Tuesday, 11 September 2012

ಇರುವುದಿಷ್ಟೇ, ಸಂಪಿಗೆಯಕೊಂಬೆ, ಇಷ್ಟುದ್ದ ನೂಲು..

ಚೌಕದ ಕಾಗದ, ನಾಲ್ಕುಮೂಲೆ, ಬೆರಳುಗಳ ಮಡಚುವ ಮೋಹದೊಟ್ಟಿಗೆ
ಎಷ್ಟೋ ವರ್ಷಗಳ ನಂತರ ಕಾಗದದ ಜಹಜು ಈಗತಾನೆ ನೆನಪಾಯಿತು..
ನಾಲ್ಕುಮೂಲೆಗೂ ನಿನ್ನ ಮೂಕ ಕಿರುನಗೆಯನ್ನು ಅಂಟಿಸಲು ನೋಡುತ್ತೇನೆ,
ಹಾಳಾದ ನಯಸು ಕಾಗದಕ್ಕೆ ಯಾವುದೂ ನೆಟ್ಟಗೆ ಅಂಟಿಕೊಳ್ಳುವುದಿಲ್ಲ.

ಖುಲ್ಲಾ ಆಕಾಶದ ಕೆಳಗೆ ಬರಿಬೆತ್ತಲು ಭೂಮಿ, ಗೆದ್ದಲುಹುಳುವಿನ ಬಾಷ್ಪ,
ಚಿಟ್ಟೆಯ ಕಾಲಿಗಂಟಿದ ಮಕರಂದದ ಸೊಡರು, ತೊಟ್ಟು ಕಳಚಿದ ಹೂವು,
ರಬ್ಬರುಮರದ ಕಾಂಡದ ಗಾಯದೊಳಗಿಂದ ಬೆಳ್ಳಬೆಳ್ಳನೆಯ ನೆತ್ತರು..
ಹಾಳು ನಯಸು ಕಾಗದಕ್ಕೆ ಯಾವುದರಿಂದಲೂ ನಿನ್ನ ಕಿರುನಗೆ ಅಂಟುತ್ತಿಲ್ಲ.

ಕೂಸೊಂದರ ಖಾಲಿಬಾಯೊಳಗೆ ತುಳುಕುವ ಜಲದ ತೊರೆಯಿಂದಲೂ..
ಕಣ್ಣಗುಡ್ಡೆಯ ತೇವ ಕಾಯುವ ರೆಪ್ಪೆಯಡಿಯ ಅಂಟಿನಿಂದಲೂ..
ತೆವಳಿದ ರಸ್ತೆಯುದ್ದಕ್ಕೂ ಚಿತ್ರವೆಬ್ಬಿಸಿದ ಬಸವನುಳುವಿನ ಅಂಟಿನಿಂದಲೂ..
ಯಾವೆಂಬ ಯಾವುದರಿಂದಲೂ ನಿನ್ನ ಕಿರುನಗೆ ಜಹಜಿಗೆ ಅಂಟುತ್ತಲೇ ಇಲ್ಲ.

ನಿನ್ನ ನಗುವನ್ನೇ ಮೆಲ್ಲಗೆ ಮಡಿಲಿಗೆಳೆದುಕೊಂಡೆ, ನಗುವಿಗೂ ಕಿವಿಯಿತ್ತಲ್ಲ..
ಕಿವಿಯ ಹಾಳೆಗೆ ಮುತ್ತಿಟ್ಟು.. ಮಂಡಿ ಮಡಚಿ ಮೊಣಕಾಲೂರಿ ಕೇಳಿದೆ.
ಅಂಟೋಲ್ಲವೇಕೆ ನೀನು ಯಾವುದರಿಂದಲೂ ಯಾವುದಕ್ಕೂ ಹೀಗೆ ಹೀಗೆ?
ನಗುವೂ ಮಾತನಾಡುತ್ತದೆ.. ಅಂಟುವ ಕ್ರಿಯೆ ಇದಲ್ಲವೋ ಹುಡುಗ.

ಅಂಟಿಕೊಳ್ಳುವುದು ನನಗೆ ಗೊತ್ತು, ಅಂಟಿಸಲೆತ್ನಿಸಬೇಡ ಯಾವುದಕ್ಕೂ..
ನಿನ್ನೆಲ್ಲ ಪೆದ್ದು ಕೆಲಸಗಳೂ ನನಗೆ ತಮಾಷೆಯಷ್ಟೇ.. ಅಂಟಿಸಬೇಡ..
ಅಂಟಬೇಕೆನ್ನುವ ವ್ಯಾಮೋಹ ಬಂದ ದಿನ ನಾನೇ ಅಂಟಿಕೊಳ್ಳುವೆ..
ಹಾಗೆಂದದ್ದೇ ಕಾಗದದ ಜಹಜಿನ ನಾಲ್ಕುಮೂಲೆಗೂ ತನ್ನನ್ನು ಮೆತ್ತಿಕೊಂಡಿತು.

ಜಹಜಾಯಿತು, ನಿನ್ನ ನಗು ತನಗೆ ತಾನೇ ಅಂಟಿಕೊಂಡಿದ್ದೂ ಆಯಿತು..
ಎಲ್ಲಿಡಲಿ ಈ ಕಾಗದದ ಜಹಜನ್ನು, ನೀರಿಗಿಟ್ಟರೆ ನೆನೆಯುವ ಭಯ,
ಕೈಯೊಳಗೇ ಇದ್ದರೆ ಮುದುಡುವ ಭಯ, ನೆಲಕ್ಕಿಟ್ಟರೆ ಕಳೆಯುವ ಭಯ..
ಜಹಜು ನೀರೊಳಗೇನೋ ಇರಬೇಕು ಸರಿ.. ಏನಾದರೂ ಆದರೆ ?

ಆದರೆಗಳ ಹಂಗು ಕಳಚಿಕೊಂಡು ಜಹಜಿಗೊಂದು ದಾರ ಕಟ್ಟಿದ್ದೇನೆ..
ಸಂಪಿಗೆಮರದ ಕೊಂಬೆಗೆ ಜಹಜಿನ ದಾರ ತೂಗುಬಿಟ್ಟು ಸುಮ್ಮನಿದ್ದುಬಿಡುವೆ,
ಎಲ್ಲ ಜಹಜುಗಳೂ ತೇಲುವುದಿಲ್ಲ, ಹಾಗೆಯೇ ಎಲ್ಲವೂ ಮುಳುಗುವುದೂ ಇಲ್ಲ,
ತೇಲದೇ ಮುಳುಗದೇ ಸಂಪಿಗೆ ಮರಕ್ಕೊಂದು ಒಡವೆಯಂತೂ ಆಯಿತು.

ಇಲ್ಲಿ ತೇಲಲು ಬೆಂಡೂ ಇಲ್ಲ, ಖುಷಿಯೆಂದರೆ, ಮುಳುಗಲು ಗುಂಡೂ ಇಲ್ಲ,
ಇರುವುದಿಷ್ಟೇ, ಸಂಪಿಗೆಯಕೊಂಬೆ, ಇಷ್ಟುದ್ದ ನೂಲು, ಕಾಗಜ್ ಕೀ ಜಹಜು.

No comments:

Post a Comment