆ.
ಆವೆಮಣ್ಣಿನ ಹೊಟ್ಟೆಯೊಳಗೆ ಎರೆಹುಳುವೊಂದರ ಗರ್ಭಪಾತವಂತೆ,
ಸತ್ತ ಭ್ರೂಣ ತಿಂದು ಮೈಮುರಿಯಲೆತ್ನಿಸುವ ಧೂಪದಮರದ ಬೀಜ.
ಹೊಂಡಬಿದ್ದ ಡಾಂಬರುರಸ್ತೆಯ ಮಧ್ಯದಲ್ಲೇ ಗರಿಕೆ ಸಸಿಯು ಕಣ್ ಬಿಟ್ಟು,
ಪಾದಚಾರಿ ಗಂಡ ಸತ್ತವಳ ಕಣ್ ನೀರು ಸಿಡಿದು ಗರಿಕೆಯ ಎದೆಯೂ ಸತ್ತಿದೆ.

ಸ್ಲೇಟು ಹಿಡಿದ ಕೂಸಿನ ಕೈಯೊಳಗಿನ ಸೀಮೆಸುಣ್ಣದ ತಲೆಯಷ್ಟೇ ಬಾಕಿಯಾಗಿ,
ಎರಡೂ ಕಣ್ಣ ನಡುವೆ ರೇಡಿಯಂ ಸ್ಟಿಕ್ಕರ್ ಅಂಟಿದ ಹುಡುಗಿ ಇಷ್ಟೇ ಹುಟ್ಟುವಳು.
ಕುಂಟುಹುಡುಗನೊಬ್ಬ ಮಣ್ಣರಸ್ತೆಯ ಮೇಲೆ ಬಿಡಿಸಿದ ಚಿತ್ರದ ಮೇಲೆ ಮಳೆ ಬಿದ್ದು,
ಕುಕ್ಕರುಗಾಲಿನಲ್ಲಿ ನೋಡುತ್ತಿದ್ದ ಎವೆಯಿಕ್ಕದ ಮುದುಕನ ಧ್ಯಾನದ ಕೊಲೆ.

ಇಲ್ಲಿ ಹುಟ್ಟುವುದಕ್ಕೂ ಸಾಯುವುದಕ್ಕೂ ವ್ಯಾಕರಣ ಬಲ್ಲವನನ್ನು ಹುಡುಕುತ್ತೇನೆ,
ಅವನು ಸಿಕ್ಕಿದ ದಿನ ಆತನ ಭುಜಕ್ಕೊರಗಿ ಬಾಯಾರಿದ ಎರೆಹುಳುವಿಗೂ,
ಹಾಗೆ ಬಂದು ಹೀಗೆ ಆರಿದ ಇಬ್ಬನಿಗೂ ಮಧ್ಯೆ ಚಿಗಿತ ಪ್ರೇಮದ ಕಥೆಯನ್ನು..
ಬೂದಿಹುಡಿಯ ಮೇಲೆ ಬೆರಳದ್ದಿ ಬರೆದು ತೋರಿಸುವ ಆಸೆಯೊಂದು ಹುಟ್ಟಿದೆ.

Tuesday, 7 August 2012

ರೆಕ್ಕೆ ಬಿಚ್ಚಿಕೊಳ್ಳುವ ಪುಳಕವೆ....

ನೀಲಿಕಾವಳದ ಇನಿದು ನಡುನೆತ್ತಿ ಬೆಳಗಿನ ಸುಡುಗಾಡು ನಾಡೊಳಗೆ,
ಇಟ್ಟ ಮೊಟ್ಟೆಯ ಜೀವಗೂಡುಗಳ ಮೇಲೆ ಪುಟ್ಟಚಿಟ್ಟೆಗೂ ಪ್ರೇಮ..
ಎಲ್ಲೆಲ್ಲೂ ಅರಳಿ ಅರ್ಥವಿಲ್ಲದ ಚಿತ್ತಾರವಾದ ಮಿದುಳನಾಭಿಯ ಆಳದಲ್ಲೂ,
ಚಲಿಸೋ ಪದಗಳ ಪಂಜರದೊಳಗೆ ಮಾತಿರದ ಜೀವಕೂಸಿನ ಜನನ.

ಸರಳುಗಳ ಬೆನ್ನುತಬ್ಬುವ ಸಕ್ಕರೆಯ ಕೂಸು, ಹಚ್ಹಹಸಿಯ ತುಟಿಗಳು,
ಒಳಗಿರುವುದು ಬಂಧನವೋ, ಸರಳಿನಾಚೆಯದು ಬಂಧನವೋ..
ಅತ್ತಲೂ ಕಟ್ಟು ಇತ್ತಲೂ ಕಟ್ಟು, ಸರಳೊಂದೇ ಸತ್ಯವಾಗುವ ಘಳಿಗೆ,
ಕೊಂಬುಗಳ ಜಗತ್ತಿನಲ್ಲಿ ಕೇಳುವ ಕಿವಿಗಳ ಮೇಲೆ ಕಾದು ಸುಡುವ ಕಾವಲಿ.

ಅಷ್ಟರೊಳಗಿನ ಅಸ್ಮಿತೆಯಲ್ಲಿ ಇಷ್ಟಿಷ್ಟೇ ಚಿಗಿಯುವ ಕಣ್ಣುಸತ್ತ ಮುಖಗಳು,
ನರಖಂಡಗಳ ಸಂತೆಯೊಳಗೆ ಲಿಲಾವುಗೊಳ್ಳುವ ಬೆರಳಿಲ್ಲದ ಪಾದಗಳು..
ಕಣ್ಣಿಲ್ಲದ ಮುಖಕ್ಕೂ.. ಬೆರಳಿಲ್ಲದ ಪಾದಕ್ಕೂ ಗೆರೆಯೆಳೆದು ಉದ್ದಗೋಡೆಯ,
ಬಿರುಕಿನೊಳಗೆ ತೊಡೆ ತಟ್ಟುವ ಸೈತಾನೀಮರದ ಸಂಕರದ ಬೀಜವು

ಇದ್ದುದೆಲ್ಲವೂ ಸತ್ತು, ಸತ್ತುದೆಲ್ಲವೂ ಹುಟ್ಟಿ, ಕುಂಬಾರನ ಚಕ್ರವೂ ತಿರುಗಿ,
ಮಣ್ಣು ತಿದ್ದುವರಿಲ್ಲದೆ ನೆಲಕ್ಕೂ ಬಿದ್ದಾಯಿತು ವಕ್ರಾವರ್ತ ಪಿಶಾಚಿ ಮಡಕೆ..
ಮಸೀದಿ ಮಂದಿರ ಇಗರ್ಜಿಗಳ ಮುಂದಿನ ಚರ್ಮರೋಗದವರ ಸಾಲಿನಲ್ಲೂ
ಮೂಲೆಯಲ್ಲೆಲ್ಲೋ ನಿಂತಿದೆ ರುಂಡ ನಾಪತ್ತೆಯಾದ ಮನುಷ್ಯನ ಪಳೆಯುಳಿಕೆ

ಅವಧೂತರ ಹಾಡುಗಳ, ದರಬೇಶಿಗಳ ಪಾಡುಗಳ ಮೂಸುವರು ಎಲ್ಲಿ..
ಒಂದುತಂತಿ ಮೀಟುವರ, ಅರೆಗಣ್ಣು ಫಕೀರರ ಒಂದುಕಾಲದ ನೆನಪು,
ಇನ್ನೇನು ಸತ್ತೇಹೋಗಲಿರುವ ಚಿಟ್ಟೆಯ ಚಿಪ್ಪೊಡೆದ ಮೊಟ್ಟೆಗೆ ಬಿದ್ದು..
ಹುಟ್ಟದ ಜೀವದ ಕಂಕುಳಲ್ಲಿ ರೆಕ್ಕೆ ಬಿಚ್ಚಿಕೊಳ್ಳುವುದೇ ಸೋಜಿಗವು.

ರೆಪ್ಪೆ ಮೇಲಿನ ಇಬ್ಬನಿಯೂ.... ಅಣಬೆ ಬೇರಿನ ಕೊಂಬೆಯೂ

ಇವಳ ಅಷ್ಟೂ ಪ್ರೀತಿಯನ್ನು ಎಕ್ಕದೆಲೆಯ ಗೂಡುಕಟ್ಟಿಟ್ಟು,
ಆ ಅಣಬೆಗಿಡದ ಬುಡದಡಿಯ ನೆರಳಿನ ವಶಕ್ಕೊಪ್ಪಿಸುವಾಗ..
ಆಗತಾನೇ ತೊಟ್ಟು ಕಳಚಿಕೊಂಡ ಸುಂದರಿಮರದ ಹೂವೊಂದು
ಗೂಡೊಳಗೆ ತುಂಬಿಟ್ಟ ಅವಳ ಪ್ರೀತಿಯನ್ನು ವ್ಯಾಮೋಹದಿಂದ
ನಿಟ್ಟಿಸುತ್ತ ಪಾಚಿಗಟ್ಟಿದ ನೆಲದ ಮೇಲೆ ಅಂಗಾತ ಬಿತ್ತು..

ಕೊಲೆಯಾದ ಹೂವಿನ ಕಣ್ಣಮೇಲೆ ತುಟಿಯಿಟ್ಟು ಚುಂಬಿಸುತ್ತೇನೆ,
ತೇವದ ಬೆತ್ತಲೆ ಅಂಗಾಲುಗಳನ್ನು ಪಾಚಿನೆಲದ ಮೇಲೂರತ್ತ
ಇವಳ ಪ್ರೀತಿಯನ್ನು ಕಾಪಿಡಲು ಇನ್ನೊಂದು ತಾವು ಹುಡುಕುತ್ತೇನೆ..
ನಡೆದುಕೊಂಡು ಹೋದ ನವಿಲಿನ ಕಾಲ ಭಾರಕ್ಕೆ
ಯಾರಿಗೂ ತಿಳಿಸದೆ ಮಡುವಿನ ನಡುವೆ ಹುಟ್ಟಿದೆ ಪುಟ್ಟ ನದಿ..

ನವಿಲಹೆಜ್ಜೆಗಳ ನದಿಯೊಳಗೆ ಮುಳುಗಿಸಿಟ್ಟರೆ ಇವಳ ಪ್ರೀತಿಗೆ
ಉಸಿರುಗಟ್ಟುವ ಭಯವಾಗಿ ತೇವದ ಅಂಗಾಲುಗಳ ಕೆಳಗೆ
ಅರ್ಧ ಇಂಚಿನ ಭೂಕಂಪ.. ಹೆಬ್ಬೆರಳುಗಳ ಎದೆಯೊಡೆದು ಕಂಪಿಸುತ್ತವೆ,
ಎಲ್ಲಿಟ್ಟರೂ, ಹೇಗಿಟ್ಟರೂ ಅವಳ ಪ್ರೀತಿಗೆ ಉಸಿರಾಡಲಿಕ್ಕಿಷ್ಟು ಗಾಳಿಬೇಕು..
ಮೈಮುರಿಯಲು, ಮಗ್ಗುಲು ತಿರುಗಲು, ಕಣ್ತೆರೆಯಲು ಬೆಳಕು ಬೇಕು.

ಇಡುವ ಕ್ರಿಯೆಯ ಆಚೆ ಈಚೆಗೆ ಪ್ರೀತಿಗೊಂದು ನೆಲವೂ ಸಿಗದಾಗಿ
ಬಿಳಿ ಅಣಬೆಬೇರಿನ ಕೊಂಬೆಗಳ ಸೊಂಟಕ್ಕೆ ಆನಿಸಲೂ ಮನಸೊಪ್ಪದೆ
ಎಕ್ಕದೆಲೆಯ ತುಂಬ ಹಿಡಿದ ಇವಳ ಪ್ರೀತಿಯನ್ನು ಹಿಡಿದಿಡಲೂ ಆಗದೆ..
ಚೆಲ್ಲಲೂ ಜೀವವೊಪ್ಪದೆ, ನನ್ನೆದೆಯ ತುಂಬ ಸುರುವಿಕೊಳ್ಳುತ್ತೇನೆ..
ಇವಳ ಕಣ್ಣ ರೆಪ್ಪೆಯ ಮೇಲೆ ಆಗಷ್ಟೇ ಇಬ್ಬನಿಹನಿಗಳು ಹುಟ್ಟುತ್ತವೆ.

ಇಬ್ಬನಿಯ ಮುಟ್ಟುವ ಆಸೆ, ನನ್ನೊಳಗೆ ಬಸಿದುಕೊಳ್ಳುವ ತೀಟೆ,
ಕೊಲೆಯಾದ ಹೂವಿನ ಕೊಳೆತ ದೇಹವೂ ಕರಗಿ.. ನವಿಲ ಹೆಜ್ಜೆಗಳ
ನದಿಯಾಳದೊಳಗೆ ತಲೆಯೆತ್ತುವ ಎರೆಹುಳುವಿಗೂ ಅಸೂಯೆ..
ನನ್ನ ಎದೆ ಹರವಿನ ಮೇಲೆ ಸುರುವಿಕೊಂಡ ಇವಳ ಪ್ರೀತಿಯ ಹುಡಿಗಳು
ಎರೆಹುಳುವಿನ ಪುಟ್ಟಕಣ್ಣುಗಳತ್ತ ಸುಖಾಸುಮ್ಮನೆ ನೋಡುತ್ತ ಕುಳಿತಿವೆ.

Wednesday, 1 August 2012

ಕತ್ತಲೆಯ ಕೊಂದವಳು.

ನೆನೆದೂ ನೆನೆದೂ ತೇವಗೊಂಡ ಒಡಲಭೂಮಿಯ ದೊರೆಸಾನಿಯೇ 
ನಿನ್ನ ಕಣ್ರೆಪ್ಪೆ ತನ್ನಪಾಡಿಗೆ ತೆರೆದು ಮುಚ್ಚುವ ಸದ್ದೂ ಕೇಳುತ್ತದೆ ನನಗೆ,
ತೊಟ್ಟು ಕಳಚಿದ ಪಾರಿಜಾತ ಪುಷ್ಪ ನೆಲಕ್ಕೆ ಬಿದ್ದ ಸಪ್ಪುಳದಂತೆ..

ಮುರುಕು ಹಣತೆಗೆ ಮಣ್ಣು ಮೆತ್ತಿ ಒಪ್ಪ ಮಾಡಿಟ್ಟ ಅಂದಗತ್ತಿಯೇ.. 
ನಾಜೂಕಾಗಿ ಹಚ್ಚಿಟ್ಟ ಬೆಳಕು, ಗಾಳಿಗೆ ತುಯ್ಯುತ್ತಿದೆ, ತೊನೆದಾಡುತ್ತಿದೆ..
ನಿನ್ನ ತೆಳುಕಿವಿಗೆ ನೇತುಬಿದ್ದ ಪುಟ್ಟ ಜುಮಕಿಯೋಲೆಯ ಸಪ್ಪುಳದಂತೆ..

ಇರುವೆರಡು ಕಣ್ಣೊಳಗೆ ದೀಪ ಹಚ್ಚಿಟ್ಟುಕೊಂಡ ಬೆಳಕಿನೂರಿನ ಜೀವವೇ..
ನನ್ನೊಳಗೆ ಬಣ್ಣವನ್ನು ಚೆಲ್ಲಾಡಿದ ನಿನ್ನ ದೀಪ, ಕುರುಡು ಕತ್ತಲೆಯ ಕೊಂದಿದೆ, 
ಗುಬ್ಬಚ್ಚಿ ಗೂಡೊಳಗೆ ನುಗ್ಗಿದ ಎರಡು ಅಮಾಯಕ ಮಿಂಚುಹುಳಗಳಂತೆ..

ಪೊರೆಗಳಚಿಕೊಂಡ ನೆನಪುಗಳ ಕಿತಾಬನ್ನು ಆಯ್ದು ಆಯ್ದು ಕೊಟ್ಟವಳೆ, 
ಅಂಟಿಕೊಂಡ ಕಿತಾಬಿನ ಹಾಳೆಗಳಲ್ಲಿ ಕೆಲವನ್ನು ಗೆದ್ದಲುಗಳು ತಿಂದಿವೆ..
ನಾನು ನರಳಾಡುತ್ತೇನೆ.. ಗೆದ್ದಲುಗಳ ಬಾಯೊಳಗೆ ತುಂಡಾದ ಹಾಳೆಯಂತೆ.. 

ಇದ್ದುದೆಲ್ಲವನ್ನೂ ಜೋಡಿಸಿ ಒಡಲೂರ ದೇವರಿಗೆ ತೇರುಕಟ್ಟಿದ ಹುಡುಗಿಯೇ.
ನಿನ್ನ ಪಾದಧೂಳಿಯ ಯಾವೊಂದು ಧೂಳುಕಣವನ್ನೂ ನೆಲದ ಮೇಲೆ ಉಳಿಸದೆ.. 
ಎದೆಗೆ ಸುರುವಿಕೊಳ್ಳುತ್ತೇನೆ..ನನ್ನನ್ನೇ ನಿನ್ನೊಳಗೆ ಹೂತು ಹಾಕಿದಂತೆ.

Monday, 30 July 2012

ಒಂದು ಬೊಗಸೆ ಗಾಳಿ..

ಬೇಡವಾಗಿತ್ತು ಗೆಳೆಯ, ಬದುಕುವ ಆಸೆ ಪೊರೆಯುವ
ಯಾವ ಹಕ್ಕನ್ನೂ ಇನ್ನೂ ನಮಗೆ ಕೊಡಲಾಗಿಲ್ಲ,
ಆದರೂ ಆಸೆ ಪಡುವುದು ನಮ್ಮಿಂದೇಕೆ ನಿಲ್ಲುತ್ತಿಲ್ಲ?
ನಾವು ಪ್ರಶ್ನೆ ಕೇಳಲು ಹುಟ್ಟಿಲ್ಲ ಗೆಳೆಯ..
ಯಾರದ್ದೋ ಖುಷಿಗೆ ದೇಹ ತೇಯಲೆಂದು ಹುಟ್ಟಿದವರು.

ಬೇಡವಾಗಿತ್ತು ಗೆಳೆಯ, ದುಡಿದು ತಿನ್ನುವ ಉಮ್ಮೇದಿ ನಮಗೆ,
ನೆಲ್ಲೂರಿನ ಹೊಲಗಳಲ್ಲಿ 30 ರುಪಾಯಿಗೆ ಕೂಲಿಗೆ
ನಮ್ಮ ಬದುಕನ್ನು ಅಡಮಾನ ಇರಿಸಿಕೊಳ್ಳಲಾಗಿದೆ..
ಅವರ ಒತ್ತೆಯಾಳಾಗಲೆಂದೇ ನೆಲಕ್ಕೆ ಬಿದ್ದವರು ನಾವು.

ಬೇಡವಾಗಿತ್ತು ಗೆಳೆಯ, ಊರುಬಿಟ್ಟು ಕೂಲಿಗೆ ನಡೆಯುವ ಸಾಹಸ
ಕಣ್ಣುಗಳು ಇರಬೇಕಿದ್ದ ಜಾಗದಲ್ಲಿ ಕೊಡಲಿ ಹೊತ್ತವರ ನಡುವೆ
ನಮ್ಮ ಅನ್ನ ಹುಡುಕುವ ಸಾಹಸಕ್ಕೆ ನಗೆಪಾಟಲಿನ ಉತ್ತರ,
ನಮ್ಮ ಚರ್ಮಗಳು ಅವರ ಮೆಟ್ಟುಗಳಾಗಿ ಯಾವ ಕಾಲವೋ ಆಗಿದೆ.

ಬೇಡವಾಗಿತ್ತು ಗೆಳೆಯ, ನಮಗೆ ಉಸಿರಾಡುವ ಉಸಾಬರಿ,
ಅಸಲಿಗೆ ಆ ಹಕ್ಕನ್ನ ನಮಗೆ ಕೊಟ್ಟಿದ್ದಾದರೂ ಯಾವಾಗ?
ಉಸಿರ ಗೂಡಿಗೆ ಒಂದು ಬೊಗಸೆ ಗಾಳಿಯಷ್ಟೇ ಬೇಕಿತ್ತು..
ನಮ್ಮ ತಿತ್ತಿಯನ್ನೇ ಕಿತ್ತು ತಿಂದವರ ಬಳಿಗೆ ಬೊಗಸೆಗಾಳಿಗೆ ತಾವೆಲ್ಲಿ?

ಇಡು ಆ ಬಿದಿರುಕೋಲುಗಳ ಮಲದಗುಂಡಿಯ ಪಕ್ಕಕ್ಕೆ,
ಅಗ್ಗದ್ದೊಂದು ತುಂಡು ಬೀಡಿಯನ್ನಾದರೂ ಸೇದೋಣ,
ಒಳಗಿರುವುದು ಇಬ್ಬರ ಜೀವವನ್ನೂ ಕೊಯ್ಯುವ ಗಾಳಿ,
ಮೊದಲು ನನ್ನದು, ಆಮೇಲೆ ನಿನ್ನದು.. ಇಳಿಯಲಿ ದೇಹಗಳು.

ತಲೆಯೆತ್ತಬೇಡ ಗುಂಡಿಯೊಳಗಿಂದ, ಬೂಟುಗಾಲುಗಳಿವೆ ಮೇಲೆ,
ಅಂಗೈಯನ್ನೂ ಹೊರಚಾಚಬೇಡ, ಹೊಸಕುತ್ತವೆ ಬೂಟುಗಳು..
ಇಗೋ ಗುಂಡಿಯೊಳಗಿನ ವಿಷದಗಾಳಿ, ನೀನು ಕುಡಿದಾದ ಮೇಲೆ
ಒಂದು ಬೊಗಸೆ ಗಾಳಿಯನ್ನು ನನ್ನ ಗಂಟಲಿಗೂ ಇಷ್ಟು ಸುರಿದುಬಿಡು.

ಜನ್ಮಾಪಿ ಋಣಿ

ಒಮ್ಮೊಮ್ಮೆ ಎಡವಲಿಕ್ಕೆಂದೇ ಇಡಲ್ಪಟ್ಟ ಗೋಡೆಗಳನ್ನು
ನಾಜೂಕಾಗಿ ದಾಟಿಕೊಂಡು ಇವಳೆಡೆಗೆ ನಡೆಯುತ್ತೇನೆ.
ಅಂಗಾಲಿಗೆ ತೂರಿಕೊಂಡ ಕಾರೆಮುಳ್ಳುಗಳನ್ನು
ಇವಳು ಸೂಕ್ಷ್ಮವಾಗಿ ತೆಗೆದು ನನ್ನ ನೆತ್ತಿ ನೇವರಿಸುತ್ತಾಳೆ.

ಆ ಬೆರಳುಗಳ ಮೃದು ಚಲನೆಗೆ ನನ್ನ ನೆತ್ತಿಯೊಳಗೆ
ಹೂವುಗಳು ಬಿರಿಯುತ್ತವೆ, ನರವ್ಯೂಹ ಜೀವಂತಗೊಳ್ಳುತ್ತದೆ,
ಇಲ್ಲದಿದ್ದಲ್ಲಿ ಇಷ್ಟೊತ್ತಿಗೆ ಆ ಗೋಡೆಗಳು ನನ್ನನ್ನು ಕೊಲ್ಲುತ್ತಿದ್ದವು.
ಇವಳಿಗೂ, ಇವಳ ಬೆರಳುಗಳಿಗೂ ನಾನು ಜನ್ಮಾಪಿ ಋಣಿ.

ಯಾರದ್ದೋ ವ್ಯೂಹ, ಯಾರದ್ದೋ ನಡೆ, ಫಿಕರ್ ನಹೀ..
ಇವಳ ಪ್ರೇಮ ನನ್ನ ನೆತ್ತಿ ಕಾಯ್ದ ಅಷ್ಟೂ ಜನ್ಮಗಳು..
ನಾನವಳಿಗೆ ಹೆತ್ತ ಕೂಸು, ಅವಳು ತಾಯಲ್ಲದ ತಾಯಿ,
ಅಗೋಚರ ಕಣ್ಣುಗಳ ಬಗ್ಗೆ ಇಲ್ಲಿ ಸಹಿಸಲಾಗದ ಅಸಹ್ಯ.

ಇವಳು ನನ್ನ ಅಂಗೈಯ ಮೇಲೆ ಸಂಪಿಗೆಯ ಬೀಜಗಳನ್ನು ನೆಟ್ಟಿದ್ದಾಳೆ,
ಬೊಗಸೆ ಬಿರಿದು, ಮೂಳೆ ಸೀಳಿಕೊಂಡು ಮರವೊಂದು ಹುಟ್ಟಿದೆ..
ಅಂಗೈಯೊಳಗಿನ ಸಂಪಿಗೆಯ ಮರದ ತುಂಬ ಪ್ರೇಮದ ಘಮಲು..
ಅರೆತೆರೆದ ನನ್ನ ಕಣ್ಣುಗಳ ತುಂಬ ಮನುಷ್ಯತ್ಬದ ಕಡು ಅಮಲು..

ಒಂದು ಮೋಡದ ತುಂಡು

ಯಾರಿಗೂ ಕಾಯದೆ ಅದರಪಾಡಿಗದು ಜಿನುಗಿಕೊಳ್ಳುವ
ಮಳೆಯ ಭಾಷೆಯನ್ನೇ ಮರೆತವನ ರೆಪ್ಪೆಯ ಮೇಲೆ
ಇವಳು ಒಂದು ಮೋಡದ ತುಂಡನ್ನೇ ಕಿತ್ತುತಂದು ಇಟ್ಟಿದ್ದಾಳೆ,
ಚೆಲ್ಲಾಡಿ ಹೋಗುತ್ತಿದೆ ಮಳೆ, ನನ್ಕಕಣ್ಣೊಳಗಿನ ಭೂಮಿಯೊಳಗೆ..

ಅವಳ ಕಡುಗೆಂಪು ಮದರಂಗಿ ಪಾದದ ಕಿರುಬೆರಳ ಎದುರಿಗೆ
ತಲೆ ಕಡಿದುಕೊಂಡ ನನ್ನೊಳಗಿನ ರಾಕ್ಷಸ ಮಂಡಿಯೂರಿದ್ದಾನೆ,
ಮದರಂಗಿ ಚಿತ್ರದೊಡತಿಯ ತಣ್ಣನೆಯ ಕಣ್ಣೆದುರು
ಮುಲಾಜೇ ಇಲ್ಲದೆ ಕೇವಲ ಮನುಷ್ಯನೊಬ್ಬ ಹುಟ್ಟುತ್ತಿದ್ದಾನೆ.

ಜೀವ ಕುಸುಮದ ಬೀಜವನ್ನು ಕೈಯಲ್ಲೇ ಹೊತ್ತ ಇವಳು
ಇಕೋ ನಿನ್ನ ಎದೆ ಹರವು, ಪ್ರೇಮವೃಕ್ಷದ ಬೀಜಗಳನ್ನು,
ಒಂದೊಂದೇ ನೆಡುತ್ತೇನೆ, ರೆಪ್ಪೆಯ ಮೇಲಿಟ್ಟ ಮೋಡ ಬಸುರಾದಾಗ
ಬೊಗಸೆ ತುಂಬ ನಿನ್ನ ಎದೆಕಾಡೊಳಗೆ ನೀರು ತರುತ್ತೇನೆ ಅನ್ನುತ್ತಾಳೆ.

ಮಾಯಾ ಮಿಥ್ಯೆಗಳ ಬೆಣಚುಕಲ್ಲುಗಳ ಮೇಲೆ ಇಲ್ಲಿಯತನಕ ನಡೆದ ನಾನು
ಅವಳು ತರುವ ಬೊಗಸೆನೀರಿಗೆ ಜೀವ ಮುಷ್ಠಿಯಲ್ಲಿಡಿದು
ರೆಪ್ಪೆಯನ್ನೂ ಮಿಟುಕಿಸದೆ ಕುಕ್ಕರಗಾಲಲ್ಲಿ ಕುಳಿತಿದ್ದೇನೆ..
ರೆಪ್ಪೆ ಮಿಟುಕಿಸಿದರೆ ಇಟ್ಟ ಮೋಡದ ತುಂಡು ಒಡೆಯುವ ಭಯ.

ಮದರಂಗಿ ಪಾದದೊಡತಿ ತರುವ ಬೊಗಸೆ ನೀರಿನೊಳಗೆ..
ಅವಳು ಒಂದೇ ದಾರದೊಳಗೆ ಪೋಣಿಸಿಟ್ಟ ನನ್ನ ಮೂರಕ್ಷರದ ಬದುಕು
ಮರಳ ಮೇಲಿಂದ ನದಿಗೆ ಕುಪ್ಪಳಿಸಿದ ಮೀನಿನ ಮರಿಯಂತೆ
ಅದರ ಪಾಡಿಗದು ಅವಳನ್ನೇ ನೋಡುತ್ತ, ನೋಡುತ್ತಲೇ ಇದೆಯಲ್ಲ.

ಮಳೆಯ ಭಾಷೆಯನ್ನು ಜೀವಕುಸುಮದೊಳಗೆ ಅದ್ದಿ, ಮದರಂಗಿ ಕಿರುಬೆರಳ
ಪ್ರೇಮವೃಕ್ಷದ ದಾಹಕ್ಕೆ ರೆಪ್ಪೆಯ ಮೇಲಿಟ್ಟ ಮೋಡದಿಂದ ನೀರು ತಂದವಳು
ನನ್ನೊಳಗೆ ಅಂಬೆಗಾಲಿಡುತ್ತಿರುವ ಮನುಷ್ಯ ಕೂಸಿಗೆ ಕುಲಾವಿ ಹೊಲೆಯುತ್ತಾಳೆ.
ಈಗೀಗ ನಾನು ಗೋಡೆ ಹಿಡಿದು ನಿಂತು, ಒಬ್ಬನೇ ನಡೆಯುವುದನ್ನು ಕಲಿತಿದ್ದೇನೆ.

Monday, 12 March 2012

ತುಫಾಕಿ ಕೊಳವೆಯೊಳಗೆ ಮೀನು..

ನೆನಪಿನ ಪಾತಾಳಗರಡಿಯ ಕೊಕ್ಕೆಗೆ ಸಿಕ್ಕಿದೆ ಸತ್ತ ನಕ್ಷತ್ರ
ಹಿಂದೊಮ್ಮೆ ನಗ್ನ ಮೆರವಣಿಗೆಯೊಳಗೆ ನಡೆದೂ ನಡೆದೂ,
ಐದೂ ತಲೆಗಳ ಚೂಪು ಈಗ ಮೊಂಡು ಮೊಂಡು..
ಜೀವನಕ್ಷತ್ರದ ಚೆಲುವು ಬಿನ್ನಾಣಗಳ ಮೇಲೆ ಬರೆದವರು
ಸತ್ತ ನಕ್ಷತ್ರದ ಎದೆಮೇಲೆ ಆಗಷ್ಟೇ ಮಸೆದ ಚೂರಿಯಿಡುತ್ತಾರೆ,

ಅತ್ತ ಬೆವರು ನುಂಗಿದ ಭೂಮಿ, ತೆನೆ ಉಗುಳಲಿಲ್ಲವಾಗಿ..
ಒಂದುಕಾಲದ ಅಂದಗತ್ತಿಯರು ನೆಲದ ಹೊಕ್ಕಳು ಮುಟ್ಟುತ್ತ,
ಚಿಗುರು ದೇವತೆಯರಿಗೂ ಮೊಳಕೆ ದೇವರುಗಳ ಕರೆದು,
ಮೋಡ ದೇವಳಗಳತ್ತ ಮಂಡಿಯೂರಿ ಪ್ರಾರ್ಥಿಸುತ್ತಾರೆ ..
ಕವುಚಿಬಿದ್ದ ಬದುಕು ನೆಲಕ್ಕಪ್ಪಳಿಸಿದ ಸದ್ದು ಅವರಿಗೆ ಕೇಳುತ್ತಿಲ್ಲ.

ಅಗ್ಗಿಷ್ಟಿಕೆಯ ಹಳದಿಬೆಳಕಿನಲ್ಲಿ ತಂಪು,ಬೆಚ್ಚಗಿನ ಅನುಭೂತಿಗಳು,
ಕೈ ಕೈ ಹಿಡಿದು ನರ್ತಿಸುತ್ತಿವೆ.. ಸುಡಬೇಕಿದ್ದ ಬೆಂಕಿಯೇ ಗೈರು,
ಇರಾದೆಗಳ ತುಫಾಕಿ ಕೊಳವೆಯೊಳಗೆ ನೀರು ತುಂಬಿ ಮೀನಿಟ್ಟೆ..
ಭಯದಿಂದ ಒಳಹೋದ ಮೀನುಗಳು ಇನ್ನೂ ಹಿಂತಿರುಗಿಲ್ಲ..
ತುಫಾಕಿಯ ಗಂಧಕ ಖಾಲಿಯಾಗಿರಲಿ, ಚಿಮ್ಮದಿರಲಿ ಗುಂಡು.

ಡಾಂಬರು ರಸ್ತೆಯೊಂದರ ಮೇಲೆ ಬಿಮ್ಮನಸಿಯೊಬ್ಬಳು
ಬಸುರ ಯಾತನೆಯ ಉದ್ದಕ್ಕೆ ಹಾಸಿಕೊಂಡು ಕುಳಿತಿದ್ದಾಳೆ.
ಗರ್ಭಕಟ್ಟಿದ ಅವಳ ಹೂವಿನ ಕಾಡೊಳಗೆ ಜೀವವಿಲ್ಲದ ಕೂಸು
ತಲೆಗೆದರಿಕೊಂಡು ತೇಲುತ್ತಿದೆ.. ಗಾಯಗೊಂಡ ಮೌನ,
ಅವಳು ಕಟ್ಟಿದ ಸುಣ್ಣದಗೂಡಿನ ಇಟ್ಟಿಗೆಗಳಿಗೆ ಬಣ್ಣವೇ ಇರಲಿಲ್ಲ..

ಮೃದ್ವಂಗಿಯೊಂದು ಚಲಿಸುತ್ತಿದೆ.. ಪಾದವೂರಿದ ಕಡೆ ಪ್ರಪಾತ
ಹನಿದ ಪುಡಿಮಳೆಗೆ ಪ್ರಪಾತದೊಳಗೂ ಕೆರೆಯರಳಿ..
ಜೀವನಕ್ಷತ್ರಗಳು ಮಿಸುಕಾಡುತ್ತವೆ, ಅಂದಗತ್ತಿಯರ ವದನವೂ ಅರಳಿ,
ತುಫಾಕಿಯೊಳಗೆ ನುಗ್ಗಿದ ಮೀನುಗಳೂ ಹೊರಬಂದು..
ರಸ್ತೆ ಪಕ್ಕದ ಬಿಮ್ಮನಸಿಗೆ ನಡುರೋಡಲ್ಲೇ ಸತ್ತಕೂಸು ಹುಟ್ಟಿದೆ.

-ಟಿ.ಕೆ. ದಯಾನಂದ

Sunday, 11 March 2012

ಒಂದು ಕವುದಿ ಕಾವ್ಯ....

ಇದೆಕೋ ಎನ್ನಲು ಖಂಡವೂ ಇಲ್ಲ, ಬಿಸುಪು ತುಂಬಿದ ಮಾಂಸವೂ ಇಲ್ಲ
ಮೂರಿಂಚಿನ ಸೂಜಿ.. ಪೋಣಿಸಿದ ಮಾರುದ್ದ ನೈಲಾನು ದಾರ
ನಡೆಯುತ್ತವೆ ಸೀಳಿದ ಕಾಲುಗಳು ಬೆರಳುಗುರುಗಳೊಟ್ಟಿಗೆ ಮಾತನಾಡುತ್ತ..
ಹವಾಯಿ ಚಪ್ಪಲಿಗೂ ಕವುದಿಯವಳ ಕಪ್ಪುಕಾಲಿಗೂ ಜನ್ಮಾಂತರದ ಶತ್ರುತ್ವ.

ಕರೆದವರ ಮನೆ ಜಗುಲಿಯೊಳಗೆ ಚೀಲ ಬಿಚ್ಚಿ ಹರವುತ್ತದೆ ಜೀವ,,
ಪುಡಿಬಟ್ಟೆಗಳು, ಹೊಗೆಸೊಪ್ಪಿನ ತುಂಡು, ಸುಣ್ಣದ ಡಬ್ಬಿ.
ಗುಂಡುಜಗತ್ತೇ ಮಲಗಿದೆ ಕವುದಿಯವಳ ಚೀಲದೊಳಗೆ ಸೊಟ್ಟಪಟ್ಟಗೆ
ಬದುಕ ಕಟ್ಟಬಹುದೇ ಹೀಗೆ.. ಕವುದಿಯವಳ ಗೋಣಿಚೀಲದೊಳಗೆ?

ಚೂರುಡೊಂಕು ಸೂಜಿಯೊಳಗೆ ನೈಲಾನು ನೂಲು ನುಗ್ಗಿಸುತ್ತಾಳೆ..
ಮೀನು ಮೊಟ್ಟೆಯಿಟ್ಟಂತೆ.. ಮಿಡತೆ ಠಂಗನೆಗರಿದಂತೆ ಸುನೀತವಾಗಿ..
ಇಲ್ಲಿ ತೂರಿದ ಸೂಜಿ ಮೋಡವೊಂದನ್ನು ಮುಟ್ಟಿ ಮತ್ತೆ ವಾಪಸ್ಸು,
ಈ ಬಾರಿ ಬೆಚ್ಚಿಬಿದ್ದದ್ದು ನೆಲಕ್ಕೆ ಮೆತ್ತಿಕೊಂಡ ಪಾರ್ಥೇನಿಯಂ ಗಿಡ..

ಕವುದಿಯವಳ ಮೌನದೊಳಗೆ ಕೈಕಾಲಿಲ್ಲದ ಕತೆಗಳು ಮಿಸುಕಾಡುತ್ತವೆ..
ಹೊಲೆವ ಕೌದಿಯ ಗ್ಯಾನದಲ್ಲಿ ಇಂದೂ ಅವಳಿಲ್ಲ.. ಸೂಜಿ ಮತ್ತು ನೂಲು ಮಾತ್ರ,
ಎದೆಯೆತ್ತರದ ಮಗನನ್ನು ತಿರುವಿ ಮಲಗಿಸಿದ ಎಂಡೋ ಸಲ್ಫಾನಿನ ಧೂಳು
ಇವಳ ಮಸ್ತಿಷ್ಕದೊಳಗೆ ದುರಂತಕತೆಗಳ ಮೊಟ್ಟೆಯಿಡುತ್ತಿದೆ.

ಹೊಲೆದ ಕವುದಿಗೆ ಕೊಟ್ಟಷ್ಟೇ ಕಾಸು.. ಚೌಕಾಶಿಗೂ ತಾವಿಲ್ಲ.
ಊರ ದೇಹಗಳು ಬೆಚ್ಚಗಿವೆ ಇವಳ ಕವುದಿ ಹೊದ್ದು..
ತಲೆಮೇಲೆ ಹತ್ತಿಕುಳಿತ ಸರಂಜಾಮುಗಳ ಮೂಟೆಯೊಳಗೆ
ಬದುಕೇ ಸಾವಿನೊಟ್ಟಿಗೆ ಚೌಕಾಶಿಗೆಳಸಿದ್ದು.. ನೈಲಾನುದಾರಕ್ಕೆ ಮಾತ್ರ ಗೊತ್ತು

ಯಾರೋ ಬೆಳೆದ ತೆನೆಗೆ ಯಾರದ್ದೋ ಔಷಧ ಸಿಂಪಡಿಸಿದರೆ..
ಇವಳ ಮಗನ ಕೈಕಾಲೇಕೆ ತಿರುಚಿಕೊಂಡವೋ..
ಚಟ್ಟದ ಮೇಲೆ ಮಲಗಿದ್ದ ನ್ಯಾಯದೇವತೆಯ ಬಾಯನ್ನು ಹೊಲೆಯಲಾಗಿದೆ,
ಹೊಲಿಗೆ ಬಿಚ್ಚುವ ಬಗೆಯ ಬಲ್ಲವಳು ತನ್ನ ಪಾಡಿಗೆ ಕವುದಿ ಹೊಲೆಯುತ್ತಾಳೆ.

- ಟಿ.ಕೆ. ದಯಾನಂದ


Friday, 9 March 2012

ಮೆಹೂವಾ ಕಾಡು ಮತ್ತು ಪುಡಿ ನಕ್ಷತ್ರಗಳು

ಪ್ಲಾಸ್ಟಿಕ್ಕು ಹೂವುಗಳ ಬೆನ್ನೊಳಗೆ ಘಮವನ್ನು ಹುಡುಕುತ್ತಿದ್ದೆ,
ಮೂಸಿದರೂ, ಮುಟ್ಟಿದರೂ ತೇವವಿಲ್ಲದ ಪ್ಲಾಸ್ಟಿಕ್ಕು ಹೂವಿಗೆ
ಕೊನೆಯಪಕ್ಷ ರಾಗಿಕಾಳಿನಷ್ಟು ನಾಚಿಕೆಯೂ ಆಗುವುದಿಲ್ಲ..
ಇನ್ನು ಬದುಕಬೇಕೆಂಬ ಭಯ ನನ್ನೊಳಗೆ ಚಿಗಿತ ಚಣದಲ್ಲೇ,
ಅವಳ ಕೊರಳ ಸುತ್ತಲೂ ಮಾಂತ್ರಿಕಬೀಜಗಳನ್ನು ಚೆಲ್ಲಿದ್ದೆ..
ಕೊರಳೊಳಗೆ ಬೇರಿಳಿಸಿ ಕಣ್ಣೆತ್ತಿವೆ ಮತ್ತಿನ ಮೆಹೂವಾ ಹೂಗಳು.


ಮೆಹೂವಾದ ಮತ್ತಿಗೆ ನನ್ನೊಳಗೆ ಪದಗಳು ಹುಟ್ಟುತ್ತವೆ
ಹುಟ್ಟಿದ ಪದಗಳು ಉಸಿರು ಸಿಗದೆ, ನೆಲದ ತಾವೂ ಸಿಗದೆ
ಸಾಯುವ ಮೊದಲೇ, ಇವಳು ಪದಗಳಿಗೆ ಕುಲಾವಿ ನೇಯುತ್ತಾ..
ನೆತ್ತಿ ನೇವರಿಸುವ ನಿಷ್ಕಾರುಣ ಮೌನದ ಹಾಡು ಕೇಳುತ್ತ,
ನಾಯಿಕೊಡೆಯ ನೆರಳಪ್ಪಿಕೊಂಡು ಪ್ರೇಮವನ್ನು ಧ್ಯಾನಿಸುತ್ತಾ,
ರದ್ದಿವ್ಯಾಪಾರಿಯ ತಕ್ಕಡಿಯೊಳಗೆ ನನ್ನನ್ನು ಕೂರಿಸಿದ್ದಾಳೆ.

ಈಗೀಗ ಕೆಂಪುನೆಲವನ್ನು ಚುಂಬಿಸುವ ನೆಪದಲ್ಲಿ
ಭೂಮಿಯ ಸೊಂಟದಳತೆ ತೆಗೆಯಲು ಅಳತೆಗೋಲಿಗಾಗಿ
ಪರಿತಪಿಸುವವರ ಸಾಲುಸಾಲು ಸಾವಾಗುತ್ತಿವೆ..
ಪುಣ್ಯದ ಬಂಡವಾಳ ಹಾಕಿ ಪಾಪದ ಬೆಳೆ ಬೆಳೆಯುವವರ
ನಡುನೆತ್ತಿಯ ಮೇಲೆ ಒಂಟಿಕಾಲೂರಿ ನಿಂತ ಇವಳ ಪ್ರೇಮ..
ನನ್ನೊಳಗಿನ ರಕ್ಕಸನನ್ನು ತುಂಬುಗಣ್ಣಿನಲ್ಲಿ ಮೋಹಿಸುತ್ತಿದೆ.

ಅವಳ ಎರೆಹುಳುವಿನಂಥ ಒಂಟಿಕಾಲಿನ ಪ್ರೇಮದೆದುರು
ಯಾವತ್ತೋ ಸತ್ತ ಸೌದೆಯ ಬೂದಿಯಂತೆ ಹುಡಿ ಹುಡಿಯಾಗುವ ಆಸೆ,
ನನ್ನೊಳಗಿನ ಭೂಮಿಗೆ ಹೆಡೆಮುರಿಗೆ ಕಟ್ಟಿ ಎಳೆತಂದಿದ್ದಾಳೆ
ಕೆನೆಯುವ ಸೂರ್ಯನನ್ನು, ಅಮೂರ್ತ ಮೋಡಗಳನ್ನು, ಪುಡಿ ನಕ್ಷತ್ರಗಳನ್ನು,
ಮೆಹೂವಾ ಹೂಗಳ ಮದ್ಯವನ್ನು ಮೊಗೆಮೊಗೆದು ಕುಡಿದವಳು
ಪಿಸುಗುಡುತ್ತಾಳೆ, ಮೊಣಕಾಲೂರದೇ ಬೇರೆ ರಸ್ತೆಯಿಲ್ಲವೋ ಹುಡುಗ.

ಪಿಸುಮಾತಿಗೆ ಇಲ್ಲವೆಂದು ಅಂದು ಹೆಣದಂತೇಕೆ ಓಡಾಡಲಿ ಗೆಳತಿ..?
ಮಂಡಿ ಮೊಣಕಾಲೆರಡನ್ನೂ ನಿನ್ನೆದುರಿನ ಮಣ್ಣಿನ ವಶಕ್ಕೊಪ್ಪಿಸಿದ್ದೇನೆ..
ಇಗೋ ನಿನ್ನ ಮೋಡದೊಳಗವಿತ ನೀರಿನಂಥ ಪ್ರೇಮಕ್ಕೆ,
ನನ್ನ ಕೊರಳನೊಪ್ಪಿಸುತ್ತಿದ್ದೇನೆ.. ಇಲ್ಲೂ ನೆಡು.. ಮೆಹೂವಾ ಬೀಜಗಳ..
ಕೊರಳುಗಳ ಮೇಲೆ ಮೆಹೂವಾ ಕಾಡೊಂದು ಬೆಳೆದುಕೊಳ್ಳಲಿ..
ಆ ಕಾಡೊಳಗೆ ನಮ್ಮ ನಾಲಿಗೆಯಿಲ್ಲದ ಪ್ರೇಮ, ದಿಕ್ಸೂಚಿಯಿಲ್ಲದೆ ಅಲೆದಾಡಲಿ.

- ಟಿ.ಕೆ. ದಯಾನಂದ

Wednesday, 7 March 2012

ಅಲ್ಲಿ ಸಾವೂ ಇತ್ತು.. ಸಾಸಿವೆಯೂ ಇತ್ತು..

ಇದ್ದ ಗಂಡನೊಬ್ಬನೂ ಸತ್ತು.. ಆ ಜೀವದಹಕ್ಕಿ ಹಸಿದು ಕುಳಿತಿದೆ..
ಬೋಡುಬೆತ್ತಲಾದ ನಗ್ನ ಮರವೊಂದರ ಹೊಕ್ಕಳಲ್ಲಿ,
ಇಲ್ಲದ ಗೂಡೋ, ಇರುವ ಪಂಜರವೋ.. ಎರಡೂ ತಿಳಿಯದ
ಮಾಗಿದ ಹಳದಿಯೆಲೆಗಳು ಸುಮ್ಮಗೆ ಭೂಮಿಗುದುರುತ್ತಿವೆ.

ಹುಟ್ಟಿದ್ದೋ, ಇಟ್ಟದ್ದೋ, ಕೊಟ್ಟಿದ್ದೋ.. ಹೆಸರು ಬೆಂಕಿಯಂತೆ..
ಸೊಂಟ ಸುಟ್ಟ ಮರದ ಚರ್ಮದ ಬಣ್ಣ ಕಪ್ಪಗೆ ಹಕಳೆ,
ಬಾಣಂತನದ ಸೊಗಸಿಗೆ ಮುಖತಿರುವಿದ ಕೊಂಬೆಯ ಕಾಜಾಣ ಅಂದುಕೊಳ್ಳುತ್ತದೆ..
ದೂರದ ಸೊಟ್ಟಪಟ್ಟ ಮರದೊಳಗೆ ಇಟ್ಟ ಮೊಟ್ಟೆಯೇನಾದವು?

ಬಿದ್ದ ಭತ್ತದ ಕಾಳೊಳಗೆ ಹಾಲಿನ್ನೂ ತುಳುಕುತ್ತಿದೆ..
ಪಕ್ಕದ ಬೇಣದ ಇರುವೆಗಳ ಕೊಟ್ಟೆಮನೆಯೊಳಗೆ
ಸತ್ತ ಪುಟ್ಟಿರುವೆಯ ಹಣೆಯ ಮೇಲೆ ತಿನ್ನಲಾಗದ ಸಾಸುವೆ..
ಅಲ್ಲಿ ಸಾವೂ ಇತ್ತು.. ಸಾಸಿವೆಯೂ ಇತ್ತು.. ಬುದ್ದನೇ ಇರಲಿಲ್ಲ.

ಕಣ್ಣಿಗೆ ಸಿಗದ ತಾಯಿಯೊಬ್ಬಳು ಧೂಳಿನ ಮೇಲೆ ಬರೆಯುತ್ತಾಳೆ
ಇದು ನನ್ನದಲ್ಲ.. ಬೇರೆಯವರದ್ದೂ ಅಲ್ಲ.. ನಿನ್ನದು ಮಾತ್ರವಾಗಿ
ರೆಕ್ಕೆಕೊಕ್ಕಿನ ಮೇಲೆ, ರಾಗಿಕಾಳಿನಂಥ ಎದೆಯ ಮೇಲೆ..
ನಾನು ಬರೆದದ್ದಷ್ಟೇ ನಿನ್ನದು. ಉಳಿದದ್ದು ಶೂನ್ಯಕ್ಕೆ..

ಯಾರೋ ಗಾಳಿಯ ನಂಚಿಕೊಂಡು ಬೆಳಕಿನ ಚೂರು ತಿನ್ನುತ್ತ,
ಕಣ್ಣಿರುವ ಪ್ರೀತಿಗೆ ಸುಟ್ಟಮರದ ಬುಡದಡಿ ತಡಕಾಡುತ್ತಿದ್ದಾರೆ..
ಎಲ್ಲಿಂದಲೋ ತೆವಳಿ ಇಲ್ಲೇ ಬದುಕುತ್ತಿದ್ದ ಕೇದಗೆಪೊದೆಯ ಹಾವೊಂದು
ಪೊರೆ ಕಳಚಿಕೊಳ್ಳಲು ಕತ್ತಲಿರುವ ತಾವೊಂದ ಹುಡುಕುತ್ತಿದೆ.
- ಟಿ.ಕೆ. ದಯಾನಂದ

Saturday, 3 March 2012

ನಿಂಬೇಹೂವಿನ ಜೀವಗೀತೆ..

ಚೆಲ್ಲಿಕೊಳ್ಳಬೇಕಿದ್ದ ಮಾತುಗಳು ಗಂಟುಮೂಟೆಯೊಡನೆ
ಗುಳೇ ಎದ್ದು ಹೋಗಿದ್ದ ಒಂದು ರಾತ್ರಿ,
ಅರೆಬೆಂದ ಪದಗಳೊಟ್ಟಿಗೆ ಸಂಧಾನಕ್ಕೆಳಸಿದ್ದ ನನ್ನೊಳಗು
ಒಂದೂ ಪದ ಹುಟ್ಟಿಸದೆ ಸುಮ್ಮನೆ ಬೆಚ್ಚುತ್ತದೆ.

ಯಾವತ್ತೋ ಶರಬತ್ತಿಗೆ ಹಿಂಡಿ ಎಸೆದಿದ್ದ ನಿಂಬೇಹಣ್ಣಿನ
ಬೀಜದೊಡಲು ತುಂಬಿಕೊಂಡಿದ್ದು ಅದಕ್ಕೆ ಮಾತ್ರ ಗೊತ್ತಾಗಿ
ಕಾರೇಮುಳ್ಳುಗಳ ಪೊದೆಗಳ ಮಧ್ಯೆ
ನಿಂಬೇಗಿಡ ಮೈಯರಳಿಸಿದ್ದು ನನಗೂ ಗೊತ್ತಾಗಲಿಲ್ಲ.

ಯಾವ ಜಗದ ವಿವರಕ್ಕೂ ಪಕ್ಕಾಗದೆ ಮಿಟುಕುಗಣ್ಣು ತೆರೆದ
ನಿಂಬೇಗಿಡ ಅದರ ಪಾಡಿಗದು ಕೈಕಾಲು ಬೆನ್ನು ಮೂಡಿಸಿಕೊಂಡು
ಮುಖವೊಂದು ಮಾತ್ರ ಮೂಡದೆಯೇ, ದಕ್ಕದೆಯೇ ಹೋಗಿದ್ದು
ಅದರ ಧೇನಕ್ಕೂ ತಿಳಿಯಲಿಲ್ಲ. ಏನಕೇನ ನನ್ನ ಧೇನಕ್ಕೂ..

ಬೆಚ್ಚುತ್ತಿದ್ದ ನನ್ನೊಳಗು ಎಸೆದ ಬೀಜವನ್ನೇ ಮರೆತಿರುವಾಗ
ಉಜ್ಜದ ಹಲ್ಲನ್ನು ಮುಚ್ಚಿಕೊಂಡು ನಗುತ್ತಿದ್ದ ನಿಂಬೇಗಿಡದ
ಯೌವನದ ಬಿಸುಪನ್ನು ಯಾವ ಸತ್ತ ನೆನಪಲ್ಲಿ ಹುಡುಕುತ್ತದೆ.?
ಹಸೀಕೂಸಿನ ಎಳೇ ನಾಲಿಗೆಯಂಥ ನಿಂಬೇಎಲೆ ನನ್ನತ್ತ ನಗುತ್ತದೆ.

ದಾರಿತಪ್ಪಿ ಜೀವತೆತ್ತ ಬಸವನಹುಳುವಿನ ದೇಹದ ಪುಡಿ ತಿಂದು
ಅರಳಿಕೊಳ್ಳಲು ಹವಣಿಸುತ್ತಿದೆ ನಿಂಬೇಹೂವು
ನನ್ನೊಳಗು ಆವತ್ತು ನೋಡಿದ್ದು ಅದೇ ಹವಣಿಕೆಯನ್ನೇ..
ಬಾವಿಗೆ ಬಿದ್ದಂತಿದ್ದ ಒಳಗೊಳಗೆ ಈಗ ನಿಂಬೇಹೂವಿನ ಬೆಳಕು.

ಎಸೆದದ್ದೇ ಅರಳುತ್ತದೆಯಾದರೆ, ಕಟ್ಟಿಕೊಂಡ ಒಳಗೂ
ಬಿಮ್ಮಗೆ ಅರಳಬೇಕಲ್ಲ, ನಚ್ಚಗೆ ಬೆಳಗಬೇಕಲ್ಲ..
ತನ್ನಮೇಲೆ ತಾನೇ ಮಣ್ಣೆದುಕೊಳ್ಳಲು ಮುಖತೊಳೆಯುತ್ತಿದ್ದ ನನ್ನೊಳಗಿಗೆ
ನಿಂಬೇಹೂವಿನ ಜೀವಗೀತೆ ತಲೆನೇವರಿಸುತ್ತದೆ..

ನಾನು ಇನ್ನೇನೇನನ್ನು ಇನ್ನೆಲ್ಲೆಲ್ಲಿ ಎಸೆದೆನೋ..
ಅವೂ ಇಷ್ಟೊತ್ತಿಗೆ ಅರಳಿ ಪದ ಹಾಡುತ್ತಿರುವ ಗುಂಗಿಗೆ ಬಿದ್ದು
ಕಾರೇಮುಳ್ಳುಗಳ ಪೊದೆಗಳೊಗಳಗೆ ಬೆತ್ತಲೆಗೊಂಡು
ಕಣ್ಣು ಮರೆತ ಕಡವೆಯಂತೆ ನುಗ್ಗಾಡುತ್ತಿದ್ದೇನೆ..


- ಟಿ.ಕೆ. ದಯಾನಂದ

Saturday, 25 February 2012

ಒಂಟಿ ಕಣ್ಣ ದೇವರು ಮೈಯರಳದ ಬಾಲೆಯು.....

ಲೆಕ್ಕಕ್ಕಿಲ್ಲದಷ್ಟು ಮೆಟ್ಟಿಲು ಹಾಸಿಕೊಂಡು ನಭಕ್ಕೆ ಹತ್ತಿರ ಕುಳಿತವನಿಗೆ
ಗುಂಡಾರವೂ ಗುಡಿಯೂ ಬೀದಿಯೇ ಆದವರ ಸೊಲ್ಲು ಇನ್ನೂ ತಲುಪಿಲ್ಲ.
ಗೋಡೆಗಳ ಬರೆದವರಾರೋ ಬೀದಿಗೂ ನಭಕ್ಕೂ ನಡುವೆ..
ಈ ಕಡೆಯ ಸೊಲ್ಲು ಅತ್ತ ತಲುಪದೆ, ಆ ಕಡೆಯ ಹೇವರಿಕೆ ಇತ್ತ ತಲುಪದೆ
ಗೋಡೆ ಮಾತ್ರ ಪರಮಸತ್ಯವಾದದ್ದು ವರ್ತಮಾನದ ದುರಂತವು.

ಕೊತಕೊತನೆ ಕುದಿಯುವ ಮಡಕೆಯ ಗಂಜಿಗೆ ಬಂಡವಾಳ ಹಾಕಿದ್ದಾನೆ,
ಜಾತ್ರೆಯ ಮೂಲೆಯಲ್ಲಿ ರಾಟುವಾಣದ ಚಕ್ರ ತಿರುಗಿಸುವ ಹುಲುಮಾನವ,
ಗಾಳಿಗೂ ಪಟಕ್ಕೂ ಒಂದೇ ದಾರ ಬಿಗಿದವನ ಭುಜದ ತುಂಬ..
ನಾಳೆಯ ಪಾಡಿನ ಭಾವಗೀತೆಗಳು ಕೊನೆಯುಸಿರೆಳೆಯುತ್ತಿವೆ..
ನಭದವನ ಮಾಲೀಕ ಶಂಖು ಊದಿದ್ದು ಇಲ್ಲಿಗಿನ್ನೂ ತಲುಪಿಲ್ಲ.

ನರವೆಲ್ಲವನ್ನೂ ಇಷ್ಟ ಬಂದಂತೆ ಬಿಗಿಯುತ್ತಾಳೆ ಮೈಯರಳದ ಬಾಲೆ,
ಕೈಗಂಟುವ ಡೋಲಕನ್ನು ಮೀಟುತ್ತಿವೆ ಪ್ಲಾಸ್ಟಿಕ್ಕು ಉಂಗುರದ ಬೆರಳುಗಳು..
ಮಾಂತ್ರಿಕ ಬೆರಳುಗಳ ನೋಡುತ್ತ ಮಕಾಡೆಬಿದ್ದ ಅಲ್ಯೂಮಿನಿಯಂ ತಟ್ಟೆಗೆ,
ಉಸಿರೆಳೆದುಕೊಳ್ಳುವ ಆಸೆ ಗರ್ಭಕಟ್ಟಿದ ಎರಡನೇ ನಿಮಿಷಕ್ಕೆ,
ನಭದೊಡೆಯನ ನೊಸಲಮೇಲೆ ಎರೆಹುಳುವಿನಂಥ ಗೆರೆಗಳು ಹುಟ್ಟಿದವು.

ಕೊರಳಿಗೆ ದೇವರಪಟವನ್ನು ನೇತುಹಾಕಿಕೊಂಡ ಬರಿಮೈ ದುಡಿಮೆಗಾರನೂ
ಇದ್ದಾನೆ ಗುಂಪೊಳಗೆ ಸಾಸುವೆಯಂತೆ ಲೀನವಾಗಿ..
ಕಟ್ಟಿದ ತಂತಿಯ ಮೇಲೆ ಕೋಲು ಹಿಡಿದು ಹೆಜ್ಜೆಯ ಪ್ರತಿಬಿಂಬವೊತ್ತಿದ
ಬಾಲೆಯ ಕಸುವು, ಬಿರುಸು, ಚಾಲಾಕಿತನಕ್ಕೆ..ಅವನೂ..
ಅವನ ಕೊರಳಿಗೆ ಜೋತುಬಿದ್ದ ದೇವರೂ ಇಬ್ಬರೂ ಒಂದೇಟಿಗೇ ಭಯಗೊಂಡರು.

ಇದು ನಡುಹಗಲ ಜಾತರೆ.. ಅರೆಬೆಂದಿದ್ದ ಸೂರ್ಯನಿಗೂ ಉರಿಯಲು ಬೇಸರ
ಸುಟ್ಟೀತೇನೋ ಬಾಲೆಯ ಎವೆ.. ಚಪ್ಪಲಿಯೊಡನೆ ಮುನಿಸಿಕೊಂಡ ಪಾದ,
ದೂರವಿದ್ದ ಮೂರು ಮೋಡಗಳನ್ನು ಕಾಲಿಂದಲೇ ಎಳೆದುಕೊಂಡ ಸೂರ್ಯ
ಬಾಲೆಯ ಎವೆಗೂ ತನಗೂ ಮಧ್ಯೆ ಆವಿಯ ಗೋಡೆ ಕಟ್ಟಿಕೊಂಡದ್ದನ್ನು,

ಗುಂಪಿನವನ ಕೊರಳಿಗೆ ಜೋತುಬಿದ್ದ ಒಂದು ಕಣ್ಣಿನ ದೇವರು ಮಾತ್ರ ನೋಡಿತು..
- ಟಿ.ಕೆ. ದಯಾನಂದ

ಪುಳ್ಳಂಗೋವಿಯೊಳಗಿಂದ ಮುರಿದ ಹಾಡು......


ಒಂದು ಅರ್ಧಸತ್ತ ರಾತ್ರಿ.. ಚೆಲ್ಲಾಡಿಹೋಗಿದ್ದ ಪದಗಳನ್ನು
ಹೆಸರು ಗೊತ್ತಿಲ್ಲದ ಮರದ ಗೋಂದಿನಿಂದ ಅಂಟಿಸುತ್ತಿದ್ದೆ..
ಬಣ್ಣಮಾಸಿದ ಪುಳ್ಳಂಗೋವಿಯೊಳಗಿನಿಂದ ಮುರಿದ ಹಾಡೊಂದು
ತೆವಳುತ್ತ ಬಂದು.. ಎದೆಯ ಮೇಲೆ ಕೂತು, ಹಣೆಯ ಮೇಲೆ
ಮೊದಲು ರಂಗೋಲಿ ಬರೆದು, ಆಮೇಲೆ ಚುಕ್ಕಿಗಳನ್ನು ಇಟ್ಟಿತು.

ಎಲ್ಲಿದ್ದಾನೋ ಹಾಡಿನೊಡೆಯ, ಯಾರವ್ವ ನಿನಗೆ ಬಸುರಾದವನು?
ಕೇಳಿದ ಪ್ರಶ್ನೆಗೆ ಮುರಿದ ಹಾಡು ಕಪ್ಪುರಸ್ತೆಯತ್ತ ಗೋಣು ಬಿಸಾಕಿತು..
ಅಲ್ಲಿ ಅವನಿದ್ದ.. ಅರ್ಧ ಕಟ್ಟಿದ ಬಂಗಲೆಯ ಮುಂದಣ ಮರಳಗುಡ್ಡೆಯ ಮೇಲೆ
ದಿವೀನು ಗಡ್ಡವನ್ನು ಭೂತಾಯ ದಿಕ್ಕಿಗೆಸೆದು ಮಾಸಿದ ಪುಳ್ಳಂಗೋವಿಗೆ
ಒಡೆದ ತುಟಿ ಅಡವಿಟ್ಟು ಇನ್ನಷ್ಟು ಮುರಿದ ಹಾಡುಗಳನ್ನು ಕಟ್ಟುತ್ತಿದ್ದ.

ಬೆಳಗಾನ ಹೊತ್ತು ಇವನು ಎಲ್ಲಿ ಹೋಗುವನೋ, ಏನು ಉಸಿರಾಡುವನೋ
ನಡೆಯುವ ದಾರಿಯಾದರೂ ಮಣ್ಣಿನದ್ದೋ, ಕಾರೆಮುಳ್ಳುಗಳ ಹಾಸಿನದ್ದೋ..
ಮುರಿದ ಹಾಡು ಉತ್ತರಿಸಲಿಲ್ಲ.. ಬಂಗಲೆಯಲ್ಲವೋ ಅದು.. ಹುತ್ತ
ಚಂದ್ರ ಸತ್ತಾಗ ಸೂರ್ಯ ಮೈಮುರಿದಾಗ ಗೆದ್ದಲಾಗುತ್ತಾನೆ..
ಸೂರ್ಯ ಸಾಯುವವರೆಗೆ ಹುತ್ತ ಕಟ್ಟುತ್ತಾನೆ.. ರಾತ್ರಿ ಹಾಡುಗಳಿಗೆ ಬಸುರಾದ.

ತಾಳಮೇಳಗಳ, ರಾಗ ಆಲಾಪಗಳ ಯಾವ ಗುಂಗಿಗೂ ತಲೆಕೊಡದೆ
ಹಾಡುಗಳಿಗೆ ಬಸುರಾಗುತ್ತಾನೆ.. ಕೈಕಾಲಿಲ್ಲದ ಹಾಡುಗಳ ಹುಟ್ಟಿಸುತ್ತಾನೆ..
ಹೀಗೆ ಹುಟ್ಟಿದ ಹಾಡುಗಳು ಎಲ್ಲೆಲ್ಲೋ ಅಲೆದು ಮತ್ತೆ ಪುಳ್ಳಂಗೋವಿ ಸೇರುತ್ತೇವೆ
ಮತ್ತೆ ಕರೆಯುತ್ತಾನೆ.. ಮತ್ತೆ ಹುಟ್ಟುತ್ತವೆ.. ಅವನ ಹರಿದ ಚಪ್ಪಲಿಯ ಸಂದಿನಲ್ಲಿ
ಇನ್ನಷ್ಟು ಪದಗಳು ಸಿಕ್ಕಿದವು.. ಆಯ್ದುಕೊಂಡು ಬಂದೆ..

ಮತ್ತದೇ ಕಾವಳ.. ನಾನು ಆಯ್ದುಕೊಂಡು ಬಂದ ಹೊಸಪದಗಳನ್ನು
ಹೆಸರಿಲ್ಲದ ಮರದ ಗೋಂದುಹಾಕಿ ಅಂಟಿಸುತ್ತಿದ್ದೇನೆ..
ಗೆದ್ದಲಿಗೂ ಹುತ್ತಕ್ಕೂ ಮಧ್ಯದ ಕಟ್ಟುವ ಪರಂಪರೆಯ ನೆನಪೂ ಇಲ್ಲದ
ಕೊಳಕುಮಂಡಲದ ಹಾವುಗಳು, ಹುತ್ತ ಸೇರುವ ಪರಿಯನ್ನೂ..
ಮುರಿದ ಹಾಡುಗಳನ್ನು ಹೆರುವ ಇವನ ಉಸುರತಿತ್ತಿಯನ್ನು ಯಾಕೋ ಗೊತ್ತಿಲ್ಲ

ನನ್ನಿಂದ ಅಂಟಿಸಲಾಗುತ್ತಿಲ್ಲ..


: - ಟಿ.ಕೆ. ದಯಾನಂದ