Friday, 10 February 2012

ಕಾಗೆಕಣ್ಣು


ಕಾಗೆಗಳೂ ಹಾರುತ್ತವೆ.. ನೋಡುವರು ಯಾರೂ ಇಲ್ಲವಿಲ್ಲಿ,
ಮೊದಲಿದ್ದಿರಬಹುದೇನೋ ಬೇರೆಯದೇ ಬಣ್ಣ,
ಬಣ್ಣಬಣ್ಣವೆಂದು ಅರಚುತ್ತ ತಮ್ಮ ತಲೆಯನ್ನೇ ಸಿಗಿದುಕೊಂಡು
ಸುಟ್ಟು ಕರ್ರಗಾದ ಜೀವದೆದೆ ಗೂಡುಗಳ ತಿದಿಗೆ ಕೈ ಅದ್ದಿ
ರುಬ್ಬಿಕೊಂಡಿವೆ ಮೈಗೆ ಬಣ್ಣವಲ್ಲದ ಬಣ್ಣ.
ಹೌದು ಕಾಗೆಗಳೂ ಹಾಡುತ್ತವೆ.. ಕಾಪಾಲಗಳ ಇಂಪುತಂಪಿನ
ಮೃದಂಗ ವಾದನದ ಅಳತೆಗೋಲುಗಳಿಗೆ ಆ ಹಾಡು ಪಕ್ಕಾಗುವುದಿಲ್ಲ.
ಇಟ್ಟ ಮೊಟ್ಟೆಯೊಡನೆ ಬೆರೆಸಿದ ಮೊಟ್ಟೆಗಳಿಗೂ ಒಂದೇ ಕಾವು,
ಮೊಟ್ಟೆಯಿಟ್ಟು ಓಡಿಹೋದವರ ಕೂಜನಕ್ಕೆ ಜಗತ್ತೇ ವಿಸ್ಮಯ.
ಜೀವಹೆಣಗಳ ಬಿಟ್ಟು ಸತ್ತಹೆಣಗಳ ಚರ್ಮ ಕುಕ್ಕುವ
ಹದ್ದೊಂದು ಇಲ್ಲಿ ಪೂಜೆಗೆ ಯೋಗ್ಯ..
ಎಂಜಲ ವಿಸರ್ಜನೆಗೆ ಹಾಡುವ ಕಾಗೆಗಳಿಗೂ ಆಹ್ವಾನ.
ಬಿಳಿಕೆಂಪು ಹಸಿರು ನೀಲಿ ವ್ಯೋಮದೆಲ್ಲ ಬಣ್ಣವೂ ಇಲ್ಲಿ ಮಾನ್ಯ,
ಕಾಗೆಯನ್ನು ಹತ್ತಿರ ಬಿಟ್ಟುಕೊಂಡೀರಾ.. ಬಣ್ಣ ಬಣ್ಣ..!
ನೀರಕಣ್ಣುಗಳನ್ನು ಎದೆ ಕವಾಟಗಳೊಳಗೆ ಅವಿತಿಟ್ಟ ಕಾಗೆ,
ಬಣ್ಣಗಳನ್ನು ಎಡಗಾಲಿನಲ್ಲೂ ಮೂಸುವುದಿಲ್ಲ..
ಎರೆಹುಳುವಿನ ಚಲನೆ, ಗೊಬ್ಬರದ ಹುಳುವಿನ ಪ್ರೇಮ,
ಗೂಬೆಗಳ ಬಸಿರು ಬಾಣಂತನಗಳನ್ನು ಮುಟ್ಟಲು
ಬೇರೆಯದೇ ಕಣ್ಣು ಟಿಸಿಲೊಡೆಯುವತನಕ..
ಜೀವಪಂಜರದೊಳಗೆ ಸಾಸುವೆ ಗಾತ್ರದ ಪ್ರೀತಿ ಹುಟ್ಟುವ ತನಕ
ಕಾಗೆ ಹಾರುತ್ತಲೇ ಇರುತ್ತದೆ..
ಆದರೆ ಯಾರೂ ಅದನ್ನು ನೋಡುವುದಿಲ್ಲ..!
- ದಯಾನಂದ್ ಟಿ ಕೆ

No comments:

Post a Comment