ಕ್ರಿಸ್ಟೋಫರ್ ಜಾನ್ಸನ್ ಮೆಕಾಂಡ್ಲೆಸ್ ಸೂಪರ್‌ಟಾಂಪ್ (ಮಹಾ ಅಲೆಮಾರಿ) ಎಂಬ ಅಡ್ಡಹೆಸರನ್ನು ತನಗೆ ತಾನೇ ಇಟ್ಟುಕೊಂಡು ಲಕ್ಷಗಟ್ಟಲೆ ಡಾಲರ್ ಸಂಬಳವನ್ನು ಎಡಗಾಲಲ್ಲಿ ಒದ್ದೆದ್ದು ಅಲಾಸ್ಕಾಗೆ ನಡೆದುಕೊಂಡೇ ಹೋಗ್ತೇನೆ ಎಂದು ನಡೆಯುತ್ತಲೇ ಬದುಕಿದವ. ಅಲಾಸ್ಕಾಗೆ ಹೋಗುವ ನಡಿಗೆಯ ದಾರಿಯಲ್ಲಿ ಸಿಗುವ ಮಣಗಟ್ಟಲೆ ಏಕಾಂತವನ್ನಷ್ಟೇ ನಂಬಿಕೊಂಡು ನಡೆದ ಮೆಕಾಂಡ್ಲೆಸ್, ಇರುವಷ್ಟು ದಿನ ಸರಳವಾಗಿರು, ನಿನ್ನ ಸುತ್ತಮುತ್ತ ಯಾವ ಮನುಷ್ಯ ನಿರ್ಮಿತ ಸ್ಥಾವರಗಳನ್ನು ಕಟ್ಟಿಕೊಳ್ಳಬೇಡ ಎಂಬ ತನ್ನೊಳಗಿನ ಕೂಗಾಟಕ್ಕೆ ಕಿವಿಯನ್ನು ಅಡವಿಟ್ಟವ, ಎಲ್ಲವನ್ನೂ ಬಿಟ್ಟು ಮತ್ತೇನನ್ನೋ ಹುಡುಕುತ್ತ ನಡೆದ ಮೆಕಾಂಡ್ಲೆಸನ ಶವ ಆತನೆ ಬೆತ್ತಲೆಯಾನ ಶುರುಗೊಂಡ ೪ ತಿಂಗಳ ನಂತರ ಒಂದು ಶಾಲಾಮಕ್ಕಳ ಕೆಟ್ಟುನಿಂತ ವಾಹನದೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗುತ್ತದೆ. ಸಾಯುವಾಗ ಆತ ತನಗಿದ್ದ ದೇಹದಾರ್ಡತ್ಯೆಯೆಲ್ಲವನ್ನೂ ಬರೋಬ್ಬರಿ ಕಳೆದುಕೊಂಡು ೩೦ ಕೇಜಿಯಷ್ಟೇ ಆಗಿ ಉಳಿದುಬಿಟ್ಟಿದ್ದ. ಆತನ ಶವದೊಟ್ಟಿಗೆ ಆತನ ಡೈರಿಯೂ ಸಿಕ್ಕಿತು. ಸಾಯುವ ಹಿಂದಿನ ಸೆಕೆಂಡಿನವರೆಗೂ ಮೆಕಾಂಡ್ಲೆಸ್ ತನ್ನ ಡೈರಿಯೊಳಗೆ ತನಗಾದ ಸಂಪೂರ್ಣ ಅನುಭವಗಳೆಲ್ಲವನ್ನೂ ದಾಖಲಿಸಿಯೇ ಸೃಷ್ಟಿಗೆ ಮಾರಿಕೊಂಡಿದ್ದ. ಅದನ್ನು ಆಧರಿಸಿ ಜಾನ್ ಕ್ರಾಕರ್ ಎಂಬ ಅಮೆರಿಕನ್ ಲೇಖಕ ೧೯೯೬ರಲ್ಲಿ ಬರೆದ ಇನ್ ಟು ದಿ ವೈಲ್ಡ್ ಕೃತಿಯು ಬೆಸ್ಟ್ ಸೆಲ್ಲರ್ ಆಫ್ ದಿ ಇಯರ್ ಮುಕುಟಕ್ಕೆ ತಲೆ ಕೊಟ್ಟಿತಷ್ಟೇ ಅಲ್ಲ ಮೆಕಾಂಡ್ಲೆಸ್ ಎಂಬ ಮಹಾ ಅಲೆಮಾರಿಯ ಬಗ್ಗೆ ಅರ್ಧಜಗತ್ತು ಗಕ್ಕನೆ ನಿಂತು ಹಿಂತಿರುಗಿ ನೋಡುವಂತಾಗಿತ್ತು. ಇಷ್ಟಕ್ಕೂ ಮೆಕಾಂಡ್ಲೆಸನ ತಲೆಯೊಳಗೆ ಅಲಾಸ್ಕಾ ಹಿಮಗಡ್ಡೆಗಳ ಮಡುವಿನೊಳಗೆ ಖಾಲಿಜೇಬು ಹೊತ್ತುಕೊಂಡು ಬರಿಗಾಲಲ್ಲೇ ಓಡಬೇಕು ಅಂತ ಅನ್ನಿಸಿತ್ತಾದರೂ ಏಕೆ? ಆತನೇಕೆ ಆ ಮಟ್ಟಿಗಿನ ಅರಾಜಕತೆ ಅಥವಾ ಹೊಸತಿನ ಹುಡುಕಾಟಕ್ಕೆ ಸಿಲುಕಿದ್ದ, ಅವನು ಹುಡುಕಿದ್ದಾದರೂ ಏನು ಕಡೆಗೆ ಪಡಕೊಂಡಿದ್ದು ಏನು ಎಂಬುದನ್ನು ನೋಡಬೇಕೆಂದರೆ ಮೆಕಾಂಡ್ಲೆಸನ ಹೆಜ್ಜೆಗುರುತುಗಳ ಒಳಗೆ ನಮ್ಮ ಬೆತ್ತಲೆ ಪಾದಗಳೂ ಇಳಿಯಬೇಕು. ![]() ಕೆಲಿಫೋರ್ನಿಯಾದ ಎಲ್ ಸೆಗುಂಡೋ ಎಂಬಲ್ಲಿ ಏರ್ ಕ್ರಾಫ್ಟ್ ಕಂಪೆನಿಯೊಂದರ ಸೆಕ್ರೆಟರಿ ತಾಯಿಗೂ ಆಂಟೆನಾ ತಜ್ಞ ತಂದೆಗೂ ಜನಿಸಿದ ಮೆಕಾಂಡ್ಲೆಸ್ ತನ್ನ ಕಣ್ಣೆದುರೇ ಕಿತ್ತಾಡಿಕೊಂಡು ಬೇರೆಯಾದ ಪೋಷಕರನ್ನು ಬಹಳ ಹತ್ತಿರದಿಂದ ನೋಡಿದವ. ಶಾಲೆಯಲ್ಲಿದ್ದಾಗಲೂ ತನ್ನದೇ ರೆಗ್ಯುಲರ್ ಅಲ್ಲದ ಸಿದ್ಧಾಂತದ ಪ್ರಭಾವಳಿಗೆ ಸಿಲುಕಿದ್ದ. ಶಾಲೆಯ ಗುಡ್ಡಗಾಡು ಓಟವೊಂದರ ತಂಡದ ನಾಯಕನಾಗಿ ತನ್ನ ತಂಡದ ಸದಸ್ಯರಿಗೆ ಜಗತ್ತಿನ ಎಲ್ಲ ಕೆಡುಕುಗಳೂ ನಿಮ್ಮ ಬೆನ್ನು ಬಿದ್ದಿವೆ ಎಂದು ಭಾವಿಸಿಕೊಂಡು ಅದರಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದೇವೆಂದು ಭಾವಿಸಿಕೊಂಡು ಓಡಿ ಎಂದು ಹುರುಪು ತುಂಬುತ್ತಿದ್ದ. ಕಾಲೇಜು ಹಂತಕ್ಕೆ ಬರುವುದರೊಳಗಾಗಿ ತಮ್ಮ ಗೊತ್ತುಗುರಿಯಿಲ್ಲದ ಅಲೆದಾಟಗಳ ಮೂಲಕ ಜಗತ್ತಿನ ಕೃತಕ ಭೌತಿಕ ಪರಿಸರದೊಳಗಿರುವುದು ಏನೇನೂ ಅಲ್ಲ, ಅದರ ತುಂಬ ಮನುಷ್ಯ ನಿರ್ಮಿತ ಶೂನ್ಯವಷ್ಟೇ ತುಂಬಿಕೊಂಡಿದೆ ಎಂಬ ನಿರ್ಧಾರಕ್ಕೆ ತಲುಪಿಯಾಗಿತ್ತು. ೧೯೯೦ರಲ್ಲಿ ಪದವಿ ಮುಗಿಸುವ ಹೊತ್ತಿಗೆ ಮೆಕಾಂಡ್ಲೆಸ್ ಕಟ್ಟಲ್ಪಟ್ಟವುಗಳ ಬಗ್ಗೆ, ಸಮುದಾಯದೊಳಗಿನ ಅನಗತ್ಯ ಶಿಸ್ತುಗಳ ಬಗ್ಗೆ, ಕೆಲಸ, ಉದ್ಯೋಗ, ಕಛೇರಿ, ಮನೆ, ಕುಟುಂಬ, ಸಂಬಳ, ಪ್ರವಾಸ, ಗಂಡಹೆಂಡಿರ ಗಂಟುಪಾಡು ಸಂಸಾರ, ಸಮಾಜದ ಕಟ್ಟುಪಾಡುಗಳು, ರಿವಾಜುರೀತಿಗಳೆಲ್ಲವುಗಳಿಂದ ರೋಸೆದ್ದು ಹೋದಂತೆ ಇವ್ಯಾವುದೂ ಬೇಡವೆಂದು ಒಂದು ದಿನ ಅಲಾಸ್ಕಾ ಹಿಮಪ್ರದೇಶಕ್ಕೆ ನಡೆದುಹೋಗುತ್ತೇನೆಂದು ಎಲ್ಲವನ್ನೂ ಬಿಟ್ಟು ನಡೆಯತೊಡಗುತ್ತಾನೆ. ![]() ![]() ತನ್ನ ಆಹಾರದ ಅವಶ್ಯಕತೆಗಷ್ಟೇ ಮಾಂಸ ಕೊಡುವ ಸಣ್ಣಪುಟ್ಟ ಪ್ರಾಣಿಗಳನ್ನು ಕೊಂದು ಬೇಯಿಸಿ ತಿನ್ನುತ್ತ ಅದೇ ಕೆಟ್ಟುನಿಂತ ಶಾಲಾ ಬಸ್ಸಿನೊಳಗೆ ೩ ತಿಂಗಳು ಕಳೆದುಬಿಡುತ್ತಾನೆ. ತನ್ನ ಮಲಗುವ ಚೀಲದೊಳಗೆ ತೂರಿಕೊಂಡು ಒಬ್ಬೊಬ್ಬನೇ ತಾನು ಕಂಡನುಭವಿಸಿದ ಪ್ರಕೃತಿಯ ವಿಸ್ಮಯಗಳನ್ನು ಧ್ಯಾನಿಸುತ್ತ ಒಬ್ಬನೇ ಬದುಕಿಬಿಡುವ ಮೆಕಾಂಡ್ಲೆಸ್ ಒಂದು ದಿನ ಕುತೂಹಲಕ್ಕೆಂದು ತಿಂದ ಹೆಡಿಸಾರಂ ಮೆಕೆಂಝೀ ಕಾಯಿಯ ಕಾರಣಕ್ಕೆ ಅಸ್ವಸ್ಥತೆಗೆ ಬೀಳುತ್ತಾನೆ. ಮೊದಲಿಗೆ ಇದೇಕೆಂದು ಗೊತ್ತಾಗದೆ ತನ್ನ ಬಳಿಯಿದ್ದ ಮರಗಿಡ, ಸಸಿಬಳ್ಳಿಗಳ ಪುಸ್ತಕವನ್ನು ಹುಡುಕಿದಾಗ ಮೆಕೆಂಝೀ ವಿಷಕಾರಕ ಅಂಶವುಳ್ಳ ಕಾಯಿಯೆಂಬುದು ತಿಳಿಯುತ್ತದೆ. ಮೇಲೆ ಎದ್ದೇಳಾಗದಷ್ಟು ನಿತ್ರಾಣನಾಗುವ ಮೆಕಾಂಡ್ಲೆಸ್ ಆ ಸ್ಥಿತಿಯಲ್ಲೂ ಡೈರಿ ಬರೆಯುವುದನ್ನು ನಿಲ್ಲಿಸುವುದಿಲ್ಲ. ಬರೆದೂ ಬರೆದೂ ಬರೆದೂ.. ಒಂದು ದಿನ ಮೆಕಾಂಡ್ಲೆಸನ ಸಾವೂ ಬಂದು ಅವನೆದೆಯ ಮೇಲೆ ಕುಳಿತು ಆತನ ಜೀವ ತೆಗೆಯುತ್ತದೆ. ಪ್ರೀತಿಗೂ ಮೊದಲು, ದುಡ್ಡು ನಂಬಿಕೆ ಖ್ಯಾತಿ ರಮ್ಯ ರೋಚಕತೆಗೂ ಮೊದಲು.. ನನಗೆ ಸತ್ಯವನ್ನು ಕಂಡುಕೊಳ್ಳಬೇಕಿದೆಯೆಂದು ಅಲಾಸ್ಕಾದೆಡೆಗೆ ನಡೆದ ಮೆಕಾಂಡ್ಲೆಸನ ಹೆಣವನ್ನು ಎರಡು ವಾರಗಳವರೆಗೆ ಜಗತ್ತಿನ ಯಾವ ಜೀವವೂ ಲೆಕ್ಕಕ್ಕೆ ತಂದುಕೊಂಡಿರಲಿಲ್ಲ. ![]() ![]() ಯಾವುದೆಲ್ಲವನ್ನೂ ತ್ಯಜಿಸಿ ಮತ್ತೇನನ್ನೋ ಹುಡುಕುತ್ತ ಹೋಗುವ ಮೆಕಾಂಡ್ಲೆಸನ ಬೆತ್ತಲೆಕಾಲಿನ ನಡಿಗೆ ತಾನು ಹುಡುಕಿ ಹೊರಟದ್ದರ ಮೂಲಕವೇ ಜೀವಸಮೇತ ಅವಸಾನಗೊಳ್ಳುವ ಬಗೆಯೂ ದುರಂತವೇ. ಮನುಷ್ಯನ ಬದುಕು ಪೂರ್ವ ನಿರ್ಮಿತ ಕಾರಣಗಳಿಂದ ಆಳಲ್ಪಡುತ್ತಿದೆ ಎಂದಾದಲ್ಲಿ ಬದುಕಿನ ಎಲ್ಲ ಸಾಧ್ಯತೆಗಳೂ ಅಲ್ಲಿಗೆ ನಾಶಗೊಳ್ಳುತ್ತವೆ ಎಂಬುದನ್ನು ನಂಬಿದ್ದ ಮೆಕಾಂಡ್ಲೆಸನ ಪಾತ್ರದೊಳಗೆ ನಟ ಎಮಿಲಿ ಹರ್ಶ್ ಸಲೀಸಾಗಿ ಲೀನವಾಗಿದ್ದಾನೆ. ಆತನ ಕೆಲವು ದಿನಗಳ ಪ್ರೇಮದೊಳಗೆ ಸಿಲುಕುವ ಹುಡುಗಿಯಾಗಿ ಟ್ವಿಲೈಟ್ ಸಾಗಾ ಸರಣಿ ಚಿತ್ರಗಳ ಮೂಲಕ ಮನೆಮಾತಾದ ನಾಯಕಿ ಬೆಲ್ಲಾಸ್ವಾನ್ ನಟಿಸಿದ್ದಾಳೆ. ಜಾನ್ ಕ್ರಾಕರನ ಕೃತಿ ಓದುವಾಗಿನ ಆಪ್ತತೆ ಮತ್ತು ಮೆಕಾಂಡ್ಲೆಸನ ಸಾಮೀಪ್ಯ ಸಿನಿಮಾದೊಳಗೆ ಅಷ್ಟಾಗಿ ತೆರೆದುಕೊಳ್ಳದಿರುವುದು ಕೃತಿ ಮತ್ತು ದೃಶ್ಯ ಮಾಧ್ಯಮದ ಎಂದಿನ ತಿಕ್ಕಾಟ. ನಮ್ಮೊಳಗಿನ ಕೊಲೆಯಾದ ಅಲೆಮಾರಿ ಮನೋಸ್ಥಿತಿಗೆ ಕೈಕಾಲು ಮೊಳೆತಂತೆ ಬದುಕಿದ್ದ ಜಾನ್ ಕ್ರಿಸ್ಟೋಫರ್ ಮೆಕಾಂಡ್ಲೆಸ್ ಹಲವರಿಗೆ ಮಾದರಿಯೂ, ಶತ್ರುವೂ ಆಗಿ ಇನ್ನಾದರೂ ಕಾಡುವಷ್ಟು ತನಗೆಂದೇ ಬದುಕಿದ್ದು ಅದು ಕೃತಿಯಾಗಿ, ಸಿನಿಮಾರೂಪ ತಳೆದು ಕೋಟ್ಯಂತರ ಜನರನ್ನು ತಲುಪಿದ್ದು ಮತ್ತದೇ ಮೆಕಾಂಡ್ಲೆಸ್ ಪ್ರತಿಭಟಿಸುತ್ತಿದ್ದ ಗ್ರಾಹಕ ಸಂಸ್ಕೃತಿ ಮತ್ತು ಕಟ್ಟಲ್ಪಟ್ಟ ಸಮುದಾಯಿಕ ಸಂರಚನೆಗಳ ಮೂಲಕವೇ ಎಂಬುದು ಅನಿವಾರ್ಯವಾಗಿ ಒಪ್ಪಬೇಕಾದ ಸಂಗತಿ. ![]() |
Tuesday, 24 April 2012
ಇನ್ ಟು ದಿ ವೈಲ್ಡ್
Monday, 16 April 2012
ಕಟ್ಟೆಚ್ಚರ: ನ್ಯೂಸ್ ಚಾನಲ್‌ಗಳಲ್ಲಿ ಈಗ ಸೆಕ್ಸ್ ವಿಡಿಯೋಗಳು ಪ್ರಸಾರವಾಗುತ್ತವೆ...

"ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರಿಗೊಂದು ಬಹಿರಂಗ ಪತ್ರ "
ನಮಸ್ಕಾರ,
ಮೊದಲಿಗೆ ಒಂದು ಪತ್ರಿಕೆ ಹಾಗೂ ಟಿವಿವಾಹಿನಿಯೊಂದರ ಸಂಪಾದಕ ಎರಡೂ ಆಗಿರುವ ವಿಶ್ವೇಶ್ವರ ಭಟ್ಟರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು. ಇಷ್ಟು ದಿವಸ ಅಶ್ಲೀಲ ಚಿತ್ರಗಳೆಂದರೆ ನಗರಪ್ರದೇಶಗಳ ಹೊರವಲಯದ ಮತ್ತು ಸಣ್ಣಪುಟ್ಟ ಊರುಗಳ ಟೆಂಟುಗಳಲ್ಲಿ ಬೆಳಗಿನ ಪ್ರದರ್ಶನ ಕಾಣುತ್ತಿದ್ದ ಹಸಿಬಿಸಿ ಮಲಯಾಳಂ ಚಿತ್ರಗಳೆಂದೇ ಪ್ರಚಲಿತದಲ್ಲಿತ್ತು. ಆದರೀಗ ಅಶ್ಲೀಲ ಚಿತ್ರಗಳನ್ನು ನೋಡಬೇಕೆಂದರೆ ಅಷ್ಟುದೂರ ಮುಖಮರೆಸಿಕೊಂಡು ಹೋಗುವ ಅಗತ್ಯವಿಲ್ಲ ಸುವರ್ಣನ್ಯೂಸ್ ಚಾನೆಲ್ ನೋಡಿದರೆ ಸಾಕು ಎಂಬ ಧೈರ್ಯವನ್ನು ರಾಜ್ಯದ ಜನರಿಗೆ ರವಾನಿಸಿದ್ದಕ್ಕಾಗಿ ನಿಮ್ಮನ್ನು ನಿಜಕ್ಕೂ ಅಭಿನಂದಿಸಬೇಕು.
ಎರಡನೆಯದಾಗಿ ಮಾಧ್ಯಮರಂಗದ ಆಳ ಅಗಲಗಳು ಮತ್ತು ಮಾಧ್ಯಮಲೋಕದಲ್ಲಿ ಯಾವುದು ಸರಿ ಯಾವುದು ಸರಿಯಲ್ಲ, ನೈತಿಕತೆ ಮತ್ತು ಅನೈತಿಕತೆಯ ನಡುವಿನ ತೆಳುಗೆರೆಗಳನ್ನು ಪುಂಖಾನುಪುಂಖವಾಗಿ ಬರೆದಿದ್ದೀರಿ, ಬರೆಯುತ್ತಲೂ ಇದ್ದೀರಿ. ಅವುಗಳೆಲ್ಲವನ್ನೂ ನಾವುಗಳೂ ಓದಿದ್ದೇವೆ. ಈಗ ಒಂದು ಪ್ರಶ್ನೆಯೆದ್ದಿದ್ದೆ. ಇಷ್ಟೆಲ್ಲವನ್ನೂ ಬರೆಯುವ ತಾವು, ಇಷ್ಟೆಲ್ಲ ಜಗತ್ತಿನ ವಿವಿಧ ಪತ್ರಿಕೋದ್ಯಮಿಗಳು ಮತ್ತು ಸಾಹಸಿಗ ಪತ್ರಕರ್ತರ ಬಗ್ಗೆ ದಿವೀನಾಗಿ ಬರೆದುಕೊಳ್ಳುವ ನೈತಿಕತೆ ಇವತ್ತು ಸಂತೆಯಲ್ಲಿ ಅರೆಬೆತ್ತಲಾಗಿ ನಿಂತುಕೊಂಡಿದೆ. ಇದೇ ಮಾರ್ಚ್ ೨೯ರ ರಾತ್ರಿ ೧೦ ಗಂಟೆಗೆ ಪ್ರಸಾರವಾದ ಕಟ್ಟೆಚ್ಚರ ಕಾರ್ಯಕ್ರಮದಲ್ಲಿ ತಾವು ಇಲ್ಲಿಯವರೆಗೂ ಹೇಳಿಕೊಂಡು ಬಂದ ಮಾಧ್ಯಮ ನೈತಿಕತೆ ಮತ್ತು ಸಂಹಿತೆಗಳೆರಡರ ಮುಖಕ್ಕೂ ಡಾಂಬರು ಬಳಿಯುವಂತಹ ಒಂದು ಕಂತು ಪ್ರಸಾರವಾಯಿತು.
ಶಿವಮೊಗ್ಗದ ಕಾಲೇಜು ಯುವತಿಯೊಬ್ಬಳು ತನ್ನ ಪ್ರಿಯಕರನೊಡನೆ ರತಿಕ್ರೀಡೆಯಲ್ಲಿ ತೊಡಗಿದ್ದ ಅಸಹ್ಯ ಹುಟ್ಟಿಸುವ ವಿಡಿಯೋದೃಶ್ಯಗಳು ಯಾವ ಎಡಿಟಿಂಗೂ ಇಲ್ಲದಂತೆ ಹಸಿಹಸಿಯಾಗಿಯೇ ಪ್ರಸಾರವಾಯಿತು. (ವಿಡಿಯೋ ಮಬ್ಬಾಗಿದ್ದರೂ ಆ ಕ್ರಿಯೆಯ ಎಲ್ಲ ಹಂತಗಳೂ ಸುಸ್ಪಷ್ಟವಾಗಿ ಕಾಣಿಸುತ್ತಿದ್ದುದು ನೋಡಿದ ಜನರಿಗೆ ಗೊತ್ತು) ಈ ವಿಡಿಯೋ ತುಣುಕುಗಳು ಶಿವಮೊಗ್ಗೆಯ ಪಡ್ಡೆಹುಡುಗರ ಮೊಬೈಲುಗಳಲ್ಲಿ ಹರಿದಾಡುವುದನ್ನು ನೋಡಿದ ನಿಮ್ಮ ಶಿವಮೊಗ್ಗ ಜಿಲ್ಲಾ ವರದಿಗಾರ ಆ ವಿಡಿಯೋ ಸಂಪಾದಿಸಿ ಅದನ್ನು ಇರುವ ಹಾಗೆಯೇ ಸುವರ್ಣನ್ಯೂಸ್ ಕಚೇರಿಗೆ ತಲುಪಿಸಿದ್ದಾರೆ. ಪ್ರೇಮಸಲ್ಲಾಪದ ವಿಡಿಯೋ ಸೋರಿಕೆಯಾಗಿ ಊರಿನವರ ಮೊಬೈಲಿನಲ್ಲಿ ಹರಿದಾಡುತ್ತಿರುವುದು ಯುವತಿಯ ಗಮನಕ್ಕೂ ಬಂದು ಮಾನಕ್ಕೆ ಅಂಜಿದ ಆಕೆ ಆತ್ಮಹತ್ಯೆಗೆ ಯತ್ನಿಸಿ ಪರವೂರಿನ ಆಸ್ಪತ್ರೆಯೊಂದರಲ್ಲಿ ಸಾವುಬದುಕಿನ ನಡುವೆ ಹೋರಾಡಿ ಜೀವವುಳಿಸಿಕೊಂಡಿದ್ದಾಳೆ. ಪ್ರಸ್ತುತ ಬೆಂಗಳೂರಿನ ಆಕೆಯ ಸಂಬಂಧಿಯೊಬ್ಬರ ಮನೆಯಲ್ಲಿದ್ದಾಳೆ. ಇದು ಪ್ರಸಾರವಾದ ಕಟ್ಟೆಚ್ಚರ ಕಾರ್ಯಕ್ರಮದ ಹೂರಣ.
ಇಂತಹದ್ದೊಂದು ಸೂಕ್ಷ್ಮ ವಿಷಯವನ್ನು ಕಾರ್ಯಕ್ರಮವಾಗಿ ಬದಲಾಯಿಸುವಾಗ ಕಟ್ಟೆಚ್ಚರ ಕಾರ್ಯಕ್ರಮ ತಂಡ ಬಹಳಷ್ಟು ಎಡವಟ್ಟುಗಳನ್ನು ಮಾಡಿಕೊಂಡಿದೆ. ಅವಾಂತರಕ್ಕೆ ಮಾಡಿಕೊಂಡ ಯುವತಿಯ ಫೋಟೋವನ್ನು ಕಣ್ಣು ಮಾತ್ರ ಮರೆಮಾಡಿ ಪ್ರಸಾರವಾಯಿತು, ಆಕೆ ತನ್ನ ಪ್ರಿಯಕರನೊಡನೆ ನಡೆಸಿದ ಸಲ್ಲಾಪದ ಉದ್ರೇಕಕಾರಿ ತುಣುಕುಗಳು ಹೇಗಿವೆಯೋ ಹಾಗೆಯೇ ಪ್ರಸಾರವಾಯಿತು, ಜೊತೆಗೆ ಆಕೆ ಈಗ ಉಳಿದುಕೊಂಡಿರುವ ಬೆಂಗಳೂರಿನ ಸಂಬಂಧಿಗಳ ಮನೆಯ ವಿಳಾಸವನ್ನೂ ಪ್ರಸಾರ ಮಾಡಲಾಯಿತು. ಆಕೆಯ ಸಹಪಾಠಿಗಳನ್ನು ಸಂದರ್ಶನದ ಹೆಸರಿನಲ್ಲಿ ಮಾತನಾಡಿಸಲಾಯಿತು. (ಇವರ ಮುಖವೂ ಸಹ ಮಬ್ಬು ಮಾಡಲಾಗಿಲ್ಲ) ಇಷ್ಟೆಲ್ಲ ವಿವರಗಳನ್ನು ಸೂಕ್ಷ್ಮ ವಿಷಯವೊಂದರ ಮೇಲಿನ ಕಾರ್ಯಕ್ರಮದಲ್ಲಿ ಆಕೆಯ ವಿಳಾಸದ ಸಮೇತ ಹರಿದು ಹಂಚಲಾಯಿತು. ಒಟ್ಟು ಕಾರ್ಯಕ್ರಮವೇ ಆಕೆ ಮಾಡಿದ ಎಡವಟ್ಟಿಗೆ ಆಕೆಯ ಪೋಷಕರನ್ನು ನಡುರಸ್ತೆಯಲ್ಲಿ ಮಾನಕಳೆಯುವುದಕ್ಕಾಗಿಯೇ ರೂಪಿಸಿದಂತಿತ್ತು.
ಸರಿ ಆಕೆ ಮಾಡಿದ್ದು ಕ್ಷಮೆಗೆ ಅರ್ಹವಲ್ಲದ್ದೇ ಇರಬಹುದು, ಆದರೆ ಆಕೆಯ ಹೆತ್ತವರು, ಅಣ್ಣತಮ್ಮಂದಿರು, ಅಕ್ಕತಂಗಿಯರು, ನೆರೆಹೊರೆಯವರು, ಸಂಬಂಧಿಗಳು, ಸಹಪಾಠಿಗಳು ಇವರೆಲ್ಲರೂ ಕಟ್ಟೆಚ್ಚರ ಕಾರ್ಯಕ್ರಮದ ಕಾರಣಕ್ಕೆ, ಇಂಥಹ ಹುಡುಗಿಗೆ ಸಂಬಂಧಿಸಿದವರು ಎಂದು ಸಮಾಜ ಕೆಟ್ಟದಾಗಿ ಮಾತಾಡುವುದನ್ನು ಅದು ಹೇಗೆ ಇವರೆಲ್ಲ ಸಹಿಸಬೇಕು? ಪರೀಕ್ಷೆಯಲ್ಲಿ ಅಂಕ ಕಡಿಮೆ ಎಂದೋ, ರಂಗೋಲಿ ತುಳಿದದ್ದಕ್ಕೆ ಬೈದರೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಇಂದಿನ ದಿನಗಳಲ್ಲಿ, ಇವರೆಲ್ಲರನ್ನು ಅಪರಾಧಿಗಳಂತೆ ಕಟಕಟೆಯೊಳಗೆ ತಂದು ನಿಲ್ಲಿಸಿರುವ ಸುವರ್ಣನ್ಯೂಸ್ ಇವರಿಗೆ ಮುಂದಿನ ದಿನಗಳಲ್ಲಿ ಸಮಾಜದಿಂದ ಎದುರಿಸಬೇಕಾದ ಪ್ರಶ್ನೆಗಳು ಮತ್ತು ಮೂದಲಿಕೆಗಳನ್ನು ತಡೆಯಲು ಸಾಧ್ಯವಿದೆಯೇ? ಆ ಸಂಸಾರ ಅವಮಾನವಾಯಿತೆಂದು, ತಲೆ ಎತ್ತಿ ಓಡಾಡಲು ಸಾಧ್ಯವಿಲ್ಲವೆಂದು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಹೊಣೆ ಯಾರು?
ಅದನ್ನು ಪಕ್ಕಕ್ಕಿಡೋಣ, ಉಳಿದೆಲ್ಲದಕಿಂತ ಮೊದಲು ಇದು ಮಾಧ್ಯಮದ ನೈತಿಕತೆಯ ಪ್ರಶ್ನೆ. ಅಶ್ಲೀಲ ಎಮ್ಮೆಮ್ಮೆಸ್‌ಗಳನ್ನು ಪ್ರಸಾರ ಮಾಡದೆ ಒಂದು ಟಿವಿ ಚಾನೆಲ್ ಬದುಕಲು ಸಾಧ್ಯವೇ ಇಲ್ಲವೇ, ಈ ಹಿಂದೆ ಸದನದೊಳಗೆ ನೀಲಿಚಿತ್ರ ವೀಕ್ಷಿಸಿದ ಶಾಸಕರ ದೃಶ್ಯಗಳನ್ನು ಪ್ರಸಾರ ಮಾಡಿದ್ದರ ಬಗ್ಗೆ ವಿರೋಧ ವ್ಯಕ್ತವಾದಾಗಲೂ ತಾವು ತೋರಿಸೋದು ತಪ್ಪಾ ಅಂತ ತಮ್ಮ ಅಶ್ಲೀಲ ದೃಶ್ಯ ಪ್ರಸಾರದ ಸಮರ್ಥನೆಗೆ ಅಂಟಿಕೊಂಡಿರಿ. ಬಸ್ ಸ್ಟಾಂಡುಗಳಲ್ಲಿ, ಬುಕ್‌ಸ್ಟೋರ್‌ಗಳಲ್ಲಿ ನೇತಾಡುವ ೧೦ ರೂಪಾಯಿಗೆ ಸಿಗುವ ಅಶ್ಲೀಲಚಿತ್ರಗಳ ಕಥೆಗಳ ಅಗ್ಗದ ಪುಸ್ತಕಗಳಿಗೂ ತಾವು ಪದೇಪದೇ ಪ್ರಸಾರಿಸುತ್ತಿರುವ ಅಶ್ಲೀಲ ಎಮ್ಮೆಮ್ಮೆಸ್ ಕಾರ್ಯಕ್ರಮಗಳಿಗೂ ಕಿಂಚಿತ್ತಾದರೂ ವ್ಯತ್ಯಾಸವಿದೆಯೇ? ಹಿಂದೊಮ್ಮೆ ಅಶ್ಲೀಲ ವಿಡಿಯೋಗಳನ್ನು ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ವೆಬ್‌ಸೈಟ್ ಅಡ್ರೆಸ್‌ಗಳ ಮೂಲಕವೇ ಪ್ರಸಾರ ಮಾಡಿದವರು ನೀವು. ಡಿವಿಡಿ ಅಂಗಡಿಗಳಲ್ಲಿಯೂ ಅಶ್ಲೀಲ ಡಿವಿಡಿಗಳನ್ನು ಮುಜುಗರದಿಂದಲೋ, ಭಯದಿಂದಲೋ ಕದ್ದುಮುಚ್ಚಿ ವಿತರಿಸುವ ಪರಿಪಾಠವಿದೆ. ಅವರಿಗಿರುವ ಕನಿಷ್ಠಮಟ್ಟದ ಭಯವೂ ಸುವರ್ಣನ್ಯೂಸ್ ಸಂಪಾದಕರಾದ ತಮಗಿಲ್ಲ, ರಾಜಾರೋಷವಾಗಿ ಎಗ್ಗುಸಿಗ್ಗಿಲ್ಲದೆ ಬ್ಲೂಫಿಲ್ಮ್‌ಗಳನ್ನೇ ಪ್ರಸಾರ ಮಾಡಿಬಿಡುತ್ತೀರಿ, ತುಂಬು ಕುಟುಂಬವೊಂದರಲ್ಲಿ ಅಣ್ಣತಂಗಿ, ಅಪ್ಪಮಗಳು ಏನನ್ನೋ ನೋಡಲು ಹೋಗಿ ತಾವು ಪ್ರಸಾರಿಸುತ್ತಿರುವ ಸುಸಂಸ್ಕೃತ ಬ್ಲೂಫಿಲ್ಮ್‌ಗಳನ್ನೋ, ಅಶ್ಲೀಲ ಎಮ್ಮೆಮ್ಮೆಸ್ ತುಣುಗಳನ್ನೋ ಅಕಸ್ಮಾತ್ ನೋಡಿದರೂ ಆಗುವ ಮುಜುಗರ ಕಸಿವಿಸಿಯಿದೆಯಲ್ಲ.. ಬಹುಶಃ ಅದರ ಅನುಭವ ತಮಗೆ ಆದಂತಿಲ್ಲ. ಮಾನ ಮರ್ಯಾದೆಯಿರುವ ಜನಕ್ಕೆ ಮುಖಮುಚ್ಚಿಕೊಂಡು ಎದ್ದು ಹೋಗಬೇಕೆನಿಸುತ್ತದೆ.
ತಾವು ಕನ್ನಡಪ್ರಭ ಪತ್ರಿಕೆಗೂ ಸಂಪಾದಕರು. ಅದರಲ್ಲಿ ಬರೆಯುವ ಅಂಕಣಕಾರರೂ ಸೇರಿದಂತೆ ಹಲವಾರು ಬರಹಗಾರರಿಂದ ಭಾರತೀಯ ಸಂಸ್ಕೃತಿ ಪರಂಪರೆ ನೈತಿಕತೆಯ ಬಗ್ಗೆ ಬರೆಸುತ್ತೀರಿ. ಇನ್ನೊಂದು ಕಡೆಯಲ್ಲಿ ಈ ವಿಷಯಗಳಿಗೆ ತದ್ವಿರುದ್ಧವಾಗಿರುವ ಕಾಮಕೇಳಿಗಳನ್ನು ಯಾವ ಅಂಜಿಕೆಯೂ ಇಲ್ಲದೆ ಪ್ರಸಾರ ಮಾಡುತ್ತೀರಿ, ಜನ ನೋಡುತ್ತಾರೆ ಟಿಆರ್‌ಪಿ ಬರುತ್ತದೆ ಎಂದು ಕಂಡಕಂಡದ್ದನ್ನೆಲ್ಲ ಪ್ರಸಾರ ಮಾಡುವುದಾದರೆ ನೇರವಾಗಿ ಒಂದು ಅಶ್ಲೀಲ ಟಿವಿವಾಹಿನಿಯನ್ನೇ ತಾವು ಧೈರ್ಯವಾಗಿ ಪ್ರಾರಂಭಿಸುವುದು ಒಳ್ಳೆಯದು. ಅಂತರ್ಜಾಲದಲ್ಲಿ ಅಶ್ಲೀಲ ಎಮ್ಮೆಮ್ಮೆಸ್ಸುಗಳಿಗೇನೂ ಕೊರತೆಯಿಲ್ಲ, ತಮ್ಮ ಚಾನೆಲ್‌ನ ಟಿಆರ್‌ಪಿಗೂ ಜಾಹಿರಾತಿಗೂ ಈ ಎಮ್ಮೆಮ್ಮೆಸ್ಸುಗಳಿಂದ ಇನ್ನಷ್ಟು ಒಳ್ಳೆಯದಾಗುತ್ತದೆ. ಸುವರ್ಣನ್ಯೂಸ್ ಚಾನೆಲ್ ಸದ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರೀತಿ ಮತ್ತು ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಮೇಲೆ ತಮಗೆ ಹಿಡಿತವೇ ಇದ್ದಂತಿಲ್ಲ, ಅಥವಾ, ಆ ಅಧಿಕಾರವನ್ನು ಚಾನೆಲ್ ಮಾಲೀಕರು ತಮಗೆ ಕೊಟ್ಟೇ ಇಲ್ಲ, ಬದಲಾಗಿ ಡಮ್ಮಿ ಸಂಪಾದಕರಂತೆ ತಾವು ಕುರ್ಚಿಯಲ್ಲಿ ಕುಳಿತಿರಬಹುದೇ? ಎಂಬ ಅನುಮಾನಗಳು ಬರುತ್ತಿವೆ. ಏಕೆಂದರೆ ತಾವು ಕನ್ನಡಪ್ರಭದಲ್ಲಿ ಸುಸಂಸ್ಕೃತರಂತೆ ಆಡುವುದು ಒಂದು, ಸುವರ್ಣನ್ಯೂಸ್‌ನಲ್ಲಿ ಅಪಾಪೋಲಿಗಳಂತೆ ಮಾಡುತ್ತಿರುವುದು ಇನ್ನೊಂದು.
ಪ್ರಸ್ತುತ ವಿಷಯಕ್ಕೆ ಮರುಳುವುದಾದರೆ ಆ ಯುವತಿಯ ಪೋಷಕರನ್ನು ನಡುಬೀದಿಯಲ್ಲಿ ನೀವು ಇವತ್ತು ತಂದು ನಿಲ್ಲಿಸಿರುವಂತೆಯೇ ತಾವೂ ಹಿಂದೊಮ್ಮೆ ಇದ್ದ ಕೆಲಸದಿಂದ ಹೊರದಬ್ಬಿಸಿಕೊಂಡು ನಡುಬೀದಿಯಲ್ಲೇ ನಿಂತಿದ್ದೀರಿ. ಆವತ್ತು ಇದೇ ಜಗತ್ತು ತಮ್ಮತ್ತ ತೂರಿದ ಕಲ್ಲುಗಳ ಸೈಜು ಎಂಥವು ಎಂಬುದು ತಮಗೂ ಗೊತ್ತು. ಅಂತಹ ಅವಮಾನವನ್ನು ಸಹಿಸಿದವರು ತಾವು. ಆ ನೆನಪಿನ ನೈತಿಕತೆ ತಮಗೆ ಇದ್ದಿದ್ದರೆ ಇವತ್ತು ಶಿವಮೊಗ್ಗದ ಒಂದು ಕುಟುಂಬವನ್ನು ಇವತ್ತು ಮೂರಾಬಟ್ಟೆಯಾಗುವಂತೆ ಮಾನ ಕಳೆಯುತ್ತಿರಲಿಲ್ಲ. ಕೈಯಿಟ್ಟಲ್ಲೆಲ್ಲ ಸುದ್ದಿ ಸಿಗುವ, ಸರ್ಕಾರಿ ಇಲಾಖೆಗಳ ಹಗರಣಗಳು ಕಾಲುಕಾಲಿಗೇ ತೊಡರುತ್ತಿರುವ ಈ ಸಮಯದಲ್ಲಿ ತಮ್ಮ ಹಾರ್ಡ್‌ಕೋರ್ ವರದಿಗಾರರು ಆ ಎಲ್ಲವನ್ನೂ ಬಿಟ್ಟು ಸುಲಭಕ್ಕೆ ಕೈಗೆ ಸಿಗುವ ಅಶ್ಲೀಲ ಎಮ್ಮೆಮ್ಮೆಸ್ಸುಗಳ ಹಿಂದೇಕೆ ಬೀಳುವಷ್ಟು ಸೋಮಾರಿಗಳಾಗಿದ್ದಾರೆ ಎಂಬುದು ತಮ್ಮ ಅರಿವಿಗೆ ಯಾಕೋ ಬರುತ್ತಲೇ ಇಲ್ಲ. ಈ ಎಮ್ಮೆಮ್ಮೆಸ್ಸುಗಳನ್ನು ನೋಡಿ ಯಾರಿಗೇನು ಆಗಬೇಕಿದೆ, ಇವನ್ನು ತೋರಿಸಿ ಯಾರಿಗೆ ಎಂಥಹ ಸಂದೇಶ ಕೊಡುವ ಘನಕಾರ್ಯ ಮಾಡುತ್ತಿದ್ದಿರೋ ನಮಗೆ ಗೊತ್ತಿಲ್ಲ. ಹೀಗೆಲ್ಲ ದುಡ್ಡು ದುಡಿಯಬೇಕೇ ವಿಶ್ವೇಶ್ವರ ಭಟ್ಟರೆ?
ಕಟ್ಟೆಚ್ಚರ ಕಾರ್ಯಕ್ರಮದ ಅಧ್ವಾನಗಳಾದರೂ ಎಂಥವು, ಬೆಳಗ್ಗೆಹೊತ್ತು ಬ್ರೇಕ್‌ಫಾಸ್ಟ್ ನ್ಯೂಸ್‌ನಲ್ಲಿ ಕೈ ಮುಗಿಯಬೇಕೆನ್ನಿಸುವಷ್ಟು ಸಂಭಾವಿತರಾಗಿ ಕಾಣಿಸಿಕೊಳ್ಳುವ ಜಯಪ್ರಕಾಶಶೆಟ್ಟರು ರಾತ್ರಿಯಾದರೆ ಸಾಕು ಕಟ್ಟೆಚ್ಚರದೊಳಗೆ ಜಾತ್ರೆಯಲ್ಲಿ ಟೋಪಿ ಮಾರುವವರಂತೆ ಹಾಸ್ಯಾಸ್ಪದ ಪೋಷಾಕಿನಲ್ಲಿ ಕರೆಂಟು ಹೊಡೆಸಿಕೊಂಡವರಂತೆ ಮೈಕೈ ಬಳುಕಿಸುತ್ತ ಆಗಾಗ ಕೂಗಾಡುತ್ತ ಆಂಕರಿಂಗ್ ಮಾಡುತ್ತಿರುತ್ತಾರೆ. ಅವರ ಮಾತಿನ ಶೈಲಿ ಮತ್ತು ಐಟಂಸಾಂಗ್ ಶೈಲಿಯ ಅವರ ಆಂಕರಿಂಗ್ ನಗೆಪಾಟಲಲ್ಲದೆ ಇನ್ನೇನೂ ಅಲ್ಲ, ಶಿವಮೊಗ್ಗದ ಯುವತಿಯ ಎಪಿಸೋಡಿನ ಸ್ಕ್ರಿಪ್ಟನ್ನು ಸಹನಾಭಟ್ ಎಂಬ ಸ್ತ್ರೀ ಬರೆಯುತ್ತಾರೆ ಅಂದರೆ ವಾಕರಿಕೆ ಹುಟ್ಟುತ್ತದೆ. ಕೆಲಸಮರೆತ ಜಿಲ್ಲಾ ವರದಿಗಾರನೊಬ್ಬ ಎಂಥದೋ ಎಬಡೇಶಿ ಎಮ್ಮೆಮ್ಮೆಸ್ ಕಳಿಸಿದೆಂದ ಮಾತ್ರಕ್ಕೆ ಅದನ್ನು ಪ್ರಸಾರಿಸಬೇಕೇ ಬೇಡವೇ, ನೈತಿಕತೆಯೇ ಅನೈತಿಕತೆಯೇ ಎಂಬ ವಿವೇಚನೆಯೂ ಇಲ್ಲದಷ್ಟು ಒಬ್ಬ ಟಿವಿ ಚಾನೆಲ್ಲಿನ ಸಂಪಾದಕ ಎಮ್ಮೆಚರ್ಮದವರಾಗಿ ಹೋದರೆ ಏನೇನೆಲ್ಲ ಅನಾಹುತಗಳಾಬೇಕೋ ಅವೆಲ್ಲವೂ ಸುವರ್ಣನ್ಯೂಸಿನಲ್ಲಿ ಇವತ್ತು ಆಗುತ್ತಿವೆ. ಸುವರ್ಣನ್ಯೂಸಿನ ಬದಲು ಎಫ್ ಚಾನೆಲ್ ನೋಡುವುದು ಒಳಿತು ಎಂಬ ಮಟ್ಟಿಗೆ ಜೋಕುಗಳು ಹುಟ್ಟಿಕೊಂಡಿವೆ. ತಮಗೆ ತಮ್ಮ ಜನಪರ ನ್ಯೂಸುಗಳ ಪ್ರಸಾರದಿಂದ ಕರ್ನಾಟಕವನ್ನು ಉದ್ದಾರ ಮಾಡಿಬಿಡುವ ಸಾಹಸ ಬೇಡವಾಗಿದ್ದಾಗ ಮಾತ್ರ ಮದನಾರಿಯಂತಹ ಅಡ್ಡಕಸುಬಿ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಒಂದುಕಾಲದಲ್ಲಿ ಜನ ನೋಡುತ್ತಾರೆ ಅಂತ ಕೇರಳದ ಚಿತ್ರರಂಗದಲ್ಲಿ ತನ್ನ ಉಬ್ಬುತಗ್ಗುಗಳನ್ನು ತೋರಿಸಿಕೊಂಡು ಅಶ್ಲೀಲಚಿತ್ರಗಳಲ್ಲಿ ನಟಿಸಿದ ನಟಿಯೊಬ್ಬಳಿಗೂ... ಎಮ್ಮೆಮ್ಮೆಸ್ಸು, ಬ್ಲೂಫಿಲ್ಮ್, ಮದನಾರಿಗಳ ಹಿಂದೆ ಬಿದ್ದಿರುವ ತಮಗೂ ನಡುವೆ ಯಾವ ವ್ಯತ್ಯಾಸವೂ ಕಾಣಿಸುತ್ತಿಲ್ಲ. ಎರಡರಲ್ಲೂ ದುಡ್ಡೇ ಪ್ರಮುಖವಾಗಿದೆ.
ಕೊನೆಗೆ ವಿಶ್ವೇಶ್ವರ ಭಟ್ಟರಲ್ಲಿ ಒಂದು ಮನವಿ, ನೀವು ಕನ್ನಡಪ್ರಭದ ಅಂಕಣಕಾರನ್ನು ಸುವರ್ಣನ್ಯೂಸ್ ಟಾಕ್ ಶೋಗಳ ಅತಿಥಿಗಳನ್ನಾಗಿಯೂ, ಈ ಚಾನೆಲ್ಲಿನ ಚಿಳ್ಳೆಪಿಳ್ಳೆ ವರದಿಗಾರರನ್ನು ಕನ್ನಡಪ್ರಭದ ಅಂಕಣಕಾರನ್ನಾದರೂ ಮಾಡಿಕೊಳ್ಳಿ. ಈ ಅಧ್ವಾನಗಳನ್ನು ಟಿವಿ ನೋಡುವ ಮಂದಿ ಹೇಗಾದರೂ ಸಹಿಸಬಲ್ಲರು, ಆದರೆ ಕಾಮ, ಸೆಕ್ಸು. ಹೆಂಗಸಿನ ಉಬ್ಬುತಗ್ಗುಗಳ ಮೇಲೆ ಬೀಳುವ ಚಿಲ್ಲರೆ ಕಾಸುಗಳನ್ನು ಆಯ್ದುಕೊಳ್ಳುತ್ತಿರುವ ಈ ನೀಚತನವಿದೆಯಲ್ಲ, ಅದನ್ನು ಮಾನವಂತರಾರೂ ಸಹಿಸುವುದಿಲ್ಲ. ಈಗಾಗಲೇ ತಮ್ಮ ಚಾನೆಲ್ಲಿನ ನಗೆಪಾಟಲು ಕಾರ್ಯಕ್ರಮವಾದ ಕಟ್ಟೆಚ್ಚರದಲ್ಲಿ ಶಿವಮೊಗ್ಗದ ಎಮ್ಮೆಮ್ಮೆಸ್ ಕಾರ್ಯಕ್ರಮದ ಬಗ್ಗೆ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಫೌಂಡೇಷನ್‌ಗೆ ಆನ್‌ಲೈನ್ ದೂರುಗಳು ಲೋಡುಗಟ್ಟಲೆ ತಲುಪುತ್ತಿವೆ. ೩೦ರ ಶನಿವಾರದಂದು ಕಾರ್ಯಕ್ರಮದ ೨ನೇ ಭಾಗದಲ್ಲಿ ಇನ್ನೆಷ್ಟು ಅಸಹ್ಯ ಎಮ್ಮೆಮ್ಮೆಸ್ ತುಣುಕುಗಳನ್ನು ಪ್ರಸಾರ ಮಾಡಲು ಸಿದ್ದವಿದ್ದೀರೋ ಗೊತ್ತಿಲ್ಲ. ದಯವಿಟ್ಟು ಈ ೨ನೇ ಕಂತನ್ನು ಪ್ರಸಾರಿಸದಿರಿ. ತಮ್ಮ ಕಾರ್ಯಕ್ರಮದ ವಿಡಿಯೋ ಅನ್ನು ಗೆಳೆಯರನೇಕರು ಮೊಬೈಲಿನಲ್ಲಿ ಶೂಟ್ ಮಾಡಿಟ್ಟುಕೊಂಡಿದ್ದಾರೆ. ಐಬಿಎಫ್ ನಿರ್ಬಂಧಿಸಿರುವ ಅಷ್ಟನ್ನೂ ಕಟ್ಟೆಚ್ಚರ ಕಾರ್ಯಕ್ರಮದಲ್ಲಿ ಉಲ್ಲಂಘಿಸಿದ್ದೀರಿ, ಅದಕ್ಕೆ ಸಾಕ್ಷಿಯೂ ಇದೆ. ಯಾವಾಗ ಬೇಕಾದರೂ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಫೌಂಡೇಷನ್‌ನಿಂದ ತಮ್ಮ ಕಛೇರಿಗೆ ನೊಟೀಸ್ ಬರಬಹುದು.
ಪತ್ರಕರ್ತನೊಬ್ಬನಿಗೆ ಜನಪರವಾದ, ಜನೋಪಯೋಗಿ ಸುದ್ದಿಗಳನ್ನಷ್ಟೇ ಜನರಿಗೆ ತಲುಪಿಸುವ ಉತ್ಸಾಹವಿರಬೇಕೇ ಹೊರತು ಜನ ನೋಡುತ್ತಾರೆ ಎಂಬ ಧಾವಂತದಲ್ಲಿ ಸೆಕ್ಸ್‌ಬುಕ್ಕಿನ ರೇಂಜಿನ ಕಾರ್ಯಕ್ರಮಗಳನ್ನು ಬ್ಲೂಫಿಲ್ಮುಗಳನ್ನೂ, ಅಶ್ಲೀಲ ಎಮ್ಮೆಮ್ಮೆಸ್ಸುಗಳನ್ನೂ ಪ್ರಸಾರ ಮಾಡುವ ತಮ್ಮ ಕೊಳಕು ಅಭಿರುಚಿಯನ್ನು ಪ್ರದರ್ಶಿಸುವುದಲ್ಲ. ಏಕೆಂದರೆ ನೋಡುವ ಮಾನವಂತರು ವರದಿಗಾರನನ್ನು ವಿಮರ್ಶಿಸುವುದಕ್ಕಿಂತ ಹೆಚ್ಚಾಗಿ ಇಂಥದ್ದನ್ನ ಪ್ರಸಾರ ಮಾಡೋಕೆ ಅನುಮತಿ ಕೊಟ್ಟ ಎಡಿಟರ್ ಏನು ದನಾ ಮೇಯಿಸ್ತಾ ಇದ್ದನಾ ಅಂತ ಮುಲಾಜಿಲ್ಲದೇ ಬೈದುಬಿಡುತ್ತಾರೆ. ಇದಕ್ಕಾದರೂ ತಮ್ಮ ಅಭಿರುಚಿ ಉಬ್ಬುತಗ್ಗುಗಳ ಆಚೀಚೆಗೆ ವಿಸ್ತರಿಸಲೆಂಬ ಆಶಯ ಟಿವಿ ನೋಡುಗರದ್ದು. ಅರ್ಥ ಮಾಡಿಕೊಳ್ಳುತ್ತೀರೆಂಬ ನಂಬುಗೆಯೊಂದಿಗೆ.
ಪ್ರೀತಿಯಿಂದ
-ಟಿ.ಕೆ. ದಯಾನಂದ
ಹಸಿವು, ಪುಡಿಗಾಸು ಸಂಬಳದ ನಡುವೆ.

ಕಳೆದ ಕೆಲವು ವರ್ಷಗಳಿಂದೀಚೆಗೆ ವಿವಿಧ ಜಿಲ್ಲೆಗಳಲ್ಲಿ ಮಲಹೊರುವ ಪದ್ಧತಿಯ ಅಸ್ತಿತ್ವದಲ್ಲಿ ತಮ್ಮ ಇರುವಿಕೆಯನ್ನು ಸ್ಪಷ್ಟಪಡಿಸುತ್ತ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿರುವ ರಾಜ್ಯದ ದಲಿತರು ರಾಜಧಾನಿ ಬೆಂಗಳೂರಿನಲ್ಲೂ ಇರುವುದು ಚೋದ್ಯವೇನೂ ಅಲ್ಲ. ಜಿಲ್ಲೆಯಿಂದ ಜಿಲ್ಲೆಗೆ ಒಂದರ ಹಿಂದೊಂದರಂತೆ ಬಯಲಿಗೆ ಬಂದ ಈ ಬರ್ಬರ ಪದ್ಧತಿಯ ಅಸ್ತಿತ್ವದ ಕಾರಣಕ್ಕೆ ರಾಜ್ಯ ಸರ್ಕಾರವು ಹತ್ತಾರು ಬಾರಿ ನ್ಯಾಯಾಲಯಗಳಲ್ಲಿ ಛೀಮಾರಿ ಹಾಕಿಸಿಕೊಂಡಿದೆ.
ಆದರೂ ತನ್ನ ಎಂದಿನ ಎಮ್ಮೆಚರ್ಮದ ಧೋರಣೆಯಿಂದಾಗಿ ಈ ಪದ್ಧತಿಯ ನಿರ್ಮೂಲನೆಗೆ ಕಟಿಬದ್ಧವಾಗದೆ ತೇಪೆ ಹಾಕುವ ಕೆಲಸವನ್ನಷ್ಟೇ ಮಾಡಿಕೊಂಡು ಬಂದಿದೆ. ಹೀಗಾಗಿ ಮಲ ಹೊರುವ ಪದ್ಧತಿ ಸರ್ಕಾರಿ ಇಲಾಖೆಯ ಮೂಗಿನಡಿಯಲ್ಲೇ ರಾಜಧಾನಿಯಲ್ಲಿ ನಡೆಯುತ್ತಲೇ ಇದೆ.
ರಾಜ್ಯದ ಮೂಲೆ ಮುಡುಕುಗಳೆಲ್ಲೆಡೆಯೂ ಅಸ್ತಿತ್ವದಲ್ಲಿರುವ ಮಲ ಹೊರುವ, ಶೌಚಗುಂಡಿ ಸ್ವಚ್ಛಗೊಳಿಸುವ, ಕಕ್ಕಸ್ಸು ಗುಂಡಿಯೊಳಗಿಳಿದು ಬರಿಗೈನಿಂದ ಮಲವನ್ನು ಎತ್ತಿಹಾಕುವ ಮಲ ಹೊರುವ ಪದ್ಧತಿ ರಾಜಧಾನಿಯನ್ನು ಮಾತ್ರ ಬಿಟ್ಟೀತೇ? ನಗರದ ಪ್ರಮುಖ ಭಾಗಗಳಲ್ಲಿಯೇ ಮ್ಯೋನ್‌ಹೋಲ್‌ನೊಳಗೆ ಇಳಿದು ಗುಂಡಿ ಸ್ವಚ್ಛ ಮಾಡುವ, ಮಹಾನಗರದ ಅಂಚಿನ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲದ ಪ್ರದೇಶಗಳಲ್ಲಿ ಇವತ್ತಿಗೂ ರಾಚುತ್ತಿದೆ. ಎಲ್ಲರೂ ಹೇಳುವಂತೆ ಇದೇ ಕೆಲಸಕ್ಕೆ ಈ ಜನರು ಏಕೆ ಕಟ್ಟುಬಿದ್ದಿದ್ದಾರೆ, ಬೇರೆ ಇನ್ಯಾವ ಕೆಲಸಗಳೂ ಇವರಿಗೆ ಸಿಗುವುದಿಲ್ಲವೇ? ಗುಂಡಿಯೊಳಗಿಳಿದು ಮಲ ಬಳಿಯುವಂತಹ ಕೆಲಸ ಇವರಿಗೇಕೆ?
ಮಲ ಬಳಿಯುವುದನ್ನು ದಲಿತರೇ ಬಹಿಷ್ಕರಿಸಿ ಪ್ರಧಾನ ವಾಹಿನಿಯೊಳಗೆ ಬೆರೆಯಲು ಸಾಧ್ಯವಾಗುವುದಿಲ್ಲವೇ? ಈ ಮಲಹೊರುವ ಪದ್ಧತಿಯ ಅಸ್ತಿತ್ವಕ್ಕೂ ಮೇಲೆ ಉಲ್ಲೇಖಿಸಿದ ಎರಡು ವರ್ಗಕ್ಕೂ ನೇರಾನೇರ ಸಂಬಂಧಗಳಿವೆ.
ಮಲದಗುಂಡಿ ಸ್ವಚ್ಛಗೊಳಿಸುವ ಕೆಲಸದಲ್ಲಿ ಅತ್ಯಂತ ಹೆಚ್ಚಿನ ಅಂದರೆ 98 ಪ್ರತಿಶತದಷ್ಟು ತೊಡಗಿಕೊಂಡಿರುವುದು ಮಾದಿಗ ಸಮುದಾಯ. ಇದೇ ಸಮುದಾಯವು ಬೆಂಗಳೂರಿನ ಜಲಮಂಡಲಿಯಲ್ಲಿ ಒಳಚರಂಡಿ ಗುತ್ತಿಗೆ ಕಾರ್ಮಿಕರಾಗಿಯೂ, ಬಿಬಿಎಂಪಿಯಲ್ಲಿ ಗುತ್ತಿಗೆ ಪೌರಕಾರ್ಮಿಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಮಂದಿಗೆ ಸರ್ಕಾರದಿಂದ ಅಧಿಕೃತ ದಿನಗೂಲಿ ವೇತನವೆಂದು ನಿಗದಿಪಡಿಸಿದ ವೇತನವೇ ಒಂದು. ಗುತ್ತಿಗೆದಾರರೆಂಬ ದಲ್ಲಾಳಿ ವ್ಯವಸ್ಥೆಯ ಮೂಲಕ ಇವರ ಕೈಗೆ ಸಿಗುತ್ತಿರುವ ವೇತನ ಮಾತ್ರ 1800 ರೂ.ಗಳಿಂದ 2300 ಅಷ್ಟೇ.
ಎಷ್ಟು ಹೋರಾಟ, ಮನವಿ, ಬೇಡಿಕೆ ಸಲ್ಲಿಸಿದರೂ ಕೋಣದೆದುರು ಕಿನ್ನರಿವಾದನವಾದ ಪರಿಣಾಮ ತಮ್ಮ ಬದುಕು ಕಟ್ಟಿಕೊಳ್ಳಲು, ತುತ್ತಿನ ಜೋಳಿಗೆ ತುಂಬಿಸಿಕೊಳ್ಳಲು ಈ ಪೌರಕಾರ್ಮಿಕರು ಕಂಡುಕೊಂಡ ಹೊಸದಾರಿಯೇ ಕಕ್ಕಸುಗುಂಡಿ ಸ್ವಚ್ಛಗೊಳಿಸುವ ಕಾರ್ಯ. ಎಂದಾದರೊಂದು ದಿನ ನಮ್ಮ ಕೆಲಸ ಕಾಯಮ್ಮೋಗಬಹುದೆಂಬ ಬಿಸಿಲುಗುದುರೆಯ ಬೆನ್ನೇರಿದ ಈ ಗುತ್ತಿಗೆ ಕಾರ್ಮಿಕರು ಕಡಿಮೆ ಸಂಬಳದ ಈ ಕೆಲಸವನ್ನು ಬಿಡಲೊಲ್ಲರು.
ಗೋರಿಪಾಳ್ಯ, ಲಾಲ್‌ಬಾಗ್ ಹಿಂದಿರುವ ಸಿದ್ದಾಪುರ, ಶ್ರಿರಾಮನಗರ, ಸುಧಾಮನಗರಗಳ ಆಸುಪಾಸಿನಲ್ಲಿ ಹೆಗಲಮೇಲೆ ಬಿದಿರುಕೋಲುಗಳನ್ನು ಹೇರಿಕೊಂಡ ಖಾಕಿ ದಿರಿಸು ಧರಿಸಿದ ಮಂದಿ ನಿಮ್ಮ ಕಣ್ಣಿಗೆ ಕಂಡರೆ ಅವರು ಹತ್ತಿರದಲ್ಲೆಲ್ಲೋ ಅಧಿಕೃತವಾಗಿಯೇ ಮ್ಯೋನ್‌ಹೋಲ್ ಒಳಗಿಳಿಯಲು ಮತ್ತು ಅನಧಿಕೃತವಾಗಿ ಕಕ್ಕಸ್ಸುಗುಂಡಿಯ ಸ್ವಚ್ಛತೆಗೆ ಹೊರಟಿದ್ದಾರೆಂಬುದು ಸ್ಪಷ್ಟ.
ಮೈಮೇಲೆ ಖಾಕಿ ದಿರಿಸು, ಅದರ ಮೇಲೆ ಜಲಮಂಡಲಿ ಮತ್ತು ಬಿಬಿಎಂಪಿ ಎಂಬ ಎರಡು ಹೆಸರಿದ್ದರೆ ಸಾಕು ಸಾರ್, ಮಲದಗುಂಡಿ ಕಟ್ಟಿಕೊಂಡವರು ತಾವೇ ಬಂದು ಗುಂಡಿ ಸ್ವಚ್ಛ ಮಾಡಿಕೊಡಿ ಎಂದು ಕೇಳುತ್ತಾರೆ. ನಾವು 3-4 ಮಂದಿ ಹೋಗಿ ರಾತ್ರಿವೇಳೆ ಸ್ವಚ್ಛ ಮಾಡಿಕೊಟ್ಟು ಬರುತ್ತೇವೆ. ಸರ್ಕಾರದ ಎರಡುಸಾವಿರ ಸಂಬಳದಲ್ಲಿ ಬದುಕೋಕಾದರೂ ಆಗುತ್ತ ಸಾರ್, ಹೇಸಿಗೆ ಆಗತ್ತೆ, ಮೈಗೆ ಹೊಲಸು ಮೆತ್ತಿಕೊಳ್ಳುತ್ತೆ ಅಂತ ಕೂತರೆ ಕರುಳಿಗೆ ಏನು ಕೊಡೋದು? ಬದುಕಬೇಕಲ್ಲ ಸಾರ್ ಇವೆಲ್ಲ ಮಾಡಲೇಬೇಕು, ಸಂಬಳ ಜಾಸ್ತಿ ಕೊಟ್ಟರೆ ನಾವ್ಯಾಕೆ ಸಾರ್ ಇಂಥ ಹೊಲಸು ಕೆಲಸ ಮಾಡ್ತೀವಿ? ಎನ್ನುತ್ತಾರೆ ಜಲಮಂಡಲಿಯ ಒಳಚರಂಡಿ ಕಾರ್ಮಿಕರೊಬ್ಬರು.
ಈ ಎರಡೂ ಸಂಸ್ಥೆಗಳ ಗುತ್ತಿಗೆ ಪೌರಕಾರ್ಮಿಕರು ಬೆಂಗಳೂರು ಸುತ್ತಮುತ್ತಲಿನ ಹೊರವಲಯಗಳಿಗೆ ವಾರಕ್ಕೆ ಒಂದೆರಡು ಬಾರಿಯಾದರೂ ರಾತ್ರಿವೇಳೆ ಕಕ್ಕಸುಗುಂಡಿ ಸ್ವಚ್ಛಗೊಳಿಸುವ ಕೆಲಸ ಹಿಡಿದು ಜೀವವನ್ನು ಅಪಾಯದ ಬಾಯಿಗೊಡ್ಡಿ ಮಲದಗುಂಡಿಗಳೊಳಗೆ ಇಳಿಯುತ್ತಾರೆ. ಸಮಾಜಕಲ್ಯಾಣ ಸಚಿವರ ತವರೂರಾದ ಆನೇಕಲ್‌ನಲ್ಲಿಯೇ ಅಲ್ಲಿಯ ಪುರಸಭೆಯ ಗುತ್ತಿಗೆ ಪೌರಕಾರ್ಮಿಕರು ಸುತ್ತಮುತ್ತಲಿನ ಹಳ್ಳಿಗಳಾದ ದೊಡ್ಡಿಗಾಳು, ಭದ್ರಾಪುರ, ಪಾಳ್ಯ ಗ್ರಾಮಗಳಿಗೆ ತೆರಳಿ ಊರವರ ಕಕ್ಕಸುಗುಂಡಿಗಳನ್ನು ಕೈಯಿಂದ ಬಳಿದು ಬರುವ ಘೋರತೆಯೂ ರಾಜಧಾನಿಯ ಹೊಕ್ಕಳುಪ್ರದೇಶಗಳೊಳಗಿದೆ. ಎಲ್ಲಿಯವರೆಗೆ ನಗರದ ಹೊರವಲಯ ಪ್ರದೇಶಗಳಲ್ಲಿ ಒಳಚರಂಡಿ ಸೌಲಭ್ಯ ಲಭ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಕಕ್ಕಸುಗುಂಡಿ ತುಂಬಿಕೊಂಡ ಮನೆಯ ಜನ ಗುತ್ತಿಗೆ ಪೌರಕಾರ್ಮಿಕರನ್ನು ಕರೆದೊಯ್ಯುತ್ತಲೇ ಇರುತ್ತಾರೆ, ಎಲ್ಲಿಯವರೆಗೆ ಗುತ್ತಿಗೆ ಪೌರಕಾರ್ಮಿಕರ ಸಂಬಳ ಜಾಸ್ತಿಯಾಗುವುದಿಲ್ಲವೋ ಅಲ್ಲಿಯವರೆಗೆ ಈ ದಲಿತರು ಕಕ್ಕಸುಗುಂಡಿಗಳತ್ತ ಬರಿಗೈಗಳೊಡನೆ ನಡೆಯುತ್ತಲೇ ಇರುತ್ತಾರೆ!
ಲೇಖಕರಲ್ಲಿ ಒಬ್ಬರಾದ ಟಿ.ಕೆ.ದಯಾನಂದ ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಸಾಮಾಜಿಕ ಪ್ರತ್ಯೇಕತೆಯ ಮತ್ತು ಒಳಗೊಳ್ಳುವಿಕೆಯ ಅಧ್ಯಯನ ಕೇಂದ್ರದ ಸಂಶೋಧಕರು
ಎಪ್ರೀಲ್ 14ನೆ ತಾರೀಕಿನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಈ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ.
ದಿ ಟ್ರೂಮನ್ ಶೋ
ಒಂದ್ಸಲ ಕಣ್ಣು ಮುಚ್ಚಿಕೊಂಡು ಎರಡೇ ಎರಡು ಸೆಕೆಂಡ್ ಇದು ನಾನಲ್ಲ.. ನಾನು ಟ್ರೂಮನ್ ಎಂಬ ಹೆಸರಿನ ಜೀವ ಅಂತ ಅಂದುಕೊಳ್ಳುತ್ತೇನೆ. ನನ್ನದು ಜಗತ್ತಿನೆಲ್ಲೆಡೆಯ ಜೀವಸಂಕುಲಕ್ಕಿಂತಲೂ ಭಿನ್ನ ಬಗೆಯ ಬದುಕು ಎಂಬುದು ನನ್ನ ಅರಿವಿಗೆ ಬರುವುದು ಬೇಡ. ನಾನೀಗ ಟ್ರೂಮನ್. ಆತನ ಜಗತ್ತು ಈಗ ಖುಲ್ಲಂಕುಲ್ಲ ನನ್ನದು, ಆತನ ಸುತ್ತ ಕಟ್ಟಲ್ಪಟ್ಟ ಮಿಥ್ಯೆಗಳು ನನ್ನವು, ನನ್ನ ಬದುಕು ನನ್ನದೇ ಅಲ್ಲದ ಬದುಕು, ಅದೇ ವೇಳೆಯಲ್ಲಿ ಜಗತ್ತಿನ ಲೋಲುಪತೆಯಲ್ಲಿ ಮೈಮರೆತು ಕುಳಿತವರಿಗಾಗಿ ನನ್ನ ಬದುಕು ಕೈಕಾಲು ಮುರಿದುಕೊಂಡು ಮೀಸಲಾಗಿದೆ. ನನ್ನ ಹೆಸರು ಟ್ರೂಮನ್.
ನಾನೊಂದು ನಗರದಲ್ಲಿ ಬದುಕುತ್ತಿರುವ ಸೀದಾಸಾದಾ ಮಾಮೂಲು ಮನುಷ್ಯ. ಸೆಹಾವೆನ್ ಎಂಬುದು ನನ್ನೂರಿನ ಹೆಸರು. ಬೆಳಗ್ಗೆಯೆದ್ದು ಹಲ್ಲುಜ್ಜುತ್ತೇನೆ, ಸ್ನಾನ ಮಾಡುತ್ತೇನೆ, ಶರಟೇರಿಸಿಕೊಂಡು ಪ್ಯಾಂಟೊಳಗೆ ಕಾಲು ತೂರಿಸಿಕೊಂಡು ಒಂದು ಬ್ಯಾಗೆತ್ತಿಕೊಂಡು ಕೆಲಸಕ್ಕೆ ಹೊರಡುತ್ತೇನೆ. ನೆರೆಹೊರೆಯ ಮಂದಿಗೆ ನಾನೆಂದರೆ ಅಚ್ಚುಮೆಚ್ಚು, ಬೆಳಗಿನ ವೇಳೆ ಅವರಿಗೆ ಕೈಬೀಸಿ ವಿಶ್ ಮಾಡುವಾಗ ಅದೇ ಜೋಶಿಯಲ್ಲಿ ಅವರೂ ನನ್ನತ್ತ ಕೈಬೀಸುತ್ತಾರೆ. ನಸುನಗುತ್ತಾರೆ. ಎಲ್ಲ ಸಿಟಿಗಳಂತೆಯೇ ನಾನಿರುವ ನಗರವೂ ಝಗಮಗಿಸುತ್ತಿದೆ. ಎಲ್ಲರೂ ಅವರವರ ಕೆಲಸದೊಳಗೆ ಕಟ್ಟಿಹಾಕಿಕೊಂಡಿದ್ದಾರೆ. ನಾನೂ ಸಹ.
ಎಲ್ಲವೂ ಸರಿಯಿರುವಾಗ ಇತ್ತೀಚೆಗೆ ಒಂದಷ್ಟು ಏಕತಾನ ಪಾತ್ರಗಳು ನನ್ನ ಬದುಕೊಳಗೆ ನುಸುಳಿವೆಯೇ ಎಂಬ ಅನುಮಾನ ನನ್ನೊಳಗೆ ಕೈಕಾಲು ಮಿಸುಕಾಡುತ್ತಿದೆ. ಯಾವ ದಿನವಾದರೂ ಸರಿ, ಯಾವ ಬೀದಿಗೆ, ಯಾವ ಅಂಗಡಿಗೆ, ಯಾವ ಕಛೇರಿಗೆ ಪಾರ್ಕಿಗೆ ಹೋದರೂ ನನಗೆ ಹಿಂದೆ ಆ ಜಾಗದಲ್ಲಿ ಇದ್ದವರು ಅವರೇ ಅನ್ನಿಸುತ್ತಿದೆ. ಮುಖಗಳು ಯಾಕೋ ಬದಲಾಗುತ್ತಲೇ ಇಲ್ಲ, ಒಂದು ಪಾರ್ಕಿನಲ್ಲಿ ವಾರದ ಹಿಂದೆ ನೋಡಿದ ಅದೇ ಮುಖಗಳನ್ನು ಈ ವಾರವೂ ಅಲ್ಲಿ ನೋಡುತ್ತೇನೆ. ಅದೇ ಮಗು, ಅದೇ ವೃದ್ಧೆ, ಅದೇ ಜೋಕಾಲಿ ಜೀಕುವ ಯುವತಿಯರು.. ಯಾಕೆ ಹೀಗಾಗುತ್ತಿದೆ?
![]()
ನಿನ್ನೆ ತಾನೇ ಕಛೇರಿ ಮುಗಿಸಿ ನಡೆದು ಬರುತ್ತಿರುವಾಗ ಆಕಾಶದಿಂದ ಎಂಥದೋ ಲೈಟಿನಂತಹ ವಸ್ತು ನನ್ನ ಮುಂದೆ ಬಿತ್ತು.. ತಿರುವಿ ಮಗುಚಿ ನೋಡಿದರೂ ಅದೊಂದು ಲೈಟು ಎಂಬುದನ್ನು ಬಿಟ್ಟು ಮತ್ತೇನೂ ಅರ್ಥವಾಗಲಿಲ್ಲ. ಅದೇ ಟೈಮಿನಲ್ಲಿ ವಿಮಾನ ಅಪಘಾತವಾಗಿ ಅದರ ಬಿಡಿಭಾಗಗಳು ಎಲ್ಲೆಂದರಲ್ಲಿ ಚೆಲ್ಲಾಡಿದ ಬಗ್ಗೆ ರೇಡಿಯೋದಲ್ಲಿ ಒಂದು ಪ್ರಕಟಣೆ. ಇರಬಹುದೇನೋ. ಒಮ್ಮೊಮ್ಮೆ ನನ್ನ ಕಾರ್ ನಲ್ಲಿ ಅಳವಡಿಸಿರುವ ರೇಡಿಯೋ ಯಾರೊಂದಿಗೋ ಮಾತನಾಡಲು ಶುರುವಿಡುತ್ತದೆ, ಮಾತನಾಡುತ್ತಿರುವವರು, ಆಕಡೆಯ ಮಾತುಗಾರರು ಇಬ್ಬರೂ ಯಾರೆಂದು ನನಗೆ ಗೊಂದಲವಾಗುತ್ತದೆ.
ಇರಲಿ.. ಯಾವುದು ಬೇಕಾದರೂ ಚಕ್ರೋಪಾದಿಯಲ್ಲಿ ಸುತ್ತಿಕೊಳ್ಳಲಿ ಅಪರಿಚಿತ ಪಾತ್ರಗಳು ನನ್ನ ಸುತ್ತಲೇ ತಿರುಗಾಡಲಿ.. ಮೆರಿಲ್ ಒಬ್ಬಳ ಸಾಂಗತ್ಯದಲ್ಲಿ ನಾನು ಇತ್ತೀಚೆಗೆ ಹೆಚ್ಚೆಚ್ಚು ಮನುಷ್ಯನಾಗುತ್ತಿದ್ದೇನೆ. ಇವಳ ಜೊತೆಗಿರುವುದೇ ಚೆಂದದ ಅನುಭೂತಿ. ನಾನು ಅವಳನ್ನು ಪ್ರೀತಿಸುತ್ತಿದ್ದೇನಾ, ಇರಬಹುದು. ನಾನು ಸೆಲ್ವಿಯಾಳನ್ನು ಪ್ರೀತಿಸುತ್ತಿರಬಹುದು. ಆದಷ್ಟು ಬೇಗ ಅವಳೆದು ಮೊಣಕಾಲೂರಿ ಕುಳಿತು ಪ್ರೇಮನಿವೇದನೆಗೆ ಅಣಿಯಾಗಬೇಕು.. ಅವಳಿಗೂ ಇದರ ಗುಮಾನಿ ಬಂದಿರಬೇಕು.. ಏನೋ ಹೇಳಲಿಕ್ಕಿದೆ ಸಮುದ್ರ ತೀರದಲ್ಲಿ ಸಿಗು ಎಂದಿದ್ದಾಳೆ.. ಇವತ್ತು ರಾತ್ರಿ ಅವಳೆದುರು ಹೇಳಲೇಬೇಕು. ಸಮುದ್ರತೀರಕ್ಕೆ ತೆರಳಿದ್ದೇನೆ, ಅಲ್ಲಿ ಅವಳಿಲ್ಲ.. ಅವಳ ನೆರಳೂ ಸಹ ಅತ್ತ ಕಾಲಿಟ್ಟಿಲ್ಲ.. ಕಾಯ್ದೆ ಕಾಯ್ದೆ.. ಅವಳು ಬರಲೇ ಇಲ್ಲ. ಆವತ್ತಿನಿಂದ ಅವಳು ನನಗೆ ಮತ್ತೆಂದೂ ಸಿಗಲೇ ಇಲ್ಲ. ಯಾಕೆ ಹೀಗಾಗುತ್ತಿದೆ.. ಎಲ್ಲವೂ ಅಯೋಮಯದಂತೆ, ನನ್ನ ಬದುಕಿಗೆ ಹತ್ತಿರವಾಗಿ ಇರಬೇಕಿದ್ದವರೆಲ್ಲರೂ ರಪರಪನೆ ದೂರವೇಕೆ ಓಡುತ್ತಿದ್ದಾರೆ, ಬೀದಿಬೀದಿಗಳಲ್ಲಿ ಅವವೇ ಮುಖಗಳು ಏಕೆ ಕಾಣಿಸುತ್ತಿವೆ? ಬೇರೆ ಮುಖಗಳೆಲ್ಲಿ ಹೋದವು. ಸೆಹವಾನ್ ನಗರವೇ ಬೇಸತ್ತುಹೋಗಿದೆ, ಊರ ಹೊರಗಾದರೂ ಹೋಗಿ ಓಡಾಡಿಕೊಂಡು ಬರಬೇಕು. ಈ ಊರು ನಗರ ನನ್ನದಲ್ಲವೆನ್ನಿಸುತ್ತಿದೆ. ಈ ನಗರವನ್ನು ಬಿಟ್ಟು ಮೊದಲು ತೊಲಗಬೇಕು.
![]()
ಒಂದಂತೂ ಸತ್ಯ.. ನನ್ನ ಇಡೀ ಬದುಕನ್ನು ಚಲನವಲನಗಳನ್ನು ಯಾವುದೋ ಒಂದು ನಿಯಂತ್ರಿಸುತ್ತಿದೆ ಎನಿಸುತ್ತಿದೆ. ಊರೊಳಗೆ ಇರುವಾಗ ಎಲ್ಲವೂ ಸಹನೀಯವಾಗಿದ್ದುದು ಊರು ತೊರೆಯಲು ನಿರ್ಧರಿಸಿದ ನಂತರ ನನ್ನ ವಿರುದ್ಧ ಎಲ್ಲವೂ ತಿರುಗಿ ಬೀಳುತ್ತಿವೆ, ನನ್ನ ಕೊರಳಿಗೆ ಯಾವುದೋ ಸರಪಳಿ ಸುತ್ತಿಕೊಂಡಿರುವ ಗುಮಾನಿಗಳು ಮೂಡುತ್ತಿವೆ. ಇಲ್ಲ ಇಲ್ಲ.. ಈ ಸರಪಳಿಯೊಳಗೆ ಕೊರಳು ಸಿಗಿಸಿಕೊಂಡು ನರಳುವುದು ನನಗೆ ಬೇಕಿಲ್ಲ. ಇಲ್ಲಿಂದ ಓಡಿಹೋಗುತ್ತೇನೆ. ಈ ನಗರ, ಆ ಸರಪಳಿ, ಈ ಅನೂಹ್ಯ ಬಂಧನ.. ಎಲ್ಲವೂ ಇವತ್ತಿಗೆ ಸಾಕು.. ನನಗೊಂದು ಬಿಡುಗಡೆ ಬೇಕು. ಹೇಗಾದರೂ ಸರಿಯೇ ಇಲ್ಲಿಂದ ಓಡಿ ಹೋಗುತ್ತೇನೆ.. ನನ್ನ ಮನೆಯ ಕೆಳಕೋಣೆಯಿಂದ ಒಂದು ಕಳ್ಳಗಿಂಡಿಯ ಮೂಲಕ ಓಡಿಹೋಗುತ್ತೇನೆ. ಅಗೋ ಸಮುದ್ರ ತೀರದ ಹಲ್ಲುಗಂಭಕ್ಕೆ ಕಟ್ಟಿದ ಪುಟ್ಟ ದೋಣಿಯೊಂದಿದೆ. ಕೊಲಂಬಸನ ಹಡಗಿಗಿದ್ದ ಹೆಸರು ಅದರದು.. ಸಂತಾ ಮಾರಿಯ. ದೋಣಿಯೊಳಗೆ ಕುಳಿತು ಹುಟ್ಟು ಹಾಕುತ್ತ ಹಾಕುತ್ತ ನನ್ನನ್ನು ಕಟ್ಟಿ ಹಾಕಿರುವ ಈ ನಗರದಿಂದ ತಪ್ಪಿಸಿಕೊಳ್ಳುತ್ತಿದ್ದೇನೆ. ಇದೇನಿದು ದೋಣಿ ಯಾವುದಕ್ಕೋ ಅಡ್ಡ ಬಡಿದು ನಿಂತುಬಿಟ್ಟಿತಲ್ಲ.. ಇದು ಗೋಡೆಯೋ ಆಕಾಶವೋ, ಗೋಡೆಗೆ ಆಕಾಶದ ಬಣ್ಣ ಬಳಿಯಲಾಗಿದೆ.. ತೀರದಲ್ಲಿ ನಿಂತು ನೋಡಿದಾಗ ಆಕಾಶದಂತೆ ಕಂಡಿದ್ದು ಈ ಗೋಡೆಯೇ? ಈ ಆಕಾಶದ ಬಣ್ಣದ ಗೋಡೆಗೆ ಢಿಕ್ಕಿ ಹೊಡೆದು ಮುಂದೆ ಹೋಗಲಾರದೆ ನನ್ನ ದೋಣಿ ನಿಂತಿದೆ.. ತಲೆಯೆತ್ತಿ ನೋಡುತ್ತೇನೆ, ಅಲ್ಲಿನ ಆಕಾಶವೂ ಆಕಾಶವೋ ಅಥವಾ ಗುಮ್ಮಟವೊಂದಕ್ಕೆ ಆಕಾಶದ ಬಣ್ಣ ಬಳಿಯಲಾಗಿದೆಯೋ? ಆ ಕೃತಕ ಆಕಾಶದೊಳಗೆ ಮಿನುಗುತ್ತಿದ್ದುದು ನಕ್ಷತ್ರಗಳೋ ಅಥವಾ ಲೈಟುಗಳೋ, ಚಂದ್ರನೂ ಸುಳ್ಳೇ ಹಾಗಾದರೆ.. ನಾನು ಎಲ್ಲಿದ್ದೇನೆ, ಯಾವ ಜಗತ್ತಿನಲ್ಲಿದ್ದೇನೆ.. ಆಕಾಶ, ನೀರು, ಮೋಡ, ನಕ್ಷತ್ರ, ಎಲ್ಲವೂ ಕೃತಕ. ಹುಟ್ಟಿದಾಗಿನಿಂದ ನಾನು ಪ್ರತಿನಿತ್ಯ ವ್ಯವಹರಿಸುತ್ತಿದ್ದ ಮುಖಗಳೂ, ಸಂಬಂಧಗಳು, ಬೀದಿ, ರಸ್ತೆ, ಮನೆ, ಕಛೇರಿ ಎಲ್ಲವೂ ಕೃತಕ.. ಏನಾಗಿಬಿಟ್ಟೆ ನಾನು? ಯಾರು ಕೂಡಿಹಾಕಿದ್ದು ಈ ಪಂಜರದೊಳಗೆ ನನ್ನನ್ನು?
![]()
ದೋಣಿಯೊಳಗೆ ಅಳವಡಿಸಲಾಗಿರುವ ರೇಡಿಯೋ ಒಂದರ ಮೂಲಕ ನಿಧಾನಕ್ಕೆ ನನ್ನೊಂದಿಗೆ ಒಂದು ದನಿ ಮಾತನಾಡುತ್ತದೆ..
ಟ್ರೂಮನ್ ನೀನು ನನ್ನ ಕಲ್ಪನೆಯ ಕೂಸು.. ಇಷ್ಟು ದಿನ ನೀನು ಹುಟ್ಟಿದಾಗಿನಿಂದ ಬದುಕಿದ್ದು, ಬೆಳೆದಿದ್ದು, ಪ್ರೇಮಿಸಿದ್ದು ನಕ್ಕಿದ್ದು, ಅತ್ತಿದ್ದು ಎಲ್ಲವೂ ಒಂದು ಕೃತಕವಾದ, ನಿನಗಾಗಿಯೇ ನಿರ್ಮಿತಗೊಂಡ ನಗರವೊಂದರಲ್ಲಿ.. ಇಷ್ಟು ದಿನ ನೀನು ಬೆಳೆದಿದ್ದು ಎಲ್ಲವೂ ಬರೀ ಮುಖಗಳು ಮಾತ್ರ. ದಿನಗೂಲಿ ಮುಖಗಳು. ಇದೊಂದು ಟಿವಿ ರಿಯಾಲಿಟಿ ಶೋ ಟ್ರೂಮನ್. ನಿನ್ನ ತಾಯಿಗೆ ನೀನು ಬೇಡದ ಕೂಸಾಗಿದ್ದೆ.. ಗರ್ಭಪಾತಕ್ಕೆಂದು ಆಸ್ಪತ್ರೆಗೆ ಬಂದಾಗ ಆಕೆಗೆ ಈ ರಿಯಾಲಿಟಿ ಶೋ ಬಗ್ಗೆ ತಿಳಿಸಿ ನೀನು ಭ್ರೂಣವಾಗಿದ್ದಾಗಿನಿಂದಲೂ ನಿನ್ನ ಸುತ್ತ ಸಾವಿರಾರು ಕೆಮರಾಗಳು ನಿನ್ನನ್ನು ಶೂಟ್ ಮಾಡುತ್ತಿವೆ. ನೀನು ಹುಟ್ಟಿದ ನಂತರ ಈ ಕೃತಕ ನಗರವೊಂದಕ್ಕೆ ತಂದು ಬಿಡಲಾಯಿತು. ಇದು ನಗರವಲ್ಲ. ನಗರವೊಂದರ ಬೃಹತ್ ಸೆಟ್ಟು. ಇಲ್ಲಿ ನೀನು ಯಾವುದೆಲ್ಲವನ್ನೂ ಸತ್ಯವೆಂದು ನಂಬಿದ್ದೆಯೋ ಅವೆಲ್ಲವೂ ಬಾಡಿಗೆಯ ಆಧಾರದಲ್ಲಿ ನಿನಗಾಗಿಯೇ ಎಂದು ರೂಪಿಸಲಾದ ಒಂದು ವ್ಯವಸ್ಥೆ. ಇದರೊಳಗೆ ನಿನ್ನ ಪ್ರಿಯತಮೆ ಸೆಲ್ವಾ ಕೂಡ ದಿನಗೂಲಿ ಆಧಾರದಲ್ಲಿ ನೇಮಕವಾದವಳು. ನಿನ್ನ ಪ್ರೀತಿ ಈ ರಿಯಾಲಿಟಿ ಶೋಗೆ ಅಡೆತಡೆಯಾಗಬಹುದೆಂದು ಆಕೆಯನ್ನು ಕೆಲಸದಿಂದ ತೆಗೆದೆವು. ಒಟ್ಟು ನಗರದ ಎಲ್ಲೆಡೆಯೂ ಕೆಮೆರಾಗಳು ನಿನ್ನನ್ನು ಶೂಟ್ ಮಾಡುತ್ತಿದ್ದವು. ನಿನ್ನೆದುರು ನಿಲ್ಲುವ ಪ್ರತಿಯೊಬ್ಬ ನಟರ ಶರ್ಟಿನ ಗುಂಡಿಗಳಲ್ಲೂ ಹಿಡನ್ ಕೆಮೆರಾಗಳಿದ್ದವು. ನಿನ್ನ ಪ್ರತಿನಿತ್ಯದ ಚಟುವಟಿಕೆಯನ್ನು ದಿ ಟ್ರೂಮನ್ ಶೋ ಮೂಲಕ ಕಾರ್ಪೊರೇಟ್ ಏಜೆನ್ಸಿಯೊಂದು ನಿನ್ನನ್ನು ಇಡೀ ಜಗತ್ತಿನ ಜನ ಟೀವಿಗಳಲ್ಲಿ ನೋಡುವಂತೆ ಮಾಡಿತ್ತು. ನೀನು ಬಳಸುವ ಎಲ್ಲ ದಿನಬಳಕೆ ಪ್ರಾಡಕ್ಟ್ ಗಳು ಜಾಹಿರಾತಾಗಿ ಜಗತ್ತಿನಾದ್ಯಂತ ಪ್ರಸಿದ್ಧಿಗೆ ಬಂದಿವೆ. ಟ್ರೂಮನ್.. ನೀನೀಗ ನೂರಾರು ಪ್ರಾಡಕ್ಟ್ ಗಳ ಬ್ರಾಂಡ್ ಅಂಬಾಸಡರ್. ನೀನೀಗ ಇಡೀ ಜಗತ್ತಿನ ಸೂಪರ್ ಸ್ಟಾರ್. ತಪ್ಪಿಸಿಕೊಂಡು ಹೋಗುವ ಪ್ರಯತ್ನ ಬೇಡ ಟ್ರೂಮನ್.. ನಗರದೊಳಗೆ ವಾಪಸ್ಸು ಹೋಗು..
![]()
ಇದು ಜಿಮ್ ಕ್ಯಾರಿ ನಟಿಸಿ ಪೀಟರ್ ವಿಯರ್ ನಿರ್ದೇಶಿಸಿದ ದಿ ಟ್ರೂಮನ್ ಶೋ ಚಿತ್ರದ ಕಥಾ ಹಂದರ. ಇದರೊಳಗಿನ ಆಂತರ್ಯಗಳನ್ನು ಬಿಡಿಸಿಡುವ ಅಗತ್ಯವೇ ಇಲ್ಲದಷ್ಟು ಈ ಚಿತ್ರ ಇವತ್ತಿನ ಮೀಡಿಯಾ ಜಗತ್ತಿನ ಮಿಥ್ಯಾರೂಪಿ ಅವಲಂಬನೆಗಳನ್ನು ವಿಮರ್ಶಿಸುತ್ತದೆ. ಓವಿ ಚಾನೆಲ್ ಗಳಲ್ಲಿ ರಿಯಾಲಿಟಿ ಶೋ ಎಂಬ ಕಾನ್ಸೆಪ್ಟ್ ಹುಟ್ಟಿಕೊಂಡ ಆರಂಭಿಕ ದಿನಗಳಲ್ಲಿ ತೆರೆಕಂಡ ಈ ಚಿತ್ರ ಮೀಡಿಯಾ ಜಗತ್ತು ನಮ್ಮೆದುರು ತಂದು ಸುರಿಯುತ್ತಿರುವ ರಂಜನೆಯ ಹೆಸರಿನ ವಿಕೃತಿಗಳನ್ನು ಇದಕ್ಕಿಂತ ಹೆಚ್ಚಿನದಾಗಿ ವಿಮರ್ಶಿಸುತ್ತದೆ. ಸಾಧ್ಯವಾದರೆ ಒಮ್ಮೆ ಚಿತ್ರ ನೋಡಿ.
![]()
ತನ್ನ ಏಸ್ ವೆಂಟೂರ ಪತ್ತೇದಾರಿ ಹಾಸ್ಯಚಿತ್ರಗಳಲ್ಲಿ ಪೆಂಗುಪೆಂಗಾಗಿ ನಗಿಸುತ್ತಿದ್ದ ಜಿಮ್ ಕ್ಯಾರಿಯ ಅಭಿನಯದ ಮತ್ತೊಂದು ಮಗ್ಗುಲು ಟ್ರೂಮನ್ ಶೋ ಸಿನಿಮಾದಲ್ಲಿ ಅನಾವರಣಗೊಂಡ ಬಗೆ ಅದ್ಭುತ. ಸಿನಿಮಾಗಳು ಮಾತನಾಡುತ್ತವೆ. ಅವನ್ನು ಕೇಳಿಸಿಕೊಳ್ಳುವ ಸಹನೆ ನಮಗಿರಬೇಕು. ಹೀಗೆ ಸಮಕಾಲೀನತೆಯಲ್ಲಿ ಹಾಸುಹೊಕ್ಕಾದ ವಸ್ತುವೊಂದನ್ನು ರಂಜನೆಯ ಮೂಲಕ ವಿಮರ್ಶಿಸಿದ ಟ್ರೂಮನ್ ಶೋ ಚಿತ್ರವನ್ನು ನೀವೊಮ್ಮೆ ನೋಡಲೇಬೇಕು.
ಕೆಂಡಸಂಪಿಗೆಯಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ |
“ದಿ ಸಾಂಗ್ ಆಫ್ ದಿ ಸ್ಪಾರೋಸ್”
![]() |
![]() |
ಕರೀಮ (ರೆಜಾ ನಾಝಿ) |
![]() |
ಏನೇನೂ ಅಲ್ಲದ ಜನಸಾಮಾನ್ಯರ ಪುಟ್ಟ ಪುಟ್ಟ ಗೂಡುಗಳಂತಹ ಬದುಕನ್ನು ದೃಶ್ಯಗಳ ಮೂಲಕ ಕಟ್ಟುವುದರಲ್ಲಿ ಇರಾನಿ ಚಿತ್ರ ನಿರ್ದೇಶಕ ಮಜೀದ್ ಮಜಿದಿ (ಚಿಲ್ಡ್ರನ್ ಆಫ್ ಹೆವನ್) ಸಿದ್ದಹಸ್ತ ಪ್ರತಿಭೆ. ಸೀದಾಸಾದ ಬದುಕುಗಳನ್ನು ಹಾಗೆಯೇ ಸಂಗ್ರಹಿಸಿ ತೆರೆಯ ಮೇಲೆ ಕಥಾರೂಪದಲ್ಲಿ ಸಂಗ್ರಹಿಸುವುದರಲ್ಲಿ ಮಜಿದಿಯ ಕಥನಕಲೆ ಆತನ ಇಲ್ಲಿಯವರೆಗಿನ ಚಿತ್ರಗಳಲ್ಲಿ ಗೆಲ್ಲುತ್ತಲೇ ಬಂದಿದೆ. ಮಜೀದಿಯ ಇತ್ತೀಚಿನ ಚಿತ್ರ “ಸಾಂಗ್ ಆಫ್ ಸ್ಪಾರೋಸ್” ಕಥನ ಕಟ್ಟುವಿಕೆ ಮತ್ತು ಆಡಂಬರದಿಂದ ಹೊರತಾದ ಬದುಕುಗಳನ್ನು ದಿವೀನಾಗಿ ಎತ್ತಿನಿಲ್ಲಿಸುವ ಆತನ ಹಿಂದಿನ ಪ್ರಯತ್ನಗಳ ಮುಂದುವರಿದ ಭಾಗ. ಆಸ್ಟ್ರಿಚ್ ಪಕ್ಷಿಸಾಕಣೆ ಕೇಂದ್ರವೊಂದರಲ್ಲಿ ಆಸ್ಟ್ರಿಚ್ ನೋಡಿಕೊಳ್ಳುವ ಕೆಲಸದಲ್ಲಿನ ಮಧ್ಯವಯಸ್ಕ ಕರೀಂ, ಆತನ ಕಿವಿ ಕೇಳಿಸದ ಮಗಳು, ಮೀನು ಸಾಕುವ ಹಂಬಲದ ಮಗ, ಯಾವುದೋ ದುಡಿಮೆಗೆಂದು ಹೋಗಿ ಮತ್ತೇನೋ ಆಗಿಬಿಡುವ ಸಂದಿಗ್ಧತೆಗಳು ಮತ್ತು ಮುರುಕಲು ವಸ್ತುಗಳ ಮೇಲಿನ ಕರೀಮನ ಆಪ್ಯಾಯತೆ ಇವೆಲ್ಲವುಗಳ ಜೊತೆಗೆ ಸಮಕಾಲೀನ ಇರಾನಿನ ಬಡವರ ಜಗತ್ತಿನೊಳಗೆ “ದಿ ಸಾಂಗ್ ಆಫ್ ದಿ ಸ್ಪಾರೋಸ್” ಒಂದು ಸುತ್ತು ಸುತ್ತಿಸುತ್ತದೆ,
“ಚಿಲ್ಡ್ರನ್ ಆಫ್ ಹೆವನ್” ಚಿತ್ರದ ನಂತರ “ಮೆಹ್ರಾನ್ ಕಶಾನಿ”ಯೊಂದಿಗೆ ಕಥೆ ಹೆಣೆದಿರುವ ಮಜೀದಿ ತನ್ನ ಈ “ಗುಬ್ಬಿಗಾನ”ದ ಚಿತ್ರದಲ್ಲಿ ಹೇಳಲು ಎತ್ತಿಕೊಂಡಿರುವ ವಸ್ತುವಿಷಯವು ಸಂಕೀರ್ಣವಾಗಿರುವ ಜೊತೆಗೆಯೇ ಕೆಳವರ್ಗದ ಜನರ ನಿಯತ್ತಿನ ಸ್ಥಾವರತೆ ಮತ್ತು ಬೆನ್ನಟ್ಟುವ ಆಸೆಗಳ ಜಂಗಮತ್ವಗಳ ನಡುವಿನ ಎಳೆಗಳನ್ನು ಬಿಡಿಬಿಡಿಯಾಗಿ ಅವಲೋಕಿಸುತ್ತದೆ. ಕರೀಮನ ಪಾತ್ರದ (ರೆಜಾ ನಾಝಿ) ಮೂಲಕ ಈ ಸ್ಥಾವರ ಮತ್ತು ಜಂಗಮತೆಗಳನ್ನು ಬಡತನಕ್ಕೆ ಜೋಡಿಸಿ ಮಜೀದಿ ಕಥನಕಲೆಗೆ ಇಟ್ಟಿಗೆ ಪೇರಿಸಿದ್ದಾರೆ.
“ಆಸ್ಟ್ರಿಚ್ ಫಾರ್ಮ್” ಒಂದರಲ್ಲಿ ಕೂಲಿಯಾಳಾಗಿರುವ ಕರೀಮನ ಕಿವಿ ಕೇಳದ ಮಗಳು “ಹಾನಿಯೆ”, ಆತನ ಮೀನಿನ ಆಸೆಯ ಹುಸೇನನೆಂಬ ಮಗನೂ ಎಲ್ಲ ದೇಶಗಳಲ್ಲೂ ಕಂಡುಬರುವ ರೀತಿಯ ಪುಟ್ಟ ಊರೊಂದರಲ್ಲಿ ಇರುವ ಮತ್ತು ಇಲ್ಲದಿರುವ “ವಸ್ತು”ಗಳೊಟ್ಟಿಗೆ ಬದುಕುತ್ತಿದ್ದಾರೆ. ತನ್ನ ಮನೆಯ ಮುಂದಿನ ಕುಡಿಯುವ ನೀರಿನ ಬಾವಿಯನ್ನು ಸ್ವಚ್ಛಗೊಳಿಸಿ ಅಲ್ಲಿ ಮೀನುಗಳನ್ನು ಚೆಲ್ಲಿ ನಿತ್ಯವೂ ಅವುಗಳನ್ನು ನೋಡುವ ಆಸೆಗೆ ಕರೀಮನ ಮಗ ಹುಸೇನನು ಪಕ್ಕಾಗಿದ್ದಾನೆ. ಯಾವತ್ತಾದರೊಂದು ದಿನ ಆ ಮೀನುಗಳು ದೊಡ್ಡದೊಡ್ಡ ಸೈಜಿಗೆ ಬೆಳೆದು ಅವುಗಳನ್ನು ಮಾರಿ ಇದ್ದಕ್ಕಿದ್ದಂತೆ ಶ್ರೀಮಂತನಾಗಿಬಿಡುವುದು ಬಾಲಕ ಹುಸೇನನ ಚಿಕ್ಕಸೈಜಿನ ಬಯಕೆ. ಕರೀಮನು ಕಿವಿ ಕೇಳಿಸದ ಮಗಳಿಗೆ ಒಂದು “ಶ್ರವಣ ಸಾಧನ” ತಂದುಕೊಟ್ಟರೂ ಅದು ಸದ್ಯಕ್ಕೆ ಈಗ ಮುರಿದು ಕೆಲಸಕ್ಕೆ ಬರುತ್ತಿಲ್ಲ. ಹೊಸತೊಂದು ಶ್ರವಣಸಾಧನ ಜೋಡಿಸಿದರೆ ಆಕೆಯ ಕಿವಿ ಕೇಳುತ್ತದೆ, ಕರೀಮನ ಕೈಯಲ್ಲಿ ಹಣವಿಲ್ಲ, ಹೇಗಾದರೂ ಆ ಶ್ರವಣಸಾಧನಕ್ಕಾಗುವಷ್ಟು ದುಡ್ಡು ಹೊಂಚುವ ಉಮೇದಿ ಕರೀಮನದ್ದು. ಹೀಗಿರುವಾಗಲೇ ಆಸ್ಟ್ರಿಚ್ ಫಾರ್ಮ್ ನಲ್ಲಿ ಒಂದು ಆಸ್ಟ್ರಿಚ್ ತಪ್ಪಿಸಿಕೊಂಡಿದೆ, ಆಸ್ಟ್ರಿಚ್ ಹುಡುಕಿಕೊಂಡು ಬಂದರೆ ಮಾತ್ರ ನಿನ್ನ ಕೆಲಸ, ಇಲ್ಲವಾದಲ್ಲಿ ನೀನು ಕೆಲಸದಿಂದ ಹೊರಗೆ ಎಂದು ತರಾಟೆಗೆ ತೆಗೆದುಕೊಂಡ ಫಾರ್ಮ್ ಮಾಲೀಕನ ಮಾತಿಗೆ ಕಟ್ಟುಬಿದ್ದು ಕರೀಮನು ತಾನೇ ಒಂದು ಆಸ್ಟ್ರಿಚ್ ಪಕ್ಷಿಯಂತೆ ಪುಕ್ಕ ಧರಿಸಿಕೊಂಡು ಗಂಡು ಆಸ್ಟ್ರಿಚ್ ಪಕ್ಷಿಯಂತೆ ಕೂಗು ಹಾಕುತ್ತ ಗುಡ್ಡ ಮೇಡುಗಳನ್ನು ಅಲೆಯುತ್ತಿದ್ದಾನೆ. ಕೈಗೆ ಸಿಕ್ಕಿದಂತೆ ನಟಿಸಿ ನಂತರ ಮತ್ತೆ ಕಳೆದುಹೋಗುವ ಆಸ್ಟ್ರಿಚ್ ಪಕ್ಷಿಯು ಕರೀಮನ ಇಡೀ ಬದುಕನ್ನೇ ತಲೆಕೆಳಗು ಮಾಡಿ ತನ್ನಪಾಡಿಗೆ ತಾನು ಮತ್ತೆ ಅಲೆಯುತ್ತ ಹೋಗುತ್ತದೆ.

ಇದ್ದ ಕೆಲಸ ಕಳೆದುಕೊಂಡು ತ್ರಿಶಂಕು ಸ್ಥಿತಿಗೆ ನೂಕಲ್ಪಡುವ ಕರೀಮನು ಪಕ್ಕದ ಟೆಹ್ರಾನ್ ನಗರಕ್ಕೆ ಮಗಳ ಶ್ರವಣಸಾಧನ ರಿಪೇರಿಯ ಕಾರ್ಯನಿಮಿತ್ತ ತನ್ನ ಮುರುಕಲು ಮೋಟರ್ ಬೈಕ್ ನಲ್ಲಿ ತೆರಳಿದಾಗ ಅಲ್ಲಿ ಆಟೋ ಟ್ಯಾಕ್ಸಿಗಳಂತೆ ಸಾಮಾನ್ಯವಾಗಿರುವ ಬೈಕ್ ಟ್ರಾವೆಲ್ಸ್ ನವನೆಂದು ತಪ್ಪಾಗಿ ತಿಳಿದವನೊಬ್ಬ ಅವನನ್ನು ಒಂದೆಡೆಗೆ ತಲುಪಿಸಲು ಕರೀಮನ ಮುರುಕಲು ಬೈಕು ಹತ್ತುತ್ತಾನೆ, ಜಾಗ ತಲುಪಿದ ನಂತರ ಕೈತುಂಬ ಹಣ ಕೊಡುವ ಆತ ಕರೀಮನಿಗೆ “ಬೈಕ್ ಟ್ರಾನ್ಸ್ ಪೋರ್ಟರ್ ಎಂಬ ಹೊಸ ಕೆಲಸವೊಂದನ್ನು” ಅವನಿಗರಿವಿಲ್ಲದೆಯೇ ಕೊಟ್ಟು ಹೋಗಿದ್ದಾನೆ. ಬೈಕಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಜನರನ್ನು ಡ್ರಾಪ್ ಮಾಡಿದರೆ ಹಣ ಕೊಡುತ್ತಾರೆ ಎಂಬ ಹೊಸ ದುಡಿಮೆಯ ಸಾಧ್ಯತೆಯನ್ನು ಒಪ್ಪುವ ಕರೀಮನು ಅದೇ ಕೆಲಸವನ್ನು ಮುಂದುವರೆಸುತ್ತಾನೆ. ದಿನದಿಂದ ದಿನಕ್ಕೆ ದುಡಿಮೆಯ ಪ್ರಮಾಣವೂ ಏರುತ್ತಿದೆ. ಹಿಂದೆಂದೂ ನೋಡಿರದಷ್ಟು ಹಣವನ್ನು ಕರೀಮನ ಬೈಕ್ ಡ್ರಾಪ್ ಕೆಲಸ ಆತನಿಗೆ ಕೊಡುತ್ತಿದೆ.


ಇತ್ತ ಮೀನು ಸಾಕಿ ಸಾಹುಕಾರನಾಗಿಬಿಡುವ ಆಸೆಗೆ ತಲೆಕೊಟ್ಟಿರುವ ಕರೀಮನ ಮಗ ಹುಸೇನನು ತನ್ನ ಗೆಳೆಯರೊಡಗೂಡಿ ಚಿಲ್ಲರೆ ಕಾಸುಗಳನ್ನು ಸೇರಿಸಿ ಒಂದಷ್ಟು ಗೋಲ್ಡನ್ ಫಿಶ್ ಗಳನ್ನು ಖರೀದಿಸಿದ್ದಾನೆ. ಅವುಗಳನ್ನು ನೀರುತುಂಬಿದ ಡ್ರಮ್ಮಿನೊಳಗಿಟ್ಟು ಹೂವಿನಕುಂಡಗಳಿರುವ ಒಂದು ವಾಹನದಲ್ಲಿ ಊರಿಗೆ ಬರುವ ಪ್ರಯತ್ನದಲ್ಲಿ ಆ ಮೀನು ತುಂಬಿದ ಡ್ರಮ್ಮು ನೆಲಕ್ಕೆ ಬಿದ್ದು ಮೀನುಗಳೆಲ್ಲ ಪಟಪಟನೆ ಒದ್ದಾಡಿ ಜೀವಬಿಡುತ್ತವೆ. ಕೊನೆಯನ್ನು ನೀವು ಚಿತ್ರದಲ್ಲೇ ನೋಡಿದರೆ ಒಳ್ಳೆಯದು.
ಒಟ್ಟು ಸಿನಿಮಾ ಮಾತನಾಡುವುದು ಕನ್ ಸ್ಯೂಮರಿಸಂನ ಎಳೆತಕ್ಕೆ ತಲೆಕೊಡುತ್ತಿರುವ ಬಡವರ್ಗದ ತಾಕಲಾಟಗಳ ಬಗ್ಗೆ. “ತೂರಜ್ ಮನ್ಸೋರಿ”ಯ ಛಾಯಾಗ್ರಹಣ ಮಜೀದಿಯ ಉಳಿದೆಲ್ಲ ಚಿತ್ರಗಳಿಗಿಂತ ಸಾಂಗ್ ಆಫ್ ಸ್ಪಾರೋಸ್ ಚಿತ್ರವನ್ನು ಬೇರೆಯದೇ ಎತ್ತರಕ್ಕೆ ಒಯ್ಯುತ್ತದೆ. ಕರೀಮನ ಮಗ ಹುಸೇನನಾಗಿ ನಟಿಸಿರುವ “ಅಗಾಝಿ” ಎಲ್ಲಿಯೂ ತನ್ನೆದುರು ಕೆಮೆರಾ ಇದೆ, ನಿರ್ದೇಶಿಸಲು ಮಜೀದಿಯಿದ್ದಾನೆ ಎಂಬ ಸುಳಿವನ್ನೇ ಮರೆತವನಂತೆ ಚಿತ್ರದ ಕೊನೆಕೊನೆಯಲ್ಲಿ ನೋಡುಗರನ್ನು ಆವರಿಸಿಕೊಳ್ಳುವ ಬಗೆಯೇ ಅದ್ಭುತ.

ನಾಟ್ ಒನ್ ಲೆಸ್
|
ಭೀಮಾ ವಿಲಾಪಂ..ಅನಗತ್ಯ ಪ್ರಲಾಪಂ
ಬಿಜಾಪುರ ಗುಲ್ಬರ್ಗದ ಗಡಿಭಾಗಗಳಲ್ಲಿನ ದೇವಣಗಾಂವ, ಇಂಡಿ ಮತ್ತು ಸೊನ್ನ ಎಂಬ ಗ್ರಾಮಗಳಲ್ಲಿ ದಶಕಗಳ ಹಿಂದೆ ನಡೆದುಹೋದ ಹತ್ಯಾಕಾಂಡ ಪ್ರತೀಕಾರಗಾಥೆಗಳ ಕುರಿತು ಸೌಜನ್ಯಾಪೇಕ್ಷಿಗಳು ಕಥನಗಳನ್ನೂ ಬರೆದರು, ವಿನೈಲ್ ಫ್ಲೆಕ್ಸುಗಳ ಮೂಲಕ ಜಾಹಿರಾತು ಕೊಟ್ಟು ದುಂಡಗೂ ಆದರು. ಶೋಷಣೆಗೋ ಮತ್ತೊಂದಕ್ಕೋ ಈಡಾಗಿ ಕೊಚ್ಚುವ ಕೊಲ್ಲುವ ದಾರಿ ಹಿಡಿದ ಆ ಗ್ರಾಮಗಳ ಹುಂಬ ದಲಿತ ಯುವಕರು ಮತ್ತು ಅವರನ್ನು ಬಳಸಿಕೊಂಡ ಅದೃಶ್ಯ ಬಳಕೆದಾರರು ಇವತ್ತು ರಕ್ತಸಿಕ್ತ ಇತಿಹಾಸವೊಂದರ ಭಾಗವಾಗಿಯಷ್ಟೇ ಉಳಿದಿದೆ. ಧಾರಾವಾಹಿಯಾಗಿ, ಪುಸ್ತಕರೂಪದಲ್ಲಿ ಹೊರಬಂದ ನಂತರ ಇವತ್ತು ಅದೇ ರಕ್ತಸಿಕ್ತ ಇತಿಹಾಸ "ಭೀಮಾತೀರದಲ್ಲಿ" ಎಂಬ ಚಲನಚಿತ್ರವಾಗಿಯೂ ಮೈದಾಳಿರುವುದು ಮತ್ತದು ಹಕ್ಕುದಾರಿಕೆಗಾಗಿ ಹಾಕ್ಯಾಟಗಳಿಗೆ ಕಾರಣವಾಗಿರುವುದು ಬೇರೆ ಬೇರೆ ಕಾರಣಗಳಿಗಾಗಿ, ಅದು ಎಲ್ಲರಿಗೂ ತಿಳಿದಿರುವ ವಿಷಯ.ಚಿತ್ರದ ಕುರಿತು ಮಾತನಾಡುವುದಾದರೆ "ಭೀಮಾತೀರದಲ್ಲಿ" ಚಿತ್ರ ಪತ್ರಿಕಾ ವಿಮರ್ಶೆಗಳ ಶಹಬ್ಬಾಶ್ ಗಿರಿಯ ನಡುವೆಯೂ, ನಿರ್ದೇಶಕ ಆಯ್ದುಕೊಂಡ ವಸ್ತುವಿನ ನಿಭಾವಣೆ ಮತ್ತು ಗುಣಮಟ್ಟದ ಮುನ್ನೆಲೆಯಲ್ಲಿ ಅತ್ಯಂತ ಕಳಪೆ ಚಿತ್ರವಾಗಿಯಷ್ಟೇ ಉಳಿದುಬಿಟ್ಟಿರುವುದು ಚಿತ್ರ ಶುರುವಾದ ಅರ್ಧಗಂಟೆಯೊಳಗೇ ಅರಿವಿಗೆ ಬಂದು ಬಿಡುತ್ತದೆ. ಹಿನ್ನೆಲೆ ಧ್ವನಿಯ ಮೂಲಕ ಚಿತ್ರದ ಅವಶ್ಯವಿವರವನ್ನು ಬಾಯಿಬಿಡುವ ತಂತ್ರಗಾರಿಕೆಯೊಳಗೆ ನಿರೂಪಕ ಹೇಳುವ ಮಾತುಗಳು ಶೋಷಕರು ಮತ್ತು ಶೋಷಿತರು ಇವರಿಬ್ಬರ ನಡುವಿನ ಹೋರಾಟದ ಸುಳಿವನ್ನು ಬಿಟ್ಟುಕೊಟ್ಟು ಕುತೂಹಲ ಮೂಡಿಸುತ್ತವೆ. ಆದರೆ ಆ ಕಥನ ಕುತೂಹಲವನ್ನು ಕೊನೆಯವರೆಗೆ ದಾಟಿಸಲು ಚಿತ್ರಕಥೆ ಬರೆದವರು ಮತ್ತು ಅದನ್ನು ದೃಶ್ಯರೂಪಕವಾಗಿ ಇಳಿಸುವಲ್ಲಿ ನಿರ್ದೇಶಕರು ಇಬ್ಬರೂ ಅನಾಮತ್ತಾಗಿ ಸೋತಿದ್ದಾರೆ. ಪರಿತ್ಯಕ್ತ ಸಮುದಾಯವೊಂದರ ಸೆಡವು ಮತ್ತು ಶೋಷಕರ ಪ್ರತಿನಿಧಿಗಳ ಪಾತ್ರ ಕಟ್ಟುವಿಕೆಯಲ್ಲಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಕಟ್ಟುಪೇಸ್ಟು ಮಾಡುವ ಕುಖ್ಯಾತಿ ಪಡೆದಿರುವ ಓಂ ಪ್ರಕಾಶರಾವ್ ತೇಕು ಹತ್ತಿರುವುದು ಪ್ರತೀ ದೃಶ್ಯಗಳಲ್ಲಿಯೂ ಮುಖಕ್ಕೆ ಹೊಡೆದಂತೆ ಭಾಸವಾಗುತ್ತದೆ. ಗಡಿಭಾಗದ ನಿರ್ಲಕ್ಷಿತರ ಸಮೂಹವೊಂದರಲ್ಲಿಯೇ ತುಳಿತಕ್ಕೊಳಗಾದ ನಾಯಕನಾಗಿ ಚಂದಪ್ಪನನ್ನು ಎತ್ತಿಹಿಡಿಯಲು ಯತ್ನಿಸಿರುವ ರಾಯರ ಎಟುಕುವಿಕೆಗೆ ಆ ಭಾಗದ ಯಾವ ತೀವ್ರತಮ ಸಮಸ್ಯೆಯೂ ನಿಲುಕಿಲ್ಲದಿರುವುದಕ್ಕೆ ಹಲವಾರು ಸಾಕ್ಷಿಗಳು ಚಿತ್ರದ ತುಂಬ ಎಡರುತ್ತವೆ. ಪಾಳೇಗಾರಿಕೆ ಕುರುಹುಗಳು ಇನ್ನೂ ಆಳವಾಗಿ ಬೀಳು ಬಿಟ್ಟಿರುವ ಗಡಿನಾಡ ಕುಗ್ರಾಮವೊಂದರ ಚಂದಪ್ಪನೆಂಬ ಬಾಲಕ ಕಪ್ಪುನಾಯಿ ಸಾಕಿದ "ಧಣಿ ಕೊಟ್ಟ ಹಳಸಿದ ಗಂಜಿಯನ್ನು ಬಿಸಾಡುವ ಮೂಲಕ" ತನ್ನ ಶೋಷಣೆಯ ಪ್ರತಿರೋಧವನ್ನು ದಾಖಲಿಸುತ್ತಾನೆ, ಅಲ್ಲಿಂದ ಹೋಟೆಲು ಸಪ್ಲೈಯರ್ ಆಗುವ ಆ ಹುಡುಗ ಎಲ್ಲ ರೌಡಿಯಿಸಂ ಚಿತ್ರಗಳಂತೆಯೇ ಬಾರ್ ನಲ್ಲೂ ಒಬ್ಬನ ತಲೆ ಒಡೆದು ಅಲ್ಲಿಂದಲೂ ತಪ್ಪಿಸಿಕೊಂಡು ಕುಸ್ತಿ ಪೈಲ್ವಾನ್ ಒಬ್ಬನ ಆಶ್ರಯದಲ್ಲಿ ಬೆಳೆಯುತ್ತಾನೆ. ![]() ಇಲ್ಲಿಯವರೆಗೆ ಚೂರುಪಾರು ಆಸೆ ಹುಟ್ಟಿಸುವ ನಿರ್ದೇಶಕ ನಂತರ ಪುಸುಕ್ಕನೆ ರಾಮ್ ಗೋಪಾಲ್ ವರ್ಮನ "ರಕ್ತಚರಿತ್ರ"ದ ಕಥಾ ಹಂದರದ ಜೇಬಿನೊಳಗೆ ಕೈ ಇಳಿಬಿಡುತ್ತಾರೆ. ಚಂದಪ್ಪನ ಸಾಕುತಂದೆ ಪೈಲ್ವಾನ್ ಊರಿನ ಸಾಹುಕಾರ ದೇಸಾಯಿಯ ವಿರುದ್ಧ ಚುನಾವಣೆಯ ವಿಷಯಕ್ಕೆ ತಿರುಗಿ ಬೀಳುವುದು, ಊರಿನ ಕೆಳಜಾತಿಯವರ ಸಂಘಟನೆಗೆ ಮುಂದಾಗಿ ದೇಸಾಯಿಯ ಅಸಹನೆಗೆ ಪಕ್ಕಾಗಿ ಬಸ್ಸಿನೊಳಗೆ ಕೊಲೆಯಾಗುವುದು ಎಲ್ಲವೂ ರಕ್ತಚರಿತ್ರದ ಪಡಿಯಚ್ಚೇ. ತದನಂತರ ಕಾರಣವೇ ಇಲ್ಲದೇ ಪೈಲ್ವಾನನ ಮಗಳ ಅತ್ಯಾಚಾರವಾಗಿ ಆಕೆ ಕೊಲೆಯಾಗಿ ಆಕೆಯ ಸಾವು ಚಂದಪ್ಪನೊಳಗೆ ಗೊರಕೆ ಹೊಡೆಯುತ್ತಿದ್ದ ವ್ಯಾಘ್ರನನ್ನು ಬಾಲ ಹಿಡಿದು ಜಗ್ಗಿ ಚಂದಪ್ಪ ಸಡನ್ನಾಗಿ ಹೋರಾಟಗಾರನಾಗುತ್ತಾನೆ.ಅಲ್ಲಿಯವರೆಗೆ ದಿವೀನಾಗಿ ಬಿಜಾಪುರದ ಕನ್ನಡ ಮಾತನಾಡುತ್ತಿದ್ದ ಚಂದಪ್ಪ ಕೃತ್ರಿಮವಾಗಿ ಪುಸ್ತಕದ ಮಾತುಗಳನ್ನು ಆಡತೊಡಗುತ್ತಾನೆ. ಸಂಭಾಷಣೆ ಬರೆದಿರುವ ಎಂ.ಎಸ್. ರಮೇಶರ ಪೆನ್ನೊಳಗೆ ಜವಾರಿಕನ್ನಡ ಸರಾಗವಾಗಿ ಇಳಿದಿಲ್ಲ. ಅದಕ್ಕೆ ಅವರು ಆ ಬಾಗದ ಕನ್ನಡಿಗರ ನೆರವನ್ನಾದರೂ ಪಡೆದಿಲ್ಲ ಎಂಬುದಕ್ಕೆ ಚಿತ್ರದಲ್ಲಿ ಬಹಳಷ್ಟು ಪುರಾವೆಗಳಿವೆ. ಚಿತ್ರದ ಬಿಜಾಪುರ ಸೀಮೆಯ ಪಾತ್ರಗಳು ಒಮ್ಮೊಮ್ಮೆ ಕುಂದಾಪುರ ಕಾರವಾರದ ಕನ್ನಡವನ್ನೂ ಮತ್ತೊಮ್ಮೆ ಮಲೆನಾಡು ಸೀಮೆ ಕನ್ನಡವನ್ನೂ ಮಾತುಗಳಲ್ಲಿ ಒಪ್ಪಿಸಿಬಿಡುವ ಅಭಾಸಗಳೂ ಕಣ್ಣಿಗೆ ರಾಚುತ್ತವೆ. ತದನಂತರ ಸಾಕುತಂಗಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಚಂದಪ್ಪ ಜನನಾಯಕನಾಗಿಯೂ ಮೂಡುವ ಮೂಲಕ ರಾಜಕೀಯದವರಿಗೆ ಓಟು ಗಿಟ್ಟಿಸಿಕೊಡುವ ಮಧ್ಯವರ್ತಿಯಾಗಿಯೂ ಪರಿವರ್ತಿತನಾಗುತ್ತಾನೆ. ಓರ್ವ ರಾಜಕೀಯಾಕಾಂಕ್ಷಿಯನ್ನು ಗೆಲ್ಲಿಸಿಯೂ ಬಿಡುತ್ತಾನೆ. ಆತ ಗೆದ್ದು ಗ್ರಾಮಕ್ಕೆ ಬರಬೇಕಿದ್ದ ಕಾರ್ಖಾನೆ ಮತ್ತು ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಗಳ ಮತ್ತು ಪಾಳೇಗಾರರ ಲಂಚದಾಸೆಗೆ ತಪ್ಪಿಸುತ್ತಾನೆ. ಇಲ್ಲಿ ಕುಗ್ರಾಮವೊಂದರ ಜನರು ಸರ್ಕಾರಿ ಆಸ್ಪತ್ರೆಯ ಸವಲತ್ತು ಸಿಕ್ಕಿದರೆ ಖಾಸಗಿ ಆಸ್ಪತ್ರೆಗೆ ಬರುವುದಿಲ್ಲ ಇದನ್ನು ತಪ್ಪಿಸಲು ಖಾಸಗಿ ಆಸ್ಪತ್ರೆಯೊಂದರ ಮಾಲೀಕ ಗೆದ್ದ ರಾಜಕಾರಣಿಗೆ 50 ಲಕ್ಷ ರೂಗಳನ್ನು ಲಂಚವಾಗಿ ಕೊಡುವುದೇ ಹಾಸ್ಯಾಸ್ಪದ. ಕಥಾ ರಚನೆಗಾರನೊಬ್ಬನಿಗೆ ಸಮಕಾಲೀನ ಹಳ್ಳಿಗರ ಬಡತನದ ಸಮಸ್ಯೆಗಳ ಆಳ ಅರಿವು ಇಲ್ಲದಿದ್ದಾಗ ಮಾತ್ರ "ಕುಗ್ರಾಮವೊಂದರಲ್ಲಿ ಗಂಜಿ ಕುಡಿಯುವ ಬಡವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗುತ್ತಾರೆ" ಎಂಬಂತಹ ನಗೆಪಾಟಲು ಐಡಿಯಾಗಳು ಬರಲು ಸಾಧ್ಯ. ಸರ್ಕಾರಿ ಆಸ್ಪತ್ರೆ ತಪ್ಪಿಸಿದ ರಾಜಕಾರಣಿಯ ವಿರುದ್ಧ ಚಂದಪ್ಪ ತಿರುಗಿ ಬೀಳುತ್ತಾನೆ. ಎರಡು ನಿಮಿಷಕ್ಕೊಮ್ಮೆ ಹೋರಾಟ ಮಾಡುತ್ತೇನೆ ಎನ್ನುತ್ತ ಅದನ್ನು ಚಿತ್ರದ ಕ್ಲೈಮಾಕ್ಸ್ ವರೆಗೆ ಪುನರಿಚ್ಚರಿಸುತ್ತಾನೆ. ಆದರೆ ಚಿತ್ರದಲ್ಲಿನ ಚಂದಪ್ಪ ಏನು ಹೋರಾಟ ಮಾಡುತ್ತಾನೆ, ಯಾತಕ್ಕಾಗಿ ಯಾವ ಘನ ಉದ್ದೇಶಗಳಿಗಾಗಿ ಹೋರಾಟ ಮಾಡುತ್ತಾನೆ, ಯಾರಿಗಾಗಿ ಹೋರಾಟ ಮಾಡುತ್ತಾನೆ ಎಂಬುದು ನಿಗೂಢ ರಹಸ್ಯದಂತೆ ಚಿತ್ರ ಮುಗಿದ ನಂತರವೂ ಬಯಯಲಾಗುವುದೇ ಇಲ್ಲ. ನಡುಮಧ್ಯದಲ್ಲಿ ಬಿಲ್ಡರ್ ಸೇಠುವೊಬ್ಬನನ್ನು ಕುತ್ತಿಗೆಮಟ ಮಣ್ಣಿನಲ್ಲಿ ಹೂತುಹಾಕಿ ರಿವಾಲ್ವರ್ ತೋರಿಸುವ ಚಂದಪ್ಪ ಅವನಿಂದ ಖಾಲಿಪತ್ರವೊಂದಕ್ಕೆ ಸಹಿ ಹಾಕಿಸಿಕೊಂಡು ವಸೂಲಿದಂಧೆಗಿಳಿಯುವುದು ಯಾವ ಬಗೆಯ ಹೋರಾಟ ಎಂಬುದು ಸಂಶೋಧನೆಗೆ ಅರ್ಹವಾದ ವಿಷಯ. ಇದಕ್ಕೆ ಕಥೆ ಬರೆದ ಪ್ರಕಾಂಡ ಪಂಡಿತರೇ ಉತ್ತರಿಸಬೇಕು. ![]() ಪೋಷಕಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹಿರಿಯನಟ ಲೋಕನಾಥರು ತಮ್ಮ ನ್ಯಾಯವನ್ನು ಪಾತ್ರದ ಉಡಿಗೆ ಮರ್ಯಾದೆಯಿಂದ ತುಂಬಿದ್ದರೆ ಖಳನಟ ಶರತ್ ಲೋಹಿತಾಶ್ವ ಅವಶ್ಯಕತೆಯೇ ಇಲ್ಲದೇ ತೆಲುಗಿನ ಒಕ್ಕಡು ಚಿತ್ರದ ಪ್ರಕಾಶ್ ರೈ ಥರದಲ್ಲಿ ನಾಯಕಿಗೆ ಐ ಲವ್ಯೂ ಅನ್ನುತ್ತಿರುತ್ತಾರೆ (ಓಂ ಪ್ರಕಾಶಾಯ ನಮಃ), ಸುಚೇಂದ್ರಪ್ರಸಾರದ್ದು ಅಚ್ಚುಕಟ್ಟಾದ ಅಭಿನಯ, ನಾಯಕಿ ಪ್ರಣೀತಾರನ್ನು ಓಂಪ್ರಕಾಶರ ಪ್ರಖ್ಯಾತ ಶೈಲಿಯಲ್ಲಿಯೇ ತೆರೆದೆದೆಯಲ್ಲಿ ಪ್ರವೇಶ ನೀಡಿರುವುದು ನಿರೀಕ್ಷಿತ ಅಪಘಾತವೇ. ಉತ್ತರ ಕರ್ನಾಟಕದ ಜಂಜಡಗಳನ್ನು ಬಿಡಿಸಿಟ್ಟ ಕವಿ ಎಚ್.ಎಸ್. ಶಿವಪ್ರಕಾಶ "ಸಮಗಾರ ಭೀಮವ್ವ"ನಿಗೂ ಈ ಚಿತ್ರದ ನಾಯಕಿ ಮೋಟು ಸ್ಕರ್ಟಿನ, ಸೀಳಿದೆದೆಯ ವಸ್ತ್ರ ತೊಡುವ "ಭೀಮವ್ವ"ನಿಗೂ ಸಾಮ್ಯತೆ ಕಲ್ಪಿಸುವುದು ಎನ್.ಎಸ್. ರಾವ್ ಆಣೆಯಾಗಿಯೂ ಕೂಡದು. ಇಡೀ ಚಿತ್ರದಲ್ಲಿ ಗಮನಸೆಳೆಯುವುದು ಚಂದಪ್ಪನ ತಾಯಿಯ ಪಾತ್ರಧಾರಿ ಉಮಾಶ್ರೀ ಮತ್ತು ಚಂದಪ್ಪನ ತಿರುಚಿದ ಶೈಲಿಯ ನಾಯಕ ಪಾತ್ರದೊಳಗೆ ಸಲೀಸಾಗಿ ಜಾರಿಕೊಂಡಿರುವ ದುನಿಯಾ ವಿಜಯ್ ಮಾತ್ರ. ದುನಿಯಾ ಚಿತ್ರದ ನಂತರ ಮೊಟ್ಟ ಮೊದಲಿಗೆ ನಟಿಸುವ ಮನಸ್ಸು ಮಾಡಿರುವ ವಿಜಯ್ ಈ ಚಿತ್ರದ ಕೆಲವು ದೃಶ್ಯಗಳಲ್ಲಿ ಕಣ್ಣುಗಳಲ್ಲೂ ಮಾತನಾಡುವುದನ್ನು ಕಲಿತುಬಿಟ್ಟಿದ್ದಾರೆ. ಇಡೀ ಚಿತ್ರದಲ್ಲಿ ಹಾಸ್ಯದ ಕೊರತೆಯಿರುವುದನ್ನು ಗಮನಿಸಿರುವ ಸಂಭಾಷಣೆಗಾರ ಎಂ.ಎಸ್. ರಮೇಶರು ಚಿತ್ರದ ಕೊನೆಯಲ್ಲಿ ತುಂಡುಡುಗೆ ನಾಯಕಿ ಭೀಮವ್ವಳ ಬಾಯಿಂದ ನೆಲ್ಸನ್ ಮಂಡೇಲ, ಎಲ್.ಟಿ.ಟಿ.ಇ ಪ್ರಬಾಕರನ್ ರ ಸಾಧನೆಗಳನ್ನು ಹೇಳಿಸುವ ಮೂಲಕ ಹಾಸ್ಯದ ಕೊರತೆಯನ್ನು ಕಡಿಮೆ ಮಾಡಿದ್ದಾರೆ. ಆಗಷ್ಟೇ ಮಗುವಿಗೆ ಜನ್ಮ ಕೊಟ್ಟ ನಾಯಕಿ ಎದ್ದು ಕುಳಿತು ನಾಯಕನನ್ನು ತಬ್ಬಿಕೊಂಡು ಈ ಮಿನಿಭಾಷಣ ಮಾಡುವುದು ಅರಗಿಸಿಕೊಳ್ಳಲಾಗದ ನಗೆಪಾಟಲಾಗಿ ಕಾಣಿಸುತ್ತದೆ. ![]() ರಕ್ತಚರಿತ್ರದ ಗುಂಗಿನಲ್ಲಿ ಅದೇ ಬಗೆಯ ಚಿತ್ರವೊಂದನ್ನು ನಿರ್ದೇಶಿಸುವ ನಿರ್ದೇಶಕ ಓಂಪ್ರಕಾಶರ ಹಪಾಹಪಿಗೆ ಚಂದಪ್ಪ ಹರಿಜನ ಸಿಕ್ಕಿರುವುದು ಕನ್ನಡಚಿತ್ರಪ್ರೇಮಿಗಳ ಪೂರ್ವಜನ್ಮದ ಪಾಪವಿರಬಹುದೇನೋ ಎಂಬಷ್ಟರ ಮಟ್ಟಿಗೆ "ಭೀಮಾ ತೀರದಲ್ಲಿ" ಚಿತ್ರ ನಿರಾಶೆ ಹುಟ್ಟಿಸುತ್ತದೆ. ದುರುಳ ರಾಜಕಾರಣಿಯ ಪಾತ್ರಕ್ಕೆ ಎಣ್ಣೆಮಂತ್ರಿ ರೇಣುಕಾಚಾರ್ಯರನ್ನು ತಂದು ಕೂರಿಸಿರುವ ರಾಯರು ಅವರಿಂದ ನಟನೆ ತೆಗೆಸುವ ಅಸಾಧ್ಯ ದುಸ್ಸಾಹಸಕ್ಕೆ ಕೈ ಹಾಕಿರುವುದು ಸ್ಪಷ್ಟ. ತೆರೆಯ ಮೇಲೆ ಕಾಣಿಸಿಕೊಂಡಕೂಡಲೇ ಆಮಶಂಕೆ ಪೀಡಿತರಂತೆ ವದನಭೂಷಣರಾಗಿ ಸಂಭಾಷಣೆ ಒಪ್ಪಿಸುವ ಅವರ ಪರಿ ಚಿತ್ರದ ಕಾಮೆಡಿ ಟ್ರಾಕ್ ಎಂದು ಕರೆಯಲಡ್ಡಿಯಿಲ್ಲ. ಇದಿಷ್ಟೂ ಚಿತ್ರದ ಕುರಿತಾಯಿತು, ಇನ್ನು ಈ ಚಿತ್ರ ಮತ್ತು ಚಿತ್ರದ ಕಥಾವಸ್ತುವಿನ ಭೀಮೆಯ ಸುತ್ತಲ ಹಳ್ಳಿಗರ ರಕ್ತಪಾತ ಕಥನಗಳ ಸುತ್ತಲೂ ತಕ್ಕಡಿ ತೂಕದಬಟ್ಟುಗಳನ್ನು ಹಿಡಿದು ವ್ಯಾಪಾರಕ್ಕೆಳಸುತ್ತಿರುವ ಮಂದಿಯ ಮನಸ್ಥಿತಿಗಳನ್ನೂ ಪ್ರಶ್ನಿಸುವುದು ಅನಿವಾರ್ಯವೇ. ಇವತ್ತಿಗೂ ಅಭಿವೃದ್ಧಿಯೆಂಬ ನಾಲ್ಕಕ್ಷರದ ಸೊಲ್ಲು ಎಲ್ಲಿಯೂ ಸೋಕದ ಬರದನಾಡಿನ ಇಂಡಿ, ಅಫಜಲಪೂರ, ಸಿಂಧಗಿ, ಧೂಳಖೇಡ, ಚಡಚಣ, ಉಮರಾಣಿ, ತಾವರಗೇರ, ತಾರಾಪುರ, ಸೊನ್ನ ಮತ್ತು ದೇವಣಘಾಂವ ಗ್ರಾಮಗಳ ದುಸ್ಥಿತಿ, ಅಲ್ಲಿ ಇನ್ನಾದರೂ ಮಡುಗಟ್ಟಿ ಕುಳಿತಿರುವ ಪಾಳೇಗಾರಿಕೆ, ಅದರ ಕಾರಣಕ್ಕೆ ಬಹಿಷ್ಕೃತರಂತೆ ಬದುಕುತ್ತಿರುವ ಇಲ್ಲಿನ ದಲಿತರ ಸಮಕಾಲೀನ ದುಸ್ಥಿತಿಗಳು, ತಾಂಡವಕ್ಕಿಳಿದಿರುವ ಹಸಿವು, ಹೊಂಡದ ನೀರು ಮುಟ್ಟಲೂ ಬಿಡದ ಪಾಳೇಗಾರರ ಕೈಯೊಳಗೆ ಸಿಲುಕಿರುವ ಅಸಹಾಯಕ ಬಡವರ ಬಗ್ಗೆ ಈ ಹಿಂದೆಯೂ ಚರ್ಚೆಯಾಗಿರಲಿಲ್ಲ, ಇವತ್ತಿಗೂ ಚರ್ಚೆಯಾಗುತ್ತಿಲ್ಲ. ಕಡಕೋಳ ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಅವರನ್ನು ಊರೊಳಗೆ ಬಿಡದಷ್ಟು ಪೊಗರು ಬೆಳೆಸಿಕೊಂಡಿರುವ ಇಲ್ಲಿನ ಮೇಲ್ವರ್ಗದ ಜನಗಳ ಪೊಗರುಗಳ ಬಗ್ಗೆ ಯಾವ ಪತ್ರಕರ್ತನೂ ಧಾರಾವಾಹಿಯೂ ಮಾಡಲಿಲ್ಲ, ಕಾದಂಬರಿಯನ್ನೂ ಬರೆಯಲಿಲ್ಲ, ಚಿತ್ರರಂಗವೂ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ವಸ್ತು ವಿಷಯವೊಂದಕ್ಕೆ ಮಾರಾಟವಾಗಬಲ್ಲ ಗುಣವಿದ್ದಾಗ ಮಾತ್ರ ಅದನ್ನು ವ್ಯಾಪಾರಕ್ಕೆಳಸುವ ಮಂದಿಗೆ ಈ ಎಲ್ಲ ಸಮಸ್ಯೆಗಳು ಮತ್ತು ಬರ್ಬರತೆಯ ಅರಿವಿಲ್ಲವೆಂದೇನೂ ಇಲ್ಲ. ಆದರೆ ವ್ಯಾಪಾರವೇ ಆಗದ ಸರಕಾಗಿರುವ ಹಸಿವಿನತ್ತ ಯಾರ ಕಣ್ಣೂ ಹೊರಳುವುದಿಲ್ಲ. ![]() ಇಷ್ಟಕ್ಕೂ ಈ ಕೊಲೆಪಾತಕ ಮನೆತನಗಳ ವೈಷಮ್ಯ ಕಟ್ಟಿಕೊಂಡು ಯಾರಿಗಾದರೂ ಆಗಬೇಕಿರುವುದಾದರೂ ಏನು? ಚಂದಪ್ಪ ಹರಿಜನನ್ನು ವ್ಯಾಪಾರದ ಸರಕಾಗಿ ಬಳಸಿಕೊಂಡವರು ತಮ್ಮ ಕಪೋಲಕಲ್ಪಿತ ವರದಿಗಳ ಮೂಲಕ ಎರಡೂ ಮನೆತನಗಳ ಹಗೆತನವನ್ನು ಇನ್ನಷ್ಟು ಜಾಸ್ತಿ ಮಾಡಿ, ಅನಾಯಾಸವಾಗಿ ಚಂದಪ್ಪ ಹರಿಜನನ್ನು ಪೆನ್ ಕೌಂಟರ್ ಮೂಲಕ ಹತ್ಯೆ ಮಾಡಿದ್ದು ಈ ರಾಜ್ಯದ ಪತ್ರಿಕಾ ಸಂಪಾದಕರೊಬ್ಬರ ಘನಸಾಧನೆ ಎಂಬುದು ನಿರ್ವಿವಾದ. ದುಡ್ಡು ಮಾಡಿಕೊಂಡಿದ್ದು ಇದೇ ಸಂಪಾದಕ, ಬಡಿದಾಡಿದ್ದು 2 ಮೇಲ್ವರ್ಗದ ಮನೆತನಗಳು ಸತ್ತಿದ್ದು ಒಬ್ಬ ದಲಿತ ಯುವಕ. ![]() ಆತ ಸತ್ತಾದ ಮೇಲೂ ಬಿಡದೆ ಆತನ ಹೆಣದ ಮೇಲೆ ತಕ್ಕಡಿಯಿಟ್ಟುಕೊಂಡು ಪುಸ್ತಕಗಳ ಪುನರ್ ಮುದ್ರಣ ಮತ್ತು ಟಿ.ಆರ್.ಪಿ ಮಾರ್ಕೆಟಿಂಗ್ ತಂತ್ರಗಳ ಮೂಲಕ ಮಾರಾಟ ಮಾಡಿಕೊಂಡು ಚಿಲ್ಲರೆ ಕಾಸು ದುಡಿದುಕೊಳ್ಳುವ ಬದುಕಬೇಕಾದ ಸ್ಥಿತಿಗೆ ಇವತ್ತಿಗೆ ಪತ್ರಿಕೋದ್ಯಮದ ಆಶಯಗಳು ಬಂದು ತಲುಪಿರುವುದು ಇವತ್ತಿನ ದೊಡ್ಡ ದುರಂತ.ಹೀಗಾಗಿ ಭೀಮಾತೀರದಲ್ಲಿ ಚಿತ್ರವಾಗಲೀ, ಚಂದಪ್ಪ ಹರಿಜನನ ಉಮೇದುವಾರಿಕೆಯನ್ನು ಪ್ರಸ್ತುತಪಡಿಸುತ್ತಿರುವವರಾಗಲೀ, ಟೀವಿ ಚಾನೆಲ್ಲುಗಳಾಗಲೀ, ಅದನ್ನು ನೋಡುತ್ತ ಕುಳಿತ ನಮಗಾಗಲೀ ಒಂದು ವಿಷಯ ನೆನಪಿಗೆ ಬರುವುದೇ ಇಲ್ಲ. ಚಂದಪ್ಪ ಹರಿಜನನ ಪತ್ನಿ ಸರೂಬಾಯಿ ಎಂಬಾಕೆಯು ಬದುಕುತ್ತಿರುವ ಗ್ರಾಮವೂ ಇವತ್ತು ಬರಪೀಡಿತ. ನಮ್ಮ ಆದ್ಯತೆಗಳು ಸರೂಬಾಯಿಯ ಗ್ರಾಮದ ದಲಿತರ ಬರ್ಬರ ಬದುಕಾಗಬೇಕೋ ಅಥವ ಎಲೈಟ್ ಕ್ಲಾಸ್ ಮಂದಿಯ ಪಿತೂರಿಗಳಿಗೆ ತಲೆಕೊಟ್ಟು ಕೊಲೆಯಾದ ಚಂದಪ್ಪನ ರಕ್ತಸಿಕ್ತ ಇತಿಹಾಸವಷ್ಟೇ ಮುಖ್ಯವಾಗಬೇಕೋ? |
Subscribe to:
Posts (Atom)