ಲೆಕ್ಕಕ್ಕಿಲ್ಲದಷ್ಟು ಮೆಟ್ಟಿಲು ಹಾಸಿಕೊಂಡು ನಭಕ್ಕೆ ಹತ್ತಿರ ಕುಳಿತವನಿಗೆ
ಗುಂಡಾರವೂ ಗುಡಿಯೂ ಬೀದಿಯೇ ಆದವರ ಸೊಲ್ಲು ಇನ್ನೂ ತಲುಪಿಲ್ಲ.
ಗೋಡೆಗಳ ಬರೆದವರಾರೋ ಬೀದಿಗೂ ನಭಕ್ಕೂ ನಡುವೆ..
ಈ ಕಡೆಯ ಸೊಲ್ಲು ಅತ್ತ ತಲುಪದೆ, ಆ ಕಡೆಯ ಹೇವರಿಕೆ ಇತ್ತ ತಲುಪದೆ
ಗೋಡೆ ಮಾತ್ರ ಪರಮಸತ್ಯವಾದದ್ದು ವರ್ತಮಾನದ ದುರಂತವು.
ಕೊತಕೊತನೆ ಕುದಿಯುವ ಮಡಕೆಯ ಗಂಜಿಗೆ ಬಂಡವಾಳ ಹಾಕಿದ್ದಾನೆ,
ಜಾತ್ರೆಯ ಮೂಲೆಯಲ್ಲಿ ರಾಟುವಾಣದ ಚಕ್ರ ತಿರುಗಿಸುವ ಹುಲುಮಾನವ,
ಗಾಳಿಗೂ ಪಟಕ್ಕೂ ಒಂದೇ ದಾರ ಬಿಗಿದವನ ಭುಜದ ತುಂಬ..
ನಾಳೆಯ ಪಾಡಿನ ಭಾವಗೀತೆಗಳು ಕೊನೆಯುಸಿರೆಳೆಯುತ್ತಿವೆ..
ನಭದವನ ಮಾಲೀಕ ಶಂಖು ಊದಿದ್ದು ಇಲ್ಲಿಗಿನ್ನೂ ತಲುಪಿಲ್ಲ.
ನರವೆಲ್ಲವನ್ನೂ ಇಷ್ಟ ಬಂದಂತೆ ಬಿಗಿಯುತ್ತಾಳೆ ಮೈಯರಳದ ಬಾಲೆ,
ಕೈಗಂಟುವ ಡೋಲಕನ್ನು ಮೀಟುತ್ತಿವೆ ಪ್ಲಾಸ್ಟಿಕ್ಕು ಉಂಗುರದ ಬೆರಳುಗಳು..
ಮಾಂತ್ರಿಕ ಬೆರಳುಗಳ ನೋಡುತ್ತ ಮಕಾಡೆಬಿದ್ದ ಅಲ್ಯೂಮಿನಿಯಂ ತಟ್ಟೆಗೆ,
ಉಸಿರೆಳೆದುಕೊಳ್ಳುವ ಆಸೆ ಗರ್ಭಕಟ್ಟಿದ ಎರಡನೇ ನಿಮಿಷಕ್ಕೆ,
ನಭದೊಡೆಯನ ನೊಸಲಮೇಲೆ ಎರೆಹುಳುವಿನಂಥ ಗೆರೆಗಳು ಹುಟ್ಟಿದವು.
ಕೊರಳಿಗೆ ದೇವರಪಟವನ್ನು ನೇತುಹಾಕಿಕೊಂಡ ಬರಿಮೈ ದುಡಿಮೆಗಾರನೂ
ಇದ್ದಾನೆ ಗುಂಪೊಳಗೆ ಸಾಸುವೆಯಂತೆ ಲೀನವಾಗಿ..
ಕಟ್ಟಿದ ತಂತಿಯ ಮೇಲೆ ಕೋಲು ಹಿಡಿದು ಹೆಜ್ಜೆಯ ಪ್ರತಿಬಿಂಬವೊತ್ತಿದ
ಬಾಲೆಯ ಕಸುವು, ಬಿರುಸು, ಚಾಲಾಕಿತನಕ್ಕೆ..ಅವನೂ..
ಅವನ ಕೊರಳಿಗೆ ಜೋತುಬಿದ್ದ ದೇವರೂ ಇಬ್ಬರೂ ಒಂದೇಟಿಗೇ ಭಯಗೊಂಡರು.
ಇದು ನಡುಹಗಲ ಜಾತರೆ.. ಅರೆಬೆಂದಿದ್ದ ಸೂರ್ಯನಿಗೂ ಉರಿಯಲು ಬೇಸರ
ಸುಟ್ಟೀತೇನೋ ಬಾಲೆಯ ಎವೆ.. ಚಪ್ಪಲಿಯೊಡನೆ ಮುನಿಸಿಕೊಂಡ ಪಾದ,
ದೂರವಿದ್ದ ಮೂರು ಮೋಡಗಳನ್ನು ಕಾಲಿಂದಲೇ ಎಳೆದುಕೊಂಡ ಸೂರ್ಯ
ಬಾಲೆಯ ಎವೆಗೂ ತನಗೂ ಮಧ್ಯೆ ಆವಿಯ ಗೋಡೆ ಕಟ್ಟಿಕೊಂಡದ್ದನ್ನು,ಗುಂಪಿನವನ ಕೊರಳಿಗೆ ಜೋತುಬಿದ್ದ ಒಂದು ಕಣ್ಣಿನ ದೇವರು ಮಾತ್ರ ನೋಡಿತು..- ಟಿ.ಕೆ. ದಯಾನಂದ
ಒಂದು ಅರ್ಧಸತ್ತ ರಾತ್ರಿ.. ಚೆಲ್ಲಾಡಿಹೋಗಿದ್ದ ಪದಗಳನ್ನುಹೆಸರು ಗೊತ್ತಿಲ್ಲದ ಮರದ ಗೋಂದಿನಿಂದ ಅಂಟಿಸುತ್ತಿದ್ದೆ..ಬಣ್ಣಮಾಸಿದ ಪುಳ್ಳಂಗೋವಿಯೊಳಗಿನಿಂದ ಮುರಿದ ಹಾಡೊಂದು ತೆವಳುತ್ತ ಬಂದು.. ಎದೆಯ ಮೇಲೆ ಕೂತು, ಹಣೆಯ ಮೇಲೆಮೊದಲು ರಂಗೋಲಿ ಬರೆದು, ಆಮೇಲೆ ಚುಕ್ಕಿಗಳನ್ನು ಇಟ್ಟಿತು. ಎಲ್ಲಿದ್ದಾನೋ ಹಾಡಿನೊಡೆಯ, ಯಾರವ್ವ ನಿನಗೆ ಬಸುರಾದವನು?ಕೇಳಿದ ಪ್ರಶ್ನೆಗೆ ಮುರಿದ ಹಾಡು ಕಪ್ಪುರಸ್ತೆಯತ್ತ ಗೋಣು ಬಿಸಾಕಿತು..ಅಲ್ಲಿ ಅವನಿದ್ದ.. ಅರ್ಧ ಕಟ್ಟಿದ ಬಂಗಲೆಯ ಮುಂದಣ ಮರಳಗುಡ್ಡೆಯ ಮೇಲೆದಿವೀನು ಗಡ್ಡವನ್ನು ಭೂತಾಯ ದಿಕ್ಕಿಗೆಸೆದು ಮಾಸಿದ ಪುಳ್ಳಂಗೋವಿಗೆಒಡೆದ ತುಟಿ ಅಡವಿಟ್ಟು ಇನ್ನಷ್ಟು ಮುರಿದ ಹಾಡುಗಳನ್ನು ಕಟ್ಟುತ್ತಿದ್ದ. ಬೆಳಗಾನ ಹೊತ್ತು ಇವನು ಎಲ್ಲಿ ಹೋಗುವನೋ, ಏನು ಉಸಿರಾಡುವನೋನಡೆಯುವ ದಾರಿಯಾದರೂ ಮಣ್ಣಿನದ್ದೋ, ಕಾರೆಮುಳ್ಳುಗಳ ಹಾಸಿನದ್ದೋ..ಮುರಿದ ಹಾಡು ಉತ್ತರಿಸಲಿಲ್ಲ.. ಬಂಗಲೆಯಲ್ಲವೋ ಅದು.. ಹುತ್ತಚಂದ್ರ ಸತ್ತಾಗ ಸೂರ್ಯ ಮೈಮುರಿದಾಗ ಗೆದ್ದಲಾಗುತ್ತಾನೆ..ಸೂರ್ಯ ಸಾಯುವವರೆಗೆ ಹುತ್ತ ಕಟ್ಟುತ್ತಾನೆ.. ರಾತ್ರಿ ಹಾಡುಗಳಿಗೆ ಬಸುರಾದ.ತಾಳಮೇಳಗಳ, ರಾಗ ಆಲಾಪಗಳ ಯಾವ ಗುಂಗಿಗೂ ತಲೆಕೊಡದೆಹಾಡುಗಳಿಗೆ ಬಸುರಾಗುತ್ತಾನೆ.. ಕೈಕಾಲಿಲ್ಲದ ಹಾಡುಗಳ ಹುಟ್ಟಿಸುತ್ತಾನೆ..ಹೀಗೆ ಹುಟ್ಟಿದ ಹಾಡುಗಳು ಎಲ್ಲೆಲ್ಲೋ ಅಲೆದು ಮತ್ತೆ ಪುಳ್ಳಂಗೋವಿ ಸೇರುತ್ತೇವೆಮತ್ತೆ ಕರೆಯುತ್ತಾನೆ.. ಮತ್ತೆ ಹುಟ್ಟುತ್ತವೆ.. ಅವನ ಹರಿದ ಚಪ್ಪಲಿಯ ಸಂದಿನಲ್ಲಿಇನ್ನಷ್ಟು ಪದಗಳು ಸಿಕ್ಕಿದವು.. ಆಯ್ದುಕೊಂಡು ಬಂದೆ.. ಮತ್ತದೇ ಕಾವಳ.. ನಾನು ಆಯ್ದುಕೊಂಡು ಬಂದ ಹೊಸಪದಗಳನ್ನು ಹೆಸರಿಲ್ಲದ ಮರದ ಗೋಂದುಹಾಕಿ ಅಂಟಿಸುತ್ತಿದ್ದೇನೆ.. ಗೆದ್ದಲಿಗೂ ಹುತ್ತಕ್ಕೂ ಮಧ್ಯದ ಕಟ್ಟುವ ಪರಂಪರೆಯ ನೆನಪೂ ಇಲ್ಲದಕೊಳಕುಮಂಡಲದ ಹಾವುಗಳು, ಹುತ್ತ ಸೇರುವ ಪರಿಯನ್ನೂ.. ಮುರಿದ ಹಾಡುಗಳನ್ನು ಹೆರುವ ಇವನ ಉಸುರತಿತ್ತಿಯನ್ನು ಯಾಕೋ ಗೊತ್ತಿಲ್ಲನನ್ನಿಂದ ಅಂಟಿಸಲಾಗುತ್ತಿಲ್ಲ..: - ಟಿ.ಕೆ. ದಯಾನಂದ
ಆದರೂ.. ಆ ಪೇರಳೆಯ ಮರದ ಕೆಳಗೆ ಅಷ್ಟೊಂದು ತಂಬೆಲರು
ಚಿಮುಕಿಸಿ ಹೋದವರು ಯಾರು.. ಯಾಕಾಗಿ ಹುಡುಕುತ್ತೇನೆ ಅದನ್ನು?
ದೂರದ್ದ ಕಾಣಲು ದುರ್ಬೀನು ಉಂಟು.. ನೋಡುವ ಕಣ್ಣುಗಳದ್ದೇ ದಾಸ್ತಾನಿಲ್ಲ..
ಕಣ್ಣೆರಡನ್ನೂ ಇಲ್ಲೇ ಪೊಟರೆಯೊಳಗಿಟ್ಟು ಇರುವೆಮನೆಗಳನ್ನು
ತಡವಿಕೊಂಡು ನೆಲದ ಮೇಲೆ ಇರುವಿನ ತಾವು ಹುಡುಕುತ್ತಿದ್ದೆ..
ರೋಜಾಪಕಳೆಗಳನ್ನು ಕಾರಣವಿಲ್ಲದೆ ಕಿತ್ತು ತಿನ್ನುವ ಜನಗಳ ಬಾಯತುಂಬ
ಕಪ್ಪುರಕ್ತದ ಕಲೆ.. ಅವರತ್ತ ನೋಡಲು ಕಣ್ಣಪಾಪೆಗೆ ಖುಷಿಯಾಗುತ್ತದೆ..
ಎಲ್ಲಿಯೂ ಅಂಟದ ರಕುತದ ಕಲೆ ಬಾಯಿಗೆ ತುಟಿಗೆ ಕೆನ್ನೆಗೆ..
ಸತ್ತವನ ಮೇಲೂ, ಮದುವೆಯವಳ ಮೇಲೂ, ಸನ್ಮಾನದವನ ಮೇಲೂ
ಅದದೇ ಪಕಳೆಗಳು.. ಅವರ ಬಾಯೊಳಗೂ ಕಪ್ಪುರಕುತ
ಇತ್ತಿತ್ತಲಾಗಿ ಯಾರಾದರೂ ನನ್ನನ್ನೊಮ್ಮೆ ಕೊಂದು ಹಾಕಲಿ
ಅಂದುಕೊಳ್ಳುವೆ, ಯಾರೂ ಕೊಲ್ಲುವರಿಲ್ಲ..
ಪಾಳುಬಿದ್ದ ಬಾವಿಯೊಳಗೆ ನನ್ನ ಕಾಯವೂ ಇರಲಿ
ಬಾವಿಯೊಳಗಿನ ಕಸಕಡ್ಡಿ ಧೂಳು ಜೇಡಬಲೆಯ ಮಧ್ಯೆ
ಇದ್ದುಕೊಳ್ಳಲಿ ತೃಣಮಾತ್ರದ ಜೀವ.
ಇತ್ತಿತ್ತಲಾಗಿ ನನ್ನ ಅಪಧಮನಿಯ ಚೂರುಗಳನ್ನು
ಯಾರೋ ಬೊಗಸೆಯೊಳಗೆ ತುಂಬಿಕೊಂಡು ಹೋದಂತೆ
ಸ್ವಪುನ ಬಿದ್ದು ಭಯದಿಂದ ಕುಣಿಯುವಂತಾಗುತ್ತದೆ,
ಕುಣಿಯುವಾಗ ಕಾಲಾದರೂ ಎರಡು ಸೀಳಾಗಬಾರದೇ
ಅತ್ತೊಂದಿತ್ತೊಂದು ಎಸೆದು ಚಲನೆಯಿಲ್ಲದೆ ಕೊರಡಾಗುವೆ.
: - ಟಿ.ಕೆ. ದಯಾನಂದ
ಜಗತ್ತಿನ ಮೊಟ್ಟ ಮೊದಲ ಕಾನೂನು ಮೂರಕ್ಷರದಿಂದ ಶುರುವಿಟ್ಟು
ಮೂರಕ್ಷರದಲ್ಲೇ ಕೊನೆಯಾಗುವುದು ಒಂದೆಡೆಯಲ್ಲಿ ಮಾತ್ರವು..
ಎಡೆಯ ಹೆಸರಿಂತಿರ್ಪುದು ತಿಪ್ಪಾಳೆಯಾಡುವ ಭೂ ನ್ಯಾಯಾಲಯ.
ವ್ಯೋಮಾಕಾಶದ ಜೀವಸಂಕುಲಗಳಿಗೆ ಅನ್ನವುಣಿಸುವವೆಂದು
ಯಾರೋ ಬರೆದಿಟ್ಟು ಹೋದ ತಾಳೆಗರಿಯನ್ನು ಕಂಡು
ಕಾಲರುದ್ರನ ಕೈಯೊಳಗಿನ ಖಾಲಿ ಕಾಪಾಲವು ನಗುತ್ತಿದೆ.
ಬೆಲೂನು ಮಾರುವ ಹುಡುಗನ ಅಂಗೈಯಲ್ಲಿ ತಣ್ಣಗಾಗುತ್ತಿರುವ
ಚಹಾದ ಗಳಾಸಿನ ಪಾತಾಳದಾಳದಲಿ.. ಕವುಚಿ ಬಿದ್ದಿದ್ದ
ಹಸಿವೆಂಬ ಮೂರಕ್ಷರವು ತನ್ನೊಡನೆ ತಾನೇ ಪ್ರೇಮಕ್ಕೆ ಬಿದ್ದಿತ್ತು.
ನನ್ನವ್ವ.. ಖಂಡವೊಂದರ ನಕ್ಷೆಯಂತೆ ದಿಕ್ಕಾಪಾಲಾಗಿ ಬೇಯಿಸಿದ್ದ
ರೊಟ್ಟಿಯ ನಟ್ಟನಡುವಿನಲ್ಲಿ ಮೂರಕ್ಷರವನ್ನು ಚಿತ್ರಿಸಿದ ರೂಹಿಲ್ಲದ
ಜಂಗಮನ ಪಾದಕ್ಕೆ ನನ್ನ ತಲೆಯನ್ನು ಅಡವಿಟ್ಟು ಚುಂಬಿಸುವ ಬಯಕೆ.
ಮಂಜುಗಡ್ಡೆಯ ತುಂಡುಗಳನ್ನು ಡಬ್ಬದೊಳಗಿಟ್ಟು ಕೂಗುತ್ತ ನಡೆಯುವ
ಈ ಬಿಳೀಗಡ್ಡದ ವಯೋವೃದ್ಧನ ಬಿರುಕು ಬಿದ್ದ ಪಾದದ ಸಂದುಗಳೊಳಗೆ,
ಹಸಿವಿನ ತಲೆ ನೇವರಿಸುವ ಶ್ರಮದ ಕೃತಿಗಳ ಗ್ರಂಥಾಲಯವಿರಬಹುದೇ ?
ಭಾಷೆಯಿಲ್ಲದ ಬಾಯಿಗೆ ಮೊಲೆಯೂಡಿಸಿದ ಅವಳ ಸ್ತನತೊಟ್ಟಿನ ಭೂಮಿಯ ತುಂಬ
ಕೆಂಪೋಕೆಂಪು ಮರಗಿಡಗಳು.. ರಕುತದ ಹುಲ್ಲುಗಾವಲೊಂದರ ನಡುವಿನ ಗರಿಕೆಯ
ಮೊದಲ ಮಾತಿನ ಬಣ್ಣ.. ಬಸುರಾದ ಎರೆಹುಳುವಿನ ಚರ್ಮದಂತೆ ಬಿಳಿಯಾಗಿತ್ತು.
ಕಣ್ಣಪಾಪೆಯನ್ನೂ ಬಿಟ್ಟಿಲ್ಲ ಮೂರಕ್ಷರದ ಕಾನೂನು, ಎಲ್ಲವನ್ನೂ ಕಾಣುತ್ತದೆ..
ಜಗವನಾಳುವುದು ದೇಶಗಳಲ್ಲ, ಧರ್ಮಗಳಲ್ಲ, ಶಾಸ್ತ್ರಗಳಲ್ಲ, ಶಾಸನಗಳಲ್ಲ..
ಮೂರಕ್ಷರದ ಹಸಿವು.. ಎರಡೇ ಎರಡಕ್ಷರದ ಮಾತು ಬಾರದ ಪ್ರೇಮ.
ಟಿ.ಕೆ. ದಯಾನಂದ
ಅದೆಲ್ಲಿಂದ ಕಲಿತು ತಂದರೋ ಕಣ್ಕಟ್ಟು ಮಾಯೆಯನ್ನು,
ತಮ್ಮ ಕಣ್ಣನ್ನು ಮುಚ್ಚದೆಯೇ.. ಜಗತ್ತಿನ ಎಲ್ಲ ಕಣ್ಣುಗಳಿಗೆ
ಸೂಜಿದಾರವನ್ನು ಕೂಡಿಕೆ ಮಾಡ ಹವಣಿಸುತ್ತಾರೆ, ಇವರು
ಕ್ರೂರ ಕಾವಳದೊಟ್ಟಿಗಿನ ಮೈಥುನಕ್ಕೆ ಸಟಕ್ಕನೆ ಬಸುರಾದವರು.
ಇಗೋ ಇಷ್ಟು ಬೆಳಕನ್ನು ತಿನ್ನಿರಿ ಎಂದು ಅವರು ತೋರಿಸಿದ
ಬಟ್ಟಲೊಳಗೆ ಕಪ್ಪುರಾತ್ರಿಯೊಂದು ಕೈಕಾಲು ಮುರಿದು ನರಳುತ್ತಿತ್ತು
ಮಂಡಿಯೂರಿ ಕತ್ತಲು ಪಡೆದವರು ಗಸಗಸನೆ ತಿಂದ ಚಣ
ಒಳಗಣ ಪ್ರೀತಿತೊರೆಯ ಮಧ್ಯದಿಂದೆದ್ದ ತಾಮಸದ ಸೈತಾನ
ಆಹಾ.. ಸೈತಾನನಲ್ಲವಿವನು ಕಣ್ಣಿಗೂ ಎರಚುವನಲ್ಲ ಬೊಗಸೆಮಣ್ಣು
ಕಡುಬಿಳಿಯ, ತೆಳುನೀಲಿ, ಚೂರು ಕಂದು ಒಟ್ಟು ಬೆರೆಸಿದ ಸೈತಾನ
ಮಂಡಿಯೂರಿದವರ ಮಿದುಳ ನಗರಿಯೊಳಗೆ ಆಡಿದ್ದು ತಾಂಡವವೇ..
ಆದರೀ ನೃತ್ಯ, ಗಾಂಜಾ ಸೇದುವ ಇಳೆಯ ರುದ್ರನದ್ದು ಖಂಡಿತವೂ ಅಲ್ಲ..
ಕಾವಳಕ್ಕೆ ಬಸುರಾದವರ ಕುಲಪುತ್ರ ಸೈತಾನನ ಕಾಲುಗಳು
ಹೊಸಕುವುದನ್ನು ಬಿಟ್ಟು ಉಳಿದೇನೂ ಕಲಿತಿಲ್ಲ..
ಬಾಕಿಯುಳಿದ ನೆನಪುಗಳುನ್ನು ಆಯ್ದು ಆಯ್ದು ಕೊಲ್ಲುತ್ತಿದ್ದಾನೆ
ಮಂಡಿಯೂರಿದ ಜೀವಗಳ ನರವ್ಯೂಹಗಳು ನಡು ರಸ್ತೆಯಲ್ಲಿ ಅನಾಮತ್ತು ದರೋಡೆ.
ಸ್ಮೃತಿಚೀಲದೊಳಗೆ ಕಾಪಿಟ್ಟ ಸರ್ವವನ್ನೂ ತುಳಿದವನ ಪಾದಕ್ಕರ್ಪಿಸಿ
ಧನ್ಯರಾದ ಮಂಡಿಯೂರಿದವರಿಗೆ ಬಿಡುಗಡೆ ಮತ್ತು ಖೆಡ್ಡಾಗಳಿಗೆ
ವ್ಯತ್ಯಾಸವೇ ಗೊತ್ತಾಗದಂತೆ, ತಲೆಗಳನ್ನು ಭ್ರಮಾಕೊಳದೊಳಗೆ ಅದ್ದಲಾಗಿದೆ,
ಕಟ್ಟಿದ ಉಸಿರು ಮುಕ್ತಿಗಿರುವ ಬಾಗಿಲೆಂದು ಸಕಾರಣವಾಗಿ ನಂಬಿಸಲಾಗಿದೆ.
ಕೈಕೋಳಗಳ ಹಂಗಿಲ್ಲದೆ ಜೀವಕಾಯದ ಬಂಧನಕ್ಕೆ ಈಡುಗೊಳಿಸುವ
ಕಣ್ಕಟ್ಟು ಮಾಯೆಯ ಕುತ್ತಿಗೆಯ ತುಂಬ ನೆಣಚರ್ಬಿಗಳ ಹೂವಹಾರ..
ಗಂಜಿ ಕಾಯಿಸುವ ಉಸಿರುಗಳ ಬೆನ್ನ ಮೇಲೆ ಬಿದ್ದ ಕಡುಕೆಂಪು ಬರೆಗಳು,
ಒಂದರ ತೆಕ್ಕೆಯೊಳಗೊಂದು ಬಿದ್ದು ಲಿಪಿಯಿಲ್ಲದ ಭಾಷೆಯಲ್ಲಿ ಮಾತಿಗೆ ಬಿದ್ದಿವೆ.
ಕಾವಳದ ಬಸಿರು, ಸೈತಾನನ ಅಬ್ಬರ, ದರೋಡೆಗೊಂಡ ಸ್ಮೃತಿಗಳು
ಜೈವದ ಎಂದಿನ ಕ್ರಿಯೆಯಲ್ಲದೆ ಇನ್ನೊಂದೂ ಆಗಿರಬಹುದು,
ನಾಟಕದ ಕಂಪೆನಿಯ ಸೀನರಿ ಪರದೆಗಳೋಪಾದಿಯ ಭ್ರಮೆಯ ಪೊರೆಗಳನ್ನು
ಕಣ್ಣಚರ್ಮದ ಮೇಲೆ ಹೊದೆಸುವ ಪಿತೂರಿಗಳ ಪಾತಕವೂ ಆಗಿರಬಹುದು
ಪ್ರಶ್ನೆಗಳೇಕೋ ಬೆನ್ನ ಮೇಲೆ ಬಿದ್ದ ಬರೆಗಳಿಗೆ ನೆನಪಾಗುತ್ತಲೇ ಇಲ್ಲ
ಪರಂಪರೆಯ ನೆನಪುಗಳ ಬೀಜಗಳಿದ್ದ ಸಂಚಿಚೀಲವನ್ನು
ಯಾವತ್ತೋ ಕಳೆದುಕೊಂಡ ಮಂಡಿಯೂರಿದ ಜೀವಗಳು,
ತರಗೆಲೆಯಂಥಹ ನಾಲಿಗೆಯ ಮೇಲೆ ಮೂರುಹನಿ ಇಬ್ಬನಿಯನ್ನು ಬಯಸುತ್ತಿವೆ.
ಕುಲಬೇರುಗಳ ಅಂಗಡಿಯಿಂದ ಕಡವಾಗಿ ತಂದ
ಎರಡೇ ಎರಡು ನೆನಪುಗಳ ಕಥೆ ಕೇಳುತ್ತಿದ್ದೇನೆ..
ಕಥೆಯೋ.. ರುಂಡಮುಂಡ, ರೆಕ್ಕೆಪುಕ್ಕ ಛೇಧಿಸಿದ ಇತಿಹಾಸದ
ಮಾಸ್ತಿಗಲ್ಲಿನ ಮೇಲೆ ಪಾಚಿಗಟ್ಟಿದ ಸತ್ತ ಹಸುರಿನ ಕಥೆ.
ಅಲ್ಲಲ್ಲಿ ಬಿಸುಟಲ್ಪಟ್ಟ ಇಟ್ಟಿಗೆ ಚೂರಿನಂತೆ ಈ ಕಥೆಗಳು
ಇಷ್ಟುದಿನ ಒಂದೇ ಮಣ್ಣಮನೆಯ ತುಂಡರಿಸಿದ ಜೀವದೊಳಗೆ
ಇನ್ನಾದರೂ ಮಿಟುಕುವ ಉಸಿರು ಬಚ್ಚಿಟ್ಟುಕೊಂಡು
ಚರ್ಮವಿಲ್ಲದ ಕಿವಿಗಳ ನಿರುಕಿಸುತ್ತ ನಾಲಿಗೆ ಮಸೆದುಕೊಳ್ಳುತ್ತಿದ್ದವಂತೆ
ಐತಿಹ್ಯದ ಚೀಲದೊಳಗೆ ತುರುಕಿಟ್ಟ ಕಾರಣಕ್ಕೋ ಏನೋ
ಒಂದೆರಡು ಕಥೆಗಳಿಗೆ ಗಂಟಲು ಕೆಟ್ಟಿದೆ,
ಗೊಗ್ಗರು ಶಬುದ ಮಾತ್ರ ಕಥೆಯಾಗದು..
ಮಾತುಗಳ ಹೂತಿಟ್ಟ ನಾಭಿಹಳ್ಳದ ಮೇಲೆ ಬೂದಿಯ ಕುರುಹು
ಪರಂಪರೆಯೊಳಗಣ ಹೆಣಗಳ ಮಾರುಕಟ್ಟೆಯಲ್ಲಿ
ಉಸಿರಾಡುವ ಕಥೆಗಳ ಬೆರಳು ಹಿಡಿದು, ಕೊರಳು ಮುಟ್ಟಿ
ನಾಡಿ ತಡವಿ, ಎದೆನಗಾರಿಗೆ ಕರ್ಣವೊಡ್ಡುವ ಗಿರಾಕಿಗಳು
ಇನ್ನಾದರೂ ಇಲ್ಲಿ ಪಾದವೂರಿಲ್ಲ..
ನನ್ನದೇ ಬೇರುಮೂಲದ ಕಡ ತಂದ ಕಥೆಗಳಿಗೆ ಬಾಯಿ ಹೊಲೆದು
ಕಣ್ಣುಗಳ ಮೇಲೆ ಆಮ್ಲದ ಹನಿಗಳನ್ನು ನಾಜೂಕಾಗಿ ಇಡಲಾಗಿದೆ
ಅವು ಮೂಕರ ಗ್ರಹದಿಂದ ಇಳಿದು ಬಂದವಂತೆ ಏನೋ ಹೇಳುತ್ತವೆ
ಕೇಳಿದ ನಾನು ನಿಲುಕಿಗೆ ಸಿಕ್ಕವಷ್ಟನ್ನು ಮಾತ್ರ ಆಯ್ದುಕೊಳ್ಳುತ್ತಿದ್ದೇನೆ.
ಇದ್ದ ಎರಡೂ ಆಲಯಗಳು ಅಕ್ಕಪಕ್ಕದಲ್ಲೇ, ಒಂದು ಮೂತ್ರದ್ದು, ಮತ್ತೊಂದು ಭಕ್ತಿಯದ್ದು..
ಇಲ್ಲೂ ಹುಂಡಿಯುಂಟು, ಅಲ್ಲೂ ಹುಂಡಿಯುಂಟು, ಎರಡರೊಳಗೂ ಚಿಲ್ಲರೆಯದ್ದೇ ಚಳಚಳ.
ಭುಜಕೊರಳಿನಂತೆಯೇ ಎರಡೂ ಆಲಯಗಳು ಅಂಟಿಕೊಂಡಿದ್ದರೂ..
ಪರಿಭಾವದಲ್ಲಿ ನೆತ್ತಿಗೂ ಉಂಗುಷ್ಟಕ್ಕೂ ನಡುವಿನಷ್ಟು ಅಂತರದ ಗೆರೆ
ಮೊದಲ ಆಲಯದ ಮುಂದಿನ ಜೀವಕ್ಕೆ ಬಡತನಕ್ಕಾಗಿ ಬಟ್ಟೆಯ ಕೊರತೆ
ಸ್ಕೂಟಿಯಲ್ಲಿ ತಿರುಗುವ ಮತ್ತೊಬ್ಬನ ಮೈಮೇಲೆ ಒಂದೆಳೆಯ ನೂಲು
ಇಲ್ಲಿ ಕಟ್ಟಿಟ್ಟದ್ದನ್ನು ಹೊರಚೆಲ್ಲುವ ಧಾವಂತ, ಅಲ್ಲಿ ಬಚ್ಚಿಟ್ಟದ್ದನ್ನು ಕೂಡಿಡುವ ಕಡು ಆಸೆ
ಇವನೊಟ್ಟಿಗೆ ದೇವರದ್ದು ಶತ್ರುತ್ವ, ಅವನಿಗೋ ಕುತ್ತಿಗೆಗೇ ಜೋತು ಬಿದ್ದಿದ್ದಾನೆ.
ಮುಕ್ತಿ ಭಕ್ತಿಗಳು ಅಕ್ಕಪಕ್ಕದಲ್ಲೇ, ಇಲ್ಲಿನ ಘಮಲು ನಾತವಾಗಿ, ಅಲ್ಲಿನ ನಾತ ಪರಿಮಳ,
ಲೋಕಾರೂಢಿಯೊಳಗೆ ಲೀನವಾದ ಕರ್ಪೂರದ ಹೊಗೆಗೂ,
ಪಾಯಿಖಾನೆಯ ಮುಂದೆ ಕುಳಿತವನ ಅಗ್ಗದ ಬೀಡಿಯ ಹೊಗೆಗೂ
ನಡುವೆ ಅಕಾರಣ ಪ್ರೇಮ ಹುಟ್ಟಿದ್ದನ್ನು ಕಣ್ಣಲ್ಲದವರು ಮಾತ್ರ ನೋಡಿದರು.
ಮೂತ್ರಚೆಲ್ಲುವುದೂ ಆಲಯವು, ಭಕ್ತಿ ಚೆಲ್ಲುವುದೂ ಆಲಯವೂ
ಸುಖಾಸುಮ್ಮನೆ ಬೇಜಾರಿನಲ್ಲಿದ್ದ ಗೋಡೆಮೇಲಿನ ಕೆಂಪುಜಿರಳೆಗೆ
ಅವಾಗಿನಿಂದಲೂ ಬಿಟ್ಟೂ ಬಿಡದೆ ಒಂದೇ ಅನುಮಾನ
ಆಲಯವೆರಡೂ ಒಂದೆಯೋ, ಅಥವ ಒಂದಿದ್ದದ್ದು ಎರಡೋ ?
ವಿಸರ್ಜನೆಯ ಎರಡು ಮಾದರಿಗಳನ್ನೂ ಒಂದೇ ಗೆರೆಯೊಳಗೆ
ನಿಲ್ಲಿಸುವ ಆಸೆಯೊಂದು ಮಣ್ಣೊಳಗಿನಿಂದ ಇಣುಕಿ ತುಟಿ ಸವರಿಕೊಳ್ಳುತ್ತಿರುವ
ಚಣದೊಳಗೇ, ಬಾವುಟಶೂರರ ಕೆಂಪುಕಣ್ಣೊಳಗೆ ಕೆಂಡಗಳು ಸರಿದಾಡುತ್ತವೆ
ತುಟಿ ಸವರಿಸಿಕೊಳ್ಳುತ್ತಿರುವ ಆಸೆಯು ಅವರತ್ತ ತಿರುಗಿಯೂ ನೋಡುವುದಿಲ್ಲ
