Friday 9 March 2012

ಮೆಹೂವಾ ಕಾಡು ಮತ್ತು ಪುಡಿ ನಕ್ಷತ್ರಗಳು

ಪ್ಲಾಸ್ಟಿಕ್ಕು ಹೂವುಗಳ ಬೆನ್ನೊಳಗೆ ಘಮವನ್ನು ಹುಡುಕುತ್ತಿದ್ದೆ,
ಮೂಸಿದರೂ, ಮುಟ್ಟಿದರೂ ತೇವವಿಲ್ಲದ ಪ್ಲಾಸ್ಟಿಕ್ಕು ಹೂವಿಗೆ
ಕೊನೆಯಪಕ್ಷ ರಾಗಿಕಾಳಿನಷ್ಟು ನಾಚಿಕೆಯೂ ಆಗುವುದಿಲ್ಲ..
ಇನ್ನು ಬದುಕಬೇಕೆಂಬ ಭಯ ನನ್ನೊಳಗೆ ಚಿಗಿತ ಚಣದಲ್ಲೇ,
ಅವಳ ಕೊರಳ ಸುತ್ತಲೂ ಮಾಂತ್ರಿಕಬೀಜಗಳನ್ನು ಚೆಲ್ಲಿದ್ದೆ..
ಕೊರಳೊಳಗೆ ಬೇರಿಳಿಸಿ ಕಣ್ಣೆತ್ತಿವೆ ಮತ್ತಿನ ಮೆಹೂವಾ ಹೂಗಳು.


ಮೆಹೂವಾದ ಮತ್ತಿಗೆ ನನ್ನೊಳಗೆ ಪದಗಳು ಹುಟ್ಟುತ್ತವೆ
ಹುಟ್ಟಿದ ಪದಗಳು ಉಸಿರು ಸಿಗದೆ, ನೆಲದ ತಾವೂ ಸಿಗದೆ
ಸಾಯುವ ಮೊದಲೇ, ಇವಳು ಪದಗಳಿಗೆ ಕುಲಾವಿ ನೇಯುತ್ತಾ..
ನೆತ್ತಿ ನೇವರಿಸುವ ನಿಷ್ಕಾರುಣ ಮೌನದ ಹಾಡು ಕೇಳುತ್ತ,
ನಾಯಿಕೊಡೆಯ ನೆರಳಪ್ಪಿಕೊಂಡು ಪ್ರೇಮವನ್ನು ಧ್ಯಾನಿಸುತ್ತಾ,
ರದ್ದಿವ್ಯಾಪಾರಿಯ ತಕ್ಕಡಿಯೊಳಗೆ ನನ್ನನ್ನು ಕೂರಿಸಿದ್ದಾಳೆ.

ಈಗೀಗ ಕೆಂಪುನೆಲವನ್ನು ಚುಂಬಿಸುವ ನೆಪದಲ್ಲಿ
ಭೂಮಿಯ ಸೊಂಟದಳತೆ ತೆಗೆಯಲು ಅಳತೆಗೋಲಿಗಾಗಿ
ಪರಿತಪಿಸುವವರ ಸಾಲುಸಾಲು ಸಾವಾಗುತ್ತಿವೆ..
ಪುಣ್ಯದ ಬಂಡವಾಳ ಹಾಕಿ ಪಾಪದ ಬೆಳೆ ಬೆಳೆಯುವವರ
ನಡುನೆತ್ತಿಯ ಮೇಲೆ ಒಂಟಿಕಾಲೂರಿ ನಿಂತ ಇವಳ ಪ್ರೇಮ..
ನನ್ನೊಳಗಿನ ರಕ್ಕಸನನ್ನು ತುಂಬುಗಣ್ಣಿನಲ್ಲಿ ಮೋಹಿಸುತ್ತಿದೆ.

ಅವಳ ಎರೆಹುಳುವಿನಂಥ ಒಂಟಿಕಾಲಿನ ಪ್ರೇಮದೆದುರು
ಯಾವತ್ತೋ ಸತ್ತ ಸೌದೆಯ ಬೂದಿಯಂತೆ ಹುಡಿ ಹುಡಿಯಾಗುವ ಆಸೆ,
ನನ್ನೊಳಗಿನ ಭೂಮಿಗೆ ಹೆಡೆಮುರಿಗೆ ಕಟ್ಟಿ ಎಳೆತಂದಿದ್ದಾಳೆ
ಕೆನೆಯುವ ಸೂರ್ಯನನ್ನು, ಅಮೂರ್ತ ಮೋಡಗಳನ್ನು, ಪುಡಿ ನಕ್ಷತ್ರಗಳನ್ನು,
ಮೆಹೂವಾ ಹೂಗಳ ಮದ್ಯವನ್ನು ಮೊಗೆಮೊಗೆದು ಕುಡಿದವಳು
ಪಿಸುಗುಡುತ್ತಾಳೆ, ಮೊಣಕಾಲೂರದೇ ಬೇರೆ ರಸ್ತೆಯಿಲ್ಲವೋ ಹುಡುಗ.

ಪಿಸುಮಾತಿಗೆ ಇಲ್ಲವೆಂದು ಅಂದು ಹೆಣದಂತೇಕೆ ಓಡಾಡಲಿ ಗೆಳತಿ..?
ಮಂಡಿ ಮೊಣಕಾಲೆರಡನ್ನೂ ನಿನ್ನೆದುರಿನ ಮಣ್ಣಿನ ವಶಕ್ಕೊಪ್ಪಿಸಿದ್ದೇನೆ..
ಇಗೋ ನಿನ್ನ ಮೋಡದೊಳಗವಿತ ನೀರಿನಂಥ ಪ್ರೇಮಕ್ಕೆ,
ನನ್ನ ಕೊರಳನೊಪ್ಪಿಸುತ್ತಿದ್ದೇನೆ.. ಇಲ್ಲೂ ನೆಡು.. ಮೆಹೂವಾ ಬೀಜಗಳ..
ಕೊರಳುಗಳ ಮೇಲೆ ಮೆಹೂವಾ ಕಾಡೊಂದು ಬೆಳೆದುಕೊಳ್ಳಲಿ..
ಆ ಕಾಡೊಳಗೆ ನಮ್ಮ ನಾಲಿಗೆಯಿಲ್ಲದ ಪ್ರೇಮ, ದಿಕ್ಸೂಚಿಯಿಲ್ಲದೆ ಅಲೆದಾಡಲಿ.

- ಟಿ.ಕೆ. ದಯಾನಂದ

No comments:

Post a Comment