ನೆನೆದೂ ನೆನೆದೂ ತೇವಗೊಂಡ ಒಡಲಭೂಮಿಯ ದೊರೆಸಾನಿಯೇ
ನಿನ್ನ ಕಣ್ರೆಪ್ಪೆ ತನ್ನಪಾಡಿಗೆ ತೆರೆದು ಮುಚ್ಚುವ ಸದ್ದೂ ಕೇಳುತ್ತದೆ ನನಗೆ,
ತೊಟ್ಟು ಕಳಚಿದ ಪಾರಿಜಾತ ಪುಷ್ಪ ನೆಲಕ್ಕೆ ಬಿದ್ದ ಸಪ್ಪುಳದಂತೆ..
ಮುರುಕು ಹಣತೆಗೆ ಮಣ್ಣು ಮೆತ್ತಿ ಒಪ್ಪ ಮಾಡಿಟ್ಟ ಅಂದಗತ್ತಿಯೇ..
ನಾಜೂಕಾಗಿ ಹಚ್ಚಿಟ್ಟ ಬೆಳಕು, ಗಾಳಿಗೆ ತುಯ್ಯುತ್ತಿದೆ, ತೊನೆದಾಡುತ್ತಿದೆ..
ನಿನ್ನ ತೆಳುಕಿವಿಗೆ ನೇತುಬಿದ್ದ ಪುಟ್ಟ ಜುಮಕಿಯೋಲೆಯ ಸಪ್ಪುಳದಂತೆ..
ಇರುವೆರಡು ಕಣ್ಣೊಳಗೆ ದೀಪ ಹಚ್ಚಿಟ್ಟುಕೊಂಡ ಬೆಳಕಿನೂರಿನ ಜೀವವೇ..
ನನ್ನೊಳಗೆ ಬಣ್ಣವನ್ನು ಚೆಲ್ಲಾಡಿದ ನಿನ್ನ ದೀಪ, ಕುರುಡು ಕತ್ತಲೆಯ ಕೊಂದಿದೆ,
ಗುಬ್ಬಚ್ಚಿ ಗೂಡೊಳಗೆ ನುಗ್ಗಿದ ಎರಡು ಅಮಾಯಕ ಮಿಂಚುಹುಳಗಳಂತೆ..
ಪೊರೆಗಳಚಿಕೊಂಡ ನೆನಪುಗಳ ಕಿತಾಬನ್ನು ಆಯ್ದು ಆಯ್ದು ಕೊಟ್ಟವಳೆ,
ಅಂಟಿಕೊಂಡ ಕಿತಾಬಿನ ಹಾಳೆಗಳಲ್ಲಿ ಕೆಲವನ್ನು ಗೆದ್ದಲುಗಳು ತಿಂದಿವೆ..
ನಾನು ನರಳಾಡುತ್ತೇನೆ.. ಗೆದ್ದಲುಗಳ ಬಾಯೊಳಗೆ ತುಂಡಾದ ಹಾಳೆಯಂತೆ..
ಇದ್ದುದೆಲ್ಲವನ್ನೂ ಜೋಡಿಸಿ ಒಡಲೂರ ದೇವರಿಗೆ ತೇರುಕಟ್ಟಿದ ಹುಡುಗಿಯೇ.
ನಿನ್ನ ಪಾದಧೂಳಿಯ ಯಾವೊಂದು ಧೂಳುಕಣವನ್ನೂ ನೆಲದ ಮೇಲೆ ಉಳಿಸದೆ..
ಎದೆಗೆ ಸುರುವಿಕೊಳ್ಳುತ್ತೇನೆ..ನನ್ನನ್ನೇ ನಿನ್ನೊಳಗೆ ಹೂತು ಹಾಕಿದಂತೆ.
No comments:
Post a Comment