ಒಂದ್ಸಲ ಕಣ್ಣು ಮುಚ್ಚಿಕೊಂಡು ಎರಡೇ ಎರಡು ಸೆಕೆಂಡ್ ಇದು ನಾನಲ್ಲ.. ನಾನು ಟ್ರೂಮನ್ ಎಂಬ ಹೆಸರಿನ ಜೀವ ಅಂತ ಅಂದುಕೊಳ್ಳುತ್ತೇನೆ. ನನ್ನದು ಜಗತ್ತಿನೆಲ್ಲೆಡೆಯ ಜೀವಸಂಕುಲಕ್ಕಿಂತಲೂ ಭಿನ್ನ ಬಗೆಯ ಬದುಕು ಎಂಬುದು ನನ್ನ ಅರಿವಿಗೆ ಬರುವುದು ಬೇಡ. ನಾನೀಗ ಟ್ರೂಮನ್. ಆತನ ಜಗತ್ತು ಈಗ ಖುಲ್ಲಂಕುಲ್ಲ ನನ್ನದು, ಆತನ ಸುತ್ತ ಕಟ್ಟಲ್ಪಟ್ಟ ಮಿಥ್ಯೆಗಳು ನನ್ನವು, ನನ್ನ ಬದುಕು ನನ್ನದೇ ಅಲ್ಲದ ಬದುಕು, ಅದೇ ವೇಳೆಯಲ್ಲಿ ಜಗತ್ತಿನ ಲೋಲುಪತೆಯಲ್ಲಿ ಮೈಮರೆತು ಕುಳಿತವರಿಗಾಗಿ ನನ್ನ ಬದುಕು ಕೈಕಾಲು ಮುರಿದುಕೊಂಡು ಮೀಸಲಾಗಿದೆ. ನನ್ನ ಹೆಸರು ಟ್ರೂಮನ್.
ನಾನೊಂದು ನಗರದಲ್ಲಿ ಬದುಕುತ್ತಿರುವ ಸೀದಾಸಾದಾ ಮಾಮೂಲು ಮನುಷ್ಯ. ಸೆಹಾವೆನ್ ಎಂಬುದು ನನ್ನೂರಿನ ಹೆಸರು. ಬೆಳಗ್ಗೆಯೆದ್ದು ಹಲ್ಲುಜ್ಜುತ್ತೇನೆ, ಸ್ನಾನ ಮಾಡುತ್ತೇನೆ, ಶರಟೇರಿಸಿಕೊಂಡು ಪ್ಯಾಂಟೊಳಗೆ ಕಾಲು ತೂರಿಸಿಕೊಂಡು ಒಂದು ಬ್ಯಾಗೆತ್ತಿಕೊಂಡು ಕೆಲಸಕ್ಕೆ ಹೊರಡುತ್ತೇನೆ. ನೆರೆಹೊರೆಯ ಮಂದಿಗೆ ನಾನೆಂದರೆ ಅಚ್ಚುಮೆಚ್ಚು, ಬೆಳಗಿನ ವೇಳೆ ಅವರಿಗೆ ಕೈಬೀಸಿ ವಿಶ್ ಮಾಡುವಾಗ ಅದೇ ಜೋಶಿಯಲ್ಲಿ ಅವರೂ ನನ್ನತ್ತ ಕೈಬೀಸುತ್ತಾರೆ. ನಸುನಗುತ್ತಾರೆ. ಎಲ್ಲ ಸಿಟಿಗಳಂತೆಯೇ ನಾನಿರುವ ನಗರವೂ ಝಗಮಗಿಸುತ್ತಿದೆ. ಎಲ್ಲರೂ ಅವರವರ ಕೆಲಸದೊಳಗೆ ಕಟ್ಟಿಹಾಕಿಕೊಂಡಿದ್ದಾರೆ. ನಾನೂ ಸಹ.
ಎಲ್ಲವೂ ಸರಿಯಿರುವಾಗ ಇತ್ತೀಚೆಗೆ ಒಂದಷ್ಟು ಏಕತಾನ ಪಾತ್ರಗಳು ನನ್ನ ಬದುಕೊಳಗೆ ನುಸುಳಿವೆಯೇ ಎಂಬ ಅನುಮಾನ ನನ್ನೊಳಗೆ ಕೈಕಾಲು ಮಿಸುಕಾಡುತ್ತಿದೆ. ಯಾವ ದಿನವಾದರೂ ಸರಿ, ಯಾವ ಬೀದಿಗೆ, ಯಾವ ಅಂಗಡಿಗೆ, ಯಾವ ಕಛೇರಿಗೆ ಪಾರ್ಕಿಗೆ ಹೋದರೂ ನನಗೆ ಹಿಂದೆ ಆ ಜಾಗದಲ್ಲಿ ಇದ್ದವರು ಅವರೇ ಅನ್ನಿಸುತ್ತಿದೆ. ಮುಖಗಳು ಯಾಕೋ ಬದಲಾಗುತ್ತಲೇ ಇಲ್ಲ, ಒಂದು ಪಾರ್ಕಿನಲ್ಲಿ ವಾರದ ಹಿಂದೆ ನೋಡಿದ ಅದೇ ಮುಖಗಳನ್ನು ಈ ವಾರವೂ ಅಲ್ಲಿ ನೋಡುತ್ತೇನೆ. ಅದೇ ಮಗು, ಅದೇ ವೃದ್ಧೆ, ಅದೇ ಜೋಕಾಲಿ ಜೀಕುವ ಯುವತಿಯರು.. ಯಾಕೆ ಹೀಗಾಗುತ್ತಿದೆ?
ನಿನ್ನೆ ತಾನೇ ಕಛೇರಿ ಮುಗಿಸಿ ನಡೆದು ಬರುತ್ತಿರುವಾಗ ಆಕಾಶದಿಂದ ಎಂಥದೋ ಲೈಟಿನಂತಹ ವಸ್ತು ನನ್ನ ಮುಂದೆ ಬಿತ್ತು.. ತಿರುವಿ ಮಗುಚಿ ನೋಡಿದರೂ ಅದೊಂದು ಲೈಟು ಎಂಬುದನ್ನು ಬಿಟ್ಟು ಮತ್ತೇನೂ ಅರ್ಥವಾಗಲಿಲ್ಲ. ಅದೇ ಟೈಮಿನಲ್ಲಿ ವಿಮಾನ ಅಪಘಾತವಾಗಿ ಅದರ ಬಿಡಿಭಾಗಗಳು ಎಲ್ಲೆಂದರಲ್ಲಿ ಚೆಲ್ಲಾಡಿದ ಬಗ್ಗೆ ರೇಡಿಯೋದಲ್ಲಿ ಒಂದು ಪ್ರಕಟಣೆ. ಇರಬಹುದೇನೋ. ಒಮ್ಮೊಮ್ಮೆ ನನ್ನ ಕಾರ್ ನಲ್ಲಿ ಅಳವಡಿಸಿರುವ ರೇಡಿಯೋ ಯಾರೊಂದಿಗೋ ಮಾತನಾಡಲು ಶುರುವಿಡುತ್ತದೆ, ಮಾತನಾಡುತ್ತಿರುವವರು, ಆಕಡೆಯ ಮಾತುಗಾರರು ಇಬ್ಬರೂ ಯಾರೆಂದು ನನಗೆ ಗೊಂದಲವಾಗುತ್ತದೆ.
ಇರಲಿ.. ಯಾವುದು ಬೇಕಾದರೂ ಚಕ್ರೋಪಾದಿಯಲ್ಲಿ ಸುತ್ತಿಕೊಳ್ಳಲಿ ಅಪರಿಚಿತ ಪಾತ್ರಗಳು ನನ್ನ ಸುತ್ತಲೇ ತಿರುಗಾಡಲಿ.. ಮೆರಿಲ್ ಒಬ್ಬಳ ಸಾಂಗತ್ಯದಲ್ಲಿ ನಾನು ಇತ್ತೀಚೆಗೆ ಹೆಚ್ಚೆಚ್ಚು ಮನುಷ್ಯನಾಗುತ್ತಿದ್ದೇನೆ. ಇವಳ ಜೊತೆಗಿರುವುದೇ ಚೆಂದದ ಅನುಭೂತಿ. ನಾನು ಅವಳನ್ನು ಪ್ರೀತಿಸುತ್ತಿದ್ದೇನಾ, ಇರಬಹುದು. ನಾನು ಸೆಲ್ವಿಯಾಳನ್ನು ಪ್ರೀತಿಸುತ್ತಿರಬಹುದು. ಆದಷ್ಟು ಬೇಗ ಅವಳೆದು ಮೊಣಕಾಲೂರಿ ಕುಳಿತು ಪ್ರೇಮನಿವೇದನೆಗೆ ಅಣಿಯಾಗಬೇಕು.. ಅವಳಿಗೂ ಇದರ ಗುಮಾನಿ ಬಂದಿರಬೇಕು.. ಏನೋ ಹೇಳಲಿಕ್ಕಿದೆ ಸಮುದ್ರ ತೀರದಲ್ಲಿ ಸಿಗು ಎಂದಿದ್ದಾಳೆ.. ಇವತ್ತು ರಾತ್ರಿ ಅವಳೆದುರು ಹೇಳಲೇಬೇಕು. ಸಮುದ್ರತೀರಕ್ಕೆ ತೆರಳಿದ್ದೇನೆ, ಅಲ್ಲಿ ಅವಳಿಲ್ಲ.. ಅವಳ ನೆರಳೂ ಸಹ ಅತ್ತ ಕಾಲಿಟ್ಟಿಲ್ಲ.. ಕಾಯ್ದೆ ಕಾಯ್ದೆ.. ಅವಳು ಬರಲೇ ಇಲ್ಲ. ಆವತ್ತಿನಿಂದ ಅವಳು ನನಗೆ ಮತ್ತೆಂದೂ ಸಿಗಲೇ ಇಲ್ಲ. ಯಾಕೆ ಹೀಗಾಗುತ್ತಿದೆ.. ಎಲ್ಲವೂ ಅಯೋಮಯದಂತೆ, ನನ್ನ ಬದುಕಿಗೆ ಹತ್ತಿರವಾಗಿ ಇರಬೇಕಿದ್ದವರೆಲ್ಲರೂ ರಪರಪನೆ ದೂರವೇಕೆ ಓಡುತ್ತಿದ್ದಾರೆ, ಬೀದಿಬೀದಿಗಳಲ್ಲಿ ಅವವೇ ಮುಖಗಳು ಏಕೆ ಕಾಣಿಸುತ್ತಿವೆ? ಬೇರೆ ಮುಖಗಳೆಲ್ಲಿ ಹೋದವು. ಸೆಹವಾನ್ ನಗರವೇ ಬೇಸತ್ತುಹೋಗಿದೆ, ಊರ ಹೊರಗಾದರೂ ಹೋಗಿ ಓಡಾಡಿಕೊಂಡು ಬರಬೇಕು. ಈ ಊರು ನಗರ ನನ್ನದಲ್ಲವೆನ್ನಿಸುತ್ತಿದೆ. ಈ ನಗರವನ್ನು ಬಿಟ್ಟು ಮೊದಲು ತೊಲಗಬೇಕು.
ಊರುಬಿಡಲು ಸಿದ್ಧನಾಗಿ ಏರ್ ಪೋರ‍್ಟಿಗೆ ಬಂದರೆ ನಾನು ತೆರಳಬೇಕಿರುವ ನಗರವನ್ನು ಹೊರತುಪಡಿಸಿ ಮಿಕ್ಕೆಲ್ಲ ವಿಮಾನಗಳೂ ಕಾರ‍್ಯಾಚರಿಸುತ್ತಿವೆ. ಬದಲಿ ವಿಮಾನವನ್ನು ಆಯ್ಕೆ ಮಾಡಿಕೊಂಡ ತಕ್ಷಣ ಆ ವಿಮಾನಯಾನವೂ ರದ್ದುಗೊಂಡಿದೆಯೆಂದು ಸಿಬ್ಬಂದಿಗಳು ಭಯಮಿಶ್ರಿತ ದನಿಯಲ್ಲಿ ಹೇಳುತ್ತಿದ್ದಾರೆ. ಬಸ್ಸಿನಲ್ಲಾದರೂ ಈ ಊರು ಬಿಟ್ಟು ಓಡಿಹೋಗೋಣವೆಂದರೆ ಬಸ್ಸುಗಳೆಲ್ಲವೂ ಸ್ಥಗಿತಗೊಂಡಿವೆ. ನಾನು ಹತ್ತಬೇಕಿರುವ ಬಸ್ಸುಗಳು ಮಾತ್ರ ಸ್ಥಗಿತಗೊಳ್ಳುತ್ತಿರುವುದೇಕೆ? ಹಾಳಾಗಲಿ ನನ್ನ ಕಾರಿನಲ್ಲೇ ಈ ಹಾಳೂರನ್ನು ಬಿಟ್ಟು ತೊಗುತ್ತೇನೆ.. ಇದೇನಿದು ನಾನು ಹೋಗಬೇಕಿರುವ ರಸ್ತೆಗಳಲ್ಲೇ ಅಪಘಾತಗಳಾಗಿ ರಸ್ತೆಗಳು ನಿರ್ಬಂಧನೆಗೊಳಗಾಗಿವೆ. ನನ್ನ ಕಾರು ತೆಗೆದುಕೊಂಡ ತಿರುವುಗಳಲ್ಲೇ ಟ್ರಾಫಿಕ್ ಜಾಮುಗಳಾಗುತ್ತಿವೆ. ಏನಾಗುತ್ತಿದೆ ಈ ಊರಲ್ಲಿ? ಏನಾಗುತ್ತಿದೆ ನನ್ನ ಬದುಕಿನೊಳಗೆ? ಎಲ್ಲವೂ ಗೋಜಲು ಗೋಜಲಾಗುತ್ತಿರುವ ಸಮಯದಲ್ಲಿ ನಾನು ಚಿಕ್ಕಂದಿನಲ್ಲೇ ಸತ್ತು ಹೋಗಿದ್ದಾನೆ ಎಂದು ನಂಬಿಕೊಂಡಿದ್ದ ನನ್ನ ಅಪ್ಪ ಇದ್ದಕ್ಕಿದ್ದಂತೆ ನನ್ನೆದುರು ಬಂದಿದ್ದಾನೆ. ನನ್ನಪ್ಪನ ವಿವರಗಳು ನನಗೆ ಗೊತ್ತಿರುವಷ್ಟೂ ಈ ವ್ಯಕ್ತಿಗೆ ತಿಳಿದಿಲ್ಲ.. ಬಂದಷ್ಟೇ ವೇಗದಲ್ಲಿ ಈತನೂ ಮಾಯವಾಗಿದ್ದಾನೆ. ಏನಾಗುತ್ತಿದೆ ನನ್ನ ಸುತ್ತ?
ಒಂದಂತೂ ಸತ್ಯ.. ನನ್ನ ಇಡೀ ಬದುಕನ್ನು ಚಲನವಲನಗಳನ್ನು ಯಾವುದೋ ಒಂದು ನಿಯಂತ್ರಿಸುತ್ತಿದೆ ಎನಿಸುತ್ತಿದೆ. ಊರೊಳಗೆ ಇರುವಾಗ ಎಲ್ಲವೂ ಸಹನೀಯವಾಗಿದ್ದುದು ಊರು ತೊರೆಯಲು ನಿರ್ಧರಿಸಿದ ನಂತರ ನನ್ನ ವಿರುದ್ಧ ಎಲ್ಲವೂ ತಿರುಗಿ ಬೀಳುತ್ತಿವೆ, ನನ್ನ ಕೊರಳಿಗೆ ಯಾವುದೋ ಸರಪಳಿ ಸುತ್ತಿಕೊಂಡಿರುವ ಗುಮಾನಿಗಳು ಮೂಡುತ್ತಿವೆ. ಇಲ್ಲ ಇಲ್ಲ.. ಈ ಸರಪಳಿಯೊಳಗೆ ಕೊರಳು ಸಿಗಿಸಿಕೊಂಡು ನರಳುವುದು ನನಗೆ ಬೇಕಿಲ್ಲ. ಇಲ್ಲಿಂದ ಓಡಿಹೋಗುತ್ತೇನೆ. ಈ ನಗರ, ಆ ಸರಪಳಿ, ಈ ಅನೂಹ್ಯ ಬಂಧನ.. ಎಲ್ಲವೂ ಇವತ್ತಿಗೆ ಸಾಕು.. ನನಗೊಂದು ಬಿಡುಗಡೆ ಬೇಕು. ಹೇಗಾದರೂ ಸರಿಯೇ ಇಲ್ಲಿಂದ ಓಡಿ ಹೋಗುತ್ತೇನೆ.. ನನ್ನ ಮನೆಯ ಕೆಳಕೋಣೆಯಿಂದ ಒಂದು ಕಳ್ಳಗಿಂಡಿಯ ಮೂಲಕ ಓಡಿಹೋಗುತ್ತೇನೆ. ಅಗೋ ಸಮುದ್ರ ತೀರದ ಹಲ್ಲುಗಂಭಕ್ಕೆ ಕಟ್ಟಿದ ಪುಟ್ಟ ದೋಣಿಯೊಂದಿದೆ. ಕೊಲಂಬಸನ ಹಡಗಿಗಿದ್ದ ಹೆಸರು ಅದರದು.. ಸಂತಾ ಮಾರಿಯ. ದೋಣಿಯೊಳಗೆ ಕುಳಿತು ಹುಟ್ಟು ಹಾಕುತ್ತ ಹಾಕುತ್ತ ನನ್ನನ್ನು ಕಟ್ಟಿ ಹಾಕಿರುವ ಈ ನಗರದಿಂದ ತಪ್ಪಿಸಿಕೊಳ್ಳುತ್ತಿದ್ದೇನೆ. ಇದೇನಿದು ದೋಣಿ ಯಾವುದಕ್ಕೋ ಅಡ್ಡ ಬಡಿದು ನಿಂತುಬಿಟ್ಟಿತಲ್ಲ.. ಇದು ಗೋಡೆಯೋ ಆಕಾಶವೋ, ಗೋಡೆಗೆ ಆಕಾಶದ ಬಣ್ಣ ಬಳಿಯಲಾಗಿದೆ.. ತೀರದಲ್ಲಿ ನಿಂತು ನೋಡಿದಾಗ ಆಕಾಶದಂತೆ ಕಂಡಿದ್ದು ಈ ಗೋಡೆಯೇ? ಈ ಆಕಾಶದ ಬಣ್ಣದ ಗೋಡೆಗೆ ಢಿಕ್ಕಿ ಹೊಡೆದು ಮುಂದೆ ಹೋಗಲಾರದೆ ನನ್ನ ದೋಣಿ ನಿಂತಿದೆ.. ತಲೆಯೆತ್ತಿ ನೋಡುತ್ತೇನೆ, ಅಲ್ಲಿನ ಆಕಾಶವೂ ಆಕಾಶವೋ ಅಥವಾ ಗುಮ್ಮಟವೊಂದಕ್ಕೆ ಆಕಾಶದ ಬಣ್ಣ ಬಳಿಯಲಾಗಿದೆಯೋ? ಆ ಕೃತಕ ಆಕಾಶದೊಳಗೆ ಮಿನುಗುತ್ತಿದ್ದುದು ನಕ್ಷತ್ರಗಳೋ ಅಥವಾ ಲೈಟುಗಳೋ, ಚಂದ್ರನೂ ಸುಳ್ಳೇ ಹಾಗಾದರೆ.. ನಾನು ಎಲ್ಲಿದ್ದೇನೆ, ಯಾವ ಜಗತ್ತಿನಲ್ಲಿದ್ದೇನೆ.. ಆಕಾಶ, ನೀರು, ಮೋಡ, ನಕ್ಷತ್ರ, ಎಲ್ಲವೂ ಕೃತಕ. ಹುಟ್ಟಿದಾಗಿನಿಂದ ನಾನು ಪ್ರತಿನಿತ್ಯ ವ್ಯವಹರಿಸುತ್ತಿದ್ದ ಮುಖಗಳೂ, ಸಂಬಂಧಗಳು, ಬೀದಿ, ರಸ್ತೆ, ಮನೆ, ಕಛೇರಿ ಎಲ್ಲವೂ ಕೃತಕ.. ಏನಾಗಿಬಿಟ್ಟೆ ನಾನು? ಯಾರು ಕೂಡಿಹಾಕಿದ್ದು ಈ ಪಂಜರದೊಳಗೆ ನನ್ನನ್ನು?
ದೋಣಿಯೊಳಗೆ ಅಳವಡಿಸಲಾಗಿರುವ ರೇಡಿಯೋ ಒಂದರ ಮೂಲಕ ನಿಧಾನಕ್ಕೆ ನನ್ನೊಂದಿಗೆ ಒಂದು ದನಿ ಮಾತನಾಡುತ್ತದೆ..
ಟ್ರೂಮನ್ ನೀನು ನನ್ನ ಕಲ್ಪನೆಯ ಕೂಸು.. ಇಷ್ಟು ದಿನ ನೀನು ಹುಟ್ಟಿದಾಗಿನಿಂದ ಬದುಕಿದ್ದು, ಬೆಳೆದಿದ್ದು, ಪ್ರೇಮಿಸಿದ್ದು ನಕ್ಕಿದ್ದು, ಅತ್ತಿದ್ದು ಎಲ್ಲವೂ ಒಂದು ಕೃತಕವಾದ, ನಿನಗಾಗಿಯೇ ನಿರ್ಮಿತಗೊಂಡ ನಗರವೊಂದರಲ್ಲಿ.. ಇಷ್ಟು ದಿನ ನೀನು ಬೆಳೆದಿದ್ದು ಎಲ್ಲವೂ ಬರೀ ಮುಖಗಳು ಮಾತ್ರ. ದಿನಗೂಲಿ ಮುಖಗಳು. ಇದೊಂದು ಟಿವಿ ರಿಯಾಲಿಟಿ ಶೋ ಟ್ರೂಮನ್. ನಿನ್ನ ತಾಯಿಗೆ ನೀನು ಬೇಡದ ಕೂಸಾಗಿದ್ದೆ.. ಗರ್ಭಪಾತಕ್ಕೆಂದು ಆಸ್ಪತ್ರೆಗೆ ಬಂದಾಗ ಆಕೆಗೆ ಈ ರಿಯಾಲಿಟಿ ಶೋ ಬಗ್ಗೆ ತಿಳಿಸಿ ನೀನು ಭ್ರೂಣವಾಗಿದ್ದಾಗಿನಿಂದಲೂ ನಿನ್ನ ಸುತ್ತ ಸಾವಿರಾರು ಕೆಮರಾಗಳು ನಿನ್ನನ್ನು ಶೂಟ್ ಮಾಡುತ್ತಿವೆ. ನೀನು ಹುಟ್ಟಿದ ನಂತರ ಈ ಕೃತಕ ನಗರವೊಂದಕ್ಕೆ ತಂದು ಬಿಡಲಾಯಿತು. ಇದು ನಗರವಲ್ಲ. ನಗರವೊಂದರ ಬೃಹತ್ ಸೆಟ್ಟು. ಇಲ್ಲಿ ನೀನು ಯಾವುದೆಲ್ಲವನ್ನೂ ಸತ್ಯವೆಂದು ನಂಬಿದ್ದೆಯೋ ಅವೆಲ್ಲವೂ ಬಾಡಿಗೆಯ ಆಧಾರದಲ್ಲಿ ನಿನಗಾಗಿಯೇ ಎಂದು ರೂಪಿಸಲಾದ ಒಂದು ವ್ಯವಸ್ಥೆ. ಇದರೊಳಗೆ ನಿನ್ನ ಪ್ರಿಯತಮೆ ಸೆಲ್ವಾ ಕೂಡ ದಿನಗೂಲಿ ಆಧಾರದಲ್ಲಿ ನೇಮಕವಾದವಳು. ನಿನ್ನ ಪ್ರೀತಿ ಈ ರಿಯಾಲಿಟಿ ಶೋಗೆ ಅಡೆತಡೆಯಾಗಬಹುದೆಂದು ಆಕೆಯನ್ನು ಕೆಲಸದಿಂದ ತೆಗೆದೆವು. ಒಟ್ಟು ನಗರದ ಎಲ್ಲೆಡೆಯೂ ಕೆಮೆರಾಗಳು ನಿನ್ನನ್ನು ಶೂಟ್ ಮಾಡುತ್ತಿದ್ದವು. ನಿನ್ನೆದುರು ನಿಲ್ಲುವ ಪ್ರತಿಯೊಬ್ಬ ನಟರ ಶರ್ಟಿನ ಗುಂಡಿಗಳಲ್ಲೂ ಹಿಡನ್ ಕೆಮೆರಾಗಳಿದ್ದವು. ನಿನ್ನ ಪ್ರತಿನಿತ್ಯದ ಚಟುವಟಿಕೆಯನ್ನು ದಿ ಟ್ರೂಮನ್ ಶೋ ಮೂಲಕ ಕಾರ್ಪೊರೇಟ್ ಏಜೆನ್ಸಿಯೊಂದು ನಿನ್ನನ್ನು ಇಡೀ ಜಗತ್ತಿನ ಜನ ಟೀವಿಗಳಲ್ಲಿ ನೋಡುವಂತೆ ಮಾಡಿತ್ತು. ನೀನು ಬಳಸುವ ಎಲ್ಲ ದಿನಬಳಕೆ ಪ್ರಾಡಕ್ಟ್ ಗಳು ಜಾಹಿರಾತಾಗಿ ಜಗತ್ತಿನಾದ್ಯಂತ ಪ್ರಸಿದ್ಧಿಗೆ ಬಂದಿವೆ. ಟ್ರೂಮನ್.. ನೀನೀಗ ನೂರಾರು ಪ್ರಾಡಕ್ಟ್ ಗಳ ಬ್ರಾಂಡ್ ಅಂಬಾಸಡರ್. ನೀನೀಗ ಇಡೀ ಜಗತ್ತಿನ ಸೂಪರ್ ಸ್ಟಾರ್. ತಪ್ಪಿಸಿಕೊಂಡು ಹೋಗುವ ಪ್ರಯತ್ನ ಬೇಡ ಟ್ರೂಮನ್.. ನಗರದೊಳಗೆ ವಾಪಸ್ಸು ಹೋಗು..
ರೇಡಿಯೋ ಬಂದ್ ಆಗುತ್ತದೆ.. ಕಳೆದ ೩೦ ವರ್ಷಗಳಲ್ಲಿ ನಾನು ಬದುಕಿದ್ದು ರಿಯಾಲಿಟಿ ಶೋ ಒಂದರ ಸೆಟ್ ಒಳಗಾ?.. ಎಲ್ಲವೂ ಸುಳ್ಳೇ? ನಾನಾದರೂ ಸತ್ಯವೋ ಅಥವಾ ನಾನೂ ಒಂದು ಸುಳ್ಳೋ? ಆಕಾಶದ ಗೋಡೆಗೆ ಕಟ್ಟಿಕೊಂಡ ಮೆಟ್ಟಿಲುಗಳನ್ನೇರಿ ನನ್ನದಲ್ಲದ ನನಗಾಗಿಯೇ ನಿರ್ಮಿತಗೊಂಡ ಮಿಥ್ಯಾಜಗತ್ತಿನ ಹೊರಗೆ ಹೋಗುತ್ತಿದ್ದೇನೆ.. ಅಲ್ಲಿ ಏನೇನೋ ಹೊಸ ಹೊಸದಾಗಿ ಕಾಣುತ್ತಿವೆ.. ಅವು ನನಗೇನೂ ಅರ್ಥವಾಗುತ್ತಿಲ್ಲ.
ಇದು ಜಿಮ್ ಕ್ಯಾರಿ ನಟಿಸಿ ಪೀಟರ್ ವಿಯರ್ ನಿರ್ದೇಶಿಸಿದ ದಿ ಟ್ರೂಮನ್ ಶೋ ಚಿತ್ರದ ಕಥಾ ಹಂದರ. ಇದರೊಳಗಿನ ಆಂತರ್ಯಗಳನ್ನು ಬಿಡಿಸಿಡುವ ಅಗತ್ಯವೇ ಇಲ್ಲದಷ್ಟು ಈ ಚಿತ್ರ ಇವತ್ತಿನ ಮೀಡಿಯಾ ಜಗತ್ತಿನ ಮಿಥ್ಯಾರೂಪಿ ಅವಲಂಬನೆಗಳನ್ನು ವಿಮರ್ಶಿಸುತ್ತದೆ. ಓವಿ ಚಾನೆಲ್ ಗಳಲ್ಲಿ ರಿಯಾಲಿಟಿ ಶೋ ಎಂಬ ಕಾನ್ಸೆಪ್ಟ್ ಹುಟ್ಟಿಕೊಂಡ ಆರಂಭಿಕ ದಿನಗಳಲ್ಲಿ ತೆರೆಕಂಡ ಈ ಚಿತ್ರ ಮೀಡಿಯಾ ಜಗತ್ತು ನಮ್ಮೆದುರು ತಂದು ಸುರಿಯುತ್ತಿರುವ ರಂಜನೆಯ ಹೆಸರಿನ ವಿಕೃತಿಗಳನ್ನು ಇದಕ್ಕಿಂತ ಹೆಚ್ಚಿನದಾಗಿ ವಿಮರ್ಶಿಸುತ್ತದೆ. ಸಾಧ್ಯವಾದರೆ ಒಮ್ಮೆ ಚಿತ್ರ ನೋಡಿ.
ತನ್ನ ಏಸ್ ವೆಂಟೂರ ಪತ್ತೇದಾರಿ ಹಾಸ್ಯಚಿತ್ರಗಳಲ್ಲಿ ಪೆಂಗುಪೆಂಗಾಗಿ ನಗಿಸುತ್ತಿದ್ದ ಜಿಮ್ ಕ್ಯಾರಿಯ ಅಭಿನಯದ ಮತ್ತೊಂದು ಮಗ್ಗುಲು ಟ್ರೂಮನ್ ಶೋ ಸಿನಿಮಾದಲ್ಲಿ ಅನಾವರಣಗೊಂಡ ಬಗೆ ಅದ್ಭುತ. ಸಿನಿಮಾಗಳು ಮಾತನಾಡುತ್ತವೆ. ಅವನ್ನು ಕೇಳಿಸಿಕೊಳ್ಳುವ ಸಹನೆ ನಮಗಿರಬೇಕು. ಹೀಗೆ ಸಮಕಾಲೀನತೆಯಲ್ಲಿ ಹಾಸುಹೊಕ್ಕಾದ ವಸ್ತುವೊಂದನ್ನು ರಂಜನೆಯ ಮೂಲಕ ವಿಮರ್ಶಿಸಿದ ಟ್ರೂಮನ್ ಶೋ ಚಿತ್ರವನ್ನು ನೀವೊಮ್ಮೆ ನೋಡಲೇಬೇಕು.
ಕೆಂಡಸಂಪಿಗೆಯಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ |
Monday, 16 April 2012
ದಿ ಟ್ರೂಮನ್ ಶೋ
Labels:
ಚಿತ್ರ ವಿಮರ್ಶೆ,
ಲೇಖನ
Subscribe to:
Post Comments (Atom)
No comments:
Post a Comment