ಕ್ರಿಸ್ಟೋಫರ್ ಜಾನ್ಸನ್ ಮೆಕಾಂಡ್ಲೆಸ್ ಸೂಪರ್‌ಟಾಂಪ್ (ಮಹಾ ಅಲೆಮಾರಿ) ಎಂಬ ಅಡ್ಡಹೆಸರನ್ನು ತನಗೆ ತಾನೇ ಇಟ್ಟುಕೊಂಡು ಲಕ್ಷಗಟ್ಟಲೆ ಡಾಲರ್ ಸಂಬಳವನ್ನು ಎಡಗಾಲಲ್ಲಿ ಒದ್ದೆದ್ದು ಅಲಾಸ್ಕಾಗೆ ನಡೆದುಕೊಂಡೇ ಹೋಗ್ತೇನೆ ಎಂದು ನಡೆಯುತ್ತಲೇ ಬದುಕಿದವ. ಅಲಾಸ್ಕಾಗೆ ಹೋಗುವ ನಡಿಗೆಯ ದಾರಿಯಲ್ಲಿ ಸಿಗುವ ಮಣಗಟ್ಟಲೆ ಏಕಾಂತವನ್ನಷ್ಟೇ ನಂಬಿಕೊಂಡು ನಡೆದ ಮೆಕಾಂಡ್ಲೆಸ್, ಇರುವಷ್ಟು ದಿನ ಸರಳವಾಗಿರು, ನಿನ್ನ ಸುತ್ತಮುತ್ತ ಯಾವ ಮನುಷ್ಯ ನಿರ್ಮಿತ ಸ್ಥಾವರಗಳನ್ನು ಕಟ್ಟಿಕೊಳ್ಳಬೇಡ ಎಂಬ ತನ್ನೊಳಗಿನ ಕೂಗಾಟಕ್ಕೆ ಕಿವಿಯನ್ನು ಅಡವಿಟ್ಟವ, ಎಲ್ಲವನ್ನೂ ಬಿಟ್ಟು ಮತ್ತೇನನ್ನೋ ಹುಡುಕುತ್ತ ನಡೆದ ಮೆಕಾಂಡ್ಲೆಸನ ಶವ ಆತನೆ ಬೆತ್ತಲೆಯಾನ ಶುರುಗೊಂಡ ೪ ತಿಂಗಳ ನಂತರ ಒಂದು ಶಾಲಾಮಕ್ಕಳ ಕೆಟ್ಟುನಿಂತ ವಾಹನದೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗುತ್ತದೆ. ಸಾಯುವಾಗ ಆತ ತನಗಿದ್ದ ದೇಹದಾರ್ಡತ್ಯೆಯೆಲ್ಲವನ್ನೂ ಬರೋಬ್ಬರಿ ಕಳೆದುಕೊಂಡು ೩೦ ಕೇಜಿಯಷ್ಟೇ ಆಗಿ ಉಳಿದುಬಿಟ್ಟಿದ್ದ. ಆತನ ಶವದೊಟ್ಟಿಗೆ ಆತನ ಡೈರಿಯೂ ಸಿಕ್ಕಿತು. ಸಾಯುವ ಹಿಂದಿನ ಸೆಕೆಂಡಿನವರೆಗೂ ಮೆಕಾಂಡ್ಲೆಸ್ ತನ್ನ ಡೈರಿಯೊಳಗೆ ತನಗಾದ ಸಂಪೂರ್ಣ ಅನುಭವಗಳೆಲ್ಲವನ್ನೂ ದಾಖಲಿಸಿಯೇ ಸೃಷ್ಟಿಗೆ ಮಾರಿಕೊಂಡಿದ್ದ. ಅದನ್ನು ಆಧರಿಸಿ ಜಾನ್ ಕ್ರಾಕರ್ ಎಂಬ ಅಮೆರಿಕನ್ ಲೇಖಕ ೧೯೯೬ರಲ್ಲಿ ಬರೆದ ಇನ್ ಟು ದಿ ವೈಲ್ಡ್ ಕೃತಿಯು ಬೆಸ್ಟ್ ಸೆಲ್ಲರ್ ಆಫ್ ದಿ ಇಯರ್ ಮುಕುಟಕ್ಕೆ ತಲೆ ಕೊಟ್ಟಿತಷ್ಟೇ ಅಲ್ಲ ಮೆಕಾಂಡ್ಲೆಸ್ ಎಂಬ ಮಹಾ ಅಲೆಮಾರಿಯ ಬಗ್ಗೆ ಅರ್ಧಜಗತ್ತು ಗಕ್ಕನೆ ನಿಂತು ಹಿಂತಿರುಗಿ ನೋಡುವಂತಾಗಿತ್ತು. ಇಷ್ಟಕ್ಕೂ ಮೆಕಾಂಡ್ಲೆಸನ ತಲೆಯೊಳಗೆ ಅಲಾಸ್ಕಾ ಹಿಮಗಡ್ಡೆಗಳ ಮಡುವಿನೊಳಗೆ ಖಾಲಿಜೇಬು ಹೊತ್ತುಕೊಂಡು ಬರಿಗಾಲಲ್ಲೇ ಓಡಬೇಕು ಅಂತ ಅನ್ನಿಸಿತ್ತಾದರೂ ಏಕೆ? ಆತನೇಕೆ ಆ ಮಟ್ಟಿಗಿನ ಅರಾಜಕತೆ ಅಥವಾ ಹೊಸತಿನ ಹುಡುಕಾಟಕ್ಕೆ ಸಿಲುಕಿದ್ದ, ಅವನು ಹುಡುಕಿದ್ದಾದರೂ ಏನು ಕಡೆಗೆ ಪಡಕೊಂಡಿದ್ದು ಏನು ಎಂಬುದನ್ನು ನೋಡಬೇಕೆಂದರೆ ಮೆಕಾಂಡ್ಲೆಸನ ಹೆಜ್ಜೆಗುರುತುಗಳ ಒಳಗೆ ನಮ್ಮ ಬೆತ್ತಲೆ ಪಾದಗಳೂ ಇಳಿಯಬೇಕು. ಕೆಲಿಫೋರ್ನಿಯಾದ ಎಲ್ ಸೆಗುಂಡೋ ಎಂಬಲ್ಲಿ ಏರ್ ಕ್ರಾಫ್ಟ್ ಕಂಪೆನಿಯೊಂದರ ಸೆಕ್ರೆಟರಿ ತಾಯಿಗೂ ಆಂಟೆನಾ ತಜ್ಞ ತಂದೆಗೂ ಜನಿಸಿದ ಮೆಕಾಂಡ್ಲೆಸ್ ತನ್ನ ಕಣ್ಣೆದುರೇ ಕಿತ್ತಾಡಿಕೊಂಡು ಬೇರೆಯಾದ ಪೋಷಕರನ್ನು ಬಹಳ ಹತ್ತಿರದಿಂದ ನೋಡಿದವ. ಶಾಲೆಯಲ್ಲಿದ್ದಾಗಲೂ ತನ್ನದೇ ರೆಗ್ಯುಲರ್ ಅಲ್ಲದ ಸಿದ್ಧಾಂತದ ಪ್ರಭಾವಳಿಗೆ ಸಿಲುಕಿದ್ದ. ಶಾಲೆಯ ಗುಡ್ಡಗಾಡು ಓಟವೊಂದರ ತಂಡದ ನಾಯಕನಾಗಿ ತನ್ನ ತಂಡದ ಸದಸ್ಯರಿಗೆ ಜಗತ್ತಿನ ಎಲ್ಲ ಕೆಡುಕುಗಳೂ ನಿಮ್ಮ ಬೆನ್ನು ಬಿದ್ದಿವೆ ಎಂದು ಭಾವಿಸಿಕೊಂಡು ಅದರಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದೇವೆಂದು ಭಾವಿಸಿಕೊಂಡು ಓಡಿ ಎಂದು ಹುರುಪು ತುಂಬುತ್ತಿದ್ದ. ಕಾಲೇಜು ಹಂತಕ್ಕೆ ಬರುವುದರೊಳಗಾಗಿ ತಮ್ಮ ಗೊತ್ತುಗುರಿಯಿಲ್ಲದ ಅಲೆದಾಟಗಳ ಮೂಲಕ ಜಗತ್ತಿನ ಕೃತಕ ಭೌತಿಕ ಪರಿಸರದೊಳಗಿರುವುದು ಏನೇನೂ ಅಲ್ಲ, ಅದರ ತುಂಬ ಮನುಷ್ಯ ನಿರ್ಮಿತ ಶೂನ್ಯವಷ್ಟೇ ತುಂಬಿಕೊಂಡಿದೆ ಎಂಬ ನಿರ್ಧಾರಕ್ಕೆ ತಲುಪಿಯಾಗಿತ್ತು. ೧೯೯೦ರಲ್ಲಿ ಪದವಿ ಮುಗಿಸುವ ಹೊತ್ತಿಗೆ ಮೆಕಾಂಡ್ಲೆಸ್ ಕಟ್ಟಲ್ಪಟ್ಟವುಗಳ ಬಗ್ಗೆ, ಸಮುದಾಯದೊಳಗಿನ ಅನಗತ್ಯ ಶಿಸ್ತುಗಳ ಬಗ್ಗೆ, ಕೆಲಸ, ಉದ್ಯೋಗ, ಕಛೇರಿ, ಮನೆ, ಕುಟುಂಬ, ಸಂಬಳ, ಪ್ರವಾಸ, ಗಂಡಹೆಂಡಿರ ಗಂಟುಪಾಡು ಸಂಸಾರ, ಸಮಾಜದ ಕಟ್ಟುಪಾಡುಗಳು, ರಿವಾಜುರೀತಿಗಳೆಲ್ಲವುಗಳಿಂದ ರೋಸೆದ್ದು ಹೋದಂತೆ ಇವ್ಯಾವುದೂ ಬೇಡವೆಂದು ಒಂದು ದಿನ ಅಲಾಸ್ಕಾ ಹಿಮಪ್ರದೇಶಕ್ಕೆ ನಡೆದುಹೋಗುತ್ತೇನೆಂದು ಎಲ್ಲವನ್ನೂ ಬಿಟ್ಟು ನಡೆಯತೊಡಗುತ್ತಾನೆ. ಜೇಬಿನೊಳಗಿನ ದುಡ್ಡು ಮತ್ತು ಎಟಿಎಂ ಕಾರ್ಡುಗಳೂ ಸಹ ತನ್ನನ್ನು ನಿಯಂತ್ರಿಸಲು ಯತ್ನಿಸುತ್ತಿವೆ ಎಂದು ಭಯಗೊಳ್ಳುವ ಮೆಕಾಂಡ್ಲೆಸ್ ಅವೆರಡನ್ನೂ ಹರಿದು ಬೆಂಕಿಯಿಟ್ಟು ಬೆತ್ತಲೆ ಹೆಜ್ಜೆಗಳಿತ್ತ ಅಲಾಸ್ಕಾ ದಾರಿಯಲ್ಲಿನ ದುರ್ಗಮತೆಯತ್ತ ಪ್ರಕೃತಿಯನ್ನಷ್ಟೇ ನಂಬಿಕೊಂಡು ನಡೆಯಲು ಶುರುವಿಡುತ್ತಾನೆ.. ದಿಕ್ಕು ಸೂಚಿಸುವ ದಿಕ್ಸೂಚಿಯನ್ನೂ ಮುಟ್ಟದೆ ದೂರವಿಡುವ ಆತ ಅಲಾಸ್ಕಾದ ದಾರಿಯನ್ನೂ ತಾನೇ ಕಂಡುಕೊಳ್ಳುತ್ತ ನಡೆಯುತ್ತ ನಡೆಯುತ್ತ ತನ್ನಂತಹವರೇ ಬಹಳಷ್ಟು ಜನರನ್ನು ಸಂಧಿಸುತ್ತ ಅವರೊಡನೆ ಹರಟುತ್ತ, ಹುಡುಗಿಯೊಬ್ಬಳೊಟ್ಟಿಗೆ ಸೃಷ್ಟಿಯ ಪರಮೋದ್ದೇಶವಾದ ದೈಹಿಕಸಂಗಮಕ್ಕೂ ಒಳಗಾಗಿ, ಕಟ್ಟುಪಾಡುಗಳನ್ನು ಬೇಡುವ ಅವಳ ಪ್ರೇಮವನ್ನೂ ತ್ಯಜಿಸಿ, ನೀರು ಕಂಡಲ್ಲಿ ಕುಡಿಯುತ್ತ ಕೈಗೆ ಸಿಕ್ಕಿದ್ದನ್ನು ತಿಂದುಕೊಂಡು ಕೊನೆಗೆ ಡೆನಾಲಿ ನ್ಯಾಷನಲ್ ಪಾರ್ಕ್ ಬಳಿ ಕೆಟ್ಟು ನಿಂತಿದ್ದ ಹಳೆಯ ಶಾಲಾ ವಾಹನದೊಳಗೆ ತನ್ನ ಗುಡಾರವನ್ನು ಕಂಡುಕೊಳ್ಳುತ್ತಾನೆ. ಹತ್ತು ಪೌಂಡ್ ನಷ್ಟಿರುವ ಅಕ್ಕಿ, ಅಲಾಸ್ಕಾ ಸುತ್ತಮುತ್ತಲಿನ ಮರಗಿಡಗಳ ಕುರಿತ ಒಂದು ಮಾರ್ಗದರ್ಶಿ ಪುಸ್ತಕ ಮತ್ತು ಒಂದು ಬಂದೂಕಷ್ಟೇ ಆತನ ಒಂಟಿ ಸಂಸಾರಕ್ಕೆ ಪ್ರವೇಶ ಪಡೆದ ಅಮೂಲ್ಯ ವಸ್ತುಗಳಾಗಿರುತ್ತವೆ. ಕಣ್ಣಿಗೆ ಕಂಡ ಹಕ್ಕುಗಳನ್ನೂ ಸಣ್ಣಪುಟ್ಟ ಪ್ರಾಣಿಗಳನ್ನೂ ಬಂದೂಕಿನಿಂದ ಕೊಂದು ತನ್ನ ಆಹಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುವ ಮೆಕಾಂಡ್ಲೆಸ್ ಒಮ್ಮೆ ಹಿಮಗಾಡಿನಲ್ಲಿ ಸಾಮಾನ್ಯವಾಗಿರುವ ಭಾರೀಗಾತ್ರದ ಹಿಮಗಡವೆಯೊಂದನ್ನು ಹೊಡೆದುರುಳಿಸುತ್ತಾನೆ, ಆದರೆ ಅದರ ಮಾಂಸವನ್ನು ಮುಂದಿನ ದಿನಕ್ಕಾಗಿ ಕಾಪಿಡಲು ಯತ್ನಿಸಿ ಸೋಲುವ ಆತ ಇಲ್ಲಿಯೂ ತನಗೆ ನಾಳೆಯ ಆಸೆಗಳೇಕೆ ಹುಟ್ಟುತ್ತಿವೆ ಎಂದು ಅಚ್ಚರಿಗೀಡಾಗುತ್ತಾನೆ. ತನ್ನ ಆಹಾರದ ಅವಶ್ಯಕತೆಗಷ್ಟೇ ಮಾಂಸ ಕೊಡುವ ಸಣ್ಣಪುಟ್ಟ ಪ್ರಾಣಿಗಳನ್ನು ಕೊಂದು ಬೇಯಿಸಿ ತಿನ್ನುತ್ತ ಅದೇ ಕೆಟ್ಟುನಿಂತ ಶಾಲಾ ಬಸ್ಸಿನೊಳಗೆ ೩ ತಿಂಗಳು ಕಳೆದುಬಿಡುತ್ತಾನೆ. ತನ್ನ ಮಲಗುವ ಚೀಲದೊಳಗೆ ತೂರಿಕೊಂಡು ಒಬ್ಬೊಬ್ಬನೇ ತಾನು ಕಂಡನುಭವಿಸಿದ ಪ್ರಕೃತಿಯ ವಿಸ್ಮಯಗಳನ್ನು ಧ್ಯಾನಿಸುತ್ತ ಒಬ್ಬನೇ ಬದುಕಿಬಿಡುವ ಮೆಕಾಂಡ್ಲೆಸ್ ಒಂದು ದಿನ ಕುತೂಹಲಕ್ಕೆಂದು ತಿಂದ ಹೆಡಿಸಾರಂ ಮೆಕೆಂಝೀ ಕಾಯಿಯ ಕಾರಣಕ್ಕೆ ಅಸ್ವಸ್ಥತೆಗೆ ಬೀಳುತ್ತಾನೆ. ಮೊದಲಿಗೆ ಇದೇಕೆಂದು ಗೊತ್ತಾಗದೆ ತನ್ನ ಬಳಿಯಿದ್ದ ಮರಗಿಡ, ಸಸಿಬಳ್ಳಿಗಳ ಪುಸ್ತಕವನ್ನು ಹುಡುಕಿದಾಗ ಮೆಕೆಂಝೀ ವಿಷಕಾರಕ ಅಂಶವುಳ್ಳ ಕಾಯಿಯೆಂಬುದು ತಿಳಿಯುತ್ತದೆ. ಮೇಲೆ ಎದ್ದೇಳಾಗದಷ್ಟು ನಿತ್ರಾಣನಾಗುವ ಮೆಕಾಂಡ್ಲೆಸ್ ಆ ಸ್ಥಿತಿಯಲ್ಲೂ ಡೈರಿ ಬರೆಯುವುದನ್ನು ನಿಲ್ಲಿಸುವುದಿಲ್ಲ. ಬರೆದೂ ಬರೆದೂ ಬರೆದೂ.. ಒಂದು ದಿನ ಮೆಕಾಂಡ್ಲೆಸನ ಸಾವೂ ಬಂದು ಅವನೆದೆಯ ಮೇಲೆ ಕುಳಿತು ಆತನ ಜೀವ ತೆಗೆಯುತ್ತದೆ. ಪ್ರೀತಿಗೂ ಮೊದಲು, ದುಡ್ಡು ನಂಬಿಕೆ ಖ್ಯಾತಿ ರಮ್ಯ ರೋಚಕತೆಗೂ ಮೊದಲು.. ನನಗೆ ಸತ್ಯವನ್ನು ಕಂಡುಕೊಳ್ಳಬೇಕಿದೆಯೆಂದು ಅಲಾಸ್ಕಾದೆಡೆಗೆ ನಡೆದ ಮೆಕಾಂಡ್ಲೆಸನ ಹೆಣವನ್ನು ಎರಡು ವಾರಗಳವರೆಗೆ ಜಗತ್ತಿನ ಯಾವ ಜೀವವೂ ಲೆಕ್ಕಕ್ಕೆ ತಂದುಕೊಂಡಿರಲಿಲ್ಲ. ಮನುಷ್ಯ ನಿರ್ಮಿತ ಸಮಾಜ ಮತ್ತು ಸಮಾಜದೊಳಗಿನ ಇಂತಿಷ್ಟೇ ಎಂದು ಗಡಿಗಳನ್ನು ಹೇರುವ ವ್ಯವಸ್ಥೆಯ ವಿರುದ್ದ ಅನಾರ್ಕೋ ಪ್ರಿಮಿಟಿವಿಸಂ ಬಗೆಯ ಧೋರಣೆಯ ಮೂಲಕ ತನ್ನದೇ ಬದುಕುವಿಕೆಯನ್ನು ಕಟ್ಟಹೊರಟು ಕೊನೆಗೆ ಯಾವುದನ್ನು ಹುಡುಕುತ್ತ ಹೊರಟನೋ ಅದರಿಂದಲೇ ಕೊಲೆಯಾದ ಮೆಕಾಂಡ್ಲೆಸನ ಅನುಭವ ಗಾಥೆಗಳನ್ನು ಆಧರಿಸಿದ ಇನ್ ಟು ದಿ ವೈಲ್ಡ್ ಸಿನಿಮಾವನ್ನು ನಿರ್ದೇಶಿಸಿದ್ದು ಖ್ಯಾತ ನಟ ಸೀನ್‌ಪೆನ್. ಎರಡನೆಯ ಮಹಾಯುದ್ಧದ ಕಾಲಘಟ್ಟದಲ್ಲಿ ಸೈನಿಕರಾಗಿ ಬೇರೆ ಬೇರೆ ದೇಶಗಳ ಸೈನಿಕರನ್ನು ತಮ್ಮದಲ್ಲದ ಕಾರಣಗಳಿಗಾಗಿ ಕೊಂದುಹಾಕಿದ ಪಾಪಪ್ರಜ್ಞೆಯೊಳಗೆ ಹುಟ್ಟಿದ ವಿಶಿಷ್ಟ ರೀತಿಯ ಬದುಕುವಿಕೆಯೊಳಗೆ ಜಾರಿಕೊಂಡ ಹಿಪ್ಪಿಗಳಿಗೂ, ಸಮಾಜ ಮತ್ತದರ ನಾಜೂಕಿನ ಪೊರೆ ಹೊತ್ತ ಕ್ರೂರ ಮನಸ್ಥಿತಿಗಳ ವಿರುದ್ಧ ಪರ್ಯಾಯ ಬದುಕುವಿಕೆ ಶೈಲಿಯಲ್ಲಿಯೇ ಬಂಡೆದ್ದ ಮೆಕಾಂಡ್ಲೆಸನ ದುರಂತ ಸಾವಿಗೂ ಸಾಮ್ಯತೆಗಳಿವೆ. ಕಟ್ಟಿದ್ದನ್ನೇ ಬದುಕು, ಗೋಡೆಗಳನ್ನು ದಾಟದಿರು, ಆಲೋಚನೆಯೂ ಸೇರಿದಂತೆ ಎಲ್ಲವಕ್ಕೂ ಮಿತಿಯ ಗೆರೆಯನ್ನೆಳೆದುಕೊಂಡು ಬದುಕು ಎಂಬ ಶಾಸನಗಳನ್ನು ಹೊರಡಿಸುವ ಸಮಾಜ ಮತ್ತು ಅದರ ಹಿಂದಿನ ಶಕ್ತಿಗಳ ವಿರುದ್ಧ ಎಲ್ಲರೊಳಗೂ ಒಂದು ಅಸಮಾಧಾನದ ಹೊಗೆ ಆಡುತ್ತಲೇ ಇರುತ್ತದೆ. ಆದರೆ ಆ ಹೊಗೆಯನ್ನೂದಿ ಬೆಂಕಿ ಮಾಡಿ ಆ ಬೆಂಕಿಯಲ್ಲಿ ನಿರ್ಬಂಧಗಳೆಲ್ಲವನ್ನೂ ಸುಟ್ಟು ಹೊಸತಾದ ಸ್ವಚ್ಛಬೂದಿಯನ್ನು ಸೃಜಿಸುವ ಮನಸ್ಥಿತಿಗೆ ನಾವ್ಯಾರೂ ತಲೆಕೊಡಲು ಹೋಗುವುದಿಲ್ಲ. ಇಡೀ ಇನ್ ಟು ದಿ ವೈಲ್ಡ್ ಚಿತ್ರವು ಮೆಕಾಂಡ್ಲೆಸನ ಹೊಸತರ ಹುಡುಕಾಟ ಮತ್ತು ಅಸ್ತಿತ್ವದಲ್ಲಿರುವ ಮತ್ತು ಕೈಗಳಿಗೆ ಹಗ್ಗ ಬಿಗಿಯುವ ಆಧುನಿಕ ಭೌತಿಕತೆ ಮತ್ತು ಕನ್‌ಸ್ಯೂಮರಿಸಂ ಆಧರಿಸಿದ ಶಿಸ್ತಿನ ಬದುಕನ್ನು ತಿರಸ್ಕರಿಸುವ ಆತನ ಅಸಹನೆಯನ್ನು ಕಟ್ಟಿಕೊಡುವ ಅಪರೂಪದ ಚಿತ್ರ. ಯಾವುದೆಲ್ಲವನ್ನೂ ತ್ಯಜಿಸಿ ಮತ್ತೇನನ್ನೋ ಹುಡುಕುತ್ತ ಹೋಗುವ ಮೆಕಾಂಡ್ಲೆಸನ ಬೆತ್ತಲೆಕಾಲಿನ ನಡಿಗೆ ತಾನು ಹುಡುಕಿ ಹೊರಟದ್ದರ ಮೂಲಕವೇ ಜೀವಸಮೇತ ಅವಸಾನಗೊಳ್ಳುವ ಬಗೆಯೂ ದುರಂತವೇ. ಮನುಷ್ಯನ ಬದುಕು ಪೂರ್ವ ನಿರ್ಮಿತ ಕಾರಣಗಳಿಂದ ಆಳಲ್ಪಡುತ್ತಿದೆ ಎಂದಾದಲ್ಲಿ ಬದುಕಿನ ಎಲ್ಲ ಸಾಧ್ಯತೆಗಳೂ ಅಲ್ಲಿಗೆ ನಾಶಗೊಳ್ಳುತ್ತವೆ ಎಂಬುದನ್ನು ನಂಬಿದ್ದ ಮೆಕಾಂಡ್ಲೆಸನ ಪಾತ್ರದೊಳಗೆ ನಟ ಎಮಿಲಿ ಹರ್ಶ್ ಸಲೀಸಾಗಿ ಲೀನವಾಗಿದ್ದಾನೆ. ಆತನ ಕೆಲವು ದಿನಗಳ ಪ್ರೇಮದೊಳಗೆ ಸಿಲುಕುವ ಹುಡುಗಿಯಾಗಿ ಟ್ವಿಲೈಟ್ ಸಾಗಾ ಸರಣಿ ಚಿತ್ರಗಳ ಮೂಲಕ ಮನೆಮಾತಾದ ನಾಯಕಿ ಬೆಲ್ಲಾಸ್ವಾನ್ ನಟಿಸಿದ್ದಾಳೆ. ಜಾನ್ ಕ್ರಾಕರನ ಕೃತಿ ಓದುವಾಗಿನ ಆಪ್ತತೆ ಮತ್ತು ಮೆಕಾಂಡ್ಲೆಸನ ಸಾಮೀಪ್ಯ ಸಿನಿಮಾದೊಳಗೆ ಅಷ್ಟಾಗಿ ತೆರೆದುಕೊಳ್ಳದಿರುವುದು ಕೃತಿ ಮತ್ತು ದೃಶ್ಯ ಮಾಧ್ಯಮದ ಎಂದಿನ ತಿಕ್ಕಾಟ. ನಮ್ಮೊಳಗಿನ ಕೊಲೆಯಾದ ಅಲೆಮಾರಿ ಮನೋಸ್ಥಿತಿಗೆ ಕೈಕಾಲು ಮೊಳೆತಂತೆ ಬದುಕಿದ್ದ ಜಾನ್ ಕ್ರಿಸ್ಟೋಫರ್ ಮೆಕಾಂಡ್ಲೆಸ್ ಹಲವರಿಗೆ ಮಾದರಿಯೂ, ಶತ್ರುವೂ ಆಗಿ ಇನ್ನಾದರೂ ಕಾಡುವಷ್ಟು ತನಗೆಂದೇ ಬದುಕಿದ್ದು ಅದು ಕೃತಿಯಾಗಿ, ಸಿನಿಮಾರೂಪ ತಳೆದು ಕೋಟ್ಯಂತರ ಜನರನ್ನು ತಲುಪಿದ್ದು ಮತ್ತದೇ ಮೆಕಾಂಡ್ಲೆಸ್ ಪ್ರತಿಭಟಿಸುತ್ತಿದ್ದ ಗ್ರಾಹಕ ಸಂಸ್ಕೃತಿ ಮತ್ತು ಕಟ್ಟಲ್ಪಟ್ಟ ಸಮುದಾಯಿಕ ಸಂರಚನೆಗಳ ಮೂಲಕವೇ ಎಂಬುದು ಅನಿವಾರ್ಯವಾಗಿ ಒಪ್ಪಬೇಕಾದ ಸಂಗತಿ. ಈಗ ಗೆಳೆಯನ ವಿಷಯಕ್ಕೆ ಬರೋಣ. ಕಾಲಿಗೆ ಟೈರು ಕಟ್ಟಿಕೊಂಡು ಇಳಿಜಾರು ಕಂಡ ಕಡೆಯೆಲ್ಲ ಜಾರಲಿಕ್ಕೆ ಹೊರಟಿರುವ ಗೆಳೆಯನ ಹೊಸತನದ ಹುಡುಕುವಿಕೆಗೆ ಮತ್ತು ಅನೂಹ್ಯತೆಗಳನ್ನು ತನ್ನನುಭವದ ಕುಡಿಕೆಕೊಳಗೆ ಬಸಿದುಕೊಳ್ಳಲು ಇರುವುದೆಲ್ಲವನ್ನೂ ಬಿಟ್ಟು ಹೊರಟಿರುವ ಗೆಳೆಯನಿಗೆ ಅಲೆಮಾರಿ ಮೆಕಾಂಡ್ಲೆಸನ ಮನಸ್ಥಿತಿ ವರ್ಗಾವಣೆಗೊಂಡಿರಬಹುದೇ? ಇದು ಇಷ್ಟೇ ಎಂದು ಹೇಳಿ ಕೊಟ್ಟಿರುವ ಜಗತ್ತಿನಲ್ಲಿ ನಾವುಗಳು ಕೈಕಾಲು ನಾಲಿಗೆ ತುಟಿ ಎದೆ ಮನಸ್ಸುಗಳೆಲ್ಲವನ್ನೂ ಬಿಗಿಯಾಗಿ ಕಟ್ಟಿಹಾಕಿಕೊಂಡು ಕುಳಿತಿರುವಾಗ ಈ ಗೆಳೆಯನೊಬ್ಬನಾದರೂ ಅದರಿಂದ ಬಚಾವಾಗಿ ಒಂದಷ್ಟು ದಿನ ಬದುಕಿಕೊಂಡು ಬರುವುದಾದರೆ ಯಾರಿಗೇನೂ ನಷ್ಟವಿಲ್ಲವಲ್ಲ. ಗೆಳೆಯನ ಟೈರು ಕಟ್ಟಿಕೊಂಡ ಕಾಲಿನೆದುರು ಏರುದಿಬ್ಬಗಳು ಎದುರಾಗದಿರಲಿ, ಬೆತ್ತಲೆಹೆಜ್ಜೆಗಳ ಯಾನದ ಯಾವತ್ತಾದರೊಂದು ದಿನ ಮೈಮುರಿದು ಎದ್ದು ನಿಂತ ಹಸಿವಿನ ಸಮಯದಲ್ಲಿ ಅವನಿಗೆ ಹತ್ತಿರದಲ್ಲೆಲ್ಲೂ ಹೆಡಿಸಾರಂ ಮೆಕೆಂಝೀ ಜಾತಿಯ ಮರದ ಕಾಯಿಗಳ್ಯಾವುವೂ ಸಿಗದಿರಲಿ. |
Tuesday, 24 April 2012
ಇನ್ ಟು ದಿ ವೈಲ್ಡ್
Labels:
ಚಿತ್ರ ವಿಮರ್ಶೆ
Subscribe to:
Post Comments (Atom)
ವಿಮರ್ಶೆ ಮನೋಜ್ಞವಾಗಿದೆ, ತುಂಬಾನೇ ಇಷ್ಟ ಆಯ್ತು
ReplyDelete