Tuesday, 25 September 2012

ಬೋಧಿಲೇರನ ಗಳಾಸು ಮತ್ತು ಕುಲುಮೆಯೊಂದರ ಸ್ವಗತ "

ಯಾವ ಆವಾಹನೆಗೂ ತಲೆಕೊಡದ ಗವ್ವೆನ್ನುವ ಬೆಳಕಿಗೂ ಅಸು ತೊರೆವ ಆಸೆ,
ಇನ್ನೆಷ್ಟೊತ್ತು ಉರಿಯುವುದು ಧಿವಿಧಿವಿಯೆಂದು, ಯಾರಿಗೂ ಬೇಡದ ಬೆಳಕದು..
ಆರಿಸುವರೂ ಇಲ್ಲದ, ಆತ್ಮವಷ್ಟೇ ಚಲಿಸುವ ಒಣಗಿದ ನೆಲದಲ್ಲಿ ಪರದೇಸಿ ಬೆಳಕು.

ಯಾರೋ ಬರುವವರಿದ್ದಾರೆ, ಗಾಳಿಬೀಸುವ ಸದ್ದಿಗೂ ಕಾಯುವ ತೆವಲು ಅಂಟುತ್ತದೆ,
ಹುಲ್ಲುಗರಿಕೆಯ ಚೂಪು ಬುರುಡೆಗೆ ಒಣಗಿದೆಲೆಯೊಂದು ಎದೆ ತಿವಿದುಕೊಂಡು ಬಿದ್ದುದು,
ಖಾಲಿ ಮುಂಡಕ್ಕೆ ಕಣ್ಣು ಕಿವಿಗಳನ್ನು ಅಂಟಿಸಿಕೊಳ್ಳುವ ಎಕ್ಕದಗಿಡಕ್ಕೂ ಆಶ್ಚರ್ಯವು..

ಒಡ್ಡಿದ ಕೈಗೆ ಬಿದ್ದಿಲ್ಲ ಮಣ್ಣು, ಯಾವಾಗ ಬೀಳುತ್ತದೋ ಸಂಕುಲವ ಪೊರೆದ ಮಣ್ಣಹುಡಿ,
ಒಳಗಿನ ಕೆಂಪುದ್ರವದೊಳಗೆ ಇಷ್ಟಾದರೂ ಬೆರೆಯಬಾರದೇ ಎಲ್ಲವನ್ನೂ ಬೆಳೆವ ಮಣ್ಣು..
ಒಳಗೊಳ್ಳುವ, ಕಾಪಿಡುವ, ಕಟ್ಟಿಡುವ, ಪ್ರೇಮಿಸುವ ಮಣ್ಣಿಗೂ ಬಂತೇ ಇಂಥ ಅಹಮಿಕೆ.

ದಾರಿಹೋಕಳ ಚಪ್ಪಲಿಯಿಲ್ಲದ ಹೆಜ್ಜೆಗುರುತುಗಳನ್ನು ಮೂಸುತ್ತವೆ ಸೀಳುನಾಯಿಗಳು,
ದಾರಿಯೂ ಮುಗಿದು, ಗುರುತೂ ಇಲ್ಲವಾದ ಬಿಂದುವಿನಲ್ಲಿ ಸುಂದರವಾಗಿ ಊಳಿಡುತ್ತವೆ,
ಜೀವ ಉಳಿದದ್ದು ಅವಳಿಗೂ ತಿಳಿಯಲಿಲ್ಲ, ಗುರುತಿಲ್ಲದ ಬಿಂದು ಇವಕ್ಕೂ ಅರ್ಥವಾಗಲಿಲ್ಲ.

ಸೆಗಣಿಯುಂಡೆಯ ಭೂಮಿ ಕಟ್ಟಿದ ಹುಳುವಿಗೆ ಅದನ್ನು ಸುಮ್ಮನೆ ಉರುಳಿಸುವ ಖಯಾಲು,
ವಿಸರ್ಜನೆಯ ಆವರ್ತಭೂಮಿ ಉರುಳುತ್ತಲೇ ತುದಿಗಳಿಗೆ ಚರ್ಮ ಬೆಳೆಯುತ್ತಿರಲಾಗಿ,
ಕಟ್ಟಿದ ಉಂಡೆ 
ಯಾವುದು, ಉರುಳುತ್ತಿರುವ ಉಂಡೆ ಯಾವುದು ಇಬ್ಬರಿಗೂ ಗೊಂದಲ.

ಗಿರಾಕಿಗಳೇ ನಾಪತ್ತೆಯಾದ ಕುಲುಮೆಯೊಂದರ ಸ್ವಗತಕ್ಕೆ ಇನ್ನೂ ಜೀವ ಸಿಗುತ್ತಿಲ್ಲವಂತೆ..
ತಿದಿಯೊತ್ತುವನೂ ಮಂಡಿಮೇಲೆ ನೊಸಲಿಟ್ಟು ಹುಟ್ಟದೆ ಇರುವವರಿಗಾಗಿ ಕಾಯುವ ರೀತಿಗೆ,
ಬೋಧಿಲೇರನ ಮಧ್ಯದ ಗಳಾಸಿನ ಎದೆಯೂ ಒಡೆದು ಚೂರೆದ್ದು ಹೋಗಿದ್ದು ಇತಿಹಾಸವು.



"ರಾಹಿತ್ಯದ ಒಳಗೂ ಚಿತ್ರ ಬರೆಯುವ ಇವಳು.."

ಯಾವ ಪಕಳೆಗಳ ಕೆನ್ನೆಯ ಮೇಲಿರುತ್ತವೋ ಅಂಥ ಬಣ್ಣಗಳು,
ಒಂದೊಂದನ್ನೇ ಮುದ್ದಿನಿಂದ ಆಯ್ದು ಆಯ್ದು ತರುತ್ತಾಳೆ,
ಇವಳಿಗೆ ಮಾತ್ರ ಗೊತ್ತು ಚಿತ್ರದ ಬಣ್ಣ ಆಯ್ದುಕೊಳ್ಳು ಕಲೆ,
ನಿಂತೆರಡು ಕಾಲುಗಳ ಕೆಳಗೆ ಬೇರುಗಳಿದರೂ ಇವಳ ಚಿತ್ರವೇಕೋ
ಇನ್ನೂ ಮುಗಿಯುತ್ತಿಲ್ಲ.

ಒಟ್ಟು ಬದುಕೇ ಹಾಳೆಯಂತೆ ಹರಡಿಕೊಂಡ ಪರಿಭಾವದೊಳಗೆ
ಇವೆರಡು ಗೆರೆಗಳು, ಅವೆರಡು ಬಣ್ಣ, ಬೀಸುವ ಬ್ರಶ್ಶಿನ ಚಲನೆಗೆ,
ಯಾವ ಅಂಕೆಯೂ ಇಲ್ಲ, ನೋಡುತ್ತ ಕುಳಿತವನ ನೆತ್ತಿಯ ಮೇಲೂ
ಆಗೀಗ ಸಿಡಿಯುತ್ತದೆ ಅಷ್ಟಿಷ್ಟು ಬಣ್ಣ, ಕಣ್ಣೆವೆಯ ತುಂಡುಗಳು..
ಚಿತ್ರ ಬರೆಯಲು ಕುಳಿತವಳ ಧ್ಯಾನ ನನಗೆ ನಡುಕ ಹುಟ್ಟಿಸುತ್ತದೆ.

ಕಟ್ಟಿಟ್ಟುಕೊಂಡ ಶಬ್ದಗಳು ಕಣ್ಣಮೇಲೆ ಹೂವಿಟ್ಟುಕೊಂಡು ಕಾಯುತ್ತವೆ,
ಚಿತ್ರ ನೇವರಿಸಲೆಂದೇ ಹುಟ್ಟಿದ ಬೆರಳುಗಳ ಸೊಂಟದ ಮೇಲೆ
ಸೀತಾಳೆ ಗಿಡದ ನೆರಳಿನ ಭ್ರೂಣವೊಂದು ಆಕಳಿಸುತ್ತ ಕುಳಿತು,
ಎರಡೂ ಕಣ್ಣುಗಳ ವಿಸ್ತಾರವೂ ಚಿತ್ರದಾಳೆಯ ಮೇಲೆ ಮೆತ್ತಿಕೊಂಡರೂ..
ಚಿತ್ರದೊಡತಿಯ ಆಳ ಅಗಲಗಳ ಯಾವ ಅಳತೆಯೂ ನಿಲುಕುವುದಿಲ್ಲ.

ತೇಲುವ ಇವಳ ನಿಮೀಲಿತ ನೇತ್ರಗಳ ಒಳಗೂ ಆಚೆಗೂ ಇರುವುದೇನು,
ಇಂಥ ಪರಿಯ ಮುಳುಗುವಿಕೆಗೆ ತಾವು ಕಟ್ಟಿಕೊಟ್ಟ ಚಿತ್ರದ ಬಗ್ಗೆ,
ಆಗಾಗ್ಗೆ ಹಿಗ್ಗುವ ಇವಳ ತುಟಿ ತುದಿಯ ಕವಲಿನ ಸೊಬಗಿನ ಬುಗ್ಗೆಗೆ,
ನನ್ನ ಬೆನ್ನ ಮರುಭೂಮಿಯ ತುಂಬೆಲ್ಲ ಬೆವರ ಜಲಪಾತಗಳು ಹುಟ್ಟಿ
ನಾನು ಮಗ್ಗುಲು ತಿರುಗಲೆಳೆಸಿ ನೆಲಕ್ಕೆ ಬಿದ್ದ ಹಳೆಯ ತೊಟ್ಟಿಲ ನೆನಪು.

ಇಲ್ಲದಿರುವ ಎಲ್ಲವ ಕಸಬರಿಗೆಯಿಂದ ಗುಡಿಸಿ ಮೂಲೆಗೆಸೆದ ಇವಳು
ಇಲ್ಲದಿರುವಿಕೆಗಳ ರಾಹಿತ್ಯರಾಜ್ಯದೊಳಗೆ ಚಿತ್ರ ಬಿಡಿಸುವ ತಾಕತ್ತಿಗೆ,
ಕೈಯೆತ್ತಿ ಮುಗಿಯಲು ಇರುವುದೇ ಎರಡೇ ಬೊಗಸೆಗಳೆಂಬ ಕೊರಗು.
ಚಿತ್ರಮುಗಿಸಿ ಕುಳಿತವಳ ನಡುನೊಸಲ ಗರ್ಭದೊಳಗಿಂದ ಎರಡೇ ಎರಡು
ಗೆರೆಗಳು ಜನಿಸಿ ಅಷ್ಟುದ್ದ ಹಾಳೆಯ ಚಿತ್ರಕ್ಕೆ ತುಟಿಯೊತ್ತಲು ಕೈ ಜಗ್ಗುತ್ತವೆ.

ಬರೆದಿಟ್ಟ ಚಿತ್ರದೆದುರು ನಿಂತ ನಿಲುವಿನ ಕಾಯದೊಳಗೆ ನಕ್ಷತ್ರವರಳುತ್ತವೆ.
ಪಾದಕ್ಕೆ ಮೂಡಿದ ಬೇರುಗಳ ಬಿಡಿಸುತ್ತ ಕುಳಿತ ಇವಳತ್ತ ನೋಡುವಾಸೆ.
ನಿಂತಲ್ಲೇ ಸತ್ತು ಸತ್ತಲ್ಲೇ ಮೊಳೆತು, ಇರುವೆರಡು ಕಣ್ಣತುಂಬ ಇವಳದೇ ಚಿತ್ರ.
ಅದು ಹಾಡುತ್ತದೆ, ನಡೆಯುತ್ತದೆ, ಬೇಡದ ಶಬ್ದಸಂತೆಯಿಂದ ದೂರ ನಿಂತು,
ಬಣ್ಣಗಳೊಳಗೆ ಒಂದಿಷ್ಟು ತಾವುಂಟು ಒಳಗೆ ನಡೆದು ಬಾ ಎನ್ನುತ್ತದೆ.

ನಾನು ನಡೆಯುತ್ತಿದ್ದೇನೆ, 
ಇವಳ ಚಿತ್ರದೊಳಗೆ,
ಇನ್ನಷ್ಟು ಮತ್ತಷ್ಟು ಆಳದೊಳಗೆ. 



Sunday, 16 September 2012

“ ರಾಟುವಾಣದ ತೊಟ್ಟಿಲೊಳಗೆ..“

ಕಡುಹಸುರು ತೊಗಟೆಯ ಹೆಸರಿಲ್ಲದ ಮರದ ಟೊಂಗೆಯೊಳಗೆ
ಒಣಗಿದೆಲೆ, ಸವುದೆಪುಳ್ಳೆ, ಅದ್ಯಾವುದೋ ಗಿಡದ ನರಗಳ ಬಲೆ,
ಇಟ್ಟು ದಿನವಾದ ಮೊಟ್ಟೆಗಳ ಕಂದುಸಿಪ್ಪೆಯತ್ತಲೇ ಕಣ್ಣು ನೆಟ್ಟ
ಒಕ್ಕಣ್ಣು ಗಿಣಿಯ ರೆಕ್ಕೆಗಳೊಳಗೆ ಮಡಚಿಟ್ಟ ನೆನಪುಗಳ ಸಂತೆ.

ದೂರವಲ್ಲದ ದೂರದಲ್ಲಿ ಯಾರೂ ಹುಟ್ಟಿಸದ ತಲಪರಿಕೆಯ ಒರತೆ,
ಪೊದೆಮುಚ್ಚಿದ ಹಳ್ಳಕ್ಕೆ ಅಡ್ಡಬಿದ್ದ ಕಾಂಡವೊಂದರ ತುದಿಗೆ ಕೂತ,
ನೆರಿಗೆ ಬಿದ್ದ ಕಣ್ಣಲ್ಲೇ ಮೋಡಕ್ಕೆ ಬಣ್ಣ ಬಳಿಯುವ ವೃದ್ಧೆಯೊಬ್ಬಳು..
ಹೊಲೆದಿಟ್ಟ ಬದುಕನ್ನು ಎಲೆಯಡಿಕೆಯ ಸಂಚಿಯಲ್ಲಿ ಹುಡುಕುತ್ತಾಳೆ.

ಐದು ತುದಿಗೂ ಮೊಳೆ ಹೊಡೆಸಿಕೊಂಡು ಆಕಾಶದಿಂದ ನೆಲಕ್ಕೆ
ಮಕಾಡೆಬಿದ್ದ ಅರ್ಧಜೀವ ನಕ್ಷತ್ರದ ತುಂಡೊಂದಕ್ಕೆ ಇನ್ನಿಲ್ಲದ ಆಸೆ.
ನಿಚ್ಚಣಿಗೆಯ ಕಟ್ಟುವ ಜೀವಕ್ಕೆ ಅದ್ಯಾವಾಗಿಂದಲೋ ಕಾಯ್ದ ಉಸುರು,
ತುಯ್ಯುತ್ತದೆ, ಅತ್ತಲೂ ಇತ್ತಲೂ ಮುತ್ತಲೂ ಎತ್ತಲೂ ಕತ್ತಲಕಾವಳ.

ಆಸೆಗೂಡೊಳಗಿನಿಂದ ತಲೆ ಹೊರಗಿಟ್ಟ ಇರುವೆಗೆ ತುಂಬುಜ್ವರ,
ಬಿಡುಬೀಸು ಬಿಸಿಲಿಗೆ ಇಟ್ಟ ಹೆಜ್ಜೆಯೇ ಸುಟ್ಟುಹೋಗುವ ಭಯ,
ಗೂಡುಮಾಡಿನ ಗೋಡೆಗಳಿಗೆ ನೆತ್ತಿಯಾನಿಸುವ ಪುಟ್ಟಜೀವಕ್ಕೆ,
ಇನ್ನೇನು ನೆಲತಬ್ಬಲು ಹೊರಟ ಮಳೆನೀರ ಮೇಲೆ ಗ್ಯಾನವು.

ಎದೆನೀವುವ ಜನರಿಗಾಗಿ ಹುಬ್ಬಿನ ಮೇಲಿಟ್ಟ ಮಡಚಿದ ಅಂಗೈಗೆ
ಆಗೀಗ ಗಾಳಿಸೋಕುವ ಪುಳಕಕ್ಕೆ ನೇಣುಹಾಕಿಕೊಳ್ಳುವ ಆಸೆ.
ಮೈ ತುಂಬ ಕಣ್ಣು ಮೆತ್ತಿಕೊಂಡ ರಾಟುವಾಣದ ತೊಟ್ಟಿಲೊಳಗೆ
ಮೆಲ್ಲಗಿಳಿದ ಕುಂಟುಕಾಲಿನ ಹುಡುಗಿಗೆ ಬದುಕಿಬಿಡುವ ಆತುರ.

Tuesday, 11 September 2012

ಇರುವುದಿಷ್ಟೇ, ಸಂಪಿಗೆಯಕೊಂಬೆ, ಇಷ್ಟುದ್ದ ನೂಲು..

ಚೌಕದ ಕಾಗದ, ನಾಲ್ಕುಮೂಲೆ, ಬೆರಳುಗಳ ಮಡಚುವ ಮೋಹದೊಟ್ಟಿಗೆ
ಎಷ್ಟೋ ವರ್ಷಗಳ ನಂತರ ಕಾಗದದ ಜಹಜು ಈಗತಾನೆ ನೆನಪಾಯಿತು..
ನಾಲ್ಕುಮೂಲೆಗೂ ನಿನ್ನ ಮೂಕ ಕಿರುನಗೆಯನ್ನು ಅಂಟಿಸಲು ನೋಡುತ್ತೇನೆ,
ಹಾಳಾದ ನಯಸು ಕಾಗದಕ್ಕೆ ಯಾವುದೂ ನೆಟ್ಟಗೆ ಅಂಟಿಕೊಳ್ಳುವುದಿಲ್ಲ.

ಖುಲ್ಲಾ ಆಕಾಶದ ಕೆಳಗೆ ಬರಿಬೆತ್ತಲು ಭೂಮಿ, ಗೆದ್ದಲುಹುಳುವಿನ ಬಾಷ್ಪ,
ಚಿಟ್ಟೆಯ ಕಾಲಿಗಂಟಿದ ಮಕರಂದದ ಸೊಡರು, ತೊಟ್ಟು ಕಳಚಿದ ಹೂವು,
ರಬ್ಬರುಮರದ ಕಾಂಡದ ಗಾಯದೊಳಗಿಂದ ಬೆಳ್ಳಬೆಳ್ಳನೆಯ ನೆತ್ತರು..
ಹಾಳು ನಯಸು ಕಾಗದಕ್ಕೆ ಯಾವುದರಿಂದಲೂ ನಿನ್ನ ಕಿರುನಗೆ ಅಂಟುತ್ತಿಲ್ಲ.

ಕೂಸೊಂದರ ಖಾಲಿಬಾಯೊಳಗೆ ತುಳುಕುವ ಜಲದ ತೊರೆಯಿಂದಲೂ..
ಕಣ್ಣಗುಡ್ಡೆಯ ತೇವ ಕಾಯುವ ರೆಪ್ಪೆಯಡಿಯ ಅಂಟಿನಿಂದಲೂ..
ತೆವಳಿದ ರಸ್ತೆಯುದ್ದಕ್ಕೂ ಚಿತ್ರವೆಬ್ಬಿಸಿದ ಬಸವನುಳುವಿನ ಅಂಟಿನಿಂದಲೂ..
ಯಾವೆಂಬ ಯಾವುದರಿಂದಲೂ ನಿನ್ನ ಕಿರುನಗೆ ಜಹಜಿಗೆ ಅಂಟುತ್ತಲೇ ಇಲ್ಲ.

ನಿನ್ನ ನಗುವನ್ನೇ ಮೆಲ್ಲಗೆ ಮಡಿಲಿಗೆಳೆದುಕೊಂಡೆ, ನಗುವಿಗೂ ಕಿವಿಯಿತ್ತಲ್ಲ..
ಕಿವಿಯ ಹಾಳೆಗೆ ಮುತ್ತಿಟ್ಟು.. ಮಂಡಿ ಮಡಚಿ ಮೊಣಕಾಲೂರಿ ಕೇಳಿದೆ.
ಅಂಟೋಲ್ಲವೇಕೆ ನೀನು ಯಾವುದರಿಂದಲೂ ಯಾವುದಕ್ಕೂ ಹೀಗೆ ಹೀಗೆ?
ನಗುವೂ ಮಾತನಾಡುತ್ತದೆ.. ಅಂಟುವ ಕ್ರಿಯೆ ಇದಲ್ಲವೋ ಹುಡುಗ.

ಅಂಟಿಕೊಳ್ಳುವುದು ನನಗೆ ಗೊತ್ತು, ಅಂಟಿಸಲೆತ್ನಿಸಬೇಡ ಯಾವುದಕ್ಕೂ..
ನಿನ್ನೆಲ್ಲ ಪೆದ್ದು ಕೆಲಸಗಳೂ ನನಗೆ ತಮಾಷೆಯಷ್ಟೇ.. ಅಂಟಿಸಬೇಡ..
ಅಂಟಬೇಕೆನ್ನುವ ವ್ಯಾಮೋಹ ಬಂದ ದಿನ ನಾನೇ ಅಂಟಿಕೊಳ್ಳುವೆ..
ಹಾಗೆಂದದ್ದೇ ಕಾಗದದ ಜಹಜಿನ ನಾಲ್ಕುಮೂಲೆಗೂ ತನ್ನನ್ನು ಮೆತ್ತಿಕೊಂಡಿತು.

ಜಹಜಾಯಿತು, ನಿನ್ನ ನಗು ತನಗೆ ತಾನೇ ಅಂಟಿಕೊಂಡಿದ್ದೂ ಆಯಿತು..
ಎಲ್ಲಿಡಲಿ ಈ ಕಾಗದದ ಜಹಜನ್ನು, ನೀರಿಗಿಟ್ಟರೆ ನೆನೆಯುವ ಭಯ,
ಕೈಯೊಳಗೇ ಇದ್ದರೆ ಮುದುಡುವ ಭಯ, ನೆಲಕ್ಕಿಟ್ಟರೆ ಕಳೆಯುವ ಭಯ..
ಜಹಜು ನೀರೊಳಗೇನೋ ಇರಬೇಕು ಸರಿ.. ಏನಾದರೂ ಆದರೆ ?

ಆದರೆಗಳ ಹಂಗು ಕಳಚಿಕೊಂಡು ಜಹಜಿಗೊಂದು ದಾರ ಕಟ್ಟಿದ್ದೇನೆ..
ಸಂಪಿಗೆಮರದ ಕೊಂಬೆಗೆ ಜಹಜಿನ ದಾರ ತೂಗುಬಿಟ್ಟು ಸುಮ್ಮನಿದ್ದುಬಿಡುವೆ,
ಎಲ್ಲ ಜಹಜುಗಳೂ ತೇಲುವುದಿಲ್ಲ, ಹಾಗೆಯೇ ಎಲ್ಲವೂ ಮುಳುಗುವುದೂ ಇಲ್ಲ,
ತೇಲದೇ ಮುಳುಗದೇ ಸಂಪಿಗೆ ಮರಕ್ಕೊಂದು ಒಡವೆಯಂತೂ ಆಯಿತು.

ಇಲ್ಲಿ ತೇಲಲು ಬೆಂಡೂ ಇಲ್ಲ, ಖುಷಿಯೆಂದರೆ, ಮುಳುಗಲು ಗುಂಡೂ ಇಲ್ಲ,
ಇರುವುದಿಷ್ಟೇ, ಸಂಪಿಗೆಯಕೊಂಬೆ, ಇಷ್ಟುದ್ದ ನೂಲು, ಕಾಗಜ್ ಕೀ ಜಹಜು.

Saturday, 1 September 2012

ಮೇಟ್ರಿಕ್ಸ್ ಸಿರೀಸ್ ನ ಮೋರ್ಫಿಯಸ್

ಮೇಟ್ರಿಕ್ಸ್ ಸಿರೀಸ್ ನ ಮೋರ್ಫಿಯಸ್ ನನ್ನ ಇಷ್ಟದ ಪಾತ್ರಗಳಲ್ಲೊಂದು. ಮೇಟ್ರಿಕ್ಸ್ ನಾಯಕ ನಿಯೋಗಿಂತ ಮೋರ್ಫಿಯಸ್ಸೇ ಇಷ್ಟವಾಗೋಕೆ ಆತನ ಮಾತುಗಳೊಳಗೆ ಝೆನ್ ತತ್ವಗಳು ನುಗ್ಗಿರುವ ಪರಿಗೆ.


ನೀರಹಾರ ಮತ್ತು ಮೊಟ್ಟೆಯಲುಗಿದ ಶಬುದ..!

ಬೆಳದಿಂಗಳ ಪುಡಿಯನ್ನು ತನ್ನ ಸುತ್ತಲೂ ಆವರ್ತವಾಗಿ ಚೆಲ್ಲಿದ ಅವಳು,
ಸುಂದರಿಮರದ ಮೊಗ್ಗಿನಂತೆ ಮಡಚಿದ ಮಂಡಿಗೆ ಗಲ್ಲ ಆನಿಸಿದ್ದಾಳೆ,
ಅವಳೆದುರು ಕುಂತ ನಾನು ಎಲೆ ಮೇಲಿನ ನೀರಹನಿಗಳನ್ನು ಹೆಕ್ಕಿ ತಂದು ..
ಒಂದೊಂದು ಹನಿಯನ್ನೂ ದಾರಕ್ಕೆ ಪೋಣಿಸುತ್ತ ನೀರಹಾರ ಹೊಸೆಯುತ್ತೇನೆ.
ನಕ್ಷತ್ರಗಳೂ ನಾಪತ್ತೆಯಾದ ಮೋಡಗಳ ಕಾಡೊಳಗೆ ಬೆಳಕಷ್ಟೇ ಇಷ್ಟು,
ಅವಳ ಕಿರುಬೆರಳ ಉಗುರು ನನ್ನನ್ನೇ ನೋಡುತ್ತ ನಕ್ಕಿದ್ದೂ ಇಷ್ಟೇ ಇಷ್ಟು..
ತುಂಬೇಹೂವಿನ ಘಮಕ್ಕೆ ಆಸೆಬಿದ್ದ ಗಿಳಿಯೊಂದು ಇಲ್ಲೇ ಗಿರಕಿ ತಿರುಗುತ್ತಿದೆ,
ಆವರ್ತದೊಳಗಿನ ಇವಳ ಜೀವಕ್ಕೆ ಪೋಣಿಸಿದ ನೀರಹಾರದ ಮೇಲೆ ಪ್ರೀತಿ.

ಬೆಳಕಿನಹಾಳೆಯ ಮೇಲೆ ರೆಪ್ಪೆಗಿಷ್ಟು ಬಣ್ಣ ಅದ್ದಿಕೊಂಡು ಹೆಸರು ಗೀಚುತ್ತೇನೆ,
ಸುಂದರಿಮರದ ಮೊಗ್ಗಿನಂಥವಳ ಹೆಸರು ಅಕ್ರಚಕ್ರವಕ್ರವಾಗಿ ಹಾಳೆಯ ಮೇಲೆ,
ಬೆರಳಷ್ಟನ್ನೇ ಆವರ್ತದಾಚೆ ದಾಟಿಸಿದ ಇವಳು ರೆಪ್ಪೆಗಂಟಿದ ಬಣ್ಣ ಒರೆಸುತ್ತಾಳೆ,
ನಾಲಿಗೆಯ ಮೇಲೆ ತೆವಳಲು ಒಂದೂ ಪದವಿಲ್ಲದೆ ಮಾತೆಲ್ಲವೂ ಕೊಲೆಯಾಗಿವೆ.

ಟಾರುಕಿತ್ತ ರಸ್ತೆಯ ಮೇಲೆ ಕುಕ್ಕರಗಾಲಿನ ಅರೆಬರೆ ಫಕೀರ ಸುಮ್ಮನೆ ಹಾಡುತ್ತಾನೆ
ಅಲ್ಲಿ ಹುಟ್ಟಿದ ಹಾಡು ಅಲ್ಲೇ ಇಷ್ಟೆತ್ತರ ಬೆಳೆದು ನಮ್ಮಿಬ್ಬರ ನಡುವೆ ಮಕಾಡೆ ಬಿದ್ದಿವೆ,
ಮೆಲ್ಲನೆದ್ದು ಬಂದ ಇವಳ ಬೊಗಸೆ ಕೈಗಳು ಆ ಎಳಸುಹಾಡಿನ ಕೆನ್ನೆ ಗಿಲ್ಲುವಾಗ,
ನನ್ನ ಕೊರಳಸುತ್ತಲೂ ನೇತುಬಿದ್ದ ಆಸೆಯ ಮೊಟ್ಟೆಗಳು ಮೆಲ್ಲಗೆ ಅಲುಗುತ್ತವೆ.

ಮೊಟ್ಟೆಯಲುಗಿದ ಶಬುದವು ಇವಳ ಕಣ್ಣಿಗೂ ಕೇಳಿಸಿ ನನ್ನತ್ತ ಬೊಗಸೆ ಚೆಲ್ಲುತ್ತಾಳೆ,
ಬಾಕಿಯಿದ್ದ ಹನಿಯನ್ನೂ ಪೋಣಿಸಿದ ನೀರಹಾರವನ್ನು ಅವಳ ಬೊಗಸೆಗಿಡುತ್ತೇನೆ,
ಅಷ್ಟರವರೆಗೂ ಕೊಲೆಯಾದಂತೆ ಬಿದ್ದಿದ್ದ ಮಾತುಗಳು ನನ್ನ ನಾಲಿಗೆಗೆ ಹತ್ತುತ್ತವೆ..
ಏನೇನೋ ಪಿಸುಗುಡುತ್ತವೆ.. ಕೇಳಿಸಿಕೊಂಡ ಇವಳ ಕಣ್ರೆಪ್ಪೆಗಳು ಮೆಲ್ಲಗೆ ನಗುತ್ತವೆ.

ಯಾರಲ್ಲೂ ಹೇಳದ ಪದ.. ಒಂದು ಪದದ ಜಗತ್ತು..

ಎಕ್ಕದ ಹೂವಿನ ಮೇಲೆ ಜೇನು ನೋಡುತ್ತಿದ್ದ ಕುರುಡು ಚಿಟ್ಟೆಯೊಂದು ಸಿಕ್ಕಿದೆ,
ಚೂರೇಚೂರು ಕಣ್ ಮುಚ್ಚೆ ಹುಡುಗಿ, ನಿನ್ನ ಸುನೀತ ರೆಪ್ಪೆಯ ಮೇಲಿಡುತ್ತೇನೆ.

ರೆಪ್ಪೆಯೊಳಗೆ ಮುಚ್ಚಿಟ್ಟುಕೊಂಡ ನಿನ್ನ ಪ್ರೀತಿಯ ತುಂಡೊಂದನ್ನು ಕಡ ಕೊಡು,
ಸೂಜಿಮೊನೆಯ ಅಂಗಳದ ಮೇಲೆ ಗಿಣಿಯ ರೆಕ್ಕೆಯಿಂದ ನಿನ್ನ ಹೆಸರು ಕೆತ್ತುತ್ತೇನೆ.

ಕಿರುಬೆರಳಿನಲ್ಲಿ ಕಿವಿಹಾಳೆಯ ಮೇಲೆ ನಿನಗೊಂದು ಪತ್ರ ಬರೆಯಲು ಅನುಮತಿ ಕೊಡು,
ಗರ್ಭದಲ್ಲೂ ಮುಗುಳ್ನಗುವ ಕೂಸಿನ ನಗುವೊಂದನ್ನು ತಂದು ನಿನ್ನ ಕೆನ್ನೆಗೆ ಅಂಟಿಸುತ್ತೇನೆ.

ಇನ್ನೆಲ್ಲೂ ಇಲ್ಲದ ನನ್ನ ಬದುಕನ್ನು ನಿನ್ನ ಬೆನ್ನ ನೆಲದ ಮೇಲೆ ಪಾತಿ ಮಾಡುತ್ತೇನೆ,
ಕಾಣುತ್ತಿಲ್ಲ ಅನ್ನಬೇಡ, ಇರು, ಕನ್ನಡಿಯ ಚೂರನ್ನು ನಿನ್ನ ಹಿಂದಣ ನೆಲಕ್ಕೆ ಹೂಳುತ್ತೇನೆ.

ನಿನ್ನ ಮೆತ್ತನೆಯ ಪಾದಕ್ಕೆ ನೋವಾಗುತ್ತದೇನೋ, ಭೂಮಿಯ ಮೇಲೂ ಕೋಪ ನನಗೆ,
ಇಗೋ ಚೆದುರಿದ ನನ್ನ ಇಡೀ ಬದುಕನ್ನು ಹೊಲೆದು ಮುಂದಿಟ್ಟಿದ್ದೇನೆ. ಒಮ್ಮೆ ಮುಟ್ಟು.

ಯಾರಲ್ಲೂ ಹೇಳದ ಒಂದೇ ಒಂದು ಪದವನ್ನು ಎದೆಯೊಳಗೆ ಹೂತಿಟ್ಟುಕೊಂಡಿದ್ದೇನೆ,
ಆ ಒಂದು ಪದದ ಜಗತ್ತಿನ ಹೆಸರು ಪ್ರೇಮ.. ಅಥವ ನನ್ನೊಳಗಿನ ಭೂಮಿಗಿಳಿದ ನೀನು..


Friday, 31 August 2012

ನನ್ನ ಮೊದಲ ಪುಸ್ತಕ ಬಿಡುಗಡೆಯ ಪುಳಕ.


ಗೆಳೆಯ ಗೆಳತಿಯರೇ, ಕೆಂಡಸಂಪಿಗೆಯಲ್ಲಿ ಪ್ರಕಟವಾದ ನನ್ನ ಅಂಕಣಬರಹಗಳ ಗೊಂಚಲು ರಸ್ತೆ ನಕ್ಷತ್ರವನ್ನು ಶಿವಮೊಗ್ಗದ ಅಹರ್ನಿಶಿ ಪಬ್ಲಿಕೇಷನ್ ಪುಸ್ತಕ ರೂಪದಲ್ಲಿ ಹೊರತಂದಿದೆ. ಇದೇ 25ನೇ ತಾರೀಖಿನ ಭಾನುವಾರದಂದು ಕುಪ್ಪಳ್ಳಿಯಲ್ಲಿ ಬಯಲು ಸಾಹಿತ್ಯ ವೇದಿಕೆ ಮತ್ತು ನಾವು ನಮ್ಮಲ್ಲಿ ಸಂಯುಕ್ತವಾಗಿ ಆಯೋಜಿಸಿರುವ "ಕರ್ನಾಟಕ ಕಂಡ ಚಳವಳಿಗಳು" ಕಾರ್ಯಕ್ರಮದಲ್ಲಿ ರಸ್ತೆ ನಕ್ಷತ್ರ ಪುಸ್ತಕವು ಬಿಡುಗಡೆಯಾಗಿದೆ.

ಪುಸ್ತಕದ ಪ್ರತಿ ಬೇಕಾದವರೂ  ಆಕೃತಿ ಬುಕ್ ಸ್ಟಾಲ್ ಹಾಗೂ ನವಕರ್ನಾಟಕ ಪ್ರಕಾಶನದಿಂದ ಪಡೆದುಕೊಳ್ಳಬಹುದು.
ಆನ್ ಲೈನ್ ಮೂಲಕ ಮನೆಬಾಗಿಲಿಗೆ ತರಿಸಿಕೊಳ್ಳಬಹುದು,ತರಿಸಲು ಇಚ್ಚಿಸುವವರು ಇಲ್ಲಿ ಕ್ಲಿಕ್ಕಿಸಿ. ಧನ್ಯವಾದಗಳೂ.

Thursday, 30 August 2012

ಬೂದಿಹುಡಿಯ ಮೇಲೆ ಪ್ರೇಮದ ಕಥೆ..

ಗೆದ್ದಲು ಹುಳುವಿನ ಎದೆಗೂಡೊಳಗೂ ಎರಡು ಹನಿ ನೀರಿನ ದಾಹ.
ಅದು ತೆವಳುತ್ತಿದ್ದ ಗರಿಕೆಯಾಚೆಗಿನ ಇಬ್ಬನಿಗೆ ಆಗಷ್ಟೇ ಅಪ್ಪಿದ ಸಾವು,
ತೊಟ್ಟಿಲಗೂಸಿನ ಹಸಿತುಟಿಯ ಮೇಲೆ ತಾಯ ಬೆಳ್ಳನೆಯ ರಕುತ,
ತೊಟ್ಟಿಲು ಕಟ್ಟಿದ್ದ ಅಡಕೆ ಜಂತೆಗೆ ಕುಸಿದು ಬೀಳುವ ತೀರದ ಆಸೆ.
ಆವೆಮಣ್ಣಿನ ಹೊಟ್ಟೆಯೊಳಗೆ ಎರೆಹುಳುವೊಂದರ ಗರ್ಭಪಾತವಂತೆ,
ಸತ್ತ ಭ್ರೂಣ ತಿಂದು ಮೈಮುರಿಯಲೆತ್ನಿಸುವ ಧೂಪದಮರದ ಬೀಜ.
ಹೊಂಡಬಿದ್ದ ಡಾಂಬರುರಸ್ತೆಯ ಮಧ್ಯದಲ್ಲೇ ಗರಿಕೆ ಸಸಿಯು ಕಣ್ ಬಿಟ್ಟು,
ಪಾದಚಾರಿ ಗಂಡ ಸತ್ತವಳ ಕಣ್ ನೀರು ಸಿಡಿದು ಗರಿಕೆಯ ಎದೆಯೂ ಸತ್ತಿದೆ.

ಸ್ಲೇಟು ಹಿಡಿದ ಕೂಸಿನ ಕೈಯೊಳಗಿನ ಸೀಮೆಸುಣ್ಣದ ತಲೆಯಷ್ಟೇ ಬಾಕಿಯಾಗಿ,
ಎರಡೂ ಕಣ್ಣ ನಡುವೆ ರೇಡಿಯಂ ಸ್ಟಿಕ್ಕರ್ ಅಂಟಿದ ಹುಡುಗಿ ಇಷ್ಟೇ ಹುಟ್ಟುವಳು.
ಕುಂಟುಹುಡುಗನೊಬ್ಬ ಮಣ್ಣರಸ್ತೆಯ ಮೇಲೆ ಬಿಡಿಸಿದ ಚಿತ್ರದ ಮೇಲೆ ಮಳೆ ಬಿದ್ದು,
ಕುಕ್ಕರುಗಾಲಿನಲ್ಲಿ ನೋಡುತ್ತಿದ್ದ ಎವೆಯಿಕ್ಕದ ಮುದುಕನ ಧ್ಯಾನದ ಕೊಲೆ.

ಇಲ್ಲಿ ಹುಟ್ಟುವುದಕ್ಕೂ ಸಾಯುವುದಕ್ಕೂ ವ್ಯಾಕರಣ ಬಲ್ಲವನನ್ನು ಹುಡುಕುತ್ತೇನೆ,
ಅವನು ಸಿಕ್ಕಿದ ದಿನ ಆತನ ಭುಜಕ್ಕೊರಗಿ ಬಾಯಾರಿದ ಎರೆಹುಳುವಿಗೂ,
ಹಾಗೆ ಬಂದು ಹೀಗೆ ಆರಿದ ಇಬ್ಬನಿಗೂ ಮಧ್ಯೆ ಚಿಗಿತ ಪ್ರೇಮದ ಕಥೆಯನ್ನು..
ಬೂದಿಹುಡಿಯ ಮೇಲೆ ಬೆರಳದ್ದಿ ಬರೆದು ತೋರಿಸುವ ಆಸೆಯೊಂದು ಹುಟ್ಟಿದೆ.

Tuesday, 7 August 2012

ರೆಕ್ಕೆ ಬಿಚ್ಚಿಕೊಳ್ಳುವ ಪುಳಕವೆ....

ನೀಲಿಕಾವಳದ ಇನಿದು ನಡುನೆತ್ತಿ ಬೆಳಗಿನ ಸುಡುಗಾಡು ನಾಡೊಳಗೆ,
ಇಟ್ಟ ಮೊಟ್ಟೆಯ ಜೀವಗೂಡುಗಳ ಮೇಲೆ ಪುಟ್ಟಚಿಟ್ಟೆಗೂ ಪ್ರೇಮ..
ಎಲ್ಲೆಲ್ಲೂ ಅರಳಿ ಅರ್ಥವಿಲ್ಲದ ಚಿತ್ತಾರವಾದ ಮಿದುಳನಾಭಿಯ ಆಳದಲ್ಲೂ,
ಚಲಿಸೋ ಪದಗಳ ಪಂಜರದೊಳಗೆ ಮಾತಿರದ ಜೀವಕೂಸಿನ ಜನನ.

ಸರಳುಗಳ ಬೆನ್ನುತಬ್ಬುವ ಸಕ್ಕರೆಯ ಕೂಸು, ಹಚ್ಹಹಸಿಯ ತುಟಿಗಳು,
ಒಳಗಿರುವುದು ಬಂಧನವೋ, ಸರಳಿನಾಚೆಯದು ಬಂಧನವೋ..
ಅತ್ತಲೂ ಕಟ್ಟು ಇತ್ತಲೂ ಕಟ್ಟು, ಸರಳೊಂದೇ ಸತ್ಯವಾಗುವ ಘಳಿಗೆ,
ಕೊಂಬುಗಳ ಜಗತ್ತಿನಲ್ಲಿ ಕೇಳುವ ಕಿವಿಗಳ ಮೇಲೆ ಕಾದು ಸುಡುವ ಕಾವಲಿ.

ಅಷ್ಟರೊಳಗಿನ ಅಸ್ಮಿತೆಯಲ್ಲಿ ಇಷ್ಟಿಷ್ಟೇ ಚಿಗಿಯುವ ಕಣ್ಣುಸತ್ತ ಮುಖಗಳು,
ನರಖಂಡಗಳ ಸಂತೆಯೊಳಗೆ ಲಿಲಾವುಗೊಳ್ಳುವ ಬೆರಳಿಲ್ಲದ ಪಾದಗಳು..
ಕಣ್ಣಿಲ್ಲದ ಮುಖಕ್ಕೂ.. ಬೆರಳಿಲ್ಲದ ಪಾದಕ್ಕೂ ಗೆರೆಯೆಳೆದು ಉದ್ದಗೋಡೆಯ,
ಬಿರುಕಿನೊಳಗೆ ತೊಡೆ ತಟ್ಟುವ ಸೈತಾನೀಮರದ ಸಂಕರದ ಬೀಜವು

ಇದ್ದುದೆಲ್ಲವೂ ಸತ್ತು, ಸತ್ತುದೆಲ್ಲವೂ ಹುಟ್ಟಿ, ಕುಂಬಾರನ ಚಕ್ರವೂ ತಿರುಗಿ,
ಮಣ್ಣು ತಿದ್ದುವರಿಲ್ಲದೆ ನೆಲಕ್ಕೂ ಬಿದ್ದಾಯಿತು ವಕ್ರಾವರ್ತ ಪಿಶಾಚಿ ಮಡಕೆ..
ಮಸೀದಿ ಮಂದಿರ ಇಗರ್ಜಿಗಳ ಮುಂದಿನ ಚರ್ಮರೋಗದವರ ಸಾಲಿನಲ್ಲೂ
ಮೂಲೆಯಲ್ಲೆಲ್ಲೋ ನಿಂತಿದೆ ರುಂಡ ನಾಪತ್ತೆಯಾದ ಮನುಷ್ಯನ ಪಳೆಯುಳಿಕೆ

ಅವಧೂತರ ಹಾಡುಗಳ, ದರಬೇಶಿಗಳ ಪಾಡುಗಳ ಮೂಸುವರು ಎಲ್ಲಿ..
ಒಂದುತಂತಿ ಮೀಟುವರ, ಅರೆಗಣ್ಣು ಫಕೀರರ ಒಂದುಕಾಲದ ನೆನಪು,
ಇನ್ನೇನು ಸತ್ತೇಹೋಗಲಿರುವ ಚಿಟ್ಟೆಯ ಚಿಪ್ಪೊಡೆದ ಮೊಟ್ಟೆಗೆ ಬಿದ್ದು..
ಹುಟ್ಟದ ಜೀವದ ಕಂಕುಳಲ್ಲಿ ರೆಕ್ಕೆ ಬಿಚ್ಚಿಕೊಳ್ಳುವುದೇ ಸೋಜಿಗವು.

ರೆಪ್ಪೆ ಮೇಲಿನ ಇಬ್ಬನಿಯೂ.... ಅಣಬೆ ಬೇರಿನ ಕೊಂಬೆಯೂ

ಇವಳ ಅಷ್ಟೂ ಪ್ರೀತಿಯನ್ನು ಎಕ್ಕದೆಲೆಯ ಗೂಡುಕಟ್ಟಿಟ್ಟು,
ಆ ಅಣಬೆಗಿಡದ ಬುಡದಡಿಯ ನೆರಳಿನ ವಶಕ್ಕೊಪ್ಪಿಸುವಾಗ..
ಆಗತಾನೇ ತೊಟ್ಟು ಕಳಚಿಕೊಂಡ ಸುಂದರಿಮರದ ಹೂವೊಂದು
ಗೂಡೊಳಗೆ ತುಂಬಿಟ್ಟ ಅವಳ ಪ್ರೀತಿಯನ್ನು ವ್ಯಾಮೋಹದಿಂದ
ನಿಟ್ಟಿಸುತ್ತ ಪಾಚಿಗಟ್ಟಿದ ನೆಲದ ಮೇಲೆ ಅಂಗಾತ ಬಿತ್ತು..

ಕೊಲೆಯಾದ ಹೂವಿನ ಕಣ್ಣಮೇಲೆ ತುಟಿಯಿಟ್ಟು ಚುಂಬಿಸುತ್ತೇನೆ,
ತೇವದ ಬೆತ್ತಲೆ ಅಂಗಾಲುಗಳನ್ನು ಪಾಚಿನೆಲದ ಮೇಲೂರತ್ತ
ಇವಳ ಪ್ರೀತಿಯನ್ನು ಕಾಪಿಡಲು ಇನ್ನೊಂದು ತಾವು ಹುಡುಕುತ್ತೇನೆ..
ನಡೆದುಕೊಂಡು ಹೋದ ನವಿಲಿನ ಕಾಲ ಭಾರಕ್ಕೆ
ಯಾರಿಗೂ ತಿಳಿಸದೆ ಮಡುವಿನ ನಡುವೆ ಹುಟ್ಟಿದೆ ಪುಟ್ಟ ನದಿ..

ನವಿಲಹೆಜ್ಜೆಗಳ ನದಿಯೊಳಗೆ ಮುಳುಗಿಸಿಟ್ಟರೆ ಇವಳ ಪ್ರೀತಿಗೆ
ಉಸಿರುಗಟ್ಟುವ ಭಯವಾಗಿ ತೇವದ ಅಂಗಾಲುಗಳ ಕೆಳಗೆ
ಅರ್ಧ ಇಂಚಿನ ಭೂಕಂಪ.. ಹೆಬ್ಬೆರಳುಗಳ ಎದೆಯೊಡೆದು ಕಂಪಿಸುತ್ತವೆ,
ಎಲ್ಲಿಟ್ಟರೂ, ಹೇಗಿಟ್ಟರೂ ಅವಳ ಪ್ರೀತಿಗೆ ಉಸಿರಾಡಲಿಕ್ಕಿಷ್ಟು ಗಾಳಿಬೇಕು..
ಮೈಮುರಿಯಲು, ಮಗ್ಗುಲು ತಿರುಗಲು, ಕಣ್ತೆರೆಯಲು ಬೆಳಕು ಬೇಕು.

ಇಡುವ ಕ್ರಿಯೆಯ ಆಚೆ ಈಚೆಗೆ ಪ್ರೀತಿಗೊಂದು ನೆಲವೂ ಸಿಗದಾಗಿ
ಬಿಳಿ ಅಣಬೆಬೇರಿನ ಕೊಂಬೆಗಳ ಸೊಂಟಕ್ಕೆ ಆನಿಸಲೂ ಮನಸೊಪ್ಪದೆ
ಎಕ್ಕದೆಲೆಯ ತುಂಬ ಹಿಡಿದ ಇವಳ ಪ್ರೀತಿಯನ್ನು ಹಿಡಿದಿಡಲೂ ಆಗದೆ..
ಚೆಲ್ಲಲೂ ಜೀವವೊಪ್ಪದೆ, ನನ್ನೆದೆಯ ತುಂಬ ಸುರುವಿಕೊಳ್ಳುತ್ತೇನೆ..
ಇವಳ ಕಣ್ಣ ರೆಪ್ಪೆಯ ಮೇಲೆ ಆಗಷ್ಟೇ ಇಬ್ಬನಿಹನಿಗಳು ಹುಟ್ಟುತ್ತವೆ.

ಇಬ್ಬನಿಯ ಮುಟ್ಟುವ ಆಸೆ, ನನ್ನೊಳಗೆ ಬಸಿದುಕೊಳ್ಳುವ ತೀಟೆ,
ಕೊಲೆಯಾದ ಹೂವಿನ ಕೊಳೆತ ದೇಹವೂ ಕರಗಿ.. ನವಿಲ ಹೆಜ್ಜೆಗಳ
ನದಿಯಾಳದೊಳಗೆ ತಲೆಯೆತ್ತುವ ಎರೆಹುಳುವಿಗೂ ಅಸೂಯೆ..
ನನ್ನ ಎದೆ ಹರವಿನ ಮೇಲೆ ಸುರುವಿಕೊಂಡ ಇವಳ ಪ್ರೀತಿಯ ಹುಡಿಗಳು
ಎರೆಹುಳುವಿನ ಪುಟ್ಟಕಣ್ಣುಗಳತ್ತ ಸುಖಾಸುಮ್ಮನೆ ನೋಡುತ್ತ ಕುಳಿತಿವೆ.

Wednesday, 1 August 2012

ಕತ್ತಲೆಯ ಕೊಂದವಳು.

ನೆನೆದೂ ನೆನೆದೂ ತೇವಗೊಂಡ ಒಡಲಭೂಮಿಯ ದೊರೆಸಾನಿಯೇ 
ನಿನ್ನ ಕಣ್ರೆಪ್ಪೆ ತನ್ನಪಾಡಿಗೆ ತೆರೆದು ಮುಚ್ಚುವ ಸದ್ದೂ ಕೇಳುತ್ತದೆ ನನಗೆ,
ತೊಟ್ಟು ಕಳಚಿದ ಪಾರಿಜಾತ ಪುಷ್ಪ ನೆಲಕ್ಕೆ ಬಿದ್ದ ಸಪ್ಪುಳದಂತೆ..

ಮುರುಕು ಹಣತೆಗೆ ಮಣ್ಣು ಮೆತ್ತಿ ಒಪ್ಪ ಮಾಡಿಟ್ಟ ಅಂದಗತ್ತಿಯೇ.. 
ನಾಜೂಕಾಗಿ ಹಚ್ಚಿಟ್ಟ ಬೆಳಕು, ಗಾಳಿಗೆ ತುಯ್ಯುತ್ತಿದೆ, ತೊನೆದಾಡುತ್ತಿದೆ..
ನಿನ್ನ ತೆಳುಕಿವಿಗೆ ನೇತುಬಿದ್ದ ಪುಟ್ಟ ಜುಮಕಿಯೋಲೆಯ ಸಪ್ಪುಳದಂತೆ..

ಇರುವೆರಡು ಕಣ್ಣೊಳಗೆ ದೀಪ ಹಚ್ಚಿಟ್ಟುಕೊಂಡ ಬೆಳಕಿನೂರಿನ ಜೀವವೇ..
ನನ್ನೊಳಗೆ ಬಣ್ಣವನ್ನು ಚೆಲ್ಲಾಡಿದ ನಿನ್ನ ದೀಪ, ಕುರುಡು ಕತ್ತಲೆಯ ಕೊಂದಿದೆ, 
ಗುಬ್ಬಚ್ಚಿ ಗೂಡೊಳಗೆ ನುಗ್ಗಿದ ಎರಡು ಅಮಾಯಕ ಮಿಂಚುಹುಳಗಳಂತೆ..

ಪೊರೆಗಳಚಿಕೊಂಡ ನೆನಪುಗಳ ಕಿತಾಬನ್ನು ಆಯ್ದು ಆಯ್ದು ಕೊಟ್ಟವಳೆ, 
ಅಂಟಿಕೊಂಡ ಕಿತಾಬಿನ ಹಾಳೆಗಳಲ್ಲಿ ಕೆಲವನ್ನು ಗೆದ್ದಲುಗಳು ತಿಂದಿವೆ..
ನಾನು ನರಳಾಡುತ್ತೇನೆ.. ಗೆದ್ದಲುಗಳ ಬಾಯೊಳಗೆ ತುಂಡಾದ ಹಾಳೆಯಂತೆ.. 

ಇದ್ದುದೆಲ್ಲವನ್ನೂ ಜೋಡಿಸಿ ಒಡಲೂರ ದೇವರಿಗೆ ತೇರುಕಟ್ಟಿದ ಹುಡುಗಿಯೇ.
ನಿನ್ನ ಪಾದಧೂಳಿಯ ಯಾವೊಂದು ಧೂಳುಕಣವನ್ನೂ ನೆಲದ ಮೇಲೆ ಉಳಿಸದೆ.. 
ಎದೆಗೆ ಸುರುವಿಕೊಳ್ಳುತ್ತೇನೆ..ನನ್ನನ್ನೇ ನಿನ್ನೊಳಗೆ ಹೂತು ಹಾಕಿದಂತೆ.

Monday, 30 July 2012

ಒಂದು ಬೊಗಸೆ ಗಾಳಿ..

ಬೇಡವಾಗಿತ್ತು ಗೆಳೆಯ, ಬದುಕುವ ಆಸೆ ಪೊರೆಯುವ
ಯಾವ ಹಕ್ಕನ್ನೂ ಇನ್ನೂ ನಮಗೆ ಕೊಡಲಾಗಿಲ್ಲ,
ಆದರೂ ಆಸೆ ಪಡುವುದು ನಮ್ಮಿಂದೇಕೆ ನಿಲ್ಲುತ್ತಿಲ್ಲ?
ನಾವು ಪ್ರಶ್ನೆ ಕೇಳಲು ಹುಟ್ಟಿಲ್ಲ ಗೆಳೆಯ..
ಯಾರದ್ದೋ ಖುಷಿಗೆ ದೇಹ ತೇಯಲೆಂದು ಹುಟ್ಟಿದವರು.

ಬೇಡವಾಗಿತ್ತು ಗೆಳೆಯ, ದುಡಿದು ತಿನ್ನುವ ಉಮ್ಮೇದಿ ನಮಗೆ,
ನೆಲ್ಲೂರಿನ ಹೊಲಗಳಲ್ಲಿ 30 ರುಪಾಯಿಗೆ ಕೂಲಿಗೆ
ನಮ್ಮ ಬದುಕನ್ನು ಅಡಮಾನ ಇರಿಸಿಕೊಳ್ಳಲಾಗಿದೆ..
ಅವರ ಒತ್ತೆಯಾಳಾಗಲೆಂದೇ ನೆಲಕ್ಕೆ ಬಿದ್ದವರು ನಾವು.

ಬೇಡವಾಗಿತ್ತು ಗೆಳೆಯ, ಊರುಬಿಟ್ಟು ಕೂಲಿಗೆ ನಡೆಯುವ ಸಾಹಸ
ಕಣ್ಣುಗಳು ಇರಬೇಕಿದ್ದ ಜಾಗದಲ್ಲಿ ಕೊಡಲಿ ಹೊತ್ತವರ ನಡುವೆ
ನಮ್ಮ ಅನ್ನ ಹುಡುಕುವ ಸಾಹಸಕ್ಕೆ ನಗೆಪಾಟಲಿನ ಉತ್ತರ,
ನಮ್ಮ ಚರ್ಮಗಳು ಅವರ ಮೆಟ್ಟುಗಳಾಗಿ ಯಾವ ಕಾಲವೋ ಆಗಿದೆ.

ಬೇಡವಾಗಿತ್ತು ಗೆಳೆಯ, ನಮಗೆ ಉಸಿರಾಡುವ ಉಸಾಬರಿ,
ಅಸಲಿಗೆ ಆ ಹಕ್ಕನ್ನ ನಮಗೆ ಕೊಟ್ಟಿದ್ದಾದರೂ ಯಾವಾಗ?
ಉಸಿರ ಗೂಡಿಗೆ ಒಂದು ಬೊಗಸೆ ಗಾಳಿಯಷ್ಟೇ ಬೇಕಿತ್ತು..
ನಮ್ಮ ತಿತ್ತಿಯನ್ನೇ ಕಿತ್ತು ತಿಂದವರ ಬಳಿಗೆ ಬೊಗಸೆಗಾಳಿಗೆ ತಾವೆಲ್ಲಿ?

ಇಡು ಆ ಬಿದಿರುಕೋಲುಗಳ ಮಲದಗುಂಡಿಯ ಪಕ್ಕಕ್ಕೆ,
ಅಗ್ಗದ್ದೊಂದು ತುಂಡು ಬೀಡಿಯನ್ನಾದರೂ ಸೇದೋಣ,
ಒಳಗಿರುವುದು ಇಬ್ಬರ ಜೀವವನ್ನೂ ಕೊಯ್ಯುವ ಗಾಳಿ,
ಮೊದಲು ನನ್ನದು, ಆಮೇಲೆ ನಿನ್ನದು.. ಇಳಿಯಲಿ ದೇಹಗಳು.

ತಲೆಯೆತ್ತಬೇಡ ಗುಂಡಿಯೊಳಗಿಂದ, ಬೂಟುಗಾಲುಗಳಿವೆ ಮೇಲೆ,
ಅಂಗೈಯನ್ನೂ ಹೊರಚಾಚಬೇಡ, ಹೊಸಕುತ್ತವೆ ಬೂಟುಗಳು..
ಇಗೋ ಗುಂಡಿಯೊಳಗಿನ ವಿಷದಗಾಳಿ, ನೀನು ಕುಡಿದಾದ ಮೇಲೆ
ಒಂದು ಬೊಗಸೆ ಗಾಳಿಯನ್ನು ನನ್ನ ಗಂಟಲಿಗೂ ಇಷ್ಟು ಸುರಿದುಬಿಡು.

ಹುಬ್ಬಳ್ಳಿ ಮಲದಗುಂಡಿ ಸಾವುಗಳ ಬಗ್ಗೆ ಸಪಾಯಿಕರ್ಮಚಾರಿ ಕಾವಲುಸಮಿತಿಯ ಸತ್ಯಶೋಧನಾ ವರದಿ.

ಹುಬ್ಬಳ್ಳಿ ನಗರದ ಚಾಣಕ್ಯಪುರಿ ರಸ್ತೆಯ ಮ್ಯಾನ್ಹೋಲ್ ವಿಷಾನಿಲ ಸೇವನೆಯಿಂದ ಮೃತಪಟ್ಟ 
ಇಬ್ಬರ ಸಾವಿನ ಕುರಿತ ಸಪಾಯಿಕರ್ಮಚಾರಿ ಕಾವಲುಸಮಿತಿಯ ಸತ್ಯಶೋಧನಾ ವರದಿ.

ಜುಲೈ 2012ನೇ ತಿಂಗಳ 22ನೇ ತಾರೀಖಿನ ಭಾನುವಾರದಂದು ಹುಬ್ಬಳ್ಳಿ ನಗರದ ಚಾಣಕ್ಯಪುರಿ ರಸ್ತೆಯ ಶ್ರೀ ಮೌನೇಶರ್ವರ ದೇವಸ್ಥಾನದ ಬಳಿಯ ಮ್ಯಾನ್ ಹೋಲ್ ಒಳಗೆ ಸ್ವಚ್ಛತೆಗೆ ಇಳಿದ ಇಬ್ಬರು ಯುವಕರು ಮೃತಪಟ್ಟ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಗದಗ ಜಿಲ್ಲೆಯ ರೋಣ ತಾಲ್ಲೋಕಿನ ನೆಲ್ಲೂರು ಗ್ರಾಮದ ನಿವಾಸಿಗಳಾದ ಸಂತೋಷ್ ಮತ್ತು ರಮೇಶ್ ಎಂಬ ಸಹೋದರರು ಸ್ಥಳದಲ್ಲೇ ವಿಷಾನಿಲ ಸೇವನೆಯಿಂದ ಮೃತಪಟ್ಟರೆ, ಅವರೊಡನೆ ಕೆಲಸ ನಿರ್ವಹಿಸುತ್ತಿದ್ದಅದೇ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಾರ್ಮಿಕ ಶಿವು ಭದ್ರಪ್ಪ ರಾಠೋಡ್ ಮತ್ತು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೋಕಿನ ಎಲ್ಲಾರಟ್ಟಿ ಗ್ರಾಮದ ನಿವಾಸಿ ಬಸವರಾಜ ಹೊನ್ನಗೋಳ ಎಂಬ ಮತ್ತೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡಿದ್ದಾರೆ. ಮುಂಬೈನ ಈಗಲ್ ಕನ್ಸ್ಟ್ರಕ್ಷನ್ ಕಂಪನಿಯು ಗುತ್ತಿಗೆಗೆ ಪಡೆದಿರುವ ಉತ್ತರ ಕರ್ನಾಟಕ ನಗರ ಮೂಲಸೌಕರ್ಯ ಯೋಜನೆಯಡಿಯಲ್ಲಿ ಮಲಿನ ನೀರು ಸಾಗಾಟ ಜಾಲಕ್ಕೆ ಸಂಬಂಧಿಸಿದಂತೆ ನಿರ್ಮಿಸಲಾಗಿರುವ ಮ್ಯಾನ್ಹೋಲ್ ಸ್ವಚ್ಛತೆಯ ವೇಳೆ ಈ ದಿನಗೂಲಿ ಕಾರ್ಮಿಕರ ಘೋರಸಾವಿನ ದುರಂತ ಸಂಭವಿಸಿದೆ. ಇನ್ನೂ ಪಾಲಿಕೆಗೆ ಹಸ್ತಾಂತರಿಸದ ಎಂಟು ತಿಂಗಳ ಹಿಂದೆಯಷ್ಟೇ ರಸ್ತೆ ಮಧ್ಯದಲ್ಲಿ ನಿಮರ್ಿಸಿದ ಒಳ ಚರಂಡಿಯನ್ನು ಸ್ವಚ್ಛಗೊಳಿಸಲು ಈ ಕಾರ್ಮಿಕರು ಮ್ಯಾನ್ ಹೋಲ್ ಒಳಗೆ ಇಳಿದಿದ್ದರು. ಆರಂಭದಲ್ಲಿ ಶಿವು ಭದ್ರಪ್ಪ ರಾಠೋಡ ಎಂಬ ಅಪ್ರಾಪ್ರ ವಯಸ್ಸಿನ ಕಾರ್ಮಿಕನು ಇಳಿಯಲೆತ್ನಿಸಿ ಮೇಲೆ ಬಂದು ಗುಂಡಿಯ ಪಕ್ಕದಲ್ಲೇ ಚೇತರಿಸಿಕೊಳ್ಳುತ್ತಿದ್ದಾಗ, ಅದೇ ಗುಂಡಿಯೊಳಗೆ ರಮೇಶ ಇಳಿದು ವಿಷಾನಿಲ ಸೇವನೆಯಿಂದ ಅಸ್ವಸ್ಥಗೊಂಡು ಮ್ಯಾನ್ ಹೋಲ್ ಒಳಗೇ ಕುಸಿದು ಬಿದ್ದಾಗ ಅವನನ್ನು ರಕ್ಷಿಸಲು ಆತನ ಅಣ್ಣ ಸಂತೋಷ ಇಳಿದಿದ್ದಾನೆ, ಆತನೂ ವಿಷದಗಾಳಿ ಸೇವಿಸಿ ಗುಂಡಿಯೊಳಗೇ ಮೃತಪಟ್ಟಿದಾನೆ, ಇವರಿಬ್ಬರನ್ನೂ ಕಾಪಾಡಲು ಒಳಗಿಳಿಯಲು ಯತ್ನಿಸಿದ ಬಸವರಾಜನೂ ಅಸ್ವಸ್ಥಗೊಂಡಾಗ ಸಾರ್ವಜನಿಕರು ಮತ್ತು ಪೋಲೀಸರು ಆತನನ್ನು ಗುಂಡಿಯಿಂದ ಹೊರಗೆಳೆದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಾಧ್ಯಮಗಳ ಮೂಲಕ ಈ ವಿಷಯ ತಿಳಿದ ಸಪಾಯಿ ಕರ್ಮಚಾರಿಗಳ ಕಾವಲುಪಡೆಯ ವತಿಯಿಂದ ಸಂಶೋಧಕ ಮತ್ತು ಪತ್ರಕರ್ತ ಟಿ.ಕೆ. ದಯಾನಂದ, ಹಾಗೂ ಸಾಮಾಜಿಕ ಕಾರ್ಯಕರ್ತ ಓಬಳೇಶ್ ಅವರ ದ್ವಿಸದಸ್ಯ ಸತ್ಯಶೋಧನಾ ಸಮಿತಿಯನ್ನು ರಚಿಸಲಾಯಿತು. ಈ ಇಬ್ಬರು ಸದಸ್ಯರ ತಂಡವು 2012ನೇ ಜುಲೈ 26ನೇ ತಾರೀಖಿನಂದು ಮ್ಯಾನ್ಹೋಲ್ ಒಳಗಿಳಿದು ಮೃತಪಟ್ಟ ರಮೇಶ್ ಮತ್ತು ಸಂತೋಷ್ ಅವರ ಹುಟ್ಟೂರಾದ ಗದಗ ಜಿಲ್ಲೆಯ ರೋಣ ತಾಲ್ಲೋಕಿನ ನೆಲ್ಲೂರು ಗ್ರಾಮಕ್ಕೆ ಭೇಟಿ ಕೊಟ್ಟು, ಸಂತ್ರಸ್ತ ಕುಟುಂಬದವರೊಡನೆ ಮಾತನಾಡಿ, ವಿಡಿಯೋ ಮತ್ತು ಪೋಟೋ ದಾಖಲಾತಿಗಳನ್ನು ಪಡೆದು, ಆ ಮೂಲಕ ಕಂಡುಕೊಂಡ ಸತ್ಯಾಂಶಗಳನ್ನು ಇಲ್ಲಿ ಮಂಡಿಸಲಾಗಿದೆ.

ಸತ್ಯಶೋಧನ ಸಮಿತಿಯೊಂದಿಗೆ ಘಟನೆಗೆ ಸಂಬಂಧಿಸಿದ ವಿಷಯವನ್ನು ಹಂಚಿಕೊಂಡವರು 

1)ದೇವಕ್ಕ ಯಮುನಪ್ಪ - ಮೃತ ಸಂತೋಷ್ ಮತ್ತು ರಮೇಶರ ತಾಯಿ, ವಯಸ್ಸು ಸುಮಾರು 55 ವರ್ಷಗಳು

2)ಫಕೀರಪ್ಪ ಬೀರಪ್ಪ ಲಮಾಣಿ - ಮೃತ ಸಂತೋಷ್ ಮತ್ತು ರಮೇಶರ ಚಿಕ್ಕಪ್ಪ, ವಯಸ್ಸು ಸುಮಾರು 45 ವರ್ಷಗಳು

3)ಶಿವು ಭದ್ರಪ್ಪ ರಾಠೋಡ್ - ನೆಲ್ಲೂರು ಗ್ರಾಮವಾಸಿ, ಹುಬ್ಬಳ್ಳಿಯ ಯುಜಿಡಿ ಸಫಾಯಿ ಕರ್ಮಚಾರಿ ಮತ್ತು ಘಟನೆಯ ಪ್ರತ್ಯಕ್ಷಸಾಕ್ಷಿ ವಯಸ್ಸು 16 ವರ್ಷಗಳು.

4)ಯಮುನವ್ವ - ನೆಲ್ಲೂರು ಗ್ರಾಮ ವಾಸಿ ಮತ್ತು ಹುಬ್ಬಳ್ಳಿಯ ಯುಜಿಡಿ ಸಫಾಯಿ ಕರ್ಮಚಾರಿ, ವಯಸ್ಸು ಸುಮಾರು 38 ವರ್ಷಗಳು

ರೋಣ ತಾಲ್ಲೋಕಿನ ನೆಲ್ಲೂರು ಗ್ರಾಮದ ಸಮಕಾಲೀನ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ :

ನೆಲ್ಲೂರು ಗ್ರಾಮವು ಗದಗ ಜಿಲ್ಲೆಯ ರೋಣ ತಾಲ್ಲೋಕು ವ್ಯಾಪ್ತಿಗೆ ಬರುವ ಗ್ರಾಮವಾಗಿದ್ದು ಉತ್ತರ ಕರ್ನಾಟಕದ ಎಲ್ಲ ಹಿಂದುಳಿದ ಗ್ರಾಮಗಳಂತೆಯೇ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಗ್ರಾಮವಾಗಿದೆ. ಈ ನೆಲ್ಲೂರು ಗ್ರಾಮದಲ್ಲಿ ನೆಲೆಸಿರುವ ಪರಿಶಿಷ್ಟಜಾತಿ ಸಮುದಾಯಕ್ಕೆ ಸೇರಿರುವ 60 ಲಂಬಾಣಿ ಕುಟುಂಬಗಳು ನೆಲೆಸಿದ್ದು 450ಕ್ಕೂ ಹೆಚ್ಚು ಜನಸಂಖ್ಯೆ ಈ ಸಮುದಾಯಕ್ಕಿದೆ. 60 ಲಂಬಾಣಿ ಕುಟುಂಬಗಳಲ್ಲಿ 4 ಮಂದಿಗೆ ಮಾತ್ರ ಒಂದೆರಡು ಎಕರೆಯಷ್ಟು ಸ್ವಂತ ಭೂಮಿಯಿದ್ದು ಉಳಿಕೆ ಮಂದಿ ಗ್ರಾಮದ ಭೂಹಿಡುವಳಿದಾರರ ಹೊಲಗದ್ದೆಗಳಲ್ಲಿ ಕೃಷಿಕೂಲಿ ಕಾಮರ್ಿಕರಾಗಿ ದಿನವೊಂದಕ್ಕೆ 30-40 ರೂಪಾಯಿಗಳಿಗೆ ದುಡಿಯುತ್ತಿದ್ದಾರೆ. ಶಿಕ್ಷಣದ ಸೋಂಕೇ ಇಲ್ಲದ ಈ ಲಂಬಾಣಿ ಕುಟುಂಬಗಳಲ್ಲಿ ಒಂದಿಬ್ಬರು ಯುವಕರು ಪಿಯುಸಿವರೆಗೆ ಶಿಕ್ಷಣ ಪಡೆದಿರುವುದನ್ನು ಬಿಟ್ಟರೆ ಮಿಕ್ಕುಳಿದವರು ಇವತ್ತಿಗೂ ಅನಕ್ಷರಸ್ಥರು. ಗ್ರಾಮದಲ್ಲಿ ಅಂಗನವಾಡಿ, ರೇಷನ್ ಡಿಪೋ, ಆರೋಗ್ಯಕೇಂದ್ರದಂತಹ ಯಾವ ಸೌಲಭ್ಯವೂ ಇಲ್ಲ. 2 ತಿಂಗಳಿಗೊಮ್ಮೆ ನೆಲ್ಲೂರು ಗ್ರಾಮಕ್ಕೆ ಭೇಟಿ ಕೊಟ್ಟು ಮನೆಮನೆಗೂ ತೆರಳಿ ಚಿಕಿತ್ಸೆ ನೀಡುವುದು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳಲ್ಲಿ ಒಂದು. ಆದರೆ ಆರೋಗ್ಯ ಸಹಾಯಕಿಯು ಅಪಿತಪ್ಪಿಯೂ ಈ ಪರಿಶಿಷ್ಟಪಂಗಡಕ್ಕೆ ಸೇರಿದ ಲಂಬಾಣಿತಾಂಡದೊಳಕ್ಕೆ ಹೆಜ್ಜೆಯಿಡುವುದಿಲ್ಲ. ಗ್ರಾಮದ ಮೇಲ್ಜಾತಿ ಮಂದಿಯ ಮನೆಯ ಬಳಿ ಕುಳಿತು ಎಲ್ಲರನ್ನೂ ತನ್ನ ಬಳಿಗೆ ಕರೆಯಿಸಿಕೊಂಡು ಆರೋಗ್ಯ ವಿಚಾರಿಸುವುದು ಆರೋಗ್ಯ ಸಹಾಯಕಿಯ ಕಾರ್ಯವೈಖರಿ. ಗ್ರಾಮದ ಯಾವ ಭಾಗದಲ್ಲಿಯೂ ಸಮರ್ಪಕ ರಸ್ತೆಯಾಗಲೀ, ನೀರು ಹರಿದುಹೋಗಲು ಚರಂಡಿ ವ್ಯವಸ್ಥೆಯೆಂಬುದು ಇಲ್ಲವೇ ಇಲ್ಲ.

ಲಂಬಾಣಿ ತಾಂಡದ ಬಹುತೇಕ ಯುವಕರು ಮತ್ತು ಅಪ್ರಾಪ್ತರು ವಯಸ್ಸಿಗೆ ಬರುತ್ತಿದ್ದಂತೆಯೇ ಕೂಲಿಕೆಲಸ ಹುಡುಕುತ್ತ ಊರೂಗಿಗೆ ಗುಳೆ ಹೋಗುವುದು ಸವರ್ೇ ಸಾಮಾನ್ಯ ಸಂಗತಿ. ಹಾಗಾಗಿ ಗಾರೆಕೆಲಸ, ಮ್ಯಾನ್ಹೋಲ್ ಸ್ವಚ್ಛತೆ, ಕಾಂಕ್ರೀಟ್ ಕೆಲಸಗಳಿಗೆಂದು ದೂರದ ಮಂಗಳೂರು, ಬೆಂಗಳೂರು ಮತ್ತು ಕರಾವಳಿಯತ್ತ ಕೆಲಸ ಹುಡುಕುತ್ತ ಗುಳೆಯೆದ್ದು ಹೋದ ಯುವಕರನ್ನು ಹೊರತುಪಡಿಸಿ ಬರಿಯ ಮಕ್ಕಳು ಮತ್ತು ವೃದ್ಧರು ಮಾತ್ರ ನೆಲ್ಲೂರು ಲಂಬಾಣಿ ತಾಂಡಾದೊಳಗೆ ಕಾಣಸಿಗುತ್ತಾರೆ. 

ದೇವಕ್ಕ ಯಮುನಪ್ಪ - ಮೃತ ಸಂತೋಷ್ ಮತ್ತು ರಮೇಶರ ತಾಯಿ, ವಯಸ್ಸು ಸುಮಾರು 55 ವರ್ಷಗಳು

ಹುಬ್ಬಳ್ಳಿಯಲ್ಲಿ ಸುರಕ್ಷಾ ಸಾಧನಗಳಿಲ್ಲದೆ ಮ್ಯಾನ್ ಹೋಲ್ ಒಳಗಿಳಿದು ಮೃತಪಟ್ಟ ಸಂತೋಷ್ ಮತ್ತು ರಮೇಶರ ತಾಯಿ ದೇವಕ್ಕ ಯಮುನಪ್ಪನವರು ಕಳೆದ ಒಂದು ವರ್ಷದಿಂದ ಅವರ ಇಬ್ಬರೂ ಮಕ್ಕಳು ಹುಬ್ಬಳ್ಳಿಯಲ್ಲಿ ಒಳಚರಂಡಿ ವಿಬಾಗದಲ್ಲಿ ದಿನಗೂಲಿ ಕಾಮರ್ಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಶ್ರೀಕಾಂತ್ ಅನ್ನುವ ಮೇಸ್ತ್ರಿಯೊಬ್ಬರಿದ್ದಾರೆ ಎಂದು ಮೃತಪಟ್ಟ ಮಕ್ಕಳು ಆಗಾಗ್ಗೆ ಹೇಳುತ್ತಿದ್ದರು, ನಮ್ಮ ನೆಲ್ಲೂರು ಲಂಬಾಣಿ ತಾಂಡದಿಂದಲೇ ಸುಮಾರು 30 ಮಂದಿಯು ಹುಬ್ಬಳ್ಳಿಯಲ್ಲಿ ಅದೇ ಒಳಚರಂಡಿ ವಿಬಾಗದಲ್ಲಿ ದಿನಗೂಲಿ ಕಾಮರ್ಿಕರಾಗಿ ಕೆಲಸ ಮಾಡುತ್ತಿದ್ದಾರೆ, ಅದರಲ್ಲಿ ಶಿವು ಭದ್ರಪ್ಪ ರಾಠೋಡ್, ಕುಮ್ಯಾ ಹಾಗೂ ಬಾಲು ಎಂಬ ಅಪ್ರಾಪ್ತ ಬಾಲಕರೂ ಇದ್ದಾರೆ, ಎಲ್ಲರೂ ಹುಬ್ಬಳ್ಳಿಯ ಬೆಳಗಿಹಾಳ ಮತ್ತು ಬೇರಿಕೊಪ್ಪ ಪ್ರದೇಶದ ಪಕ್ಕದ ಏರ್ಟೆಲ್ ಟವರ್ ಬಳಿ ಶೆಡ್ ಹಾಕಿಕೊಂಡು ಉಳಿದುಕೊಂಡಿದ್ದಾರೆ, ಗಂಡಸರಿಗೆ ದಿನಕ್ಕೆ 250 ಮತ್ತು ಹೆಂಗಸರಿಗೆ 150 ರೂ ಕೂಲಿ ಕೊಡುತ್ತಾರೆ, ಪ್ರತೀ ವಾರಕ್ಕೊಮ್ಮೆ ನಗದು ರೂಪದಲ್ಲಿ ಸಂಬಳ ಕೊಡುವುದಾಗಿಯೂ, ಅದಕ್ಕೆ ರಸೀತಿಯನ್ನೇನೂ ಕೊಡುತ್ತಿರಲಿಲ್ಲವೆಂದು ಮೃತಪಟ್ಟ ಮಕ್ಕಳು ತಮ್ಮಲ್ಲಿ ಹೇಳುತ್ತಿದ್ದರು ಎಂಬುದನ್ನು ಬಿಟ್ಟರೆ ಮಕ್ಕಳ ಕೆಲಸದ ಬಗ್ಗೆ ನನಗೆ ಹೆಚ್ಚಿನ ವಿಷಯಗಳೇನೂ ತಿಳಿದಿಲ್ಲ ಎಂದು ದೇವಕ್ಕ ತಮ್ಮಲ್ಲಿದ್ದ ಮಾಹಿತಿಯನ್ನು ನಮ್ಮೊಡನೆ ಹಂಚಿಕೊಂಡರು. 

1) ಯಮುನವ್ವ - ನೆಲ್ಲೂರು ವಾಸಿ ಮತ್ತು ಯುಜಿಡಿ ಸಫಾಯಿ ಕರ್ಮಚಾರಿ, ವಯಸ್ಸು ಸುಮಾರು 38 ವರ್ಷಗಳು

ನಾವು ಒಟ್ಟು 30 ಮಂದಿ ನೆಲ್ಲೂರು ಲಂಬಾಣಿತಾಂಡದಿಂದ ಹುಬ್ಬಳ್ಳಿ ಒಳಚರಂಡಿ ವಿಬಾಗದಲ್ಲಿ ಸಫಾಯಿ ಕರ್ಮಚಾರಿ ದಿನಗೂಲಿ ಕೆಲಸವನ್ನು ಮಾಡುತ್ತಿದ್ದೇವೆ, ನಮ್ಮನ್ನು ಕೆಲಸಕ್ಕೆ ತೆಗೆದುಕೊಂಡ ಮಾಲೀಕರಾಗಲೀ ಕಂಪೆನಿಯಾಗಲೀ ನಮಗೆ ತಿಳಿದಿಲ್ಲ, ಮೇಸ್ತ್ರಿಯಾಗಿದ್ದ ಶ್ರೀಕಾಂತ್ ಮತ್ತು ಚೌಗಲೆ, ಪಾಂಡೆ ಎನ್ನುವರು ಮಾತ್ರ ನಮಗೆ ಗೊತ್ತು, ಅವರು ಆಗಾಗ್ಗೆ ಕೆಲಸದ ಜಾಗಕ್ಕೆ ಬರುತ್ತಿದ್ದರು, ಚರಂಡಿ ಮತ್ತು ಮ್ಯಾನ್ಹೋಲ್ ಸ್ವಚ್ಛಗೊಳಿಸುವುದು ನಮಗೆ ವಹಿಸಿದ ಕೆಲಸವಾಗಿತ್ತು. ಕೆಲಸ ಮಾಡುವುದಕ್ಕೆಂದು ಯಾವುದೇ ಸಮವಸ್ತ್ರವಾಗಲೀ, ಸುರಕ್ಷಾ ಸಾಧನಗಳನ್ನಾಗಲೀ, ಕೈಗವಸು, ಬೂಟುಗಳನ್ನು ಗುತ್ತಿಗೆದಾರರು ನಮಗೆ ಕೊಟ್ಟಿಲ್ಲ, ಬರಿಗೈಯಲ್ಲೇ ಚರಂಡಿ, ಒಳಚರಂಡಿ ಶುಚಿಗೊಳಿಸುವ ಕೆಲಸವನ್ನು ನಮ್ಮಿಂದ ಮಾಡಿಸಲಾಗುತ್ತಿತ್ತು, ಅನೈರ್ಮಲ್ಯಕರ ವಾತಾವರಣದಲ್ಲಿ ವಾಸನೆ ಬಂದರೂ ಹೇಸಿಗೆಯಾದರೂ ವಾರದ ದಿನಗೂಲಿಗಾಗಿ ನಾವು ಯಾವ ಸುರಕ್ಷಾಸಾಧನವೂ ಇಲ್ಲದೆ ಆ ಕೆಲಸವನ್ನು ಮಾಡಲೇ ಬೇಕಿತ್ತು ಎಂದು ಯಮುನವ್ವ ತಮ್ಮ ಕೆಲಸದ ಅನುಭವವನ್ನು ಹಂಚಿಕೊಂಡರು.

2) ಶಿವು ಭದ್ರಪ್ಪ ರಾಠೋಡ್ - ನೆಲ್ಲೂರು ಗ್ರಾಮವಾಸಿ, ಹುಬ್ಬಳ್ಳಿಯ ಯುಜಿಡಿ ಸಫಾಯಿ ಕರ್ಮಚಾರಿ ಮತ್ತು ಘಟನೆಯ ಪ್ರತ್ಯಕ್ಷಸಾಕ್ಷಿವಯಸ್ಸು 16 ವರ್ಷಗಳು.

ಆವತ್ತು 22ನೇ ತಾರೀಖಿನ ಭಾನುವಾರ ಬೆಳಿಗ್ಗೆಯಿಂದ ಗಟಾರ ಸ್ವಚ್ಛ ಮಾಡಲಿಕ್ಕೆ ಮೇಸ್ತ್ರಿ ಶ್ರೀಕಾಂತ್ ಹೇಳಿದ್ದರು. ಅದರಂತೆ ಕೆಲಸ ಮಾಡ್ತ ಇದ್ದೆವು. ಬೇರೆ ಪ್ರದೇಶಗಳ ಮ್ಯಾನ್ ಹೋಲ್ ಸ್ವಚ್ಛತೆ ಮುಗಿಸಿ ಚಾಣಕ್ಯಪುರಿ ರಸ್ತೆ ಮ್ಯಾನ್ ಹೋಲ್ ಸ್ವಚ್ಛತೆಗೆ ಮುಂದಾದಾಗ ಮೊದಲು ಅದರ ಮುಚ್ಚಳ ತೆರೆದು ನಾನೇ ಇಳಿದೆ. ಒಳಗೆ ಹೋಗುತ್ತಿದ್ದಂತೆ ಉಸಿರುಕಟ್ಟಿದಂತೆ ಅನುಭವ ಆಗಿ ಪ್ರಜ್ಞೆ ತಪ್ಪುವಂತಾಯಿತು, ಕೂಗಿಕೊಂಡೆ, ತಕ್ಷಣವೇ ರಮೇಶ ಮತ್ತು ಸಂತೋಷ ನನ್ನನ್ನು ಮೇಲಕ್ಕೆ ಎಳೆದುಕೊಂಡರು. ಮೇಲಕ್ಕೆ ಬಂದು ಅಲ್ಲೇ ರಸ್ತೆಯಲ್ಲಿ ಮಲಗಿ ಸುಧಾರಿಸಿಕೊಳ್ಳುತ್ತಿದ್ದೆ, ಆಗ ರಮೇಶ ನಾನು ತಮಾಷೆ ಮಾಡುತ್ತಿದ್ದೇನೆ ಎಂದು ಭಾವಿಸಿ ಅವನೇ ಒಳಗೆ ಮ್ಯಾನ್ ಹೋಲ್ ಒಳಗೆ ಇಳಿದವನು ಅಲ್ಲಿಯೇ ಕುಸಿದು ಬಿದ್ದ, ಅವನ ನಂತರ ಸಂತೋಷ, ಅವನ ಹಿಂದೆ ಬಸವರಾಜ ಮೂವರೂ ಒಬ್ಬರನ್ನೊಬ್ಬರು ಕಾಪಾಡಲು ಗುಂಡಿಯೊಳಗೆ ಇಳಿದವರು ಒಳಗೆ ಒದ್ದಾಡತೊಡಗಿದ್ದರು, ನಾನು ಅಲ್ಲಿದ್ದ ಜನರನ್ನು ಕಾಪಾಡಲು ಕೂಗಿಕೊಂಡೆ, ಬಸವರಾಜನನ್ನು ಯಾರೋ ಮೇಲಕ್ಕೆ ಎಳೆದು ಕಾಪಾಡಿದರು. ನನಗೆ ಅಷ್ಟೇ ಗೊತ್ತು, ನಮ್ಮ ಮೇಸ್ತ್ರಿ ಶ್ರೀಕಾಂತ್ ಮತ್ತು ಇನ್ನೊಬ್ಬರು ನನ್ನನ್ನು ಅಲ್ಲಿಂದ ಕರೆದುಕೊಂಡು ಯಾವುದೋ ಒಂದು ಆಫೀಸಿನಲ್ಲಿ ಕೂಡಿ ಹಾಕಿದ್ದರು. ನನ್ನ ಮೊಬೈಲಿನಿಂದ ಅವರಿಗೆ ಕಾಲ್ ಮಾಡಿ ರಮೇಶ, ಸಂತೋಷ ಮತ್ತು ಬಸವರಾಜುಗೆ ಏನಾಯ್ತು ಅಂತ ಕೇಳಿದೆ, ಅದಕ್ಕವರು ಏನೂ ಆಗಿಲ್ಲ ಎಲ್ಲರೂ ಆಸ್ಪತ್ರೆಯಲ್ಲಿದ್ದಾರೆ, ಗ್ಲೂಕೋಸ್ ಹಾಕಿದ್ದಾರೆ, ಚೆನ್ನಾಗಿದ್ದಾರೆ ಅಂತ ಹೇಳಿದರು. ಮಾರನೆಯ ದಿನ ಊರಿನವರ ಜೊತೆಯಲ್ಲಿ ನೆಲ್ಲೂರು ತಾಂಡಕ್ಕೆ ಬಂದಾಗಲೇ ರಮೇಶ ಮತ್ತು ಸಂತೋಷ ಇಬ್ಬರೂ ಸತ್ತಿರುವ ವಿಷಯ ನನಗೆ ಗೊತ್ತಾಗಿದ್ದು.

3) ಫಕೀರಪ್ಪ ಬೀರಪ್ಪ ಲಮಾಣಿ ಮೃತರ ಚಿಕ್ಕಪ್ಪ, ವಯಸ್ಸು ಸುಮಾರು 45 ವರ್ಷಗಳು

ರಮೇಶ ಮತ್ತು ಸಂತೋಷ ಗುಂಡಿಯೊಳಗೆ ಬಿದ್ದು ಸತ್ತಿದ್ದು 22ನೇ ತಾರೀಖಿನ ಮಧ್ಯಾನ್ಹ 2 ಗಂಟೆಗೆ. ಆದರೆ ಹುಬ್ಬಳ್ಳಿ ಮಹಾನಗರಪಾಲಿಕೆಯವರು ಮತ್ತು ಕಂಪನಿಯವರು ನಮಗೆ ವಿಷಯ ತಿಳಿಸಿದ್ದು ರಾತ್ರಿ 8 ಗಂಟೆಗೆ. ಅಲ್ಲಿಯತನಕ ನಮ್ಮ ಮಕ್ಕಳು ಮೃತಪಟ್ಟಿರುವ ವಿಷಯ ನಮಗೆ ತಿಳಿದೇ ಇರಲಿಲ್ಲ. ತಕ್ಷಣವೇ ನಾವು ಮತ್ತು ನಮ್ಮ ಸಂಬಂಧಿಕ ರಾಮು ಲಂಬಾಣಿ ಅನ್ನುವರು ಇಬ್ಬರೂ ಹುಬ್ಬಳ್ಳಿಗೆ ಹೊರಟೆವು. ಕೆ.ಎಂ.ಸಿ ಆಸ್ಪತ್ರೆಯಲ್ಲಿ ರಮೇಶ ಸಂತೋಷರ ಹೆಣವನ್ನು ಪೋಸ್ಟ್ ಮಾರ್ಟಂ ಮಾಡಿ ಇಟ್ಟಿದ್ದರು. ಹೆಣವನ್ನು ನೋಡಲಿಕ್ಕೂ ನಮಗೆ ಅಧಿಕಾರಿಗಳು ಬಿಡಲಿಲ್ಲ. ರಾತ್ರಿಯಿಡೀ ಆಸ್ಪತ್ರೆ ಆವರಣದಲ್ಲೇ ಇದ್ದ ನಮಗೆ ಮಾರನೆಯ ದಿನ ಬೆಳಗ್ಗೆ ಪೋಲೀಸರು ಬಂದ ಮೇಲೆಯೇ ಹೆಣ ತೋರಿಸಿದ್ದು. ಆವ ಯಾರೆಲ್ಲ ಇದ್ದರು, ಅವರೆಲ್ಲ ಯಾವ ಅಧಿಕಾರಿಗಳು ಅನ್ನುವುದು ನಮಗೂ ತಿಳಿದಿರಲಿಲ್ಲ. ಕಂಪನಿಯ ಕಡೆಯವರೆಂದು ಯಾರೋ ಒಬ್ಬರು ಒಂದೊಂದು ಜೀವಕ್ಕೆ ಎರಡೂವರೆ ಲಕ್ಷದಂತೆ 5 ಲಕ್ಷ ದುಡ್ಡು ಕೊಟ್ಟು ಮಣ್ಣು ಮಾಡಲು 10,500 ರೂಗಳನ್ನು ಕೊಟ್ಟರು. ಕೊಟ್ಟವರು ಯಾರು ಅಂತಲೂ ನಮಗೆ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಒಂದು ಆಂಬ್ಯುಲೆನ್ಸ್ ಮಾಡಿ ಎರಡೂ ಹೆಣಗಳನ್ನು ಅದರೊಳಗೆ ತುಂಬಿ ಊರಿಗೆ ತೆಗೆದುಕೊಂಡು ಹೋಗಲು ನಮ್ಮನ್ನು ಬಲವಂತವಾಗಿ ಕಳಿಸಿಬಿಟ್ಟರು. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೆಲ್ಲೂರು ಲಂಬಾಣಿ ತಾಂಡದ 30 ಮಂದಿಯನ್ನೂ ಆವತ್ತೇ ಊರಿಗೆ ಕಳಿಸಿದರು. ಈಗ ಎಲ್ಲರೂ ಇಲ್ಲಿಯೇ ಇದ್ದೇವೆ.

ಸತ್ಯಶೋಧನಾ ಸಮಿತಿಯ ಗಮನಕ್ಕೆ ಬಂದಂಥಹ ಅಂಶಗಳು

1)ಜುಲೈ 22ನೇ ತಾರೀಖಿನ ಭಾನುವಾರದಂದು ಹುಬ್ಬಳ್ಳಿಯಲ್ಲಿ ನಡೆದ ಮಲದಗುಂಡಿಯ ಸಾವಿನ ಪ್ರಕರಣದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ, ಒಳಚರಂಡಿ ನಿಮರ್ಾಣ ಮತ್ತು ನಿರ್ವಹಣೆಯ ಗುತ್ತಿಗೆದಾರರಾದ ಈಗಲ್ ಕನ್ಸ್ ಟ್ರಕ್ಷನ್ ಕಂಪನಿ ಹಾಗೂ ಜಿಲ್ಲಾಡಳಿತದ ಹೊಣೆಗೇಡಿತನ ಮತ್ತು ನಿರ್ಲಕ್ಷ್ಯ ಧೋರಣೆಗೆ ಹಿಡಿದ ಕನ್ನಡಿಯಂತಿದೆ. ಒಳಚರಂಡಿ ನಿರ್ಮಾಣ ಮತ್ತು ನಿರ್ವಹಣೆಗೆ ಒಪ್ಪಂದ ಮಾಡಿಕೊಂಡ ಮಹಾನಗರಪಾಲಿಕೆ ಮತ್ತು ಈಗಲ್ ಕನ್ಸ್ಟ್ರಕ್ಷನ್ ಕಂಪನಿಯ ನಡುವೆ ನಡುವೆ ಆಗಿರುವ ಒಪ್ಪಂದದಂತೆ ಈ ಕೆಲಸದಲ್ಲಿ ಬಾಲಕಾರ್ಮಿಕರನ್ನು ಬಳಸುವಂತಿಲ್ಲ, ಆದರೆ ಈ ಒಪ್ಪಂದವನ್ನು ಉಲ್ಲಂಘಿಸಿರುವ ಕಂಪನಿಯ ಅಧಿಕಾರಿಗಳು ಮೃತ ರಮೇಶ್ ಸಂತೋಷ್ ಸೇರಿದಂತೆ ರೋಣ ತಾಲ್ಲೋಕಿನ ನೆಲ್ಲೂರು ಗ್ರಾಮದ ಶಿವು ಭದ್ರಪ್ಪ ರಾಠೋಡ, ಕುಮ್ಯಾ, ಬಾಲು ಎಂಬ ಅಪ್ರಾಪ್ತ ಯುವಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ.

2)ಒಳಚರಂಡಿ ಸ್ವಚ್ಛತೆಯ ಸಂದರ್ಭದಲ್ಲಿ ಮನುಷ್ಯರನ್ನು ಗುಂಡಿಯೊಳಗೆ ಇಳಿಸುವುದು ಅಕ್ರಮ ಮತ್ತು ಅಪರಾಧವೆಂದು ಕೋರ್ಟ್ ತೀರ್ಪುಗಳು ಇದ್ದಾಗ್ಯೂ ಸಹ, ಸಕ್ಕಿಂಗ್ ಮೆಷೀನ್ ಹೊರತುಪಡಿಸಿ ಈ ಬಗೆಯ ಕೆಲಸವನ್ನು ಮನುಷ್ಯರಿಂದ ಮಾಡಿಸುವುದು ತಪ್ಪೆಂದು 1993ರ ಮಲಹೊರುವ ಪದ್ದತಿ ನಿಷೇಧ ಕಾಯ್ದೆಯು ಹೇಳಿದರೂ ಸಹ ಅದಕ್ಕೆ ಬೆಲೆ ಕೊಡದೆ, ಮನುಷ್ಯರನ್ನು ಮ್ಯಾನ್ ಹೋಲ್ ಒಳಗೆ ಇಳಿಸಿ ಸ್ವಚ್ಛಗೊಳಿಸುವುದನ್ನು ಮುಂದುವರೆಸುವ ಮೂಲಕ ಹುಬ್ಬಳ್ಳಿ ಮಹಾನಗರಪಾಲಿಕೆ ಮತ್ತು ಈಗಲ್ ಕನ್ಸ್ ಟ್ರಕ್ಷನ್ ಕಂಪನಿ ಇಬ್ಬರೂ ಕೋರ್ಟ್ ಆದೇಶ ಹಾಗೂ 1993ರ ಮಲಹೊರುವ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. 

3)ಮ್ಯಾನ್ ಹೋಲ್ ಒಳಗೆ ಮೃತಪಟ್ಟ ರಮೇಶ್ ಮತ್ತು ಸಂತೋಷರ ಸಂಬಂಧಿಕರಿಗೆ ಈಗಲ್ ಕನ್ಸ್ ಟ್ರಕ್ಷನ್ ಕಂಪನಿಯು 5 ಲಕ್ಷರೂಗಳ ಔಪಚಾರಿಕ ಪರಿಹಾರ ಧನವನ್ನು ನೀಡಿದೆ. ಈ ಪರಿಹಾರ ಧನದ ಕುರಿತಂತೆ ಯಾವುದೇ ಅಧಿಕೃತ ಘೋಷಣೆಯನ್ನಾಗಲೀ, ಹೇಳಿಕೆಯನ್ನಾಗಲೀ ಕಂಪನಿ ಮತ್ತು ಮಹಾನಗರಪಾಲಿಕೆ ನೀಡದಿರುವುದು ಮತ್ತು ಕಾಮರ್ಿಕ ನ್ಯಾಯಾಲಯದಲ್ಲಿ ಪ್ರಕರಣವನ್ನು ತಂದು ನ್ಯಾಯಬದ್ಧ ಪರಿಹಾರ ವಿತರಣೆಗೆ ಮುಂದಾಗದೆ ಇರುವುದು ಪ್ರಕರಣವನ್ನು ಹಣ ಕೊಟ್ಟು ಮುಚ್ಚಿ ಹಾಕುವ ಪ್ರಯತ್ನದಂತೆ ಕಾಣುತ್ತದೆ.

4)ಮ್ಯಾನ್ ಹೋಲ್ ಸ್ವಚ್ಛತೆಯ ಸಂದರ್ಭದಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಮನುಷ್ಯರನ್ನು ಗುಂಡಿಯೊಳಗೆ ಇಳಿಸುವಾಗ ಅಗತ್ಯ ಸುರಕ್ಷಾ ಸಲಕರಣಗಳನ್ನು ಬಳಸಿ ಇಳಿಸುವ ಎಚ್ಚರಿಕೆಯಿಲ್ಲದೆ ನಿರ್ಲಕ್ಷ್ಯ ತೋರಿರುವ ಈಗಲ್ ಕನ್ಸ್ ಟ್ರಕ್ಷನ್ ಕಂಪನಿಯ ವಿರುದ್ಧ ನಿರ್ಲಕ್ಷ್ಯದಿಂದ ಸಂಭವಿಸಿದ ಸಾವು, ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ಮಲ ಹೊರುವ ಪದ್ದತಿ ನಿಷೇಧ ಕಾಯ್ದೆ ಮೂರರ ಕೆಳಗೂ ಮೊಕದ್ದಮೆಗಳನ್ನು ಹೂಡಲೇಬೇಕಿದೆ.

5)ಮೃತರ ಹುಟ್ಟೂರಾದ ಗದಗ ಜಿಲ್ಲೆಯ ರೋಣ ತಾಲ್ಲೋಕಿನ ನೆಲ್ಲೂರು ಗ್ರಾಮವು ಮನುಷ್ಯರು ವಾಸಿಸಲು ಕೂಡ ಯೋಗ್ಯವಾಗಿಲ್ಲದೆ ತೀರಾ ಹದಗೆಟ್ಟ ಪರಿಸ್ಥಿತಿಯಲ್ಲಿದ್ದು ಭೂ ರಹಿತ ಕೃಷಿ ಕೂಲಿ ಕಾಮರ್ಿಕರೇ ಹೆಚ್ಚಿರುವ ಹಳ್ಳಿಯಾಗಿದೆ. ಅತ್ಯಂತ ತ್ವರಿತವಾಗಿ ಈ ಗ್ರಾಮದ ಬಡ ಲಂಬಾಣಿ ಕುಟುಂಬಗಳಿಗೆ ಭೂಮಿಯೂ ಸೇರಿದಂತೆ ಇನ್ನಿತರೆ ಕಲ್ಯಾಣಾಧರಿತ ಸಕರ್ಾರಿ ಕಾರ್ಯಕ್ರಮಗಳನ್ನು ತಲುಪಿಸಲೇಬೇಕಾದ ತುರ್ತು ಕಂಡುಬಂದಿದೆ.

ಸತ್ಯಶೋಧನ ಸಮಿತಿಯ ಶಿಫಾರಸ್ಸುಗಳು

1)ಮನುಷ್ಯ ಜೀವರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ತೋರಿ ಇಬ್ಬರು ಯುವಕರ ಸಾವಿಗೆ ಕಾರಣರಾದ ಹುಬ್ಬಳ್ಳಿ ಮಹಾನಗರಪಾಲಿಕೆ ಮತ್ತು ಒಳಚರಂಡಿ ನಿರ್ವಹಣೆಯ ಗುತ್ತಿಗೆ ಪಡೆದಿರುವ ಈಗಲ್ ಕನ್ಸ್ ಟ್ರಕ್ಷನ್ ಕಂಪನಿ ಈರ್ವರ ಮೇಲೂ ಐಪಿಸಿ 304 ಎ ಪ್ರಕಾರ, ದಲಿತ ದೌರ್ಜನ್ಯ ತಡೆ ಕಾಯ್ದೆ, ಮಲಹೊರುವ ಪದ್ದತಿ ನಿಷೇಧ ಕಾಯ್ದೆಯಡಿಯಲ್ಲಿ ಈ ತಕ್ಷಣವೇ ಮೊಕದ್ದಮೆ ದಾಖಲಿಸಿ ಸಂಬಂಧಿಸಿದ ಎರಡೂ ಸಂಸ್ಥೆಗಳ ಅಧಿಕಾರಿಗಳನ್ನು ಬಂಧಿಸಬೇಕು

2)ಒಟ್ಟು ಪ್ರಕರಣವು ವಲಸೆ, ಬಡತನ, ಅಧಿಕಾರಿಗಳ ಬೇಜವಬ್ದಾರಿತನ, ಕಾನೂನುಗಳ ಉಲ್ಲಂಘನೆಯಂತಹ ಸಂಕೀರ್ಣ ವಿಷಯಗಳಿಂದ ಕೂಡಿದ್ದು ಘೋರವಾಗಿ ಕಾನೂನುಗಳನ್ನು ಉಲ್ಲಂಘನೆ ಮಾಡಿರುವ ಪ್ರಕರಣ ಇದಾಗಿರುವುದರಿಂದ ಈ ಕುರಿತು ಶೀಘ್ರವೇ ಒಂದು ತನಿಖೆ ನಡೆಸಲು ಸಿಓಡಿಗೆ ವಹಿಸಬೇಕು

3)ಬಾಲಕಾರ್ಮಿಕ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿರುವ ಈಗಲ್ ಕನ್ಸ್ ಟ್ರಕ್ಷನ್ ಕಂಪನಿಯ ಪರವಾನಗಿಯನ್ನು ರದ್ದುಗೊಳಿಸಬೇಕು ಮತ್ತು ಇದಕ್ಕೆ ಸಹಕರಿಸಿದ ಮಹಾನಗರಪಾಲಿಕೆಯ ಅಧಿಕಾರಿಗಳನ್ನು ಈ ಕೂಡಲೇ ಸಸ್ಪೆಂಡ್ ಮಾಡಬೇಕು

4) ಅನಧಿಕೃತವಾಗಿ 5 ಲಕ್ಷ ಪರಿಹಾರವನ್ನು ನೀಡಿ ಕೈತಳೆದುಕೊಳ್ಳಲು ಯತ್ನಿಸಿರುವ ಈಗಲ್ ಕನ್ಸ್ ಟ್ರಕ್ಷನ್ ಕಂಪನಿಯು ಮೃತ ರಮೇಶ್ ಮತ್ತು ಸಂತೋಷ್ ಎಳೆಯ ವಯಸ್ಸಿನವರಾಗಿರುವುದರಿಂದ ಕಾಮರ್ಿಕ ನ್ಯಾಯಾಲಯದ ಮೂಲಕ ಅಧಿಕೃತವಾಗಿ ಮತ್ತು ಕಾನೂನುಬದ್ದವಾಗಿ ಮೃತ ದುರ್ದೈವಿಗಳ ಕುಟುಂಬಕ್ಕೆ ತಲಾ 50 ಲಕ್ಷರೂಗಳಂತೆ ಒಂದು ಕೋಟಿ ರೂಗಳ ಪರಿಹಾರ ಧನವನ್ನು ಪಾವತಿಸಬೇಕು. 

- ಟಿ.ಕೆ. ದಯಾನಂದ

- ಓಬಳೇಶ್





ಜನ್ಮಾಪಿ ಋಣಿ

ಒಮ್ಮೊಮ್ಮೆ ಎಡವಲಿಕ್ಕೆಂದೇ ಇಡಲ್ಪಟ್ಟ ಗೋಡೆಗಳನ್ನು
ನಾಜೂಕಾಗಿ ದಾಟಿಕೊಂಡು ಇವಳೆಡೆಗೆ ನಡೆಯುತ್ತೇನೆ.
ಅಂಗಾಲಿಗೆ ತೂರಿಕೊಂಡ ಕಾರೆಮುಳ್ಳುಗಳನ್ನು
ಇವಳು ಸೂಕ್ಷ್ಮವಾಗಿ ತೆಗೆದು ನನ್ನ ನೆತ್ತಿ ನೇವರಿಸುತ್ತಾಳೆ.

ಆ ಬೆರಳುಗಳ ಮೃದು ಚಲನೆಗೆ ನನ್ನ ನೆತ್ತಿಯೊಳಗೆ
ಹೂವುಗಳು ಬಿರಿಯುತ್ತವೆ, ನರವ್ಯೂಹ ಜೀವಂತಗೊಳ್ಳುತ್ತದೆ,
ಇಲ್ಲದಿದ್ದಲ್ಲಿ ಇಷ್ಟೊತ್ತಿಗೆ ಆ ಗೋಡೆಗಳು ನನ್ನನ್ನು ಕೊಲ್ಲುತ್ತಿದ್ದವು.
ಇವಳಿಗೂ, ಇವಳ ಬೆರಳುಗಳಿಗೂ ನಾನು ಜನ್ಮಾಪಿ ಋಣಿ.

ಯಾರದ್ದೋ ವ್ಯೂಹ, ಯಾರದ್ದೋ ನಡೆ, ಫಿಕರ್ ನಹೀ..
ಇವಳ ಪ್ರೇಮ ನನ್ನ ನೆತ್ತಿ ಕಾಯ್ದ ಅಷ್ಟೂ ಜನ್ಮಗಳು..
ನಾನವಳಿಗೆ ಹೆತ್ತ ಕೂಸು, ಅವಳು ತಾಯಲ್ಲದ ತಾಯಿ,
ಅಗೋಚರ ಕಣ್ಣುಗಳ ಬಗ್ಗೆ ಇಲ್ಲಿ ಸಹಿಸಲಾಗದ ಅಸಹ್ಯ.

ಇವಳು ನನ್ನ ಅಂಗೈಯ ಮೇಲೆ ಸಂಪಿಗೆಯ ಬೀಜಗಳನ್ನು ನೆಟ್ಟಿದ್ದಾಳೆ,
ಬೊಗಸೆ ಬಿರಿದು, ಮೂಳೆ ಸೀಳಿಕೊಂಡು ಮರವೊಂದು ಹುಟ್ಟಿದೆ..
ಅಂಗೈಯೊಳಗಿನ ಸಂಪಿಗೆಯ ಮರದ ತುಂಬ ಪ್ರೇಮದ ಘಮಲು..
ಅರೆತೆರೆದ ನನ್ನ ಕಣ್ಣುಗಳ ತುಂಬ ಮನುಷ್ಯತ್ಬದ ಕಡು ಅಮಲು..

ಒಂದು ಮೋಡದ ತುಂಡು

ಯಾರಿಗೂ ಕಾಯದೆ ಅದರಪಾಡಿಗದು ಜಿನುಗಿಕೊಳ್ಳುವ
ಮಳೆಯ ಭಾಷೆಯನ್ನೇ ಮರೆತವನ ರೆಪ್ಪೆಯ ಮೇಲೆ
ಇವಳು ಒಂದು ಮೋಡದ ತುಂಡನ್ನೇ ಕಿತ್ತುತಂದು ಇಟ್ಟಿದ್ದಾಳೆ,
ಚೆಲ್ಲಾಡಿ ಹೋಗುತ್ತಿದೆ ಮಳೆ, ನನ್ಕಕಣ್ಣೊಳಗಿನ ಭೂಮಿಯೊಳಗೆ..

ಅವಳ ಕಡುಗೆಂಪು ಮದರಂಗಿ ಪಾದದ ಕಿರುಬೆರಳ ಎದುರಿಗೆ
ತಲೆ ಕಡಿದುಕೊಂಡ ನನ್ನೊಳಗಿನ ರಾಕ್ಷಸ ಮಂಡಿಯೂರಿದ್ದಾನೆ,
ಮದರಂಗಿ ಚಿತ್ರದೊಡತಿಯ ತಣ್ಣನೆಯ ಕಣ್ಣೆದುರು
ಮುಲಾಜೇ ಇಲ್ಲದೆ ಕೇವಲ ಮನುಷ್ಯನೊಬ್ಬ ಹುಟ್ಟುತ್ತಿದ್ದಾನೆ.

ಜೀವ ಕುಸುಮದ ಬೀಜವನ್ನು ಕೈಯಲ್ಲೇ ಹೊತ್ತ ಇವಳು
ಇಕೋ ನಿನ್ನ ಎದೆ ಹರವು, ಪ್ರೇಮವೃಕ್ಷದ ಬೀಜಗಳನ್ನು,
ಒಂದೊಂದೇ ನೆಡುತ್ತೇನೆ, ರೆಪ್ಪೆಯ ಮೇಲಿಟ್ಟ ಮೋಡ ಬಸುರಾದಾಗ
ಬೊಗಸೆ ತುಂಬ ನಿನ್ನ ಎದೆಕಾಡೊಳಗೆ ನೀರು ತರುತ್ತೇನೆ ಅನ್ನುತ್ತಾಳೆ.

ಮಾಯಾ ಮಿಥ್ಯೆಗಳ ಬೆಣಚುಕಲ್ಲುಗಳ ಮೇಲೆ ಇಲ್ಲಿಯತನಕ ನಡೆದ ನಾನು
ಅವಳು ತರುವ ಬೊಗಸೆನೀರಿಗೆ ಜೀವ ಮುಷ್ಠಿಯಲ್ಲಿಡಿದು
ರೆಪ್ಪೆಯನ್ನೂ ಮಿಟುಕಿಸದೆ ಕುಕ್ಕರಗಾಲಲ್ಲಿ ಕುಳಿತಿದ್ದೇನೆ..
ರೆಪ್ಪೆ ಮಿಟುಕಿಸಿದರೆ ಇಟ್ಟ ಮೋಡದ ತುಂಡು ಒಡೆಯುವ ಭಯ.

ಮದರಂಗಿ ಪಾದದೊಡತಿ ತರುವ ಬೊಗಸೆ ನೀರಿನೊಳಗೆ..
ಅವಳು ಒಂದೇ ದಾರದೊಳಗೆ ಪೋಣಿಸಿಟ್ಟ ನನ್ನ ಮೂರಕ್ಷರದ ಬದುಕು
ಮರಳ ಮೇಲಿಂದ ನದಿಗೆ ಕುಪ್ಪಳಿಸಿದ ಮೀನಿನ ಮರಿಯಂತೆ
ಅದರ ಪಾಡಿಗದು ಅವಳನ್ನೇ ನೋಡುತ್ತ, ನೋಡುತ್ತಲೇ ಇದೆಯಲ್ಲ.

ಮಳೆಯ ಭಾಷೆಯನ್ನು ಜೀವಕುಸುಮದೊಳಗೆ ಅದ್ದಿ, ಮದರಂಗಿ ಕಿರುಬೆರಳ
ಪ್ರೇಮವೃಕ್ಷದ ದಾಹಕ್ಕೆ ರೆಪ್ಪೆಯ ಮೇಲಿಟ್ಟ ಮೋಡದಿಂದ ನೀರು ತಂದವಳು
ನನ್ನೊಳಗೆ ಅಂಬೆಗಾಲಿಡುತ್ತಿರುವ ಮನುಷ್ಯ ಕೂಸಿಗೆ ಕುಲಾವಿ ಹೊಲೆಯುತ್ತಾಳೆ.
ಈಗೀಗ ನಾನು ಗೋಡೆ ಹಿಡಿದು ನಿಂತು, ಒಬ್ಬನೇ ನಡೆಯುವುದನ್ನು ಕಲಿತಿದ್ದೇನೆ.

Tuesday, 24 April 2012

ಇನ್ ಟು ದಿ ವೈಲ್ಡ್



ಇನ್ ಟು ದಿ ವೈಲ್ಡ್ ಚಿತ್ರದ ಪೋಸ್ಟರ್
ನನಗೆ ಇರುವ ಲೆಕ್ಕವಿಲ್ಲದಷ್ಟು ತಿಕ್ಕಲೋ ತಿಕ್ಕಲರ ಗೆಳೆಯ ಗುಂಪಿನೊಳಗೆ ಹೀಗೇ ಒಬ್ಬ ಗೆಳೆಯ, ಆಶಯಗಳು, ಆಲೋಚನೆಗಳು, ಬದುಕುವಿಕೆಗಳಲ್ಲಿ ಯದ್ವಾತದ್ವಾ ಸಾಮ್ಯತೆಗಳಿರುವ ಒಬ್ಬ ಗೆಳೆಯ, ಹೆಸರನ್ನು ಪಕ್ಕಕ್ಕಿಡೋಣ, ಆತ ನಾಡಿನ ಪ್ರಖ್ಯಾತ ದಿನಪತ್ರಿಕೆಯೊಂದರಲ್ಲಿ ಸುದ್ದಿ ವರದಿಗಾರ. ಚಾನೆಲ್ಲೊಂದರಲ್ಲಿ ನಿರೂಪಣೆ ಮಾಡುವ ಮನದನ್ನೆ ಪ್ರೇಯಸಿ, ತಲೆಯ ತುಂಬ ಸಮಾನತೆಯ ಮೊಟ್ಟೆಯನ್ನು ಕಾವಿಗೆ ಕೂರಿಸಿಕೊಂಡ ಕಚ್ಛಾ ಕನಸುಗಳ ಗೆಳೆಯ. ಈಗಿಂದೀಗಲೇ ಈ ಸೆಕೆಂಡಿಗೇ ಕೈಗೆ ನಿಲುಕುವ ಏನಾದರೂ ಸರಿಯೇ ಅಡ್ಡಡ್ಡ ನುಂಗಿ ಮುಗಿಸಿಬಿಡಬೇಕೆನ್ನಿಸುವಷ್ಟು ಕುತೂಹಲಕಾರಿ ಮನಸ್ಸಿನವ.. ಫೋನು ಮಾಡಿದಾಗಲೆಲ್ಲ ಇದ್ಯಾಕೋ ಯಾವುದೂ ಸರಿಯಿಲ್ಲ ಮಾರಾಯ ಎಲ್ಲಿಗಾದ್ರೂ ಹೋಗ್ತೀನಿ ನಾನು.. ಹೋಗಿ ಒಂದಷ್ಟು ತಿಂಗಳು ನನ್ನ ಹೆಸರೇ ಮರೆತು ಹೋಗುವಷ್ಟು ಏಕಾಂತದಲ್ಲಿ ಓಡಾಡಿಕೊಂಡು ಹೊಸ ಹೊಸತೇನಾದರೂ ಒಳಗೆ ಬಸಿದುಕೊಂಡು ಬರುತ್ತೇನೆ, ಯಾವು ಯಾವುದನ್ನು ಇದು ಇಂಥದು ಇದು ಅಂಥದು ಅಂತ ಜಗತ್ತು ಹೆಸರಿಟ್ಟು ಕರೆಯುತ್ತದೆಯೋ ಅಂತಹ ವಸ್ತುಗಳ ಜಗತ್ತಿನಾಚೆಗೆ ಹೆಸರಿಲ್ಲದವುಗಳನ್ನು ಹುಡುಕಿಕೊಂಡು ಬರುತ್ತೇನೆ, ಅನ್ನುತ್ತಿದ್ದ. ಬೇಡ ಮಾರಾಯ ಹೇಳೋ ಮಾತು ಕೇಳು ಅಂತ ವಿನಂತಿಸಿ ಆಯಿತು, ಸಮಾಧಾನಿಸಲು ಯತ್ನಿಸಿಯೂ ಆಯಿತು, ಗದರಿದ್ದೂ ಆಯಿತು. ಫೋನು ಮಾಡಿದಾಗಲೆಲ್ಲ ಅದೂ ಇದೂ ಮಾತನಾಡುತ್ತ ಕಟ್ಟಕಡೆಗೆ ನಾನು ಕೆಲಸ ಬಿಡ್ತೇನೆ ಗೊತ್ತುಗುರಿಯಿಲ್ಲದೆ ಅಲೆಯಲು ಹೋಗ್ತೇನೆ ಅಂತ ಮಾತುಕತೆ ಕೊನೆಯಾಗುತ್ತಿತ್ತು. ನೆನ್ನೆಯೇಕೋ ಇವನು ಇವಾಗಲೋ ಅವಾಗಲೋ ಫೋನಿಟ್ಟ ಕೂಡಲೇ ಹೋಗ್ತಾನೆ ದಿಕ್ಕುದೆಸೆಯಿಲ್ಲದ ಪರದೇಸಿ ಅಲೆದಾಟಕ್ಕೆ ಅನ್ನುವುದು ಖಚಿತವಾಯಿತು. ಅದೇ ಸಮಯಕ್ಕೆ ಇವನದ್ದೇ ಮನಸ್ಥಿತಿಯ ಇನ್ ಟು ದಿ ವೈಲ್ಡ್ ಎಂಬ ಅದ್ಭುತ ಕೃತಿ ಮತ್ತು ಸಿನಿಮಾವೂ ಆದ ವಿಶಿಷ್ಟ ಅಲೆಮಾರಿ ಮೆಕಾಂಡ್ಲೆಸನೂ ಆಕಳಿಸಿಕೊಂಡೆದ್ದು ನಿಂತು ನೆನಪಾಗತೊಡಗಿದ.    

ಕ್ರಿಸ್ಟೋಫರ್ ಜಾನ್ಸನ್ ಮೆಕಾಂಡ್ಲೆಸ್ ಸೂಪರ್‌ಟಾಂಪ್ (ಮಹಾ ಅಲೆಮಾರಿ) ಎಂಬ ಅಡ್ಡಹೆಸರನ್ನು ತನಗೆ ತಾನೇ ಇಟ್ಟುಕೊಂಡು ಲಕ್ಷಗಟ್ಟಲೆ ಡಾಲರ್ ಸಂಬಳವನ್ನು ಎಡಗಾಲಲ್ಲಿ ಒದ್ದೆದ್ದು ಅಲಾಸ್ಕಾಗೆ ನಡೆದುಕೊಂಡೇ ಹೋಗ್ತೇನೆ ಎಂದು ನಡೆಯುತ್ತಲೇ ಬದುಕಿದವ. ಅಲಾಸ್ಕಾಗೆ ಹೋಗುವ ನಡಿಗೆಯ ದಾರಿಯಲ್ಲಿ ಸಿಗುವ ಮಣಗಟ್ಟಲೆ ಏಕಾಂತವನ್ನಷ್ಟೇ ನಂಬಿಕೊಂಡು ನಡೆದ ಮೆಕಾಂಡ್ಲೆಸ್, ಇರುವಷ್ಟು ದಿನ ಸರಳವಾಗಿರು, ನಿನ್ನ ಸುತ್ತಮುತ್ತ ಯಾವ ಮನುಷ್ಯ ನಿರ್ಮಿತ ಸ್ಥಾವರಗಳನ್ನು ಕಟ್ಟಿಕೊಳ್ಳಬೇಡ ಎಂಬ ತನ್ನೊಳಗಿನ ಕೂಗಾಟಕ್ಕೆ ಕಿವಿಯನ್ನು ಅಡವಿಟ್ಟವ, ಎಲ್ಲವನ್ನೂ ಬಿಟ್ಟು ಮತ್ತೇನನ್ನೋ ಹುಡುಕುತ್ತ ನಡೆದ ಮೆಕಾಂಡ್ಲೆಸನ ಶವ ಆತನೆ ಬೆತ್ತಲೆಯಾನ ಶುರುಗೊಂಡ ೪ ತಿಂಗಳ ನಂತರ ಒಂದು ಶಾಲಾಮಕ್ಕಳ ಕೆಟ್ಟುನಿಂತ ವಾಹನದೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗುತ್ತದೆ. ಸಾಯುವಾಗ ಆತ ತನಗಿದ್ದ ದೇಹದಾರ್ಡತ್ಯೆಯೆಲ್ಲವನ್ನೂ ಬರೋಬ್ಬರಿ ಕಳೆದುಕೊಂಡು ೩೦ ಕೇಜಿಯಷ್ಟೇ ಆಗಿ ಉಳಿದುಬಿಟ್ಟಿದ್ದ. ಆತನ ಶವದೊಟ್ಟಿಗೆ ಆತನ ಡೈರಿಯೂ ಸಿಕ್ಕಿತು. ಸಾಯುವ ಹಿಂದಿನ ಸೆಕೆಂಡಿನವರೆಗೂ ಮೆಕಾಂಡ್ಲೆಸ್ ತನ್ನ ಡೈರಿಯೊಳಗೆ ತನಗಾದ ಸಂಪೂರ್ಣ ಅನುಭವಗಳೆಲ್ಲವನ್ನೂ ದಾಖಲಿಸಿಯೇ ಸೃಷ್ಟಿಗೆ ಮಾರಿಕೊಂಡಿದ್ದ. ಅದನ್ನು ಆಧರಿಸಿ ಜಾನ್ ಕ್ರಾಕರ್ ಎಂಬ ಅಮೆರಿಕನ್ ಲೇಖಕ ೧೯೯೬ರಲ್ಲಿ ಬರೆದ ಇನ್ ಟು ದಿ ವೈಲ್ಡ್ ಕೃತಿಯು ಬೆಸ್ಟ್ ಸೆಲ್ಲರ್ ಆಫ್ ದಿ ಇಯರ್ ಮುಕುಟಕ್ಕೆ ತಲೆ ಕೊಟ್ಟಿತಷ್ಟೇ ಅಲ್ಲ ಮೆಕಾಂಡ್ಲೆಸ್ ಎಂಬ ಮಹಾ ಅಲೆಮಾರಿಯ ಬಗ್ಗೆ ಅರ್ಧಜಗತ್ತು ಗಕ್ಕನೆ ನಿಂತು ಹಿಂತಿರುಗಿ ನೋಡುವಂತಾಗಿತ್ತು. ಇಷ್ಟಕ್ಕೂ ಮೆಕಾಂಡ್ಲೆಸನ ತಲೆಯೊಳಗೆ ಅಲಾಸ್ಕಾ ಹಿಮಗಡ್ಡೆಗಳ ಮಡುವಿನೊಳಗೆ ಖಾಲಿಜೇಬು ಹೊತ್ತುಕೊಂಡು ಬರಿಗಾಲಲ್ಲೇ ಓಡಬೇಕು ಅಂತ ಅನ್ನಿಸಿತ್ತಾದರೂ ಏಕೆ? ಆತನೇಕೆ ಆ ಮಟ್ಟಿಗಿನ ಅರಾಜಕತೆ ಅಥವಾ ಹೊಸತಿನ ಹುಡುಕಾಟಕ್ಕೆ ಸಿಲುಕಿದ್ದ, ಅವನು ಹುಡುಕಿದ್ದಾದರೂ ಏನು ಕಡೆಗೆ ಪಡಕೊಂಡಿದ್ದು ಏನು ಎಂಬುದನ್ನು ನೋಡಬೇಕೆಂದರೆ ಮೆಕಾಂಡ್ಲೆಸನ ಹೆಜ್ಜೆಗುರುತುಗಳ ಒಳಗೆ ನಮ್ಮ ಬೆತ್ತಲೆ ಪಾದಗಳೂ ಇಳಿಯಬೇಕು. 
ಕೆಲಿಫೋರ್ನಿಯಾದ ಎಲ್ ಸೆಗುಂಡೋ ಎಂಬಲ್ಲಿ ಏರ್ ಕ್ರಾಫ್ಟ್ ಕಂಪೆನಿಯೊಂದರ ಸೆಕ್ರೆಟರಿ ತಾಯಿಗೂ ಆಂಟೆನಾ ತಜ್ಞ ತಂದೆಗೂ ಜನಿಸಿದ ಮೆಕಾಂಡ್ಲೆಸ್ ತನ್ನ ಕಣ್ಣೆದುರೇ ಕಿತ್ತಾಡಿಕೊಂಡು ಬೇರೆಯಾದ ಪೋಷಕರನ್ನು ಬಹಳ ಹತ್ತಿರದಿಂದ ನೋಡಿದವ. ಶಾಲೆಯಲ್ಲಿದ್ದಾಗಲೂ ತನ್ನದೇ ರೆಗ್ಯುಲರ್ ಅಲ್ಲದ ಸಿದ್ಧಾಂತದ ಪ್ರಭಾವಳಿಗೆ ಸಿಲುಕಿದ್ದ. ಶಾಲೆಯ ಗುಡ್ಡಗಾಡು ಓಟವೊಂದರ ತಂಡದ ನಾಯಕನಾಗಿ ತನ್ನ ತಂಡದ ಸದಸ್ಯರಿಗೆ ಜಗತ್ತಿನ ಎಲ್ಲ ಕೆಡುಕುಗಳೂ ನಿಮ್ಮ ಬೆನ್ನು ಬಿದ್ದಿವೆ ಎಂದು ಭಾವಿಸಿಕೊಂಡು ಅದರಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದೇವೆಂದು ಭಾವಿಸಿಕೊಂಡು ಓಡಿ ಎಂದು ಹುರುಪು ತುಂಬುತ್ತಿದ್ದ. ಕಾಲೇಜು ಹಂತಕ್ಕೆ ಬರುವುದರೊಳಗಾಗಿ ತಮ್ಮ ಗೊತ್ತುಗುರಿಯಿಲ್ಲದ ಅಲೆದಾಟಗಳ ಮೂಲಕ ಜಗತ್ತಿನ ಕೃತಕ ಭೌತಿಕ ಪರಿಸರದೊಳಗಿರುವುದು ಏನೇನೂ ಅಲ್ಲ, ಅದರ ತುಂಬ ಮನುಷ್ಯ ನಿರ್ಮಿತ ಶೂನ್ಯವಷ್ಟೇ ತುಂಬಿಕೊಂಡಿದೆ ಎಂಬ ನಿರ್ಧಾರಕ್ಕೆ ತಲುಪಿಯಾಗಿತ್ತು. ೧೯೯೦ರಲ್ಲಿ ಪದವಿ ಮುಗಿಸುವ ಹೊತ್ತಿಗೆ ಮೆಕಾಂಡ್ಲೆಸ್ ಕಟ್ಟಲ್ಪಟ್ಟವುಗಳ ಬಗ್ಗೆ, ಸಮುದಾಯದೊಳಗಿನ ಅನಗತ್ಯ ಶಿಸ್ತುಗಳ ಬಗ್ಗೆ, ಕೆಲಸ, ಉದ್ಯೋಗ, ಕಛೇರಿ, ಮನೆ, ಕುಟುಂಬ, ಸಂಬಳ, ಪ್ರವಾಸ, ಗಂಡಹೆಂಡಿರ ಗಂಟುಪಾಡು ಸಂಸಾರ, ಸಮಾಜದ ಕಟ್ಟುಪಾಡುಗಳು, ರಿವಾಜುರೀತಿಗಳೆಲ್ಲವುಗಳಿಂದ ರೋಸೆದ್ದು ಹೋದಂತೆ ಇವ್ಯಾವುದೂ ಬೇಡವೆಂದು ಒಂದು ದಿನ ಅಲಾಸ್ಕಾ ಹಿಮಪ್ರದೇಶಕ್ಕೆ ನಡೆದುಹೋಗುತ್ತೇನೆಂದು ಎಲ್ಲವನ್ನೂ ಬಿಟ್ಟು ನಡೆಯತೊಡಗುತ್ತಾನೆ.

ಜೇಬಿನೊಳಗಿನ ದುಡ್ಡು ಮತ್ತು ಎಟಿಎಂ ಕಾರ್ಡುಗಳೂ ಸಹ ತನ್ನನ್ನು ನಿಯಂತ್ರಿಸಲು ಯತ್ನಿಸುತ್ತಿವೆ ಎಂದು ಭಯಗೊಳ್ಳುವ ಮೆಕಾಂಡ್ಲೆಸ್ ಅವೆರಡನ್ನೂ ಹರಿದು ಬೆಂಕಿಯಿಟ್ಟು ಬೆತ್ತಲೆ ಹೆಜ್ಜೆಗಳಿತ್ತ ಅಲಾಸ್ಕಾ ದಾರಿಯಲ್ಲಿನ ದುರ್ಗಮತೆಯತ್ತ ಪ್ರಕೃತಿಯನ್ನಷ್ಟೇ ನಂಬಿಕೊಂಡು ನಡೆಯಲು ಶುರುವಿಡುತ್ತಾನೆ.. ದಿಕ್ಕು ಸೂಚಿಸುವ ದಿಕ್ಸೂಚಿಯನ್ನೂ ಮುಟ್ಟದೆ ದೂರವಿಡುವ ಆತ ಅಲಾಸ್ಕಾದ ದಾರಿಯನ್ನೂ ತಾನೇ ಕಂಡುಕೊಳ್ಳುತ್ತ ನಡೆಯುತ್ತ ನಡೆಯುತ್ತ ತನ್ನಂತಹವರೇ ಬಹಳಷ್ಟು ಜನರನ್ನು ಸಂಧಿಸುತ್ತ ಅವರೊಡನೆ ಹರಟುತ್ತ, ಹುಡುಗಿಯೊಬ್ಬಳೊಟ್ಟಿಗೆ ಸೃಷ್ಟಿಯ ಪರಮೋದ್ದೇಶವಾದ ದೈಹಿಕಸಂಗಮಕ್ಕೂ ಒಳಗಾಗಿ, ಕಟ್ಟುಪಾಡುಗಳನ್ನು ಬೇಡುವ ಅವಳ ಪ್ರೇಮವನ್ನೂ ತ್ಯಜಿಸಿ, ನೀರು ಕಂಡಲ್ಲಿ ಕುಡಿಯುತ್ತ ಕೈಗೆ ಸಿಕ್ಕಿದ್ದನ್ನು ತಿಂದುಕೊಂಡು ಕೊನೆಗೆ ಡೆನಾಲಿ ನ್ಯಾಷನಲ್ ಪಾರ್ಕ್ ಬಳಿ ಕೆಟ್ಟು ನಿಂತಿದ್ದ ಹಳೆಯ ಶಾಲಾ ವಾಹನದೊಳಗೆ ತನ್ನ ಗುಡಾರವನ್ನು ಕಂಡುಕೊಳ್ಳುತ್ತಾನೆ. ಹತ್ತು ಪೌಂಡ್ ನಷ್ಟಿರುವ ಅಕ್ಕಿ, ಅಲಾಸ್ಕಾ ಸುತ್ತಮುತ್ತಲಿನ ಮರಗಿಡಗಳ ಕುರಿತ ಒಂದು ಮಾರ್ಗದರ್ಶಿ ಪುಸ್ತಕ ಮತ್ತು ಒಂದು ಬಂದೂಕಷ್ಟೇ ಆತನ ಒಂಟಿ ಸಂಸಾರಕ್ಕೆ ಪ್ರವೇಶ ಪಡೆದ ಅಮೂಲ್ಯ ವಸ್ತುಗಳಾಗಿರುತ್ತವೆ. ಕಣ್ಣಿಗೆ ಕಂಡ ಹಕ್ಕುಗಳನ್ನೂ ಸಣ್ಣಪುಟ್ಟ ಪ್ರಾಣಿಗಳನ್ನೂ ಬಂದೂಕಿನಿಂದ ಕೊಂದು ತನ್ನ ಆಹಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುವ ಮೆಕಾಂಡ್ಲೆಸ್ ಒಮ್ಮೆ ಹಿಮಗಾಡಿನಲ್ಲಿ ಸಾಮಾನ್ಯವಾಗಿರುವ ಭಾರೀಗಾತ್ರದ ಹಿಮಗಡವೆಯೊಂದನ್ನು ಹೊಡೆದುರುಳಿಸುತ್ತಾನೆ, ಆದರೆ ಅದರ ಮಾಂಸವನ್ನು ಮುಂದಿನ ದಿನಕ್ಕಾಗಿ ಕಾಪಿಡಲು ಯತ್ನಿಸಿ ಸೋಲುವ ಆತ ಇಲ್ಲಿಯೂ ತನಗೆ ನಾಳೆಯ ಆಸೆಗಳೇಕೆ ಹುಟ್ಟುತ್ತಿವೆ ಎಂದು ಅಚ್ಚರಿಗೀಡಾಗುತ್ತಾನೆ.
ತನ್ನ ಆಹಾರದ ಅವಶ್ಯಕತೆಗಷ್ಟೇ ಮಾಂಸ ಕೊಡುವ ಸಣ್ಣಪುಟ್ಟ ಪ್ರಾಣಿಗಳನ್ನು ಕೊಂದು ಬೇಯಿಸಿ ತಿನ್ನುತ್ತ ಅದೇ ಕೆಟ್ಟುನಿಂತ ಶಾಲಾ ಬಸ್ಸಿನೊಳಗೆ ೩ ತಿಂಗಳು ಕಳೆದುಬಿಡುತ್ತಾನೆ. ತನ್ನ ಮಲಗುವ ಚೀಲದೊಳಗೆ ತೂರಿಕೊಂಡು ಒಬ್ಬೊಬ್ಬನೇ ತಾನು ಕಂಡನುಭವಿಸಿದ ಪ್ರಕೃತಿಯ ವಿಸ್ಮಯಗಳನ್ನು ಧ್ಯಾನಿಸುತ್ತ ಒಬ್ಬನೇ ಬದುಕಿಬಿಡುವ ಮೆಕಾಂಡ್ಲೆಸ್ ಒಂದು ದಿನ ಕುತೂಹಲಕ್ಕೆಂದು ತಿಂದ ಹೆಡಿಸಾರಂ ಮೆಕೆಂಝೀ ಕಾಯಿಯ ಕಾರಣಕ್ಕೆ ಅಸ್ವಸ್ಥತೆಗೆ ಬೀಳುತ್ತಾನೆ. ಮೊದಲಿಗೆ ಇದೇಕೆಂದು ಗೊತ್ತಾಗದೆ ತನ್ನ ಬಳಿಯಿದ್ದ ಮರಗಿಡ, ಸಸಿಬಳ್ಳಿಗಳ ಪುಸ್ತಕವನ್ನು ಹುಡುಕಿದಾಗ ಮೆಕೆಂಝೀ ವಿಷಕಾರಕ ಅಂಶವುಳ್ಳ ಕಾಯಿಯೆಂಬುದು ತಿಳಿಯುತ್ತದೆ. ಮೇಲೆ ಎದ್ದೇಳಾಗದಷ್ಟು ನಿತ್ರಾಣನಾಗುವ ಮೆಕಾಂಡ್ಲೆಸ್ ಆ ಸ್ಥಿತಿಯಲ್ಲೂ ಡೈರಿ ಬರೆಯುವುದನ್ನು ನಿಲ್ಲಿಸುವುದಿಲ್ಲ. ಬರೆದೂ ಬರೆದೂ ಬರೆದೂ.. ಒಂದು ದಿನ ಮೆಕಾಂಡ್ಲೆಸನ ಸಾವೂ ಬಂದು ಅವನೆದೆಯ ಮೇಲೆ ಕುಳಿತು ಆತನ ಜೀವ ತೆಗೆಯುತ್ತದೆ. ಪ್ರೀತಿಗೂ ಮೊದಲು, ದುಡ್ಡು ನಂಬಿಕೆ ಖ್ಯಾತಿ ರಮ್ಯ ರೋಚಕತೆಗೂ ಮೊದಲು.. ನನಗೆ ಸತ್ಯವನ್ನು ಕಂಡುಕೊಳ್ಳಬೇಕಿದೆಯೆಂದು ಅಲಾಸ್ಕಾದೆಡೆಗೆ ನಡೆದ ಮೆಕಾಂಡ್ಲೆಸನ ಹೆಣವನ್ನು ಎರಡು ವಾರಗಳವರೆಗೆ ಜಗತ್ತಿನ ಯಾವ ಜೀವವೂ ಲೆಕ್ಕಕ್ಕೆ ತಂದುಕೊಂಡಿರಲಿಲ್ಲ.

ಮನುಷ್ಯ ನಿರ್ಮಿತ ಸಮಾಜ ಮತ್ತು ಸಮಾಜದೊಳಗಿನ ಇಂತಿಷ್ಟೇ ಎಂದು ಗಡಿಗಳನ್ನು ಹೇರುವ ವ್ಯವಸ್ಥೆಯ ವಿರುದ್ದ ಅನಾರ್ಕೋ ಪ್ರಿಮಿಟಿವಿಸಂ ಬಗೆಯ ಧೋರಣೆಯ ಮೂಲಕ ತನ್ನದೇ ಬದುಕುವಿಕೆಯನ್ನು ಕಟ್ಟಹೊರಟು ಕೊನೆಗೆ ಯಾವುದನ್ನು ಹುಡುಕುತ್ತ ಹೊರಟನೋ ಅದರಿಂದಲೇ ಕೊಲೆಯಾದ ಮೆಕಾಂಡ್ಲೆಸನ ಅನುಭವ ಗಾಥೆಗಳನ್ನು ಆಧರಿಸಿದ ಇನ್ ಟು ದಿ ವೈಲ್ಡ್ ಸಿನಿಮಾವನ್ನು ನಿರ್ದೇಶಿಸಿದ್ದು ಖ್ಯಾತ ನಟ ಸೀನ್‌ಪೆನ್. ಎರಡನೆಯ ಮಹಾಯುದ್ಧದ ಕಾಲಘಟ್ಟದಲ್ಲಿ ಸೈನಿಕರಾಗಿ ಬೇರೆ ಬೇರೆ ದೇಶಗಳ ಸೈನಿಕರನ್ನು ತಮ್ಮದಲ್ಲದ ಕಾರಣಗಳಿಗಾಗಿ ಕೊಂದುಹಾಕಿದ ಪಾಪಪ್ರಜ್ಞೆಯೊಳಗೆ ಹುಟ್ಟಿದ ವಿಶಿಷ್ಟ ರೀತಿಯ ಬದುಕುವಿಕೆಯೊಳಗೆ ಜಾರಿಕೊಂಡ ಹಿಪ್ಪಿಗಳಿಗೂ, ಸಮಾಜ ಮತ್ತದರ ನಾಜೂಕಿನ ಪೊರೆ ಹೊತ್ತ ಕ್ರೂರ ಮನಸ್ಥಿತಿಗಳ ವಿರುದ್ಧ ಪರ್ಯಾಯ ಬದುಕುವಿಕೆ ಶೈಲಿಯಲ್ಲಿಯೇ ಬಂಡೆದ್ದ ಮೆಕಾಂಡ್ಲೆಸನ ದುರಂತ ಸಾವಿಗೂ ಸಾಮ್ಯತೆಗಳಿವೆ. ಕಟ್ಟಿದ್ದನ್ನೇ ಬದುಕು, ಗೋಡೆಗಳನ್ನು ದಾಟದಿರು, ಆಲೋಚನೆಯೂ ಸೇರಿದಂತೆ ಎಲ್ಲವಕ್ಕೂ ಮಿತಿಯ ಗೆರೆಯನ್ನೆಳೆದುಕೊಂಡು ಬದುಕು ಎಂಬ ಶಾಸನಗಳನ್ನು ಹೊರಡಿಸುವ ಸಮಾಜ ಮತ್ತು ಅದರ ಹಿಂದಿನ ಶಕ್ತಿಗಳ ವಿರುದ್ಧ ಎಲ್ಲರೊಳಗೂ ಒಂದು ಅಸಮಾಧಾನದ ಹೊಗೆ ಆಡುತ್ತಲೇ ಇರುತ್ತದೆ. ಆದರೆ ಆ ಹೊಗೆಯನ್ನೂದಿ ಬೆಂಕಿ ಮಾಡಿ ಆ ಬೆಂಕಿಯಲ್ಲಿ ನಿರ್ಬಂಧಗಳೆಲ್ಲವನ್ನೂ ಸುಟ್ಟು ಹೊಸತಾದ ಸ್ವಚ್ಛಬೂದಿಯನ್ನು ಸೃಜಿಸುವ ಮನಸ್ಥಿತಿಗೆ ನಾವ್ಯಾರೂ ತಲೆಕೊಡಲು ಹೋಗುವುದಿಲ್ಲ. ಇಡೀ ಇನ್ ಟು ದಿ ವೈಲ್ಡ್ ಚಿತ್ರವು ಮೆಕಾಂಡ್ಲೆಸನ ಹೊಸತರ ಹುಡುಕಾಟ ಮತ್ತು ಅಸ್ತಿತ್ವದಲ್ಲಿರುವ ಮತ್ತು ಕೈಗಳಿಗೆ ಹಗ್ಗ ಬಿಗಿಯುವ ಆಧುನಿಕ ಭೌತಿಕತೆ ಮತ್ತು ಕನ್‌ಸ್ಯೂಮರಿಸಂ ಆಧರಿಸಿದ ಶಿಸ್ತಿನ ಬದುಕನ್ನು ತಿರಸ್ಕರಿಸುವ ಆತನ ಅಸಹನೆಯನ್ನು ಕಟ್ಟಿಕೊಡುವ ಅಪರೂಪದ ಚಿತ್ರ.
ಯಾವುದೆಲ್ಲವನ್ನೂ ತ್ಯಜಿಸಿ ಮತ್ತೇನನ್ನೋ ಹುಡುಕುತ್ತ ಹೋಗುವ ಮೆಕಾಂಡ್ಲೆಸನ ಬೆತ್ತಲೆಕಾಲಿನ ನಡಿಗೆ ತಾನು ಹುಡುಕಿ ಹೊರಟದ್ದರ ಮೂಲಕವೇ ಜೀವಸಮೇತ ಅವಸಾನಗೊಳ್ಳುವ ಬಗೆಯೂ ದುರಂತವೇ. ಮನುಷ್ಯನ ಬದುಕು ಪೂರ್ವ ನಿರ್ಮಿತ ಕಾರಣಗಳಿಂದ ಆಳಲ್ಪಡುತ್ತಿದೆ ಎಂದಾದಲ್ಲಿ ಬದುಕಿನ ಎಲ್ಲ ಸಾಧ್ಯತೆಗಳೂ ಅಲ್ಲಿಗೆ ನಾಶಗೊಳ್ಳುತ್ತವೆ ಎಂಬುದನ್ನು ನಂಬಿದ್ದ ಮೆಕಾಂಡ್ಲೆಸನ ಪಾತ್ರದೊಳಗೆ ನಟ ಎಮಿಲಿ ಹರ್ಶ್ ಸಲೀಸಾಗಿ ಲೀನವಾಗಿದ್ದಾನೆ. ಆತನ ಕೆಲವು ದಿನಗಳ ಪ್ರೇಮದೊಳಗೆ ಸಿಲುಕುವ ಹುಡುಗಿಯಾಗಿ ಟ್ವಿಲೈಟ್ ಸಾಗಾ ಸರಣಿ ಚಿತ್ರಗಳ ಮೂಲಕ ಮನೆಮಾತಾದ ನಾಯಕಿ ಬೆಲ್ಲಾಸ್ವಾನ್ ನಟಿಸಿದ್ದಾಳೆ. ಜಾನ್ ಕ್ರಾಕರನ ಕೃತಿ ಓದುವಾಗಿನ ಆಪ್ತತೆ ಮತ್ತು ಮೆಕಾಂಡ್ಲೆಸನ ಸಾಮೀಪ್ಯ ಸಿನಿಮಾದೊಳಗೆ ಅಷ್ಟಾಗಿ ತೆರೆದುಕೊಳ್ಳದಿರುವುದು ಕೃತಿ ಮತ್ತು ದೃಶ್ಯ ಮಾಧ್ಯಮದ ಎಂದಿನ ತಿಕ್ಕಾಟ. ನಮ್ಮೊಳಗಿನ ಕೊಲೆಯಾದ ಅಲೆಮಾರಿ ಮನೋಸ್ಥಿತಿಗೆ ಕೈಕಾಲು ಮೊಳೆತಂತೆ ಬದುಕಿದ್ದ ಜಾನ್ ಕ್ರಿಸ್ಟೋಫರ್ ಮೆಕಾಂಡ್ಲೆಸ್ ಹಲವರಿಗೆ ಮಾದರಿಯೂ, ಶತ್ರುವೂ ಆಗಿ ಇನ್ನಾದರೂ ಕಾಡುವಷ್ಟು ತನಗೆಂದೇ ಬದುಕಿದ್ದು ಅದು ಕೃತಿಯಾಗಿ, ಸಿನಿಮಾರೂಪ ತಳೆದು ಕೋಟ್ಯಂತರ ಜನರನ್ನು ತಲುಪಿದ್ದು ಮತ್ತದೇ ಮೆಕಾಂಡ್ಲೆಸ್ ಪ್ರತಿಭಟಿಸುತ್ತಿದ್ದ ಗ್ರಾಹಕ ಸಂಸ್ಕೃತಿ ಮತ್ತು ಕಟ್ಟಲ್ಪಟ್ಟ ಸಮುದಾಯಿಕ ಸಂರಚನೆಗಳ ಮೂಲಕವೇ ಎಂಬುದು ಅನಿವಾರ್ಯವಾಗಿ ಒಪ್ಪಬೇಕಾದ ಸಂಗತಿ.

ಚಿತ್ರನಿರ್ದೇಶಕ ಸೀನ್ ಪೆನ್ಈಗ ಗೆಳೆಯನ ವಿಷಯಕ್ಕೆ ಬರೋಣ. ಕಾಲಿಗೆ ಟೈರು ಕಟ್ಟಿಕೊಂಡು ಇಳಿಜಾರು ಕಂಡ ಕಡೆಯೆಲ್ಲ ಜಾರಲಿಕ್ಕೆ ಹೊರಟಿರುವ ಗೆಳೆಯನ ಹೊಸತನದ ಹುಡುಕುವಿಕೆಗೆ ಮತ್ತು ಅನೂಹ್ಯತೆಗಳನ್ನು ತನ್ನನುಭವದ ಕುಡಿಕೆಕೊಳಗೆ ಬಸಿದುಕೊಳ್ಳಲು ಇರುವುದೆಲ್ಲವನ್ನೂ ಬಿಟ್ಟು ಹೊರಟಿರುವ ಗೆಳೆಯನಿಗೆ ಅಲೆಮಾರಿ ಮೆಕಾಂಡ್ಲೆಸನ ಮನಸ್ಥಿತಿ ವರ್ಗಾವಣೆಗೊಂಡಿರಬಹುದೇ? ಇದು ಇಷ್ಟೇ ಎಂದು ಹೇಳಿ ಕೊಟ್ಟಿರುವ ಜಗತ್ತಿನಲ್ಲಿ ನಾವುಗಳು ಕೈಕಾಲು ನಾಲಿಗೆ ತುಟಿ ಎದೆ ಮನಸ್ಸುಗಳೆಲ್ಲವನ್ನೂ ಬಿಗಿಯಾಗಿ ಕಟ್ಟಿಹಾಕಿಕೊಂಡು ಕುಳಿತಿರುವಾಗ ಈ ಗೆಳೆಯನೊಬ್ಬನಾದರೂ ಅದರಿಂದ ಬಚಾವಾಗಿ ಒಂದಷ್ಟು ದಿನ ಬದುಕಿಕೊಂಡು ಬರುವುದಾದರೆ ಯಾರಿಗೇನೂ ನಷ್ಟವಿಲ್ಲವಲ್ಲ. ಗೆಳೆಯನ ಟೈರು ಕಟ್ಟಿಕೊಂಡ ಕಾಲಿನೆದುರು ಏರುದಿಬ್ಬಗಳು ಎದುರಾಗದಿರಲಿ, ಬೆತ್ತಲೆಹೆಜ್ಜೆಗಳ ಯಾನದ ಯಾವತ್ತಾದರೊಂದು ದಿನ ಮೈಮುರಿದು ಎದ್ದು ನಿಂತ ಹಸಿವಿನ ಸಮಯದಲ್ಲಿ ಅವನಿಗೆ ಹತ್ತಿರದಲ್ಲೆಲ್ಲೂ ಹೆಡಿಸಾರಂ ಮೆಕೆಂಝೀ ಜಾತಿಯ ಮರದ ಕಾಯಿಗಳ್ಯಾವುವೂ ಸಿಗದಿರಲಿ.

Monday, 16 April 2012

ಕಟ್ಟೆಚ್ಚರ: ನ್ಯೂಸ್ ಚಾನಲ್‌ಗಳಲ್ಲಿ ಈಗ ಸೆಕ್ಸ್ ವಿಡಿಯೋಗಳು ಪ್ರಸಾರವಾಗುತ್ತವೆ...


"ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರಿಗೊಂದು ಬಹಿರಂಗ ಪತ್ರ "

ನಮಸ್ಕಾರ,

ಮೊದಲಿಗೆ ಒಂದು ಪತ್ರಿಕೆ ಹಾಗೂ ಟಿವಿವಾಹಿನಿಯೊಂದರ ಸಂಪಾದಕ ಎರಡೂ ಆಗಿರುವ ವಿಶ್ವೇಶ್ವರ ಭಟ್ಟರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು. ಇಷ್ಟು ದಿವಸ ಅಶ್ಲೀಲ ಚಿತ್ರಗಳೆಂದರೆ ನಗರಪ್ರದೇಶಗಳ ಹೊರವಲಯದ ಮತ್ತು ಸಣ್ಣಪುಟ್ಟ ಊರುಗಳ ಟೆಂಟುಗಳಲ್ಲಿ ಬೆಳಗಿನ ಪ್ರದರ್ಶನ ಕಾಣುತ್ತಿದ್ದ ಹಸಿಬಿಸಿ ಮಲಯಾಳಂ ಚಿತ್ರಗಳೆಂದೇ ಪ್ರಚಲಿತದಲ್ಲಿತ್ತು. ಆದರೀಗ ಅಶ್ಲೀಲ ಚಿತ್ರಗಳನ್ನು ನೋಡಬೇಕೆಂದರೆ ಅಷ್ಟುದೂರ ಮುಖಮರೆಸಿಕೊಂಡು ಹೋಗುವ ಅಗತ್ಯವಿಲ್ಲ ಸುವರ್ಣನ್ಯೂಸ್ ಚಾನೆಲ್ ನೋಡಿದರೆ ಸಾಕು ಎಂಬ ಧೈರ್ಯವನ್ನು ರಾಜ್ಯದ ಜನರಿಗೆ ರವಾನಿಸಿದ್ದಕ್ಕಾಗಿ ನಿಮ್ಮನ್ನು ನಿಜಕ್ಕೂ ಅಭಿನಂದಿಸಬೇಕು.

ಎರಡನೆಯದಾಗಿ ಮಾಧ್ಯಮರಂಗದ ಆಳ ಅಗಲಗಳು ಮತ್ತು ಮಾಧ್ಯಮಲೋಕದಲ್ಲಿ ಯಾವುದು ಸರಿ ಯಾವುದು ಸರಿಯಲ್ಲ, ನೈತಿಕತೆ ಮತ್ತು ಅನೈತಿಕತೆಯ ನಡುವಿನ ತೆಳುಗೆರೆಗಳನ್ನು ಪುಂಖಾನುಪುಂಖವಾಗಿ ಬರೆದಿದ್ದೀರಿ, ಬರೆಯುತ್ತಲೂ ಇದ್ದೀರಿ. ಅವುಗಳೆಲ್ಲವನ್ನೂ ನಾವುಗಳೂ ಓದಿದ್ದೇವೆ. ಈಗ ಒಂದು ಪ್ರಶ್ನೆಯೆದ್ದಿದ್ದೆ. ಇಷ್ಟೆಲ್ಲವನ್ನೂ ಬರೆಯುವ ತಾವು, ಇಷ್ಟೆಲ್ಲ ಜಗತ್ತಿನ ವಿವಿಧ ಪತ್ರಿಕೋದ್ಯಮಿಗಳು ಮತ್ತು ಸಾಹಸಿಗ ಪತ್ರಕರ್ತರ ಬಗ್ಗೆ ದಿವೀನಾಗಿ ಬರೆದುಕೊಳ್ಳುವ ನೈತಿಕತೆ ಇವತ್ತು ಸಂತೆಯಲ್ಲಿ ಅರೆಬೆತ್ತಲಾಗಿ ನಿಂತುಕೊಂಡಿದೆ. ಇದೇ ಮಾರ್ಚ್ ೨೯ರ ರಾತ್ರಿ ೧೦ ಗಂಟೆಗೆ ಪ್ರಸಾರವಾದ ಕಟ್ಟೆಚ್ಚರ ಕಾರ್ಯಕ್ರಮದಲ್ಲಿ ತಾವು ಇಲ್ಲಿಯವರೆಗೂ ಹೇಳಿಕೊಂಡು ಬಂದ ಮಾಧ್ಯಮ ನೈತಿಕತೆ ಮತ್ತು ಸಂಹಿತೆಗಳೆರಡರ ಮುಖಕ್ಕೂ ಡಾಂಬರು ಬಳಿಯುವಂತಹ ಒಂದು ಕಂತು ಪ್ರಸಾರವಾಯಿತು.

ಶಿವಮೊಗ್ಗದ ಕಾಲೇಜು ಯುವತಿಯೊಬ್ಬಳು ತನ್ನ ಪ್ರಿಯಕರನೊಡನೆ ರತಿಕ್ರೀಡೆಯಲ್ಲಿ ತೊಡಗಿದ್ದ ಅಸಹ್ಯ ಹುಟ್ಟಿಸುವ ವಿಡಿಯೋದೃಶ್ಯಗಳು ಯಾವ ಎಡಿಟಿಂಗೂ ಇಲ್ಲದಂತೆ ಹಸಿಹಸಿಯಾಗಿಯೇ ಪ್ರಸಾರವಾಯಿತು. (ವಿಡಿಯೋ ಮಬ್ಬಾಗಿದ್ದರೂ ಆ ಕ್ರಿಯೆಯ ಎಲ್ಲ ಹಂತಗಳೂ ಸುಸ್ಪಷ್ಟವಾಗಿ ಕಾಣಿಸುತ್ತಿದ್ದುದು ನೋಡಿದ ಜನರಿಗೆ ಗೊತ್ತು) ಈ ವಿಡಿಯೋ ತುಣುಕುಗಳು ಶಿವಮೊಗ್ಗೆಯ ಪಡ್ಡೆಹುಡುಗರ ಮೊಬೈಲುಗಳಲ್ಲಿ ಹರಿದಾಡುವುದನ್ನು ನೋಡಿದ ನಿಮ್ಮ ಶಿವಮೊಗ್ಗ ಜಿಲ್ಲಾ ವರದಿಗಾರ ಆ ವಿಡಿಯೋ ಸಂಪಾದಿಸಿ ಅದನ್ನು ಇರುವ ಹಾಗೆಯೇ ಸುವರ್ಣನ್ಯೂಸ್ ಕಚೇರಿಗೆ ತಲುಪಿಸಿದ್ದಾರೆ. ಪ್ರೇಮಸಲ್ಲಾಪದ ವಿಡಿಯೋ ಸೋರಿಕೆಯಾಗಿ ಊರಿನವರ ಮೊಬೈಲಿನಲ್ಲಿ ಹರಿದಾಡುತ್ತಿರುವುದು ಯುವತಿಯ ಗಮನಕ್ಕೂ ಬಂದು ಮಾನಕ್ಕೆ ಅಂಜಿದ ಆಕೆ ಆತ್ಮಹತ್ಯೆಗೆ ಯತ್ನಿಸಿ ಪರವೂರಿನ ಆಸ್ಪತ್ರೆಯೊಂದರಲ್ಲಿ ಸಾವುಬದುಕಿನ ನಡುವೆ ಹೋರಾಡಿ ಜೀವವುಳಿಸಿಕೊಂಡಿದ್ದಾಳೆ. ಪ್ರಸ್ತುತ ಬೆಂಗಳೂರಿನ ಆಕೆಯ ಸಂಬಂಧಿಯೊಬ್ಬರ ಮನೆಯಲ್ಲಿದ್ದಾಳೆ. ಇದು ಪ್ರಸಾರವಾದ ಕಟ್ಟೆಚ್ಚರ ಕಾರ್ಯಕ್ರಮದ ಹೂರಣ.

ಇಂತಹದ್ದೊಂದು ಸೂಕ್ಷ್ಮ ವಿಷಯವನ್ನು ಕಾರ್ಯಕ್ರಮವಾಗಿ ಬದಲಾಯಿಸುವಾಗ ಕಟ್ಟೆಚ್ಚರ ಕಾರ್ಯಕ್ರಮ ತಂಡ ಬಹಳಷ್ಟು ಎಡವಟ್ಟುಗಳನ್ನು ಮಾಡಿಕೊಂಡಿದೆ. ಅವಾಂತರಕ್ಕೆ ಮಾಡಿಕೊಂಡ ಯುವತಿಯ ಫೋಟೋವನ್ನು ಕಣ್ಣು ಮಾತ್ರ ಮರೆಮಾಡಿ ಪ್ರಸಾರವಾಯಿತು, ಆಕೆ ತನ್ನ ಪ್ರಿಯಕರನೊಡನೆ ನಡೆಸಿದ ಸಲ್ಲಾಪದ ಉದ್ರೇಕಕಾರಿ ತುಣುಕುಗಳು ಹೇಗಿವೆಯೋ ಹಾಗೆಯೇ ಪ್ರಸಾರವಾಯಿತು, ಜೊತೆಗೆ ಆಕೆ ಈಗ ಉಳಿದುಕೊಂಡಿರುವ ಬೆಂಗಳೂರಿನ ಸಂಬಂಧಿಗಳ ಮನೆಯ ವಿಳಾಸವನ್ನೂ ಪ್ರಸಾರ ಮಾಡಲಾಯಿತು. ಆಕೆಯ ಸಹಪಾಠಿಗಳನ್ನು ಸಂದರ್ಶನದ ಹೆಸರಿನಲ್ಲಿ ಮಾತನಾಡಿಸಲಾಯಿತು. (ಇವರ ಮುಖವೂ ಸಹ ಮಬ್ಬು ಮಾಡಲಾಗಿಲ್ಲ) ಇಷ್ಟೆಲ್ಲ ವಿವರಗಳನ್ನು ಸೂಕ್ಷ್ಮ ವಿಷಯವೊಂದರ ಮೇಲಿನ ಕಾರ್ಯಕ್ರಮದಲ್ಲಿ ಆಕೆಯ ವಿಳಾಸದ ಸಮೇತ ಹರಿದು ಹಂಚಲಾಯಿತು. ಒಟ್ಟು ಕಾರ್ಯಕ್ರಮವೇ ಆಕೆ ಮಾಡಿದ ಎಡವಟ್ಟಿಗೆ ಆಕೆಯ ಪೋಷಕರನ್ನು ನಡುರಸ್ತೆಯಲ್ಲಿ ಮಾನಕಳೆಯುವುದಕ್ಕಾಗಿಯೇ ರೂಪಿಸಿದಂತಿತ್ತು.

ಸರಿ ಆಕೆ ಮಾಡಿದ್ದು ಕ್ಷಮೆಗೆ ಅರ್ಹವಲ್ಲದ್ದೇ ಇರಬಹುದು, ಆದರೆ ಆಕೆಯ ಹೆತ್ತವರು, ಅಣ್ಣತಮ್ಮಂದಿರು, ಅಕ್ಕತಂಗಿಯರು, ನೆರೆಹೊರೆಯವರು, ಸಂಬಂಧಿಗಳು, ಸಹಪಾಠಿಗಳು ಇವರೆಲ್ಲರೂ ಕಟ್ಟೆಚ್ಚರ ಕಾರ್ಯಕ್ರಮದ ಕಾರಣಕ್ಕೆ, ಇಂಥಹ ಹುಡುಗಿಗೆ ಸಂಬಂಧಿಸಿದವರು ಎಂದು ಸಮಾಜ ಕೆಟ್ಟದಾಗಿ ಮಾತಾಡುವುದನ್ನು ಅದು ಹೇಗೆ ಇವರೆಲ್ಲ ಸಹಿಸಬೇಕು? ಪರೀಕ್ಷೆಯಲ್ಲಿ ಅಂಕ ಕಡಿಮೆ ಎಂದೋ, ರಂಗೋಲಿ ತುಳಿದದ್ದಕ್ಕೆ ಬೈದರೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಇಂದಿನ ದಿನಗಳಲ್ಲಿ, ಇವರೆಲ್ಲರನ್ನು ಅಪರಾಧಿಗಳಂತೆ ಕಟಕಟೆಯೊಳಗೆ ತಂದು ನಿಲ್ಲಿಸಿರುವ ಸುವರ್ಣನ್ಯೂಸ್ ಇವರಿಗೆ ಮುಂದಿನ ದಿನಗಳಲ್ಲಿ ಸಮಾಜದಿಂದ ಎದುರಿಸಬೇಕಾದ ಪ್ರಶ್ನೆಗಳು ಮತ್ತು ಮೂದಲಿಕೆಗಳನ್ನು ತಡೆಯಲು ಸಾಧ್ಯವಿದೆಯೇ? ಆ ಸಂಸಾರ ಅವಮಾನವಾಯಿತೆಂದು, ತಲೆ ಎತ್ತಿ ಓಡಾಡಲು ಸಾಧ್ಯವಿಲ್ಲವೆಂದು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಹೊಣೆ ಯಾರು?

ಅದನ್ನು ಪಕ್ಕಕ್ಕಿಡೋಣ, ಉಳಿದೆಲ್ಲದಕಿಂತ ಮೊದಲು ಇದು ಮಾಧ್ಯಮದ ನೈತಿಕತೆಯ ಪ್ರಶ್ನೆ. ಅಶ್ಲೀಲ ಎಮ್ಮೆಮ್ಮೆಸ್‌ಗಳನ್ನು ಪ್ರಸಾರ ಮಾಡದೆ ಒಂದು ಟಿವಿ ಚಾನೆಲ್ ಬದುಕಲು ಸಾಧ್ಯವೇ ಇಲ್ಲವೇ, ಈ ಹಿಂದೆ ಸದನದೊಳಗೆ ನೀಲಿಚಿತ್ರ ವೀಕ್ಷಿಸಿದ ಶಾಸಕರ ದೃಶ್ಯಗಳನ್ನು ಪ್ರಸಾರ ಮಾಡಿದ್ದರ ಬಗ್ಗೆ ವಿರೋಧ ವ್ಯಕ್ತವಾದಾಗಲೂ ತಾವು ತೋರಿಸೋದು ತಪ್ಪಾ ಅಂತ ತಮ್ಮ ಅಶ್ಲೀಲ ದೃಶ್ಯ ಪ್ರಸಾರದ ಸಮರ್ಥನೆಗೆ ಅಂಟಿಕೊಂಡಿರಿ. ಬಸ್ ಸ್ಟಾಂಡುಗಳಲ್ಲಿ, ಬುಕ್‌ಸ್ಟೋರ್‌ಗಳಲ್ಲಿ ನೇತಾಡುವ ೧೦ ರೂಪಾಯಿಗೆ ಸಿಗುವ ಅಶ್ಲೀಲಚಿತ್ರಗಳ ಕಥೆಗಳ ಅಗ್ಗದ ಪುಸ್ತಕಗಳಿಗೂ ತಾವು ಪದೇಪದೇ ಪ್ರಸಾರಿಸುತ್ತಿರುವ ಅಶ್ಲೀಲ ಎಮ್ಮೆಮ್ಮೆಸ್ ಕಾರ್ಯಕ್ರಮಗಳಿಗೂ ಕಿಂಚಿತ್ತಾದರೂ ವ್ಯತ್ಯಾಸವಿದೆಯೇ? ಹಿಂದೊಮ್ಮೆ ಅಶ್ಲೀಲ ವಿಡಿಯೋಗಳನ್ನು ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ವೆಬ್‌ಸೈಟ್ ಅಡ್ರೆಸ್‌ಗಳ ಮೂಲಕವೇ ಪ್ರಸಾರ ಮಾಡಿದವರು ನೀವು. ಡಿವಿಡಿ ಅಂಗಡಿಗಳಲ್ಲಿಯೂ ಅಶ್ಲೀಲ ಡಿವಿಡಿಗಳನ್ನು ಮುಜುಗರದಿಂದಲೋ, ಭಯದಿಂದಲೋ ಕದ್ದುಮುಚ್ಚಿ ವಿತರಿಸುವ ಪರಿಪಾಠವಿದೆ. ಅವರಿಗಿರುವ ಕನಿಷ್ಠಮಟ್ಟದ ಭಯವೂ ಸುವರ್ಣನ್ಯೂಸ್ ಸಂಪಾದಕರಾದ ತಮಗಿಲ್ಲ, ರಾಜಾರೋಷವಾಗಿ ಎಗ್ಗುಸಿಗ್ಗಿಲ್ಲದೆ ಬ್ಲೂಫಿಲ್ಮ್‌ಗಳನ್ನೇ ಪ್ರಸಾರ ಮಾಡಿಬಿಡುತ್ತೀರಿ, ತುಂಬು ಕುಟುಂಬವೊಂದರಲ್ಲಿ ಅಣ್ಣತಂಗಿ, ಅಪ್ಪಮಗಳು ಏನನ್ನೋ ನೋಡಲು ಹೋಗಿ ತಾವು ಪ್ರಸಾರಿಸುತ್ತಿರುವ ಸುಸಂಸ್ಕೃತ ಬ್ಲೂಫಿಲ್ಮ್‌ಗಳನ್ನೋ, ಅಶ್ಲೀಲ ಎಮ್ಮೆಮ್ಮೆಸ್ ತುಣುಗಳನ್ನೋ ಅಕಸ್ಮಾತ್ ನೋಡಿದರೂ ಆಗುವ ಮುಜುಗರ ಕಸಿವಿಸಿಯಿದೆಯಲ್ಲ.. ಬಹುಶಃ ಅದರ ಅನುಭವ ತಮಗೆ ಆದಂತಿಲ್ಲ. ಮಾನ ಮರ್ಯಾದೆಯಿರುವ ಜನಕ್ಕೆ ಮುಖಮುಚ್ಚಿಕೊಂಡು ಎದ್ದು ಹೋಗಬೇಕೆನಿಸುತ್ತದೆ.

ತಾವು ಕನ್ನಡಪ್ರಭ ಪತ್ರಿಕೆಗೂ ಸಂಪಾದಕರು. ಅದರಲ್ಲಿ ಬರೆಯುವ ಅಂಕಣಕಾರರೂ ಸೇರಿದಂತೆ ಹಲವಾರು ಬರಹಗಾರರಿಂದ ಭಾರತೀಯ ಸಂಸ್ಕೃತಿ ಪರಂಪರೆ ನೈತಿಕತೆಯ ಬಗ್ಗೆ ಬರೆಸುತ್ತೀರಿ. ಇನ್ನೊಂದು ಕಡೆಯಲ್ಲಿ ಈ ವಿಷಯಗಳಿಗೆ ತದ್ವಿರುದ್ಧವಾಗಿರುವ ಕಾಮಕೇಳಿಗಳನ್ನು ಯಾವ ಅಂಜಿಕೆಯೂ ಇಲ್ಲದೆ ಪ್ರಸಾರ ಮಾಡುತ್ತೀರಿ, ಜನ ನೋಡುತ್ತಾರೆ ಟಿಆರ್‌ಪಿ ಬರುತ್ತದೆ ಎಂದು ಕಂಡಕಂಡದ್ದನ್ನೆಲ್ಲ ಪ್ರಸಾರ ಮಾಡುವುದಾದರೆ ನೇರವಾಗಿ ಒಂದು ಅಶ್ಲೀಲ ಟಿವಿವಾಹಿನಿಯನ್ನೇ ತಾವು ಧೈರ್ಯವಾಗಿ ಪ್ರಾರಂಭಿಸುವುದು ಒಳ್ಳೆಯದು. ಅಂತರ್ಜಾಲದಲ್ಲಿ ಅಶ್ಲೀಲ ಎಮ್ಮೆಮ್ಮೆಸ್ಸುಗಳಿಗೇನೂ ಕೊರತೆಯಿಲ್ಲ, ತಮ್ಮ ಚಾನೆಲ್‌ನ ಟಿಆರ್‌ಪಿಗೂ ಜಾಹಿರಾತಿಗೂ ಈ ಎಮ್ಮೆಮ್ಮೆಸ್ಸುಗಳಿಂದ ಇನ್ನಷ್ಟು ಒಳ್ಳೆಯದಾಗುತ್ತದೆ. ಸುವರ್ಣನ್ಯೂಸ್ ಚಾನೆಲ್ ಸದ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರೀತಿ ಮತ್ತು ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಮೇಲೆ ತಮಗೆ ಹಿಡಿತವೇ ಇದ್ದಂತಿಲ್ಲ, ಅಥವಾ, ಆ ಅಧಿಕಾರವನ್ನು ಚಾನೆಲ್ ಮಾಲೀಕರು ತಮಗೆ ಕೊಟ್ಟೇ ಇಲ್ಲ, ಬದಲಾಗಿ ಡಮ್ಮಿ ಸಂಪಾದಕರಂತೆ ತಾವು ಕುರ್ಚಿಯಲ್ಲಿ ಕುಳಿತಿರಬಹುದೇ? ಎಂಬ ಅನುಮಾನಗಳು ಬರುತ್ತಿವೆ. ಏಕೆಂದರೆ ತಾವು ಕನ್ನಡಪ್ರಭದಲ್ಲಿ ಸುಸಂಸ್ಕೃತರಂತೆ ಆಡುವುದು ಒಂದು, ಸುವರ್ಣನ್ಯೂಸ್‌ನಲ್ಲಿ ಅಪಾಪೋಲಿಗಳಂತೆ ಮಾಡುತ್ತಿರುವುದು ಇನ್ನೊಂದು.

ಪ್ರಸ್ತುತ ವಿಷಯಕ್ಕೆ ಮರುಳುವುದಾದರೆ ಆ ಯುವತಿಯ ಪೋಷಕರನ್ನು ನಡುಬೀದಿಯಲ್ಲಿ ನೀವು ಇವತ್ತು ತಂದು ನಿಲ್ಲಿಸಿರುವಂತೆಯೇ ತಾವೂ ಹಿಂದೊಮ್ಮೆ ಇದ್ದ ಕೆಲಸದಿಂದ ಹೊರದಬ್ಬಿಸಿಕೊಂಡು ನಡುಬೀದಿಯಲ್ಲೇ ನಿಂತಿದ್ದೀರಿ. ಆವತ್ತು ಇದೇ ಜಗತ್ತು ತಮ್ಮತ್ತ ತೂರಿದ ಕಲ್ಲುಗಳ ಸೈಜು ಎಂಥವು ಎಂಬುದು ತಮಗೂ ಗೊತ್ತು. ಅಂತಹ ಅವಮಾನವನ್ನು ಸಹಿಸಿದವರು ತಾವು. ಆ ನೆನಪಿನ ನೈತಿಕತೆ ತಮಗೆ ಇದ್ದಿದ್ದರೆ ಇವತ್ತು ಶಿವಮೊಗ್ಗದ ಒಂದು ಕುಟುಂಬವನ್ನು ಇವತ್ತು ಮೂರಾಬಟ್ಟೆಯಾಗುವಂತೆ ಮಾನ ಕಳೆಯುತ್ತಿರಲಿಲ್ಲ. ಕೈಯಿಟ್ಟಲ್ಲೆಲ್ಲ ಸುದ್ದಿ ಸಿಗುವ, ಸರ್ಕಾರಿ ಇಲಾಖೆಗಳ ಹಗರಣಗಳು ಕಾಲುಕಾಲಿಗೇ ತೊಡರುತ್ತಿರುವ ಈ ಸಮಯದಲ್ಲಿ ತಮ್ಮ ಹಾರ್ಡ್‌ಕೋರ್ ವರದಿಗಾರರು ಆ ಎಲ್ಲವನ್ನೂ ಬಿಟ್ಟು ಸುಲಭಕ್ಕೆ ಕೈಗೆ ಸಿಗುವ ಅಶ್ಲೀಲ ಎಮ್ಮೆಮ್ಮೆಸ್ಸುಗಳ ಹಿಂದೇಕೆ ಬೀಳುವಷ್ಟು ಸೋಮಾರಿಗಳಾಗಿದ್ದಾರೆ ಎಂಬುದು ತಮ್ಮ ಅರಿವಿಗೆ ಯಾಕೋ ಬರುತ್ತಲೇ ಇಲ್ಲ. ಈ ಎಮ್ಮೆಮ್ಮೆಸ್ಸುಗಳನ್ನು ನೋಡಿ ಯಾರಿಗೇನು ಆಗಬೇಕಿದೆ, ಇವನ್ನು ತೋರಿಸಿ ಯಾರಿಗೆ ಎಂಥಹ ಸಂದೇಶ ಕೊಡುವ ಘನಕಾರ್ಯ ಮಾಡುತ್ತಿದ್ದಿರೋ ನಮಗೆ ಗೊತ್ತಿಲ್ಲ. ಹೀಗೆಲ್ಲ ದುಡ್ಡು ದುಡಿಯಬೇಕೇ ವಿಶ್ವೇಶ್ವರ ಭಟ್ಟರೆ?

ಕಟ್ಟೆಚ್ಚರ ಕಾರ್ಯಕ್ರಮದ ಅಧ್ವಾನಗಳಾದರೂ ಎಂಥವು, ಬೆಳಗ್ಗೆಹೊತ್ತು ಬ್ರೇಕ್‌ಫಾಸ್ಟ್ ನ್ಯೂಸ್‌ನಲ್ಲಿ ಕೈ ಮುಗಿಯಬೇಕೆನ್ನಿಸುವಷ್ಟು ಸಂಭಾವಿತರಾಗಿ ಕಾಣಿಸಿಕೊಳ್ಳುವ ಜಯಪ್ರಕಾಶಶೆಟ್ಟರು ರಾತ್ರಿಯಾದರೆ ಸಾಕು ಕಟ್ಟೆಚ್ಚರದೊಳಗೆ ಜಾತ್ರೆಯಲ್ಲಿ ಟೋಪಿ ಮಾರುವವರಂತೆ ಹಾಸ್ಯಾಸ್ಪದ ಪೋಷಾಕಿನಲ್ಲಿ ಕರೆಂಟು ಹೊಡೆಸಿಕೊಂಡವರಂತೆ ಮೈಕೈ ಬಳುಕಿಸುತ್ತ ಆಗಾಗ ಕೂಗಾಡುತ್ತ ಆಂಕರಿಂಗ್ ಮಾಡುತ್ತಿರುತ್ತಾರೆ. ಅವರ ಮಾತಿನ ಶೈಲಿ ಮತ್ತು ಐಟಂಸಾಂಗ್ ಶೈಲಿಯ ಅವರ ಆಂಕರಿಂಗ್ ನಗೆಪಾಟಲಲ್ಲದೆ ಇನ್ನೇನೂ ಅಲ್ಲ, ಶಿವಮೊಗ್ಗದ ಯುವತಿಯ ಎಪಿಸೋಡಿನ ಸ್ಕ್ರಿಪ್ಟನ್ನು ಸಹನಾಭಟ್ ಎಂಬ ಸ್ತ್ರೀ ಬರೆಯುತ್ತಾರೆ ಅಂದರೆ ವಾಕರಿಕೆ ಹುಟ್ಟುತ್ತದೆ. ಕೆಲಸಮರೆತ ಜಿಲ್ಲಾ ವರದಿಗಾರನೊಬ್ಬ ಎಂಥದೋ ಎಬಡೇಶಿ ಎಮ್ಮೆಮ್ಮೆಸ್ ಕಳಿಸಿದೆಂದ ಮಾತ್ರಕ್ಕೆ ಅದನ್ನು ಪ್ರಸಾರಿಸಬೇಕೇ ಬೇಡವೇ, ನೈತಿಕತೆಯೇ ಅನೈತಿಕತೆಯೇ ಎಂಬ ವಿವೇಚನೆಯೂ ಇಲ್ಲದಷ್ಟು ಒಬ್ಬ ಟಿವಿ ಚಾನೆಲ್ಲಿನ ಸಂಪಾದಕ ಎಮ್ಮೆಚರ್ಮದವರಾಗಿ ಹೋದರೆ ಏನೇನೆಲ್ಲ ಅನಾಹುತಗಳಾಬೇಕೋ ಅವೆಲ್ಲವೂ ಸುವರ್ಣನ್ಯೂಸಿನಲ್ಲಿ ಇವತ್ತು ಆಗುತ್ತಿವೆ. ಸುವರ್ಣನ್ಯೂಸಿನ ಬದಲು ಎಫ್ ಚಾನೆಲ್ ನೋಡುವುದು ಒಳಿತು ಎಂಬ ಮಟ್ಟಿಗೆ ಜೋಕುಗಳು ಹುಟ್ಟಿಕೊಂಡಿವೆ. ತಮಗೆ ತಮ್ಮ ಜನಪರ ನ್ಯೂಸುಗಳ ಪ್ರಸಾರದಿಂದ ಕರ್ನಾಟಕವನ್ನು ಉದ್ದಾರ ಮಾಡಿಬಿಡುವ ಸಾಹಸ ಬೇಡವಾಗಿದ್ದಾಗ ಮಾತ್ರ ಮದನಾರಿಯಂತಹ ಅಡ್ಡಕಸುಬಿ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಒಂದುಕಾಲದಲ್ಲಿ ಜನ ನೋಡುತ್ತಾರೆ ಅಂತ ಕೇರಳದ ಚಿತ್ರರಂಗದಲ್ಲಿ ತನ್ನ ಉಬ್ಬುತಗ್ಗುಗಳನ್ನು ತೋರಿಸಿಕೊಂಡು ಅಶ್ಲೀಲಚಿತ್ರಗಳಲ್ಲಿ ನಟಿಸಿದ ನಟಿಯೊಬ್ಬಳಿಗೂ... ಎಮ್ಮೆಮ್ಮೆಸ್ಸು, ಬ್ಲೂಫಿಲ್ಮ್, ಮದನಾರಿಗಳ ಹಿಂದೆ ಬಿದ್ದಿರುವ ತಮಗೂ ನಡುವೆ ಯಾವ ವ್ಯತ್ಯಾಸವೂ ಕಾಣಿಸುತ್ತಿಲ್ಲ. ಎರಡರಲ್ಲೂ ದುಡ್ಡೇ ಪ್ರಮುಖವಾಗಿದೆ.

ಕೊನೆಗೆ ವಿಶ್ವೇಶ್ವರ ಭಟ್ಟರಲ್ಲಿ ಒಂದು ಮನವಿ, ನೀವು ಕನ್ನಡಪ್ರಭದ ಅಂಕಣಕಾರನ್ನು ಸುವರ್ಣನ್ಯೂಸ್ ಟಾಕ್ ಶೋಗಳ ಅತಿಥಿಗಳನ್ನಾಗಿಯೂ, ಈ ಚಾನೆಲ್ಲಿನ ಚಿಳ್ಳೆಪಿಳ್ಳೆ ವರದಿಗಾರರನ್ನು ಕನ್ನಡಪ್ರಭದ ಅಂಕಣಕಾರನ್ನಾದರೂ ಮಾಡಿಕೊಳ್ಳಿ. ಈ ಅಧ್ವಾನಗಳನ್ನು ಟಿವಿ ನೋಡುವ ಮಂದಿ ಹೇಗಾದರೂ ಸಹಿಸಬಲ್ಲರು, ಆದರೆ ಕಾಮ, ಸೆಕ್ಸು. ಹೆಂಗಸಿನ ಉಬ್ಬುತಗ್ಗುಗಳ ಮೇಲೆ ಬೀಳುವ ಚಿಲ್ಲರೆ ಕಾಸುಗಳನ್ನು ಆಯ್ದುಕೊಳ್ಳುತ್ತಿರುವ ಈ ನೀಚತನವಿದೆಯಲ್ಲ, ಅದನ್ನು ಮಾನವಂತರಾರೂ ಸಹಿಸುವುದಿಲ್ಲ. ಈಗಾಗಲೇ ತಮ್ಮ ಚಾನೆಲ್ಲಿನ ನಗೆಪಾಟಲು ಕಾರ್ಯಕ್ರಮವಾದ ಕಟ್ಟೆಚ್ಚರದಲ್ಲಿ ಶಿವಮೊಗ್ಗದ ಎಮ್ಮೆಮ್ಮೆಸ್ ಕಾರ್ಯಕ್ರಮದ ಬಗ್ಗೆ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಫೌಂಡೇಷನ್‌ಗೆ ಆನ್‌ಲೈನ್ ದೂರುಗಳು ಲೋಡುಗಟ್ಟಲೆ ತಲುಪುತ್ತಿವೆ. ೩೦ರ ಶನಿವಾರದಂದು ಕಾರ್ಯಕ್ರಮದ ೨ನೇ ಭಾಗದಲ್ಲಿ ಇನ್ನೆಷ್ಟು ಅಸಹ್ಯ ಎಮ್ಮೆಮ್ಮೆಸ್ ತುಣುಕುಗಳನ್ನು ಪ್ರಸಾರ ಮಾಡಲು ಸಿದ್ದವಿದ್ದೀರೋ ಗೊತ್ತಿಲ್ಲ. ದಯವಿಟ್ಟು ಈ ೨ನೇ ಕಂತನ್ನು ಪ್ರಸಾರಿಸದಿರಿ. ತಮ್ಮ ಕಾರ್ಯಕ್ರಮದ ವಿಡಿಯೋ ಅನ್ನು ಗೆಳೆಯರನೇಕರು ಮೊಬೈಲಿನಲ್ಲಿ ಶೂಟ್ ಮಾಡಿಟ್ಟುಕೊಂಡಿದ್ದಾರೆ. ಐಬಿಎಫ್ ನಿರ್ಬಂಧಿಸಿರುವ ಅಷ್ಟನ್ನೂ ಕಟ್ಟೆಚ್ಚರ ಕಾರ್ಯಕ್ರಮದಲ್ಲಿ ಉಲ್ಲಂಘಿಸಿದ್ದೀರಿ, ಅದಕ್ಕೆ ಸಾಕ್ಷಿಯೂ ಇದೆ. ಯಾವಾಗ ಬೇಕಾದರೂ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಫೌಂಡೇಷನ್‌ನಿಂದ ತಮ್ಮ ಕಛೇರಿಗೆ ನೊಟೀಸ್ ಬರಬಹುದು.

ಪತ್ರಕರ್ತನೊಬ್ಬನಿಗೆ ಜನಪರವಾದ, ಜನೋಪಯೋಗಿ ಸುದ್ದಿಗಳನ್ನಷ್ಟೇ ಜನರಿಗೆ ತಲುಪಿಸುವ ಉತ್ಸಾಹವಿರಬೇಕೇ ಹೊರತು ಜನ ನೋಡುತ್ತಾರೆ ಎಂಬ ಧಾವಂತದಲ್ಲಿ ಸೆಕ್ಸ್‌ಬುಕ್ಕಿನ ರೇಂಜಿನ ಕಾರ್ಯಕ್ರಮಗಳನ್ನು ಬ್ಲೂಫಿಲ್ಮುಗಳನ್ನೂ, ಅಶ್ಲೀಲ ಎಮ್ಮೆಮ್ಮೆಸ್ಸುಗಳನ್ನೂ ಪ್ರಸಾರ ಮಾಡುವ ತಮ್ಮ ಕೊಳಕು ಅಭಿರುಚಿಯನ್ನು ಪ್ರದರ್ಶಿಸುವುದಲ್ಲ. ಏಕೆಂದರೆ ನೋಡುವ ಮಾನವಂತರು ವರದಿಗಾರನನ್ನು ವಿಮರ್ಶಿಸುವುದಕ್ಕಿಂತ ಹೆಚ್ಚಾಗಿ ಇಂಥದ್ದನ್ನ ಪ್ರಸಾರ ಮಾಡೋಕೆ ಅನುಮತಿ ಕೊಟ್ಟ ಎಡಿಟರ್ ಏನು ದನಾ ಮೇಯಿಸ್ತಾ ಇದ್ದನಾ ಅಂತ ಮುಲಾಜಿಲ್ಲದೇ ಬೈದುಬಿಡುತ್ತಾರೆ. ಇದಕ್ಕಾದರೂ ತಮ್ಮ ಅಭಿರುಚಿ ಉಬ್ಬುತಗ್ಗುಗಳ ಆಚೀಚೆಗೆ ವಿಸ್ತರಿಸಲೆಂಬ ಆಶಯ ಟಿವಿ ನೋಡುಗರದ್ದು. ಅರ್ಥ ಮಾಡಿಕೊಳ್ಳುತ್ತೀರೆಂಬ ನಂಬುಗೆಯೊಂದಿಗೆ.

ಪ್ರೀತಿಯಿಂದ

-ಟಿ.ಕೆ. ದಯಾನಂದ

ಹಸಿವು, ಪುಡಿಗಾಸು ಸಂಬಳದ ನಡುವೆ.





ಕಳೆದ ಕೆಲವು ವರ್ಷಗಳಿಂದೀಚೆಗೆ ವಿವಿಧ ಜಿಲ್ಲೆಗಳಲ್ಲಿ ಮಲಹೊರುವ ಪದ್ಧತಿಯ ಅಸ್ತಿತ್ವದಲ್ಲಿ ತಮ್ಮ ಇರುವಿಕೆಯನ್ನು ಸ್ಪಷ್ಟಪಡಿಸುತ್ತ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿರುವ ರಾಜ್ಯದ ದಲಿತರು ರಾಜಧಾನಿ ಬೆಂಗಳೂರಿನಲ್ಲೂ ಇರುವುದು ಚೋದ್ಯವೇನೂ ಅಲ್ಲ. ಜಿಲ್ಲೆಯಿಂದ ಜಿಲ್ಲೆಗೆ ಒಂದರ ಹಿಂದೊಂದರಂತೆ ಬಯಲಿಗೆ ಬಂದ ಈ ಬರ್ಬರ ಪದ್ಧತಿಯ ಅಸ್ತಿತ್ವದ ಕಾರಣಕ್ಕೆ ರಾಜ್ಯ ಸರ್ಕಾರವು ಹತ್ತಾರು ಬಾರಿ ನ್ಯಾಯಾಲಯಗಳಲ್ಲಿ ಛೀಮಾರಿ ಹಾಕಿಸಿಕೊಂಡಿದೆ. 
ಆದರೂ ತನ್ನ ಎಂದಿನ ಎಮ್ಮೆಚರ್ಮದ ಧೋರಣೆಯಿಂದಾಗಿ ಈ ಪದ್ಧತಿಯ ನಿರ್ಮೂಲನೆಗೆ ಕಟಿಬದ್ಧವಾಗದೆ ತೇಪೆ ಹಾಕುವ ಕೆಲಸವನ್ನಷ್ಟೇ ಮಾಡಿಕೊಂಡು ಬಂದಿದೆ. ಹೀಗಾಗಿ ಮಲ ಹೊರುವ ಪದ್ಧತಿ ಸರ್ಕಾರಿ ಇಲಾಖೆಯ ಮೂಗಿನಡಿಯಲ್ಲೇ ರಾಜಧಾನಿಯಲ್ಲಿ ನಡೆಯುತ್ತಲೇ ಇದೆ. 
ರಾಜ್ಯದ ಮೂಲೆ ಮುಡುಕುಗಳೆಲ್ಲೆಡೆಯೂ ಅಸ್ತಿತ್ವದಲ್ಲಿರುವ ಮಲ ಹೊರುವ, ಶೌಚಗುಂಡಿ ಸ್ವಚ್ಛಗೊಳಿಸುವ, ಕಕ್ಕಸ್ಸು ಗುಂಡಿಯೊಳಗಿಳಿದು ಬರಿಗೈನಿಂದ ಮಲವನ್ನು ಎತ್ತಿಹಾಕುವ ಮಲ ಹೊರುವ ಪದ್ಧತಿ ರಾಜಧಾನಿಯನ್ನು ಮಾತ್ರ ಬಿಟ್ಟೀತೇ? ನಗರದ ಪ್ರಮುಖ ಭಾಗಗಳಲ್ಲಿಯೇ ಮ್ಯೋನ್‌ಹೋಲ್‌ನೊಳಗೆ ಇಳಿದು ಗುಂಡಿ ಸ್ವಚ್ಛ ಮಾಡುವ, ಮಹಾನಗರದ ಅಂಚಿನ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲದ ಪ್ರದೇಶಗಳಲ್ಲಿ ಇವತ್ತಿಗೂ ರಾಚುತ್ತಿದೆ. ಎಲ್ಲರೂ ಹೇಳುವಂತೆ ಇದೇ ಕೆಲಸಕ್ಕೆ ಈ ಜನರು ಏಕೆ ಕಟ್ಟುಬಿದ್ದಿದ್ದಾರೆ, ಬೇರೆ ಇನ್ಯಾವ ಕೆಲಸಗಳೂ ಇವರಿಗೆ ಸಿಗುವುದಿಲ್ಲವೇ? ಗುಂಡಿಯೊಳಗಿಳಿದು ಮಲ ಬಳಿಯುವಂತಹ ಕೆಲಸ ಇವರಿಗೇಕೆ? 
ಮಲ ಬಳಿಯುವುದನ್ನು ದಲಿತರೇ ಬಹಿಷ್ಕರಿಸಿ ಪ್ರಧಾನ ವಾಹಿನಿಯೊಳಗೆ ಬೆರೆಯಲು ಸಾಧ್ಯವಾಗುವುದಿಲ್ಲವೇ? ಈ ಮಲಹೊರುವ ಪದ್ಧತಿಯ ಅಸ್ತಿತ್ವಕ್ಕೂ ಮೇಲೆ ಉಲ್ಲೇಖಿಸಿದ ಎರಡು ವರ್ಗಕ್ಕೂ ನೇರಾನೇರ ಸಂಬಂಧಗಳಿವೆ. 
ಮಲದಗುಂಡಿ ಸ್ವಚ್ಛಗೊಳಿಸುವ ಕೆಲಸದಲ್ಲಿ ಅತ್ಯಂತ ಹೆಚ್ಚಿನ ಅಂದರೆ 98 ಪ್ರತಿಶತದಷ್ಟು ತೊಡಗಿಕೊಂಡಿರುವುದು ಮಾದಿಗ ಸಮುದಾಯ. ಇದೇ ಸಮುದಾಯವು ಬೆಂಗಳೂರಿನ ಜಲಮಂಡಲಿಯಲ್ಲಿ ಒಳಚರಂಡಿ ಗುತ್ತಿಗೆ ಕಾರ್ಮಿಕರಾಗಿಯೂ, ಬಿಬಿಎಂಪಿಯಲ್ಲಿ ಗುತ್ತಿಗೆ ಪೌರಕಾರ್ಮಿಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಮಂದಿಗೆ ಸರ್ಕಾರದಿಂದ ಅಧಿಕೃತ ದಿನಗೂಲಿ ವೇತನವೆಂದು ನಿಗದಿಪಡಿಸಿದ ವೇತನವೇ ಒಂದು. ಗುತ್ತಿಗೆದಾರರೆಂಬ ದಲ್ಲಾಳಿ ವ್ಯವಸ್ಥೆಯ ಮೂಲಕ ಇವರ ಕೈಗೆ ಸಿಗುತ್ತಿರುವ ವೇತನ ಮಾತ್ರ 1800 ರೂ.ಗಳಿಂದ 2300 ಅಷ್ಟೇ. 
ಎಷ್ಟು ಹೋರಾಟ, ಮನವಿ, ಬೇಡಿಕೆ ಸಲ್ಲಿಸಿದರೂ ಕೋಣದೆದುರು ಕಿನ್ನರಿವಾದನವಾದ ಪರಿಣಾಮ ತಮ್ಮ ಬದುಕು ಕಟ್ಟಿಕೊಳ್ಳಲು, ತುತ್ತಿನ ಜೋಳಿಗೆ ತುಂಬಿಸಿಕೊಳ್ಳಲು ಈ ಪೌರಕಾರ್ಮಿಕರು ಕಂಡುಕೊಂಡ ಹೊಸದಾರಿಯೇ ಕಕ್ಕಸುಗುಂಡಿ ಸ್ವಚ್ಛಗೊಳಿಸುವ ಕಾರ್ಯ. ಎಂದಾದರೊಂದು ದಿನ ನಮ್ಮ ಕೆಲಸ ಕಾಯಮ್ಮೋಗಬಹುದೆಂಬ ಬಿಸಿಲುಗುದುರೆಯ ಬೆನ್ನೇರಿದ ಈ ಗುತ್ತಿಗೆ ಕಾರ್ಮಿಕರು ಕಡಿಮೆ ಸಂಬಳದ ಈ ಕೆಲಸವನ್ನು ಬಿಡಲೊಲ್ಲರು. 
ಗೋರಿಪಾಳ್ಯ, ಲಾಲ್‌ಬಾಗ್ ಹಿಂದಿರುವ ಸಿದ್ದಾಪುರ, ಶ್ರಿರಾಮನಗರ, ಸುಧಾಮನಗರಗಳ ಆಸುಪಾಸಿನಲ್ಲಿ ಹೆಗಲಮೇಲೆ ಬಿದಿರುಕೋಲುಗಳನ್ನು ಹೇರಿಕೊಂಡ ಖಾಕಿ ದಿರಿಸು ಧರಿಸಿದ ಮಂದಿ ನಿಮ್ಮ ಕಣ್ಣಿಗೆ ಕಂಡರೆ ಅವರು ಹತ್ತಿರದಲ್ಲೆಲ್ಲೋ ಅಧಿಕೃತವಾಗಿಯೇ ಮ್ಯೋನ್‌ಹೋಲ್ ಒಳಗಿಳಿಯಲು ಮತ್ತು ಅನಧಿಕೃತವಾಗಿ ಕಕ್ಕಸ್ಸುಗುಂಡಿಯ ಸ್ವಚ್ಛತೆಗೆ ಹೊರಟಿದ್ದಾರೆಂಬುದು ಸ್ಪಷ್ಟ. 
ಮೈಮೇಲೆ ಖಾಕಿ ದಿರಿಸು, ಅದರ ಮೇಲೆ ಜಲಮಂಡಲಿ ಮತ್ತು ಬಿಬಿಎಂಪಿ ಎಂಬ ಎರಡು ಹೆಸರಿದ್ದರೆ ಸಾಕು ಸಾರ್, ಮಲದಗುಂಡಿ ಕಟ್ಟಿಕೊಂಡವರು ತಾವೇ ಬಂದು ಗುಂಡಿ ಸ್ವಚ್ಛ ಮಾಡಿಕೊಡಿ ಎಂದು ಕೇಳುತ್ತಾರೆ. ನಾವು 3-4 ಮಂದಿ ಹೋಗಿ ರಾತ್ರಿವೇಳೆ ಸ್ವಚ್ಛ ಮಾಡಿಕೊಟ್ಟು ಬರುತ್ತೇವೆ. ಸರ್ಕಾರದ ಎರಡುಸಾವಿರ ಸಂಬಳದಲ್ಲಿ ಬದುಕೋಕಾದರೂ ಆಗುತ್ತ ಸಾರ್, ಹೇಸಿಗೆ ಆಗತ್ತೆ, ಮೈಗೆ ಹೊಲಸು ಮೆತ್ತಿಕೊಳ್ಳುತ್ತೆ ಅಂತ ಕೂತರೆ ಕರುಳಿಗೆ ಏನು ಕೊಡೋದು? ಬದುಕಬೇಕಲ್ಲ ಸಾರ್ ಇವೆಲ್ಲ ಮಾಡಲೇಬೇಕು, ಸಂಬಳ ಜಾಸ್ತಿ ಕೊಟ್ಟರೆ ನಾವ್ಯಾಕೆ ಸಾರ್ ಇಂಥ ಹೊಲಸು ಕೆಲಸ ಮಾಡ್ತೀವಿ? ಎನ್ನುತ್ತಾರೆ ಜಲಮಂಡಲಿಯ ಒಳಚರಂಡಿ ಕಾರ್ಮಿಕರೊಬ್ಬರು. 
ಈ ಎರಡೂ ಸಂಸ್ಥೆಗಳ ಗುತ್ತಿಗೆ ಪೌರಕಾರ್ಮಿಕರು ಬೆಂಗಳೂರು ಸುತ್ತಮುತ್ತಲಿನ ಹೊರವಲಯಗಳಿಗೆ ವಾರಕ್ಕೆ ಒಂದೆರಡು ಬಾರಿಯಾದರೂ ರಾತ್ರಿವೇಳೆ ಕಕ್ಕಸುಗುಂಡಿ ಸ್ವಚ್ಛಗೊಳಿಸುವ ಕೆಲಸ ಹಿಡಿದು ಜೀವವನ್ನು ಅಪಾಯದ ಬಾಯಿಗೊಡ್ಡಿ ಮಲದಗುಂಡಿಗಳೊಳಗೆ ಇಳಿಯುತ್ತಾರೆ. ಸಮಾಜಕಲ್ಯಾಣ ಸಚಿವರ ತವರೂರಾದ ಆನೇಕಲ್‌ನಲ್ಲಿಯೇ ಅಲ್ಲಿಯ ಪುರಸಭೆಯ ಗುತ್ತಿಗೆ ಪೌರಕಾರ್ಮಿಕರು ಸುತ್ತಮುತ್ತಲಿನ ಹಳ್ಳಿಗಳಾದ ದೊಡ್ಡಿಗಾಳು, ಭದ್ರಾಪುರ, ಪಾಳ್ಯ ಗ್ರಾಮಗಳಿಗೆ ತೆರಳಿ ಊರವರ ಕಕ್ಕಸುಗುಂಡಿಗಳನ್ನು ಕೈಯಿಂದ ಬಳಿದು ಬರುವ ಘೋರತೆಯೂ ರಾಜಧಾನಿಯ ಹೊಕ್ಕಳುಪ್ರದೇಶಗಳೊಳಗಿದೆ. ಎಲ್ಲಿಯವರೆಗೆ ನಗರದ ಹೊರವಲಯ ಪ್ರದೇಶಗಳಲ್ಲಿ ಒಳಚರಂಡಿ ಸೌಲಭ್ಯ ಲಭ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಕಕ್ಕಸುಗುಂಡಿ ತುಂಬಿಕೊಂಡ ಮನೆಯ ಜನ ಗುತ್ತಿಗೆ ಪೌರಕಾರ್ಮಿಕರನ್ನು ಕರೆದೊಯ್ಯುತ್ತಲೇ ಇರುತ್ತಾರೆ, ಎಲ್ಲಿಯವರೆಗೆ ಗುತ್ತಿಗೆ ಪೌರಕಾರ್ಮಿಕರ ಸಂಬಳ ಜಾಸ್ತಿಯಾಗುವುದಿಲ್ಲವೋ ಅಲ್ಲಿಯವರೆಗೆ ಈ ದಲಿತರು ಕಕ್ಕಸುಗುಂಡಿಗಳತ್ತ ಬರಿಗೈಗಳೊಡನೆ ನಡೆಯುತ್ತಲೇ ಇರುತ್ತಾರೆ!
ಲೇಖಕರಲ್ಲಿ ಒಬ್ಬರಾದ ಟಿ.ಕೆ.ದಯಾನಂದ ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಸಾಮಾಜಿಕ ಪ್ರತ್ಯೇಕತೆಯ ಮತ್ತು ಒಳಗೊಳ್ಳುವಿಕೆಯ ಅಧ್ಯಯನ ಕೇಂದ್ರದ ಸಂಶೋಧಕರು

ಎಪ್ರೀಲ್ 14ನೆ ತಾರೀಕಿನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ  ಈ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ.


 

ದಿ ಟ್ರೂಮನ್ ಶೋ




ಒಂದ್ಸಲ ಕಣ್ಣು ಮುಚ್ಚಿಕೊಂಡು ಎರಡೇ ಎರಡು ಸೆಕೆಂಡ್ ಇದು ನಾನಲ್ಲ.. ನಾನು ಟ್ರೂಮನ್ ಎಂಬ ಹೆಸರಿನ ಜೀವ ಅಂತ ಅಂದುಕೊಳ್ಳುತ್ತೇನೆ. ನನ್ನದು ಜಗತ್ತಿನೆಲ್ಲೆಡೆಯ ಜೀವಸಂಕುಲಕ್ಕಿಂತಲೂ ಭಿನ್ನ ಬಗೆಯ ಬದುಕು ಎಂಬುದು ನನ್ನ ಅರಿವಿಗೆ ಬರುವುದು ಬೇಡ. ನಾನೀಗ ಟ್ರೂಮನ್. ಆತನ ಜಗತ್ತು ಈಗ ಖುಲ್ಲಂಕುಲ್ಲ ನನ್ನದು, ಆತನ ಸುತ್ತ ಕಟ್ಟಲ್ಪಟ್ಟ ಮಿಥ್ಯೆಗಳು ನನ್ನವು, ನನ್ನ ಬದುಕು ನನ್ನದೇ ಅಲ್ಲದ ಬದುಕು, ಅದೇ ವೇಳೆಯಲ್ಲಿ ಜಗತ್ತಿನ ಲೋಲುಪತೆಯಲ್ಲಿ ಮೈಮರೆತು ಕುಳಿತವರಿಗಾಗಿ ನನ್ನ ಬದುಕು ಕೈಕಾಲು ಮುರಿದುಕೊಂಡು ಮೀಸಲಾಗಿದೆ. ನನ್ನ ಹೆಸರು ಟ್ರೂಮನ್.

ನಾನೊಂದು ನಗರದಲ್ಲಿ ಬದುಕುತ್ತಿರುವ ಸೀದಾಸಾದಾ ಮಾಮೂಲು ಮನುಷ್ಯ. ಸೆಹಾವೆನ್ ಎಂಬುದು ನನ್ನೂರಿನ ಹೆಸರು. ಬೆಳಗ್ಗೆಯೆದ್ದು ಹಲ್ಲುಜ್ಜುತ್ತೇನೆ, ಸ್ನಾನ ಮಾಡುತ್ತೇನೆ, ಶರಟೇರಿಸಿಕೊಂಡು ಪ್ಯಾಂಟೊಳಗೆ ಕಾಲು ತೂರಿಸಿಕೊಂಡು ಒಂದು ಬ್ಯಾಗೆತ್ತಿಕೊಂಡು ಕೆಲಸಕ್ಕೆ ಹೊರಡುತ್ತೇನೆ. ನೆರೆಹೊರೆಯ ಮಂದಿಗೆ ನಾನೆಂದರೆ ಅಚ್ಚುಮೆಚ್ಚು, ಬೆಳಗಿನ ವೇಳೆ ಅವರಿಗೆ ಕೈಬೀಸಿ ವಿಶ್ ಮಾಡುವಾಗ ಅದೇ ಜೋಶಿಯಲ್ಲಿ ಅವರೂ ನನ್ನತ್ತ ಕೈಬೀಸುತ್ತಾರೆ. ನಸುನಗುತ್ತಾರೆ. ಎಲ್ಲ ಸಿಟಿಗಳಂತೆಯೇ ನಾನಿರುವ ನಗರವೂ ಝಗಮಗಿಸುತ್ತಿದೆ. ಎಲ್ಲರೂ ಅವರವರ ಕೆಲಸದೊಳಗೆ ಕಟ್ಟಿಹಾಕಿಕೊಂಡಿದ್ದಾರೆ. ನಾನೂ ಸಹ.

ಎಲ್ಲವೂ ಸರಿಯಿರುವಾಗ ಇತ್ತೀಚೆಗೆ ಒಂದಷ್ಟು ಏಕತಾನ ಪಾತ್ರಗಳು ನನ್ನ ಬದುಕೊಳಗೆ ನುಸುಳಿವೆಯೇ ಎಂಬ ಅನುಮಾನ ನನ್ನೊಳಗೆ ಕೈಕಾಲು ಮಿಸುಕಾಡುತ್ತಿದೆ. ಯಾವ ದಿನವಾದರೂ ಸರಿ, ಯಾವ ಬೀದಿಗೆ, ಯಾವ ಅಂಗಡಿಗೆ, ಯಾವ ಕಛೇರಿಗೆ ಪಾರ್ಕಿಗೆ ಹೋದರೂ ನನಗೆ ಹಿಂದೆ ಆ ಜಾಗದಲ್ಲಿ ಇದ್ದವರು ಅವರೇ ಅನ್ನಿಸುತ್ತಿದೆ. ಮುಖಗಳು ಯಾಕೋ ಬದಲಾಗುತ್ತಲೇ ಇಲ್ಲ, ಒಂದು ಪಾರ್ಕಿನಲ್ಲಿ ವಾರದ ಹಿಂದೆ ನೋಡಿದ ಅದೇ ಮುಖಗಳನ್ನು ಈ ವಾರವೂ ಅಲ್ಲಿ ನೋಡುತ್ತೇನೆ. ಅದೇ ಮಗು, ಅದೇ ವೃದ್ಧೆ, ಅದೇ ಜೋಕಾಲಿ ಜೀಕುವ ಯುವತಿಯರು.. ಯಾಕೆ ಹೀಗಾಗುತ್ತಿದೆ?
ನಿನ್ನೆ ತಾನೇ ಕಛೇರಿ ಮುಗಿಸಿ ನಡೆದು ಬರುತ್ತಿರುವಾಗ ಆಕಾಶದಿಂದ ಎಂಥದೋ ಲೈಟಿನಂತಹ ವಸ್ತು ನನ್ನ ಮುಂದೆ ಬಿತ್ತು.. ತಿರುವಿ ಮಗುಚಿ ನೋಡಿದರೂ ಅದೊಂದು ಲೈಟು ಎಂಬುದನ್ನು ಬಿಟ್ಟು ಮತ್ತೇನೂ ಅರ್ಥವಾಗಲಿಲ್ಲ. ಅದೇ ಟೈಮಿನಲ್ಲಿ ವಿಮಾನ ಅಪಘಾತವಾಗಿ ಅದರ ಬಿಡಿಭಾಗಗಳು ಎಲ್ಲೆಂದರಲ್ಲಿ ಚೆಲ್ಲಾಡಿದ ಬಗ್ಗೆ ರೇಡಿಯೋದಲ್ಲಿ ಒಂದು ಪ್ರಕಟಣೆ. ಇರಬಹುದೇನೋ. ಒಮ್ಮೊಮ್ಮೆ ನನ್ನ ಕಾರ್ ನಲ್ಲಿ ಅಳವಡಿಸಿರುವ ರೇಡಿಯೋ ಯಾರೊಂದಿಗೋ ಮಾತನಾಡಲು ಶುರುವಿಡುತ್ತದೆ, ಮಾತನಾಡುತ್ತಿರುವವರು, ಆಕಡೆಯ ಮಾತುಗಾರರು ಇಬ್ಬರೂ ಯಾರೆಂದು ನನಗೆ ಗೊಂದಲವಾಗುತ್ತದೆ.
ಇರಲಿ.. ಯಾವುದು ಬೇಕಾದರೂ ಚಕ್ರೋಪಾದಿಯಲ್ಲಿ ಸುತ್ತಿಕೊಳ್ಳಲಿ ಅಪರಿಚಿತ ಪಾತ್ರಗಳು ನನ್ನ ಸುತ್ತಲೇ ತಿರುಗಾಡಲಿ.. ಮೆರಿಲ್ ಒಬ್ಬಳ ಸಾಂಗತ್ಯದಲ್ಲಿ ನಾನು ಇತ್ತೀಚೆಗೆ ಹೆಚ್ಚೆಚ್ಚು ಮನುಷ್ಯನಾಗುತ್ತಿದ್ದೇನೆ. ಇವಳ ಜೊತೆಗಿರುವುದೇ ಚೆಂದದ ಅನುಭೂತಿ. ನಾನು ಅವಳನ್ನು ಪ್ರೀತಿಸುತ್ತಿದ್ದೇನಾ, ಇರಬಹುದು. ನಾನು ಸೆಲ್ವಿಯಾಳನ್ನು ಪ್ರೀತಿಸುತ್ತಿರಬಹುದು. ಆದಷ್ಟು ಬೇಗ ಅವಳೆದು ಮೊಣಕಾಲೂರಿ ಕುಳಿತು ಪ್ರೇಮನಿವೇದನೆಗೆ ಅಣಿಯಾಗಬೇಕು.. ಅವಳಿಗೂ ಇದರ ಗುಮಾನಿ ಬಂದಿರಬೇಕು.. ಏನೋ ಹೇಳಲಿಕ್ಕಿದೆ ಸಮುದ್ರ ತೀರದಲ್ಲಿ ಸಿಗು ಎಂದಿದ್ದಾಳೆ.. ಇವತ್ತು ರಾತ್ರಿ ಅವಳೆದುರು ಹೇಳಲೇಬೇಕು. ಸಮುದ್ರತೀರಕ್ಕೆ ತೆರಳಿದ್ದೇನೆ, ಅಲ್ಲಿ ಅವಳಿಲ್ಲ.. ಅವಳ ನೆರಳೂ ಸಹ ಅತ್ತ ಕಾಲಿಟ್ಟಿಲ್ಲ.. ಕಾಯ್ದೆ ಕಾಯ್ದೆ.. ಅವಳು ಬರಲೇ ಇಲ್ಲ. ಆವತ್ತಿನಿಂದ ಅವಳು ನನಗೆ ಮತ್ತೆಂದೂ ಸಿಗಲೇ ಇಲ್ಲ. ಯಾಕೆ ಹೀಗಾಗುತ್ತಿದೆ.. ಎಲ್ಲವೂ ಅಯೋಮಯದಂತೆ, ನನ್ನ ಬದುಕಿಗೆ ಹತ್ತಿರವಾಗಿ ಇರಬೇಕಿದ್ದವರೆಲ್ಲರೂ ರಪರಪನೆ ದೂರವೇಕೆ ಓಡುತ್ತಿದ್ದಾರೆ, ಬೀದಿಬೀದಿಗಳಲ್ಲಿ ಅವವೇ ಮುಖಗಳು ಏಕೆ ಕಾಣಿಸುತ್ತಿವೆ? ಬೇರೆ ಮುಖಗಳೆಲ್ಲಿ ಹೋದವು. ಸೆಹವಾನ್ ನಗರವೇ ಬೇಸತ್ತುಹೋಗಿದೆ, ಊರ ಹೊರಗಾದರೂ ಹೋಗಿ ಓಡಾಡಿಕೊಂಡು ಬರಬೇಕು. ಈ ಊರು ನಗರ ನನ್ನದಲ್ಲವೆನ್ನಿಸುತ್ತಿದೆ. ಈ ನಗರವನ್ನು ಬಿಟ್ಟು ಮೊದಲು ತೊಲಗಬೇಕು.

ಊರುಬಿಡಲು ಸಿದ್ಧನಾಗಿ ಏರ್ ಪೋರ‍್ಟಿಗೆ ಬಂದರೆ ನಾನು ತೆರಳಬೇಕಿರುವ ನಗರವನ್ನು ಹೊರತುಪಡಿಸಿ ಮಿಕ್ಕೆಲ್ಲ ವಿಮಾನಗಳೂ ಕಾರ‍್ಯಾಚರಿಸುತ್ತಿವೆ. ಬದಲಿ ವಿಮಾನವನ್ನು ಆಯ್ಕೆ ಮಾಡಿಕೊಂಡ ತಕ್ಷಣ ಆ ವಿಮಾನಯಾನವೂ ರದ್ದುಗೊಂಡಿದೆಯೆಂದು ಸಿಬ್ಬಂದಿಗಳು ಭಯಮಿಶ್ರಿತ ದನಿಯಲ್ಲಿ ಹೇಳುತ್ತಿದ್ದಾರೆ. ಬಸ್ಸಿನಲ್ಲಾದರೂ ಈ ಊರು ಬಿಟ್ಟು ಓಡಿಹೋಗೋಣವೆಂದರೆ ಬಸ್ಸುಗಳೆಲ್ಲವೂ ಸ್ಥಗಿತಗೊಂಡಿವೆ. ನಾನು ಹತ್ತಬೇಕಿರುವ ಬಸ್ಸುಗಳು ಮಾತ್ರ ಸ್ಥಗಿತಗೊಳ್ಳುತ್ತಿರುವುದೇಕೆ? ಹಾಳಾಗಲಿ ನನ್ನ ಕಾರಿನಲ್ಲೇ ಈ ಹಾಳೂರನ್ನು ಬಿಟ್ಟು ತೊಗುತ್ತೇನೆ.. ಇದೇನಿದು ನಾನು ಹೋಗಬೇಕಿರುವ ರಸ್ತೆಗಳಲ್ಲೇ ಅಪಘಾತಗಳಾಗಿ ರಸ್ತೆಗಳು ನಿರ್ಬಂಧನೆಗೊಳಗಾಗಿವೆ. ನನ್ನ ಕಾರು ತೆಗೆದುಕೊಂಡ ತಿರುವುಗಳಲ್ಲೇ ಟ್ರಾಫಿಕ್ ಜಾಮುಗಳಾಗುತ್ತಿವೆ. ಏನಾಗುತ್ತಿದೆ ಈ ಊರಲ್ಲಿ? ಏನಾಗುತ್ತಿದೆ ನನ್ನ ಬದುಕಿನೊಳಗೆ? ಎಲ್ಲವೂ ಗೋಜಲು ಗೋಜಲಾಗುತ್ತಿರುವ ಸಮಯದಲ್ಲಿ ನಾನು ಚಿಕ್ಕಂದಿನಲ್ಲೇ ಸತ್ತು ಹೋಗಿದ್ದಾನೆ ಎಂದು ನಂಬಿಕೊಂಡಿದ್ದ ನನ್ನ ಅಪ್ಪ ಇದ್ದಕ್ಕಿದ್ದಂತೆ ನನ್ನೆದುರು ಬಂದಿದ್ದಾನೆ. ನನ್ನಪ್ಪನ ವಿವರಗಳು ನನಗೆ ಗೊತ್ತಿರುವಷ್ಟೂ ಈ ವ್ಯಕ್ತಿಗೆ ತಿಳಿದಿಲ್ಲ.. ಬಂದಷ್ಟೇ ವೇಗದಲ್ಲಿ ಈತನೂ ಮಾಯವಾಗಿದ್ದಾನೆ. ಏನಾಗುತ್ತಿದೆ ನನ್ನ ಸುತ್ತ?
ಒಂದಂತೂ ಸತ್ಯ.. ನನ್ನ ಇಡೀ ಬದುಕನ್ನು ಚಲನವಲನಗಳನ್ನು ಯಾವುದೋ ಒಂದು ನಿಯಂತ್ರಿಸುತ್ತಿದೆ ಎನಿಸುತ್ತಿದೆ. ಊರೊಳಗೆ ಇರುವಾಗ ಎಲ್ಲವೂ ಸಹನೀಯವಾಗಿದ್ದುದು ಊರು ತೊರೆಯಲು ನಿರ್ಧರಿಸಿದ ನಂತರ ನನ್ನ ವಿರುದ್ಧ ಎಲ್ಲವೂ ತಿರುಗಿ ಬೀಳುತ್ತಿವೆ, ನನ್ನ ಕೊರಳಿಗೆ ಯಾವುದೋ ಸರಪಳಿ ಸುತ್ತಿಕೊಂಡಿರುವ ಗುಮಾನಿಗಳು ಮೂಡುತ್ತಿವೆ. ಇಲ್ಲ ಇಲ್ಲ.. ಈ ಸರಪಳಿಯೊಳಗೆ ಕೊರಳು ಸಿಗಿಸಿಕೊಂಡು ನರಳುವುದು ನನಗೆ ಬೇಕಿಲ್ಲ. ಇಲ್ಲಿಂದ ಓಡಿಹೋಗುತ್ತೇನೆ. ಈ ನಗರ, ಆ ಸರಪಳಿ, ಈ ಅನೂಹ್ಯ ಬಂಧನ.. ಎಲ್ಲವೂ ಇವತ್ತಿಗೆ ಸಾಕು.. ನನಗೊಂದು ಬಿಡುಗಡೆ ಬೇಕು. ಹೇಗಾದರೂ ಸರಿಯೇ ಇಲ್ಲಿಂದ ಓಡಿ ಹೋಗುತ್ತೇನೆ.. ನನ್ನ ಮನೆಯ ಕೆಳಕೋಣೆಯಿಂದ ಒಂದು ಕಳ್ಳಗಿಂಡಿಯ ಮೂಲಕ ಓಡಿಹೋಗುತ್ತೇನೆ. ಅಗೋ ಸಮುದ್ರ ತೀರದ ಹಲ್ಲುಗಂಭಕ್ಕೆ ಕಟ್ಟಿದ ಪುಟ್ಟ ದೋಣಿಯೊಂದಿದೆ. ಕೊಲಂಬಸನ ಹಡಗಿಗಿದ್ದ ಹೆಸರು ಅದರದು.. ಸಂತಾ ಮಾರಿಯ. ದೋಣಿಯೊಳಗೆ ಕುಳಿತು ಹುಟ್ಟು ಹಾಕುತ್ತ ಹಾಕುತ್ತ ನನ್ನನ್ನು ಕಟ್ಟಿ ಹಾಕಿರುವ ಈ ನಗರದಿಂದ ತಪ್ಪಿಸಿಕೊಳ್ಳುತ್ತಿದ್ದೇನೆ. ಇದೇನಿದು ದೋಣಿ ಯಾವುದಕ್ಕೋ ಅಡ್ಡ ಬಡಿದು ನಿಂತುಬಿಟ್ಟಿತಲ್ಲ.. ಇದು ಗೋಡೆಯೋ ಆಕಾಶವೋ, ಗೋಡೆಗೆ ಆಕಾಶದ ಬಣ್ಣ ಬಳಿಯಲಾಗಿದೆ.. ತೀರದಲ್ಲಿ ನಿಂತು ನೋಡಿದಾಗ ಆಕಾಶದಂತೆ ಕಂಡಿದ್ದು ಈ ಗೋಡೆಯೇ? ಈ ಆಕಾಶದ ಬಣ್ಣದ ಗೋಡೆಗೆ ಢಿಕ್ಕಿ ಹೊಡೆದು ಮುಂದೆ ಹೋಗಲಾರದೆ ನನ್ನ ದೋಣಿ ನಿಂತಿದೆ.. ತಲೆಯೆತ್ತಿ ನೋಡುತ್ತೇನೆ, ಅಲ್ಲಿನ ಆಕಾಶವೂ ಆಕಾಶವೋ ಅಥವಾ ಗುಮ್ಮಟವೊಂದಕ್ಕೆ ಆಕಾಶದ ಬಣ್ಣ ಬಳಿಯಲಾಗಿದೆಯೋ? ಆ ಕೃತಕ ಆಕಾಶದೊಳಗೆ ಮಿನುಗುತ್ತಿದ್ದುದು ನಕ್ಷತ್ರಗಳೋ ಅಥವಾ ಲೈಟುಗಳೋ, ಚಂದ್ರನೂ ಸುಳ್ಳೇ ಹಾಗಾದರೆ.. ನಾನು ಎಲ್ಲಿದ್ದೇನೆ, ಯಾವ ಜಗತ್ತಿನಲ್ಲಿದ್ದೇನೆ.. ಆಕಾಶ, ನೀರು, ಮೋಡ, ನಕ್ಷತ್ರ, ಎಲ್ಲವೂ ಕೃತಕ. ಹುಟ್ಟಿದಾಗಿನಿಂದ ನಾನು ಪ್ರತಿನಿತ್ಯ ವ್ಯವಹರಿಸುತ್ತಿದ್ದ ಮುಖಗಳೂ, ಸಂಬಂಧಗಳು, ಬೀದಿ, ರಸ್ತೆ, ಮನೆ, ಕಛೇರಿ ಎಲ್ಲವೂ ಕೃತಕ.. ಏನಾಗಿಬಿಟ್ಟೆ ನಾನು? ಯಾರು ಕೂಡಿಹಾಕಿದ್ದು ಈ ಪಂಜರದೊಳಗೆ ನನ್ನನ್ನು?
ದೋಣಿಯೊಳಗೆ ಅಳವಡಿಸಲಾಗಿರುವ ರೇಡಿಯೋ ಒಂದರ ಮೂಲಕ ನಿಧಾನಕ್ಕೆ ನನ್ನೊಂದಿಗೆ ಒಂದು ದನಿ ಮಾತನಾಡುತ್ತದೆ..
ಟ್ರೂಮನ್ ನೀನು ನನ್ನ ಕಲ್ಪನೆಯ ಕೂಸು.. ಇಷ್ಟು ದಿನ ನೀನು ಹುಟ್ಟಿದಾಗಿನಿಂದ ಬದುಕಿದ್ದು, ಬೆಳೆದಿದ್ದು, ಪ್ರೇಮಿಸಿದ್ದು ನಕ್ಕಿದ್ದು, ಅತ್ತಿದ್ದು ಎಲ್ಲವೂ ಒಂದು ಕೃತಕವಾದ, ನಿನಗಾಗಿಯೇ ನಿರ್ಮಿತಗೊಂಡ ನಗರವೊಂದರಲ್ಲಿ.. ಇಷ್ಟು ದಿನ ನೀನು ಬೆಳೆದಿದ್ದು ಎಲ್ಲವೂ ಬರೀ ಮುಖಗಳು ಮಾತ್ರ. ದಿನಗೂಲಿ ಮುಖಗಳು. ಇದೊಂದು ಟಿವಿ ರಿಯಾಲಿಟಿ ಶೋ ಟ್ರೂಮನ್. ನಿನ್ನ ತಾಯಿಗೆ ನೀನು ಬೇಡದ ಕೂಸಾಗಿದ್ದೆ.. ಗರ್ಭಪಾತಕ್ಕೆಂದು ಆಸ್ಪತ್ರೆಗೆ ಬಂದಾಗ ಆಕೆಗೆ ಈ ರಿಯಾಲಿಟಿ ಶೋ ಬಗ್ಗೆ ತಿಳಿಸಿ ನೀನು ಭ್ರೂಣವಾಗಿದ್ದಾಗಿನಿಂದಲೂ ನಿನ್ನ ಸುತ್ತ ಸಾವಿರಾರು ಕೆಮರಾಗಳು ನಿನ್ನನ್ನು ಶೂಟ್ ಮಾಡುತ್ತಿವೆ. ನೀನು ಹುಟ್ಟಿದ ನಂತರ ಈ ಕೃತಕ ನಗರವೊಂದಕ್ಕೆ ತಂದು ಬಿಡಲಾಯಿತು. ಇದು ನಗರವಲ್ಲ. ನಗರವೊಂದರ ಬೃಹತ್ ಸೆಟ್ಟು. ಇಲ್ಲಿ ನೀನು ಯಾವುದೆಲ್ಲವನ್ನೂ ಸತ್ಯವೆಂದು ನಂಬಿದ್ದೆಯೋ ಅವೆಲ್ಲವೂ ಬಾಡಿಗೆಯ ಆಧಾರದಲ್ಲಿ ನಿನಗಾಗಿಯೇ ಎಂದು ರೂಪಿಸಲಾದ ಒಂದು ವ್ಯವಸ್ಥೆ. ಇದರೊಳಗೆ ನಿನ್ನ ಪ್ರಿಯತಮೆ ಸೆಲ್ವಾ ಕೂಡ ದಿನಗೂಲಿ ಆಧಾರದಲ್ಲಿ ನೇಮಕವಾದವಳು. ನಿನ್ನ ಪ್ರೀತಿ ಈ ರಿಯಾಲಿಟಿ ಶೋಗೆ ಅಡೆತಡೆಯಾಗಬಹುದೆಂದು ಆಕೆಯನ್ನು ಕೆಲಸದಿಂದ ತೆಗೆದೆವು. ಒಟ್ಟು ನಗರದ ಎಲ್ಲೆಡೆಯೂ ಕೆಮೆರಾಗಳು ನಿನ್ನನ್ನು ಶೂಟ್ ಮಾಡುತ್ತಿದ್ದವು. ನಿನ್ನೆದುರು ನಿಲ್ಲುವ ಪ್ರತಿಯೊಬ್ಬ ನಟರ ಶರ್ಟಿನ ಗುಂಡಿಗಳಲ್ಲೂ ಹಿಡನ್ ಕೆಮೆರಾಗಳಿದ್ದವು. ನಿನ್ನ ಪ್ರತಿನಿತ್ಯದ ಚಟುವಟಿಕೆಯನ್ನು ದಿ ಟ್ರೂಮನ್ ಶೋ ಮೂಲಕ ಕಾರ್ಪೊರೇಟ್ ಏಜೆನ್ಸಿಯೊಂದು ನಿನ್ನನ್ನು ಇಡೀ ಜಗತ್ತಿನ ಜನ ಟೀವಿಗಳಲ್ಲಿ ನೋಡುವಂತೆ ಮಾಡಿತ್ತು. ನೀನು ಬಳಸುವ ಎಲ್ಲ ದಿನಬಳಕೆ ಪ್ರಾಡಕ್ಟ್ ಗಳು ಜಾಹಿರಾತಾಗಿ ಜಗತ್ತಿನಾದ್ಯಂತ ಪ್ರಸಿದ್ಧಿಗೆ ಬಂದಿವೆ. ಟ್ರೂಮನ್.. ನೀನೀಗ ನೂರಾರು ಪ್ರಾಡಕ್ಟ್ ಗಳ ಬ್ರಾಂಡ್ ಅಂಬಾಸಡರ್. ನೀನೀಗ ಇಡೀ ಜಗತ್ತಿನ ಸೂಪರ್ ಸ್ಟಾರ್. ತಪ್ಪಿಸಿಕೊಂಡು ಹೋಗುವ ಪ್ರಯತ್ನ ಬೇಡ ಟ್ರೂಮನ್.. ನಗರದೊಳಗೆ ವಾಪಸ್ಸು ಹೋಗು.. 

ರೇಡಿಯೋ ಬಂದ್ ಆಗುತ್ತದೆ.. ಕಳೆದ ೩೦ ವರ್ಷಗಳಲ್ಲಿ ನಾನು ಬದುಕಿದ್ದು ರಿಯಾಲಿಟಿ ಶೋ ಒಂದರ ಸೆಟ್ ಒಳಗಾ?.. ಎಲ್ಲವೂ ಸುಳ್ಳೇ? ನಾನಾದರೂ ಸತ್ಯವೋ ಅಥವಾ ನಾನೂ ಒಂದು ಸುಳ್ಳೋ? ಆಕಾಶದ ಗೋಡೆಗೆ ಕಟ್ಟಿಕೊಂಡ ಮೆಟ್ಟಿಲುಗಳನ್ನೇರಿ ನನ್ನದಲ್ಲದ ನನಗಾಗಿಯೇ ನಿರ್ಮಿತಗೊಂಡ ಮಿಥ್ಯಾಜಗತ್ತಿನ ಹೊರಗೆ ಹೋಗುತ್ತಿದ್ದೇನೆ.. ಅಲ್ಲಿ ಏನೇನೋ ಹೊಸ ಹೊಸದಾಗಿ ಕಾಣುತ್ತಿವೆ.. ಅವು ನನಗೇನೂ ಅರ್ಥವಾಗುತ್ತಿಲ್ಲ. 
ಇದು ಜಿಮ್ ಕ್ಯಾರಿ ನಟಿಸಿ ಪೀಟರ್ ವಿಯರ್ ನಿರ್ದೇಶಿಸಿದ ದಿ ಟ್ರೂಮನ್ ಶೋ ಚಿತ್ರದ ಕಥಾ ಹಂದರ. ಇದರೊಳಗಿನ ಆಂತರ್ಯಗಳನ್ನು ಬಿಡಿಸಿಡುವ ಅಗತ್ಯವೇ ಇಲ್ಲದಷ್ಟು ಈ ಚಿತ್ರ ಇವತ್ತಿನ ಮೀಡಿಯಾ ಜಗತ್ತಿನ ಮಿಥ್ಯಾರೂಪಿ ಅವಲಂಬನೆಗಳನ್ನು ವಿಮರ್ಶಿಸುತ್ತದೆ. ಓವಿ ಚಾನೆಲ್ ಗಳಲ್ಲಿ ರಿಯಾಲಿಟಿ ಶೋ ಎಂಬ ಕಾನ್ಸೆಪ್ಟ್ ಹುಟ್ಟಿಕೊಂಡ ಆರಂಭಿಕ ದಿನಗಳಲ್ಲಿ ತೆರೆಕಂಡ ಈ ಚಿತ್ರ ಮೀಡಿಯಾ ಜಗತ್ತು ನಮ್ಮೆದುರು ತಂದು ಸುರಿಯುತ್ತಿರುವ ರಂಜನೆಯ ಹೆಸರಿನ ವಿಕೃತಿಗಳನ್ನು ಇದಕ್ಕಿಂತ ಹೆಚ್ಚಿನದಾಗಿ ವಿಮರ್ಶಿಸುತ್ತದೆ. ಸಾಧ್ಯವಾದರೆ ಒಮ್ಮೆ ಚಿತ್ರ ನೋಡಿ.
ತನ್ನ ಏಸ್ ವೆಂಟೂರ ಪತ್ತೇದಾರಿ ಹಾಸ್ಯಚಿತ್ರಗಳಲ್ಲಿ ಪೆಂಗುಪೆಂಗಾಗಿ ನಗಿಸುತ್ತಿದ್ದ ಜಿಮ್ ಕ್ಯಾರಿಯ ಅಭಿನಯದ ಮತ್ತೊಂದು ಮಗ್ಗುಲು ಟ್ರೂಮನ್ ಶೋ ಸಿನಿಮಾದಲ್ಲಿ ಅನಾವರಣಗೊಂಡ ಬಗೆ ಅದ್ಭುತ. ಸಿನಿಮಾಗಳು ಮಾತನಾಡುತ್ತವೆ. ಅವನ್ನು ಕೇಳಿಸಿಕೊಳ್ಳುವ ಸಹನೆ ನಮಗಿರಬೇಕು. ಹೀಗೆ ಸಮಕಾಲೀನತೆಯಲ್ಲಿ ಹಾಸುಹೊಕ್ಕಾದ ವಸ್ತುವೊಂದನ್ನು ರಂಜನೆಯ ಮೂಲಕ ವಿಮರ್ಶಿಸಿದ ಟ್ರೂಮನ್ ಶೋ ಚಿತ್ರವನ್ನು ನೀವೊಮ್ಮೆ ನೋಡಲೇಬೇಕು.
ಕೆಂಡಸಂಪಿಗೆಯಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

“ದಿ ಸಾಂಗ್ ಆಫ್ ದಿ ಸ್ಪಾರೋಸ್”



ಕರೀಮ (ರೆಜಾ ನಾಝಿ)

ಏನೇನೂ ಅಲ್ಲದ ಜನಸಾಮಾನ್ಯರ ಪುಟ್ಟ ಪುಟ್ಟ ಗೂಡುಗಳಂತಹ ಬದುಕನ್ನು ದೃಶ್ಯಗಳ ಮೂಲಕ ಕಟ್ಟುವುದರಲ್ಲಿ ಇರಾನಿ ಚಿತ್ರ ನಿರ್ದೇಶಕ ಮಜೀದ್ ಮಜಿದಿ (ಚಿಲ್ಡ್ರನ್ ಆಫ್ ಹೆವನ್) ಸಿದ್ದಹಸ್ತ ಪ್ರತಿಭೆ. ಸೀದಾಸಾದ ಬದುಕುಗಳನ್ನು ಹಾಗೆಯೇ ಸಂಗ್ರಹಿಸಿ ತೆರೆಯ ಮೇಲೆ ಕಥಾರೂಪದಲ್ಲಿ ಸಂಗ್ರಹಿಸುವುದರಲ್ಲಿ ಮಜಿದಿಯ ಕಥನಕಲೆ ಆತನ ಇಲ್ಲಿಯವರೆಗಿನ ಚಿತ್ರಗಳಲ್ಲಿ ಗೆಲ್ಲುತ್ತಲೇ ಬಂದಿದೆ. ಮಜೀದಿಯ ಇತ್ತೀಚಿನ ಚಿತ್ರ “ಸಾಂಗ್ ಆಫ್ ಸ್ಪಾರೋಸ್” ಕಥನ ಕಟ್ಟುವಿಕೆ ಮತ್ತು ಆಡಂಬರದಿಂದ ಹೊರತಾದ ಬದುಕುಗಳನ್ನು ದಿವೀನಾಗಿ ಎತ್ತಿನಿಲ್ಲಿಸುವ ಆತನ ಹಿಂದಿನ ಪ್ರಯತ್ನಗಳ ಮುಂದುವರಿದ ಭಾಗ. ಆಸ್ಟ್ರಿಚ್ ಪಕ್ಷಿಸಾಕಣೆ ಕೇಂದ್ರವೊಂದರಲ್ಲಿ ಆಸ್ಟ್ರಿಚ್ ನೋಡಿಕೊಳ್ಳುವ ಕೆಲಸದಲ್ಲಿನ ಮಧ್ಯವಯಸ್ಕ ಕರೀಂ, ಆತನ ಕಿವಿ ಕೇಳಿಸದ ಮಗಳು, ಮೀನು ಸಾಕುವ ಹಂಬಲದ ಮಗ, ಯಾವುದೋ ದುಡಿಮೆಗೆಂದು ಹೋಗಿ ಮತ್ತೇನೋ ಆಗಿಬಿಡುವ ಸಂದಿಗ್ಧತೆಗಳು ಮತ್ತು ಮುರುಕಲು ವಸ್ತುಗಳ ಮೇಲಿನ ಕರೀಮನ ಆಪ್ಯಾಯತೆ ಇವೆಲ್ಲವುಗಳ ಜೊತೆಗೆ ಸಮಕಾಲೀನ ಇರಾನಿನ ಬಡವರ ಜಗತ್ತಿನೊಳಗೆ “ದಿ ಸಾಂಗ್ ಆಫ್ ದಿ ಸ್ಪಾರೋಸ್” ಒಂದು ಸುತ್ತು ಸುತ್ತಿಸುತ್ತದೆ,

“ಚಿಲ್ಡ್ರನ್ ಆಫ್ ಹೆವನ್” ಚಿತ್ರದ ನಂತರ “ಮೆಹ್ರಾನ್ ಕಶಾನಿ”ಯೊಂದಿಗೆ ಕಥೆ ಹೆಣೆದಿರುವ ಮಜೀದಿ ತನ್ನ ಈ “ಗುಬ್ಬಿಗಾನ”ದ ಚಿತ್ರದಲ್ಲಿ ಹೇಳಲು ಎತ್ತಿಕೊಂಡಿರುವ ವಸ್ತುವಿಷಯವು ಸಂಕೀರ್ಣವಾಗಿರುವ ಜೊತೆಗೆಯೇ ಕೆಳವರ್ಗದ ಜನರ ನಿಯತ್ತಿನ ಸ್ಥಾವರತೆ ಮತ್ತು ಬೆನ್ನಟ್ಟುವ ಆಸೆಗಳ ಜಂಗಮತ್ವಗಳ ನಡುವಿನ ಎಳೆಗಳನ್ನು ಬಿಡಿಬಿಡಿಯಾಗಿ ಅವಲೋಕಿಸುತ್ತದೆ. ಕರೀಮನ ಪಾತ್ರದ (ರೆಜಾ ನಾಝಿ) ಮೂಲಕ ಈ ಸ್ಥಾವರ ಮತ್ತು ಜಂಗಮತೆಗಳನ್ನು ಬಡತನಕ್ಕೆ ಜೋಡಿಸಿ ಮಜೀದಿ ಕಥನಕಲೆಗೆ ಇಟ್ಟಿಗೆ ಪೇರಿಸಿದ್ದಾರೆ.



“ಆಸ್ಟ್ರಿಚ್ ಫಾರ್ಮ್” ಒಂದರಲ್ಲಿ ಕೂಲಿಯಾಳಾಗಿರುವ ಕರೀಮನ ಕಿವಿ ಕೇಳದ ಮಗಳು “ಹಾನಿಯೆ”, ಆತನ ಮೀನಿನ ಆಸೆಯ ಹುಸೇನನೆಂಬ ಮಗನೂ ಎಲ್ಲ ದೇಶಗಳಲ್ಲೂ ಕಂಡುಬರುವ ರೀತಿಯ ಪುಟ್ಟ ಊರೊಂದರಲ್ಲಿ ಇರುವ ಮತ್ತು ಇಲ್ಲದಿರುವ “ವಸ್ತು”ಗಳೊಟ್ಟಿಗೆ ಬದುಕುತ್ತಿದ್ದಾರೆ. ತನ್ನ ಮನೆಯ ಮುಂದಿನ ಕುಡಿಯುವ ನೀರಿನ ಬಾವಿಯನ್ನು ಸ್ವಚ್ಛಗೊಳಿಸಿ ಅಲ್ಲಿ ಮೀನುಗಳನ್ನು ಚೆಲ್ಲಿ ನಿತ್ಯವೂ ಅವುಗಳನ್ನು ನೋಡುವ ಆಸೆಗೆ ಕರೀಮನ ಮಗ ಹುಸೇನನು ಪಕ್ಕಾಗಿದ್ದಾನೆ. ಯಾವತ್ತಾದರೊಂದು ದಿನ ಆ ಮೀನುಗಳು ದೊಡ್ಡದೊಡ್ಡ ಸೈಜಿಗೆ ಬೆಳೆದು ಅವುಗಳನ್ನು ಮಾರಿ ಇದ್ದಕ್ಕಿದ್ದಂತೆ ಶ್ರೀಮಂತನಾಗಿಬಿಡುವುದು ಬಾಲಕ ಹುಸೇನನ ಚಿಕ್ಕಸೈಜಿನ ಬಯಕೆ. ಕರೀಮನು ಕಿವಿ ಕೇಳಿಸದ ಮಗಳಿಗೆ ಒಂದು “ಶ್ರವಣ ಸಾಧನ” ತಂದುಕೊಟ್ಟರೂ ಅದು ಸದ್ಯಕ್ಕೆ ಈಗ ಮುರಿದು ಕೆಲಸಕ್ಕೆ ಬರುತ್ತಿಲ್ಲ. ಹೊಸತೊಂದು ಶ್ರವಣಸಾಧನ ಜೋಡಿಸಿದರೆ ಆಕೆಯ ಕಿವಿ ಕೇಳುತ್ತದೆ, ಕರೀಮನ ಕೈಯಲ್ಲಿ ಹಣವಿಲ್ಲ, ಹೇಗಾದರೂ ಆ ಶ್ರವಣಸಾಧನಕ್ಕಾಗುವಷ್ಟು ದುಡ್ಡು ಹೊಂಚುವ ಉಮೇದಿ ಕರೀಮನದ್ದು. ಹೀಗಿರುವಾಗಲೇ ಆಸ್ಟ್ರಿಚ್ ಫಾರ್ಮ್ ನಲ್ಲಿ ಒಂದು ಆಸ್ಟ್ರಿಚ್ ತಪ್ಪಿಸಿಕೊಂಡಿದೆ, ಆಸ್ಟ್ರಿಚ್ ಹುಡುಕಿಕೊಂಡು ಬಂದರೆ ಮಾತ್ರ ನಿನ್ನ ಕೆಲಸ, ಇಲ್ಲವಾದಲ್ಲಿ ನೀನು ಕೆಲಸದಿಂದ ಹೊರಗೆ ಎಂದು ತರಾಟೆಗೆ ತೆಗೆದುಕೊಂಡ ಫಾರ್ಮ್ ಮಾಲೀಕನ ಮಾತಿಗೆ ಕಟ್ಟುಬಿದ್ದು ಕರೀಮನು ತಾನೇ ಒಂದು ಆಸ್ಟ್ರಿಚ್ ಪಕ್ಷಿಯಂತೆ ಪುಕ್ಕ ಧರಿಸಿಕೊಂಡು ಗಂಡು ಆಸ್ಟ್ರಿಚ್ ಪಕ್ಷಿಯಂತೆ ಕೂಗು ಹಾಕುತ್ತ ಗುಡ್ಡ ಮೇಡುಗಳನ್ನು ಅಲೆಯುತ್ತಿದ್ದಾನೆ.  ಕೈಗೆ ಸಿಕ್ಕಿದಂತೆ ನಟಿಸಿ ನಂತರ ಮತ್ತೆ ಕಳೆದುಹೋಗುವ ಆಸ್ಟ್ರಿಚ್ ಪಕ್ಷಿಯು ಕರೀಮನ ಇಡೀ ಬದುಕನ್ನೇ ತಲೆಕೆಳಗು ಮಾಡಿ ತನ್ನಪಾಡಿಗೆ ತಾನು ಮತ್ತೆ ಅಲೆಯುತ್ತ ಹೋಗುತ್ತದೆ.“ಚಿಲ್ಡ್ರನ್ ಆಫ್ ಹೆವನ್” ಚಿತ್ರ
ಇದ್ದ ಕೆಲಸ ಕಳೆದುಕೊಂಡು ತ್ರಿಶಂಕು ಸ್ಥಿತಿಗೆ ನೂಕಲ್ಪಡುವ ಕರೀಮನು ಪಕ್ಕದ ಟೆಹ್ರಾನ್ ನಗರಕ್ಕೆ ಮಗಳ ಶ್ರವಣಸಾಧನ ರಿಪೇರಿಯ ಕಾರ್ಯನಿಮಿತ್ತ ತನ್ನ ಮುರುಕಲು ಮೋಟರ್ ಬೈಕ್ ನಲ್ಲಿ ತೆರಳಿದಾಗ ಅಲ್ಲಿ ಆಟೋ ಟ್ಯಾಕ್ಸಿಗಳಂತೆ ಸಾಮಾನ್ಯವಾಗಿರುವ ಬೈಕ್ ಟ್ರಾವೆಲ್ಸ್ ನವನೆಂದು ತಪ್ಪಾಗಿ ತಿಳಿದವನೊಬ್ಬ ಅವನನ್ನು ಒಂದೆಡೆಗೆ ತಲುಪಿಸಲು ಕರೀಮನ ಮುರುಕಲು ಬೈಕು ಹತ್ತುತ್ತಾನೆ, ಜಾಗ ತಲುಪಿದ ನಂತರ ಕೈತುಂಬ ಹಣ ಕೊಡುವ ಆತ ಕರೀಮನಿಗೆ “ಬೈಕ್ ಟ್ರಾನ್ಸ್ ಪೋರ್ಟರ್ ಎಂಬ ಹೊಸ ಕೆಲಸವೊಂದನ್ನು” ಅವನಿಗರಿವಿಲ್ಲದೆಯೇ ಕೊಟ್ಟು ಹೋಗಿದ್ದಾನೆ. ಬೈಕಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಜನರನ್ನು ಡ್ರಾಪ್ ಮಾಡಿದರೆ ಹಣ ಕೊಡುತ್ತಾರೆ ಎಂಬ ಹೊಸ ದುಡಿಮೆಯ ಸಾಧ್ಯತೆಯನ್ನು ಒಪ್ಪುವ ಕರೀಮನು ಅದೇ ಕೆಲಸವನ್ನು ಮುಂದುವರೆಸುತ್ತಾನೆ. ದಿನದಿಂದ ದಿನಕ್ಕೆ ದುಡಿಮೆಯ ಪ್ರಮಾಣವೂ ಏರುತ್ತಿದೆ. ಹಿಂದೆಂದೂ ನೋಡಿರದಷ್ಟು ಹಣವನ್ನು ಕರೀಮನ ಬೈಕ್ ಡ್ರಾಪ್ ಕೆಲಸ ಆತನಿಗೆ ಕೊಡುತ್ತಿದೆ.

“ಚಿಲ್ಡ್ರನ್ ಆಫ್ ಹೆವನ್” ಚಿತ್ರಕೆಲಸದ ನಡುವೆಯೇ ಟೆಹರಾನಿನ ಕಟ್ಟಡ ನಿರ್ಮಾಣ ನಡೆಯುತ್ತಿರುವ ಸ್ಥಳಗಳಲ್ಲಿ, ಬೇಡವೆಂದು ಉಳ್ಳವರು ಬಿಸಾಡಿದ ನಿರುಪಯುಕ್ತ ವಸ್ತುಗಳನ್ನು ಮಾಲೀಕರ ಒಪ್ಪಿಗೆಯ ಮೇರೆಗೆ ದಿನವೂ ಒಂದೊಂದು ವಸ್ತುವನ್ನು ಕರೀಮನು ತನ್ನೂರಿಗೆ ಬೈಕಿನಲ್ಲಿ ಕಟ್ಟಿಕೊಂಡು ಬರುತ್ತಾನೆ, ತಾನು ದುಡ್ಡು ಕೊಟ್ಟು ಖರೀದಿಸಲು ಆಗದೇ ಇದ್ದ, ಟಿವಿ ಆಂಟೆನಾ, ಮುರಿದ ಕಿಟಕಿಗಳು, ಬಿರುಕುಬಿದ್ದ ಬಾಗಿಲುಗಳು ಹೀಗೆ ದಿನವೂ ಒಂದೊಂದನ್ನು ತನ್ನ ಮನೆಗೆ ಕೊಂಡೊಯ್ದು ಪೇರಿಸಿಡುತ್ತಿದ್ದಾನೆ, ಕೂಡಿಟ್ಟ ನಿರುಪಯುಕ್ತ ವಸ್ತುಗಳ ಗುಡ್ಡೆಯೇ ಕರೀಮನ ಮನೆಯ ಮುಂದೆ ಕಾಲುಕತ್ತರಿಸಿ ಬಿದ್ದಿದೆ. ದಿನಕಳೆದಂತೆ ಆ ತ್ಯಾಜ್ಯಗಳ ಗುಡ್ಡೆಯ ಮೇಲೆಯೇ ಮೋಹವುಕ್ಕಿಸಿಕೊಳ್ಳುವ ಕರೀಮನು ಅವನ್ನು ಕೇಳಿಕೊಂಡು ಬಂದ ಊರವರಿಗೂ ನಿರಾಕರಿಸುತ್ತ ತನ್ನ ತ್ಯಾಜ್ಯದೆಡೆಗಿನ ಮೋಹದೊಳಗೇ ಕಟ್ಟಿಹಾಕಲ್ಪಟ್ಟಿದ್ದಾನೆ. ಪಕ್ಕದ ಮನೆಯಾಕೆಗೆ ಆ ತ್ಯಾಜ್ಯದ ಗುಡ್ಡೆಯಿಂದ ಒಂದು ಮುರುಕಲು ನೀಲಿ ಬಾಗಿಲು ಕೊಟ್ಟಿದ್ದ ಹೆಂಡತಿಯ ಮೇಲೆ ಸಿಡಿಮಿಡಿಗೊಳ್ಳುವ ಕರೀಮನು, ಪಕ್ಕದ ಮನೆಯಿಂದ ಆ ನೀಲಿ ಬಾಗಿಲನ್ನು ಹೊತ್ತು ವಾಪಸ್ಸು ತರುವಾಗ ಆಯತಪ್ಪಿಬಿದ್ದು ಕಾಲು ಮುರಿದುಕೊಳ್ಳುತ್ತಾನೆ. ಆ ಸಮಯದಲ್ಲಿ ಊರವರು ಮತ್ತು ನೆರೆಹೊರೆಯವರು ಮತ್ತು ಮನೆಯವರ ಪ್ರೀತಿಯನ್ನು ಅನಾಯಾಸವಾಗಿ ದಕ್ಕಿಸಿಕೊಂಡಿರುವ ಕರೀಮನಿಗೆ ತನ್ನ ತ್ಯಾಜ್ಯದ ಗುಡ್ಡೆಯ ನಿರ್ಜೀವ ಮುರಿದ ವಸ್ತುಗಳಿಗಿಂತ ಮನುಷ್ಯ ಮನುಷ್ಯರ ನಡುವಿನ ಬಂಧನವೇ ಆಪ್ತವಾಗಿ ಕಾಡುತ್ತದೆ. “ಚಿಲ್ಡ್ರನ್ ಆಫ್ ಹೆವನ್” ಚಿತ್ರ
ಇತ್ತ ಮೀನು ಸಾಕಿ ಸಾಹುಕಾರನಾಗಿಬಿಡುವ ಆಸೆಗೆ ತಲೆಕೊಟ್ಟಿರುವ ಕರೀಮನ ಮಗ ಹುಸೇನನು ತನ್ನ ಗೆಳೆಯರೊಡಗೂಡಿ ಚಿಲ್ಲರೆ ಕಾಸುಗಳನ್ನು ಸೇರಿಸಿ ಒಂದಷ್ಟು ಗೋಲ್ಡನ್ ಫಿಶ್ ಗಳನ್ನು ಖರೀದಿಸಿದ್ದಾನೆ. ಅವುಗಳನ್ನು ನೀರುತುಂಬಿದ ಡ್ರಮ್ಮಿನೊಳಗಿಟ್ಟು ಹೂವಿನಕುಂಡಗಳಿರುವ ಒಂದು ವಾಹನದಲ್ಲಿ ಊರಿಗೆ ಬರುವ ಪ್ರಯತ್ನದಲ್ಲಿ ಆ ಮೀನು ತುಂಬಿದ ಡ್ರಮ್ಮು ನೆಲಕ್ಕೆ ಬಿದ್ದು ಮೀನುಗಳೆಲ್ಲ ಪಟಪಟನೆ ಒದ್ದಾಡಿ ಜೀವಬಿಡುತ್ತವೆ. ಕೊನೆಯನ್ನು ನೀವು ಚಿತ್ರದಲ್ಲೇ ನೋಡಿದರೆ ಒಳ್ಳೆಯದು.
ಒಟ್ಟು ಸಿನಿಮಾ ಮಾತನಾಡುವುದು ಕನ್ ಸ್ಯೂಮರಿಸಂನ ಎಳೆತಕ್ಕೆ ತಲೆಕೊಡುತ್ತಿರುವ ಬಡವರ್ಗದ ತಾಕಲಾಟಗಳ ಬಗ್ಗೆ. “ತೂರಜ್ ಮನ್ಸೋರಿ”ಯ ಛಾಯಾಗ್ರಹಣ ಮಜೀದಿಯ ಉಳಿದೆಲ್ಲ ಚಿತ್ರಗಳಿಗಿಂತ ಸಾಂಗ್ ಆಫ್ ಸ್ಪಾರೋಸ್ ಚಿತ್ರವನ್ನು ಬೇರೆಯದೇ ಎತ್ತರಕ್ಕೆ ಒಯ್ಯುತ್ತದೆ. ಕರೀಮನ ಮಗ ಹುಸೇನನಾಗಿ ನಟಿಸಿರುವ “ಅಗಾಝಿ” ಎಲ್ಲಿಯೂ ತನ್ನೆದುರು ಕೆಮೆರಾ ಇದೆ, ನಿರ್ದೇಶಿಸಲು ಮಜೀದಿಯಿದ್ದಾನೆ ಎಂಬ ಸುಳಿವನ್ನೇ ಮರೆತವನಂತೆ ಚಿತ್ರದ ಕೊನೆಕೊನೆಯಲ್ಲಿ ನೋಡುಗರನ್ನು ಆವರಿಸಿಕೊಳ್ಳುವ ಬಗೆಯೇ ಅದ್ಭುತ.

“ಚಿಲ್ಡ್ರನ್ ಆಫ್ ಹೆವನ್” ಚಿತ್ರಚಿತ್ರದ ನಾಯಕ ಕರೀಮನ ಪಾತ್ರದಲ್ಲಿ ಕುತ್ತಿಗೆ ಮಟ್ಟಕ್ಕೆ ಹೂತು ಹೋಗಿರುವ “ರೆಜಾ ನಾಝಿ”ಯ ಬಗ್ಗೆ ಏನು ಪದಜೋಡಿಸಿ ಬರೆದರೂ ಕಡಿಮೆಯೇ. ನಿಯತ್ತಿನ ದುಡಿಮೆ, ಅನಾಯಾಸವಾಗಿ ದಕ್ಕುವ ತ್ಯಾಜ್ಯವಸ್ತುಗಳು, ಕಿವುಡು ಮಹಳ ಶ್ರವಣ ಸಾಧನಕ್ಕೆ ಆತ ಬೀಳುವ ಪಾಡು, ಎಲ್ಲದರಲ್ಲಿಯೂ ರೆಜಾನಾಝೀ ಸಂಪೂರ್ಣವಾಗಿ ತನ್ಮಯನಾಗಿ ಹೋಗಿದ್ದಾರೆ. ಹೊರಲಾರದ ಭಾರವಾದರೂ, ನೀಲಿಬಾಗಿಲನ್ನು ಹೊತ್ತು ಬಟಾಬಯಲು ಗದ್ದೆಯಲ್ಲಿ ಉಸಿರುಬಿಡುತ್ತ ಸಾಗುವಾಗಿನ ರೆಜಾನ ಅಭಿನಯ.. ಬಿಗಿದಪ್ಪಿಕೊಳ್ಳಬೇಕೆನಿಸುವಷ್ಟು ಅದ್ಭುತವಾಗಿದೆ. ಇರಾನಿನಲ್ಲಿದ್ದೂ ಅಲ್ಲಿನ ಕರ್ಮಠರು ಮತ್ತು ವ್ಯವಸ್ಥೆಯ ತಿಕ್ಕಾಟಗಳಿಗೆ ಹಿಂದೆ ಬಿದ್ದ ಸಣ್ಣಪುಟ್ಟ ಹಳ್ಳಿಗಳ, ಊರುಗಳ ಜನರ ಬದುಕುವ ಪಡಿಪಾಟಲನ್ನು ಮಕ್ಕಳನ್ನು ಬಳಸಿ ಕಥನರೂಪದಲ್ಲಿ ಕಟ್ಟುವ ಮಜೀದಿಯ ಪ್ರಯತ್ನಗಳು “ಸಾಂಗ್ ಆಫ್ ಸ್ಪಾರೋಸ್” ಎಂಬ ಪರ್ಷಿಯನ್ ಚಿತ್ರದಲ್ಲಿ ದಿವೀನಾಗಿ ಮುನ್ನುಗ್ಗಿವೆ.      
ಕೆಂಡ ಸಂಪಿಗೆಯಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

ನಾಟ್ ಒನ್ ಲೆಸ್



ನಾಟ್ ಒನ್ ಲೆಸ್

ಬೀದಿಯಲ್ಲಿ ಪೋಲಿ ತಿರುಗುವ ಹಾದಿಬೀದಿಯ ಮಕ್ಕಳ ಬರವಣಿಗೆಯೊಳಗೆ ಅವರಿರುವ ಸಮಕಾಲೀನ ಜಗತ್ತಿನ ಏರಿಳಿತಗಳ ಜಾಡು ಅಂಟಿಕೊಂಡಿರುತ್ತದೆ, ಪೋಲಿ ಹುಡುಗರನ್ನು ಬರವಣಿಗೆಯೊಳಗೆ ಎಳೆತರಬೇಕು ಎಂದ ಲಂಕೇಶರ ಮಾತನ್ನು ಕೇಳಿಸಿಕೊಂಡೇ ಹುಟ್ಟಿದಂತಿರುವ ಚೈನಾದ ಚಿತ್ರ ನಿರ್ದೇಶಕ ಇಮೂ ಝಾಂಗ್, ಜಾಗತಿಕ ಶ್ರೇಷ್ಠ ಸಿನಿಮಾಗಳ ಮಾರುಕಟ್ಟೆಯೊಳಗೆ ಹತ್ತುಹಲವು ಗಮನಾರ್ಹ ಚಿತ್ರಗಳನ್ನು ನುಗ್ಗಿಸಿದ ಪ್ರತಿಭೆ. ಬಡತನದ ಕಾರಣಕ್ಕೆ, ಮನೆಯೊಳಗೆ ಹಾಸಿಗೆ ಹಾಸಿಕೊಂಡು ಮಲಗಿದ್ದ ಹಸಿವಿನ ಕಾರಣಕ್ಕೆ ಓದನ್ನು ಅರ್ಧಕ್ಕೇ ಎಸೆದು ಹಳ್ಳಿಗಾಡಿನ ಗದ್ದೆಗಳಲ್ಲಿ ಕೂಲಿಕಾರ್ಮಿಕನಾಗಿ, ನೂಲಿನ ಗಿರಣಿಗಳಲ್ಲಿ ದಿನಗೂಲಿಯವನಾಗಿ ದುಡಿಯುತ್ತಿದ್ದ ಇಮೂ ನಂತರದ ಬೆಳವಣಿಗಳಲ್ಲಿ ಫೋಟೋಗ್ರಫಿಯತ್ತ ಆಸಕ್ತಿ ಹುಟ್ಟಿಸಿಕೊಂಡು, ತನ್ಮೂಲಕ ಸಿನಿಮಾ ಗೀಳಿಗೆ ಬಿದ್ದು ಛಾಯಾಗ್ರಹಣ ಕಲಿತು ಮೂರು ಚಿತ್ರಗಳಿಗೆ ಸಿನೆಮಾಟೋಗ್ರಫಿಯನ್ನೂ ಮಾಡಿದವರು. 1988ರಲ್ಲಿ ರೆಡ್ ಸೊರ್ಗಂ ಚಿತ್ರದ ಮೂಲಕ ಚಿತ್ರ ನಿರ್ದೇಶಕನಾದ ಇಮೂ ಝಾಂಗ್ಗೆ ಆ ಚಿತ್ರ ಬರ್ಲಿನ್ ಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್ ಪ್ರಶಸ್ತಿಯನ್ನೂ ತಂದುಕೊಟ್ಟಿತು. ಬರಹಗಾರನಾಗಿ, ನಿರ್ಮಾಪಕನಾಗಿ, ತಂತ್ರಜ್ಞನಾಗಿ ಹಲವು ಮಜಲುಗಳನ್ನು ಮುಟ್ಟುತ್ತಲೇ ಬಂದ ಇಮೂ 1999ರಲ್ಲಿ ನಿರ್ದೇಶಿಸಿದ ಒಂದು ಚಿತ್ರವು ಆತನಿಗೆ ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ನಿರ್ದೇಶಕನ ಸ್ಥಾನವನ್ನೂ, ಚೈನಾ ಸರ್ಕಾರದ ಕೆಂಗಣ್ಣನ್ನೂ ಪ್ರಾಪ್ತಗೊಳಿಸಿತು.

ತನ್ನ ಹುಟ್ಟೂರು ಶಾಂಕ್ಷಿಯಲ್ಲಿ ತಾನು ಕಂಡ ಬಡತನ, ಅನುಭವಿಸಿದ ಹಸಿವು ಮತ್ತು ಶೈಕ್ಷಣಿಕ ಬೆಳವಣಿಗೆಯತ್ತ ಕುರುಡಾದ ಚೈನಾ ಸರ್ಕಾರದ ಬಡವರ ವಿರೋಧಿ ವಿವರಗಳು ಮತ್ತು ಶ್ರೀಮಂತ ಬಡವರ ನಡುವಿನ ಆರ್ಥಿಕತೆಯ ಹಂಚಿಕೆಯ ಕಂದರಗಳನ್ನು ಒಟ್ಟುಗೂಡಿಸಿ ಚಿತ್ರಕಥೆ ರಚಿಸಿ ನಾಟ್ ಒನ್ ಲೆಸ್ ಎಂಬ ಚಿತ್ರವನ್ನು ರೂಪಿಸಿದ ಇಮೂ, ಆ ಮೂಲಕ ಚೈನಾದ ತಥಾಕಥಿತ ಆಕ್ಷನ್ ಮತ್ತು ಐತಿಹಾಸಿಕ ಪ್ರಧಾನವಾಹಿನಿ ಸಿನಿಮಾಗಳ ಸಿದ್ದ ಮಾದರಿಯನ್ನು ಕಟುವಾಗಿಯೇ ಮುರಿದಿದ್ದರು. ಚಿತ್ರ ನಿರ್ದೇಶಕನೊಬ್ಬ ಮನರಂಜನೆಯಾಚೆಗೂ ಸಿನಿಮಾ ಮಾಧ್ಯಮವನ್ನು ಪ್ರತಿರೋಧದ ನೆಲೆಯ ಆಕ್ಟಿವಿಸಂನ ಟೂಲ್ ಆಗಿ ಕೊಂಡೊಯ್ಯಬಲ್ಲ ಎಂಬುದಕ್ಕೆ ನಾಟ್ ಒನ್ ಲೆಸ್ ಅದ್ಭುತವಾದ ಉದಾಹರಣೆ. ಕಣ್ಣಿಗೆ ಕಂಡ ಹಳ್ಳಿಗರನ್ನೇ ತರಬೇತುಗೊಳಿಸಿ ನಿಯೋ ರಿಯಲಿಸ್ಟ್ ಮಾದರಿಯಲ್ಲಿ ಇಮೂ ರೂಪಿಸಿದ ಆ ಚಿತ್ರದ ಕುರಿತ ಒಂದಷ್ಟು ವಿವರಗಳು ಇಲ್ಲಿವೆ. 
ಚೈನಾದ ಮೂಲೆಯಲ್ಲೆಲ್ಲೋ ಇರುವ ಶಿಖುವಾನ್ ಎಂಬುದು ನಮ್ಮೂರ ಹಳ್ಳಿಗಳಂಥದೇ ಒಂದು ಹಳ್ಳಿಗಾಡು. ಹೊಲಗದ್ದೆಗಳಲ್ಲಿ ಕೂಲಿ ಮಾಡುವ, ನಗರಪಟ್ಟಣಗಳಿಗೆ ಅನ್ನ ಹುಡುಕುತ್ತ ವಲಸೆ ಹೋಗುವ, ಹಸಿವು ಬಡತನದಿಂದ ಜೀವ ಬಿಡುತ್ತಿರುವ ಜನರಿರುವ ಶಿಖುವಾನ್ ಹಳ್ಳಿಯಲ್ಲೊಂದು ಮುರುಕಲು ಪ್ರಾಥಮಿಕ ಶಾಲೆಯಿದೆ. ಎಲ್ಲ ಸರ್ಕಾರಿ ಸಂಸ್ಥೆಗಳು ನಡೆಸುವ ಶಾಲೆಯಂತೆಯೇ ಅದೂ ಸಹ ಈಗಲೋ ಆಗಲೋ ಉದುರೇ ಹೋಗುವಷ್ಟು ಶಿಥಿಲಗೊಂಡ ಕಟ್ಟಡದಲ್ಲಿ ನಡೆಯುತ್ತಿದೆ. ಇಂಥ ಶಾಲೆಯ ಮೇಷ್ಟರಾಗಿರುವ ಗಾವೋ ಗೆ ತಾಯಿಯ ಅನಾರೋಗ್ಯ ನಿಮಿತ್ತವಾಗಿ ತನ್ನೂರಿಗೆ ಹೋಗುವ ತುರ್ತು ಎದುರಾಗುತ್ತದೆ. ಈಗಾಗಲೇ 40 ಮಕ್ಕಳು ದಾಖಲಾಗಿದ್ದ ಶಾಲೆಯಲ್ಲಿ ಅಕ್ಷರಕ್ಕಿಂತ ಅನ್ನ ದೊಡ್ಡದು ಎಂಬ ನೈಸರ್ಗಿಕ ಕಾನೂನಿಗೆ ಜೈ ಎಂದ ಬಹಳಷ್ಟು ಮಕ್ಕಳು ಶಾಲೆಯ ಓದನ್ನು ತ್ಯಜಿಸಿ ಕೂಲಿಕಾರರಾಗಿ ಮಾರ್ಪಟ್ಟಿವೆ. ಇನ್ನು ಕೇವಲ 28 ಮಕ್ಕಳು ಶಾಲೆಯೊಳಗೆ ಪಾಠ ಕಲಿಯುತ್ತಿವೆ. ಇನ್ನೂ ಮಕ್ಕಳ ಸಂಖ್ಯೆ ಕಡಿಮೆಯಾದರೆ ಶಾಲೆಯೇ ಸ್ಥಗಿತಗೊಳ್ಳುವ ಆತಂಕದಲ್ಲಿರುವ ಶಿಕ್ಷಕ ಗಾವೋ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಲೆಯನ್ನು ಖಾಲಿಬಿಟ್ಟು ಊರಿಗೆ ತೆರಳಲು ಮನಸು ಬರುವುದಿಲ್ಲ. ಇದಕ್ಕೆ ಉಪಾಯವೆಂಬಂತೆ ಶಿಖುವಾನ್ ಹಳ್ಳಿಯ ಮುಖ್ಯಸ್ಥನೊಬ್ಬನನ್ನು ಕರೆದು ಓದುಬರಹ ಕಲಿತಿರುವ ಯಾರಾದರನ್ನು ಒಂದಷ್ಟು ದಿನಗಳ ಕಾಲ ಶಾಲೆ ನೋಡಿಕೊಳ್ಳಲು ಸೂಚಿಸಲು ಕೇಳಿಕೊಳ್ಳುತ್ತಾನೆ. ಹಳ್ಳಿಯ ಮುಖ್ಯಸ್ಥ ತನ್ನ ಗ್ರಾಮವನ್ನೆಲ್ಲ ಶೋಧಿಸಿ 13 ವರ್ಷದ ಮಿಂಝಿ ಎಂಬ ಬಾಲಕಿಯೊಬ್ಬಳನ್ನು ಶಿಕ್ಷಕನ ಮುಂದೆ ತಂದು ನಿಲ್ಲಿಸುತ್ತಾನೆ. ಹರೆಯಕ್ಕಿಂತ ಮಾರುದೂರವಿರುವ, ಸಂಪೂರ್ಣ ಶೈಕ್ಷಣಿಕ ಪ್ರಬುದ್ಧತೆಯಿಲ್ಲದ ಮಿಂಝಿಯೂ ಅರ್ಧದಲ್ಲೇ ಶಾಲೆ ತೊರೆದವಳು. ಹಾಳೂರಿಗೆ ಉಳಿದವಳೇ ಮಿಂಝಿ ಎಂದರಿತ ಶಿಕ್ಷಕ ಗಾವೋ ಮಿಂಝಿಗೆ ತಾನು ವಾಪಸ್ಸು ಬರುವವರೆಗೂ ಪುಸ್ತಕದೊಳಗಿನ ಪಾಠಗಳನ್ನು ಬೋರ್ಡ್ ಮೇಲೆ ಬರೆದು ಮಕ್ಕಳ ಕೈಲಿ ಓದಿಸುವಂತೆಯೂ, ಇರುವ 28 ವಿದ್ಯಾರ್ಥಿಗಳಲ್ಲಿ ಒಬ್ಬರೂ ಕಡಿಮೆಯಾಗಬಾರದು, ತಾನು ವಾಪಸು ಬಂದಾಗ 28 ಮಂದಿ ವಿದ್ಯಾರ್ಥಿಗಳಲ್ಲಿ ಒಬ್ಬರೂ ಶಾಲೆ ತೊರೆದಿರಬಾರದು, ದಿನಕ್ಕೆ ಒಂದು ಚಾಕ್ ಪೀಸ್ ಮಾತ್ರವಷ್ಟೇ ಖರ್ಚು ಮಾಡಬೇಕು.. ಇಷ್ಟನ್ನು ನಿರ್ವಹಿಸಿದರೆ ಹಣವನ್ನು ನೀಡುವುದಾಗಿಯೂ ಒಪ್ಪಿಸುತ್ತಾನೆ. ಮನೆಯ ಕಷ್ಟನಷ್ಟಗಳನ್ನು ಸರಿದೂಗಿಸಲು ಹಣದ ಅಗತ್ಯವಿದ್ದ ಮಿಂಝಿ ಸರಿಯೆಂದು ಒಪ್ಪುತ್ತಾಳೆ. ಶಿಕ್ಷಕ ಗಾವೋ ಮಿಂಝಿಯ ಸುಪರ್ದಿಗೆ ಶಾಲೆಯನ್ನೂ, ಮಕ್ಕಳನ್ನೂ ಒಪ್ಪಿಸಿ ತನ್ನೂರಿಗೆ ತೆರಳುತ್ತಾನೆ.
ಇತ್ತ ತನ್ನಷ್ಟೇ ವಯಸ್ಸಿನ, ತನಗಿಂತಲೂ ದೊಡ್ಡ ವಯಸ್ಸಿನ ಶಾಲೆಯ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಹೊತ್ತುಕೊಂಡ ಮಿಂಝಿಯನ್ನು ಶಾಲೆಯ ಮಕ್ಕಳು ಶಿಕ್ಷಕಿಯಾಗಿ ಒಪ್ಪಿಕೊಳ್ಳುವುದೇ ಇಲ್ಲ. ತಮ್ಮೊಂದಿಗೇ ಆಟವಾಡುತ್ತ ಬೆಳೆದ ಮಿಂಝಿಯನ್ನು ಶಿಕ್ಷಕಿಯಾಗಿ ಆ ಮಕ್ಕಳು ಸ್ವೀಕರಿಸಲು ಹಿಂದೇಟು ಹಾಕುತ್ತವೆ. ಗಾವೋ ಮೇಷ್ಟರಿಗೆ ಹೆದರಿದಂತೆ, ವಿನಯ ಗೌರವ ತೋರಿದಂತೆ ಮಿಂಝಿಗೆ ಯಾವ ಸ್ಥಾನಮಾನವನ್ನೂ ಈ ಮಕ್ಕಳು ನೀಡದೆ ತಮ್ಮಷ್ಟಕ್ಕೆ ತಾವು ಕಿತ್ತಾಡುತ್ತ ಜಗಳಾಡುತ್ತ ಶಾಲೆಯಲ್ಲಿ ಕುಳಿತಿರುತ್ತವೆ. ಪ್ರತಿನಿತ್ಯ ಬೋರ್ಡಿನ ಮೇಲೆ ಪಾಠವೊಂದನ್ನು ಬರೆದು ಅದನ್ನು ಬರೆದುಕೊಳ್ಳಲು ಹೇಳಿ ತನ್ನಪಾಡಿಗೆ ತಾನು ರೊಟ್ಟಿಬ್ರೆಡ್ಡು ಬೇಯಿಸುತ್ತ ಅನ್ಯಮನಸ್ಕಳಾಗುವ ಮಿಂಝಿಯನ್ನು ಈ ಮಕ್ಕಳು ಗಮನಿಸಲೂ ಸಹ ಹೋಗದೆ ತಮ್ಮಪಾಡಿಗೆ ತಾವು ಆಟಪಾಠಗಳಲ್ಲಿ ತೊಡಗಿಕೊಂಡಿವೆ. ಒಂದೆರಡು ದಿನಗಳು ಕಳೆದು ಹೋದ ನಂತರ ಮಿನ್ ಕ್ಸಿಂಗ್ಹೋಂಗ್ ಎಂಬ ವಿದ್ಯಾರ್ಥಿನಿಯೋರ್ವಳನ್ನು ಕ್ರೀಡೆಯಲ್ಲಿ ಹೆಚ್ಚಿನ ಪರಿಣತಿಗಾಗಿ ಪಟ್ಟಣಕ್ಕೆ ಕರೆದೊಯ್ಯಲು ನಗರದಿಂದ ಬರುವ ಕ್ರೀಡಾತಜ್ಞನು ಮಿಂಝಿಯಿಂದ ಪ್ರತಿರೋಧವನ್ನೆದುರಿಸುತ್ತಾನೆ. ಗಾವೋ ಹೇಳಿದಂತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೆ ತನಗೇ ನಷ್ಟವೆಂದರಿತ ಮಿಂಝಿ ಆ ಹುಡುಗಿಯನ್ನು ಬಚ್ಚಿಡುತ್ತಾಳೆ. ಕೊನೆಗೆ ಶಿಖುವಾನ್ ಗ್ರಾಮದ ಮುಖ್ಯಸ್ಥನ ಮನವೊಲಿಕೆ ಮತ್ತು ಶಿಕ್ಷಕ ಗಾವೋಗೆ ತಾನು ಹೇಳುತ್ತೇನೆಂಬ ಧೈರ್ಯದ ಮಾತಿಗೆ ಬೆಲೆ ಕೊಟ್ಟು ಆಕೆಯನ್ನು ಕ್ರೀಡಾತಜ್ಞನೊಟ್ಟಿಗೆ ನಗರಕ್ಕೆ ಕಳುಹಿಸುತ್ತಾಳೆ. ಮಾರನೆಯ ದಿನ ತನ್ನ ಶಾಲೆಯ ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಲೆಕ್ಕ ತಪ್ಪಿಹೋಗಿರುವುದು ಮಿಂಝಿಯ ಗಮನಕ್ಕೆ ಬರುತ್ತದೆ. ಶಾಲೆಯ ಪರಿಸರವನ್ನು ಅಲ್ಲೋಲಕಲ್ಲೋಲಗೊಳಿಸುವಷ್ಟು ತರಲೆ ವಿದ್ಯಾರ್ಥಿಯಾಗಿದ್ದ ಝಾಂಗ್ ಎಂಬ ಹುಡುಗ ಶಾಲೆಗೆ ಬರದೇ ತಪ್ಪಿಸಿಕೊಂಡಿರುವುದು ಗಮನಕ್ಕೆ ಬಂದು ಆತನನ್ನು ಹುಡುಕುತ್ತ ಅವನ ಮನೆಗೆ ತೆರಳಿದಾಗ ಕಾಯಿಲೆಬಿದ್ದ ಆತನ ತಾಯಿಯ ಚಿಕಿತ್ಸೆಯ ವೆಚ್ಚಕ್ಕೆ ಹಣವನ್ನು ಸಂಪಾದಿಸಲು ಝಾಂಗ್ ಪಕ್ಕದ ಪಟ್ಟಣಕ್ಕೆ ಕೂಲಿ ಹುಡುಕುತ್ತ ಹೋಗಿರುವುದು ತಿಳಿದು ಬರುತ್ತದೆ. ಚಿತ್ರದ ಮೂಲನಡೆ ಶುರುವಾಗುವುದು ಇಲ್ಲಿಂದಲೇ.. 
ಶಿಕ್ಷಕ ಗಾವೋಗೆ ನೀಡಿದ ವಾಗ್ದಾನದಂತೆ ಇರುವ 28 ಮಕ್ಕಳಲ್ಲಿ ಯಾರೂ ಶಾಲೆ ಬಿಡದಂತೆ ನೋಡಿಕೊಳ್ಳುವುದು ಮಿಂಝಿಯ ಕರ್ತವ್ಯವಾದ್ದರಿಂದ ತನಗೆ ಶಿಕ್ಷಕ ಗಾವೋರಿಂದ ಬರಬೇಕಾದ ಹಣಕ್ಕೆ ಕುತ್ತುಂಟಾಗುತ್ತದೆ ಎಂದು ಬಗೆದ ಮಿಂಝಿ ಚಿಂತೆಗೆ ಬೀಳುತ್ತಾಳೆ. ಏನಾದರೂ ಸರಿಯೇ ಝಾಂಗ್ ತೆರಳಿರುವ ಝಂಗ್ಜಾಕೋ ಪಟ್ಟಣಕ್ಕೆ ತೆರಳಿ ಆತನನ್ನು ಕರೆತರಲೇಬೇಕೆಂದು ನಿಶ್ಚಯಿಸುವ ಮಿಂಝಿಯ ಬಳಿ ಆ ನಗರಕ್ಕೆ ತೆರಳುವಷ್ಟು ಬಸ್ಚಾಚಾರ್ಜಿನ ಹಣವೂ ಇರುವುದಿಲ್ಲ. ಶಾಲೆಯ ಮಕ್ಕಳ ಬಳಿರುವ ಚಿಲ್ಲರೆ ಕಾಸೆಲ್ಲವನ್ನೂ ಒಟ್ಟುಗೂಡಿಸಿದರೂ ಬಸ್ಚಾರ್ಜಿಗೆ ಹಣ ದೊರಕುವುದಿಲ್ಲ. ಕೊನೆಗೆ ಮಕ್ಕಳೆಲ್ಲರನ್ನೂ ಕರೆದುಕೊಂಡು ಇಟ್ಟಿಗೆ ಸುಡುವ ಭಟ್ಟಿಯೊಳಗೆ ಕೂಲಿಗೆ ಹೋಗುವ ಮಿಂಝಿ ಅಲ್ಲಿ ದಿನಪೂರ್ತಿ ಮಕ್ಕಳೊಟ್ಟಿಗೆ ಕೂಲಿ ಮಾಡಿ ಒಂದಷ್ಟು ಹಣ ಸಂಪಾದಿಸುತ್ತಾಳೆ. ಆ ಹಣವೂ ಸಾಲದಾದಾಗ ಮಕ್ಕಳು ಶಿಖುವಾನ್ ಹಳ್ಳಿಯಿಂದ ಝಂಗ್ಜಾಕೋ ಪಟ್ಟಣಕ್ಕೆ ಖಾಸಗಿ ಟೆಂಪೋ ಒಂದು ತೆರಳುವುದಾಗಿಯೂ.. ಮಿಂಝಿ ಆ ಟೆಂಪೋದ ಸೀಟಿನ ಕೆಳಗೆ ಅವಿತುಕೊಂಡು ಪಟ್ಟಣ ತಲುಪಬಹುದಾಗಿಯೂ ಉಪಾಯ ಕೊಡುತ್ತಾರೆ. ಅದರಂತೆಯೇ ಸೀಟಿನ ಕೆಳಗೆ ಅವಿತು ಕುಳಿತ ಮಿಂಝಿಯನ್ನು ಟೆಂಪೋದವನು ಎಳೆದು ನಡುದಾರಿಯಲ್ಲಿ ರಸ್ತೆಗೆ ನೂಕುತ್ತಾನೆ. ಅಲ್ಲಿಂದ ಕಿಲೋಮೀಟರುಗಟ್ಟಲೆ ಬೆಟ್ಟಗುಡ್ಡಗಳನ್ನು ಹತ್ತಿ ಇಳಿದು ಕಡೆಗೆ ಮಿಂಝಿ ಝಂಗ್ಜಾಕೋ ಪಟ್ಟಣವನ್ನು ಸೇರುತ್ತಾಳೆ. ಬಾಲಕ ಝಾಂಗ್ ಕೆಲಸಕ್ಕೆಂದು ಬಂದ ಮನೆಯಲ್ಲಿನ ಕೆಲಸದಾಕೆಯನ್ನು ವಿಚಾರಿಸಿದಾಗ ಆತ ರೈಲ್ವೇ ಸ್ಟೇಷನ್ನಲ್ಲಿ ತಪ್ಪಿಸಿಕೊಂಡಿರುತ್ತಾನೆ. ಕೆಲಸದಾಕೆ ಸೂನ್ಜಿಮಿಯನ್ನು ಝಾಂಗ್ನನ್ನು ಹುಡುಕಿಕೊಡಲು ಕೇಳುವ ಮಿಂಝಿ ಆಕೆಯಿಂದ ನಿರಾಕರಣೆಗೆ ಒಳಗಾಗುತ್ತಾಳೆ. ಝಾಂಗ್ ಕಳೆದುಹೋದ ರೈಲ್ವೇಸ್ಟೇಷನ್ಗೆ ತೆರಳುವ ಮಿಂಝಿ ಝಾಂಗ್ಗಾಗಿ ಅಲ್ಲೆಲ್ಲ ಹುಡುಕಿ ಸೋತು ಕೊನೆಗೆ ರೈಲ್ವೇ ಸ್ಟೇಷನ್ನ ಅನೌನ್ಸರ್ ಬಳಿ ಪ್ರಕಟಣೆ ನೀಡುವಂತೆ ಬೇಡಿಕೊಳ್ಳುತ್ತಾಳೆ. ಸಂಜೆಯವರೆಗೂ ಅನೌನ್ಸರ್ ಮೈಕ್ ಮೂಲಕ ಪ್ರಕಟಣೆ ಹೊರಡಿಸಿದರೂ ಝಾಂಗ್ನ ಸುಳಿವು ಸಿಗುವುದಿಲ್ಲ. ಪ್ರಯತ್ನ ಬಿಡದ ಮಿಂಝಿ ಸ್ಟೇಷನರಿ ಅಂಗಡಿಯೊಂದಕ್ಕೆ ತೆರಳಿ ಒಂದಷ್ಟು ಹಾಳೆಯನ್ನೂ ಬಣ್ಣದ ಪೆನ್ನನ್ನೂ ತಂದು ಝಾಂಗ್ನನ್ನು ಹುಡುಕುತ್ತ ಮಿಂಝಿ ಬಂದಿರುವುದಾಗಿಯೂ, ಇದನ್ನು ನೋಡಿದರೆ ರೈಲ್ವೇಸ್ಟೇಷನ್ ಬಳಿ ಬರಬೇಕೆಂದೂ ಬರೆದು ಅದನ್ನು ಸ್ಟೇಷನ್ನ ಹೊರಭಾಗದ ಅಲ್ಲಲ್ಲಿ ಅಂಟಿಸುತ್ತಾಳೆ. ರಾತ್ರಿಯಾದಾಗ ಬೀದಿಪಕ್ಕದ ಲೈಟುಕಂಬವೊಂದರ ಬಳಿ ಹಾಳೆಗಳನ್ನಿಟ್ಟುಕೊಂಡು ಅಲ್ಲೇ ಮಲಗುತ್ತಾಳೆ. ಬೆಳಗಿನ ಜಾವ ಸ್ವಚ್ಛತಾ ಸಿಬ್ಬಂದಿಯವರು ಆ ಹಾಳೆಗಳನ್ನೂ ಕಸದ ಜೊತೆಗೆ ಗುಡಿಸಿಕೊಂಡು ಹೋಗುತ್ತಾರೆ. ಮುಂದೇನು ಮಾಡಬೇಕೆಂದು ತೋಚದೆ ರೈಲ್ವೇ ಸ್ಟೇಷನ್ನ ಒಳಗೆ ಬಂದು ಕೂರುವ ಮಿಂಝಿಯ ಕಥೆ ಕೇಳುವ ಒಬ್ಬಾತ ಝಾಂಗ್ ಕಳೆದುಹೋಗಿರುವ ಬಗ್ಗೆ ಟಿವಿ ಚಾನೆಲ್ ಒಂದಕ್ಕೆ ಜಾಹಿರಾತು ಕೊಡುವುದು ಹೆಚ್ಚು ಪರಿಣಾಮಕಾರಿ ಎಂದು ಹೇಳುತ್ತಾನೆ. ಅದನ್ನು ನಂಬಿ ಅಲ್ಲಿಂದ ಟಿವಿ ಚಾನೆಲ್ ಒಂದಕ್ಕೆ ಬಂದು ಅಲ್ಲಿನ ಜಾಹಿರಾತು ವ್ಯವಸ್ಥಾಪಕರೊಡನೆ ಝಾಂಗ್ ಕಳೆದುಹೋಗಿರುವ ಬಗ್ಗೆ ಜಾಹಿರಾತು ಪ್ರಸಾರ ಮಾಡಲು ಕೇಳಿಕೊಳ್ಳುತ್ತಾಳೆ. ಸೆಕೆಂಡಿಗೆ ಇಷ್ಟು, ಟೈಮ್ವಾರು ಇಷ್ಟು ಹಣವೆಂದು ಜಾಹಿರಾತು ಶುಲ್ಕವನ್ನು ಕೇಳುವ ಟಿವಿ ಚಾನೆಲ್ನವರ ಎದುರು ಮಿಂಝಿ ಮೂಕಳಾಗುತ್ತಾಳೆ. ಆಕೆಯನ್ನು ಚಾನೆಲ್ ಕಚೇರಿಯ ಹೊರಗೆ ದಬ್ಬಲಾಗುತ್ತದೆ. ಆದರೂ ಹಠ ಬಿಡದ ಮಿಂಝಿ ಕಚೇರಿಯ ಸೆಕ್ಯೂರಿಟಿ ಗಾರ್ಡ್ ಬಳಿ ತನ್ನ ಉದ್ದೇಶವನ್ನು ತೋಡಿಕೊಳ್ಳುತ್ತಾಳೆ. ಕಣ್ಣಿಗೆ ಕನ್ನಡಕ ಧರಿಸಿರುವ ಟಿವಿವಾಹಿನಿಯ ಸುದ್ದಿ ವ್ಯವಸ್ಥಾಪಕರು ಒಬ್ಬರಿದ್ದು ಅವರು ಮಾತ್ರ ನಿನಗೆ ಸಹಾಯ ಮಾಡಬಲ್ಲರು, ಅವರು ಹೊರಗೆ ಬಂದಾಗ ಅವರನ್ನು ವಿನಂತಿಸುವಂತೆ ಸೆಕ್ಯೂರಿಟಿಯವನು ತಿಳಿಸಿದ್ದನ್ನು ನಂಬುವ ಮುಗ್ಧೆ ಮಿಂಝಿ.. ಕಚೇರಿಯಿಂದ ಹೊರಬರುವ ತಂಪುಕನ್ನಡಕ ಧರಿಸಿದ ಪ್ರತಿಯೊಬ್ಬರನ್ನೂ ನೀವು ಸುದ್ದಿ ವ್ಯವಸ್ಥಾಪಕರೇ ಎಂದು ಕೇಳುತ್ತ ಅವರಿಂದ ಇಲ್ಲವೆಂದು ಅನ್ನಿಸಿಕೊಂಡು ಗೇಟಿನ ಬಳಿಯೇ ನಿಂತಿರುತ್ತಾಳೆ. ಕಚೇರಿಯ ಮೇಲುಗಡೆಯಿಂದ ಅಚಾನಕ್ಕಾಗಿ ಮಿಂಝಿಯನ್ನು ನೋಡುವ ವ್ಯವಸ್ಥಾಪಕನು ಆಕೆಯನ್ನು ಕಚೇರಿಯೊಳಗೆ ಕರೆಸಿಕೊಂಡು ಆಕೆಯ ಹಿನ್ನೆಲೆಯನ್ನು ಅರಿತುಕೊಳ್ಳುತ್ತಾನೆ.
ಝಾಂಗ್ ಕುರಿತ ಜಾಹಿರಾತಿಗೆ ಹಣ ವೆಚ್ಚವಾಗುವುದರಿಂದ ಮಿಂಝಿಯ ಶಾಲೆಯ ದುರವಸ್ಥೆಯ ಬಗ್ಗೆ ಒಂದು ಟಾಕ್ ಶೋ ಪ್ರೋಗ್ರಾಂ ಮಾಡಿ ಅದರ ನಡುವೆ ಝಾಂಗ್ನ ಪ್ರಸ್ತಾಪ ಮಾಡಬಹುದೆಂದು ಹೇಳುವ ವ್ಯವಸ್ಥಾಪಕನು ಮಿಂಝಿಯನ್ನು ನೇರಪ್ರಸಾರದ ಕೆಮೆರಾ ಎದುರು ಮಾತಿಗೆ ಕೂರಿಸುತ್ತಾನೆ. ಟಿವಿ ಸ್ಟುಡಿಯೋದ ಕಣ್ಣುಕುಕ್ಕುವ ಬೆಳಕು, ತಂತ್ರಜ್ಞಾನದಿಂದ ಗಾಬರಿಗೊಂಡು ಮಾತು ಹೊರಡದ ಮಿಂಝಿ ನೇರಪ್ರಸಾರದಲ್ಲಿಯೇ ಝಾಂಗ್ನ ಹೆಸರು ಹೇಳಿ ಆತ ಶಾಲೆಗೆ ವಾಪಸ್ಸು ಬಂದರಷ್ಟೇ ತನಗೆ ಶಿಕ್ಷಕ ಗಾವೋ ಹಣ ನೀಡುವುದಾಗಿಯೂ, ಅದರಿಂದಲೇ ತನ್ನ ಮನೆಯ ಹಸಿವು ಕಷ್ಟಗಳು ಬಗೆಹರಿಯಲು ಸಾಧ್ಯವೆಂದೂ, ಝಗಮಗಿಸುವ ಕಟ್ಟಡಗಳನ್ನೂ ಮಿನುಮಿನುಗುವ ದಿರಿಸುಗಳನ್ನು ಧರಿಸಿ ಓಡಾಡುವ ಪಟ್ಟಣದ ಮಂದಿಗೇಕೆ ನನ್ನಂಥ ಹಳ್ಳಿಗರ ಹಸಿವು ಅರ್ಥವಾಗುತ್ತಿಲ್ಲವೆಂದು ಅಮಾಯಕತೆಯಿಂದ ಪ್ರಶ್ನಿಸುತ್ತ ಮುಂದೆ ಮಾತನಾಡಲಾಗದೆ ಬಿಕ್ಕಿಬಿಕ್ಕಿ ಅಳುತ್ತಾಳೆ. ಇತ್ತ ಈ ಶೋ ಪ್ರಸಾರವಾಗುವುದನ್ನು ಕಳೆದು ಹೋಗಿ ಅವರಿವರು ಕೊಟ್ಟಿದ್ದನ್ನು ತಿನ್ನುತ್ತ ಗೊತ್ತುಗುರಿಯಿಲ್ಲದೆ ಓಡಾಡುತ್ತಿದ್ದ ಝಾಂಗ್ ಹೋಟೆಲೊಂದರಲ್ಲಿ ನೋಡುತ್ತಾನೆ. ಹೊಟೇಲಿನ ಮಾಲೀಕಳು ಝಾಂಗ್ನನ್ನು ಟಿವಿಸ್ಟುಡಿಯೋಗೆ ಕರೆತರುತ್ತಾಳೆ. ಟಿವಿ ಕೆಮೆರಾದೆದುರು ಝಾಂಗ್ನನ್ನು ಕೂರಿಸಿ ಪಟ್ಟಣಕ್ಕೆ ಬಂದ ಮೇಲೆ ಯಾವುದಾದರೂ ಮರೆಯಲಾಗದ ಪ್ರಸಂಗ ಎದುರುಗೊಂಡೆಯಾ ಎಂಬ ಪ್ರಶ್ನೆ ಕೇಳಲಾಗುತ್ತದೆ ಅದಕ್ಕೆ ಉತ್ತರಿಸುವ ಝಾಂಗ್ ನನ್ನ ಹಳ್ಳಿಯಲ್ಲಿ ಹಸಿವಾದರೆ ಯಾರದ್ದಾದರೂ ಮನೆಗೆ ಹೋಗಿ ಕೇಳಿದರೆ ತಿನ್ನಲು ಕೊಡುತ್ತಿದ್ದರು, ಪಟ್ಟಣದಲ್ಲಿ ಹಸಿವು ನೀಗಿಕೊಳ್ಳಲು ಭಿಕ್ಷೆ ಬೇಡುವಂತಾಗಿದ್ದನ್ನು ಮರೆಯಲಾಗುತ್ತಿಲ್ಲ ಎನ್ನುತ್ತಾನೆ. ಕೊನೆಗೂ ಝಾಂಗ್ನನ್ನು ದಕ್ಕಿಸಿಕೊಳ್ಳುವ ಮಿಂಝಿಯೊಡನೆ ಟಿವಿ ವಾಹಿನಿಯ ವ್ಯವಸ್ಥಾಪಕನು ಶಿಖುವಾನ್ ಹಳ್ಳಿಗೆ ತನ್ನ ಟಿವಿವಾಹನದಲ್ಲಿ ಕರೆತರುತ್ತಾನೆ. ಅಷ್ಟರ ವೇಳೆಗೆ ಟಿವಿಯ ನೇರಪ್ರಸಾರದಲ್ಲಿ ಶಾಲೆಯ ದುರವಸ್ಥೆಯನ್ನು ಕೇಳಿದ್ದವರು ಶಾಲೆಗೆಂದು ಅತ್ಯಾಧುನಿಕ ಉಪಕರಣಗಳು, ಮೇಜು ಕುರ್ಚಿ ಇತ್ಯಾದಿಗಳನ್ನು ಲಾರಿಗಟ್ಟಲೆ ತುಂಬಿ ಶಿಖುವಾನ್ ಹಳ್ಳಿಗೆ ಕಳಿಸಿರುತ್ತಾರೆ. ಟಿವಿಯಲ್ಲಿ ಮಿಂಝಿಯನ್ನು ನೋಡಿ ಗಾಬರಿಗೊಂಡ ಶಿಕ್ಷಕ ಗಾವೋ ಗ್ರಾಮಕ್ಕೆ ಬಂದಿಳಿದಾಗ ಮಿಂಝಿ ಆ ಮಕ್ಕಳಿಗೆ ಉಡುಗೊರೆಯಾಗಿ ಬಂದ ಬಣ್ಣದ ಚಾಕ್ಪೀಸುಗಳನ್ನು ಕೊಡುತ್ತ ಎಲ್ಲರನ್ನೂ ಎಣಿಸುತ್ತಿರುತ್ತಾಳೆ. ಗಾವೋಗೆ ಮಕ್ಕಳ ಲೆಕ್ಕವನ್ನು ಒಪ್ಪಿಸಿ ಹಣ ಪಡೆಯುವ ಮಿಂಝಿ ಆ ಹಣವನ್ನೇ ಎದುರುನೋಡುತ್ತ ಇರುವ ತನ್ನ ಮನೆಮಂದಿಯನ್ನು ನೆನೆದು ಯಾವುದನ್ನೂ ಲೆಕ್ಕಿಸದೇ ತನ್ನ ಮನೆಯತ್ತ ಹೆಜ್ಜೆ ಹಾಕುತ್ತಾಳೆ.
ಗ್ರಾಮೀಣ ಚೈನಾದ ಬಡತನವನ್ನು ಎಳೆಎಳೆಯಾಗಿ ಜಾಗತಿಕ ಮಟ್ಟದಲ್ಲಿ ದೃಶ್ಯರೂಪದಲ್ಲಿ ಬಿಚ್ಚಿಟ್ಟ ನಿರ್ದೇಶಕ ಇಮೂಝಾಂಗ್ ಈ ಚಿತ್ರಕ್ಕಾಗಿ ಕಣ್ಣಿಗೆ ಕಂಡ ಹಳ್ಳಿಗರನ್ನೇ ಆರಿಸಿ ಅವರಿಂದ ನಟನೆಯನ್ನು ಬಸಿದಿರುವುದು ಚಪ್ಪಾಳೆ ತಟ್ಟಲೇಬೇಕಾದ ಪ್ರಯತ್ನ. ಯಾವ ಸೀಸನ್ಡ್ ಕಲಾವಿದರಿಗೂ ಒಂದಿಂಚೂ ಕಮ್ಮಿಯಿಲ್ಲದಂತೆ ನಟಿಸಿರುವ ಈ ಹಳ್ಳಿಗರು ಗ್ರಾಮಗಳನ್ನು ನಿರ್ಲಕ್ಷಿಸಿದ ಚೈನಾ ಸರ್ಕಾರದ ಮಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದರು. ಇಡೀ ಜಗತ್ತಿಗೆ ತಂತ್ರಜ್ಞಾನ ಮತ್ತು ಬೆಳವಣಿಗೆಯಲ್ಲಿ ಚೈನಿಗರು ಮುಂದೆಂಬ ಕೋಡನ್ನು ಮುಂದು ಮಾಡುವ ಚೈನಾ ಸರ್ಕಾರವು, ತನ್ನ ದೇಶದಲ್ಲಿ ಪ್ರತೀ ವರ್ಷ ಒಂದು ಮಿಲಿಯನ್ ಗ್ರಾಮೀಣಮಕ್ಕಳು ಶಾಲೆತೊರೆದು ಕೂಲಿಗೆ ಹೋಗುತ್ತಿರುವುದನ್ನೇಕೆ ಮುಚ್ಚಿಟ್ಟಿದೆ ಎಂದು ಪ್ರಶ್ನಿಸಿದ ನಿರ್ದೇಶಕ ಇಮೂಝಾಂಗ್ ಈ ಚಿತ್ರದ ಮೂಲಕ ಸೋಷಿಯಲ್ ಆಕ್ಟಿವಿಸಂ ಅನ್ನು ಮೀಡಿಯಾ ಮೂಲಕವೂ ಮಾಡಬಹುದು ಎಂಬುದನ್ನು ದೊಡ್ಡಮಟ್ಟದಲ್ಲಿ ನಿರೂಪಿಸಿದರು. ತೆರೆಕಂಡ ನಂತರ 40 ಮಿಲಿಯನ್ನಷ್ಟು ಚೈನಾವೊಂದರಿಂದಲೇ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಗಿದ್ದು ಇಂತಹದೇ ಹರವಿನ ಇತರೆ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲುವಂತಹ ಪ್ರಯತ್ನ ಚೈನಾದಲ್ಲಿ ಪ್ರಾರಂಭವಾಗಲು ನೆರವಾಗಿದ್ದು ನಾಟ್ ಒನ್ ಲೆಸ್ ಚಿತ್ರದ ಹೆಗ್ಗಳಿಕೆ. ಸಿಕ್ಕರೆ ಒಮ್ಮೆ ಈ ಸಿನಿಮಾ ನೋಡಿ. ಮಿಂಝಿ ಟಿವಿ ಸ್ಟುಡಿಯೋದಲ್ಲಿ ಮಾತನಾಡುವ ದೃಶ್ಯ ನೋಡುವಾಗ ಕಡ್ಡಾಯವಾಗಿ ಕರ್ಚೀಫು ಹತ್ತಿರದಲ್ಲಿಟ್ಟುಕೊಳ್ಳಿ.
ಕೆಂಡಸಂಪಿಗೆಯಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ