ಈ ಗರಿಯ ಜೋಪಡಿಯ ಕೆಳಗೆ ಏನನ್ನೋ ಧೇನಿಸುತ್ತ ಕುಳಿತ
ಈ ಮುದುಕನನ್ನು ಚಲಿಸುವ ಕಾಲ ಯಾವತ್ತೋ ಮರೆತಿದೆ.
ಪಕ್ಕದ ದೊಡ್ಡ ಮೋರಿಯೊಳಗೆ
ಲಗಾಟಿ ಹೊಡೆಯುವ ಬಿಳಿಹುಳುವಿಗೂ
ಇವನ ಕಾಯುವಿಕೆಯ ತಳಬುಡಗಳೆರಡೂ ಪರಿಚಯವಿಲ್ಲ.
ಕಂಚಿಹೋದ ಮಡಕೆಯೊಳಗೆ ಉಳಿದ ಒಂದೆರಡು ಅಗಳುಗಳನ್ನು
ಬೆರಳುಗಳಲ್ಲಿ ಆಯ್ದು ಬಾಯಿಗೆಸೆದುಕೊಂಡು ಮನೆ ಬಿಡುವ
ಕಳಿದಜೀವದ ಮುದುಕ, ಎಂದಿನಂತೆ ರಸ್ತೆಪಕ್ಕದ ಜೋಪಡಿಯೊಳಗೆ
ಮುಖ ತಿರುವಿನಿಂತ ತಿದಿಗೊಮ್ಮೆ ವಂದಿಸಿ,
ಉಫ್ಫು ಉಫ್ಫನೆ ಒಲೆ ಊದಿ ಕೆಂಡ ಮಾಡುತ್ತಾನೆ..
ಒಲೆಯ ಒಳಗೂ ಅಲ್ಲೊಂದಿಲ್ಲೊಂದು ಇದ್ದಿಲು
ಬೇಜಾರು ಮಾಡಿಕೊಂಡು ಕೆಂಪಗಾಗುತ್ತವೆ.
ಮೂಲೆಯೊಳಗೆ ಪೇರಿಸಿದ ಕಬ್ಬಿಣದ ಸಣ್ಣ ತುಂಡುಗಳು
ಮುದುಕನ ರಟ್ಟೆಯನ್ನು ನೋಡುತ್ತ ಕೆವ್ವಕೆವ್ವನೆ ನಗುತ್ತವೆ,
ಯಾರೂ ಹೆಜ್ಜೆ ಇಡದ ಗಹ್ವರದಂಥ ಜೋಪಡಿಯೊಳಗೆ ಇವನೊಬ್ಬನೇ.
ಆಗಾಗ ಓಡಾಡುವ ಜನರು ಇವನತ್ತ ಕರುಣೆಯನ್ನು ಮಾತ್ರ ಹುಟ್ಟಿಸುವ
ನೋಟವೊಂದನ್ನು ಬಿಮ್ಮನೆ ಬಿಸಾಡಿ
ತಮ್ಮಪಾಡಿಗೆ ತಾವು ಚಲಿಸುತ್ತಾ ಇವನನ್ನು ಹಿಂದೆಯೇ ಬಿಸುಟಿದ್ದಾರೆ..
ಬಹಳ ಹಿಂದೇನಲ್ಲ.. ಐದತ್ತು ವರ್ಷಗಳಿರಬಹುದು..
ಮುದುಕನ ತಿದಿ ಸದ್ದಿನೊಂದಿಗೆ ಬದುಕುತ್ತಿತ್ತು. ಇದೇ ತಿದಿಯ ಆಚೀಚೆಗೆ
ಗುದ್ದಲಿ, ಪಿಕಾಸಿ, ಮಚ್ಚು, ಹಿಡಿಗಳು ಚೊಯ್ಯೋ ಎಂದು
ಸದ್ದು ಮಾಡಿಕೊಂಡು ಮುದುಕನ ನರವ್ಯೂಹದೊಳಗೆ
ಬದುಕನ್ನು ತುಂಬುತ್ತಿದ್ದವು..
ಕಬ್ಬಿಣದ ಇರುವನ್ನು ಬಣ್ಣದ ಪಿಲಾಸ್ಟಿಕ್ಕು ಎಡಗೈಯಲ್ಲಿ ಪಕ್ಕಕ್ಕೆ ಸರಿಸಿತಲ್ಲ,
ಆ ಸಂಕರದಲ್ಲಿಯೇ ಮುದುಕನ ಮನೆಯೊಳಗೆ ಹಸಿವು
ಮೀಸೆತಿರುವಿ, ತೊಡೆತಟ್ಟಿಕೊಂಡು ಒಳನುಗ್ಗಿತ್ತು..
ಕಳಿದ ಜೀವದ ಮುದುಕನಿಗೆ ಚಲಿಸುತ್ತಿರುವ ಕಾಲವು
ಅದರ ಕಾಲಕೆಳಗೆ ಇವನ ಬದುಕನ್ನೂ ಇಟ್ಟುಕೊಂಡ ಪರಿ
ಅರ್ಥವಾಗುವುದೇ ಇಲ್ಲ.
ಯಾರ ಕಣ್ಣಿಗೂ ಬೆದರದ ಮುದುಕನ ಜೀವದೊಳಗೆ ಇನ್ನಾದರೂ ನಿರೀಕ್ಷೆ ಸತ್ತಿಲ್ಲ..
ಮಾಗಿದ ಕಣ್ಣುಗಳಲ್ಲಿ ನೇಗಿಲು ಮಾಡಿಸಿಕೊಳ್ಳುವ, ಎತ್ತಿನಗಾಡಿಯ ಚಕ್ರ
ಮಾಡಿಸಿಕೊಳ್ಳಲು ಯಾರಾದರೂ ಬರುತ್ತಾರೆ,
ಬೆರಳಲ್ಲಿ ಆಯುವ ಅನ್ನದ ಅಗುಳುಗಳನ್ನು, ಒಂದಲ್ಲಾ ಒಂದು ದಿನ
ಅಂಗೈ ತುಂಬ ತುಂಬಿಕೊಳ್ಳಬಹುದೆಂಬ ಆಸೆಯೊಟ್ಟಿಗೆ..
ತಿದಿಯ ಮೇಲಣ ಧೂಳನ್ನು ತಲೆಗೆ ಸುತ್ತಿದ ಬಟ್ಟೆಯ ಚೌಕದಲ್ಲಿ
ಒರೆಸಿಯೇ ಒರೆಸುತ್ತಾನೆ. ಆ "ಯಾರಾದರೂ" ಇನ್ನಾದರೂ
ಯಾಕೋ ಬರುತ್ತಲೇ ಇಲ್ಲ
- ದಯಾನಂದ್ ಟಿ ಕೆ
No comments:
Post a Comment