Saturday, 25 February 2012

ಒಂಟಿ ಕಣ್ಣ ದೇವರು ಮೈಯರಳದ ಬಾಲೆಯು.....

ಲೆಕ್ಕಕ್ಕಿಲ್ಲದಷ್ಟು ಮೆಟ್ಟಿಲು ಹಾಸಿಕೊಂಡು ನಭಕ್ಕೆ ಹತ್ತಿರ ಕುಳಿತವನಿಗೆ
ಗುಂಡಾರವೂ ಗುಡಿಯೂ ಬೀದಿಯೇ ಆದವರ ಸೊಲ್ಲು ಇನ್ನೂ ತಲುಪಿಲ್ಲ.
ಗೋಡೆಗಳ ಬರೆದವರಾರೋ ಬೀದಿಗೂ ನಭಕ್ಕೂ ನಡುವೆ..
ಈ ಕಡೆಯ ಸೊಲ್ಲು ಅತ್ತ ತಲುಪದೆ, ಆ ಕಡೆಯ ಹೇವರಿಕೆ ಇತ್ತ ತಲುಪದೆ
ಗೋಡೆ ಮಾತ್ರ ಪರಮಸತ್ಯವಾದದ್ದು ವರ್ತಮಾನದ ದುರಂತವು.

ಕೊತಕೊತನೆ ಕುದಿಯುವ ಮಡಕೆಯ ಗಂಜಿಗೆ ಬಂಡವಾಳ ಹಾಕಿದ್ದಾನೆ,
ಜಾತ್ರೆಯ ಮೂಲೆಯಲ್ಲಿ ರಾಟುವಾಣದ ಚಕ್ರ ತಿರುಗಿಸುವ ಹುಲುಮಾನವ,
ಗಾಳಿಗೂ ಪಟಕ್ಕೂ ಒಂದೇ ದಾರ ಬಿಗಿದವನ ಭುಜದ ತುಂಬ..
ನಾಳೆಯ ಪಾಡಿನ ಭಾವಗೀತೆಗಳು ಕೊನೆಯುಸಿರೆಳೆಯುತ್ತಿವೆ..
ನಭದವನ ಮಾಲೀಕ ಶಂಖು ಊದಿದ್ದು ಇಲ್ಲಿಗಿನ್ನೂ ತಲುಪಿಲ್ಲ.

ನರವೆಲ್ಲವನ್ನೂ ಇಷ್ಟ ಬಂದಂತೆ ಬಿಗಿಯುತ್ತಾಳೆ ಮೈಯರಳದ ಬಾಲೆ,
ಕೈಗಂಟುವ ಡೋಲಕನ್ನು ಮೀಟುತ್ತಿವೆ ಪ್ಲಾಸ್ಟಿಕ್ಕು ಉಂಗುರದ ಬೆರಳುಗಳು..
ಮಾಂತ್ರಿಕ ಬೆರಳುಗಳ ನೋಡುತ್ತ ಮಕಾಡೆಬಿದ್ದ ಅಲ್ಯೂಮಿನಿಯಂ ತಟ್ಟೆಗೆ,
ಉಸಿರೆಳೆದುಕೊಳ್ಳುವ ಆಸೆ ಗರ್ಭಕಟ್ಟಿದ ಎರಡನೇ ನಿಮಿಷಕ್ಕೆ,
ನಭದೊಡೆಯನ ನೊಸಲಮೇಲೆ ಎರೆಹುಳುವಿನಂಥ ಗೆರೆಗಳು ಹುಟ್ಟಿದವು.

ಕೊರಳಿಗೆ ದೇವರಪಟವನ್ನು ನೇತುಹಾಕಿಕೊಂಡ ಬರಿಮೈ ದುಡಿಮೆಗಾರನೂ
ಇದ್ದಾನೆ ಗುಂಪೊಳಗೆ ಸಾಸುವೆಯಂತೆ ಲೀನವಾಗಿ..
ಕಟ್ಟಿದ ತಂತಿಯ ಮೇಲೆ ಕೋಲು ಹಿಡಿದು ಹೆಜ್ಜೆಯ ಪ್ರತಿಬಿಂಬವೊತ್ತಿದ
ಬಾಲೆಯ ಕಸುವು, ಬಿರುಸು, ಚಾಲಾಕಿತನಕ್ಕೆ..ಅವನೂ..
ಅವನ ಕೊರಳಿಗೆ ಜೋತುಬಿದ್ದ ದೇವರೂ ಇಬ್ಬರೂ ಒಂದೇಟಿಗೇ ಭಯಗೊಂಡರು.

ಇದು ನಡುಹಗಲ ಜಾತರೆ.. ಅರೆಬೆಂದಿದ್ದ ಸೂರ್ಯನಿಗೂ ಉರಿಯಲು ಬೇಸರ
ಸುಟ್ಟೀತೇನೋ ಬಾಲೆಯ ಎವೆ.. ಚಪ್ಪಲಿಯೊಡನೆ ಮುನಿಸಿಕೊಂಡ ಪಾದ,
ದೂರವಿದ್ದ ಮೂರು ಮೋಡಗಳನ್ನು ಕಾಲಿಂದಲೇ ಎಳೆದುಕೊಂಡ ಸೂರ್ಯ
ಬಾಲೆಯ ಎವೆಗೂ ತನಗೂ ಮಧ್ಯೆ ಆವಿಯ ಗೋಡೆ ಕಟ್ಟಿಕೊಂಡದ್ದನ್ನು,

ಗುಂಪಿನವನ ಕೊರಳಿಗೆ ಜೋತುಬಿದ್ದ ಒಂದು ಕಣ್ಣಿನ ದೇವರು ಮಾತ್ರ ನೋಡಿತು..
- ಟಿ.ಕೆ. ದಯಾನಂದ

ಪುಳ್ಳಂಗೋವಿಯೊಳಗಿಂದ ಮುರಿದ ಹಾಡು......


ಒಂದು ಅರ್ಧಸತ್ತ ರಾತ್ರಿ.. ಚೆಲ್ಲಾಡಿಹೋಗಿದ್ದ ಪದಗಳನ್ನು
ಹೆಸರು ಗೊತ್ತಿಲ್ಲದ ಮರದ ಗೋಂದಿನಿಂದ ಅಂಟಿಸುತ್ತಿದ್ದೆ..
ಬಣ್ಣಮಾಸಿದ ಪುಳ್ಳಂಗೋವಿಯೊಳಗಿನಿಂದ ಮುರಿದ ಹಾಡೊಂದು
ತೆವಳುತ್ತ ಬಂದು.. ಎದೆಯ ಮೇಲೆ ಕೂತು, ಹಣೆಯ ಮೇಲೆ
ಮೊದಲು ರಂಗೋಲಿ ಬರೆದು, ಆಮೇಲೆ ಚುಕ್ಕಿಗಳನ್ನು ಇಟ್ಟಿತು.

ಎಲ್ಲಿದ್ದಾನೋ ಹಾಡಿನೊಡೆಯ, ಯಾರವ್ವ ನಿನಗೆ ಬಸುರಾದವನು?
ಕೇಳಿದ ಪ್ರಶ್ನೆಗೆ ಮುರಿದ ಹಾಡು ಕಪ್ಪುರಸ್ತೆಯತ್ತ ಗೋಣು ಬಿಸಾಕಿತು..
ಅಲ್ಲಿ ಅವನಿದ್ದ.. ಅರ್ಧ ಕಟ್ಟಿದ ಬಂಗಲೆಯ ಮುಂದಣ ಮರಳಗುಡ್ಡೆಯ ಮೇಲೆ
ದಿವೀನು ಗಡ್ಡವನ್ನು ಭೂತಾಯ ದಿಕ್ಕಿಗೆಸೆದು ಮಾಸಿದ ಪುಳ್ಳಂಗೋವಿಗೆ
ಒಡೆದ ತುಟಿ ಅಡವಿಟ್ಟು ಇನ್ನಷ್ಟು ಮುರಿದ ಹಾಡುಗಳನ್ನು ಕಟ್ಟುತ್ತಿದ್ದ.

ಬೆಳಗಾನ ಹೊತ್ತು ಇವನು ಎಲ್ಲಿ ಹೋಗುವನೋ, ಏನು ಉಸಿರಾಡುವನೋ
ನಡೆಯುವ ದಾರಿಯಾದರೂ ಮಣ್ಣಿನದ್ದೋ, ಕಾರೆಮುಳ್ಳುಗಳ ಹಾಸಿನದ್ದೋ..
ಮುರಿದ ಹಾಡು ಉತ್ತರಿಸಲಿಲ್ಲ.. ಬಂಗಲೆಯಲ್ಲವೋ ಅದು.. ಹುತ್ತ
ಚಂದ್ರ ಸತ್ತಾಗ ಸೂರ್ಯ ಮೈಮುರಿದಾಗ ಗೆದ್ದಲಾಗುತ್ತಾನೆ..
ಸೂರ್ಯ ಸಾಯುವವರೆಗೆ ಹುತ್ತ ಕಟ್ಟುತ್ತಾನೆ.. ರಾತ್ರಿ ಹಾಡುಗಳಿಗೆ ಬಸುರಾದ.

ತಾಳಮೇಳಗಳ, ರಾಗ ಆಲಾಪಗಳ ಯಾವ ಗುಂಗಿಗೂ ತಲೆಕೊಡದೆ
ಹಾಡುಗಳಿಗೆ ಬಸುರಾಗುತ್ತಾನೆ.. ಕೈಕಾಲಿಲ್ಲದ ಹಾಡುಗಳ ಹುಟ್ಟಿಸುತ್ತಾನೆ..
ಹೀಗೆ ಹುಟ್ಟಿದ ಹಾಡುಗಳು ಎಲ್ಲೆಲ್ಲೋ ಅಲೆದು ಮತ್ತೆ ಪುಳ್ಳಂಗೋವಿ ಸೇರುತ್ತೇವೆ
ಮತ್ತೆ ಕರೆಯುತ್ತಾನೆ.. ಮತ್ತೆ ಹುಟ್ಟುತ್ತವೆ.. ಅವನ ಹರಿದ ಚಪ್ಪಲಿಯ ಸಂದಿನಲ್ಲಿ
ಇನ್ನಷ್ಟು ಪದಗಳು ಸಿಕ್ಕಿದವು.. ಆಯ್ದುಕೊಂಡು ಬಂದೆ..

ಮತ್ತದೇ ಕಾವಳ.. ನಾನು ಆಯ್ದುಕೊಂಡು ಬಂದ ಹೊಸಪದಗಳನ್ನು
ಹೆಸರಿಲ್ಲದ ಮರದ ಗೋಂದುಹಾಕಿ ಅಂಟಿಸುತ್ತಿದ್ದೇನೆ..
ಗೆದ್ದಲಿಗೂ ಹುತ್ತಕ್ಕೂ ಮಧ್ಯದ ಕಟ್ಟುವ ಪರಂಪರೆಯ ನೆನಪೂ ಇಲ್ಲದ
ಕೊಳಕುಮಂಡಲದ ಹಾವುಗಳು, ಹುತ್ತ ಸೇರುವ ಪರಿಯನ್ನೂ..
ಮುರಿದ ಹಾಡುಗಳನ್ನು ಹೆರುವ ಇವನ ಉಸುರತಿತ್ತಿಯನ್ನು ಯಾಕೋ ಗೊತ್ತಿಲ್ಲ

ನನ್ನಿಂದ ಅಂಟಿಸಲಾಗುತ್ತಿಲ್ಲ..


: - ಟಿ.ಕೆ. ದಯಾನಂದ

Friday, 24 February 2012

ಫಕೀರನೊಬ್ಬನ ಸ್ವಗತವು...

ಆದರೂ.. ಆ ಪೇರಳೆಯ ಮರದ ಕೆಳಗೆ ಅಷ್ಟೊಂದು ತಂಬೆಲರು
ಚಿಮುಕಿಸಿ ಹೋದವರು ಯಾರು.. ಯಾಕಾಗಿ ಹುಡುಕುತ್ತೇನೆ ಅದನ್ನು?
ದೂರದ್ದ ಕಾಣಲು ದುರ್ಬೀನು ಉಂಟು.. ನೋಡುವ ಕಣ್ಣುಗಳದ್ದೇ ದಾಸ್ತಾನಿಲ್ಲ..
ಕಣ್ಣೆರಡನ್ನೂ ಇಲ್ಲೇ ಪೊಟರೆಯೊಳಗಿಟ್ಟು ಇರುವೆಮನೆಗಳನ್ನು
ತಡವಿಕೊಂಡು ನೆಲದ ಮೇಲೆ ಇರುವಿನ ತಾವು ಹುಡುಕುತ್ತಿದ್ದೆ..

ರೋಜಾಪಕಳೆಗಳನ್ನು ಕಾರಣವಿಲ್ಲದೆ ಕಿತ್ತು ತಿನ್ನುವ ಜನಗಳ ಬಾಯತುಂಬ
ಕಪ್ಪುರಕ್ತದ ಕಲೆ.. ಅವರತ್ತ ನೋಡಲು ಕಣ್ಣಪಾಪೆಗೆ ಖುಷಿಯಾಗುತ್ತದೆ..
ಎಲ್ಲಿಯೂ ಅಂಟದ ರಕುತದ ಕಲೆ ಬಾಯಿಗೆ ತುಟಿಗೆ ಕೆನ್ನೆಗೆ..
ಸತ್ತವನ ಮೇಲೂ, ಮದುವೆಯವಳ ಮೇಲೂ, ಸನ್ಮಾನದವನ ಮೇಲೂ
ಅದದೇ ಪಕಳೆಗಳು.. ಅವರ ಬಾಯೊಳಗೂ ಕಪ್ಪುರಕುತ

ಇತ್ತಿತ್ತಲಾಗಿ ಯಾರಾದರೂ ನನ್ನನ್ನೊಮ್ಮೆ ಕೊಂದು ಹಾಕಲಿ
ಅಂದುಕೊಳ್ಳುವೆ, ಯಾರೂ ಕೊಲ್ಲುವರಿಲ್ಲ..
ಪಾಳುಬಿದ್ದ ಬಾವಿಯೊಳಗೆ ನನ್ನ ಕಾಯವೂ ಇರಲಿ
ಬಾವಿಯೊಳಗಿನ ಕಸಕಡ್ಡಿ ಧೂಳು ಜೇಡಬಲೆಯ ಮಧ್ಯೆ
ಇದ್ದುಕೊಳ್ಳಲಿ ತೃಣಮಾತ್ರದ ಜೀವ.

ಇತ್ತಿತ್ತಲಾಗಿ ನನ್ನ ಅಪಧಮನಿಯ ಚೂರುಗಳನ್ನು
ಯಾರೋ ಬೊಗಸೆಯೊಳಗೆ ತುಂಬಿಕೊಂಡು ಹೋದಂತೆ
ಸ್ವಪುನ ಬಿದ್ದು ಭಯದಿಂದ ಕುಣಿಯುವಂತಾಗುತ್ತದೆ,
ಕುಣಿಯುವಾಗ ಕಾಲಾದರೂ ಎರಡು ಸೀಳಾಗಬಾರದೇ
ಅತ್ತೊಂದಿತ್ತೊಂದು ಎಸೆದು ಚಲನೆಯಿಲ್ಲದೆ ಕೊರಡಾಗುವೆ.
: - ಟಿ.ಕೆ. ದಯಾನಂದ

Wednesday, 22 February 2012

ಹಸಿವೆಂಬೋ ಮೂರಕ್ಷರದ ಕಾನೂನಿನ ಬಗ್ಗೆ..

ಜಗತ್ತಿನ ಮೊಟ್ಟ ಮೊದಲ ಕಾನೂನು ಮೂರಕ್ಷರದಿಂದ ಶುರುವಿಟ್ಟು
ಮೂರಕ್ಷರದಲ್ಲೇ ಕೊನೆಯಾಗುವುದು ಒಂದೆಡೆಯಲ್ಲಿ ಮಾತ್ರವು..
ಎಡೆಯ ಹೆಸರಿಂತಿರ್ಪುದು ತಿಪ್ಪಾಳೆಯಾಡುವ ಭೂ ನ್ಯಾಯಾಲಯ.

ವ್ಯೋಮಾಕಾಶದ ಜೀವಸಂಕುಲಗಳಿಗೆ ಅನ್ನವುಣಿಸುವವೆಂದು
ಯಾರೋ ಬರೆದಿಟ್ಟು ಹೋದ ತಾಳೆಗರಿಯನ್ನು ಕಂಡು
ಕಾಲರುದ್ರನ ಕೈಯೊಳಗಿನ ಖಾಲಿ ಕಾಪಾಲವು ನಗುತ್ತಿದೆ.

ಬೆಲೂನು ಮಾರುವ ಹುಡುಗನ ಅಂಗೈಯಲ್ಲಿ ತಣ್ಣಗಾಗುತ್ತಿರುವ
ಚಹಾದ ಗಳಾಸಿನ ಪಾತಾಳದಾಳದಲಿ.. ಕವುಚಿ ಬಿದ್ದಿದ್ದ
ಹಸಿವೆಂಬ ಮೂರಕ್ಷರವು ತನ್ನೊಡನೆ ತಾನೇ ಪ್ರೇಮಕ್ಕೆ ಬಿದ್ದಿತ್ತು.

ನನ್ನವ್ವ.. ಖಂಡವೊಂದರ ನಕ್ಷೆಯಂತೆ ದಿಕ್ಕಾಪಾಲಾಗಿ ಬೇಯಿಸಿದ್ದ
ರೊಟ್ಟಿಯ ನಟ್ಟನಡುವಿನಲ್ಲಿ ಮೂರಕ್ಷರವನ್ನು ಚಿತ್ರಿಸಿದ ರೂಹಿಲ್ಲದ
ಜಂಗಮನ ಪಾದಕ್ಕೆ ನನ್ನ ತಲೆಯನ್ನು ಅಡವಿಟ್ಟು ಚುಂಬಿಸುವ ಬಯಕೆ.

ಮಂಜುಗಡ್ಡೆಯ ತುಂಡುಗಳನ್ನು ಡಬ್ಬದೊಳಗಿಟ್ಟು ಕೂಗುತ್ತ ನಡೆಯುವ
ಈ ಬಿಳೀಗಡ್ಡದ ವಯೋವೃದ್ಧನ ಬಿರುಕು ಬಿದ್ದ ಪಾದದ ಸಂದುಗಳೊಳಗೆ,
ಹಸಿವಿನ ತಲೆ ನೇವರಿಸುವ ಶ್ರಮದ ಕೃತಿಗಳ ಗ್ರಂಥಾಲಯವಿರಬಹುದೇ ?

ಭಾಷೆಯಿಲ್ಲದ ಬಾಯಿಗೆ ಮೊಲೆಯೂಡಿಸಿದ ಅವಳ ಸ್ತನತೊಟ್ಟಿನ ಭೂಮಿಯ ತುಂಬ
ಕೆಂಪೋಕೆಂಪು ಮರಗಿಡಗಳು.. ರಕುತದ ಹುಲ್ಲುಗಾವಲೊಂದರ ನಡುವಿನ ಗರಿಕೆಯ
ಮೊದಲ ಮಾತಿನ ಬಣ್ಣ.. ಬಸುರಾದ ಎರೆಹುಳುವಿನ ಚರ್ಮದಂತೆ ಬಿಳಿಯಾಗಿತ್ತು.

ಕಣ್ಣಪಾಪೆಯನ್ನೂ ಬಿಟ್ಟಿಲ್ಲ ಮೂರಕ್ಷರದ ಕಾನೂನು, ಎಲ್ಲವನ್ನೂ ಕಾಣುತ್ತದೆ..
ಜಗವನಾಳುವುದು ದೇಶಗಳಲ್ಲ, ಧರ್ಮಗಳಲ್ಲ, ಶಾಸ್ತ್ರಗಳಲ್ಲ, ಶಾಸನಗಳಲ್ಲ..
ಮೂರಕ್ಷರದ ಹಸಿವು.. ಎರಡೇ ಎರಡಕ್ಷರದ ಮಾತು ಬಾರದ ಪ್ರೇಮ.

ಟಿ.ಕೆ. ದಯಾನಂದ

Tuesday, 21 February 2012

ಕಣ್ಕಟ್ಟು ಮಾಯೆ

ಅದೆಲ್ಲಿಂದ ಕಲಿತು ತಂದರೋ ಕಣ್ಕಟ್ಟು ಮಾಯೆಯನ್ನು,
ತಮ್ಮ ಕಣ್ಣನ್ನು ಮುಚ್ಚದೆಯೇ.. ಜಗತ್ತಿನ ಎಲ್ಲ ಕಣ್ಣುಗಳಿಗೆ
ಸೂಜಿದಾರವನ್ನು ಕೂಡಿಕೆ ಮಾಡ ಹವಣಿಸುತ್ತಾರೆ, ಇವರು
ಕ್ರೂರ ಕಾವಳದೊಟ್ಟಿಗಿನ ಮೈಥುನಕ್ಕೆ ಸಟಕ್ಕನೆ ಬಸುರಾದವರು.

ಇಗೋ ಇಷ್ಟು ಬೆಳಕನ್ನು ತಿನ್ನಿರಿ ಎಂದು ಅವರು ತೋರಿಸಿದ
ಬಟ್ಟಲೊಳಗೆ ಕಪ್ಪುರಾತ್ರಿಯೊಂದು ಕೈಕಾಲು ಮುರಿದು ನರಳುತ್ತಿತ್ತು
ಮಂಡಿಯೂರಿ ಕತ್ತಲು ಪಡೆದವರು ಗಸಗಸನೆ ತಿಂದ ಚಣ
ಒಳಗಣ ಪ್ರೀತಿತೊರೆಯ ಮಧ್ಯದಿಂದೆದ್ದ ತಾಮಸದ ಸೈತಾನ

ಆಹಾ.. ಸೈತಾನನಲ್ಲವಿವನು ಕಣ್ಣಿಗೂ ಎರಚುವನಲ್ಲ ಬೊಗಸೆಮಣ್ಣು
ಕಡುಬಿಳಿಯ, ತೆಳುನೀಲಿ, ಚೂರು ಕಂದು ಒಟ್ಟು ಬೆರೆಸಿದ ಸೈತಾನ
ಮಂಡಿಯೂರಿದವರ ಮಿದುಳ ನಗರಿಯೊಳಗೆ ಆಡಿದ್ದು ತಾಂಡವವೇ..
ಆದರೀ ನೃತ್ಯ, ಗಾಂಜಾ ಸೇದುವ ಇಳೆಯ ರುದ್ರನದ್ದು ಖಂಡಿತವೂ ಅಲ್ಲ..

ಕಾವಳಕ್ಕೆ ಬಸುರಾದವರ ಕುಲಪುತ್ರ ಸೈತಾನನ ಕಾಲುಗಳು
ಹೊಸಕುವುದನ್ನು ಬಿಟ್ಟು ಉಳಿದೇನೂ ಕಲಿತಿಲ್ಲ..
ಬಾಕಿಯುಳಿದ ನೆನಪುಗಳುನ್ನು ಆಯ್ದು ಆಯ್ದು ಕೊಲ್ಲುತ್ತಿದ್ದಾನೆ
ಮಂಡಿಯೂರಿದ ಜೀವಗಳ ನರವ್ಯೂಹಗಳು ನಡು ರಸ್ತೆಯಲ್ಲಿ ಅನಾಮತ್ತು ದರೋಡೆ.

ಸ್ಮೃತಿಚೀಲದೊಳಗೆ ಕಾಪಿಟ್ಟ ಸರ್ವವನ್ನೂ ತುಳಿದವನ ಪಾದಕ್ಕರ್ಪಿಸಿ
ಧನ್ಯರಾದ ಮಂಡಿಯೂರಿದವರಿಗೆ ಬಿಡುಗಡೆ ಮತ್ತು ಖೆಡ್ಡಾಗಳಿಗೆ
ವ್ಯತ್ಯಾಸವೇ ಗೊತ್ತಾಗದಂತೆ, ತಲೆಗಳನ್ನು ಭ್ರಮಾಕೊಳದೊಳಗೆ ಅದ್ದಲಾಗಿದೆ,
ಕಟ್ಟಿದ ಉಸಿರು ಮುಕ್ತಿಗಿರುವ ಬಾಗಿಲೆಂದು ಸಕಾರಣವಾಗಿ ನಂಬಿಸಲಾಗಿದೆ.

ಕೈಕೋಳಗಳ ಹಂಗಿಲ್ಲದೆ ಜೀವಕಾಯದ ಬಂಧನಕ್ಕೆ ಈಡುಗೊಳಿಸುವ
ಕಣ್ಕಟ್ಟು ಮಾಯೆಯ ಕುತ್ತಿಗೆಯ ತುಂಬ ನೆಣಚರ್ಬಿಗಳ ಹೂವಹಾರ..
ಗಂಜಿ ಕಾಯಿಸುವ ಉಸಿರುಗಳ ಬೆನ್ನ ಮೇಲೆ ಬಿದ್ದ ಕಡುಕೆಂಪು ಬರೆಗಳು,
ಒಂದರ ತೆಕ್ಕೆಯೊಳಗೊಂದು ಬಿದ್ದು ಲಿಪಿಯಿಲ್ಲದ ಭಾಷೆಯಲ್ಲಿ ಮಾತಿಗೆ ಬಿದ್ದಿವೆ.

ಕಾವಳದ ಬಸಿರು, ಸೈತಾನನ ಅಬ್ಬರ, ದರೋಡೆಗೊಂಡ ಸ್ಮೃತಿಗಳು
ಜೈವದ ಎಂದಿನ ಕ್ರಿಯೆಯಲ್ಲದೆ ಇನ್ನೊಂದೂ ಆಗಿರಬಹುದು,
ನಾಟಕದ ಕಂಪೆನಿಯ ಸೀನರಿ ಪರದೆಗಳೋಪಾದಿಯ ಭ್ರಮೆಯ ಪೊರೆಗಳನ್ನು
ಕಣ್ಣಚರ್ಮದ ಮೇಲೆ ಹೊದೆಸುವ ಪಿತೂರಿಗಳ ಪಾತಕವೂ ಆಗಿರಬಹುದು

ಪ್ರಶ್ನೆಗಳೇಕೋ ಬೆನ್ನ ಮೇಲೆ ಬಿದ್ದ ಬರೆಗಳಿಗೆ ನೆನಪಾಗುತ್ತಲೇ ಇಲ್ಲ
ಪರಂಪರೆಯ ನೆನಪುಗಳ ಬೀಜಗಳಿದ್ದ ಸಂಚಿಚೀಲವನ್ನು
ಯಾವತ್ತೋ ಕಳೆದುಕೊಂಡ ಮಂಡಿಯೂರಿದ ಜೀವಗಳು,
ತರಗೆಲೆಯಂಥಹ ನಾಲಿಗೆಯ ಮೇಲೆ ಮೂರುಹನಿ ಇಬ್ಬನಿಯನ್ನು ಬಯಸುತ್ತಿವೆ.


Monday, 20 February 2012

ನಾಭಿಹಳ್ಳದ ಮೇಲೆ ಬೂದಿಯ ಕುರುಹು.........

ಕುಲಬೇರುಗಳ ಅಂಗಡಿಯಿಂದ ಕಡವಾಗಿ ತಂದ
ಎರಡೇ ಎರಡು ನೆನಪುಗಳ ಕಥೆ ಕೇಳುತ್ತಿದ್ದೇನೆ..
ಕಥೆಯೋ.. ರುಂಡಮುಂಡ, ರೆಕ್ಕೆಪುಕ್ಕ ಛೇಧಿಸಿದ ಇತಿಹಾಸದ
ಮಾಸ್ತಿಗಲ್ಲಿನ ಮೇಲೆ ಪಾಚಿಗಟ್ಟಿದ ಸತ್ತ ಹಸುರಿನ ಕಥೆ.

ಅಲ್ಲಲ್ಲಿ ಬಿಸುಟಲ್ಪಟ್ಟ ಇಟ್ಟಿಗೆ ಚೂರಿನಂತೆ ಈ ಕಥೆಗಳು
ಇಷ್ಟುದಿನ ಒಂದೇ ಮಣ್ಣಮನೆಯ ತುಂಡರಿಸಿದ ಜೀವದೊಳಗೆ
ಇನ್ನಾದರೂ ಮಿಟುಕುವ ಉಸಿರು ಬಚ್ಚಿಟ್ಟುಕೊಂಡು
ಚರ್ಮವಿಲ್ಲದ ಕಿವಿಗಳ ನಿರುಕಿಸುತ್ತ ನಾಲಿಗೆ ಮಸೆದುಕೊಳ್ಳುತ್ತಿದ್ದವಂತೆ

ಐತಿಹ್ಯದ ಚೀಲದೊಳಗೆ ತುರುಕಿಟ್ಟ ಕಾರಣಕ್ಕೋ ಏನೋ
ಒಂದೆರಡು ಕಥೆಗಳಿಗೆ ಗಂಟಲು ಕೆಟ್ಟಿದೆ,
ಗೊಗ್ಗರು ಶಬುದ ಮಾತ್ರ ಕಥೆಯಾಗದು..
ಮಾತುಗಳ ಹೂತಿಟ್ಟ ನಾಭಿಹಳ್ಳದ ಮೇಲೆ ಬೂದಿಯ ಕುರುಹು

ಪರಂಪರೆಯೊಳಗಣ ಹೆಣಗಳ ಮಾರುಕಟ್ಟೆಯಲ್ಲಿ
ಉಸಿರಾಡುವ ಕಥೆಗಳ ಬೆರಳು ಹಿಡಿದು, ಕೊರಳು ಮುಟ್ಟಿ
ನಾಡಿ ತಡವಿ, ಎದೆನಗಾರಿಗೆ ಕರ್ಣವೊಡ್ಡುವ ಗಿರಾಕಿಗಳು
ಇನ್ನಾದರೂ ಇಲ್ಲಿ ಪಾದವೂರಿಲ್ಲ..

ನನ್ನದೇ ಬೇರುಮೂಲದ ಕಡ ತಂದ ಕಥೆಗಳಿಗೆ ಬಾಯಿ ಹೊಲೆದು
ಕಣ್ಣುಗಳ ಮೇಲೆ ಆಮ್ಲದ ಹನಿಗಳನ್ನು ನಾಜೂಕಾಗಿ ಇಡಲಾಗಿದೆ
ಅವು ಮೂಕರ ಗ್ರಹದಿಂದ ಇಳಿದು ಬಂದವಂತೆ ಏನೋ ಹೇಳುತ್ತವೆ
ಕೇಳಿದ ನಾನು ನಿಲುಕಿಗೆ ಸಿಕ್ಕವಷ್ಟನ್ನು ಮಾತ್ರ ಆಯ್ದುಕೊಳ್ಳುತ್ತಿದ್ದೇನೆ.

Saturday, 18 February 2012

ಎರಡೂ ಆಲಯ

ಇದ್ದ ಎರಡೂ ಆಲಯಗಳು ಅಕ್ಕಪಕ್ಕದಲ್ಲೇ, ಒಂದು ಮೂತ್ರದ್ದು, ಮತ್ತೊಂದು ಭಕ್ತಿಯದ್ದು..
ಇಲ್ಲೂ ಹುಂಡಿಯುಂಟು, ಅಲ್ಲೂ ಹುಂಡಿಯುಂಟು, ಎರಡರೊಳಗೂ ಚಿಲ್ಲರೆಯದ್ದೇ ಚಳಚಳ.
ಭುಜಕೊರಳಿನಂತೆಯೇ ಎರಡೂ ಆಲಯಗಳು ಅಂಟಿಕೊಂಡಿದ್ದರೂ..
ಪರಿಭಾವದಲ್ಲಿ ನೆತ್ತಿಗೂ ಉಂಗುಷ್ಟಕ್ಕೂ ನಡುವಿನಷ್ಟು ಅಂತರದ ಗೆರೆ

ಮೊದಲ ಆಲಯದ ಮುಂದಿನ ಜೀವಕ್ಕೆ ಬಡತನಕ್ಕಾಗಿ ಬಟ್ಟೆಯ ಕೊರತೆ
ಸ್ಕೂಟಿಯಲ್ಲಿ ತಿರುಗುವ ಮತ್ತೊಬ್ಬನ ಮೈಮೇಲೆ ಒಂದೆಳೆಯ ನೂಲು
ಇಲ್ಲಿ ಕಟ್ಟಿಟ್ಟದ್ದನ್ನು ಹೊರಚೆಲ್ಲುವ ಧಾವಂತ, ಅಲ್ಲಿ ಬಚ್ಚಿಟ್ಟದ್ದನ್ನು ಕೂಡಿಡುವ ಕಡು ಆಸೆ
ಇವನೊಟ್ಟಿಗೆ ದೇವರದ್ದು ಶತ್ರುತ್ವ, ಅವನಿಗೋ ಕುತ್ತಿಗೆಗೇ ಜೋತು ಬಿದ್ದಿದ್ದಾನೆ.

ಮುಕ್ತಿ ಭಕ್ತಿಗಳು ಅಕ್ಕಪಕ್ಕದಲ್ಲೇ, ಇಲ್ಲಿನ ಘಮಲು ನಾತವಾಗಿ, ಅಲ್ಲಿನ ನಾತ ಪರಿಮಳ,
ಲೋಕಾರೂಢಿಯೊಳಗೆ ಲೀನವಾದ ಕರ್ಪೂರದ ಹೊಗೆಗೂ,
ಪಾಯಿಖಾನೆಯ ಮುಂದೆ ಕುಳಿತವನ ಅಗ್ಗದ ಬೀಡಿಯ ಹೊಗೆಗೂ
ನಡುವೆ ಅಕಾರಣ ಪ್ರೇಮ ಹುಟ್ಟಿದ್ದನ್ನು ಕಣ್ಣಲ್ಲದವರು ಮಾತ್ರ ನೋಡಿದರು.

ಮೂತ್ರಚೆಲ್ಲುವುದೂ ಆಲಯವು, ಭಕ್ತಿ ಚೆಲ್ಲುವುದೂ ಆಲಯವೂ
ಸುಖಾಸುಮ್ಮನೆ ಬೇಜಾರಿನಲ್ಲಿದ್ದ ಗೋಡೆಮೇಲಿನ ಕೆಂಪುಜಿರಳೆಗೆ
ಅವಾಗಿನಿಂದಲೂ ಬಿಟ್ಟೂ ಬಿಡದೆ ಒಂದೇ ಅನುಮಾನ
ಆಲಯವೆರಡೂ ಒಂದೆಯೋ, ಅಥವ ಒಂದಿದ್ದದ್ದು ಎರಡೋ ?

ವಿಸರ್ಜನೆಯ ಎರಡು ಮಾದರಿಗಳನ್ನೂ ಒಂದೇ ಗೆರೆಯೊಳಗೆ
ನಿಲ್ಲಿಸುವ ಆಸೆಯೊಂದು ಮಣ್ಣೊಳಗಿನಿಂದ ಇಣುಕಿ ತುಟಿ ಸವರಿಕೊಳ್ಳುತ್ತಿರುವ
ಚಣದೊಳಗೇ, ಬಾವುಟಶೂರರ ಕೆಂಪುಕಣ್ಣೊಳಗೆ ಕೆಂಡಗಳು ಸರಿದಾಡುತ್ತವೆ
ತುಟಿ ಸವರಿಸಿಕೊಳ್ಳುತ್ತಿರುವ ಆಸೆಯು ಅವರತ್ತ ತಿರುಗಿಯೂ ನೋಡುವುದಿಲ್ಲ




Wednesday, 15 February 2012

ಚರ್ಮದ ಸಂತೆಯೊಳಗೆ...

ಪಿತಗುಡುವ ಚರ್ಮದ ಸಂತೆಯೊಳಗೆ ಜನವೋ ಜನ,
ಸಂತೆಯೆಂದರೆ ಸುಲಭಕ್ಕೆ ದಕ್ಕುವ ಸಂತೆಯಲ್ಲವದು
ಎಬ್ಬಿಹಾಕಿದ ಜೀವಗಳ ಚರ್ಮಗಳ ರಾಶಿ
ಮೂಗು ಇಡುಕಿದೆಡೆಯಲ್ಲೆಲ್ಲ ತೊಗಲಿನ ಪರಿಮಳ..

ಹಾಸಲೂ ಸಿಗುತ್ತವೆ, ಹೊದೆಯಲೂ ಸಿಗುತ್ತವೆ..
ಬಣ್ಣವಿದೆಕೋ, ಮಾಂಸವಿದೆಕೋ ಹಾಡು ಹಾಡುವ
ಪುಟ್ಟ ತೊಗಲುಗಳು, ತೊಗಲಿಗಿಷ್ಟು ರೇಟುಗಳು
ಕತ್ತಲ ರೌರರವದೊಳಗೆ ಕತ್ತು ಹಿಸುಕಿದ ಬದುಕುಗಳು

ಸುಜಲಾಂ ಸುಫಲಾಂ ಸಂತೆಯೊಳಗೆ ಇಕ್ಕಿರಿದ ಜೀವ
ಇಷ್ಟಕಷ್ಟಗಳನ್ನು ಬಾಡಿಗೆಗೆ ತೆಗೆದುಕೊಳ್ಳಲಾಗಿದೆ
ಯಾರ ಮನಸೊಳಗೆ ಏನೇ ಕಣ್ಣರಳಿದರೂ,
ಕ್ಷಮಿಸಿ ಅರಳುವ ಕ್ರಿಯೆ ಇಲ್ಲಿ ನಿಷಿದ್ಧ...

ಸ್ತಬ್ದ ಬದುಕುಗಳಾಚೆ ಬೆರಳುಚಾಚುವ ಉಮ್ಮೇದಿ
ಸಂತೆಗೆ ಬಂದ ಯಾವ ನಾಯಿನರಿಗಳಿಗೂ ಇಲ್ಲವೆಂಬುದು
ಹರಿದ ಕವುದಿಗೂ, ಅದಕ್ಕೆ ಮೆತ್ತಿಕೊಂಡ ವಾಸನೆಗೂ
ರಾಗಿಕಾಳಿನಷ್ಟೂ ಇಲ್ಲದ್ದನ್ನು ಯಾರೂ ನೋಡುವುದಿಲ್ಲ,

ಅದರಪಾಡಿಗದು ಅರಳಿಕೊಳ್ಳುತ್ತದೆ ತೊಗಲಿನ ಸಂತೆ
ಅದರಪಾಡಿಗದು ಮುರುಟಿಕೊಳ್ಳುತ್ತದೆ
ಎರಡನ್ನೂ ನಾನು ನನ್ನದೇ ಕಣ್ಣುಗಳೆಸೆದು
ನೋಡುವ ಪ್ರಯತ್ನದಲ್ಲಿದ್ದೇನೆ..

ಎಷ್ಟು ನಿಟ್ಟಿಸಿದರೂ ರಕುತವನ್ನಷ್ಟೇ ಚಿಮ್ಮಿಸುವ
ಈ ವಿಕ್ಷಿಪ್ತ ಸಂತೆಯನ್ನು ಇನ್ನೂ ಆಳವಾಗಿ ಧೇನಿಸಲು
ಈ ನಡುವೆ ಎರವಲು ಕಣ್ಣುಗಳುಗಳು ಬೇಕೆನಿಸುತ್ತದೆ,
ಸಾಲಕ್ಕಾದರೂ ಸರಿಯೇ ರೆಪ್ಪೆಗಳ ಸಮೇತ ಎರಡು ಕಣ್ಣು ಕೊಡಿ..

ತೊಗಲ ಸಂತೆಯೊಳಗೆ ನಿಮ್ಮ ಕಣ್ಣುಗಳನ್ನೂ ಇಡುತ್ತೇನೆ,
ಆ ತೊಗಲ ಬದುಕುಗಳ ಉರಿ ಬೆಂಕಿ ಕೆಂಡಕ್ಕೆ ನಿಮ್ಮ ಕಣ್ಣುಗಳೂ
ಒಂದಿಷ್ಟು ಸುಡಲಿ, ಜೀವಜಗದ ಯಾಪಾರದ ಕ್ರೂರತೆ
ರೆಪ್ಪೆಗಳ ಮೇಲೆ ನೀರಗುಳ್ಳೆಗಳ ಬೊಬ್ಬೆಗಳನ್ನು ಮೂಡಿಸಲಿ
..


-ದಯಾನಂದ್ ಟಿ ಕೆ

Tuesday, 14 February 2012

ಪರಿಮಳದ ಲಿಲಾವು ಮತ್ತು ಎರೆಹುಳುವಿನ ಗ್ಯಾನ

ನಡುನೆತ್ತಿಯ ಮಿದುವಿಗೆ ಸೂರ್ಯನ ಒಲೆಯ
ಕಾವು ಮುಟ್ಟುತ್ತಿದ್ದ ಏರು ಮಧ್ಯಾನ್ಹದ ಚಣದೊಳು
ಇವನು ಹೀಗೆ ಬರಿಗಾಲ ಬೀಸಿಕೊಂಡು
ಬೀದಿಬದಿಯ ಅಂಗಡಿಗಳಿಗೆ
ಲೋಬಾನದ ಪರಿಮಳ ಮಾರುತ್ತಾನೆ..
ತಲೆಗೆ ಸುತ್ತಿದ ವಲ್ಲೀಬಟ್ಟೆಯ ಪದರುಗಳ ಒಳಗೆ
ಬೆವರು ಹನಿಗಟ್ಟಿದರೂ, ಯಾರೋ ಬಿಸುಟ
ತಂಪುಪಾನೀಯದ ಮುಚ್ಚಳ ಕಾಲಿಗೆ ತಿವಿದರೂ
ಪರಿಮಳದ ಲಿಲಾವಿಗೆ ಯಾವ ಊನವೂ ಒದಗಿಲ್ಲ.
ಇವನ ಕೈಗೇ ಅಂಟಿಕೊಂಡೇ ಇರುವ ಪರಿಮಳದ
ಹೂಜಿಯೊಳಗೆ ಪ್ರೇಮದ್ರವ್ಯವಿರಬಹುದೇ..?
ಇರಬಹುದೇನೋ..
ಅಂಗಡಿಗಳ ಮನುಷ್ಯರು ರೂಪಾಯಿಗಳ ವಿವಿಧ
ಮುಖಬೆಲೆಗಳನ್ನು ಇವನ ಬಲಗೈಗೆ ದಾಟಿಸುತ್ತಾರೆ..
ಇವನು ಥರಹೇವಾರಿ ದೇವರುಗಳಿರುವ ಅವರ
ಅಂಗಡಿಯೊಳಗಿಷ್ಟು ಪರಿಮಳ ಚೆಲ್ಲುತ್ತಾನೆ..
ಆಗಷ್ಟೇ ಮಣ್ಣ ಚಿಪ್ಪೊಡೆದು ತಲೆಮಾತ್ರ ಹೊರಗಿಟ್ಟ
ಬೆತ್ತಲೆ ಎರೆಹುಳುವೊಂದು
ಬರಿಗಾಲ ಫಕೀರನನ್ನು ತದೇಕವಾಗಿ ನಿಟ್ಟಿಸುತ್ತದೆ.
ನೆಲದ ಮೇಲಿನ ರಸ್ತೆದೊಳಗೆ ಪರಿಮಳ ಚೆಲ್ಲುತ್ತ ನಿಂತ
ಬರಿಗಾಲ ಫಕೀರನ್ನು ಒಮ್ಮೆ ಚುಂಬಿಸುವ ಆಸೆಯೊಂದು
ಎರಹುಳುವಿನೊಳಗೆ ಆಗ ಹುಟ್ಟಿ ಆಗಲೇ ಸತ್ತಿತು..
ಚಪ್ಪಲಿಬೂಟು ಹೊತ್ತ ಜನರ ಚಲನೆಯೇ
ಎರೆಹುಳಿವಿಗೆ ಗಂಡಾಂತರವಾಗಿ ಕಂಡಿದ್ದು
ಫಕೀರನಿಗೆ ಯಾಕೋ ಗೊತ್ತಾಗಲೇ ಇಲ್ಲ..
ಮುಂದಿನ ಅಂಗಡಿಯ ಚಪ್ಪರಕ್ಕೆ ತೆವಳಿದ
ಅವನ ಬರಿಗಾಲ ಹತ್ತು ಬೆರಳುಗಳಿಗೆ ಮಾತ್ರ, ಎರೆಹುಳುವಿನ
ಪರಿಮಳದ ಮೇಲಿನ ಪ್ರೇಮ ಮಾತ್ರವು
ತಕ್ಕಮಟ್ಟಿಗೆ ನಿಲುಕಿದ್ದು ಸೋಜಿಗ.

-ದಯಾನಂದ್ ಟಿ ಕೆ

Monday, 13 February 2012

ಸಾಣೆಗಾರ

ಇರಬಹುದೇ ಸಾಣೆಗಾರನ ಒಂಟಿಚಕ್ರದ ಅಂಗಡಿಯೊಳಗೆ
ಮನುಷ್ಯ ಪ್ರೀತಿಯ ನರತಂತುಗಳನ್ನು ಚೂಪು ಮಾಡುವ ಚಕ್ರ..
ಚೊಯ್ಯನೆ ಬೆಂಕಿ ಕಕ್ಕುವ ಚಕ್ರಶಿಲೆಯ ನಡುನೆತ್ತಿಯ ಮೇಲೆ
ನಮ್ಮ ಎದೆಗೂಡುಗಳನ್ನಿಟ್ಟು ಚೂರು ಮಸೆದುಕೊಳ್ಳೋಣ..
ಒಳಗೆಳೆದುಕೊಂಡ ನಮ್ಮದಲ್ಲದ ಶತ್ರುತ್ವ
ಒಂದಿಷ್ಟು ಶುದ್ದಿಯಾಗಲಿ,
ಪಾಚಿಕಟ್ಟಿದ ಗೂಡೊಳಗಿನ ಗೋಡೆಗಳಿಗೆ
ಬೆಂಕಿ ಹತ್ತಿದ ಮೇಲಾದರೂ ಉದುರಬಹುದು ಕರೆ,
ಅಂತೆಯೇ ಏನೋ ಬರೆದಿಟ್ಟ ಹಣೆಗಳನ್ನೂ ತುಸು ಚಕ್ರಶಿಲೆಯ
ಕೆನ್ನೆಗಿಟ್ಟು ಅಳಿಸಿಕೊಳ್ಳೋಣ ಇಲ್ಲದಿರುವ ಬರಹವನ್ನು..
ಅವರಿವರು ತುಂಬಿಸಿದ್ದಾರೆ ನಮ್ಮ ನರಗಳೊಳಗೆ ಕಪ್ಪು ಪಾಷಾಣ
ಎಲ್ಲ ನರಗಳನ್ನೂ ಒಂದೊಂದಾಗಿ ಬಿಡಿಸಿ ಇಡೋಣ
ಮಾಯಕಾರ ಸಾಣೆಗಾರ ತುಳಿಯುವ ಒಂಟಿಚಕ್ರದ
ಪೆಡಲ್ಲುಗಳ ಮೇಲೆ..
ಇನ್ನಾದರೂ ಶುದ್ಧಿಯಾಗಲಿ ನಮ್ಮೊಳಗು,
ಚೂಪುಗೊಂಡ ಎದೆಗೂಡು, ಹಣೆ, ನರವ್ಯೂಹಗಳ ತುಂಬ
ನುಗ್ಗಿಹರಿಯಲಿ ಪ್ರೀತಿಯ ಒರತೆ,
ಎಲ್ಲರ ಜೀವಗಳನ್ನೂ ಮುಟ್ಟುವ ಕಣ್ಣೊಂದನ್ನು ಇಟ್ಟುಕೊಂಡು
ಚೆಲ್ಲಿಬಿಡೋಣ ಉಳಿದೆಲ್ಲವನ್ನೂ
ಸಾಣೆಗಾರನ ಕಾಲ ಹೆಬ್ಬೆರಳ ದಿಬ್ಬದ ಮೇಲೆ


-ದಯಾನಂದ್ ಟಿ ಕೆ

Friday, 10 February 2012

ಇರುವೆ ಕಣ್ಣಿನಂಥ ಜೀವಕ್ಕೆ..



ಈ ಗರಿಯ ಜೋಪಡಿಯ ಕೆಳಗೆ ಏನನ್ನೋ ಧೇನಿಸುತ್ತ ಕುಳಿತ
ಈ ಮುದುಕನನ್ನು ಚಲಿಸುವ ಕಾಲ ಯಾವತ್ತೋ ಮರೆತಿದೆ.
ಪಕ್ಕದ ದೊಡ್ಡ ಮೋರಿಯೊಳಗೆ
ಲಗಾಟಿ ಹೊಡೆಯುವ ಬಿಳಿಹುಳುವಿಗೂ
ಇವನ ಕಾಯುವಿಕೆಯ ತಳಬುಡಗಳೆರಡೂ ಪರಿಚಯವಿಲ್ಲ.
ಕಂಚಿಹೋದ ಮಡಕೆಯೊಳಗೆ ಉಳಿದ ಒಂದೆರಡು ಅಗಳುಗಳನ್ನು
ಬೆರಳುಗಳಲ್ಲಿ ಆಯ್ದು ಬಾಯಿಗೆಸೆದುಕೊಂಡು ಮನೆ ಬಿಡುವ
ಕಳಿದಜೀವದ ಮುದುಕ, ಎಂದಿನಂತೆ ರಸ್ತೆಪಕ್ಕದ ಜೋಪಡಿಯೊಳಗೆ
ಮುಖ ತಿರುವಿನಿಂತ ತಿದಿಗೊಮ್ಮೆ ವಂದಿಸಿ,
ಉಫ್ಫು ಉಫ್ಫನೆ ಒಲೆ ಊದಿ ಕೆಂಡ ಮಾಡುತ್ತಾನೆ..
ಒಲೆಯ ಒಳಗೂ ಅಲ್ಲೊಂದಿಲ್ಲೊಂದು ಇದ್ದಿಲು
ಬೇಜಾರು ಮಾಡಿಕೊಂಡು ಕೆಂಪಗಾಗುತ್ತವೆ.
ಮೂಲೆಯೊಳಗೆ ಪೇರಿಸಿದ ಕಬ್ಬಿಣದ ಸಣ್ಣ ತುಂಡುಗಳು
ಮುದುಕನ ರಟ್ಟೆಯನ್ನು ನೋಡುತ್ತ ಕೆವ್ವಕೆವ್ವನೆ ನಗುತ್ತವೆ,
ಯಾರೂ ಹೆಜ್ಜೆ ಇಡದ ಗಹ್ವರದಂಥ ಜೋಪಡಿಯೊಳಗೆ ಇವನೊಬ್ಬನೇ.
ಆಗಾಗ ಓಡಾಡುವ ಜನರು ಇವನತ್ತ ಕರುಣೆಯನ್ನು ಮಾತ್ರ ಹುಟ್ಟಿಸುವ
ನೋಟವೊಂದನ್ನು ಬಿಮ್ಮನೆ ಬಿಸಾಡಿ
ತಮ್ಮಪಾಡಿಗೆ ತಾವು ಚಲಿಸುತ್ತಾ ಇವನನ್ನು ಹಿಂದೆಯೇ ಬಿಸುಟಿದ್ದಾರೆ..
ಬಹಳ ಹಿಂದೇನಲ್ಲ.. ಐದತ್ತು ವರ್ಷಗಳಿರಬಹುದು..
ಮುದುಕನ ತಿದಿ ಸದ್ದಿನೊಂದಿಗೆ ಬದುಕುತ್ತಿತ್ತು. ಇದೇ ತಿದಿಯ ಆಚೀಚೆಗೆ
ಗುದ್ದಲಿ, ಪಿಕಾಸಿ, ಮಚ್ಚು, ಹಿಡಿಗಳು ಚೊಯ್ಯೋ ಎಂದು
ಸದ್ದು ಮಾಡಿಕೊಂಡು ಮುದುಕನ ನರವ್ಯೂಹದೊಳಗೆ
ಬದುಕನ್ನು ತುಂಬುತ್ತಿದ್ದವು..
ಕಬ್ಬಿಣದ ಇರುವನ್ನು ಬಣ್ಣದ ಪಿಲಾಸ್ಟಿಕ್ಕು ಎಡಗೈಯಲ್ಲಿ ಪಕ್ಕಕ್ಕೆ ಸರಿಸಿತಲ್ಲ,
ಆ ಸಂಕರದಲ್ಲಿಯೇ ಮುದುಕನ ಮನೆಯೊಳಗೆ ಹಸಿವು
ಮೀಸೆತಿರುವಿ, ತೊಡೆತಟ್ಟಿಕೊಂಡು ಒಳನುಗ್ಗಿತ್ತು..
ಕಳಿದ ಜೀವದ ಮುದುಕನಿಗೆ ಚಲಿಸುತ್ತಿರುವ ಕಾಲವು
ಅದರ ಕಾಲಕೆಳಗೆ ಇವನ ಬದುಕನ್ನೂ ಇಟ್ಟುಕೊಂಡ ಪರಿ
ಅರ್ಥವಾಗುವುದೇ ಇಲ್ಲ.
ಯಾರ ಕಣ್ಣಿಗೂ ಬೆದರದ ಮುದುಕನ ಜೀವದೊಳಗೆ ಇನ್ನಾದರೂ ನಿರೀಕ್ಷೆ ಸತ್ತಿಲ್ಲ..
ಮಾಗಿದ ಕಣ್ಣುಗಳಲ್ಲಿ ನೇಗಿಲು ಮಾಡಿಸಿಕೊಳ್ಳುವ, ಎತ್ತಿನಗಾಡಿಯ ಚಕ್ರ
ಮಾಡಿಸಿಕೊಳ್ಳಲು ಯಾರಾದರೂ ಬರುತ್ತಾರೆ,
ಬೆರಳಲ್ಲಿ ಆಯುವ ಅನ್ನದ ಅಗುಳುಗಳನ್ನು, ಒಂದಲ್ಲಾ ಒಂದು ದಿನ
ಅಂಗೈ ತುಂಬ ತುಂಬಿಕೊಳ್ಳಬಹುದೆಂಬ ಆಸೆಯೊಟ್ಟಿಗೆ..
ತಿದಿಯ ಮೇಲಣ ಧೂಳನ್ನು ತಲೆಗೆ ಸುತ್ತಿದ ಬಟ್ಟೆಯ ಚೌಕದಲ್ಲಿ
ಒರೆಸಿಯೇ ಒರೆಸುತ್ತಾನೆ. ಆ "ಯಾರಾದರೂ" ಇನ್ನಾದರೂ
ಯಾಕೋ ಬರುತ್ತಲೇ ಇಲ್ಲ


- ದಯಾನಂದ್ ಟಿ ಕೆ

ದೀಪ ಹತ್ತಲಿ.

ಬೊಗಸೆಯೊಡ್ಡು ಗೆಳತಿ.. ಪೇರಿಸಿಟ್ಟ ಮಾತುಗಳೆಲ್ಲವನ್ನೂ
ಒಂದೊಂದೇ ಇಡುವೆ.. ಇರಲಿ ಜೋಪಾನ..
ಇವು ಸುನೀತ ಸೂಕ್ಷ್ಮಪದಗಳು
ಕೆಲವು ಈಗಷ್ಟೇ ಕಣ್ಣುಬಿಟ್ಟವು..
ಒಂದೆರಡಿವೆ.. ಅವು ನಿನ್ನ ರೆಪ್ಪೆ ನೋಡಲೂ ಅಂಜುತ್ತವೆ..
ಅತ್ತಿತ್ತ ಅಂಗೈ ಅಲುಗಿಸದಿರು..
ಒಂಟಿ ಕಾಲಿನ ಮಾತುಗಳಿಗೆ ಭಯವಾಗಬಹುದು..
ಅಲ್ಲಿ ಕಿರುಬೆರಳ ತುದಿಗೆ ಜೋತುಬಿದ್ದ ಪದವಿದೆಯಲ್ಲ..
ಅದು ಹುಟ್ಟಿ ನಾಕು ಚಣವೂ ಕಳೆದಿಲ್ಲ,
ಪರಮಪೋಲಿಯಂತಾಡುತ್ತಿದೆ..
ನಿನ್ನ ಕೈರೇಖೆಗಳನ್ನು ಎಣಿಸಿಸುತ್ತಿರುವ ಪದಕ್ಕೆ
ವಿನಾಕಾರಣ ಸಂಕೋಚ,
ಅದೇಕೋ ಏನೋ ತಿಳಿಯದು ಈ ಪದಗಳು
ನನ್ನ ಮುಷ್ಟಿಯೊಳಗೆ ಬಿಗಿದಿದ್ದಾಗ
ಧೈರ್ಯವಾಗಿಯೇ ಇದ್ದವು..
ನಿನ್ನ ಅಂಗೈಯೊಳಗೆ ಬಿದ್ದ ಕ್ಷಣವೇ ಇಂಥಾ ಕಂಪನ..
ಪದಗಳ ಜೀವಕೋಶವೇ ಹೀಗಾ,
ಚೂರು ಮುದ್ದಿಸು.. ಕೆಲವಕ್ಕೆ ಕೆನ್ನೆ ಗಿಲ್ಲು..
ಕಿರುಬೆರಳು ಜಗ್ಗುವ ತುಂಟ ಪದಕ್ಕೆ
ಒಮ್ಮೆ ಗದರಿಕೋ
ಅಪ್ಪಿತಪ್ಪಿಯೂ ಅಂಗೈ ಬಿಗಿಹಿಡಿಯಬೇಡ..
ನಿನ್ನ ಗುಳಿಕೆನ್ನೆಯೊಳಗೆ ಇರುವಂತೆ,
ಪದಗಳಿಗೂ ಉಸಿರು ಇರುತ್ತದೆಯಂತೆ..
ಬೆಚ್ಚಬಹುದು,
ಚೂರು ಪ್ರೀತಿ ಸವರು, ಎಲ್ಲದರ ಒಳಗೂ
ತಿಳಿ ಕಣ್ಣು ಆನಿಸು..
ಒಂದೊಂದನ್ನೇ ಮೆಲ್ಲ ಹಿಡಿದು ಕಣ್ಣೊಳಗೆ
ಸುರಿದುಕೋ.. ಕಣ್ಣೊಳಗಿನ ಶೀತಲತೆಗೆ
ಪದಗಳಿಗಿಷ್ಟು ತಂಪು ಸಿಗಲಿ..
ನನ್ನ ಪದಗಳು ಚೆಲ್ಲುವ ಬೆಳಕೊಳಗೆ
ಜೀವದಗೆಳತಿಯ ಕಣ್ಣ ಜಗದೊಳಗೆ
ಒಂದು ದೀಪ ಹತ್ತಲಿ.

-ದಯಾನಂದ್ ಟಿ ಕೆ

ಕಾಗೆಕಣ್ಣು


ಕಾಗೆಗಳೂ ಹಾರುತ್ತವೆ.. ನೋಡುವರು ಯಾರೂ ಇಲ್ಲವಿಲ್ಲಿ,
ಮೊದಲಿದ್ದಿರಬಹುದೇನೋ ಬೇರೆಯದೇ ಬಣ್ಣ,
ಬಣ್ಣಬಣ್ಣವೆಂದು ಅರಚುತ್ತ ತಮ್ಮ ತಲೆಯನ್ನೇ ಸಿಗಿದುಕೊಂಡು
ಸುಟ್ಟು ಕರ್ರಗಾದ ಜೀವದೆದೆ ಗೂಡುಗಳ ತಿದಿಗೆ ಕೈ ಅದ್ದಿ
ರುಬ್ಬಿಕೊಂಡಿವೆ ಮೈಗೆ ಬಣ್ಣವಲ್ಲದ ಬಣ್ಣ.
ಹೌದು ಕಾಗೆಗಳೂ ಹಾಡುತ್ತವೆ.. ಕಾಪಾಲಗಳ ಇಂಪುತಂಪಿನ
ಮೃದಂಗ ವಾದನದ ಅಳತೆಗೋಲುಗಳಿಗೆ ಆ ಹಾಡು ಪಕ್ಕಾಗುವುದಿಲ್ಲ.
ಇಟ್ಟ ಮೊಟ್ಟೆಯೊಡನೆ ಬೆರೆಸಿದ ಮೊಟ್ಟೆಗಳಿಗೂ ಒಂದೇ ಕಾವು,
ಮೊಟ್ಟೆಯಿಟ್ಟು ಓಡಿಹೋದವರ ಕೂಜನಕ್ಕೆ ಜಗತ್ತೇ ವಿಸ್ಮಯ.
ಜೀವಹೆಣಗಳ ಬಿಟ್ಟು ಸತ್ತಹೆಣಗಳ ಚರ್ಮ ಕುಕ್ಕುವ
ಹದ್ದೊಂದು ಇಲ್ಲಿ ಪೂಜೆಗೆ ಯೋಗ್ಯ..
ಎಂಜಲ ವಿಸರ್ಜನೆಗೆ ಹಾಡುವ ಕಾಗೆಗಳಿಗೂ ಆಹ್ವಾನ.
ಬಿಳಿಕೆಂಪು ಹಸಿರು ನೀಲಿ ವ್ಯೋಮದೆಲ್ಲ ಬಣ್ಣವೂ ಇಲ್ಲಿ ಮಾನ್ಯ,
ಕಾಗೆಯನ್ನು ಹತ್ತಿರ ಬಿಟ್ಟುಕೊಂಡೀರಾ.. ಬಣ್ಣ ಬಣ್ಣ..!
ನೀರಕಣ್ಣುಗಳನ್ನು ಎದೆ ಕವಾಟಗಳೊಳಗೆ ಅವಿತಿಟ್ಟ ಕಾಗೆ,
ಬಣ್ಣಗಳನ್ನು ಎಡಗಾಲಿನಲ್ಲೂ ಮೂಸುವುದಿಲ್ಲ..
ಎರೆಹುಳುವಿನ ಚಲನೆ, ಗೊಬ್ಬರದ ಹುಳುವಿನ ಪ್ರೇಮ,
ಗೂಬೆಗಳ ಬಸಿರು ಬಾಣಂತನಗಳನ್ನು ಮುಟ್ಟಲು
ಬೇರೆಯದೇ ಕಣ್ಣು ಟಿಸಿಲೊಡೆಯುವತನಕ..
ಜೀವಪಂಜರದೊಳಗೆ ಸಾಸುವೆ ಗಾತ್ರದ ಪ್ರೀತಿ ಹುಟ್ಟುವ ತನಕ
ಕಾಗೆ ಹಾರುತ್ತಲೇ ಇರುತ್ತದೆ..
ಆದರೆ ಯಾರೂ ಅದನ್ನು ನೋಡುವುದಿಲ್ಲ..!
- ದಯಾನಂದ್ ಟಿ ಕೆ

ಜಾಪಾರಿ..



ಯಾವ ಪರಿಯ ಸೊಬಗಿಗೂ ಸೊಪ್ಪು ಮುಟ್ಟಿಸದ 
ಇವನ ಹೆಸರು ಜಾಪಾರಿ..
ಹಮಾಲಿ ಜಗತ್ತಿನ ಲೈಟುಕಂಬದೆದುರು ಮಂಡಿಯೂರಿ

ಕುಳಿತ ಇವನೆದುರು ಗಸಗಸೆ ಹಣ್ಣಿನ ಗುಡ್ಡೆಗಳು..
ಆ ಮರ, ಈ ಮರ, ಗಸಗಸೆ ಬಿಡುವ ಯಾವ ಮರವಾದರೂ
ಜಾಪಾರಿಗೆ ಅದು ಅವನದ್ದೇ ಮರ..
ಕೊಂಬೆರೆಂಬೆಗಳ ಮೇಲೆಲ್ಲ ನಡೆದಾಡಿ ಕಿತ್ತ
ಗಸಗಸೆ ಹಣ್ಣುಗಳು ಎಂಟಾಣೆಯ ಕವರೊಳಗೆ ಜೋಪಾನ.
ನಾಲ್ಕುದಾರಿ ತಬ್ಬುವ ಕೂಡುಬಿಂದುವಿನ ಲೈಟುಕಂಬವೇ
ಜಾಪಾರಿಯ ವ್ಯಾಪಾರದ ಶಾಪಿಂಗಿನ ಮಾಲು.
ತಿಳಿಗೆಂಪಿಗೆ ಇಷ್ಟು, ಕಡುಕೆಂಪಿಗೆ ಇಷ್ಟು
ಮಾಗಿದವಕ್ಕೆ ಇಷ್ಟು, ಅಪ್ಪಚ್ಚಿಯಾಗವಕ್ಕೆ ಇಷ್ಟು..
ಎಲ್ಲದಕ್ಕೂ ಬೆಲೆಯುಂಟು ಜಾಪಾರಿ ಗುಡ್ಡೆಗಳಲಿ.
ಇವನ ವಯಸ್ಸಿನಂಥವೇ ಕೂಸುಗಳಿಗೆ
ಗುಡ್ಡೆಗಳ ತೋರಿಸಿ ಗಿರಾಕಿಗಳಾಗಲು ಪ್ರಚೋದಿಸುತ್ತ
ಮೊಣಕಲಾಲೂರಿದ ಜಾಪಾರಿಯ ಕಣ್ಣು ನಿಮೀಲಿತ.
ಎರಡು ಸಾಸುವೆಯಷ್ಟು ಹಿಂದಕ್ಕೆ ತಿರುಗುವುದಾದರೆ,
ಬಾಳೆಕಾಯಿ ಮಂಡಿಯೊಳಗೆ ವಿಟರ ಕೂಪದಲ್ಲಿ
ಅಕ್ಕಿಬೇಳೆಗೆ ದಾರಿ ಮಾಡಿಕೊಳ್ಳುತ್ತಿದ್ದ ಜಾಪಾರಿಯ
ತಾಯಿಯದ್ದು ಸಾವಾಗಿ ತಿಂಗಳು ಕಳೆದಿಲ್ಲ..
ಗಸಗಸೆಯ ಮರವೆಂದು ನೆಲದ ಮೇಲಿರುವತನಕ 
ಜಾಪಾರಿಯ ಬ್ರೆಡ್ಡು ಬನ್ನಿಗೇನೂ ಕೊರತೆಯಿಲ್ಲ..
ಆಗಾಗ್ಗೆ ಗಸಗಸೆ ಹಣ್ಣಿನ ಗುಡ್ಡೆಗಳ ಲಿಲಾವು ಜೋರಾದರೆ, 
ಐದತ್ತು ರುಪಾಯಿಗೆ ಮೊಟ್ಟೆದೋಸೆಯನ್ನೂ ತಿನ್ನುತ್ತಾನೆ.
ಹಿಪ್ಪುನೇರಳೆ ಮರದ ಪೊಟರೆಯೊಳಗೆ ದೇಹ ತೂರಿಸಿ
ಬೆಳಗಾನ ಕತ್ತಲೆಯ ಮೂಗಿಗೆ ಮೂಗು ಉಜ್ಜುತ್ತಾನೆ.
ಎಲ್ಲವನ್ನೂ ನಿಂತ ನಿಟ್ಟಿನಲ್ಲಿ ನಿರುಕಿಸುವ ಮಾಸುಕಪ್ಪು
ಕಾಗೆಯೊಂದು ಪುಟ್ಟ ಕಣ್ಣೊಳಗೆ ಎರಡು ಮಾತು
ಆಡಲು ಹಿಂದೆಮುಂದೆ ನೋಡುತ್ತಿದೆ.
ಪೊಟರೆಯೊಳಗಿನ ಜೀವಕ್ಕೆ ಇನ್ನೂ ಬಿಸಿಲು ತಾಕಿಲ್ಲ..
-ದಯಾನಂದ್ ಟಿ ಕೆ

ಮುನಿಯವ್ವ......



ಮೊನ್ನೆ ಡಾಬಾಬದಿಯ ಎಕ್ಕದಹೂವುಗಳನ್ನು ನೇವರಿಸುತ್ತಿದ್ದಾಗ,
ಆಕೆ ತಂಬುಲದ ಬಾಯೊಳಗೆ ನಗುವನ್ನು ತುಂಬಿಕೊಂಡು
ಅವಳೂರ ಕಥೆ ಹೇಳುತ್ತಿದ್ದಳು.

 
ಅಲ್ಲಿ ಯಾವ ರಾಜನೂ ಆಳಿರಲಿಲ್ಲವಂತೆ, ದೇವರುಗಳೂ ಗೈರುಹಾಜರು..
ಕಲ್ಲುಕಲ್ಲು ಸೇರಿದ ಗೂಡುಗಳೇ ಮನೆಯಾದ, ಊರಲ್ಲದ ಊರಂತೆ..
ಬಿಚ್ಚೆಸೆದ ನೂಲಿನುಂಡೆಯಂತೆ ಊರಪಕ್ಕವೇ ನದಿಯಂತೆ..
ತೊಡರು ಹಾಕುವ ಹೂಟಕ್ಕೆ ನದಿಯೂ ಬಿಮ್ಮೆಂದು ಎದ್ದಿದ್ದು ಅಣೆಕಟ್ಟೆ..
ಪೇರಿಸಿಟ್ಟ ಕಲ್ಲುಗಳಿಗೆ ಮನೆಯೆಂದು ಹೆಸರೇ? 

ಊರಿಗೂರನ್ನೇ ಬೀಸಿ ಒಗೆದ ಮೇಲೆ ಬಿದ್ದಿದ್ದೇ ದೇಶ, ಹೆಸರು ಹೈವೇ.
ಆಗಿನಿಂದ ಇವಳ ಬಾಯೊಳಗೆ ರಕುತವೋ ತಂಬುಲವೋ..
ಅಲ್ಲಲ್ಲ ಮಕಾಡೆ ಕವುಚಿಕೊಂಡ ಅವಳದ್ದೇ ಬದುಕೋ ಎಂಬಂಥ ಕೆಂಪುದ್ರವ..
ಹೈವೇಯ ಮೇಲೆ ಯಾರೋ ಅಟ್ಟಿಸಿಕೊಂಡಂಡು ಬಂದಂತೆ ಓಡುವ
ವಾಹನಗಳತ್ತ ಸಕಾರಣವಾಗಿ ದುರುಗುಟ್ಟಿ ಪಿಚಕ್ಕೆನ್ನುತ್ತಾಳೆ,
ಕರ್ರಗೆ ಮಲಗಿದ ಡಾಂಬರುದಾರಿ ತನ್ನದೇ ಹೊಟ್ಟೆಯೇನೋ ಎಂಬಂತೆ
ಕಸಿವಿಸಿಗೊಳ್ಳುತ್ತಾಳೆ. 

ಮುಂದೆಂದಾರೊಂದು ದಿನ.. ಅವಳು ಮತ್ತೆ ಸಿಗಬಹುದು..
ನೂಲಂತೆ ಹರಿಯುವ ನೀರಿಗೇಕೆ ಈ ಜನ ಬಾಗಿಲು ಕಟ್ಟುತ್ತಾರೆ ಅಂತ
ಕಣ್ಣೊಳಗೆ ಕಣ್ಣು ಬಿಸುಟು ಕೇಳಬಹುದು..
 
ಗೊತ್ತಿರುವ ಸತ್ಯವನ್ನು ಮಾತಾಡುತ್ತೇನೇನೋ ಎಂಬ ಭಯದಿಂದ
ರಾಚುವ ಸಿಡಿಲಿನ ರೆಂಬೆಕೊಂಬೆಗಳಲ್ಲಿ ಒಂದನ್ನು ನಾಜೂಕಾಗಿ ಮುರಿದಿಟ್ಟುಕೊಂಡಿದ್ದೇನೆ.
ಮೆಟ್ಟು ಹೊಲೆಯುವ ಮುನಿಯವ್ವಳ ರಂಪಿ ಚೂಪುಮಾಡುವ ಕಲ್ಲ ಮೇಲೆ
ಸಿಡಿಲಿನ ಚೂರನ್ನು ಕಂಡೂ ಕಾಣದೆಷ್ಟು ಮಸೆದು,

ಸೂಜಿಯಂಥ ಸೂಜಿಯೇ ನಿಬ್ಬೆರಗಾಗೋ ಥರದಿ ಸಿಡಿಲ ಸೂಜಿಯೊಂದ
ಅಂಗೈಯೊಳಗಿಟ್ಟುಕೊಂಡಿದ್ದೇನೆ..
ಅವಳು ಅಂಥಹದೊಂದು ಪ್ರಶ್ನೆ ಕೇಳುತ್ತಿದ್ದಂತೆ..
ಮುಲಾಜಿಲ್ಲದೆ ನನ್ನ ಬಾಯಿಯನ್ನು ನಾನೇ ಹೊಲೆದುಕೊಳ್ಳುತ್ತೇನೆ.



-ದಯಾನಂದ್ ಟಿ ಕೆ

ಮೌನ ಮತ್ತು ಪ್ರೇಮ


ಒಂದು ಮಿದುಳಿನ ಸಾವು...



ದೂರ ದೂರ ಇನ್ನೂ ದೂರ, ಇಷ್ಟಲ್ಲ ಅಷ್ಟಲ್ಲ ಇಂಚಲ್ಲ ಅಡಿಯಲ್ಲ
ದೂರದಾಚೆಗಿನ ದೂರದಲ್ಲಿ ಅಗೋ ಆ ಮಿದುಳು ನೆಲಕ್ಕೊರಗಿದೆ..

ಬಿದ್ದ ನೆಲದ ಪಾರ್ಶ್ವಗಳು ತೇವಗೊಂಡು ಹಸಿರಲ್ಲದ ಹಸಿರಿಗೆ ಗೊಬ್ಬರವಾಗುತ್ತ
ನರನರವೂ ಛಟಛಟನೆ ಛಿದ್ರಗೊಳ್ಳುವಾಗ
ಪಕ್ಕದಲ್ಲಿನ ಕಳ್ಳಿಹೂವು ಇಷ್ಟಿಷ್ಟೇ ಬೆತ್ತಲಾಗುತ್ತಿದೆ..

ಪಿತಗುಡುವ ಮಿದುಳನರಗಳ ಸಂತೆಯೊಳಗೆ ಎಷ್ಟೊಂದು ಪದಗಳು
ಸಂಜೆ ದೂಕಾನಿನ ಶೈಲಿಯಲ್ಲಿ ಸಿಕ್ಕಸಿಕ್ಕರೇಟಿಗೆ ಮಾರಲ್ಪಡುತ್ತಿವೆ

ಅಲ್ಲಿ ಲೈಟುಕಂಬದ ಮೇಲೆ ಕೊಕ್ಕು ಮಸೆಯುತ್ತ ಕುಳಿತ ಖಾಕಿ ಬಣ್ಣದ ಹದ್ದಿಗೆ ಮೈ ತುಂಬ ರಕುತ,
ಬಿಚ್ಚಲೇ ಆಗಸಷ್ಟು ನೆಂದ ರೆಕ್ಕೆಗಳು.. ಬೀಸುತ್ತಿದೆ ಮಿದುಳ ವಾಸನೆ ಹದ್ದಿನೆಡೆಗೆ

ಮಿದುಳು ಒರಗಿದ ಜಾಗದಲ್ಲಿ ಮಂಡರಗಪ್ಪೆಗಳ ಮಂತ್ರಘೋಷ,
ಕಪ್ಪುಚೇಳುಗಳಿಗೂ ಸುದ್ದಿ ಮುಟ್ಟಿ ಕೊಂಡಿ ಕೊಂಬುಗಳ ಝಳಪಿಸುತ್ತ
ಕೇರೆಹಾವುಗಳೊಟ್ಟಿಗೆ ಇಳಿದಿದೆ ಖೂಳರ ದಿಬ್ಬಣ

ನೋಡಲು ಕಣ್ಣಿಲ್ಲ, ಮಾತಾಡೆ ಬಾಯಿಲ್ಲ ಬಿದ್ದಲ್ಲೇ ಬಿದ್ದಿದೆ ಮಿದುಳಿನ ಕಳೇಬರವು
ಉಸಿರಾಡೆ ಮೂಗಿಲ್ಲ,, ಒಂದೇ ಸಮಾಧಾನ ಜೀವಕ್ಕೆ ಲುಕ್ಸಾನಿಲ್ಲ..

ಗೊರಸುಗಳು, ಬೂಟುಗಳು, ಟೊಪ್ಪಿಗಳು, ಹಾಳೆಗಳು, ಪೆನ್ನುಗಳು
ಕರ್ರನೆಯ ನಿಲುವಂಗಿಗಳಿಗೆ ತಲುಪಿದೆ ಕೊಡಲಿಯೊಂದು ರವಾನಿಸಿದ ತಂತಿ
ಸರಭರನೆ ಸಿದ್ದಗೊಳ್ಳುತ್ತಿದೆ ಶವಪರೀಕ್ಷಕರ ಪಡೆ

ಅಷ್ಟರಲ್ಲಿ ಮಿದುಳಿನ ನರವೊಂದು ಹೊರನೆಗೆದು ನಾಲಿಗೆ ಸವರಿಕೊಳ್ಳುತ್ತಿದೆ,
ಹಳದಿಎಲೆಗಳನ್ನು ಬಾಚಿಬಾಚಿ ತಿನ್ನುವ ಸಫಲ ಪ್ರಯತ್ನ

ಧೂಳಿನ ತಂಡಗಳು ಮಾತಾಡಿಕೊಂಡು ಕವುಚಿಬಿದ್ದ ತೇವಕ್ಕೆ ಅಡರಿಕೊಂಡು
ಇಷ್ಟಿಷ್ಟೇ ಒಣಗುತ್ತ, ಏನೇನೋ ಗುನುಗುತ್ತ
ಆವರಿಸುತ್ತಾವರಿತ್ತಾವರಿಸುತ್ತಿರಲು..

ಮಿಸುಕಾಡದೆ ಬಿದ್ದಿದ್ದ ಮಿದುಳಬಳ್ಳಿಗೊಂಡು ದೊಡ್ಡ ಸೈಜಿನ ಬಯಕೆ..
ಬಂದಾರೂ ಬಂದಾರೂ ಬದುಕಿದ್ದಾರಿನ್ನೂ ಕೈ ಕಾಲು ಎದೆ ಭುಜಗಳು
ಬಂದಾರೂ.. ಬಂದಾರೂ..

ಗೊರಸು, ಬೂಟು, ಟೊಪ್ಪಿ, ಹಾಳೆಗಳು ಬಿರಬಿರನೆ ಬಂದವು..
ಒಂದೊಂದು ಕೈಯಲ್ಲಿ ಎರಡೆರಡು ತಟ್ಟೆ.. ಜೇಬುಗಳು ತುಳುಕುತ್ತಿವೆ ಚಮಚೆಗಳ ಜಾತ್ರೆ,
ಗಹಗಹಿಸುತ್ತ ಬಂದವು ಕೊಡಲಿಯೊಟ್ಟಿಗೆ ನಾಲಿಗೆಯ ತೇವದ ಜೊತೆಜೊತೆಗೇ..

ಇದಾವುದೂ ಅರಿಯದ ಪೆದ್ದು ಮಿದುಳು ಕಾಯುತ್ತಿತ್ತು.. ಬಂದಾರು ಬಂದಾರು..
ಅವಯವಗಳ ಒಡೆಯರು ಬಂದಾರು ಬಂದಾರು.. ತನ್ನೆಲ್ಲ ತಾಕತ್ತನ್ನು
ಕಾಯುವತ್ತಲೇ ಚೆಲ್ಲಿ ಕಾಯುತ್ತ ಕಾಯುತ್ತ ಕಾಯುತ್ತಲೇ ಇತ್ತು,

ಇತ್ತಲಾಗಿ ತಟ್ಟೆಗಳ ಮೆರವಣಿಗೆಯೊಟ್ಟಿಗೆ ಬಂದಿಳಿದ ತಂಡದ ಮುಂದೆ..
ಕೈ, ಕಾಲು, ಭುಜ ಬೆನ್ನುಗಳು ಭೋಪರಾಕು ಕೂಗುತ್ತಿವೆ..
ತಟ್ಟೆಗಳಿಗೆ ಜಯವಾಗಲಿ, ಚಮಚೆಗಳಿಗೆ ಜಯವಾಗಲಿ.. ತಳದಲ್ಲಿ ಅಂಟಿದ್ದು ನಮ್ಮದಾದರೂ ಆಗಲಿ,

ಇದೆಲ್ಲದರ ಮಧ್ಯೆ ಭೋಪರಾಕುಗಳು ಮಿದುಳಿಗೂ ತಾಗಿ, ಸಾವು ಇಂಚಿಂಚು ತಿನ್ನತೊಡಗಿ
ಕಡೆಗೇನೂ ಉಳಿಯಲಿಲ್ಲ.. ಆದರೆ ಅವಯವದ ಸಂದಿಯೊಳಗಿಂದ ಕಣ್ಣೊಂದು ಮಾತ್ರ ದೂರ ಸರಿದು
ಕೈ, ಕಾಲು, ಎದೆ, ಬೆನ್ನುಗಳನತ್ತ ಮಣ್ಣು ತೂರತೊಡಗಿತು.


-ದಯಾನಂದ್ ಟಿ ಕೆ

ಅವ್ವ.



ಭೂಮಿಗೂ ಮೋಡಕೂ ನಡುವೆ
ಹರಿದ ಸೆರಗನ್ನೇ ಇನ್ನೊಂದಷ್ಟು ತುಂಡರಿಸಿ
ಪರದೆ ಕಟ್ಟಿದ ಜೀವ ಇವಳು.

ನೇಗಿಲಿನ ನಾಲಿಗೆಗೆ ನೆಲ ಚೂರಾದ ಹೊತ್ತು
ಒಡಲ ಬೀಜಗಳನ್ನೇ ನೆಲದೊಳಗೆ ಅವಿತಿಡುತ್ತ
ಇನ್ನಾವಾಗಲೋ ಮೊಳೆಯುವ ಭತ್ತವನ್ನು ಧೇನಿಸಿದವಳು.

ಎಲೆಯಡಿಕೆಯ ಚೀಲದೊಳಗೆ ಬದುಕನ್ನೇ
ಮಡಚಿಟ್ಟ ಮಾಯದಂಥ ಜೀವದ
ಹೊಗೆಸೊಪ್ಪಿನ ಘಾಟೂ, ಊದುವ ಒಲೆಯ ಹೊಗೆಯೂ
ಏಕತ್ರಗೊಂಡ ಚಣದಲ್ಲೇ ಗಂಜಿ ಬೇಯಿಸುವ ಜೀವ.

ಮೇಲೆ ರವರವನೆ ಉರಿಯೋ ಚೆಂಡನ್ನೇ ರೆಪ್ಪೆಯೊಳಗೆ ಅವಿತಿಟ್ಟ
ಈ ಜೀವ.. ನನಗೆ ಕೊಟ್ಟಿದ್ದು ಹಿಡಿ ಉಸಿರಿನ ಸಾಲ,
ಯಾವತ್ತೂ ಕರೆ ತಾಗದ ಈ ಅಬೋಧ ಜೀವಕ್ಕೆ
ಬಣ್ಣಬಳಿದ ಮಾತುಗಳ್ಯಾವೂ ಬೇಕಿರದೆ
ನನ್ನ ನೆದರಿಗೆ ಅಂಟಿಕೊಂಡಿದ್ದು ಎರಡೇ ಪದವು,
ಹರವಿ ಹೇಳುವುದಾರೆ.. ಅವ್ವ.

-ದಯಾನಂದ್ ಟಿ ಕೆ

ರೆಕ್ಕೆ ಕಟ್ಟಿದ ದೋಣಿ