Monday 30 July 2012

ಒಂದು ಮೋಡದ ತುಂಡು

ಯಾರಿಗೂ ಕಾಯದೆ ಅದರಪಾಡಿಗದು ಜಿನುಗಿಕೊಳ್ಳುವ
ಮಳೆಯ ಭಾಷೆಯನ್ನೇ ಮರೆತವನ ರೆಪ್ಪೆಯ ಮೇಲೆ
ಇವಳು ಒಂದು ಮೋಡದ ತುಂಡನ್ನೇ ಕಿತ್ತುತಂದು ಇಟ್ಟಿದ್ದಾಳೆ,
ಚೆಲ್ಲಾಡಿ ಹೋಗುತ್ತಿದೆ ಮಳೆ, ನನ್ಕಕಣ್ಣೊಳಗಿನ ಭೂಮಿಯೊಳಗೆ..

ಅವಳ ಕಡುಗೆಂಪು ಮದರಂಗಿ ಪಾದದ ಕಿರುಬೆರಳ ಎದುರಿಗೆ
ತಲೆ ಕಡಿದುಕೊಂಡ ನನ್ನೊಳಗಿನ ರಾಕ್ಷಸ ಮಂಡಿಯೂರಿದ್ದಾನೆ,
ಮದರಂಗಿ ಚಿತ್ರದೊಡತಿಯ ತಣ್ಣನೆಯ ಕಣ್ಣೆದುರು
ಮುಲಾಜೇ ಇಲ್ಲದೆ ಕೇವಲ ಮನುಷ್ಯನೊಬ್ಬ ಹುಟ್ಟುತ್ತಿದ್ದಾನೆ.

ಜೀವ ಕುಸುಮದ ಬೀಜವನ್ನು ಕೈಯಲ್ಲೇ ಹೊತ್ತ ಇವಳು
ಇಕೋ ನಿನ್ನ ಎದೆ ಹರವು, ಪ್ರೇಮವೃಕ್ಷದ ಬೀಜಗಳನ್ನು,
ಒಂದೊಂದೇ ನೆಡುತ್ತೇನೆ, ರೆಪ್ಪೆಯ ಮೇಲಿಟ್ಟ ಮೋಡ ಬಸುರಾದಾಗ
ಬೊಗಸೆ ತುಂಬ ನಿನ್ನ ಎದೆಕಾಡೊಳಗೆ ನೀರು ತರುತ್ತೇನೆ ಅನ್ನುತ್ತಾಳೆ.

ಮಾಯಾ ಮಿಥ್ಯೆಗಳ ಬೆಣಚುಕಲ್ಲುಗಳ ಮೇಲೆ ಇಲ್ಲಿಯತನಕ ನಡೆದ ನಾನು
ಅವಳು ತರುವ ಬೊಗಸೆನೀರಿಗೆ ಜೀವ ಮುಷ್ಠಿಯಲ್ಲಿಡಿದು
ರೆಪ್ಪೆಯನ್ನೂ ಮಿಟುಕಿಸದೆ ಕುಕ್ಕರಗಾಲಲ್ಲಿ ಕುಳಿತಿದ್ದೇನೆ..
ರೆಪ್ಪೆ ಮಿಟುಕಿಸಿದರೆ ಇಟ್ಟ ಮೋಡದ ತುಂಡು ಒಡೆಯುವ ಭಯ.

ಮದರಂಗಿ ಪಾದದೊಡತಿ ತರುವ ಬೊಗಸೆ ನೀರಿನೊಳಗೆ..
ಅವಳು ಒಂದೇ ದಾರದೊಳಗೆ ಪೋಣಿಸಿಟ್ಟ ನನ್ನ ಮೂರಕ್ಷರದ ಬದುಕು
ಮರಳ ಮೇಲಿಂದ ನದಿಗೆ ಕುಪ್ಪಳಿಸಿದ ಮೀನಿನ ಮರಿಯಂತೆ
ಅದರ ಪಾಡಿಗದು ಅವಳನ್ನೇ ನೋಡುತ್ತ, ನೋಡುತ್ತಲೇ ಇದೆಯಲ್ಲ.

ಮಳೆಯ ಭಾಷೆಯನ್ನು ಜೀವಕುಸುಮದೊಳಗೆ ಅದ್ದಿ, ಮದರಂಗಿ ಕಿರುಬೆರಳ
ಪ್ರೇಮವೃಕ್ಷದ ದಾಹಕ್ಕೆ ರೆಪ್ಪೆಯ ಮೇಲಿಟ್ಟ ಮೋಡದಿಂದ ನೀರು ತಂದವಳು
ನನ್ನೊಳಗೆ ಅಂಬೆಗಾಲಿಡುತ್ತಿರುವ ಮನುಷ್ಯ ಕೂಸಿಗೆ ಕುಲಾವಿ ಹೊಲೆಯುತ್ತಾಳೆ.
ಈಗೀಗ ನಾನು ಗೋಡೆ ಹಿಡಿದು ನಿಂತು, ಒಬ್ಬನೇ ನಡೆಯುವುದನ್ನು ಕಲಿತಿದ್ದೇನೆ.

No comments:

Post a Comment