ಚೈನಾದ ಮೂಲೆಯಲ್ಲೆಲ್ಲೋ ಇರುವ ಶಿಖುವಾನ್ ಎಂಬುದು ನಮ್ಮೂರ ಹಳ್ಳಿಗಳಂಥದೇ ಒಂದು ಹಳ್ಳಿಗಾಡು. ಹೊಲಗದ್ದೆಗಳಲ್ಲಿ ಕೂಲಿ ಮಾಡುವ, ನಗರಪಟ್ಟಣಗಳಿಗೆ ಅನ್ನ ಹುಡುಕುತ್ತ ವಲಸೆ ಹೋಗುವ, ಹಸಿವು ಬಡತನದಿಂದ ಜೀವ ಬಿಡುತ್ತಿರುವ ಜನರಿರುವ ಶಿಖುವಾನ್ ಹಳ್ಳಿಯಲ್ಲೊಂದು ಮುರುಕಲು ಪ್ರಾಥಮಿಕ ಶಾಲೆಯಿದೆ. ಎಲ್ಲ ಸರ್ಕಾರಿ ಸಂಸ್ಥೆಗಳು ನಡೆಸುವ ಶಾಲೆಯಂತೆಯೇ ಅದೂ ಸಹ ಈಗಲೋ ಆಗಲೋ ಉದುರೇ ಹೋಗುವಷ್ಟು ಶಿಥಿಲಗೊಂಡ ಕಟ್ಟಡದಲ್ಲಿ ನಡೆಯುತ್ತಿದೆ. ಇಂಥ ಶಾಲೆಯ ಮೇಷ್ಟರಾಗಿರುವ ಗಾವೋ ಗೆ ತಾಯಿಯ ಅನಾರೋಗ್ಯ ನಿಮಿತ್ತವಾಗಿ ತನ್ನೂರಿಗೆ ಹೋಗುವ ತುರ್ತು ಎದುರಾಗುತ್ತದೆ. ಈಗಾಗಲೇ 40 ಮಕ್ಕಳು ದಾಖಲಾಗಿದ್ದ ಶಾಲೆಯಲ್ಲಿ ಅಕ್ಷರಕ್ಕಿಂತ ಅನ್ನ ದೊಡ್ಡದು ಎಂಬ ನೈಸರ್ಗಿಕ ಕಾನೂನಿಗೆ ಜೈ ಎಂದ ಬಹಳಷ್ಟು ಮಕ್ಕಳು ಶಾಲೆಯ ಓದನ್ನು ತ್ಯಜಿಸಿ ಕೂಲಿಕಾರರಾಗಿ ಮಾರ್ಪಟ್ಟಿವೆ. ಇನ್ನು ಕೇವಲ 28 ಮಕ್ಕಳು ಶಾಲೆಯೊಳಗೆ ಪಾಠ ಕಲಿಯುತ್ತಿವೆ. ಇನ್ನೂ ಮಕ್ಕಳ ಸಂಖ್ಯೆ ಕಡಿಮೆಯಾದರೆ ಶಾಲೆಯೇ ಸ್ಥಗಿತಗೊಳ್ಳುವ ಆತಂಕದಲ್ಲಿರುವ ಶಿಕ್ಷಕ ಗಾವೋ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಲೆಯನ್ನು ಖಾಲಿಬಿಟ್ಟು ಊರಿಗೆ ತೆರಳಲು ಮನಸು ಬರುವುದಿಲ್ಲ. ಇದಕ್ಕೆ ಉಪಾಯವೆಂಬಂತೆ ಶಿಖುವಾನ್ ಹಳ್ಳಿಯ ಮುಖ್ಯಸ್ಥನೊಬ್ಬನನ್ನು ಕರೆದು ಓದುಬರಹ ಕಲಿತಿರುವ ಯಾರಾದರನ್ನು ಒಂದಷ್ಟು ದಿನಗಳ ಕಾಲ ಶಾಲೆ ನೋಡಿಕೊಳ್ಳಲು ಸೂಚಿಸಲು ಕೇಳಿಕೊಳ್ಳುತ್ತಾನೆ. ಹಳ್ಳಿಯ ಮುಖ್ಯಸ್ಥ ತನ್ನ ಗ್ರಾಮವನ್ನೆಲ್ಲ ಶೋಧಿಸಿ 13 ವರ್ಷದ ಮಿಂಝಿ ಎಂಬ ಬಾಲಕಿಯೊಬ್ಬಳನ್ನು ಶಿಕ್ಷಕನ ಮುಂದೆ ತಂದು ನಿಲ್ಲಿಸುತ್ತಾನೆ. ಹರೆಯಕ್ಕಿಂತ ಮಾರುದೂರವಿರುವ, ಸಂಪೂರ್ಣ ಶೈಕ್ಷಣಿಕ ಪ್ರಬುದ್ಧತೆಯಿಲ್ಲದ ಮಿಂಝಿಯೂ ಅರ್ಧದಲ್ಲೇ ಶಾಲೆ ತೊರೆದವಳು. ಹಾಳೂರಿಗೆ ಉಳಿದವಳೇ ಮಿಂಝಿ ಎಂದರಿತ ಶಿಕ್ಷಕ ಗಾವೋ ಮಿಂಝಿಗೆ ತಾನು ವಾಪಸ್ಸು ಬರುವವರೆಗೂ ಪುಸ್ತಕದೊಳಗಿನ ಪಾಠಗಳನ್ನು ಬೋರ್ಡ್ ಮೇಲೆ ಬರೆದು ಮಕ್ಕಳ ಕೈಲಿ ಓದಿಸುವಂತೆಯೂ, ಇರುವ 28 ವಿದ್ಯಾರ್ಥಿಗಳಲ್ಲಿ ಒಬ್ಬರೂ ಕಡಿಮೆಯಾಗಬಾರದು, ತಾನು ವಾಪಸು ಬಂದಾಗ 28 ಮಂದಿ ವಿದ್ಯಾರ್ಥಿಗಳಲ್ಲಿ ಒಬ್ಬರೂ ಶಾಲೆ ತೊರೆದಿರಬಾರದು, ದಿನಕ್ಕೆ ಒಂದು ಚಾಕ್ ಪೀಸ್ ಮಾತ್ರವಷ್ಟೇ ಖರ್ಚು ಮಾಡಬೇಕು.. ಇಷ್ಟನ್ನು ನಿರ್ವಹಿಸಿದರೆ ಹಣವನ್ನು ನೀಡುವುದಾಗಿಯೂ ಒಪ್ಪಿಸುತ್ತಾನೆ. ಮನೆಯ ಕಷ್ಟನಷ್ಟಗಳನ್ನು ಸರಿದೂಗಿಸಲು ಹಣದ ಅಗತ್ಯವಿದ್ದ ಮಿಂಝಿ ಸರಿಯೆಂದು ಒಪ್ಪುತ್ತಾಳೆ. ಶಿಕ್ಷಕ ಗಾವೋ ಮಿಂಝಿಯ ಸುಪರ್ದಿಗೆ ಶಾಲೆಯನ್ನೂ, ಮಕ್ಕಳನ್ನೂ ಒಪ್ಪಿಸಿ ತನ್ನೂರಿಗೆ ತೆರಳುತ್ತಾನೆ.
ಇತ್ತ ತನ್ನಷ್ಟೇ ವಯಸ್ಸಿನ, ತನಗಿಂತಲೂ ದೊಡ್ಡ ವಯಸ್ಸಿನ ಶಾಲೆಯ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಹೊತ್ತುಕೊಂಡ ಮಿಂಝಿಯನ್ನು ಶಾಲೆಯ ಮಕ್ಕಳು ಶಿಕ್ಷಕಿಯಾಗಿ ಒಪ್ಪಿಕೊಳ್ಳುವುದೇ ಇಲ್ಲ. ತಮ್ಮೊಂದಿಗೇ ಆಟವಾಡುತ್ತ ಬೆಳೆದ ಮಿಂಝಿಯನ್ನು ಶಿಕ್ಷಕಿಯಾಗಿ ಆ ಮಕ್ಕಳು ಸ್ವೀಕರಿಸಲು ಹಿಂದೇಟು ಹಾಕುತ್ತವೆ. ಗಾವೋ ಮೇಷ್ಟರಿಗೆ ಹೆದರಿದಂತೆ, ವಿನಯ ಗೌರವ ತೋರಿದಂತೆ ಮಿಂಝಿಗೆ ಯಾವ ಸ್ಥಾನಮಾನವನ್ನೂ ಈ ಮಕ್ಕಳು ನೀಡದೆ ತಮ್ಮಷ್ಟಕ್ಕೆ ತಾವು ಕಿತ್ತಾಡುತ್ತ ಜಗಳಾಡುತ್ತ ಶಾಲೆಯಲ್ಲಿ ಕುಳಿತಿರುತ್ತವೆ. ಪ್ರತಿನಿತ್ಯ ಬೋರ್ಡಿನ ಮೇಲೆ ಪಾಠವೊಂದನ್ನು ಬರೆದು ಅದನ್ನು ಬರೆದುಕೊಳ್ಳಲು ಹೇಳಿ ತನ್ನಪಾಡಿಗೆ ತಾನು ರೊಟ್ಟಿಬ್ರೆಡ್ಡು ಬೇಯಿಸುತ್ತ ಅನ್ಯಮನಸ್ಕಳಾಗುವ ಮಿಂಝಿಯನ್ನು ಈ ಮಕ್ಕಳು ಗಮನಿಸಲೂ ಸಹ ಹೋಗದೆ ತಮ್ಮಪಾಡಿಗೆ ತಾವು ಆಟಪಾಠಗಳಲ್ಲಿ ತೊಡಗಿಕೊಂಡಿವೆ. ಒಂದೆರಡು ದಿನಗಳು ಕಳೆದು ಹೋದ ನಂತರ ಮಿನ್ ಕ್ಸಿಂಗ್ಹೋಂಗ್ ಎಂಬ ವಿದ್ಯಾರ್ಥಿನಿಯೋರ್ವಳನ್ನು ಕ್ರೀಡೆಯಲ್ಲಿ ಹೆಚ್ಚಿನ ಪರಿಣತಿಗಾಗಿ ಪಟ್ಟಣಕ್ಕೆ ಕರೆದೊಯ್ಯಲು ನಗರದಿಂದ ಬರುವ ಕ್ರೀಡಾತಜ್ಞನು ಮಿಂಝಿಯಿಂದ ಪ್ರತಿರೋಧವನ್ನೆದುರಿಸುತ್ತಾನೆ. ಗಾವೋ ಹೇಳಿದಂತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೆ ತನಗೇ ನಷ್ಟವೆಂದರಿತ ಮಿಂಝಿ ಆ ಹುಡುಗಿಯನ್ನು ಬಚ್ಚಿಡುತ್ತಾಳೆ. ಕೊನೆಗೆ ಶಿಖುವಾನ್ ಗ್ರಾಮದ ಮುಖ್ಯಸ್ಥನ ಮನವೊಲಿಕೆ ಮತ್ತು ಶಿಕ್ಷಕ ಗಾವೋಗೆ ತಾನು ಹೇಳುತ್ತೇನೆಂಬ ಧೈರ್ಯದ ಮಾತಿಗೆ ಬೆಲೆ ಕೊಟ್ಟು ಆಕೆಯನ್ನು ಕ್ರೀಡಾತಜ್ಞನೊಟ್ಟಿಗೆ ನಗರಕ್ಕೆ ಕಳುಹಿಸುತ್ತಾಳೆ. ಮಾರನೆಯ ದಿನ ತನ್ನ ಶಾಲೆಯ ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಲೆಕ್ಕ ತಪ್ಪಿಹೋಗಿರುವುದು ಮಿಂಝಿಯ ಗಮನಕ್ಕೆ ಬರುತ್ತದೆ. ಶಾಲೆಯ ಪರಿಸರವನ್ನು ಅಲ್ಲೋಲಕಲ್ಲೋಲಗೊಳಿಸುವಷ್ಟು ತರಲೆ ವಿದ್ಯಾರ್ಥಿಯಾಗಿದ್ದ ಝಾಂಗ್ ಎಂಬ ಹುಡುಗ ಶಾಲೆಗೆ ಬರದೇ ತಪ್ಪಿಸಿಕೊಂಡಿರುವುದು ಗಮನಕ್ಕೆ ಬಂದು ಆತನನ್ನು ಹುಡುಕುತ್ತ ಅವನ ಮನೆಗೆ ತೆರಳಿದಾಗ ಕಾಯಿಲೆಬಿದ್ದ ಆತನ ತಾಯಿಯ ಚಿಕಿತ್ಸೆಯ ವೆಚ್ಚಕ್ಕೆ ಹಣವನ್ನು ಸಂಪಾದಿಸಲು ಝಾಂಗ್ ಪಕ್ಕದ ಪಟ್ಟಣಕ್ಕೆ ಕೂಲಿ ಹುಡುಕುತ್ತ ಹೋಗಿರುವುದು ತಿಳಿದು ಬರುತ್ತದೆ. ಚಿತ್ರದ ಮೂಲನಡೆ ಶುರುವಾಗುವುದು ಇಲ್ಲಿಂದಲೇ..
ಶಿಕ್ಷಕ ಗಾವೋಗೆ ನೀಡಿದ ವಾಗ್ದಾನದಂತೆ ಇರುವ 28 ಮಕ್ಕಳಲ್ಲಿ ಯಾರೂ ಶಾಲೆ ಬಿಡದಂತೆ ನೋಡಿಕೊಳ್ಳುವುದು ಮಿಂಝಿಯ ಕರ್ತವ್ಯವಾದ್ದರಿಂದ ತನಗೆ ಶಿಕ್ಷಕ ಗಾವೋರಿಂದ ಬರಬೇಕಾದ ಹಣಕ್ಕೆ ಕುತ್ತುಂಟಾಗುತ್ತದೆ ಎಂದು ಬಗೆದ ಮಿಂಝಿ ಚಿಂತೆಗೆ ಬೀಳುತ್ತಾಳೆ. ಏನಾದರೂ ಸರಿಯೇ ಝಾಂಗ್ ತೆರಳಿರುವ ಝಂಗ್ಜಾಕೋ ಪಟ್ಟಣಕ್ಕೆ ತೆರಳಿ ಆತನನ್ನು ಕರೆತರಲೇಬೇಕೆಂದು ನಿಶ್ಚಯಿಸುವ ಮಿಂಝಿಯ ಬಳಿ ಆ ನಗರಕ್ಕೆ ತೆರಳುವಷ್ಟು ಬಸ್ಚಾಚಾರ್ಜಿನ ಹಣವೂ ಇರುವುದಿಲ್ಲ. ಶಾಲೆಯ ಮಕ್ಕಳ ಬಳಿರುವ ಚಿಲ್ಲರೆ ಕಾಸೆಲ್ಲವನ್ನೂ ಒಟ್ಟುಗೂಡಿಸಿದರೂ ಬಸ್ಚಾರ್ಜಿಗೆ ಹಣ ದೊರಕುವುದಿಲ್ಲ. ಕೊನೆಗೆ ಮಕ್ಕಳೆಲ್ಲರನ್ನೂ ಕರೆದುಕೊಂಡು ಇಟ್ಟಿಗೆ ಸುಡುವ ಭಟ್ಟಿಯೊಳಗೆ ಕೂಲಿಗೆ ಹೋಗುವ ಮಿಂಝಿ ಅಲ್ಲಿ ದಿನಪೂರ್ತಿ ಮಕ್ಕಳೊಟ್ಟಿಗೆ ಕೂಲಿ ಮಾಡಿ ಒಂದಷ್ಟು ಹಣ ಸಂಪಾದಿಸುತ್ತಾಳೆ. ಆ ಹಣವೂ ಸಾಲದಾದಾಗ ಮಕ್ಕಳು ಶಿಖುವಾನ್ ಹಳ್ಳಿಯಿಂದ ಝಂಗ್ಜಾಕೋ ಪಟ್ಟಣಕ್ಕೆ ಖಾಸಗಿ ಟೆಂಪೋ ಒಂದು ತೆರಳುವುದಾಗಿಯೂ.. ಮಿಂಝಿ ಆ ಟೆಂಪೋದ ಸೀಟಿನ ಕೆಳಗೆ ಅವಿತುಕೊಂಡು ಪಟ್ಟಣ ತಲುಪಬಹುದಾಗಿಯೂ ಉಪಾಯ ಕೊಡುತ್ತಾರೆ. ಅದರಂತೆಯೇ ಸೀಟಿನ ಕೆಳಗೆ ಅವಿತು ಕುಳಿತ ಮಿಂಝಿಯನ್ನು ಟೆಂಪೋದವನು ಎಳೆದು ನಡುದಾರಿಯಲ್ಲಿ ರಸ್ತೆಗೆ ನೂಕುತ್ತಾನೆ. ಅಲ್ಲಿಂದ ಕಿಲೋಮೀಟರುಗಟ್ಟಲೆ ಬೆಟ್ಟಗುಡ್ಡಗಳನ್ನು ಹತ್ತಿ ಇಳಿದು ಕಡೆಗೆ ಮಿಂಝಿ ಝಂಗ್ಜಾಕೋ ಪಟ್ಟಣವನ್ನು ಸೇರುತ್ತಾಳೆ. ಬಾಲಕ ಝಾಂಗ್ ಕೆಲಸಕ್ಕೆಂದು ಬಂದ ಮನೆಯಲ್ಲಿನ ಕೆಲಸದಾಕೆಯನ್ನು ವಿಚಾರಿಸಿದಾಗ ಆತ ರೈಲ್ವೇ ಸ್ಟೇಷನ್ನಲ್ಲಿ ತಪ್ಪಿಸಿಕೊಂಡಿರುತ್ತಾನೆ. ಕೆಲಸದಾಕೆ ಸೂನ್ಜಿಮಿಯನ್ನು ಝಾಂಗ್ನನ್ನು ಹುಡುಕಿಕೊಡಲು ಕೇಳುವ ಮಿಂಝಿ ಆಕೆಯಿಂದ ನಿರಾಕರಣೆಗೆ ಒಳಗಾಗುತ್ತಾಳೆ. ಝಾಂಗ್ ಕಳೆದುಹೋದ ರೈಲ್ವೇಸ್ಟೇಷನ್ಗೆ ತೆರಳುವ ಮಿಂಝಿ ಝಾಂಗ್ಗಾಗಿ ಅಲ್ಲೆಲ್ಲ ಹುಡುಕಿ ಸೋತು ಕೊನೆಗೆ ರೈಲ್ವೇ ಸ್ಟೇಷನ್ನ ಅನೌನ್ಸರ್ ಬಳಿ ಪ್ರಕಟಣೆ ನೀಡುವಂತೆ ಬೇಡಿಕೊಳ್ಳುತ್ತಾಳೆ. ಸಂಜೆಯವರೆಗೂ ಅನೌನ್ಸರ್ ಮೈಕ್ ಮೂಲಕ ಪ್ರಕಟಣೆ ಹೊರಡಿಸಿದರೂ ಝಾಂಗ್ನ ಸುಳಿವು ಸಿಗುವುದಿಲ್ಲ. ಪ್ರಯತ್ನ ಬಿಡದ ಮಿಂಝಿ ಸ್ಟೇಷನರಿ ಅಂಗಡಿಯೊಂದಕ್ಕೆ ತೆರಳಿ ಒಂದಷ್ಟು ಹಾಳೆಯನ್ನೂ ಬಣ್ಣದ ಪೆನ್ನನ್ನೂ ತಂದು ಝಾಂಗ್ನನ್ನು ಹುಡುಕುತ್ತ ಮಿಂಝಿ ಬಂದಿರುವುದಾಗಿಯೂ, ಇದನ್ನು ನೋಡಿದರೆ ರೈಲ್ವೇಸ್ಟೇಷನ್ ಬಳಿ ಬರಬೇಕೆಂದೂ ಬರೆದು ಅದನ್ನು ಸ್ಟೇಷನ್ನ ಹೊರಭಾಗದ ಅಲ್ಲಲ್ಲಿ ಅಂಟಿಸುತ್ತಾಳೆ. ರಾತ್ರಿಯಾದಾಗ ಬೀದಿಪಕ್ಕದ ಲೈಟುಕಂಬವೊಂದರ ಬಳಿ ಹಾಳೆಗಳನ್ನಿಟ್ಟುಕೊಂಡು ಅಲ್ಲೇ ಮಲಗುತ್ತಾಳೆ. ಬೆಳಗಿನ ಜಾವ ಸ್ವಚ್ಛತಾ ಸಿಬ್ಬಂದಿಯವರು ಆ ಹಾಳೆಗಳನ್ನೂ ಕಸದ ಜೊತೆಗೆ ಗುಡಿಸಿಕೊಂಡು ಹೋಗುತ್ತಾರೆ. ಮುಂದೇನು ಮಾಡಬೇಕೆಂದು ತೋಚದೆ ರೈಲ್ವೇ ಸ್ಟೇಷನ್ನ ಒಳಗೆ ಬಂದು ಕೂರುವ ಮಿಂಝಿಯ ಕಥೆ ಕೇಳುವ ಒಬ್ಬಾತ ಝಾಂಗ್ ಕಳೆದುಹೋಗಿರುವ ಬಗ್ಗೆ ಟಿವಿ ಚಾನೆಲ್ ಒಂದಕ್ಕೆ ಜಾಹಿರಾತು ಕೊಡುವುದು ಹೆಚ್ಚು ಪರಿಣಾಮಕಾರಿ ಎಂದು ಹೇಳುತ್ತಾನೆ. ಅದನ್ನು ನಂಬಿ ಅಲ್ಲಿಂದ ಟಿವಿ ಚಾನೆಲ್ ಒಂದಕ್ಕೆ ಬಂದು ಅಲ್ಲಿನ ಜಾಹಿರಾತು ವ್ಯವಸ್ಥಾಪಕರೊಡನೆ ಝಾಂಗ್ ಕಳೆದುಹೋಗಿರುವ ಬಗ್ಗೆ ಜಾಹಿರಾತು ಪ್ರಸಾರ ಮಾಡಲು ಕೇಳಿಕೊಳ್ಳುತ್ತಾಳೆ. ಸೆಕೆಂಡಿಗೆ ಇಷ್ಟು, ಟೈಮ್ವಾರು ಇಷ್ಟು ಹಣವೆಂದು ಜಾಹಿರಾತು ಶುಲ್ಕವನ್ನು ಕೇಳುವ ಟಿವಿ ಚಾನೆಲ್ನವರ ಎದುರು ಮಿಂಝಿ ಮೂಕಳಾಗುತ್ತಾಳೆ. ಆಕೆಯನ್ನು ಚಾನೆಲ್ ಕಚೇರಿಯ ಹೊರಗೆ ದಬ್ಬಲಾಗುತ್ತದೆ. ಆದರೂ ಹಠ ಬಿಡದ ಮಿಂಝಿ ಕಚೇರಿಯ ಸೆಕ್ಯೂರಿಟಿ ಗಾರ್ಡ್ ಬಳಿ ತನ್ನ ಉದ್ದೇಶವನ್ನು ತೋಡಿಕೊಳ್ಳುತ್ತಾಳೆ. ಕಣ್ಣಿಗೆ ಕನ್ನಡಕ ಧರಿಸಿರುವ ಟಿವಿವಾಹಿನಿಯ ಸುದ್ದಿ ವ್ಯವಸ್ಥಾಪಕರು ಒಬ್ಬರಿದ್ದು ಅವರು ಮಾತ್ರ ನಿನಗೆ ಸಹಾಯ ಮಾಡಬಲ್ಲರು, ಅವರು ಹೊರಗೆ ಬಂದಾಗ ಅವರನ್ನು ವಿನಂತಿಸುವಂತೆ ಸೆಕ್ಯೂರಿಟಿಯವನು ತಿಳಿಸಿದ್ದನ್ನು ನಂಬುವ ಮುಗ್ಧೆ ಮಿಂಝಿ.. ಕಚೇರಿಯಿಂದ ಹೊರಬರುವ ತಂಪುಕನ್ನಡಕ ಧರಿಸಿದ ಪ್ರತಿಯೊಬ್ಬರನ್ನೂ ನೀವು ಸುದ್ದಿ ವ್ಯವಸ್ಥಾಪಕರೇ ಎಂದು ಕೇಳುತ್ತ ಅವರಿಂದ ಇಲ್ಲವೆಂದು ಅನ್ನಿಸಿಕೊಂಡು ಗೇಟಿನ ಬಳಿಯೇ ನಿಂತಿರುತ್ತಾಳೆ. ಕಚೇರಿಯ ಮೇಲುಗಡೆಯಿಂದ ಅಚಾನಕ್ಕಾಗಿ ಮಿಂಝಿಯನ್ನು ನೋಡುವ ವ್ಯವಸ್ಥಾಪಕನು ಆಕೆಯನ್ನು ಕಚೇರಿಯೊಳಗೆ ಕರೆಸಿಕೊಂಡು ಆಕೆಯ ಹಿನ್ನೆಲೆಯನ್ನು ಅರಿತುಕೊಳ್ಳುತ್ತಾನೆ.
ಝಾಂಗ್ ಕುರಿತ ಜಾಹಿರಾತಿಗೆ ಹಣ ವೆಚ್ಚವಾಗುವುದರಿಂದ ಮಿಂಝಿಯ ಶಾಲೆಯ ದುರವಸ್ಥೆಯ ಬಗ್ಗೆ ಒಂದು ಟಾಕ್ ಶೋ ಪ್ರೋಗ್ರಾಂ ಮಾಡಿ ಅದರ ನಡುವೆ ಝಾಂಗ್ನ ಪ್ರಸ್ತಾಪ ಮಾಡಬಹುದೆಂದು ಹೇಳುವ ವ್ಯವಸ್ಥಾಪಕನು ಮಿಂಝಿಯನ್ನು ನೇರಪ್ರಸಾರದ ಕೆಮೆರಾ ಎದುರು ಮಾತಿಗೆ ಕೂರಿಸುತ್ತಾನೆ. ಟಿವಿ ಸ್ಟುಡಿಯೋದ ಕಣ್ಣುಕುಕ್ಕುವ ಬೆಳಕು, ತಂತ್ರಜ್ಞಾನದಿಂದ ಗಾಬರಿಗೊಂಡು ಮಾತು ಹೊರಡದ ಮಿಂಝಿ ನೇರಪ್ರಸಾರದಲ್ಲಿಯೇ ಝಾಂಗ್ನ ಹೆಸರು ಹೇಳಿ ಆತ ಶಾಲೆಗೆ ವಾಪಸ್ಸು ಬಂದರಷ್ಟೇ ತನಗೆ ಶಿಕ್ಷಕ ಗಾವೋ ಹಣ ನೀಡುವುದಾಗಿಯೂ, ಅದರಿಂದಲೇ ತನ್ನ ಮನೆಯ ಹಸಿವು ಕಷ್ಟಗಳು ಬಗೆಹರಿಯಲು ಸಾಧ್ಯವೆಂದೂ, ಝಗಮಗಿಸುವ ಕಟ್ಟಡಗಳನ್ನೂ ಮಿನುಮಿನುಗುವ ದಿರಿಸುಗಳನ್ನು ಧರಿಸಿ ಓಡಾಡುವ ಪಟ್ಟಣದ ಮಂದಿಗೇಕೆ ನನ್ನಂಥ ಹಳ್ಳಿಗರ ಹಸಿವು ಅರ್ಥವಾಗುತ್ತಿಲ್ಲವೆಂದು ಅಮಾಯಕತೆಯಿಂದ ಪ್ರಶ್ನಿಸುತ್ತ ಮುಂದೆ ಮಾತನಾಡಲಾಗದೆ ಬಿಕ್ಕಿಬಿಕ್ಕಿ ಅಳುತ್ತಾಳೆ. ಇತ್ತ ಈ ಶೋ ಪ್ರಸಾರವಾಗುವುದನ್ನು ಕಳೆದು ಹೋಗಿ ಅವರಿವರು ಕೊಟ್ಟಿದ್ದನ್ನು ತಿನ್ನುತ್ತ ಗೊತ್ತುಗುರಿಯಿಲ್ಲದೆ ಓಡಾಡುತ್ತಿದ್ದ ಝಾಂಗ್ ಹೋಟೆಲೊಂದರಲ್ಲಿ ನೋಡುತ್ತಾನೆ. ಹೊಟೇಲಿನ ಮಾಲೀಕಳು ಝಾಂಗ್ನನ್ನು ಟಿವಿಸ್ಟುಡಿಯೋಗೆ ಕರೆತರುತ್ತಾಳೆ. ಟಿವಿ ಕೆಮೆರಾದೆದುರು ಝಾಂಗ್ನನ್ನು ಕೂರಿಸಿ ಪಟ್ಟಣಕ್ಕೆ ಬಂದ ಮೇಲೆ ಯಾವುದಾದರೂ ಮರೆಯಲಾಗದ ಪ್ರಸಂಗ ಎದುರುಗೊಂಡೆಯಾ ಎಂಬ ಪ್ರಶ್ನೆ ಕೇಳಲಾಗುತ್ತದೆ ಅದಕ್ಕೆ ಉತ್ತರಿಸುವ ಝಾಂಗ್ ನನ್ನ ಹಳ್ಳಿಯಲ್ಲಿ ಹಸಿವಾದರೆ ಯಾರದ್ದಾದರೂ ಮನೆಗೆ ಹೋಗಿ ಕೇಳಿದರೆ ತಿನ್ನಲು ಕೊಡುತ್ತಿದ್ದರು, ಪಟ್ಟಣದಲ್ಲಿ ಹಸಿವು ನೀಗಿಕೊಳ್ಳಲು ಭಿಕ್ಷೆ ಬೇಡುವಂತಾಗಿದ್ದನ್ನು ಮರೆಯಲಾಗುತ್ತಿಲ್ಲ ಎನ್ನುತ್ತಾನೆ. ಕೊನೆಗೂ ಝಾಂಗ್ನನ್ನು ದಕ್ಕಿಸಿಕೊಳ್ಳುವ ಮಿಂಝಿಯೊಡನೆ ಟಿವಿ ವಾಹಿನಿಯ ವ್ಯವಸ್ಥಾಪಕನು ಶಿಖುವಾನ್ ಹಳ್ಳಿಗೆ ತನ್ನ ಟಿವಿವಾಹನದಲ್ಲಿ ಕರೆತರುತ್ತಾನೆ. ಅಷ್ಟರ ವೇಳೆಗೆ ಟಿವಿಯ ನೇರಪ್ರಸಾರದಲ್ಲಿ ಶಾಲೆಯ ದುರವಸ್ಥೆಯನ್ನು ಕೇಳಿದ್ದವರು ಶಾಲೆಗೆಂದು ಅತ್ಯಾಧುನಿಕ ಉಪಕರಣಗಳು, ಮೇಜು ಕುರ್ಚಿ ಇತ್ಯಾದಿಗಳನ್ನು ಲಾರಿಗಟ್ಟಲೆ ತುಂಬಿ ಶಿಖುವಾನ್ ಹಳ್ಳಿಗೆ ಕಳಿಸಿರುತ್ತಾರೆ. ಟಿವಿಯಲ್ಲಿ ಮಿಂಝಿಯನ್ನು ನೋಡಿ ಗಾಬರಿಗೊಂಡ ಶಿಕ್ಷಕ ಗಾವೋ ಗ್ರಾಮಕ್ಕೆ ಬಂದಿಳಿದಾಗ ಮಿಂಝಿ ಆ ಮಕ್ಕಳಿಗೆ ಉಡುಗೊರೆಯಾಗಿ ಬಂದ ಬಣ್ಣದ ಚಾಕ್ಪೀಸುಗಳನ್ನು ಕೊಡುತ್ತ ಎಲ್ಲರನ್ನೂ ಎಣಿಸುತ್ತಿರುತ್ತಾಳೆ. ಗಾವೋಗೆ ಮಕ್ಕಳ ಲೆಕ್ಕವನ್ನು ಒಪ್ಪಿಸಿ ಹಣ ಪಡೆಯುವ ಮಿಂಝಿ ಆ ಹಣವನ್ನೇ ಎದುರುನೋಡುತ್ತ ಇರುವ ತನ್ನ ಮನೆಮಂದಿಯನ್ನು ನೆನೆದು ಯಾವುದನ್ನೂ ಲೆಕ್ಕಿಸದೇ ತನ್ನ ಮನೆಯತ್ತ ಹೆಜ್ಜೆ ಹಾಕುತ್ತಾಳೆ.
ಗ್ರಾಮೀಣ ಚೈನಾದ ಬಡತನವನ್ನು ಎಳೆಎಳೆಯಾಗಿ ಜಾಗತಿಕ ಮಟ್ಟದಲ್ಲಿ ದೃಶ್ಯರೂಪದಲ್ಲಿ ಬಿಚ್ಚಿಟ್ಟ ನಿರ್ದೇಶಕ ಇಮೂಝಾಂಗ್ ಈ ಚಿತ್ರಕ್ಕಾಗಿ ಕಣ್ಣಿಗೆ ಕಂಡ ಹಳ್ಳಿಗರನ್ನೇ ಆರಿಸಿ ಅವರಿಂದ ನಟನೆಯನ್ನು ಬಸಿದಿರುವುದು ಚಪ್ಪಾಳೆ ತಟ್ಟಲೇಬೇಕಾದ ಪ್ರಯತ್ನ. ಯಾವ ಸೀಸನ್ಡ್ ಕಲಾವಿದರಿಗೂ ಒಂದಿಂಚೂ ಕಮ್ಮಿಯಿಲ್ಲದಂತೆ ನಟಿಸಿರುವ ಈ ಹಳ್ಳಿಗರು ಗ್ರಾಮಗಳನ್ನು ನಿರ್ಲಕ್ಷಿಸಿದ ಚೈನಾ ಸರ್ಕಾರದ ಮಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದರು. ಇಡೀ ಜಗತ್ತಿಗೆ ತಂತ್ರಜ್ಞಾನ ಮತ್ತು ಬೆಳವಣಿಗೆಯಲ್ಲಿ ಚೈನಿಗರು ಮುಂದೆಂಬ ಕೋಡನ್ನು ಮುಂದು ಮಾಡುವ ಚೈನಾ ಸರ್ಕಾರವು, ತನ್ನ ದೇಶದಲ್ಲಿ ಪ್ರತೀ ವರ್ಷ ಒಂದು ಮಿಲಿಯನ್ ಗ್ರಾಮೀಣಮಕ್ಕಳು ಶಾಲೆತೊರೆದು ಕೂಲಿಗೆ ಹೋಗುತ್ತಿರುವುದನ್ನೇಕೆ ಮುಚ್ಚಿಟ್ಟಿದೆ ಎಂದು ಪ್ರಶ್ನಿಸಿದ ನಿರ್ದೇಶಕ ಇಮೂಝಾಂಗ್ ಈ ಚಿತ್ರದ ಮೂಲಕ ಸೋಷಿಯಲ್ ಆಕ್ಟಿವಿಸಂ ಅನ್ನು ಮೀಡಿಯಾ ಮೂಲಕವೂ ಮಾಡಬಹುದು ಎಂಬುದನ್ನು ದೊಡ್ಡಮಟ್ಟದಲ್ಲಿ ನಿರೂಪಿಸಿದರು. ತೆರೆಕಂಡ ನಂತರ 40 ಮಿಲಿಯನ್ನಷ್ಟು ಚೈನಾವೊಂದರಿಂದಲೇ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಗಿದ್ದು ಇಂತಹದೇ ಹರವಿನ ಇತರೆ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲುವಂತಹ ಪ್ರಯತ್ನ ಚೈನಾದಲ್ಲಿ ಪ್ರಾರಂಭವಾಗಲು ನೆರವಾಗಿದ್ದು ನಾಟ್ ಒನ್ ಲೆಸ್ ಚಿತ್ರದ ಹೆಗ್ಗಳಿಕೆ. ಸಿಕ್ಕರೆ ಒಮ್ಮೆ ಈ ಸಿನಿಮಾ ನೋಡಿ. ಮಿಂಝಿ ಟಿವಿ ಸ್ಟುಡಿಯೋದಲ್ಲಿ ಮಾತನಾಡುವ ದೃಶ್ಯ ನೋಡುವಾಗ ಕಡ್ಡಾಯವಾಗಿ ಕರ್ಚೀಫು ಹತ್ತಿರದಲ್ಲಿಟ್ಟುಕೊಳ್ಳಿ.
ಕೆಂಡಸಂಪಿಗೆಯಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ
No comments:
Post a Comment