Saturday 25 February 2012

ಪುಳ್ಳಂಗೋವಿಯೊಳಗಿಂದ ಮುರಿದ ಹಾಡು......


ಒಂದು ಅರ್ಧಸತ್ತ ರಾತ್ರಿ.. ಚೆಲ್ಲಾಡಿಹೋಗಿದ್ದ ಪದಗಳನ್ನು
ಹೆಸರು ಗೊತ್ತಿಲ್ಲದ ಮರದ ಗೋಂದಿನಿಂದ ಅಂಟಿಸುತ್ತಿದ್ದೆ..
ಬಣ್ಣಮಾಸಿದ ಪುಳ್ಳಂಗೋವಿಯೊಳಗಿನಿಂದ ಮುರಿದ ಹಾಡೊಂದು
ತೆವಳುತ್ತ ಬಂದು.. ಎದೆಯ ಮೇಲೆ ಕೂತು, ಹಣೆಯ ಮೇಲೆ
ಮೊದಲು ರಂಗೋಲಿ ಬರೆದು, ಆಮೇಲೆ ಚುಕ್ಕಿಗಳನ್ನು ಇಟ್ಟಿತು.

ಎಲ್ಲಿದ್ದಾನೋ ಹಾಡಿನೊಡೆಯ, ಯಾರವ್ವ ನಿನಗೆ ಬಸುರಾದವನು?
ಕೇಳಿದ ಪ್ರಶ್ನೆಗೆ ಮುರಿದ ಹಾಡು ಕಪ್ಪುರಸ್ತೆಯತ್ತ ಗೋಣು ಬಿಸಾಕಿತು..
ಅಲ್ಲಿ ಅವನಿದ್ದ.. ಅರ್ಧ ಕಟ್ಟಿದ ಬಂಗಲೆಯ ಮುಂದಣ ಮರಳಗುಡ್ಡೆಯ ಮೇಲೆ
ದಿವೀನು ಗಡ್ಡವನ್ನು ಭೂತಾಯ ದಿಕ್ಕಿಗೆಸೆದು ಮಾಸಿದ ಪುಳ್ಳಂಗೋವಿಗೆ
ಒಡೆದ ತುಟಿ ಅಡವಿಟ್ಟು ಇನ್ನಷ್ಟು ಮುರಿದ ಹಾಡುಗಳನ್ನು ಕಟ್ಟುತ್ತಿದ್ದ.

ಬೆಳಗಾನ ಹೊತ್ತು ಇವನು ಎಲ್ಲಿ ಹೋಗುವನೋ, ಏನು ಉಸಿರಾಡುವನೋ
ನಡೆಯುವ ದಾರಿಯಾದರೂ ಮಣ್ಣಿನದ್ದೋ, ಕಾರೆಮುಳ್ಳುಗಳ ಹಾಸಿನದ್ದೋ..
ಮುರಿದ ಹಾಡು ಉತ್ತರಿಸಲಿಲ್ಲ.. ಬಂಗಲೆಯಲ್ಲವೋ ಅದು.. ಹುತ್ತ
ಚಂದ್ರ ಸತ್ತಾಗ ಸೂರ್ಯ ಮೈಮುರಿದಾಗ ಗೆದ್ದಲಾಗುತ್ತಾನೆ..
ಸೂರ್ಯ ಸಾಯುವವರೆಗೆ ಹುತ್ತ ಕಟ್ಟುತ್ತಾನೆ.. ರಾತ್ರಿ ಹಾಡುಗಳಿಗೆ ಬಸುರಾದ.

ತಾಳಮೇಳಗಳ, ರಾಗ ಆಲಾಪಗಳ ಯಾವ ಗುಂಗಿಗೂ ತಲೆಕೊಡದೆ
ಹಾಡುಗಳಿಗೆ ಬಸುರಾಗುತ್ತಾನೆ.. ಕೈಕಾಲಿಲ್ಲದ ಹಾಡುಗಳ ಹುಟ್ಟಿಸುತ್ತಾನೆ..
ಹೀಗೆ ಹುಟ್ಟಿದ ಹಾಡುಗಳು ಎಲ್ಲೆಲ್ಲೋ ಅಲೆದು ಮತ್ತೆ ಪುಳ್ಳಂಗೋವಿ ಸೇರುತ್ತೇವೆ
ಮತ್ತೆ ಕರೆಯುತ್ತಾನೆ.. ಮತ್ತೆ ಹುಟ್ಟುತ್ತವೆ.. ಅವನ ಹರಿದ ಚಪ್ಪಲಿಯ ಸಂದಿನಲ್ಲಿ
ಇನ್ನಷ್ಟು ಪದಗಳು ಸಿಕ್ಕಿದವು.. ಆಯ್ದುಕೊಂಡು ಬಂದೆ..

ಮತ್ತದೇ ಕಾವಳ.. ನಾನು ಆಯ್ದುಕೊಂಡು ಬಂದ ಹೊಸಪದಗಳನ್ನು
ಹೆಸರಿಲ್ಲದ ಮರದ ಗೋಂದುಹಾಕಿ ಅಂಟಿಸುತ್ತಿದ್ದೇನೆ..
ಗೆದ್ದಲಿಗೂ ಹುತ್ತಕ್ಕೂ ಮಧ್ಯದ ಕಟ್ಟುವ ಪರಂಪರೆಯ ನೆನಪೂ ಇಲ್ಲದ
ಕೊಳಕುಮಂಡಲದ ಹಾವುಗಳು, ಹುತ್ತ ಸೇರುವ ಪರಿಯನ್ನೂ..
ಮುರಿದ ಹಾಡುಗಳನ್ನು ಹೆರುವ ಇವನ ಉಸುರತಿತ್ತಿಯನ್ನು ಯಾಕೋ ಗೊತ್ತಿಲ್ಲ

ನನ್ನಿಂದ ಅಂಟಿಸಲಾಗುತ್ತಿಲ್ಲ..


: - ಟಿ.ಕೆ. ದಯಾನಂದ

No comments:

Post a Comment