Saturday, 25 February 2012

ಒಂಟಿ ಕಣ್ಣ ದೇವರು ಮೈಯರಳದ ಬಾಲೆಯು.....

ಲೆಕ್ಕಕ್ಕಿಲ್ಲದಷ್ಟು ಮೆಟ್ಟಿಲು ಹಾಸಿಕೊಂಡು ನಭಕ್ಕೆ ಹತ್ತಿರ ಕುಳಿತವನಿಗೆ
ಗುಂಡಾರವೂ ಗುಡಿಯೂ ಬೀದಿಯೇ ಆದವರ ಸೊಲ್ಲು ಇನ್ನೂ ತಲುಪಿಲ್ಲ.
ಗೋಡೆಗಳ ಬರೆದವರಾರೋ ಬೀದಿಗೂ ನಭಕ್ಕೂ ನಡುವೆ..
ಈ ಕಡೆಯ ಸೊಲ್ಲು ಅತ್ತ ತಲುಪದೆ, ಆ ಕಡೆಯ ಹೇವರಿಕೆ ಇತ್ತ ತಲುಪದೆ
ಗೋಡೆ ಮಾತ್ರ ಪರಮಸತ್ಯವಾದದ್ದು ವರ್ತಮಾನದ ದುರಂತವು.

ಕೊತಕೊತನೆ ಕುದಿಯುವ ಮಡಕೆಯ ಗಂಜಿಗೆ ಬಂಡವಾಳ ಹಾಕಿದ್ದಾನೆ,
ಜಾತ್ರೆಯ ಮೂಲೆಯಲ್ಲಿ ರಾಟುವಾಣದ ಚಕ್ರ ತಿರುಗಿಸುವ ಹುಲುಮಾನವ,
ಗಾಳಿಗೂ ಪಟಕ್ಕೂ ಒಂದೇ ದಾರ ಬಿಗಿದವನ ಭುಜದ ತುಂಬ..
ನಾಳೆಯ ಪಾಡಿನ ಭಾವಗೀತೆಗಳು ಕೊನೆಯುಸಿರೆಳೆಯುತ್ತಿವೆ..
ನಭದವನ ಮಾಲೀಕ ಶಂಖು ಊದಿದ್ದು ಇಲ್ಲಿಗಿನ್ನೂ ತಲುಪಿಲ್ಲ.

ನರವೆಲ್ಲವನ್ನೂ ಇಷ್ಟ ಬಂದಂತೆ ಬಿಗಿಯುತ್ತಾಳೆ ಮೈಯರಳದ ಬಾಲೆ,
ಕೈಗಂಟುವ ಡೋಲಕನ್ನು ಮೀಟುತ್ತಿವೆ ಪ್ಲಾಸ್ಟಿಕ್ಕು ಉಂಗುರದ ಬೆರಳುಗಳು..
ಮಾಂತ್ರಿಕ ಬೆರಳುಗಳ ನೋಡುತ್ತ ಮಕಾಡೆಬಿದ್ದ ಅಲ್ಯೂಮಿನಿಯಂ ತಟ್ಟೆಗೆ,
ಉಸಿರೆಳೆದುಕೊಳ್ಳುವ ಆಸೆ ಗರ್ಭಕಟ್ಟಿದ ಎರಡನೇ ನಿಮಿಷಕ್ಕೆ,
ನಭದೊಡೆಯನ ನೊಸಲಮೇಲೆ ಎರೆಹುಳುವಿನಂಥ ಗೆರೆಗಳು ಹುಟ್ಟಿದವು.

ಕೊರಳಿಗೆ ದೇವರಪಟವನ್ನು ನೇತುಹಾಕಿಕೊಂಡ ಬರಿಮೈ ದುಡಿಮೆಗಾರನೂ
ಇದ್ದಾನೆ ಗುಂಪೊಳಗೆ ಸಾಸುವೆಯಂತೆ ಲೀನವಾಗಿ..
ಕಟ್ಟಿದ ತಂತಿಯ ಮೇಲೆ ಕೋಲು ಹಿಡಿದು ಹೆಜ್ಜೆಯ ಪ್ರತಿಬಿಂಬವೊತ್ತಿದ
ಬಾಲೆಯ ಕಸುವು, ಬಿರುಸು, ಚಾಲಾಕಿತನಕ್ಕೆ..ಅವನೂ..
ಅವನ ಕೊರಳಿಗೆ ಜೋತುಬಿದ್ದ ದೇವರೂ ಇಬ್ಬರೂ ಒಂದೇಟಿಗೇ ಭಯಗೊಂಡರು.

ಇದು ನಡುಹಗಲ ಜಾತರೆ.. ಅರೆಬೆಂದಿದ್ದ ಸೂರ್ಯನಿಗೂ ಉರಿಯಲು ಬೇಸರ
ಸುಟ್ಟೀತೇನೋ ಬಾಲೆಯ ಎವೆ.. ಚಪ್ಪಲಿಯೊಡನೆ ಮುನಿಸಿಕೊಂಡ ಪಾದ,
ದೂರವಿದ್ದ ಮೂರು ಮೋಡಗಳನ್ನು ಕಾಲಿಂದಲೇ ಎಳೆದುಕೊಂಡ ಸೂರ್ಯ
ಬಾಲೆಯ ಎವೆಗೂ ತನಗೂ ಮಧ್ಯೆ ಆವಿಯ ಗೋಡೆ ಕಟ್ಟಿಕೊಂಡದ್ದನ್ನು,

ಗುಂಪಿನವನ ಕೊರಳಿಗೆ ಜೋತುಬಿದ್ದ ಒಂದು ಕಣ್ಣಿನ ದೇವರು ಮಾತ್ರ ನೋಡಿತು..
- ಟಿ.ಕೆ. ದಯಾನಂದ

No comments:

Post a Comment