‘ಇವು ಆಸ್ಕರ್ ಹೊಡೀತವೆ ನೋಡು’ ಅಂತ ಗೆಳೆಯರೊಬ್ಬರು ಒಂದು ಗಾಡಿ ಆಂಗ್ಲ ಸಿನಿಮಾಗಳ ಪಟ್ಟಿ ಕೊಟ್ಟು ನೋಡಲು ಹೇಳಿದ್ದರು. ಹೌದೇನೋ ಯಾವುದಕ್ಕೂ ನೋಡೇ ಬಿಡೋಣ, ಆಸ್ಕರ್ ಬರೋಕ್ಕಿಂತ ಮೊದಲೇ ನಾನು ಇದನ್ನು ನೋಡಿದ್ದೆ ಅಂತ ಗೆಳೆಯರೆದೆರು ಮೀಸೆ ತಿರುವೋಕೆ ಆದರೂ ಇರಲಿ ಅಂತ ಒಂದರ ಹಿಂದೊಂದು ಆಸ್ಕರ್ ನಾಮಿನೇಟೆಡ್ ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದೆ. ನಾನು ನೋಡಿದ ಯಾವುದಕ್ಕೂ ನೆಟ್ಟಗೊಂದು ಪ್ರಶಸ್ತಿ ಬರಲಿಲ್ಲ.
ಆಸ್ಕರ್ ಘೋಷಣೆಯಾದ ನಂತರ ನನ್ನನ್ನು ಗೆಳೆಯ ದಿವೀನಾದ ಹಳ್ಳಕ್ಕೆ ಕೆಡವಿದ್ದು ಗೊತ್ತಾಯ್ತು. ಅವನು ಹೇಳದಿದ್ದ, ನಾನು ನೋಡದಿದ್ದ ‘ದಿ ಆರ್ಟಿಸ್ಟ್’ ಸಿನಿಮಾ ಆಸ್ಕರ್ ಕಣದ ಬಹುಮುಖ್ಯ ಪ್ರಶಸ್ತಿಗಳನ್ನು ಸೂರೆ ಹೊಡೆದಿತ್ತು. ಇತ್ತೀಚೆಗೆ ಅದನ್ನು ನೋಡಿದ ನಂತರ ಇದೇನು ಅಂತಹ ಆಹಾ ಓಹೋ ಸಿನಿಮಾವಲ್ಲ. ನಮ್ ಅಣ್ಣಾವ್ರ ಕಸ್ತೂರಿ ನಿವಾಸವನ್ನ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ತಿರುವಿ ಬಗ್ಗಿಸಿ ಹಾಲಿವುಡ್ನವರು ದಿ ಆರ್ಟಿಸ್ಟ್ ಮಾಡಿದ್ದಾರೆ ಅನ್ನಿಸಿತು. ಇದರ ಹೊರತಾಗಿಯೂ ಈ ಸಿನಿಮಾದ ಬಗ್ಗೆ ಹೇಳಬೇಕಿರುವುದು ಬೇರೆಯದ್ದೇ ಇದೆ.
ವಿನೈಲ್ ಪೋಸ್ಟರುಗಳು ಹೋರ್ಡಿಂಗ್ ಗಳು ನಗರಗಳೊಳಗೆ ಗಹಗಹಿಸುತ್ತ ಪ್ರವೇಶಿಸುವ ಮೊದಲು, ಬ್ಯಾನರ್ ಬರೆಯುವ, ಗೋಡೆಗಳ ಮೇಲೆ ಜಾಹಿರಾತುಗಳನ್ನು ಬರೆಯುತ್ತ ಬದುಕುತ್ತಿದ್ದ ಸಾವಿರಾರು ಚಿತ್ರಕಲಾವಿದರು ನಮಗೆಲ್ಲರಿಗೂ ನೆನಪಿದ್ದರು. ಒದ್ದೆಬಣ್ಣದಲ್ಲಿ ಬ್ರಶ್ಶು ಅದ್ದಿಕೊಂಡು ಸುನೀತವಾಗಿ ಬೆರಳು ತಿರುಗಿಸುತ್ತ ಅವರು ಅಕ್ಷರ ಬಿಡಿಸುವ ಪರಿಯೇ ಮಾಂತ್ರಿಕವಾಗಿತ್ತು. ಈಗ ಬ್ಯಾನರ್ರು ಬರೆಯುವ ಮಾಂತ್ರಿಕತೆಯನ್ನು ಬರೆಯುವ ಬೆರಳುಗಳ ಸಮೇತ ನೆನಪಿನ ಭೂಮಿಯೊಳಗೆ ಹೂತು ಹಾಕಿದ್ದೇವೆ, ಮಿಕ್ಸಿ ಗ್ರೈಂಡರುಗಳು ಬರುವ ಮೊದಲು ಒಬ್ಬಾತ ಹೆಗಲ ಮೇಲೆ ಗೋಣಿಚೀಲ ನೇತಾಕಿಕೊಂಡು ಕಲ್ಮುಳ್ ಹುಯ್ತೀವಪ್ಪ ಕಲ್ಮುಳ್ಳೂ ಅಂತ ಏರುದನಿಯಲ್ಲಿ ಊರೂರಲ್ಲಿ ಕೂಗಿಕೊಂಡು ಸುತ್ತಿಗೆ ಉಳಿ ಹಿಡಿದು ಅಲೆಯುತ್ತಿದ್ದವರೂ, ಎತ್ತುಗಳನ್ನು ಅರಳೀಮರದ ಕೆಳಗೆ ಮಲಗಿಸಿ ಅವುಗಳ ಕಾಲಿಗೆ ಲಾಳ ಹೊಡೆಯುತ್ತ ಬದುಕುತ್ತಿದ್ದವರು ಇವತ್ತು ನಮ್ಮ ಸ್ಮೃತಿಯೊಳಗೆಯೇ ಕೊಲೆಯಾಗಿ ಹೋಗಿದ್ದಾರೆ.
ಹೀಗೆ ಆಧುನಿಕತೆಯ ಪರಿಕರಗಳ ಕೆಳಗೆ ಬದುಕನ್ನೇ ಹಾಸಿ ಸ್ಮೃತಿಯಾಚೆಗೆ ಸರಿದವರನ್ನು ದಿ ಆರ್ಟಿಸ್ಟ್ ಬಿಟ್ಟೂ ಬಿಡದೆ ನೆನಪಿಸುತ್ತದೆ. ಆಧುನಿಕತೆಯೆಂದರೇ ಇದಲ್ಲವೇ.. ನೋಟುಗಳ ಜಾತ್ರೆಯಲ್ಲಿ ಶ್ರಮದ ಕೊಲೆ ! ದಿ ಆರ್ಟಿಸ್ಟ್ ಚಿತ್ರವೂ ತನ್ನೊಳಗಿನ ಒಳಹರಿವಿನಲ್ಲಿ ಇದನ್ನೇ ಮಾತನಾಡುತ್ತದೆ. ಇದು ಶಬ್ದಕ್ಕೆ ಬಸಿರಾದ ಮೌನದ ಕಥೆ. ಮಾತು ಕಥೆ ಎರಡೂ ಬೇಡದ ತಿಳಿನೀರಿನಂಥಹ ಪ್ರೇಮದ ಕಥೆ. ಚಿತ್ರದ ನಾಯಕ ವ್ಯಾಲಂಟೈನ್ ಮೌನ ಮತ್ತು ಶಬ್ದಕ್ಕೂ ಮಧ್ಯೆ ಬೆಂಕಿ ಸುರಿದ ಆಧುನಿಕತೆಗೆ ಒಗ್ಗಲು ನಿರಾಕರಿಸಿ ಮುಖ್ಯವಾಹಿನಿಯ ನಿರಾಕರಣೆಗೊಳಗಾಗುವುದು ಮತ್ತು ಸಹನಟಿಯೊಬ್ಬಳೊಟ್ಟಿಗೆ ಅನೂಹ್ಯವಾಗಿ ಹುಟ್ಟಿದ ಪ್ರೇಮದೊಳಗೆ ತ್ಯಕ್ತನಂತೆ ಅಲೆದಾಡುವುದು ಚಿತ್ರದ ಕಥಾ ಹಂದರ.
ಕಥೆಯ ಹರವು ತುಂಬ ಸರಳ. ವ್ಯಾಲಂಟೈನ್ ಎಂಬ 1920ರ ಕಾಲಘಟ್ಟದ ಮೂಕಿಚಿತ್ರಗಳ ಸೂಪರ್ಹಿಟ್ ಚಿತ್ರಗಳ ನಟನೊಬ್ಬ ಮೂಕಿಚಿತ್ರಗಳ ಯುಗದ ಯಶಸ್ವಿನಾಯಕ. ಅವನ ಅಭಿಮಾನಿಯಾಗಿದ್ದ ಪೆಪ್ಪಿ ಮಿಲ್ಲರ್ ಎಂಬಾಕೆ ಚಿತ್ರಪ್ರದರ್ಶನವೊಂದರ ನಂತರ ಮೀಡಿಯಾಗಳ ಎದುರಿನಲ್ಲಿಯೇ ಅವನನ್ನು ಚುಂಬಿಸುತ್ತಾಳೆ. ನಾಯಕನಟನ ಬದುಕಲ್ಲಿ ಯಾರೀ ಹೊಸ ಹುಡುಗಿ ಎಂದು ಮೀಡಿಯಾಗಳ ಹಲ್ಲಾಗುಲ್ಲಾದ ಕಾರಣಕ್ಕೆ ರೋಮಾಂಚನಗೊಳ್ಳುವ ಪೆಪ್ಪಿಮಿಲ್ಲರ್ ಆ ಸುದ್ದಿಯ ಪತ್ರಿಕೆಗಳನ್ನು ಹಿಡಿದು ತಾನೂ ಚಿತ್ರನಟಿಯಾಗ ಬಯಸುತ್ತಾಳೆ. ಸಹನರ್ತಕಿ, ಪೋಷಕನಟಿಯಂಥವೇ ಪಾತ್ರಗಳಲ್ಲಿ ಮುಖ ತೋರಿಸುವ ಮಟ್ಟಿಗೆ ಬೆಳೆದೂ ನಿಲ್ಲುತ್ತಾಳೆ.
ಅವಳು ನಟಿಸಿದ ಸಿನಿಮಾ ಟೈಟಲ್ಗಳಲ್ಲಿ ಕೊನೇಸಾಲಿನಲ್ಲಿರುತ್ತಿದ್ದ ಆಕೆಯ ಹೆಸರು ಬರುಬರುತ್ತಾ ಎರಡನೇ ಸಾಲಿಗೆ ಬರುವಮಟ್ಟಿಗೆ ಪೆಪ್ಪಿಮಿಲ್ಲರ್ ಬೆಳೆಯುತ್ತಾಳೆ. ನಡುವಯಸ್ಕ ಚಿತ್ರನಟ ವ್ಯಾಲೆಂಟೈನ್ ಎದುರು ಚಿತ್ರವೊಂದರಲ್ಲಿ ಸಹನಟಿಯಾಗಿ ನಟಿಸುವಾಗ ಇಬ್ಬರಿಗೂ ವಿನಾಕಾರಣದ ಪ್ರೀತಿ ಮೊಳೆತುಬಿಡುತ್ತದೆ. ನೇತುಹಾಕಿದ್ದ ಅವನ ಕೋಟಿನೊಳಗೆ ತನ್ನ ಕೈ ತೂರಿಸಿ ತನ್ನನ್ನು ತಬ್ಬಿಕೊಂಡು ವ್ಯಾಲಂಟೈನ್ನನ್ನು ಭ್ರಮಿಸುತ್ತಾಳೆ.
ಪೆಪ್ಪಿಯ ಮೋಹದೊಳಗೆ ಬೀಳುವ ವ್ಯಾಲೆಂಟೈನ್ ಇತರರಿಗಿಂತ ಬೇರೆಯಾಗಿ ಕಾಣಲು ನಿನ್ನೊಳಗೆ ಬೇರೆಯದ್ದೇ ಆದ ಒಂದಿರಬೇಕು ಎಂದು ಆಕೆಯ ತುಟಿಯ ಮೇಲೊಂದು ಚುಕ್ಕಿಯಿಟ್ಟು ಆಕೆಯನ್ನು ತನ್ನ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆರಿಸಿ ಚಿತ್ರದಲ್ಲಿ ನಟಿಸುತ್ತಾನೆ. ಚಿತ್ರ ಚೆನ್ನಾಗಿಯೇ ಓಡುತ್ತದೆ.. ಪೆಪ್ಪಿ ಈಗ ಹಾಲಿವುಡ್ನಲ್ಲಿ ಗುರುತಿಸಲ್ಪಟ್ಟಿದ್ದಾಳೆ. ನಂತರದ್ದು ಮೂಕಿ ಮತ್ತು ಟಾಕಿಚಿತ್ರಗಳ ನಡುವಿನ ಅಕ್ಷರಶಃ ಮುಖಾಮುಖಿ. ಸಿನಿಮಾಗಳೊಳಗೆ ಮಾತುಗಳನ್ನೂ ಶಬ್ದಗಳನ್ನೂ ಅಳವಡಿಸಬಹುದು ಎಂಬ ತಂತ್ರಜ್ಞಾನ ಹೊಸದಾಗಿ ಅನ್ವೇಷಿತಗೊಂಡಿದೆ.. ಶಬ್ದದ ಮಾಂತ್ರಿಕತೆಯಲ್ಲಿ ಸಿನಿಮಾ ನೋಡುಗರು ಯುವಕ ಯುವತಿಯರನ್ನು ಬಯಸುತ್ತಿದ್ದಾರೆ.
ಮಾತಿಲ್ಲದೆ ಮಣಮಣವೆಂದು ಬರೀ ಬಾಯಾಡಿಸುವ ಹಿರಿಯ ಚಿತ್ರನಟರ ಪಾಲಿಗೆ ಅವು ನಿರಾಕರಣೆಯ ಕಾಲಘಟ್ಟವಾಗಿ ಪರಿಣಮಿಸುತ್ತದೆ. ವ್ಯಾಲಂಟೈನ್ನ ಮೂಕಿನಾಣ್ಯಕ್ಕೆ ಟಾಕಿ ಮಾರುಕಟ್ಟೆಯಲ್ಲಿ ಚಲಾವಣೆಯ ಕಿಮ್ಮತ್ತು ರದ್ದುಗೊಂಡಿದೆ. ಶಬ್ದ ಮಾತುಗಳಲ್ಲಿ ವಾಚ್ಯವಾಗಿ ಹೇಳುವುದಕ್ಕಿಂತ ಮೌನದ ಅಮೂರ್ತತೆ ಮತ್ತು ಅನೂಹ್ಯತೆಯ ವಿವರಗಳು ಮೂಕಿಚಿತ್ರಗಳಲ್ಲಿ ಸಾಧ್ಯವೆಂಬ ವ್ಯಾಲಂಟೈನ್ನ ವಾದವನ್ನು ಅವನ ನಡುವಯಸ್ಸಿನೊಂದಿಗೇ ನೋಡುಗರು ತಿರಸ್ಕರಿಸಿದ್ದಾರೆ.
ಪ್ರೇಮಕಂಬನಿ ಎಂಬ ಅವನೇ ನಿದರ್ೇಶಿಸಿದ ಹೊಸಚಿತ್ರ ಮಕಾಡೆ ಮಲಗಿರುವ ವೇಳೆಯಲ್ಲೇ ಪೆಪ್ಪಿಮಿಲ್ಲರ್ಳ ಟಾಕಿಚಿತ್ರ ಸೂಪರ್ಹಿಟ್ ಆಗಿ ಪೆಪ್ಪಿ ಹಾಲಿವುಡ್ನ ಅನಭಿಶಕ್ತ ರಾಣಿಯಾಗಿದ್ದಾಳೆ. ನಡುವಯಸ್ಕ ವ್ಯಾಲಂಟೈನ್ ಶೇರುಮಾರುಕಟ್ಟೆ ಮತ್ತು ತಾರಾಮೌಲ್ಯದ ಕುಸಿತದಿಂದ ಈಗ ನಿರುದ್ಯೋಗಿ. ಆತನ ಪತ್ನಿಯೂ ವ್ಯಾಲಂಟೈನ್ನನ್ನು ಮಾತನಾಡು ಎನ್ನುತ್ತಾಳೆ.. ನಾನು ಮಾತನಾಡಲಾರೆ ಎನ್ನುವ ಉತ್ತರದೊಂದಿಗೆ ಸಂಸಾರವೂ ಹೋಳಾಗುತ್ತದೆ. ಮನೆಯ ಅಡುಗೆಯಾಳಿಗೆ ಸಂಬಳಕೊಡಲೂ ಹಣವಿಲ್ಲದ ಪರಿಸ್ಥಿತಿಯಲ್ಲಿ ತನ್ನ ಕೋಟುಗಳನ್ನು ಮಾರಿಕೊಂಡು ಕುಡಿತಕ್ಕೆ ಬೀಳುವ ವ್ಯಾಲಂಟೈನ್ನನ್ನು ಅವನ ನೆರಳೇ ಹಂಗಿಸುತ್ತಿದೆ. ಮನೆಯೂ ಸೇರಿದಂತೆ ಎಲ್ಲವನ್ನೂ ಮಾರಿಕೊಂಡು ತನ್ನ ನಾಯಿಯೊಟ್ಟಿಗೆ ಬೀದಿಗೆ ಬಿದ್ದಿದ್ದಾನೆ. ಮೋಹಿಸಿದ.. ಬೆಳೆಯಲು ಅನುವು ಮಾಡಿದ ಇವತ್ತಿನ ಪೆಪ್ಪಿಮಿಲ್ಲರ್ ಆತನೆದುರಿಗೆಯೇ ನಡುವಯಸ್ಕ ನಟರನ್ನೂ ಮೂಕಿ ಚಿತ್ರಗಳನ್ನೂ ಮಾತಾಡದ ಮಣಗುಟ್ಟುವ ವೃದ್ಧರು ಎಂದು ಹೀಗಳೆಯುತ್ತಾಳೆ. ವ್ಯಾಲಂಟೈನ್ ಪರಿತ್ಯಕ್ತಗೊಂಡವನಂತೆ ಅಡುಗೆಯಾಳಿಗೆ ಸಂಬಳಕ್ಕೆ ಬದಲಾಗಿ ಕಾರು ಕೊಟ್ಟು ಕೆಲಸದಿಂದ ತೆಗೆಯುತ್ತಾನೆ.
ಶಬ್ದ ಮಾತಿಲ್ಲದೆ ತಾನು ನಟಿಸಿದ್ದ ಮೂಕಿಚಿತ್ರಗಳ ರೀಲುಡಬ್ಬಗಳನ್ನು ತನ್ನ ಬಾಡಿಗೆ ಮನೆಯೊಳಗೆ ಕಿತ್ತು ಹರವಿ ಬೆಂಕಿಯಿಟ್ಟು ಸಹನಟಿ ಪೆಪ್ಪಿಮಿಲ್ಲರ್ ಮೇಲೆ ಮೋಹ ಹುಟ್ಟಿದ ದೃಶ್ಯವಿರುವ ಒಂದು ಡಬ್ಬವನ್ನು ಮಾತ್ರ ಜತನದಿಂದ ಎದೆಗಪ್ಪಿಕೊಂಡು ಆತ್ಮಹತ್ಯೆಗೆ ಯತ್ನ್ನಿಸಿದ್ದಾನೆ. ಬದುಕುಳಿಯುವ ವ್ಯಾಲಂಟೈನ್ನನ್ನು ಪೆಪ್ಪಿಯೇ ತನ್ನ ಮನೆಗೆ ಕರೆತಂದು ಆತನನ್ನು ಉಪಚರಿಸಿ ಆತನೊಟ್ಟಿಗೆ ಒಂದು ಚಿತ್ರವನ್ನು ನಿಮರ್ಿಸುವಂತೆ ನಿಮರ್ಾಪಕನೊಟ್ಟಿಗೆ ಜಗಳಕ್ಕೆ ಬಿದ್ದು ಗೆಲ್ಲುತ್ತಾಳೆ. ಮತ್ತೆ ಪೆಪ್ಪಿಮಿಲ್ಲರ್ಳೊಟ್ಟಿಗೆ ಟಾಕಿಚಿತ್ರದಲ್ಲಿ ನಟಿಸಲು ಶುರುವಿಡುವಲ್ಲಿಗೆ ಚಿತ್ರ ಕೊನೆಗೊಳ್ಳುತ್ತದೆ. ಕಡೆಗೂ ಇಲ್ಲಿ ವ್ಯಾಲಂಟೈನ್ನ ಮೂಕಿಚಿತ್ರಗಳ ಮೇಲಿನ ಪ್ರೇಮದ ಮೇಲೆ ಶಬ್ದವನ್ನೊಳಗೊಂಡ ಟಾಕಿಚಿತ್ರಗಳ ಆಧುನಿಕತೆ ಸವಾರಿ ನಡೆಸುತ್ತವೆ..
ದೃಶ್ಯಗಳನ್ನು 1920ರ ಮೂಕಿಚಿತ್ರಗಳ ಯುಗದ ಶೈಲಿಯಲ್ಲಿ ಕಟ್ಟಿರುವ ನಿರ್ದೇಶಕ ಮೈಕೆಲ್ ಹಸಾನ್ ಇದು ಹಳೆಯದ್ದೇ ಮೂಕಿಚಿತ್ರವೇನೋ ಎಂಬ ಬಲವಾದ ಭ್ರಮೆ ಹುಟ್ಟಿಸುತ್ತಾರೆ. ಸಂಗೀತವೂ ಮೂಕಿಚಿತ್ರಕ್ಕೆ ಸಾಣೆತಟ್ಟಿಸಿ ಮಾಡಿಸಿದಂತಿದೆ. ಇವತ್ತಿನ ಅವತಾರ್ ಯುಗದ ಯಾವ ತಾಂತ್ರಿಕತೆಯೂ ಇಲ್ಲದೆ.. ಚೂರುವೇಗವಾಗಿ ಆವತ್ತಿನ ಸೀಮಿತ ತಾಂತ್ರಿಕತೆಯಂತೆ ಸಿನಿಮಾ ಚಲಿಸುತ್ತದೆ. ಮೌನದ ಮೇಲೆ ಶಬ್ದದ ಸವಾರಿ ಮತ್ತು ನಿಂಬೇಹೂವಿನ ಘಮದಂತಹ ನವಿರು ಪ್ರೇಮವೊಂದನ್ನು ಮಾತಿಲ್ಲದೆಯೇ ಹೇಳುವಲ್ಲಿ ನಿರ್ದೇಶಕ ಹಸಾನ್ ಅನಾಯಾಸವಾಗಿ ಗೆದ್ದಿದ್ದಾನೆ.
ಚಿತ್ರವು ನಮ್ಮದೇ ಕಸ್ತೂರಿನಿವಾಸ ಚಿತ್ರವನ್ನು ಬಹಳಷ್ಟು ಹೋಲುತ್ತದೆ.. ಒಂದೊಳ್ಳೆಯ ಪ್ರೇಮ ಯಾನವನ್ನು ಅನುಭವಿಸುವುದಕ್ಕಾದರೂ ದಿ ಆರ್ಟಿಸ್ಟ್ ಚಿತ್ರವನ್ನು ನೋಡಲೇಬೇಕು. ಮತ್ತೆ ಮತ್ತೆ ಬೀಸುವಕಲ್ಲು, ರುಬ್ಬುಕಲ್ಲುಗಳಿಗೆ ಮುಳ್ಳು ಹೊಯ್ಯುತ್ತಿದ್ದವರೂ.. ಬ್ಯಾನರ್ ಬರೆಯುತ್ತಿದ್ದ ಚಿತ್ರಕಲಾವಿದರೂ, ಎತ್ತಿಗೆ ಲಾಳ ಹೊಡೆದು ಬದುಕುತ್ತಿದ್ದವರೂ ನೆನಪಾಗುತ್ತಿದ್ದಾರೆ.. ಅವರೆಲ್ಲ ಎಲ್ಲಿಹೋದರೋ.. ಏನು ಮಾಡುತ್ತಿದ್ದಾರೋ.. ಇಂಥಹ ಜೀವಗಳನ್ನು ನವಿರಾಗಿ ನೆನಪಿಸಿದ ದಿ ಆರ್ಟಿಸ್ಟ್ ಗೆ ನನ್ನ ಸಲಾಂಗಳು.
No comments:
Post a Comment