(ಹಿಂದೆ ಕೆಂಡಸಂಪಿಗೆಯಲ್ಲಿ ನನ್ನ ರಸ್ತೆ ನಕ್ಷತ್ರ ಕಾಲಂ ನಲ್ಲಿ ಪ್ರಕಟವಾದ ಲೇಖನವನ್ನು ಮಹಿಳಾ ದಿನಾಚರಣೆಯ ಅಂಗವಾಗಿ ಪ್ರಸ್ತುತವೆಂದು ತಿಳಿದು ಇಲ್ಲಿ ಪ್ರಕಟಿಸುತಿದ್ದೇನೆ.)
"ಒಬ್ಬ ದ್ಯಾವರೂ ಹುಟ್ಟಿಲ್ಲವಾ ಭೂಮ್ತಾಯ ಹೊಟ್ಯಾಗ?' ದೇವದಾಸಿ ಸಂತೆವ್ವ ತೆಳಗೇರಿಮಾತುಗಳು."
ಆಗ ಕೂಲಿಗ ಭಾಳ ತ್ರಾಸ ಇತ್ತು ನೋಡ್ರಿ.. ನಮ್ಮಪ್ಪನು ಚಪ್ಪಲಿ ಹೊಲೆಯೋ ಕೆಲಸಾ ಮಾಡಾಂವಾ.. ನಾವು ಒಟ್ಟಾ ಎಂಟ ಮಂದಿ ಮಕ್ಕಳು ನಮ್ ಮನಿಯಾಗ, ನಾನೇ ಹಿರಿಯಾಕಿ.. ಆಗಿನ ಕಾಲಕ್ಕ ನಮ್ಮಪ್ಪನು ೭೫ ಪೈಸಾವು ಖರ್ಚು ಮಾಡಿ ಒಂದು ಚಪ್ಪಲಿ ಹೊಲೀತಿದ್ದನ್ರೀ.. ಅದನ್ನ ಒಂದ್ರೂಪಾಯಿ ಇಪ್ಪತ್ತೈದ್ ಪೈಸಕ್ಕ ಮಾರಾಂವ. ಹಿಂಗ ಚಪ್ಪಲಿ ಹೊಲದು ಇತ್ತಾ ಶಿರೋಳ, ಮುಗಳಖೇಡ ಈ ಕಡೀಕೆಲ್ಲ ಓಡಾಡಿಕೆಂತ ಮಾರಿಕಂಡು ಬರಾಂವ. ಬಂದ ರೊಕ್ಕದಾಗ ಜ್ವಾಳಾ ತರಾಂವಾ.. ಅದ್ನ ಬೀಸುಕಲ್ಲಾಗ ಬೀಸಿ ನುಚ್ಚು ಮಾಡಿಕೇಸಿ ತಪಲೀನಾಗ ಇಟ್ಟು ಕುದಿಸಿ ಉಣ್ಣುತಿದ್ವಿ. ನಮ್ಮಪ್ಪನ ಹೆಸರು ಕಾಶಪ್ಪ ಕಲ್ಮಡಿ ಅಂತೇಳಿ, ಅವ್ವನ ಹೆಸರು ನೀಲವ್ವ ಅಂತರೀ. ಮೊದಲು ಕುಳಲಿ ಅಂತ ಒಂದೂರಿತ್ರೀ.. ಅದ ಬಿಟ್ಟು ನಾ ವಯಸ್ಸಿಗೆ ಬರೋಷ್ಟೊತ್ತಿಗೆ ಮುಧೋಳದಿಂದ ೧೪ ಕಿಲೋಮೀಟ್ರು ದೂರದಾಗ ಇರೋ ರನ್ನ ಬೆಳಗಲಿ ಅನ್ನೋ ಕಡೀಕೆ ಬಂದುವು. ಈ ಊರಾಗ ರಾಜರ ಕಾಲದಿಂದಲೂವೆ ಅದ್ಯಾರೋ ರನ್ನ ಅಂಬೋರು ಮೊದಲೀಗೆ ಪದ್ಯಾವು ಬರೆಯೋರು ಇದ್ರಂತೆ.. ಕವಿ ಚಕ್ರುವರ್ತಿ ಅನ್ನೋರಂತೆ.. ನಂಗೇನೂ ತಿಳೀವಲ್ಲದು ಅವರ ಬಗ್ಗೆ.. ಯಾರ‍್ಯಾರೋ ದೊಡ್ಡ ಮನುಸರು ಪೋಟಾ ತೆಗೆಯೋ ಡಬ್ಬಾ ಹಿಡಕಂಡು ಬಂದು ಹೋಗ್ತಾರ.. ಅವರಿವರ ಬಾಯಲ್ಲಿ ನಾ ಕೇಳಿಸಿಕೊಂಡಿದ್ದು ಇದು.
ನಮ್ ಕಡೀಗ ನಮ್ ಕುಲದ ಹೆಣ್ ಮಕ್ಕಳು ಇರ‍್ತಾವಲ್ರೀ ಅವರನ್ನ ಮುತ್ತು ಕಟ್ಟಿ ಸೂಳಿ ಬಿಡಾದು ಹಳ್ಳ್ಳಳೀಗೂ ಐತ್ರೀ.. ನಾವೇನ್ ಮಾಡನರೀ, ನಮಗಿಷ್ಟ ಇಲ್ಲದಿದ್ರೂವೆ ಊರಾಗ ಬಾಳುವಿ ಮಾಡಬೇಕಲ್ಲರಿ.. ನಮ್ ಕುಲದಾಗಿನ ಚಂದಾನ ಹೆಣಮಕ್ಕಳನ್ನ ಬಸವಿ ಬಿಟ್ಟೂ, ಸೂಳಿ ಬಿಟ್ಟು ಕುಲಸ್ಥರ ಮನೆಯಾವರು ಅವರ ಹೆಣ್ ಮಕ್ಕಳನ್ನ ಮಾತ್ರ ಮದುವಿ ಮಾಡಿ ಕಳಸತಾರ್ರೀ.. ನಾವು ಮದೂವಿ ಆಗೋ ಹಂಗಿಲ್ಲ, ಗಂಡ ಸಂಸಾರ ಅಂತ ಇರಾ ಹಂಗಿಲ್ಲ, ನನ್ನ ಮಕ್ಕಳ ಬಾಳೇವೂ ಹಿಂಗಾ ಆಗೋದು ಬ್ಯಾಡಂತ ನಮ್ಮನ್ನ ಅಂಗೆ ಹೆಂಗೋ ಜ್ವಾಪಾನ ಮಾಡದರ್ರೀ ನಮ್ ಅಪ್ಪಾವ್ರು.. ಬಸವಿ ಬಿಡತಾರ ಅಂತ ಇದ್ದೂರು ಬಿಟ್ಟಗೇಸಿ ರನ್ನ ಬೆಳಗಲೀಗ ಕರಕೊಂಡು ಬಂದಾನ್ರೀ ನಮ್ಮಪ್ಪನು. ಹಂಗಾರಾ ನನ್ನ ಬಚಾವು ಮಾಡಾಕಾ ಆಗನೇ ಇಲ್ಲರೀ ನಮ್ಮಪ್ಪಗ.
ನಮ್ಮೂರ ಹಣಮಂತರದೇವ್ರ ಓಕಳಿ ನಡೀತಿತ್ತರಿ ಅವಾಗ, ೫ ದಿನ ನಡಿತಿತ್ರೀ.. ಆಗ ಭಾಳ ಚಂದ ಇದ್ದನಲ್ರೀ ನಾನೂ.. ಮ್ಯಾಗಿನ ಕುಲಸ್ಥರು ಓಕಳಿ ಆಡಾಕ ಮಗಳ ಕಳಸಲೇ ಕಲ್ಮಡೀ ಅಂತ ಹೆದರಿಸ್ತಾ ಇದ್ದರ್ರಿ ನಮ್ಮಪ್ಪಗ. ನಾ ಒಲ್ಲೆ ಅಂದರ ಮನೇ ಮುಂದುಗಡೇನೇ ಕೆಟ್ಟ ಕೆಟ್ಟ ಬಾಸೇನಾಗ ಬೈಯಾವರು ರೀ. ಸೂಳೇರಾ.. ಓಕಳೀಗೆ ಬರಲಿಲ್ಲ ಅಂದ್ರೆ ಹೆಂಗೆ ಬಾಳೇವು ಮಾಡೀರಿ ನೋಡ್ತೀವಿ, ಅಂತೆಲ್ಲ ಬೈಯ್ಯೋವರು. ನಮ್ ಜಾತಿ ಮಂದೀ ಅವರ ಮನೆಗಳಾಗ ದನ ಹಸು ಮ್ಯಾಕೆ ಮೇಯಿಸೋಕ ಹೋಗ್ತಿದ್ದವರ್ರೀ. ಓಕಳೀಗೆ ಹೋಗಲಿಲ್ಲಂದ್ರೆ ಕೆಲಸ ತೆಗೆಯೋವರು, ಊರು ಬಿಟ್ಟು ಓಡಿಸೋವ್ರು, ಕುರೀ ಮ್ಯಾಕೆ ಕಡಿದಂಗೆ ಕಡುದು ಹಾಕ್ತಿದ್ದರ್ರೀ. ಬ್ಯಾರೆ ದಾರಿ ಇಲ್ಲದಾಂಗ ಹೋಗಲೇಬೇಕಿತ್ ನೋಡ್ರಿ. ಹಣಮಂತ ದ್ಯಾವ್ರ ಗುಡೀ ಮುಂದ ಒಂದು ಕೊಂಡ ಇರ‍್ತಿತ್ತ.. ಅದನ್ನ ನಮ್ಮ ಮಂದಿನಾ ಹೋಗಿ ತೊಳದು ಬಳದು ಕಿಲೀನು ಮಾಡಬೇಕ. ಹಲಗಿ ಬಾರಸೋ ಗಸ್ತಿಯವ್ರು ಅಂತ ಇರ‍್ತಾರ ಅವರು ನಮ್ ಕುಲದ ಹೆಣಮಕ್ಕಳನ್ನ ಮನಿ ಮನಿಗ ಬಂದು ಮೆರೋಣಿಗೆ ತಗಂಡು ಹಣಮಂತ ಗುಡೀತಾವಕೆ ಕರ‍್ಕೊಂಡು ಹೋಗೋವ್ರು. ನಾಕೂ ಕಡೆಯಾಗ ಬಾಳೇಗಿಡ ಕಟ್ಟಿರೋ ಬಣ್ಣದ ಕೊಂಡ ತುಂಬಿರೋ ಹೊಂಡದಾಗ ನಾವ ಹೆಣಮಕ್ಕಳು ನಿಂದರಬೇಕ್ರಿ, ಸುತ್ತಾನ ಸುತ್ತಾ ಮ್ಯಾಗಲ ಕುಲಸ್ಥರ ಗಂಡೂಸರು ಬಣ್ಣ ಎರಚೋವರು, ನಾವು ಎರಚಿಸಿಕೋತಾ ಹಾಂಗಾ ನಿಂದರಬೇಕಿತ್ರೀ. ನೀರಾಗ ನೆಂದು ನಮ್ಮ ಮೈ ಎಲ್ಲ ಹಂಗಂಗೇ ಕಾಣ್ತಿರ‍್ತದ.. ನೀವಾ ಲೆಕ್ಕಾ ಹಾಕ್ಕೋರೀ ನಮ್ ಪಾಡು ಏನಾಗಿರತೇತಿ ಅಂತ. ಓಡಿ ಹೋದ್ರೂ ಬಿಡಾಣಿಲ್ಲ, ಅಟ್ಟಿಸಿಕೋತಾ ಬಂದು ನೀರು ಗೊಜ್ಜತಾರ (ಎರಚುತ್ತಾರೆ) ಹಿಂಗ ಓಕಳಿ ಆಡಾಕಂತಲೇ ನಮ್ ಕೆಳ ಕುಲಸ್ಥರ ಮನೆಗಳಿಗ ಪಾಳಿ ಹಚ್ಚಿರತಾರ. ಓಕಳಿ ಮುಗಿದ ಮ್ಯಾಲ ಹಣಮಂತ ದ್ಯಾವರಿಗೆ ಪೂಜೆ ಮಾಡ್ತಾರು, ಉಪ್ಪ ಊದಿನಕಡ್ಡಿ ಹಚ್ಚಿ ಪೂಜಾರಿ ಕೈಗ ಕೊಡ್ತೀವ.. ನಾವು ಗುಡಿ ಕಟ್ಟೆ ಹತ್ತಾಂಗಿಲ್ಲ ನೋಡ್ರಿ. ಕೆಳಗಾ ನಿಂತು ಕೈ ಮುಗೀತೇವು. ಆಮ್ಯಾಲ ಮ್ಯಾಗಳ ಕುಲಸ್ಥರು ಅವರವ್ರಿಗೆ ಇಷ್ಟ ಆದ ಹೆಣಮಕ್ಕಳ ಕೂಟೆ ಕರಕೊಂಡು ಹೋಯ್ತಾರಾ. ಮುತ್ತು ಕಟ್ಟಿಸಿಕೊಂಡ ಮ್ಯಾಲ ಓಕಳಿ ಆಡಿದ ಮ್ಯಾಲ ಆಕಿ ಬಸವಿ ಆಗ್ತಾಳ. ಸಿಕ್ಕ ಸಿಕ್ಕೋರೆಲ್ಲ ಹರಕೊಂಡು ತಿನ್ನೋಕೆ ಬಾಳೆ ಎಲೀ ಆಗ್ತಾಳ.
ಈ ಬಸವೀ ಬಿಡೋದು ಅಂತ ಐತಲ್ರೀ.. ಯಾವ್ ಕಾನೂನು ಬರದ ಮಗನಾ ಬಂದು ನರಾ ಹರಕೊಂಡ್ರೂ ಸುತ ಇನ್ನೂ ನಿಂತಿಲ್ ನೋಡ್ರಿ. ಅವಾಗೇನಿತ್ತು.. ಇವಾಗ್ಲೂ ಹಂಗೇ ಅದ. ನಂದೂ ಇದೇ ಕಥಿ ಆತು ನೋಡ್ರಿ ಮತ್ತ. ಊರಾಗಿನ ಮ್ಯಾಗಳ ಕುಲಸ್ಥರೆಲ್ಲ ನನ್ನ ಹರಕೊಂಡು ತಿಂದ್ರೂ.. ದುಡ್ಡಿಲ್ಲ ಕಾಸಿಲ್ಲ.. ಪುಗಸಟ್ಟೆ ಮಾಲದೀನಲ್ರೀ.. ಹಂಗಾಗಿ ಕಂಡ ಕಂಡ ಹಡಬೇ ಮಗನೆಲ್ಲ ಎಳಕಂಡು ಹೋಗಾವನೆ ನನ್ನ. ಬದಲೀಗೆ ನುಚ್ಚೋ ಜ್ವಾಳವೋ.. ಅವರು ಕೊಟ್ಟಂದ್ರೆ ಉಂಟು ಇಲ್ಲಾಂದ್ರ ಇಲ್ಲ. ಬಸವೀ ಇದೀಯಲ್ಲಬೇ.. ನೀ ಇರಾದ ನಮ್ ತೀಟಿ ತೀರಿಸಾಕ ಅಂತ ನಗೋವರು. ಹೊಟ್ಟಿಗಿ ಹಿಟ್ಟು ಬೇಕಲ್ರೀ.. ಊರು ಬಿಟ್ಟು ಬಸ್ ಹತ್ತಗಂಡು ಬಸ್ ಸ್ಟಾಂಡುಗಳಾಗ ದಂಧಿ ಮಾಡಾಕ ಶುರು ಮಾಡಿದಿ. ಅದೂ ಒಂದೋಸು ದಿನ ನಡೀತು. ೫೦-೧೦೦ ಕಡೀಗೆ ಇಪ್ಪತ್ತು.. ಊರಿಗ ಹೊಳ್ಳಿ ಹೋಗಾಕ ಬಸ್ ಚಾರ್ಜಿಗಾರ ಆಗಲಿ ಅಂತ ಮೈ ಹಾಸಿಬಿಟ್ಟೇನ್ರೀ.. ಪೋಲೀಸುರು ತಿಂದ್ರು, ರವಡೀಗೂಳು ತಿಂದ್ರು.. ಅವರಿಗೆಲ್ಲ ತಿನೂಸಿ ಮಿಕ್ಕಿದ್ದು ನನಗೆ. ಕಡೀಗೆ ಇದ್ಯಾತರ ಬಾಳು ಅನಿಸಿಬಿಡಾದು. ಒಂದಿನಾ ಬಾಂಬೇದಾಗ ಧಂಧೆ ಮನೇಗೋಳು ಇರತಾವ, ಅಲ್ಲಾದರೂ ಹೋಗನ ನಡಿಯಬೇ, ಈ ಊರು ಬ್ಯಾಡ, ಈ ಜನಾ ಬ್ಯಾಡ, ಹರದೋಗಿ ಆಗೇತಿ ಎಲ್ಲಿ ಬಿದ್ದರೇನು ನಮಗ.. ಅಂತ ನನ್ ಕೂಟ ಇದ್ದ ಗೆಣತೀರು ಅಂದ್ರು. ಸರಿ ಅಂತೇಳಿ ಬಾಂಬೇದಾಗ ಒಂದು ದಂಧೇ ಮನೀ ಹೊಕ್ಕಂಡವಿ. ಭಿಂಢಿಚಾಳ್, ಪತ್ರಚಾಳ್ ಅನ್ನಾ ಕಡೇ ಆ ದಂಧೆ ಮನೀ ಇತ್ತು, ಹೋಗಿ ನೋಡಿದೆನ್ರೀ.. ಯಪ್ಪಾ.. ಇದೇನು ದೇಸವೋ ಹಣಮಂತನೇ ಅನ್ನಾ ಹಂಗಾಯ್ತು ನೋಡ್ರಿ.. ಮುಸಲರು, ಮರಾಠ್ರು, ಒಡ್ಡರು, ಕೊರಮರು, ಹಿಂಗೆ ಎಲ್ಲಾ ಜಾತೀ ಹೆಣಮಕ್ಕಳೂ ಅಲ್ಲೇ ಇದ್ದವರೀ. ಗರವಾಲಿ ಮನೆ ಅನ್ನತಾ ಇದ್ರು ಅದಕ್ಕ.. ಮನೀ ಒಳಗ ಬಂದ್ರ ಅಲ್ಲಿ ಒಂದೊಂದು ಖೋಲಿ (ಕೋಣೆ) ಇರತಿದ್ವು.. ನಮಗಾ ಒಂದೊಂದು ಖೋಲೀ. ಗಿರಾಕಿಗೋಳ ದುಡ್ಡಿನಾಗ ಗರವಾಲೀಗೆ ಒಂದು ಪಾಲು ನಮಗೊಂದು ಪಾಲು ಅನ್ನೋ ಥರ ಅದೂ.
ಗರವಾಲೀ ಮನ್ಯಾಗ ಎರಡು ಥರ ಸಂಪಾದನೆ ಇರತಿತ್ತು, ಒಂದು ಮೈ ಹಾಸೋದು, ಇನ್ನೋಂದ ಡಾನ್ಸು ಮಾಡಾದು, ನಾ ಚಾಲೂಕಿದ್ದನಲ್ರೀ.. ಯಾವ ಹಿಂದೀ ಸಿನುಮದ ಹಾಡು ಬಂದ್ರೂ ಕಲತುಬಿಡತಿದ್ದೆ.. ಜನಾ ನೋಟು ಎಸೆಯೋರು.. ಗರವಾಲೀ ಮನೆಯಾಘಿಂದ ವರುಸಕ್ಕ ಒಂಡೆಲ್ಡು ಸಲ ಊರೀಗೆ ಹೋಗಾಕ ಬೀಡೋವರು. ಹಂಗೇ ಒಂದ್ಸಲ ಊರಿಗೆ ಹೋಗೋವಾಗ ರೇಡಿಯೋವು ತಗೊಂಡು ಹೋದನ್ರೀ.. ಅಲ್ಲೀಮಟ ನಮ್ಮೂರಾಗ ರೇಡಿಯೋವು ಸುದ್ದೀನೇ ಇರಲಿಲ್ಲ ನೋಡ್ರಿ.. ಜನಾ ರೇಡಿಯೋ ಹಚ್ಚಿದರ.. ರೇಡಿಯೋ ಒಳಗೂ ಯಾರೋ ಜನಗೋಳು ಕುಂದರಿಕೊಂಡು ಪದಾ ಏಲ್ತಾರು ಅಂತ ನೋಡೋವ್ರು.. ಜನಾ ಹ್ಯಾಂಗ ಬರೋವ್ರು ಅಂದ್ರ ರೇಡಿಯೋ ನೋಡಾಕ ನಮ್ಮನೀ ಅಂಗಳಾನಾ ತುಂಬಿ ಹೋಕ್ಕಿತ್ತು. ನಮ್ಮ ರಬಕವೀ ಜನಕ್ಕ ರೇಡಿಯೋ ಅಂದ್ರ ಏನು ಅಂತ ಗೊತ್ತು ಮಾಡಿದ್ದು ನಾನಾ ನೋಡ್ರಿ.. ಹಿಂಗೇ ಒಂದ ಇಪ್ಪತ್ತ್ ವರ್ಷ ಹ್ವಾದವು. ನಂಗೂ ಈ ಮೈ ಮಾರೋ ದಂಧೀ ಬ್ಯಾಡ ಅನಸಾಕ ಹತ್ತತು. ದುಡಿದ ದುಡ್ಡನಾಗ ನನ್ನ ತಂಗೇರು ತಮ್ಮದೀರು ಮದುವಿ ಮಾಡಿ ಕೊಟ್ಟನಿ. ಯಾರಿಗೋ ಹ್ಯಂಗೋ ನಂಗೂ ಮಕ್ಕಳುಳಾದವು, ಅಪ್ಪೆಲ್ಲಬೇ ಅಂದ್ರ ತೋರಿಸಾಕ ಸುತ ನನಗ ಅವರ ಮಕಾ ನೆಪ್ಪೀಗೆ ಬರವಲ್ಲದು. ಹೆಂಗೋ ಸಾಕಿದೆ ಅವರಿಗೂ ಮದುವಿ ಆತು. ಇಬ್ಬರು ಮೊಮ್ಮಕ್ಕಳದಾರ.. ಇವು ಮೂರ್ ದಿನ ಸಾಲಿಗೋದರ ಮೂರು ದಿನ ಕೆಲಸಕ್ಕ ಹೋಕ್ತತಿ. ನಾವು ನಾಕು ಮಂದಿ ಹೆಣಮಕ್ಕಳಾಗ ಇಬ್ಬರನ್ನ ಮುತ್ತು ಕಟ್ಟಿ ಬಸವಿ ಬಿಟ್ಟಿದ್ರು.. ನನ ತಂಗೀ ರೇಣುಕಾ ಅಂತಾ.. ಆಕೀನಾ ಸೂಳಿ ಬಿಟ್ಟಾರ.. ಅವಳ ಮಗಳೂ ಈಗ ವಯಸ್ಸಿಗೆ ಬಂದ ಮ್ಯಾಲ ಸೂಳಿ ಬಿಟ್ಟಾರ.. ಕಮಲವ್ವ ಅಂತಿದ್ಲು ಆಕಿ ಸಣ್ಣಾಕೀನಾಗೇ ಸತ್ತು ಹ್ವಾದಳು.. ಸೂಳೀರ ಜಗತ್ತಾ ಇದು.. ಇದರಾಗೇ ನಾವು ಬೆಳದವಿ, ನಮ್ಮವ್ವ ಬೆಳದಳು, ನನ್ನ ಮಗಳು ಬೆಳದಳು, ಸಂಸಾರ ಕಟಕೊಳಾಕ ಮಾತ್ರ ಈ ಮ್ಯಾಗಣ ಕುಲಸ್ಥರು ಬಿಡವಲ್ಲರು. ಅವರ ಮನೀ ಹೆಣಮಕ್ಕಳು ಚಂದ ಚಂದನ ಗಂಡುಮಕ್ಕಳ ಕೂಟೆ ಸಂಸಾರ ಮಾಡಿಕೋತಾರಾ.. ನಮ್ಮನೀ ಹೆಣಮಕ್ಕಳಿಗೆ ಯಾಕೋ ಯಪ್ಪ ಇಂಥಾ ಬಾಳೇವು..? ಮೈಯಾಗ ಖಂಡ ಇರೋತನ ಚಲೋ, ಆಮ್ಯಾಲಿನ ನಮ್ಮ ಪಾಡು ನಾಯಿಬಾಳು ಆಗಿ ಕುಂತೇತಿ..
ನಮ್ಮ ಕಥೇವು ಬಿಡ್ರವಾ.. ಈಗಿನ ಹೆಣಮಕ್ಕಳ ಕಥೇವು ನೋಡ್ರಿ.. ಮುತ್ತು ಕಟ್ಟೋರನ ಜೈಲಿಗಾಕ್ಕೀವಿ ಅಂತಾರ ಸರ್ಕಾರದೋರು, ಯಾವೊಬ್ಬನೂ ನಮ್ಮ ಕಡೆ ತಿರುಗಿ ನೋಡೋವನು ಇಲ್ಲದಂಗ ಕಾಡುಬಾಳೇವು ಆಗೇತಿ ನಮದು. ಕಾನೂನು ಮಾತಾಡೋ ಹಡಬೇಮಕ್ಕಳು ಒಬ್ಬರಾದ್ರೂ ಈ ಹರಕುಬಾಳ ನೋಡಾರಾ? ಮುತ್ತು ಕಟ್ತೀವಿ, ದೇವದಾಸೀ ಮಾಡ್ತೀವಿ, ಬಸವಿ ಬಿಟ್ಟೇವಿ ದೇವರ ಕೂಸ ನೀ ಅಂದು ನಮ್ಮ ಹೆಣಮಕ್ಕಳನ ಹುರಿದು ಮುಕ್ಕಿ ತಿನ್ನಕ್ಕ ಹತ್ಯಾರ. ಹೆಣ ಮಗಾ ಆತು ಅಂದ್ರೆ ಪೇಟೆ ಕಡೆಯೋರು ಹೊಟ್ಟೆ ಕುಯ್ಯಿಸಿಕೋತಾರಂತ, ಇಲ್ಲಿ ಬಂದು ನೋಡ್ರಪಾ ನಮ್ಮ ಊರುಗಳಾಗೆ ಹೆಣಮಗಾ ಆತು ಅಂದ್ರೆ ಹಬ್ಬಾ ಮಾಡತಾ ಅದಾರು. ಹೆಣ್ಣಗೂಸ ಹುಟ್ಟಿದರ, ಅದು ಬಾಂಬೇಗ ಹೋಕ್ಕತೆ, ಅಲ್ಲಿ ಮೈ ಮಾರಿಕಂಡಾದ್ರೂ ನಮ್ಮನ್ನ ಸಾಕತೇತಿ ಅಂತ ಕುಸೀ ಪಡೋ ದರಬೇಸಿ ಪರಸ್ಥಿತಿ ಬಂದೇದ ನಮಗ. ಇಲ್ಲುಟ್ಟೋ ಯಾವ ಹೆಣಮಗಾನೂ ಇವತ್ತಿನ ಮಟಾ ಬಸವೀ ಆಗದಂಗೆ ಬಚಾವು ಮಾಡಾಕಾ ಒಬ್ಬ ದ್ಯಾವನೂ ಹುಟ್ಟಿಲ್ಲವಾ ಭೂಮ್ತಾಯ ಹೊಟ್ಯಾಗ? ಹೆಣಮಗಾ ಮೈ ನೆರೀತಂದ್ರ ಬಾಂಬೇ, ಪೂನಾ, ಸಾಂಗ್ಲೀನಾಗಿಂದ ಓಡಿ ಬತ್ತಾರ ಗರವಾಲಿಗೋಳು, ಊರಿಗೆಲ್ಲ ಊಟ ಹಾಕಸಿ ಬೆಲ್ಲ ಹಂಚಾಕ ಕಾಸು ಬೇಕಲ್ಲಪಾ.. ಗರವಾಲೀಗೋಳು ಕೊಡತಾರಾ ಹೆಣಮಕ್ಕಳ ಹೆತ್ತೋರಗ! ಸಿನುಮ ನೋಡಕೆ ತಿಕೇಟ ಮಾಡತರಲ್ಲ, ಹಂಗೇ ಊರಾಗಿನ ಮ್ಯಾಗಣ ಕುಲಸ್ಥರು ಮೈ ನರದ ಹೆಣಮಗಾನ ದವಡೀಗ ಹಾಕ್ಕೊಂಡು ಅಗದು ಬಿಸಾಕಿದ ಮ್ಯಾಲ ಗರವಾಲಿ ಕೊಟ್ಟ ಕಾಸು ತೀರಿಸಾಕ ಹಸೀ ಮೈಯ ಹೊತಗಂಡು ಬಾಂಬೇಗ ಹೋಗತದ ಹೆಣ್ಣಗೂಸ. ಅಲ್ಲೊಂದೆರಡು ವರ್ಷ ಕಂಡ ಕಂಡೋರ ಕೆಳಗ ಬಿದಕೊಂಡು, ನಾಕು ಕಾಸು ಕಂಡು, ಬತ್ತಾ ಚೈನು, ಬಳೀ, ಒಳ್ಳೇ ಬಟ್ಟೀಬರೀ ಹಾಕ್ಕಂಡು ಬತ್ತದ.. ಮೈ ನರೆಯೋ ಹೆಣ್ಣಕೂಸಗಳಾದ್ರೂ ಏನ ಮಾಡ್ತಾವ.. ಅಕ್ಕಾ ಬಂದಾಳ.. ಬಟ್ಟೀಬರೀ, ಚೈನು, ಬಳೀ ಎಲ್ಲ ತಂದಾಳ.. ನಾವೂ ಹೋಗಮಿ ಬಾಂಬೇಗ ಅನಸತದ ಅವುಕ್ಕ. ತಿನ್ನಾಕ ಒಂದು ಮುರುಕ ಜ್ವಾಳದ ರೊಟ್ಟೀನೂ ಇಲ್ಲವಲ್ಲ ಮನ್ಯಾಗ.. ರೊಟ್ಟಿ ಸಿಗತೈತಿ ಅಂತ ಬಾಂಬೇ ಬಸ್ ಹತ್ತುತಿದಾವಾ ನಮ್ಮ ಹೆಣಗೂಸುಗಳು..
ಬಾಂಬೇಗ ಹೋದಾವು ವರುಸಾನ ಕಾಲ ಇದ್ದು ಹೊಳ್ಳಿ ಬರೋವಾಗ ಮೈ ತುಂಬಾನ ಜಡ್ಡು ಹೊತಗಂಡು ಬರತಾವು.. ಬಂದ ಆರೇಳು ತಿಂಗಳಾ ಅಷ್ಟೆ. ಅದೆಂಥೆಂಥಾ ಜಡ್ಡು ಬರತಾವೋ ನಾ ಕಾಣಿ, ನರಳೀ ನರಳೀ ಸಾಯ್ತಾವೂ. ಯಾರ‍್ಯಾರಿಗೋ ಹುಟ್ಟಿದ ಕೂಸಗಳು, ಕೇಳಾಕ ದಿಕ್ಕೂ ದೆಸೀ ಇಲ್ಲದಂಗ ಬೀದಿಗೊಂದು ಪಾಲಾಗ್ಯಾವ. ಅವ್ವಿಲ್ಲ, ಅಪ್ಪಿಲ್ಲ, ಹೆಣಗೂಸಾದ್ರ ಇನ್ನ ಹತ್ತೊರಸ ಕಳದ ಮ್ಯಾಲ ಅದರ ಕಥೆಯೂ ಇಷ್ಟಾ.. ಗಂಡುಗೂಸಾದರ ಕಳತನವೋ, ಕೊಲೆಯೋ, ಮಾಡಬಾರದ್ದು ಮಾಡಕಂಡು ಅರ್ಧ ಹುಡೂಗರನ್ನ ಪೋಲೀಸರೇ ಹೊಡೆದಾಕಾತಾರ.. ಇನ್ನರ್ಧ ಊರು ಬಿಟ್ಟು ದೇಸಾಂತಾರ ಹೋಗ್ಯಾವ.. ಇದ್ನೆಲ್ಲ ನೋಡೀ ನೋಡೀ ನನ್ನ ಕಣ್ಣೂ ಇಮರೋಗಿ ಇವತ್ತಗೋ ನಾಳಗೋ ನನ್ನ ಗೋಣು ವಾಲಿಕೋತದ, ಹಳ್ಳಾ ಅಗದು ಮುಚ್ಚತಾರ. ಜನಮಾ ಅಂತ ಒಂದಿದ್ರ ಹೆಣ ಜನಮ ಬಿಟ್ಟ ಬ್ಯಾರೆ ಯಾವುದಾರ ಜನಮ ಕೊಡೋ ಹಣಮಂತನೇ ಅಂತ ನಾನೂ ಮಣ್ಣಾಗ ಮಕ್ಕೊಂಡೇನ.. ಇದಾ ನೋಡ್ರಿ ನಮ್ಮ ಕಥಿ.. ಕೇಳಕಂಡು, ಬರಕೊಂಡು ಏನ ಮಾಡೀರಿ.
ಕೆಂಡಸಂಪಿಗೆಯಲ್ಲಿ ಈ ಲೇಖನ ಓದಲೂ ಪ್ರತಿಕ್ರಿಯೆ ಗಮನಿಸಲೂ ಇಲ್ಲಿ ಕ್ಲಿಕ್ಕಿಸಿ
ಕೆಂಡಸಂಪಿಗೆಯಲ್ಲಿ ಈ ಲೇಖನ ಓದಲೂ ಪ್ರತಿಕ್ರಿಯೆ ಗಮನಿಸಲೂ ಇಲ್ಲಿ ಕ್ಲಿಕ್ಕಿಸಿ
This comment has been removed by the author.
ReplyDeleteಜಗತ್ತಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಯಾಕೆ ಆಚರಣೆ ಬಂದಿತು ಅನ್ನೋದಕ್ಕೆ ಅದರ ಹಿಂದಿನ ಮರ್ಮ ಸತ್ಯಗಳೇ ನಮ್ಮ ಮುಂದೆ ನಿಂತಿವೆ. ಬೀದಿಯಲ್ಲಿ ಮಹಿಳೆಯ ಬಗ್ಗೆ ಸಮಾರಂಭ-ಭಾಷಣ ನಡೆಯುತ್ತಿದೆ. ಇಲ್ಲಿಯ ನಮ್ಮ ತಾಯಿ ಸೂಳೆ ಸಂತೆವ್ವನಂತಹ ಮುತ್ಸದ್ಧಿ ಜೀವದ ಬಗ್ಗೆ ಸೊಲ್ಲೆತ್ತುವವರು ಯಾರಿದ್ದಾರೆ?. ಅತ್ಯಾಚಾರ-ಅನಾಚಾರಕ್ಕೆ ಹಾಸಿಗೆಯಾದ ಒಂದು ಹೊತ್ತಿನ ಅನ್ನದ ಆಸೆಗೆ ಬಲಿಯಾದ ಅಮ್ಮಂದಿರ ಬಗ್ಗೆ ಯೋಚಿಸುವವರು ಯಾರಿದ್ದಾರೆ? ಹಣಕ್ಕೆ ಹೆಣವಾದ ಹೆಣ್ಣು ಮಗಳಿಗೆ ನ್ಯಾಯ ಕೊಡುವವರು ಯಾರಿದ್ದಾರೆ? ಇವತ್ತು ಧರ್ಮದ ಬಗ್ಗೆ, ಜಾತಿಯ ಬಗ್ಗೆ , ಪಂಗಡದ ಬಗ್ಗೆ, ವೇದಗಳ ಬಗ್ಗೆ ವಾದ ಮಾಡುವವರು ತಮ್ಮನ್ನೇ ಪೊರೆವ ಹೆಣ್ಣು ಗರ್ಭದ ಅಳಲನ್ನು ಅರಿತವರು ಇದನ್ನು ಆಲೋಚಿಸಬೇಕು. ಮಹಿಳಾ ದಿನಾಚರಣೆ ಸಮಾಜದಲ್ಲಿ ಒಂದು ದಿನದ ಸಂಭ್ರಮವಾಗಿ ಕಾಣುವಾಗ ಮನೆಯಲ್ಲಿ ತನ್ನನ್ನೇ ಹೆತ್ತ ತಾಯಿ ಹೆಣ್ಣು ಅಂತ ಯಾರೂ ಗುರುತಿಸುವುದಿಲ್ಲ. ಮನೆಯಲ್ಲಿರುವ ಹೆಣ್ಣು ಜೀವಗಳಿಗಿಂತ ಬೀದಿಯಲ್ಲಿ ಅವರ ಹೆಸರಿನ ದಿನಾಚರಣೆಗೆ ಕೊರಳಿಗೆ ಹೂಮಾಲೆ ಹಾಕಿಸಿಕೊಳ್ಳುವವರ ಸುದ್ದಿ ಪತ್ರಿಕೆಯಲ್ಲಿ ಓದುವಾಗ ವಾಂತಿ ಬರುತ್ತದೆ.
ReplyDeleteಇದು ಹೆಣ್ಣನ್ನು ದೇವತೆ ಅಂತ ಭಾವ ಚಿತ್ರ ಮಾಡಿ , ಭಗವತಿ ಅಂತ ಅರೆನಗ್ನ ಮೂರ್ತಿ ಮಾಡಿ, ಮಾರಿಯಮ್ಮ ಅಂತ ರೌದ್ರಾವತಾರದ ರಾಕ್ಷಸತ್ವ ನೀಡಿ ಪೂಜಿಸಿದ ಅಖಂಡ ಭಾರತೀಯ ಸಂಸ್ಕೃತಿ. ಇವತ್ತಿಗೂ ತನ್ನ ಮಕ್ಕಳಿಗಾಗಿ, ಕುಟುಂಬದ ಹಸಿವಿನ ಹೊಣೆಗಾರಿಕೆಗಾಗಿ ಹೆಣ್ಣು ಮಾಂಸವಾಗುತ್ತಿದ್ದಾಳೆ. ವಿಶ್ವ ಮಹಿಳಾ ದಿನಾಚರಣೆಯ ಅರ್ಥವೇನು? ಸಮಾರಂಭದಲ್ಲಿ ಮಹಿಳೆಯರ ಪಾಲು ಇದೆ. ಅದಕ್ಕೆ ಚಪ್ಪಾಳೆ ತಟ್ಟುತ್ತಿದ್ದಾರೆ ಗಂಡಸರು. ಅದಕ್ಕೊಂದು ಕಾನೂನು ತರುತ್ತಿದೆ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಿದ ಸರಕಾರಗಳು. ಅದರಂತೆ ಬೆತ್ತಲಾಗಿದೆ ಕಾನೂನು ನಿರ್ಮಿಸುವವರೇ ಬೆತ್ತಲಾದ ಹಲವು ಮುಚ್ಚುಮರೆಯಿಲ್ಲದ ಬೆತ್ತಲೆ ಘಟನೆಗಳು.
ಮಾನ್ಯ ದಯಾನಂದರು ಸಕಾಲಿಕ ಲೇಖನವನ್ನು ಇಲ್ಲಿ ಹಾಕಿದ್ದು ಕಂಡು ಮಮ್ಮಲ ಮರುಗುತ್ತವೆ ಸೂಳೆ ಸಂತೆವ್ವನ ಬದುಕು. "ಸೂಳೆ" ಅಂತ ಕನ್ನಡ ಸಾಹಿತ್ಯ ಪದ ಭಂಡಾರದ ಸೃಷ್ಟಿಗೆ ನನ್ನ ಧಿಕ್ಕಾರ...! ಅದರ ಭಾವಕ್ಕೂ ಆಜನ್ಮ ಧಿಕ್ಕಾರ...! ಈಗ ಉತ್ತರ ಸಿಗಲಿ, ಇಂತಹ ಸಂತೆವ್ವನಂತಹ ಮಹಿಳೆಗೆ ಯಾವ ನ್ಯಾಯವನ್ನು ಸಮಾಜ ಕೊಡಲು ಸಿದ್ದವಿದೆ?
ಕೆಂಡ ಸಂಪಿಗೆಯಲ್ಲಿ ಪ್ರಕಟವಾದ ಈ ಕಥೆಗೆ ಅಂದೇ ಪ್ರತಿಕ್ರಿಯೆ ಕೊಟ್ಟಿದ್ದೆ. ಕನ್ನಡ ಸಾಹಿತ್ಯದಲ್ಲಿ ಓರ್ವ ಉದಯೋನ್ಮುಖ ಚಿಂತನೆಯ ಬರಹಗಾರ ಇಂತಹದ್ದನ್ನೇ ಆಲೋಚಿಸುತ್ತಾನೆ. ಅದು ನಮ್ಮ ಭಾಗ್ಯ. ಶುಭವಾಗಲಿ. ಇನ್ನಷ್ಟು ಸಮಾಜದ ಹುಳುಕುಗಳು ನಿಮ್ಮ ಪದಗಳಲ್ಲಿ ನ್ಯಾಯ ಪಡೆಯಲಿ.
ನಾನು ಕೂಡ ಕಳೆದ ಒಂದು ವರ್ಷದಿಂದ ಸವದತ್ತಿ ಎಲ್ಲಮ್ಮನ ಹೆಸರಲ್ಲಿ ಇವತ್ತುಗೂ ಕೂಡ ನಡೆಸುತ್ತಿರುವ ದೇವದಾಸಿ ಪದ್ದತಿ ಅಥವಾ ಮುತ್ತುಕಟ್ಟುವ ಪದ್ದತಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡವರಲ್ಲಿ ಒಬ್ಬ. ನಿಮ್ಮ ಈ ಬರವಣಿಗೆ ನಿಜವಾಗಿಯೂ ದೇವದಾಸಿ ಪದ್ದತಿಯಿಂದ ಬೆಂದವಳೊಬ್ಬಳ ವಾಸ್ತವ ಬದುಕಿನ ಬಗ್ಗೆ ಹೆಚ್ಚು ಬೆಳಕು ಬೀರುತ್ತದೆ. ಈ ಅನಿಷ್ಟ ಪದ್ದತಿಗೆ ಅಮಾಯಕ ಹೆಂಗಳೆಯರನ್ನು ದೂಡುವ ನಿಕೃಷ್ಠರು ಆಕೆಯ ಜೇವನದ ಕೊನೆಯ ದಿನಗಳ ಬಗ್ಗೆ ಯೋಚಿಸಿ ಪುನಶ್ಛೀತನ ಒದಗಿಸಿದ ಒಂದೇ ಒಂದು ಉದಾಹರಣೆ ಇಲ್ಲ. ನಿಜಕ್ಕೂ ದುರಂತ ಇದು. ಲೇಖನ ಚೆನ್ನಾಗಿದೆ
ReplyDelete