Tuesday, 25 September 2012

ಬೋಧಿಲೇರನ ಗಳಾಸು ಮತ್ತು ಕುಲುಮೆಯೊಂದರ ಸ್ವಗತ "

ಯಾವ ಆವಾಹನೆಗೂ ತಲೆಕೊಡದ ಗವ್ವೆನ್ನುವ ಬೆಳಕಿಗೂ ಅಸು ತೊರೆವ ಆಸೆ,
ಇನ್ನೆಷ್ಟೊತ್ತು ಉರಿಯುವುದು ಧಿವಿಧಿವಿಯೆಂದು, ಯಾರಿಗೂ ಬೇಡದ ಬೆಳಕದು..
ಆರಿಸುವರೂ ಇಲ್ಲದ, ಆತ್ಮವಷ್ಟೇ ಚಲಿಸುವ ಒಣಗಿದ ನೆಲದಲ್ಲಿ ಪರದೇಸಿ ಬೆಳಕು.

ಯಾರೋ ಬರುವವರಿದ್ದಾರೆ, ಗಾಳಿಬೀಸುವ ಸದ್ದಿಗೂ ಕಾಯುವ ತೆವಲು ಅಂಟುತ್ತದೆ,
ಹುಲ್ಲುಗರಿಕೆಯ ಚೂಪು ಬುರುಡೆಗೆ ಒಣಗಿದೆಲೆಯೊಂದು ಎದೆ ತಿವಿದುಕೊಂಡು ಬಿದ್ದುದು,
ಖಾಲಿ ಮುಂಡಕ್ಕೆ ಕಣ್ಣು ಕಿವಿಗಳನ್ನು ಅಂಟಿಸಿಕೊಳ್ಳುವ ಎಕ್ಕದಗಿಡಕ್ಕೂ ಆಶ್ಚರ್ಯವು..

ಒಡ್ಡಿದ ಕೈಗೆ ಬಿದ್ದಿಲ್ಲ ಮಣ್ಣು, ಯಾವಾಗ ಬೀಳುತ್ತದೋ ಸಂಕುಲವ ಪೊರೆದ ಮಣ್ಣಹುಡಿ,
ಒಳಗಿನ ಕೆಂಪುದ್ರವದೊಳಗೆ ಇಷ್ಟಾದರೂ ಬೆರೆಯಬಾರದೇ ಎಲ್ಲವನ್ನೂ ಬೆಳೆವ ಮಣ್ಣು..
ಒಳಗೊಳ್ಳುವ, ಕಾಪಿಡುವ, ಕಟ್ಟಿಡುವ, ಪ್ರೇಮಿಸುವ ಮಣ್ಣಿಗೂ ಬಂತೇ ಇಂಥ ಅಹಮಿಕೆ.

ದಾರಿಹೋಕಳ ಚಪ್ಪಲಿಯಿಲ್ಲದ ಹೆಜ್ಜೆಗುರುತುಗಳನ್ನು ಮೂಸುತ್ತವೆ ಸೀಳುನಾಯಿಗಳು,
ದಾರಿಯೂ ಮುಗಿದು, ಗುರುತೂ ಇಲ್ಲವಾದ ಬಿಂದುವಿನಲ್ಲಿ ಸುಂದರವಾಗಿ ಊಳಿಡುತ್ತವೆ,
ಜೀವ ಉಳಿದದ್ದು ಅವಳಿಗೂ ತಿಳಿಯಲಿಲ್ಲ, ಗುರುತಿಲ್ಲದ ಬಿಂದು ಇವಕ್ಕೂ ಅರ್ಥವಾಗಲಿಲ್ಲ.

ಸೆಗಣಿಯುಂಡೆಯ ಭೂಮಿ ಕಟ್ಟಿದ ಹುಳುವಿಗೆ ಅದನ್ನು ಸುಮ್ಮನೆ ಉರುಳಿಸುವ ಖಯಾಲು,
ವಿಸರ್ಜನೆಯ ಆವರ್ತಭೂಮಿ ಉರುಳುತ್ತಲೇ ತುದಿಗಳಿಗೆ ಚರ್ಮ ಬೆಳೆಯುತ್ತಿರಲಾಗಿ,
ಕಟ್ಟಿದ ಉಂಡೆ 
ಯಾವುದು, ಉರುಳುತ್ತಿರುವ ಉಂಡೆ ಯಾವುದು ಇಬ್ಬರಿಗೂ ಗೊಂದಲ.

ಗಿರಾಕಿಗಳೇ ನಾಪತ್ತೆಯಾದ ಕುಲುಮೆಯೊಂದರ ಸ್ವಗತಕ್ಕೆ ಇನ್ನೂ ಜೀವ ಸಿಗುತ್ತಿಲ್ಲವಂತೆ..
ತಿದಿಯೊತ್ತುವನೂ ಮಂಡಿಮೇಲೆ ನೊಸಲಿಟ್ಟು ಹುಟ್ಟದೆ ಇರುವವರಿಗಾಗಿ ಕಾಯುವ ರೀತಿಗೆ,
ಬೋಧಿಲೇರನ ಮಧ್ಯದ ಗಳಾಸಿನ ಎದೆಯೂ ಒಡೆದು ಚೂರೆದ್ದು ಹೋಗಿದ್ದು ಇತಿಹಾಸವು."ರಾಹಿತ್ಯದ ಒಳಗೂ ಚಿತ್ರ ಬರೆಯುವ ಇವಳು.."

ಯಾವ ಪಕಳೆಗಳ ಕೆನ್ನೆಯ ಮೇಲಿರುತ್ತವೋ ಅಂಥ ಬಣ್ಣಗಳು,
ಒಂದೊಂದನ್ನೇ ಮುದ್ದಿನಿಂದ ಆಯ್ದು ಆಯ್ದು ತರುತ್ತಾಳೆ,
ಇವಳಿಗೆ ಮಾತ್ರ ಗೊತ್ತು ಚಿತ್ರದ ಬಣ್ಣ ಆಯ್ದುಕೊಳ್ಳು ಕಲೆ,
ನಿಂತೆರಡು ಕಾಲುಗಳ ಕೆಳಗೆ ಬೇರುಗಳಿದರೂ ಇವಳ ಚಿತ್ರವೇಕೋ
ಇನ್ನೂ ಮುಗಿಯುತ್ತಿಲ್ಲ.

ಒಟ್ಟು ಬದುಕೇ ಹಾಳೆಯಂತೆ ಹರಡಿಕೊಂಡ ಪರಿಭಾವದೊಳಗೆ
ಇವೆರಡು ಗೆರೆಗಳು, ಅವೆರಡು ಬಣ್ಣ, ಬೀಸುವ ಬ್ರಶ್ಶಿನ ಚಲನೆಗೆ,
ಯಾವ ಅಂಕೆಯೂ ಇಲ್ಲ, ನೋಡುತ್ತ ಕುಳಿತವನ ನೆತ್ತಿಯ ಮೇಲೂ
ಆಗೀಗ ಸಿಡಿಯುತ್ತದೆ ಅಷ್ಟಿಷ್ಟು ಬಣ್ಣ, ಕಣ್ಣೆವೆಯ ತುಂಡುಗಳು..
ಚಿತ್ರ ಬರೆಯಲು ಕುಳಿತವಳ ಧ್ಯಾನ ನನಗೆ ನಡುಕ ಹುಟ್ಟಿಸುತ್ತದೆ.

ಕಟ್ಟಿಟ್ಟುಕೊಂಡ ಶಬ್ದಗಳು ಕಣ್ಣಮೇಲೆ ಹೂವಿಟ್ಟುಕೊಂಡು ಕಾಯುತ್ತವೆ,
ಚಿತ್ರ ನೇವರಿಸಲೆಂದೇ ಹುಟ್ಟಿದ ಬೆರಳುಗಳ ಸೊಂಟದ ಮೇಲೆ
ಸೀತಾಳೆ ಗಿಡದ ನೆರಳಿನ ಭ್ರೂಣವೊಂದು ಆಕಳಿಸುತ್ತ ಕುಳಿತು,
ಎರಡೂ ಕಣ್ಣುಗಳ ವಿಸ್ತಾರವೂ ಚಿತ್ರದಾಳೆಯ ಮೇಲೆ ಮೆತ್ತಿಕೊಂಡರೂ..
ಚಿತ್ರದೊಡತಿಯ ಆಳ ಅಗಲಗಳ ಯಾವ ಅಳತೆಯೂ ನಿಲುಕುವುದಿಲ್ಲ.

ತೇಲುವ ಇವಳ ನಿಮೀಲಿತ ನೇತ್ರಗಳ ಒಳಗೂ ಆಚೆಗೂ ಇರುವುದೇನು,
ಇಂಥ ಪರಿಯ ಮುಳುಗುವಿಕೆಗೆ ತಾವು ಕಟ್ಟಿಕೊಟ್ಟ ಚಿತ್ರದ ಬಗ್ಗೆ,
ಆಗಾಗ್ಗೆ ಹಿಗ್ಗುವ ಇವಳ ತುಟಿ ತುದಿಯ ಕವಲಿನ ಸೊಬಗಿನ ಬುಗ್ಗೆಗೆ,
ನನ್ನ ಬೆನ್ನ ಮರುಭೂಮಿಯ ತುಂಬೆಲ್ಲ ಬೆವರ ಜಲಪಾತಗಳು ಹುಟ್ಟಿ
ನಾನು ಮಗ್ಗುಲು ತಿರುಗಲೆಳೆಸಿ ನೆಲಕ್ಕೆ ಬಿದ್ದ ಹಳೆಯ ತೊಟ್ಟಿಲ ನೆನಪು.

ಇಲ್ಲದಿರುವ ಎಲ್ಲವ ಕಸಬರಿಗೆಯಿಂದ ಗುಡಿಸಿ ಮೂಲೆಗೆಸೆದ ಇವಳು
ಇಲ್ಲದಿರುವಿಕೆಗಳ ರಾಹಿತ್ಯರಾಜ್ಯದೊಳಗೆ ಚಿತ್ರ ಬಿಡಿಸುವ ತಾಕತ್ತಿಗೆ,
ಕೈಯೆತ್ತಿ ಮುಗಿಯಲು ಇರುವುದೇ ಎರಡೇ ಬೊಗಸೆಗಳೆಂಬ ಕೊರಗು.
ಚಿತ್ರಮುಗಿಸಿ ಕುಳಿತವಳ ನಡುನೊಸಲ ಗರ್ಭದೊಳಗಿಂದ ಎರಡೇ ಎರಡು
ಗೆರೆಗಳು ಜನಿಸಿ ಅಷ್ಟುದ್ದ ಹಾಳೆಯ ಚಿತ್ರಕ್ಕೆ ತುಟಿಯೊತ್ತಲು ಕೈ ಜಗ್ಗುತ್ತವೆ.

ಬರೆದಿಟ್ಟ ಚಿತ್ರದೆದುರು ನಿಂತ ನಿಲುವಿನ ಕಾಯದೊಳಗೆ ನಕ್ಷತ್ರವರಳುತ್ತವೆ.
ಪಾದಕ್ಕೆ ಮೂಡಿದ ಬೇರುಗಳ ಬಿಡಿಸುತ್ತ ಕುಳಿತ ಇವಳತ್ತ ನೋಡುವಾಸೆ.
ನಿಂತಲ್ಲೇ ಸತ್ತು ಸತ್ತಲ್ಲೇ ಮೊಳೆತು, ಇರುವೆರಡು ಕಣ್ಣತುಂಬ ಇವಳದೇ ಚಿತ್ರ.
ಅದು ಹಾಡುತ್ತದೆ, ನಡೆಯುತ್ತದೆ, ಬೇಡದ ಶಬ್ದಸಂತೆಯಿಂದ ದೂರ ನಿಂತು,
ಬಣ್ಣಗಳೊಳಗೆ ಒಂದಿಷ್ಟು ತಾವುಂಟು ಒಳಗೆ ನಡೆದು ಬಾ ಎನ್ನುತ್ತದೆ.

ನಾನು ನಡೆಯುತ್ತಿದ್ದೇನೆ, 
ಇವಳ ಚಿತ್ರದೊಳಗೆ,
ಇನ್ನಷ್ಟು ಮತ್ತಷ್ಟು ಆಳದೊಳಗೆ. Sunday, 16 September 2012

“ ರಾಟುವಾಣದ ತೊಟ್ಟಿಲೊಳಗೆ..“

ಕಡುಹಸುರು ತೊಗಟೆಯ ಹೆಸರಿಲ್ಲದ ಮರದ ಟೊಂಗೆಯೊಳಗೆ
ಒಣಗಿದೆಲೆ, ಸವುದೆಪುಳ್ಳೆ, ಅದ್ಯಾವುದೋ ಗಿಡದ ನರಗಳ ಬಲೆ,
ಇಟ್ಟು ದಿನವಾದ ಮೊಟ್ಟೆಗಳ ಕಂದುಸಿಪ್ಪೆಯತ್ತಲೇ ಕಣ್ಣು ನೆಟ್ಟ
ಒಕ್ಕಣ್ಣು ಗಿಣಿಯ ರೆಕ್ಕೆಗಳೊಳಗೆ ಮಡಚಿಟ್ಟ ನೆನಪುಗಳ ಸಂತೆ.

ದೂರವಲ್ಲದ ದೂರದಲ್ಲಿ ಯಾರೂ ಹುಟ್ಟಿಸದ ತಲಪರಿಕೆಯ ಒರತೆ,
ಪೊದೆಮುಚ್ಚಿದ ಹಳ್ಳಕ್ಕೆ ಅಡ್ಡಬಿದ್ದ ಕಾಂಡವೊಂದರ ತುದಿಗೆ ಕೂತ,
ನೆರಿಗೆ ಬಿದ್ದ ಕಣ್ಣಲ್ಲೇ ಮೋಡಕ್ಕೆ ಬಣ್ಣ ಬಳಿಯುವ ವೃದ್ಧೆಯೊಬ್ಬಳು..
ಹೊಲೆದಿಟ್ಟ ಬದುಕನ್ನು ಎಲೆಯಡಿಕೆಯ ಸಂಚಿಯಲ್ಲಿ ಹುಡುಕುತ್ತಾಳೆ.

ಐದು ತುದಿಗೂ ಮೊಳೆ ಹೊಡೆಸಿಕೊಂಡು ಆಕಾಶದಿಂದ ನೆಲಕ್ಕೆ
ಮಕಾಡೆಬಿದ್ದ ಅರ್ಧಜೀವ ನಕ್ಷತ್ರದ ತುಂಡೊಂದಕ್ಕೆ ಇನ್ನಿಲ್ಲದ ಆಸೆ.
ನಿಚ್ಚಣಿಗೆಯ ಕಟ್ಟುವ ಜೀವಕ್ಕೆ ಅದ್ಯಾವಾಗಿಂದಲೋ ಕಾಯ್ದ ಉಸುರು,
ತುಯ್ಯುತ್ತದೆ, ಅತ್ತಲೂ ಇತ್ತಲೂ ಮುತ್ತಲೂ ಎತ್ತಲೂ ಕತ್ತಲಕಾವಳ.

ಆಸೆಗೂಡೊಳಗಿನಿಂದ ತಲೆ ಹೊರಗಿಟ್ಟ ಇರುವೆಗೆ ತುಂಬುಜ್ವರ,
ಬಿಡುಬೀಸು ಬಿಸಿಲಿಗೆ ಇಟ್ಟ ಹೆಜ್ಜೆಯೇ ಸುಟ್ಟುಹೋಗುವ ಭಯ,
ಗೂಡುಮಾಡಿನ ಗೋಡೆಗಳಿಗೆ ನೆತ್ತಿಯಾನಿಸುವ ಪುಟ್ಟಜೀವಕ್ಕೆ,
ಇನ್ನೇನು ನೆಲತಬ್ಬಲು ಹೊರಟ ಮಳೆನೀರ ಮೇಲೆ ಗ್ಯಾನವು.

ಎದೆನೀವುವ ಜನರಿಗಾಗಿ ಹುಬ್ಬಿನ ಮೇಲಿಟ್ಟ ಮಡಚಿದ ಅಂಗೈಗೆ
ಆಗೀಗ ಗಾಳಿಸೋಕುವ ಪುಳಕಕ್ಕೆ ನೇಣುಹಾಕಿಕೊಳ್ಳುವ ಆಸೆ.
ಮೈ ತುಂಬ ಕಣ್ಣು ಮೆತ್ತಿಕೊಂಡ ರಾಟುವಾಣದ ತೊಟ್ಟಿಲೊಳಗೆ
ಮೆಲ್ಲಗಿಳಿದ ಕುಂಟುಕಾಲಿನ ಹುಡುಗಿಗೆ ಬದುಕಿಬಿಡುವ ಆತುರ.

Tuesday, 11 September 2012

ಇರುವುದಿಷ್ಟೇ, ಸಂಪಿಗೆಯಕೊಂಬೆ, ಇಷ್ಟುದ್ದ ನೂಲು..

ಚೌಕದ ಕಾಗದ, ನಾಲ್ಕುಮೂಲೆ, ಬೆರಳುಗಳ ಮಡಚುವ ಮೋಹದೊಟ್ಟಿಗೆ
ಎಷ್ಟೋ ವರ್ಷಗಳ ನಂತರ ಕಾಗದದ ಜಹಜು ಈಗತಾನೆ ನೆನಪಾಯಿತು..
ನಾಲ್ಕುಮೂಲೆಗೂ ನಿನ್ನ ಮೂಕ ಕಿರುನಗೆಯನ್ನು ಅಂಟಿಸಲು ನೋಡುತ್ತೇನೆ,
ಹಾಳಾದ ನಯಸು ಕಾಗದಕ್ಕೆ ಯಾವುದೂ ನೆಟ್ಟಗೆ ಅಂಟಿಕೊಳ್ಳುವುದಿಲ್ಲ.

ಖುಲ್ಲಾ ಆಕಾಶದ ಕೆಳಗೆ ಬರಿಬೆತ್ತಲು ಭೂಮಿ, ಗೆದ್ದಲುಹುಳುವಿನ ಬಾಷ್ಪ,
ಚಿಟ್ಟೆಯ ಕಾಲಿಗಂಟಿದ ಮಕರಂದದ ಸೊಡರು, ತೊಟ್ಟು ಕಳಚಿದ ಹೂವು,
ರಬ್ಬರುಮರದ ಕಾಂಡದ ಗಾಯದೊಳಗಿಂದ ಬೆಳ್ಳಬೆಳ್ಳನೆಯ ನೆತ್ತರು..
ಹಾಳು ನಯಸು ಕಾಗದಕ್ಕೆ ಯಾವುದರಿಂದಲೂ ನಿನ್ನ ಕಿರುನಗೆ ಅಂಟುತ್ತಿಲ್ಲ.

ಕೂಸೊಂದರ ಖಾಲಿಬಾಯೊಳಗೆ ತುಳುಕುವ ಜಲದ ತೊರೆಯಿಂದಲೂ..
ಕಣ್ಣಗುಡ್ಡೆಯ ತೇವ ಕಾಯುವ ರೆಪ್ಪೆಯಡಿಯ ಅಂಟಿನಿಂದಲೂ..
ತೆವಳಿದ ರಸ್ತೆಯುದ್ದಕ್ಕೂ ಚಿತ್ರವೆಬ್ಬಿಸಿದ ಬಸವನುಳುವಿನ ಅಂಟಿನಿಂದಲೂ..
ಯಾವೆಂಬ ಯಾವುದರಿಂದಲೂ ನಿನ್ನ ಕಿರುನಗೆ ಜಹಜಿಗೆ ಅಂಟುತ್ತಲೇ ಇಲ್ಲ.

ನಿನ್ನ ನಗುವನ್ನೇ ಮೆಲ್ಲಗೆ ಮಡಿಲಿಗೆಳೆದುಕೊಂಡೆ, ನಗುವಿಗೂ ಕಿವಿಯಿತ್ತಲ್ಲ..
ಕಿವಿಯ ಹಾಳೆಗೆ ಮುತ್ತಿಟ್ಟು.. ಮಂಡಿ ಮಡಚಿ ಮೊಣಕಾಲೂರಿ ಕೇಳಿದೆ.
ಅಂಟೋಲ್ಲವೇಕೆ ನೀನು ಯಾವುದರಿಂದಲೂ ಯಾವುದಕ್ಕೂ ಹೀಗೆ ಹೀಗೆ?
ನಗುವೂ ಮಾತನಾಡುತ್ತದೆ.. ಅಂಟುವ ಕ್ರಿಯೆ ಇದಲ್ಲವೋ ಹುಡುಗ.

ಅಂಟಿಕೊಳ್ಳುವುದು ನನಗೆ ಗೊತ್ತು, ಅಂಟಿಸಲೆತ್ನಿಸಬೇಡ ಯಾವುದಕ್ಕೂ..
ನಿನ್ನೆಲ್ಲ ಪೆದ್ದು ಕೆಲಸಗಳೂ ನನಗೆ ತಮಾಷೆಯಷ್ಟೇ.. ಅಂಟಿಸಬೇಡ..
ಅಂಟಬೇಕೆನ್ನುವ ವ್ಯಾಮೋಹ ಬಂದ ದಿನ ನಾನೇ ಅಂಟಿಕೊಳ್ಳುವೆ..
ಹಾಗೆಂದದ್ದೇ ಕಾಗದದ ಜಹಜಿನ ನಾಲ್ಕುಮೂಲೆಗೂ ತನ್ನನ್ನು ಮೆತ್ತಿಕೊಂಡಿತು.

ಜಹಜಾಯಿತು, ನಿನ್ನ ನಗು ತನಗೆ ತಾನೇ ಅಂಟಿಕೊಂಡಿದ್ದೂ ಆಯಿತು..
ಎಲ್ಲಿಡಲಿ ಈ ಕಾಗದದ ಜಹಜನ್ನು, ನೀರಿಗಿಟ್ಟರೆ ನೆನೆಯುವ ಭಯ,
ಕೈಯೊಳಗೇ ಇದ್ದರೆ ಮುದುಡುವ ಭಯ, ನೆಲಕ್ಕಿಟ್ಟರೆ ಕಳೆಯುವ ಭಯ..
ಜಹಜು ನೀರೊಳಗೇನೋ ಇರಬೇಕು ಸರಿ.. ಏನಾದರೂ ಆದರೆ ?

ಆದರೆಗಳ ಹಂಗು ಕಳಚಿಕೊಂಡು ಜಹಜಿಗೊಂದು ದಾರ ಕಟ್ಟಿದ್ದೇನೆ..
ಸಂಪಿಗೆಮರದ ಕೊಂಬೆಗೆ ಜಹಜಿನ ದಾರ ತೂಗುಬಿಟ್ಟು ಸುಮ್ಮನಿದ್ದುಬಿಡುವೆ,
ಎಲ್ಲ ಜಹಜುಗಳೂ ತೇಲುವುದಿಲ್ಲ, ಹಾಗೆಯೇ ಎಲ್ಲವೂ ಮುಳುಗುವುದೂ ಇಲ್ಲ,
ತೇಲದೇ ಮುಳುಗದೇ ಸಂಪಿಗೆ ಮರಕ್ಕೊಂದು ಒಡವೆಯಂತೂ ಆಯಿತು.

ಇಲ್ಲಿ ತೇಲಲು ಬೆಂಡೂ ಇಲ್ಲ, ಖುಷಿಯೆಂದರೆ, ಮುಳುಗಲು ಗುಂಡೂ ಇಲ್ಲ,
ಇರುವುದಿಷ್ಟೇ, ಸಂಪಿಗೆಯಕೊಂಬೆ, ಇಷ್ಟುದ್ದ ನೂಲು, ಕಾಗಜ್ ಕೀ ಜಹಜು.

Saturday, 1 September 2012

ಮೇಟ್ರಿಕ್ಸ್ ಸಿರೀಸ್ ನ ಮೋರ್ಫಿಯಸ್

ಮೇಟ್ರಿಕ್ಸ್ ಸಿರೀಸ್ ನ ಮೋರ್ಫಿಯಸ್ ನನ್ನ ಇಷ್ಟದ ಪಾತ್ರಗಳಲ್ಲೊಂದು. ಮೇಟ್ರಿಕ್ಸ್ ನಾಯಕ ನಿಯೋಗಿಂತ ಮೋರ್ಫಿಯಸ್ಸೇ ಇಷ್ಟವಾಗೋಕೆ ಆತನ ಮಾತುಗಳೊಳಗೆ ಝೆನ್ ತತ್ವಗಳು ನುಗ್ಗಿರುವ ಪರಿಗೆ.


ನೀರಹಾರ ಮತ್ತು ಮೊಟ್ಟೆಯಲುಗಿದ ಶಬುದ..!

ಬೆಳದಿಂಗಳ ಪುಡಿಯನ್ನು ತನ್ನ ಸುತ್ತಲೂ ಆವರ್ತವಾಗಿ ಚೆಲ್ಲಿದ ಅವಳು,
ಸುಂದರಿಮರದ ಮೊಗ್ಗಿನಂತೆ ಮಡಚಿದ ಮಂಡಿಗೆ ಗಲ್ಲ ಆನಿಸಿದ್ದಾಳೆ,
ಅವಳೆದುರು ಕುಂತ ನಾನು ಎಲೆ ಮೇಲಿನ ನೀರಹನಿಗಳನ್ನು ಹೆಕ್ಕಿ ತಂದು ..
ಒಂದೊಂದು ಹನಿಯನ್ನೂ ದಾರಕ್ಕೆ ಪೋಣಿಸುತ್ತ ನೀರಹಾರ ಹೊಸೆಯುತ್ತೇನೆ.
ನಕ್ಷತ್ರಗಳೂ ನಾಪತ್ತೆಯಾದ ಮೋಡಗಳ ಕಾಡೊಳಗೆ ಬೆಳಕಷ್ಟೇ ಇಷ್ಟು,
ಅವಳ ಕಿರುಬೆರಳ ಉಗುರು ನನ್ನನ್ನೇ ನೋಡುತ್ತ ನಕ್ಕಿದ್ದೂ ಇಷ್ಟೇ ಇಷ್ಟು..
ತುಂಬೇಹೂವಿನ ಘಮಕ್ಕೆ ಆಸೆಬಿದ್ದ ಗಿಳಿಯೊಂದು ಇಲ್ಲೇ ಗಿರಕಿ ತಿರುಗುತ್ತಿದೆ,
ಆವರ್ತದೊಳಗಿನ ಇವಳ ಜೀವಕ್ಕೆ ಪೋಣಿಸಿದ ನೀರಹಾರದ ಮೇಲೆ ಪ್ರೀತಿ.

ಬೆಳಕಿನಹಾಳೆಯ ಮೇಲೆ ರೆಪ್ಪೆಗಿಷ್ಟು ಬಣ್ಣ ಅದ್ದಿಕೊಂಡು ಹೆಸರು ಗೀಚುತ್ತೇನೆ,
ಸುಂದರಿಮರದ ಮೊಗ್ಗಿನಂಥವಳ ಹೆಸರು ಅಕ್ರಚಕ್ರವಕ್ರವಾಗಿ ಹಾಳೆಯ ಮೇಲೆ,
ಬೆರಳಷ್ಟನ್ನೇ ಆವರ್ತದಾಚೆ ದಾಟಿಸಿದ ಇವಳು ರೆಪ್ಪೆಗಂಟಿದ ಬಣ್ಣ ಒರೆಸುತ್ತಾಳೆ,
ನಾಲಿಗೆಯ ಮೇಲೆ ತೆವಳಲು ಒಂದೂ ಪದವಿಲ್ಲದೆ ಮಾತೆಲ್ಲವೂ ಕೊಲೆಯಾಗಿವೆ.

ಟಾರುಕಿತ್ತ ರಸ್ತೆಯ ಮೇಲೆ ಕುಕ್ಕರಗಾಲಿನ ಅರೆಬರೆ ಫಕೀರ ಸುಮ್ಮನೆ ಹಾಡುತ್ತಾನೆ
ಅಲ್ಲಿ ಹುಟ್ಟಿದ ಹಾಡು ಅಲ್ಲೇ ಇಷ್ಟೆತ್ತರ ಬೆಳೆದು ನಮ್ಮಿಬ್ಬರ ನಡುವೆ ಮಕಾಡೆ ಬಿದ್ದಿವೆ,
ಮೆಲ್ಲನೆದ್ದು ಬಂದ ಇವಳ ಬೊಗಸೆ ಕೈಗಳು ಆ ಎಳಸುಹಾಡಿನ ಕೆನ್ನೆ ಗಿಲ್ಲುವಾಗ,
ನನ್ನ ಕೊರಳಸುತ್ತಲೂ ನೇತುಬಿದ್ದ ಆಸೆಯ ಮೊಟ್ಟೆಗಳು ಮೆಲ್ಲಗೆ ಅಲುಗುತ್ತವೆ.

ಮೊಟ್ಟೆಯಲುಗಿದ ಶಬುದವು ಇವಳ ಕಣ್ಣಿಗೂ ಕೇಳಿಸಿ ನನ್ನತ್ತ ಬೊಗಸೆ ಚೆಲ್ಲುತ್ತಾಳೆ,
ಬಾಕಿಯಿದ್ದ ಹನಿಯನ್ನೂ ಪೋಣಿಸಿದ ನೀರಹಾರವನ್ನು ಅವಳ ಬೊಗಸೆಗಿಡುತ್ತೇನೆ,
ಅಷ್ಟರವರೆಗೂ ಕೊಲೆಯಾದಂತೆ ಬಿದ್ದಿದ್ದ ಮಾತುಗಳು ನನ್ನ ನಾಲಿಗೆಗೆ ಹತ್ತುತ್ತವೆ..
ಏನೇನೋ ಪಿಸುಗುಡುತ್ತವೆ.. ಕೇಳಿಸಿಕೊಂಡ ಇವಳ ಕಣ್ರೆಪ್ಪೆಗಳು ಮೆಲ್ಲಗೆ ನಗುತ್ತವೆ.

ಯಾರಲ್ಲೂ ಹೇಳದ ಪದ.. ಒಂದು ಪದದ ಜಗತ್ತು..

ಎಕ್ಕದ ಹೂವಿನ ಮೇಲೆ ಜೇನು ನೋಡುತ್ತಿದ್ದ ಕುರುಡು ಚಿಟ್ಟೆಯೊಂದು ಸಿಕ್ಕಿದೆ,
ಚೂರೇಚೂರು ಕಣ್ ಮುಚ್ಚೆ ಹುಡುಗಿ, ನಿನ್ನ ಸುನೀತ ರೆಪ್ಪೆಯ ಮೇಲಿಡುತ್ತೇನೆ.

ರೆಪ್ಪೆಯೊಳಗೆ ಮುಚ್ಚಿಟ್ಟುಕೊಂಡ ನಿನ್ನ ಪ್ರೀತಿಯ ತುಂಡೊಂದನ್ನು ಕಡ ಕೊಡು,
ಸೂಜಿಮೊನೆಯ ಅಂಗಳದ ಮೇಲೆ ಗಿಣಿಯ ರೆಕ್ಕೆಯಿಂದ ನಿನ್ನ ಹೆಸರು ಕೆತ್ತುತ್ತೇನೆ.

ಕಿರುಬೆರಳಿನಲ್ಲಿ ಕಿವಿಹಾಳೆಯ ಮೇಲೆ ನಿನಗೊಂದು ಪತ್ರ ಬರೆಯಲು ಅನುಮತಿ ಕೊಡು,
ಗರ್ಭದಲ್ಲೂ ಮುಗುಳ್ನಗುವ ಕೂಸಿನ ನಗುವೊಂದನ್ನು ತಂದು ನಿನ್ನ ಕೆನ್ನೆಗೆ ಅಂಟಿಸುತ್ತೇನೆ.

ಇನ್ನೆಲ್ಲೂ ಇಲ್ಲದ ನನ್ನ ಬದುಕನ್ನು ನಿನ್ನ ಬೆನ್ನ ನೆಲದ ಮೇಲೆ ಪಾತಿ ಮಾಡುತ್ತೇನೆ,
ಕಾಣುತ್ತಿಲ್ಲ ಅನ್ನಬೇಡ, ಇರು, ಕನ್ನಡಿಯ ಚೂರನ್ನು ನಿನ್ನ ಹಿಂದಣ ನೆಲಕ್ಕೆ ಹೂಳುತ್ತೇನೆ.

ನಿನ್ನ ಮೆತ್ತನೆಯ ಪಾದಕ್ಕೆ ನೋವಾಗುತ್ತದೇನೋ, ಭೂಮಿಯ ಮೇಲೂ ಕೋಪ ನನಗೆ,
ಇಗೋ ಚೆದುರಿದ ನನ್ನ ಇಡೀ ಬದುಕನ್ನು ಹೊಲೆದು ಮುಂದಿಟ್ಟಿದ್ದೇನೆ. ಒಮ್ಮೆ ಮುಟ್ಟು.

ಯಾರಲ್ಲೂ ಹೇಳದ ಒಂದೇ ಒಂದು ಪದವನ್ನು ಎದೆಯೊಳಗೆ ಹೂತಿಟ್ಟುಕೊಂಡಿದ್ದೇನೆ,
ಆ ಒಂದು ಪದದ ಜಗತ್ತಿನ ಹೆಸರು ಪ್ರೇಮ.. ಅಥವ ನನ್ನೊಳಗಿನ ಭೂಮಿಗಿಳಿದ ನೀನು..