Tuesday 25 September 2012

"ರಾಹಿತ್ಯದ ಒಳಗೂ ಚಿತ್ರ ಬರೆಯುವ ಇವಳು.."

ಯಾವ ಪಕಳೆಗಳ ಕೆನ್ನೆಯ ಮೇಲಿರುತ್ತವೋ ಅಂಥ ಬಣ್ಣಗಳು,
ಒಂದೊಂದನ್ನೇ ಮುದ್ದಿನಿಂದ ಆಯ್ದು ಆಯ್ದು ತರುತ್ತಾಳೆ,
ಇವಳಿಗೆ ಮಾತ್ರ ಗೊತ್ತು ಚಿತ್ರದ ಬಣ್ಣ ಆಯ್ದುಕೊಳ್ಳು ಕಲೆ,
ನಿಂತೆರಡು ಕಾಲುಗಳ ಕೆಳಗೆ ಬೇರುಗಳಿದರೂ ಇವಳ ಚಿತ್ರವೇಕೋ
ಇನ್ನೂ ಮುಗಿಯುತ್ತಿಲ್ಲ.

ಒಟ್ಟು ಬದುಕೇ ಹಾಳೆಯಂತೆ ಹರಡಿಕೊಂಡ ಪರಿಭಾವದೊಳಗೆ
ಇವೆರಡು ಗೆರೆಗಳು, ಅವೆರಡು ಬಣ್ಣ, ಬೀಸುವ ಬ್ರಶ್ಶಿನ ಚಲನೆಗೆ,
ಯಾವ ಅಂಕೆಯೂ ಇಲ್ಲ, ನೋಡುತ್ತ ಕುಳಿತವನ ನೆತ್ತಿಯ ಮೇಲೂ
ಆಗೀಗ ಸಿಡಿಯುತ್ತದೆ ಅಷ್ಟಿಷ್ಟು ಬಣ್ಣ, ಕಣ್ಣೆವೆಯ ತುಂಡುಗಳು..
ಚಿತ್ರ ಬರೆಯಲು ಕುಳಿತವಳ ಧ್ಯಾನ ನನಗೆ ನಡುಕ ಹುಟ್ಟಿಸುತ್ತದೆ.

ಕಟ್ಟಿಟ್ಟುಕೊಂಡ ಶಬ್ದಗಳು ಕಣ್ಣಮೇಲೆ ಹೂವಿಟ್ಟುಕೊಂಡು ಕಾಯುತ್ತವೆ,
ಚಿತ್ರ ನೇವರಿಸಲೆಂದೇ ಹುಟ್ಟಿದ ಬೆರಳುಗಳ ಸೊಂಟದ ಮೇಲೆ
ಸೀತಾಳೆ ಗಿಡದ ನೆರಳಿನ ಭ್ರೂಣವೊಂದು ಆಕಳಿಸುತ್ತ ಕುಳಿತು,
ಎರಡೂ ಕಣ್ಣುಗಳ ವಿಸ್ತಾರವೂ ಚಿತ್ರದಾಳೆಯ ಮೇಲೆ ಮೆತ್ತಿಕೊಂಡರೂ..
ಚಿತ್ರದೊಡತಿಯ ಆಳ ಅಗಲಗಳ ಯಾವ ಅಳತೆಯೂ ನಿಲುಕುವುದಿಲ್ಲ.

ತೇಲುವ ಇವಳ ನಿಮೀಲಿತ ನೇತ್ರಗಳ ಒಳಗೂ ಆಚೆಗೂ ಇರುವುದೇನು,
ಇಂಥ ಪರಿಯ ಮುಳುಗುವಿಕೆಗೆ ತಾವು ಕಟ್ಟಿಕೊಟ್ಟ ಚಿತ್ರದ ಬಗ್ಗೆ,
ಆಗಾಗ್ಗೆ ಹಿಗ್ಗುವ ಇವಳ ತುಟಿ ತುದಿಯ ಕವಲಿನ ಸೊಬಗಿನ ಬುಗ್ಗೆಗೆ,
ನನ್ನ ಬೆನ್ನ ಮರುಭೂಮಿಯ ತುಂಬೆಲ್ಲ ಬೆವರ ಜಲಪಾತಗಳು ಹುಟ್ಟಿ
ನಾನು ಮಗ್ಗುಲು ತಿರುಗಲೆಳೆಸಿ ನೆಲಕ್ಕೆ ಬಿದ್ದ ಹಳೆಯ ತೊಟ್ಟಿಲ ನೆನಪು.

ಇಲ್ಲದಿರುವ ಎಲ್ಲವ ಕಸಬರಿಗೆಯಿಂದ ಗುಡಿಸಿ ಮೂಲೆಗೆಸೆದ ಇವಳು
ಇಲ್ಲದಿರುವಿಕೆಗಳ ರಾಹಿತ್ಯರಾಜ್ಯದೊಳಗೆ ಚಿತ್ರ ಬಿಡಿಸುವ ತಾಕತ್ತಿಗೆ,
ಕೈಯೆತ್ತಿ ಮುಗಿಯಲು ಇರುವುದೇ ಎರಡೇ ಬೊಗಸೆಗಳೆಂಬ ಕೊರಗು.
ಚಿತ್ರಮುಗಿಸಿ ಕುಳಿತವಳ ನಡುನೊಸಲ ಗರ್ಭದೊಳಗಿಂದ ಎರಡೇ ಎರಡು
ಗೆರೆಗಳು ಜನಿಸಿ ಅಷ್ಟುದ್ದ ಹಾಳೆಯ ಚಿತ್ರಕ್ಕೆ ತುಟಿಯೊತ್ತಲು ಕೈ ಜಗ್ಗುತ್ತವೆ.

ಬರೆದಿಟ್ಟ ಚಿತ್ರದೆದುರು ನಿಂತ ನಿಲುವಿನ ಕಾಯದೊಳಗೆ ನಕ್ಷತ್ರವರಳುತ್ತವೆ.
ಪಾದಕ್ಕೆ ಮೂಡಿದ ಬೇರುಗಳ ಬಿಡಿಸುತ್ತ ಕುಳಿತ ಇವಳತ್ತ ನೋಡುವಾಸೆ.
ನಿಂತಲ್ಲೇ ಸತ್ತು ಸತ್ತಲ್ಲೇ ಮೊಳೆತು, ಇರುವೆರಡು ಕಣ್ಣತುಂಬ ಇವಳದೇ ಚಿತ್ರ.
ಅದು ಹಾಡುತ್ತದೆ, ನಡೆಯುತ್ತದೆ, ಬೇಡದ ಶಬ್ದಸಂತೆಯಿಂದ ದೂರ ನಿಂತು,
ಬಣ್ಣಗಳೊಳಗೆ ಒಂದಿಷ್ಟು ತಾವುಂಟು ಒಳಗೆ ನಡೆದು ಬಾ ಎನ್ನುತ್ತದೆ.

ನಾನು ನಡೆಯುತ್ತಿದ್ದೇನೆ, 
ಇವಳ ಚಿತ್ರದೊಳಗೆ,
ಇನ್ನಷ್ಟು ಮತ್ತಷ್ಟು ಆಳದೊಳಗೆ. 



No comments:

Post a Comment