Saturday, 3 March 2012

ನಿಂಬೇಹೂವಿನ ಜೀವಗೀತೆ..

ಚೆಲ್ಲಿಕೊಳ್ಳಬೇಕಿದ್ದ ಮಾತುಗಳು ಗಂಟುಮೂಟೆಯೊಡನೆ
ಗುಳೇ ಎದ್ದು ಹೋಗಿದ್ದ ಒಂದು ರಾತ್ರಿ,
ಅರೆಬೆಂದ ಪದಗಳೊಟ್ಟಿಗೆ ಸಂಧಾನಕ್ಕೆಳಸಿದ್ದ ನನ್ನೊಳಗು
ಒಂದೂ ಪದ ಹುಟ್ಟಿಸದೆ ಸುಮ್ಮನೆ ಬೆಚ್ಚುತ್ತದೆ.

ಯಾವತ್ತೋ ಶರಬತ್ತಿಗೆ ಹಿಂಡಿ ಎಸೆದಿದ್ದ ನಿಂಬೇಹಣ್ಣಿನ
ಬೀಜದೊಡಲು ತುಂಬಿಕೊಂಡಿದ್ದು ಅದಕ್ಕೆ ಮಾತ್ರ ಗೊತ್ತಾಗಿ
ಕಾರೇಮುಳ್ಳುಗಳ ಪೊದೆಗಳ ಮಧ್ಯೆ
ನಿಂಬೇಗಿಡ ಮೈಯರಳಿಸಿದ್ದು ನನಗೂ ಗೊತ್ತಾಗಲಿಲ್ಲ.

ಯಾವ ಜಗದ ವಿವರಕ್ಕೂ ಪಕ್ಕಾಗದೆ ಮಿಟುಕುಗಣ್ಣು ತೆರೆದ
ನಿಂಬೇಗಿಡ ಅದರ ಪಾಡಿಗದು ಕೈಕಾಲು ಬೆನ್ನು ಮೂಡಿಸಿಕೊಂಡು
ಮುಖವೊಂದು ಮಾತ್ರ ಮೂಡದೆಯೇ, ದಕ್ಕದೆಯೇ ಹೋಗಿದ್ದು
ಅದರ ಧೇನಕ್ಕೂ ತಿಳಿಯಲಿಲ್ಲ. ಏನಕೇನ ನನ್ನ ಧೇನಕ್ಕೂ..

ಬೆಚ್ಚುತ್ತಿದ್ದ ನನ್ನೊಳಗು ಎಸೆದ ಬೀಜವನ್ನೇ ಮರೆತಿರುವಾಗ
ಉಜ್ಜದ ಹಲ್ಲನ್ನು ಮುಚ್ಚಿಕೊಂಡು ನಗುತ್ತಿದ್ದ ನಿಂಬೇಗಿಡದ
ಯೌವನದ ಬಿಸುಪನ್ನು ಯಾವ ಸತ್ತ ನೆನಪಲ್ಲಿ ಹುಡುಕುತ್ತದೆ.?
ಹಸೀಕೂಸಿನ ಎಳೇ ನಾಲಿಗೆಯಂಥ ನಿಂಬೇಎಲೆ ನನ್ನತ್ತ ನಗುತ್ತದೆ.

ದಾರಿತಪ್ಪಿ ಜೀವತೆತ್ತ ಬಸವನಹುಳುವಿನ ದೇಹದ ಪುಡಿ ತಿಂದು
ಅರಳಿಕೊಳ್ಳಲು ಹವಣಿಸುತ್ತಿದೆ ನಿಂಬೇಹೂವು
ನನ್ನೊಳಗು ಆವತ್ತು ನೋಡಿದ್ದು ಅದೇ ಹವಣಿಕೆಯನ್ನೇ..
ಬಾವಿಗೆ ಬಿದ್ದಂತಿದ್ದ ಒಳಗೊಳಗೆ ಈಗ ನಿಂಬೇಹೂವಿನ ಬೆಳಕು.

ಎಸೆದದ್ದೇ ಅರಳುತ್ತದೆಯಾದರೆ, ಕಟ್ಟಿಕೊಂಡ ಒಳಗೂ
ಬಿಮ್ಮಗೆ ಅರಳಬೇಕಲ್ಲ, ನಚ್ಚಗೆ ಬೆಳಗಬೇಕಲ್ಲ..
ತನ್ನಮೇಲೆ ತಾನೇ ಮಣ್ಣೆದುಕೊಳ್ಳಲು ಮುಖತೊಳೆಯುತ್ತಿದ್ದ ನನ್ನೊಳಗಿಗೆ
ನಿಂಬೇಹೂವಿನ ಜೀವಗೀತೆ ತಲೆನೇವರಿಸುತ್ತದೆ..

ನಾನು ಇನ್ನೇನೇನನ್ನು ಇನ್ನೆಲ್ಲೆಲ್ಲಿ ಎಸೆದೆನೋ..
ಅವೂ ಇಷ್ಟೊತ್ತಿಗೆ ಅರಳಿ ಪದ ಹಾಡುತ್ತಿರುವ ಗುಂಗಿಗೆ ಬಿದ್ದು
ಕಾರೇಮುಳ್ಳುಗಳ ಪೊದೆಗಳೊಗಳಗೆ ಬೆತ್ತಲೆಗೊಂಡು
ಕಣ್ಣು ಮರೆತ ಕಡವೆಯಂತೆ ನುಗ್ಗಾಡುತ್ತಿದ್ದೇನೆ..


- ಟಿ.ಕೆ. ದಯಾನಂದ

No comments:

Post a Comment