Tuesday, 21 February 2012

ಕಣ್ಕಟ್ಟು ಮಾಯೆ

ಅದೆಲ್ಲಿಂದ ಕಲಿತು ತಂದರೋ ಕಣ್ಕಟ್ಟು ಮಾಯೆಯನ್ನು,
ತಮ್ಮ ಕಣ್ಣನ್ನು ಮುಚ್ಚದೆಯೇ.. ಜಗತ್ತಿನ ಎಲ್ಲ ಕಣ್ಣುಗಳಿಗೆ
ಸೂಜಿದಾರವನ್ನು ಕೂಡಿಕೆ ಮಾಡ ಹವಣಿಸುತ್ತಾರೆ, ಇವರು
ಕ್ರೂರ ಕಾವಳದೊಟ್ಟಿಗಿನ ಮೈಥುನಕ್ಕೆ ಸಟಕ್ಕನೆ ಬಸುರಾದವರು.

ಇಗೋ ಇಷ್ಟು ಬೆಳಕನ್ನು ತಿನ್ನಿರಿ ಎಂದು ಅವರು ತೋರಿಸಿದ
ಬಟ್ಟಲೊಳಗೆ ಕಪ್ಪುರಾತ್ರಿಯೊಂದು ಕೈಕಾಲು ಮುರಿದು ನರಳುತ್ತಿತ್ತು
ಮಂಡಿಯೂರಿ ಕತ್ತಲು ಪಡೆದವರು ಗಸಗಸನೆ ತಿಂದ ಚಣ
ಒಳಗಣ ಪ್ರೀತಿತೊರೆಯ ಮಧ್ಯದಿಂದೆದ್ದ ತಾಮಸದ ಸೈತಾನ

ಆಹಾ.. ಸೈತಾನನಲ್ಲವಿವನು ಕಣ್ಣಿಗೂ ಎರಚುವನಲ್ಲ ಬೊಗಸೆಮಣ್ಣು
ಕಡುಬಿಳಿಯ, ತೆಳುನೀಲಿ, ಚೂರು ಕಂದು ಒಟ್ಟು ಬೆರೆಸಿದ ಸೈತಾನ
ಮಂಡಿಯೂರಿದವರ ಮಿದುಳ ನಗರಿಯೊಳಗೆ ಆಡಿದ್ದು ತಾಂಡವವೇ..
ಆದರೀ ನೃತ್ಯ, ಗಾಂಜಾ ಸೇದುವ ಇಳೆಯ ರುದ್ರನದ್ದು ಖಂಡಿತವೂ ಅಲ್ಲ..

ಕಾವಳಕ್ಕೆ ಬಸುರಾದವರ ಕುಲಪುತ್ರ ಸೈತಾನನ ಕಾಲುಗಳು
ಹೊಸಕುವುದನ್ನು ಬಿಟ್ಟು ಉಳಿದೇನೂ ಕಲಿತಿಲ್ಲ..
ಬಾಕಿಯುಳಿದ ನೆನಪುಗಳುನ್ನು ಆಯ್ದು ಆಯ್ದು ಕೊಲ್ಲುತ್ತಿದ್ದಾನೆ
ಮಂಡಿಯೂರಿದ ಜೀವಗಳ ನರವ್ಯೂಹಗಳು ನಡು ರಸ್ತೆಯಲ್ಲಿ ಅನಾಮತ್ತು ದರೋಡೆ.

ಸ್ಮೃತಿಚೀಲದೊಳಗೆ ಕಾಪಿಟ್ಟ ಸರ್ವವನ್ನೂ ತುಳಿದವನ ಪಾದಕ್ಕರ್ಪಿಸಿ
ಧನ್ಯರಾದ ಮಂಡಿಯೂರಿದವರಿಗೆ ಬಿಡುಗಡೆ ಮತ್ತು ಖೆಡ್ಡಾಗಳಿಗೆ
ವ್ಯತ್ಯಾಸವೇ ಗೊತ್ತಾಗದಂತೆ, ತಲೆಗಳನ್ನು ಭ್ರಮಾಕೊಳದೊಳಗೆ ಅದ್ದಲಾಗಿದೆ,
ಕಟ್ಟಿದ ಉಸಿರು ಮುಕ್ತಿಗಿರುವ ಬಾಗಿಲೆಂದು ಸಕಾರಣವಾಗಿ ನಂಬಿಸಲಾಗಿದೆ.

ಕೈಕೋಳಗಳ ಹಂಗಿಲ್ಲದೆ ಜೀವಕಾಯದ ಬಂಧನಕ್ಕೆ ಈಡುಗೊಳಿಸುವ
ಕಣ್ಕಟ್ಟು ಮಾಯೆಯ ಕುತ್ತಿಗೆಯ ತುಂಬ ನೆಣಚರ್ಬಿಗಳ ಹೂವಹಾರ..
ಗಂಜಿ ಕಾಯಿಸುವ ಉಸಿರುಗಳ ಬೆನ್ನ ಮೇಲೆ ಬಿದ್ದ ಕಡುಕೆಂಪು ಬರೆಗಳು,
ಒಂದರ ತೆಕ್ಕೆಯೊಳಗೊಂದು ಬಿದ್ದು ಲಿಪಿಯಿಲ್ಲದ ಭಾಷೆಯಲ್ಲಿ ಮಾತಿಗೆ ಬಿದ್ದಿವೆ.

ಕಾವಳದ ಬಸಿರು, ಸೈತಾನನ ಅಬ್ಬರ, ದರೋಡೆಗೊಂಡ ಸ್ಮೃತಿಗಳು
ಜೈವದ ಎಂದಿನ ಕ್ರಿಯೆಯಲ್ಲದೆ ಇನ್ನೊಂದೂ ಆಗಿರಬಹುದು,
ನಾಟಕದ ಕಂಪೆನಿಯ ಸೀನರಿ ಪರದೆಗಳೋಪಾದಿಯ ಭ್ರಮೆಯ ಪೊರೆಗಳನ್ನು
ಕಣ್ಣಚರ್ಮದ ಮೇಲೆ ಹೊದೆಸುವ ಪಿತೂರಿಗಳ ಪಾತಕವೂ ಆಗಿರಬಹುದು

ಪ್ರಶ್ನೆಗಳೇಕೋ ಬೆನ್ನ ಮೇಲೆ ಬಿದ್ದ ಬರೆಗಳಿಗೆ ನೆನಪಾಗುತ್ತಲೇ ಇಲ್ಲ
ಪರಂಪರೆಯ ನೆನಪುಗಳ ಬೀಜಗಳಿದ್ದ ಸಂಚಿಚೀಲವನ್ನು
ಯಾವತ್ತೋ ಕಳೆದುಕೊಂಡ ಮಂಡಿಯೂರಿದ ಜೀವಗಳು,
ತರಗೆಲೆಯಂಥಹ ನಾಲಿಗೆಯ ಮೇಲೆ ಮೂರುಹನಿ ಇಬ್ಬನಿಯನ್ನು ಬಯಸುತ್ತಿವೆ.


1 comment:

  1. ಕಣ್ಕಟ್ಟು ವಿದ್ಯೆ ಎಂದು ಹೇಳುತ್ತಾ ಜನರಲ್ಲಿ ಅಂಧಕಾರ ಮತ್ತು ಭ್ರಮೆಗಳನ್ನು ಬಿತ್ತುತ್ತಿರುವ ಮಾಂತ್ರಿಕರ ನಿಜ ಬಣ್ಣವನ್ನು ಬೆತ್ತಲು ಮಾಡಿದ್ದೀರಿ.. ಅವರು ಆ ಸನ್ನಿವೇಶಗಳ ಭೀಕರತೆಯನ್ನು ಅಮಾಯಕರ ಮೇಲೆ ಹೇರಲು ಹವಣಿಸುವ ಪರಿಯನ್ನು ಮನಮುಟ್ಟುವಂತೆ ಬಿಂಬಿಸಿದ್ದೀರಿ.. ನಿಮ್ಮ ಶೈಲಿಯೇ ನಿಮ್ಮ ಕಾವ್ಯದ ಹೆಗ್ಗಳಿಕೆ.. ಇನ್ನಷ್ಟು ಸೂಕ್ಷ್ಮ ವಿಷಯಗಳನ್ನು ನಿಮ್ಮ ಲೇಖನಿಯಿಂದ ಭೇಧಿಸಿ, ಛೇಧಿಸಿ.. ಶುಭವಾಗಲಿ..

    ReplyDelete